ಮುಟ್ಟಾಗಿದ್ದಾಗ ಶುಚಿತ್ವ ಶುಭ್ರತೆಗಳಿಗೆ ಎಷ್ಟು ಮಹತ್ವ ಕೊಟ್ಟರೂ ಸಾಲದು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೇಣವೇ…..?

ನಮ್ಮ ದೇಶದಲ್ಲಿ ಸಾಮಾನ್ಯವಾಗಿ 13-14ರ ಹರೆಯಕ್ಕೆ ಹೆಣ್ಣುಮಕ್ಕಳು ಪುಷ್ಪವತಿ ಆಗುತ್ತಾರೆ. ಆಟೋಟದಲ್ಲಿ ಮುಳುಗಿದ ಈ ಮುಗ್ಧ ಮಕ್ಕಳು ಪ್ರತಿ ತಿಂಗಳೂ 3-4 ದಿನಗಳ ಈ ಹಿಂಸೆ ಸಹಿಸಲೇಬೇಕಾಗುತ್ತದೆ. ಇದರಿಂದ ನೋವು, ಟೆನ್ಶನ್‌, ಸಂಕೋಚ, ಮುಜುಗರ ತಪ್ಪಿದ್ದಲ್ಲ. ಈ ಎಲ್ಲಾ ಗೊಂದಲಗಳನ್ನೂ ಪದೇಪದೇ ಅಮ್ಮನ ಬಳಿ ಚರ್ಚಿಸಲಿಕ್ಕೂ ಆಗುವುದಿಲ್ಲ. ಈ ಕಷ್ಟಗಳ ಮಧ್ಯೆ ಸ್ವಚ್ಛತೆ, ಶುಭ್ರತೆಗಳ ಕಡೆ ಗಮನ ಹರಿಸಬೇಕಾದುದು ನಂತರದ ವಿಷಯವಾಗುತ್ತದೆ. ಈ ಕಾರಣದಿಂದ ಕಿಶೋರಿಯರು ನಾನಾ ಬಾಧೆಗಳಿಗೆ, ಕೆಲವೊಮ್ಮೆ ರೋಗಕ್ಕೂ ತುತ್ತಾಗುತ್ತಾರೆ.

ಈ ರೀತಿ ಮುಟ್ಟಾಗುವುದು, ಒಂದು ನೈಸರ್ಗಿಕ ಕ್ರಿಯೆಯಾಗಿದೆ. ಆದರೆ ನಮ್ಮ ಸಮಾಜದಲ್ಲಿ ಇಂದಿಗೂ ಸಹ ಇದನ್ನು ಕೊಳಕು, ಅಪವಿತ್ರ ಎಂದೇ ನಂಬಲಾಗಿದೆ. ಹೀಗಾಗಿ ಈ ಕ್ರಿಯೆಗೆ ಇನ್ನಿಲ್ಲದ ಮೂಢನಂಬಿಕೆಗಳನ್ನು ಅಂಟಿಸಲಾಗಿದೆ. ಇದರಿಂದ ಹೆಂಗಸರ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುವುದೇ ಹೆಚ್ಚು.

