ಮನೆಯವರೆಲ್ಲರ ಮುದ್ದಿನ ಕಣ್ಮಣಿಯಾಗಿ ಬೆಳೆದಿದ್ದ ಚೈತ್ರಾ, ಮುಂದೆ ಶೇಖರ್ನನ್ನು ಪ್ರೀತಿಸಿ, ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ಅವನನ್ನೇ ಮದುವೆಯಾದಳು. ಮುಂದೆ ಅವಳು ತಾಯಿಯಾಗುವ ಸಂದರ್ಭದಲ್ಲಿ ತವರಿನವರನ್ನು ಬಹಳ ನೆನೆದಾಗ, ಅವರು ಅವಳನ್ನು ಸ್ವೀಕರಿಸಿದರೆ……?

ಉದಯಿಸುತ್ತಿರುವ ಬಾಲರವಿಯ ಆ ಸುಂದರ ಕಿರಣಗಳು, ಕಿಟಕಿಯ ಮೂಲಕ ಬಂದು ಗಂಡನ ಬಾಹು ಬಂಧನದಲ್ಲಿ ಮಲಗಿದ್ದ, ಚೈತ್ರಾಳನ್ನು ಎಚ್ಚರಿಸಿದವು. ಮೆಲ್ಲಗೆ ಗಂಡನಿಂದ ಬಿಡಿಸಿಕೊಂಡು ಹೊರಗೆ ಬಂದಳು. ಅದೇ ತಾನೇ ಅರಳುತ್ತಿರುವ ಬಣ್ಣ ಬಣ್ಣದ ಸುಂದರ ಗುಲಾಬಿ ಹೂಗಳನ್ನು ನೋಡುತ್ತಾ ನಿಂತಳು. ಕೆಂಪು, ಹಳದಿ, ಬಿಳಿ, ಕೇಸರಿ ಬಣ್ಣ ಬಣ್ಣದ ಹೂಗಳು. ಒಂದಕ್ಕಿಂತ ಒಂದು ಸುಂದರ, ಎಲ್ಲವನ್ನೂ ಕೈಯಿಂದ ಸವರುತ್ತಾ ಬಂದಳು.

ಅವಳಿಗೆ ಮುಂಜಾವಿನಲ್ಲಿ ಹೂ ಗಿಡಗಳನ್ನು ನೋಡುವುದೆಂದರೆ ತುಂಬಾ ಇಷ್ಟ. ಬೆಳದಿಂಗಳ ರಾತ್ರಿಯಂತೂ ಗಂಡನ ಜೊತೆಗೆ ಕುಳಿತು ಹೂವನ್ನು, ಚಂದ್ರನನ್ನು ನೋಡಿ ಮೈಮರೆಯುತ್ತಿದ್ದಳು. ಎಲ್ಲಾ ಹೂಗಳನ್ನು, ನೋಡಿದ ನಂತರ ದೃಷ್ಟಿ ಸೂರ್ಯನ ಕಡೆ ಹೊರಳಿತು. ಸೂರ್ಯನ ಸುತ್ತ ಕೆಂಪು ರಂಗಿನಿಂದ ಕೂಡಿದ ಆವಕಾಶ ತುಂಬಾ ಸುಂದರವಾಗಿತ್ತು. ಅದನ್ನು ನೋಡುತ್ತಾ ಮೈ ಮರೆತಳು.

ರೂಮಿನಿಂದ, “ಚೈತೂ… ಚೈತೂ….” ಎಂದು ಕೂಗಿದ ಗಂಡನ ಕರೆಯಿಂದ ಎಚ್ಚೆತ್ತ ಚೈತ್ರಾ ರೂಮಿಗೆ ಓಡಿಬಂದಳು.

ಅವಳ ಹೆಜ್ಜೆಯ ಸಪ್ಪಳ ಕೇಳಿದ್ದೇ…. ಶೇಖರ್‌ ಕಣ್ಣು ಮುಚ್ಚಿಕೊಂಡು, “ಗುಡ್‌ ಮಾರ್ನಿಂಗ್‌ ಹೇಳುವವರೆಗೂ ಏಳೋಲ್ಲ……” ಎಂದು ಕೂಗಿದ.

ಎಂದಿನಂತೆ ಹಾಗೇ ತಾನು ನಿಂತಲ್ಲೇ `ಗುಡ್‌ ಮಾರ್ನಿಂಗ್ ‌ಸರ್‌’ ಎಂದು ಕೀಟಲೆ ಮಾಡದೆ ಹತ್ತಿರ ಹೋಗಿ ಒಂದು ಹೂಮುತ್ತು ಕೊಟ್ಟಳು. ಅವನು ಅವಳ ಕೈ ಹಿಡಿದು ಎಳೆದುಕೊಳ್ಳುವಷ್ಟರಲ್ಲಿ ಅವಳು ಗಂಭೀರವಾಗಿ, “ಬೇಗ ಮುಖ ತೊಳೆದು ಬನ್ನಿ. ಕಾಫಿ ತರ್ತೀನಿ,” ಎನ್ನುತ್ತಾ ಎದ್ದು ಹೋದಳು.

