– ರಾಘವೇಂದ್ರ ಅಡಿಗ ಎಚ್ಚೆನ್.
ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಫ್ಯಾನ್ಸ್ ನಡುವೆ ದೊಡ್ಡ ಮಟ್ಟದ ಹುಮ್ಮಸ್ಸು ಸೃಷ್ಟಿಸಿದೆ. ಮ್ಯಾಕ್ಸ್ ನಂತರ ಹೊರಬರುತ್ತಿರುವ ಈ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಟ್ರೈಲರ್ನಲ್ಲಿ ಸುದೀಪ್ ಹೊಸ ಆಕ್ರಮಣಕಾರಿ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಭರ್ಜರಿಯಾಗಿ ಸೆಳೆದಿದೆ.
ಚಿತ್ರದ ಇನ್ನೊಂದು ವಿಶೇಷತೆ ಎಂದರೆ ಮಾರ್ಕ್ ಚಿತ್ರವನ್ನು ವಿತರಣೆ ಮಾಡುತ್ತಿರುವದು ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್. ಸುಪ್ರಿಯಾನ್ವಿ ಸ್ಟುಡಿಯೋ ನಿರ್ಮಾಣದ ಜೊತೆಗೆ ಈಗ ವಿತರಣೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಪ್ರಿಯಾ ಈಗಾಗಲೇ ‘ಮ್ಯಾಂಗೋ ಪಚ್ಚಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದಲ್ಲಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ಕಾಣಿಸಲಿದ್ದಾರೆ. ಚಿತ್ರ ಮುಂದಿನ ವರ್ಷ ಜನವರಿ 15ರಂದು ಬಿಡುಗಡೆಯಾಗಲಿದೆ.
ಮಾರ್ಕ್ ಚಿತ್ರ ಡಿಸೆಂಬರ್ 25ರಂದು ತೆರೆಗೆ ಬರಲು ಸಜ್ಜಾಗಿದೆ. ಟ್ರೈಲರ್ ಪ್ರಕಾರ, ಸುದೀಪ್ ಮಾರ್ಕ್ ಎಂಬ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಸಸ್ಪೆಂಡ್ ಆಗಿದ್ದರೂ ಮಫ್ತಿಯಲ್ಲಿ ಮಕ್ಕಳ ಕಳ್ಳರ ವಿರುದ್ಧ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆಕ್ಷನ್ ಸೀಕ್ವೆನ್ಸ್ಗಳಲ್ಲಿ ಸುದೀಪ್ ಶೈಲಿ ಹಾಗೂ ಡೈಲಾಗ್ಗಳು ಫ್ಯಾನ್ಸ್ನ್ನು ಈಗಾಗಲೇ ಮಂತ್ರಮುಗ್ಧಗೊಳಿಸಿದೆ. “ಧಮ್ ಹೊಡೆಯೋದು ಕಡಿಮೆ ಮಾಡಬೇಕಲ್ಲ!” ಎಂಬ ಡೈಲಾಗ್ ಈಗಾಗಲೇ ವೈರಲ್ ಆಗಿದೆ.