ವಿಶ್ವದ ಎಲ್ಲೆಡೆ ಕೋಟ್ಯಂತರ ಹೆಂಗಸರು ಪೀರಿಯಡ್ಸ್ ಸಂದರ್ಭದಲ್ಲಿ ಸ್ಟಿಗ್ಮಾ ಎದುರಿಸಬೇಕಾಗುತ್ತದೆ. ಮುಟ್ಟಿನ ಕಾರಣ ಹೆಂಗಸರಿಗೆ ಇನ್ನಿಲ್ಲದ ಕಟ್ಟುಪಾಡುಗಳನ್ನು ಹೇರಲಾಗಿರುತ್ತದೆ. ಅವರೊಂದಿಗೆ ಅನಗತ್ಯ ಭೇದಭಾವ ತೋರಲಾಗುತ್ತದೆ. ಅವರನ್ನು ಕೊಳಕು ವಾತಾವರಣದಲ್ಲಿರಿಸಿ, ಸ್ವಚ್ಛತೆ ಶುಭ್ರತೆ ಪರಿಪಾಲಿಸದಂತೆ ಒತ್ತಡ ಹೇರಲಾಗುತ್ತದೆ. ಎಷ್ಟೋ ಕಡೆ ಮುಟ್ಟಾದವರನ್ನು ಯಾರೂ ಮುಟ್ಟಿಸಿಕೊಳ್ಳುವುದಿಲ್ಲ, ಅವರನ್ನು ಮನೆಯ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗುತ್ತದೆ. ಅಡುಗೆಮನೆ, ದೇವರ ಕೋಣೆಗೆ ಪ್ರವೇಶವಿಲ್ಲ.ಈ ಸಂದರ್ಭದಲ್ಲಿ ಇವರು ಯಾವ ಆಹಾರ ಪದಾರ್ಥವನ್ನೂ ಮುಟ್ಟುವಂತಿಲ್ಲ, ಹಾಗೆ ಮಾಡಿದರೆ ಅವೆಲ್ಲ ಹಾಳಾಗುತ್ತವೆ ಎಂಬ ವದಂತಿ ಹರಡಿದೆ. ಅವರು ಸ್ನಾನ ಮಾಡುವಂತಿಲ್ಲ ಎಂದು ಹೇಳಲಾಗುತ್ತದೆ. ಹೀಗಿರುವಾಗ ವಿವಾಹಿತಿ ದಾಂಪತ್ಯ ಸಂಗದ ಬಗ್ಗೆ ಮಾತನಾಡುವ ಹಾಗೇ ಇಲ್ಲ.

ಸುರಕ್ಷತೆಯೊಂದಿಗೆ ಚೆಲ್ಲಾಟ

ಹಳ್ಳಿಗಳಲ್ಲಂತೂ ಇನ್ನೂ ಕಷ್ಟ. ಇಂಥವರು ಊರ ಹೊರಗೆ ಅಥವಾ ಮನೆಯಿಂದ ಆಚೆ ಡೇರೆ ಹಾಕಿಕೊಂಡು 4 ದಿನ ಕಳೆಯುವವರೆಗೂ ಬೇರೆ ಇರಬೇಕಾಗುತ್ತದೆ. ಅವಳಿಗೆ ಅಲ್ಲಿ ಹಳೆ ಬಟ್ಟೆ, ಒಣ ಹುಲ್ಲನ್ನೇ ಪ್ಯಾಡ್‌ ಹಾಗೆ ಬಳಸಬೇಕಾದ ಅನಿವಾರ್ಯತೆ ಉಂಟಾಗಿರುತ್ತದೆ. ಯಾರೋ ಯಾವಾಗಲೋ ಬಂದು ಆಹಾರ ಕೊಟ್ಟರಷ್ಟೇ ಊಟ, ಸ್ನಾನವಂತೂ ಕನಸೇ ಸರಿ.

ಈ ಸಂದರ್ಭದಲ್ಲಿ ಅವಳಿಗೆ ಅನಾರೋಗ್ಯವಾಗಿ, ಜ್ವರದ ಬಾಧೆ ಬಂದರೆ, ಒಬ್ಬಳೇ ಆ ಡೇರೆಯಲ್ಲಿ 4 ದಿನಗಳ ಕಷ್ಟ ಅನುಭವಿಸಬೇಕು. ಇದು ಅವಳ ಪ್ರಾಣಕ್ಕೆ ಸಂಚಕಾರ ಸಹ ತರಬಹುದು. ಡೇರೆಯಲ್ಲಿ ಒಬ್ಬಳೇ ಎಂದು ಪುಂಡರು ರಾತ್ರಿ ಹೊತ್ತು ಆಕ್ರಮಿಸಿದರೆ ಯಾರು ದಿಕ್ಕು? ನೆಲದ ಮೇಲೆ ಮಲಗಬೇಕಾಗಿರುವುದರಿಂದ ಕ್ರಿಮಿ ಕೀಟಗಳ ಬಾಧೆ ತಪ್ಪದು. ಈ ಮಧ್ಯೆ ಸುರಕ್ಷೆ ಎಲ್ಲಿಂದ ಬರಬೇಕು?