ಮಲಗಿದ್ದಲ್ಲೇ ಶೇಖರ್‌ ಯೋಚಿಸಿದ, `ಚೈತ್ರಾ ಯಾಕೋ ಎಂದಿನಂತಿಲ್ಲ. ಮದುವೆಯಾದ ಆರು ತಿಂಗಳು ತುಂಬಾ ಚೆನ್ನಾಗಿದ್ದಳು.  ಈಗೆಲ್ಲಾ ತಿಂಗಳು ಎರಡು ತಿಂಗಳಿಗೊಮ್ಮೆ  ಹೀಗೆ ಎಲ್ಲರನ್ನೂ ನೆನೆಸಿಕೊಂಡು ಮನಸ್ಸು ಕೆಡಿಸಿಕೊಳ್ಳುತ್ತಾಳೆ. ನಿಜವಾಗಿಯೂ ಚೈತ್ರಾಳಂತಹ ಹುಡುಗಿ ಮಡದಿಯಾಗಿರುವುದು ನನಗೆ ಹೆಮ್ಮೆ,’ ಹೀಗೆ ಅವಳ ಬಗ್ಗೆಯೇ ಯೋಚಿಸುತ್ತಾ ಎದ್ದು ಹೋಗಿ ಮುಖ ತೊಳೆದು ಬರುವಷ್ಟರಲ್ಲಿ ಚೈತ್ರಾ ಕಾಫಿ ತಂದಳು.

ಇಬ್ಬರೂ ಮಾತನಾಡುತ್ತಾ ಕಾಫಿ ಕುಡಿದರು. ನಂತರ ಅವನು ಸ್ನಾನ, ತಿಂಡಿ ಮಾಡುವಾಗ ಚೈತ್ರಾ ನಗುನಗುತ್ತಲೇ ಇದ್ದರೂ ಅವಳ ಮನಸ್ಸು ಸರಿಯಾಗಿಲ್ಲ ಎಂಬುದನ್ನು ಶೇಖರನ ಸೂಕ್ಷ್ಮ ಕಣ್ಣುಗಳು ಗುರುತಿಸಿದವು.

ಆಫೀಸಿಗೆ ಹೋಗುವಾಗಲೂ ಸಹ ಅವಳನ್ನು ಮುದ್ದುಗರೆಯುತ್ತಾ, “ನನ್ನ ರಾಣಿ, ಯಾವುದಕ್ಕೂ ಯೋಚಿಸಬೇಡ. ಪುಸ್ತಕ ಓದು, ನಿನ್ನ ಗಿಡಗಳ ಜೊತೆಗೆ ಮಾತನಾಡುತ್ತಿರು, ಮಲಗಿ ನಿದ್ದೆ ಮಾಡು. ಬೇಗ ಬಂದು ಬಿಡ್ತೀನಿ….” ಎನ್ನುತ್ತಾ ಹೊರಬಂದ.

ಅವನನ್ನೇ ಹಿಂಬಾಲಿಸಿ ಗೇಟಿನವರೆಗೂ ಬಂದು ಅವನು ಗಾಡಿಯಲ್ಲಿ ಹೋಗುವುದನ್ನು ನೋಡುತ್ತಾ ನಿಂತಳು. ಮತ್ತೊಮ್ಮೆ ಎಲ್ಲಾ ಗಿಡಗಳನ್ನೂ ಪರಿಶೀಲಿಸಿ, ಒಳಗೆ ಬಂದು ಪೇಪರ್‌ ಹಿಡಿದು ಕುಳಿತಳು. ಅಷ್ಟರಲ್ಲಿ ಮನೆ ಕೆಲಸ ಮಾಡುವ ಗೌರಮ್ಮ ಬಂದಳು. ಮಾಮೂಲಿನಂತೆ ಅವಳಿಗೆ ಪಾತ್ರೆ, ಬಟ್ಟೆ ಎಲ್ಲಾ ಹಾಕಿ ಅವಳು ಕೆಲಸ ಮುಗಿಸುವವರೆಗೂ ಪೇಪರ್‌ ನೋಡುತ್ತಾ ಕುಳಿತಳು.

ಅವರ ಮನೆ ತುಂಬಾ ದೊಡ್ಡದಾಗಿರಲಿಲ್ಲ. ಎರಡು ಬೆಡ್‌ ರೂಮ್ ಇರುವ ಮನೆ, ಮುಂದುಗಡೆ ಮಾತ್ರ ತುಂಬಾ ಜಾಗ ಖಾಲಿಯಾಗಿತ್ತು. ಶೇಖರನ ತಂದೆ ಮಗನಿಗಾಗಿ ಬೆಂಗಳೂರಿನಲ್ಲಿ ಈ ಮನೆಯನ್ನು ತೆಗೆದುಕೊಟ್ಟಿದ್ದರು. ಅವರದು ಚಿಕ್ಕಮಗಳೂರಿನಲ್ಲಿ ದೊಡ್ಡ ಎಸ್ಟೇಟ್‌ ಇತ್ತು. ಅವರ ಸಂಸಾರವೆಲ್ಲಾ ಅಲ್ಲಿಯೇ ಇದ್ದರು.

