ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿ ಕಳೆದ ಹನ್ನೊಂದು ದಿನಗಳಿಂದ ನಡೆದ ಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆ ಬಿದ್ದಿದ್ದು, ರಜಾ ದಿನವಾದ್ದರಿಂದ ಕೊನೆಯ ದಿನ ಸಹಸ್ರಾರು ಸಂಖ್ಯೆಯಲ್ಲಿ ನೋಡುಗರು ಆಗಮಿಸಿದ್ದರು.

ನ.27ರಿಂದ ಆರಂಭವಾಗಿದ್ದದ ಪುಷ್ಪ ಪ್ರದರ್ಶನಕ್ಕೆ ಡಿ.7ರಂದು ತೆರೆ ಬಿದ್ದಿದೆ. ಭಾನುವಾರವಾದ ಕಾರಣ ಸಾವಿರಾರು ಜನರು ಪಾರ್ಕ್‌ನಲ್ಲಿ ಆಯೋಜಿಸಿದ್ದ ಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ. ಇಲ್ಲಿಯವರೆಗೂ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಪುಷ್ಪಗಳನ್ನು ಕಣ್ತುಂಬಿಕೊಂಡಿದ್ದಾರೆ ಎನ್ನಲಾಗಿದೆ.ತರಕಾರಿಯಲ್ಲಿ ನಿರ್ಮಿಸಿದ್ದ ಆನೆ ಮತ್ತು ಕರ್ನಾಟಕದ ನಕ್ಷೆಯ ಒಂದೊಂದು ಜಿಲ್ಲೆಗೆ ಒಂದೊಂದು ಸಿರಿ ಧಾನ್ಯ ಅಂಟಿಸಿದ್ದದ್ದು ಹಾಗೂ ಚಿಟ್ಟೆ ಇನ್ನಿತರ ಪ್ರದರ್ಶನಗಳು, ಫುಡ್‌ಸ್ಟಾಲ್‌ಗಳು ಇದ್ದವು. ಭಾನುವಾರದ ವರಗೆ ನಡೆದ ಪ್ರದರ್ಶನಕ್ಕೆ 5 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, 55 ಲಕ್ಷ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ.

ಭಾನುವಾರ ವೀಕ್ಷಕರ ಸಂಖ್ಯೆ ಹೆಚ್ಚಾಗಿದ್ದುದರಿಂದ ಹಲವರು ವಾಹನಗಳಲ್ಲಿ ಬಂದು ಕಂಠೀರವ ಸ್ಟೇಡಿಯಂ, ಸೇಂಟ್‌ ಜೋಸೆಫ್‌ ಕಾಲೇಜು ಮೈದಾನ ಮತ್ತು ಹೈಕೋರ್ಟ್‌ ಪಕ್ಕದ ಪಾರ್ಕಿಂಗ್‌ ಏರಿಯಾದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಹೀಗಾಗಿ, ಈ ರಸ್ತೆಗಳ ಸುತ್ತಮುತ್ತ ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ ಉಂಟಾಗಿತ್ತು.

ಇದೇ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆ, ಕಬ್ಬನ್‌ಪಾರ್ಕ್ ವಾಕರ್ಸ್‌ ಅಸೋಸಿಯೇಷನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ನಾನಾ ಸಂಘ -ಸಂಸ್ಥೆಗಳ ಸಹಯೋಗದಲ್ಲಿಆಯೋಜಿಸಿರುವ ಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆ ಮೀರಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