ಇಂದಿನ ವೈಜ್ಞಾನಿಕ ಯುಗದಲ್ಲೂ ಸಹ, ನಮ್ಮ ದೇಶದ ಎಷ್ಟೋ ಬಡ ಹೆಣ್ಣುಮಕ್ಕಳು ಇಂಥ ಸಂದರ್ಭದಲ್ಲಿ ಹರಿದ ಬಟ್ಟೆಗಳನ್ನೇ ಪ್ಯಾಡ್‌ ರೂಪದಲ್ಲಿ ಬಳಸುತ್ತಾರೆ. ಅಂಥವನ್ನೇ ನೀರಲ್ಲಿ ಅದ್ದಿ, ಹಿಂಡಿ, ಒಣಗಿಸಿ, ಮತ್ತೆ ಬಳಸುತ್ತಾರೆ. ಇದು ಗಂಭೀರ ರೋಗಗಳಿಗೆ ಆಹ್ವಾನ ನೀಡಿದಂತೆಯೇ ಸರಿ.

ಆರೋಗ್ಯಕ್ಕೆ ಹಾನಿಕರ

ಸಣ್ಣ ಊರುಗಳು ಮಾತ್ರವಲ್ಲದೆ, ಮಹಾನಗರಗಳಲ್ಲಿ ಮನೆಗೆಲಸ, ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಹೆಂಗಸರನ್ನು ವಿಚಾರಿಸಿ ನೋಡಿ, ಪೀರಿಯಡ್ಸ್ ನಲ್ಲಿ ಇವರು ಎಂತಹ ಪ್ಯಾಡ್‌ ಬಳಸುತ್ತಾರೆ ಅಂತ? ಅದಕ್ಕೆ ಅವರು ಅಷ್ಟೆಲ್ಲ ಖರೀದಿಸಲು ನಮ್ಮ ಬಳಿ ಹೆಚ್ಚಿನ ಹಣ ಎಲ್ಲಿಂದ ಬರಬೇಕು ಎಂದು ಹೇಳುತ್ತಾರೆ. ಹೀಗಾಗಿ ಹಳೆ ಬಟ್ಟೆಗಳಿಂದಲೇ ಕೆಲಸ ನಿಭಾಯಿಸುತ್ತೇವೆ ಅಂತಾರೆ.

ತಾಯಿ ಆದವಳು ತಿಳಿವಳಿಕೆ ಇಲ್ಲದವಳಾದರೆ, ಆಕೆ ಸ್ವಚ್ಛತೆ ಶುಭ್ರತೆ ಬಗ್ಗೆ ತಿಳಿಯದವಳಾದರೆ, ಅನುಕೂಲಸ್ಥರ ಮನೆಯ ಹೆಣ್ಣುಮಕ್ಕಳು ಸಹ ಮುಟ್ಟಿನ ದಿನಗಳಲ್ಲಿ ಬಟ್ಟೆ ಬಳಸುವ ಕಾರಣ, ಗಂಭೀರ ಸೋಂಕು ರೋಗಗಳಿಗೆ ಈಡಾಗುತ್ತಾರೆ. ಈ ಎಲ್ಲ ವಿಷಯಗಳೂ ಮೆನ್‌ ಸ್ಟ್ರುಯೆಲ್ ‌ಹೈಜೀನ್‌ ದೃಷ್ಟಿಯಿಂದ ಹೆಣ್ಣಿನ ಆರೋಗ್ಯಕ್ಕೆ ಬಹಳ ಹಾನಿಕರ. ಬೇಸಿಗೆ, ಮಳೆಗಾಲದ ದಿನಗಳಲ್ಲಿ ಗುಪ್ತಾಂಗಗಳ ಸ್ವಚ್ಛತೆ, ಶುಭ್ರತೆಯ ಕಡೆ ಗಮನಹಿಸುವುದು ಅತಿ ಅಗತ್ಯವಾಗುತ್ತದೆ.

ಇಂಥ ಸಂದರ್ಭದಲ್ಲಿ ಸ್ವಚ್ಛತೆ ಶುಭ್ರತೆಗಳ ಕಡೆ ನಿರ್ಲಕ್ಷ್ಯ ವಹಿಸಿದರೆ, ಗುಪ್ತಾಂಗದ ಬಳಿ ಹಲವು ಬಗೆಯ ಕೀಟಾಣು, ಸೋಂಕು, ನವೆ, ನೋವು, ಉರಿ ಇತ್ಯಾದಿಗಳ ಕಾಟ ಹೆಚ್ಚುತ್ತದೆ. ಯೋನಿಯಲ್ಲಿನ ಗುಡ್‌ ಬ್ಯಾಕ್ಟೀರಿಯಾ ನಿಶ್ಚಿತವಾಗಿ Ph ಲೆವೆಲ್ ‌ಬ್ಯಾಲೆನ್ಸ್ ಮಾಡುತ್ತದೆ. ಆದರೆ ಬೇಸಿಗೆ, ಮಳೆಗಾಲದಲ್ಲಿ ಹ್ಯುಮಿಡಿಟಿ ಕಾರಣ ಉಂಟಾಗುವ ಸೋಂಕಿನಿಂದ ಹಾನಿಕಾರಕ ಬ್ಯಾಕ್ಟೀರಿಯಾ ತಾನಾಗಿ ವಿಕಾಸಗೊಂಡು, ಈ ಆರೋಗ್ಯಕರ ಬ್ಯಾಲೆನ್ಸ್ ನ್ನು ಬಿಗಡಾಯಿಸುತ್ತವೆ. ಇದರಿಂದಾಗಿ ಹೆಂಗಸರು ಗಂಭೀರ ಯೂರಿನರಿ ಇನ್‌ ಫೆಕ್ಷನ್‌ ಗೆ ಗುರಿಯಾಗುತ್ತಾರೆ.

ಭಾವನಾತ್ಮಕ ಸಹಕಾರದ ಅಗತ್ಯ

ಸೀಸನ್‌ ಬೇಸಿಗೆ ಅಥವಾ ಮಳೆಗಾಲವೇ ಇರಲಿ, ಹ್ಯುಮಿಡಿಟಿ ಕಾರಣ, ಹೆಂಗಸರಿಗೆ ಮುಟ್ಟಿನ ಅವಧಿಯಲ್ಲಿ ಕಿರಿಕಿರಿ ತಪ್ಪಿದ್ದಲ್ಲ, ಪೀರಿಯಡ್ಸ್ ಗೂ ಸೀಸನ್‌ ಬದಲಾವಣೆಗೂ ಅವಿನಾಭಾವ ಸಂಬಂಧವಿದೆ. ಬೇಸಿಗೆ ಕಾರಣ ಮುಟ್ಟಿನ ದಿನಗಳ ಅವಧಿ ಹೆಚ್ಚುತ್ತದೆ, ಸ್ರಾವ ಬಿಟ್ಟೂ ಬಿಡದ ಹಾಗೆ ಕಾಡುತ್ತದೆ. ಟೀನೇಜ್‌ ಹುಡುಗಿಯರು ಹಾಗೂ ಮುಟ್ಟಂತ್ಯ (ಮೆನೋಪಾಸ್‌) ಸಮೀಪಿಸುತ್ತಿರುವ ಹೆಂಗಸರಿಗೆ ಇದರಿಂದ ಹೆಚ್ಚಿನ ತೊಂದರೆ ಗ್ಯಾರಂಟಿ. ಏಕೆಂದರೆ ಈ ಕಾರಣ ಹಾರ್ಮೋನ್ಸ್ ಅಸ್ಥಿರ ಆಗುತ್ತವೆ.

ಮುಟ್ಟಂತ್ಯ ಸಮೀಪಿಸುತ್ತಿರುವ ಹೆಂಗಸರಿಗೆ, ಸಾಮಾನ್ಯವಾಗಿ ಫೈಬ್ರಾಯಿಡ್ಸ್ ಹೆಚ್ಚು ಕಾಟ ಕೊಡುತ್ತವೆ. ಇದರಿಂದಾಗಿ ರಕ್ತ ಸ್ರಾವ ಹೆಚ್ಚುತ್ತದೆ, ನೋವಂತೂ ಸಹಿಸಲು ಅಸಾಧ್ಯ ಎನಿಸುತ್ತದೆ. ಈ ಸಂದರ್ಭದಲ್ಲಿ, ಮುಖ್ಯವಾಗಿ ಮುಟ್ಟಿನಿಂದ ಕಿಬ್ಬೊಟ್ಟೆ ನೋವು ಎದುರಿಸುತ್ತಿರುವ ಹೆಂಗಸರು, ಮಜ್ಜಿಗೆ ಮೆಂತ್ಯ ಅಥವಾ ಮಿಕ್ಸಿಯಲ್ಲಿ ಗಸಗಸೆ ಪುಡಿ ಮಾಡಿ ತಣ್ಣನೆಯ ಹಾಲಿನೊಂದಿಗೆ ಸೇವಿಸಬೇಕು. ಆಗ ಕಿಬ್ಬೊಟ್ಟೆ ನುಲಿಯುವಿಕೆ ಎಷ್ಟೋ ತಪ್ಪುತ್ತದೆ. ಹೀಗಾದಾಗ ಮನೆ ಮಂದಿ ಅವಳಿಗೆ ಭಾವನಾತ್ಮಕ ಸಹಕಾರ ನೀಡಬೇಕು. ಅಂಥ ಹೆಂಗಸರ ಅಸಹನೆ, ಎಲ್ಲದಕ್ಕೂ ಸಿಡಿಗುಟ್ಟುವ ಗುಣ ಹೆಚ್ಚುತ್ತದೆ. ಸಹಕಾರ ತೋರುವ ಬದಲು ಮನೆ ಮಂದಿ ಅವಳನ್ನು ಮೂಲೆಗೊತ್ತರಿಸಿ, ಒಬ್ಬಂಟಿಯಾಗಿ ನೋವು ಅನುಭವಿಸಿ ಸಾಯಲಿ ಎಂಬಂತೆ ವರ್ತಿಸುವುದು ಅಮಾನವೀಯ!

ಸಂದರ್ಭಕ್ಕಾಗಿ ಸಲಹೆಗಳು

ಸದಾ ಹೈಡ್ರೇಟೆಡ್ಆಗಿರಿ : ದೇಹದಿಂದ ವಿಷಯುಕ್ತ ಪದಾರ್ಥ ಹೊರಹೋಗಿ, Ph ಲೆವೆಲ್ ‌ಮೇಂಟೇನ್‌ ಮಾಡಲು, ಮುಟ್ಟಿನ ದಿನಗಳಲ್ಲಿ ಎಂದಿಗಿಂತ ತುಸು ಹೆಚ್ಚಾಗಿಯೇ ನೀರು ಕುಡಿಯಬೇಕು. ಅದು 8-10 ಗ್ಲಾಸ್‌ ಗಿಂತ ಖಂಡಿತಾ ಕಡಿಮೆ ಆಗಿರಬಾರದು. ತಾಜಾ ನೇರಳೆಹಣ್ಣು ಸೇವಿಸಿ (ಸಿಗದಿದ್ದರೆ ಅದರ ಶರಬತ್ತು ಕುಡಿಯಿರಿ), ಸ್ವಾದಿಷ್ಟ ಹರ್ಬಲ್ ವಾಟರ್‌ ಬಳಸಿದರೆ ಉತ್ತಮ.

ಕಾಟನ್ಅಂಡರ್ಗಾರ್ಮೆಂಟ್ಸ್ ಕಡ್ಡಾಯ :  ಈ ಸಂದರ್ಭದಲ್ಲಿ ಕಾಟನ್‌ ಅಂಡರ್‌ ಗಾರ್ಮೆಂಟ್ಸ್, ಮುಖ್ಯವಾಗಿ ಕಾಟನ್‌ ಪ್ಯಾಂಟಿಯನ್ನೇ ಧರಿಸಬೇಕು. ಕಾಟನ್‌ ಬಟ್ಟೆ ಈಝಿಯಾಗಿ ಗಾಳಿ ಆಡಲು ಸಹಕಾರಿ. ಇದು ಚರ್ಮವನ್ನು ಸ್ವಚ್ಛ, ಶುಭ್ರ, ಡ್ರೈ ಆಗಿರಿಸಲು ಉಪಕಾರಿ. ಹೀಗಾಗಿ ಕೃತಕ ಸಿಂಥೆಟಿಕ್‌ ಪ್ಯಾಂಟಿಗಳಿಗೆ ಮೊರೆಹೋಗಬೇಡಿ, ಅದು ಹೆಚ್ಚು ಬೆವರು ಸುರಿಯಲು  ಕಾರಣವಾಗುತ್ತದೆ. ಇದರಿಂದ ಗುಪ್ತಾಂಗದಲ್ಲಿ ಬ್ಯಾಡ್‌ ಬ್ಯಾಕ್ಟೀರಿಯಾ ಹೆಚ್ಚುತ್ತದೆ. ಆಗ ಚರ್ಮದಲ್ಲಿ ನವೆ, ತುರಿಕೆ ಹೆಚ್ಚುತ್ತದೆ.

ಶುಭ್ರ ಕಾಟನ್ಟವೆಲ್ ಬಳಸಿಕೊಳ್ಳಿ : ಈ ಸಂದರ್ಭದಲ್ಲಿ ಕಾಟನ್‌ ಟವೆಲ್ ಒಂದೇ ಸೂಕ್ತ. ಎಂದೂ ಇತರರು ಬಳಸಿದ ಟವೆಲ್ ಬಳಸಲೇಬೇಡಿ. ಟವೆಲ್ ‌ಆದಷ್ಟೂ ತೆಳು ಆಗಿರಲಿ. ಇದನ್ನು ಶುಚಿಗೊಳಿಸಿ ಒಣಗಿಸುವುದೂ ಸುಲಭ. ನಿಮ್ಮ ಟವೆಲ್ ‌ನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ದಿನಕ್ಕೊಂದು ಒಗೆದ ಟವೆಲ್ ‌ತಪ್ಪದೆ ಬದಲಾಯಿಸಿ.

ಗುಪ್ತಾಂಗಗಳ ಶುಚಿತ್ವ : ಸ್ನಾನ ಮಾಡುವಾಗ ನಿಮ್ಮ ಗುಪ್ತಾಂಗಗಳನ್ನು ಸ್ವಚ್ಛ ನೀರಿನಿಂದ ತೊಳೆಯಿರಿ. ತುಂಬಾ ಬಿಸಿ ನೀರಿನ ಅಗತ್ಯವಿಲ್ಲ. ಸುಗಂಧಿತ ಸೋಪ್‌ ಬಳಸಲು ಹೋಗಬೇಡಿ. ಯೋನಿಯ Ph ಬ್ಯಾಲೆನ್ಸ್ ಮೇಂಟೇನ್‌ ಮಾಡಲು ರಾಸಾಯನಿಕಮುಕ್ತ, ಕೆಮಿಕಲ್ಸ್ ರಹಿತ, ಹರ್ಬಲ್ ಸೋಪ್‌ ನ್ನೇ ಬಳಸಿರಿ. ಜಿಮ್, ಈಜು ಯಾವುದೇ ಆಟವಾಡಿದ ನಂತರ, ಸದಾ ನಿಮ್ಮ ಗುಪ್ತಾಂಗವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಬೇಕು. ಹಾಗೆಯೇ ಟವೆಲ್ ಬಳಸಿ ಒಣಗಿಸುವುದೂ ಮುಖ್ಯ.

ಆ್ಯಂಟಿ ಬ್ಯಾಕ್ಟೀರಿಯಲ್ ಸ್ಯಾನಿಟರಿ ನ್ಯಾಪ್ಕಿನ್‌ : ಪೀರಿಯಡ್‌ ಸಂದರ್ಭದಲ್ಲಿ ಕಂಫರ್ಟೆಬಲ್ ಆ್ಯಂಟಿ ಬ್ಯಾಕ್ಟೀರಿಯಲ್ ಸ್ಯಾನಿಟರಿ ನ್ಯಾಪ್‌ ಕಿನ್‌ ಬಳಸಲೇಬೇಕು. ಪೀರಿಯಡ್ಸ್ ಹೈಜೀನ್‌ ಗಾಗಿ ಪ್ರತಿ 3-4 ಗಂಟೆಗಳ ನಂತರ ಪ್ಯಾಡ್‌, ಟ್ಯಾಂಪೂನ್‌ ಬದಲಿಸಿ. ಉತ್ತಮ ಗುಣವಟ್ಟದ `ಪೀರಿಯಡ್ಸ್ ಪ್ಯಾಂಟಿ’ ಧರಿಸುವುದೇ ಸರಿ, ಆಗ ಬ್ಯಾಕ್ಟೀರಿಯಾ ಕಾಟ ಇರುವುದಿಲ್ಲ. ಸಾಧ್ಯವಾದರೆ ಈ ಸಂದರ್ಭದಲ್ಲಿ ಆ ಭಾಗದ ಕೂದಲಿನ ಶೇವಿಂಗ್‌ ಸಹ ಮಾಡಿದರೆ ಉತ್ತಮ, ಇಲ್ಲದಿದ್ದರೆ ಕೂದಲಿನ ಸಂದಿನಲ್ಲಿ ಬ್ಯಾಕ್ಟೀರಿಯಾ ಬೇಗ ಬೇಗ ವೃದ್ಧಿಯಾಗುತ್ತದೆ. ಹೀಗೆ ಮಾಡುವುದರಿಂದ ಯೀಸ್ಟ್ ಇನ್‌ ಫೆಕ್ಷನ್‌ ನಿಂದಲೂ ಪಾರಾಗಬಹುದು.

ದಿನಗಳಲ್ಲಿ ಸ್ನಾನ ಅನಿವಾರ್ಯ : ಮುಟ್ಟಾದ ದಿನಗಳಲ್ಲಿ ಸ್ನಾನ ಮಾಡಬಾರದು ಎಂಬುದು ಮೂಢನಂಬಿಕೆಯೇ ಸರಿ. ಬದಲಿಗೆ ಆ ಸಂದರ್ಭದಲ್ಲಿ ಖಂಡಿತಾ, ಅಗತ್ಯವಾಗಿ ಸ್ನಾನ ಮಾಡುವುದೇ ಒಳ್ಳೆಯದು. ಉತ್ತಮ ಕಂಪನಿಗಳ `ಹೈಜೀನ್‌ ವಾಶ್‌’ ತಂದು ಆ ಭಾಗವನ್ನು ನೀಟಾಗಿ ಸ್ವಚ್ಛ ಮಾಡಿ, ಸ್ನಾನ ಮಾಡಿ. ಸ್ನಾನದಿಂದ ನೋವು, ಸುಸ್ತು ದೂರಾಗುತ್ತದೆ. ಇದರಿಂದ ನಿಮ್ಮ ಮೂಡ್ ಎಷ್ಟೋ ಸುಧಾರಿಸುತ್ತದೆ. ಇದರಿಂದ ಪೀರಿಯಡ್ಸ್ ಕ್ರಾಂಪ್ಸ್ ಎಷ್ಟೋ ತಗ್ಗುತ್ತದೆ. 4 ಅಥವಾ 5ನೇ ದಿನ ತಲೆ ಸ್ನಾನ ಸಹ ಕಡ್ಡಾಯ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