ಮನೆ ಮುಂದೆ ಖಾಲಿ ಇದ್ದ ಜಾಗದಲ್ಲಿ ಚೈತ್ರಾ ಹೂ ಗಿಡಗಳನ್ನು ಬೆಳೆಸಿದ್ದಳು. ಎಲ್ಲಾ ತರಹದ ಗಿಡಗಳು ಇದ್ದರೂ ಗುಲಾಬಿ ಗಿಡಗಳೇ ಜಾಸ್ತಿ ಇದ್ದವು. ಮನೆಯಲ್ಲಿ ಬೇರೆ ಕೆಲಸವಿಲ್ಲದ ಚೈತ್ರಾ ಪುಸ್ತಕಗಳನ್ನು ಓದುತ್ತಾ, ಗಿಡಗಳ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಳು.

ಈಗಿನ ಸಮಾಜದಲ್ಲಿ ಎಲ್ಲರೂ ಕೆಲಸಕ್ಕೆ ಹೋಗುವವರೆ! ಬಡವರಿಗೆ ಒಬ್ಬರ ಸಂಬಳ ಸಾಲುವುದಿಲ್ಲ ಅಂತಾದರೆ, ಶ್ರೀಮಂತರಿಗೆ ಕೆಲಸಕ್ಕೆ ಹೋಗುವುದು ಒಂದು ಫ್ಯಾಷನ್‌. ಆದರೆ ವಿದ್ಯಾವಂತೆಯಾದ ಚೈತ್ರಾ ಯೋಚಿಸಿದ್ದೇ ಬೇರೆ.

ಮದುವೆಯಾದ ಹೊಸದರಲ್ಲಿ ಶೇಖರ್‌ ಆಫೀಸಿಗೆ ಹೋದ ಸಮಯದಲ್ಲಿ ಮನೆಯಲ್ಲಿ ಒಬ್ಬಳೇ ಇರಲು ತುಂಬಾ ಬೇಸರವಾಗುತ್ತಿತ್ತು. ಅವನು ಬೆಳಗ್ಗೆ ಹತ್ತು ಗಂಟೆಗೆ ಮನೆ ಬಿಟ್ಟರೆ, ಸಂಜೆ ಏಳು ಗಂಟೆಗೆ ವಾಪಸ್ಸು ಬರುತ್ತಿದ್ದ.

“ನಿನಗೆ ಬೇಸರವಾದರೆ ನೀನು ಸಹ ಕೆಲಸಕ್ಕೆ ಸೇರಿಕೊ,” ಎಂದಿದ್ದ.

ಎಂಜನಿಯರ್‌ ಆದ ಶೇಖರನಿಗೆ ಬರುವ ಸಂಬಳದಲ್ಲಿ ತಾವು ಸುಖವಾಗಿ ಇರಬಹುದು. ತಾನು ಮಾಡುವ ಕೆಲಸ ಒಬ್ಬ ಅವಶ್ಯಕತೆ ಇರುವ ನಿರುದ್ಯೋಗಿಗೆ ಸಿಕ್ಕಿದರೆ, ಒಂದು ಸಂಸಾರ ಉಳಿಯುತ್ತದೆ. ಅದಕ್ಕೆ ದುಡ್ಡಿನ ಕೊರತೆ ಇಲ್ಲದ ತಾನು ಕೆಲಸಕ್ಕೆ ಸೇರುವುದು ಬೇಡವೆಂದು, ಗಂಡನ ಬಳಿ, “ಮನೆಯ ಮುಂದುಗಡೆ ಇರುವ ಜಾಗದಲ್ಲಿ ಹೂವಿನ ಗಿಡಗಳನ್ನು ಬೆಳೆಸ್ತೀನಿ, ಹಾಗೆಯೇ ಸಂಜೆ ಒಂದು ಗಂಟೆ ಹತ್ತಿರದಲ್ಲಿ ಇರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿ ಬರ್ತೀನಿ,” ಎಂದು ಹೇಳಿದಾಗ ಶೇಖರ್‌ ಸಹ ತನ್ನ ಒಪ್ಪಿಗೆ ನೀಡಿದ. ಮರುದಿನದಿಂದಲೇ ತನ್ನ ಕೆಲಸ ಶುರು ಮಾಡಿದಳು.

ನೀಲಕಂಠ ರಾಯರು ಮತ್ತು ಶಾರದಮ್ಮನವರ ಮಗಳಾದ ಚೈತ್ರಾ ಅತಿ ಮುದ್ದಿನಿಂದಲೇ ಬೆಳೆದಿದ್ದಳು. ಅವರಿಗೆ ಮೊದಲ ಮಗು ಮೈತ್ರಿ ನಂತರ ಬಾಲಚಂದ್ರ, ಕಿರಣ್‌ ಮೂವರು ಮಕ್ಕಳು. ನಂತರ `ಇನ್ನು ಸಾಕು…’ ಎಂದು ನಿರ್ಧರಿಸಿದ ದಂಪತಿಗಳಿಗೆ ಎಂಟು ವರ್ಷದ ನಂತರ ಹುಟ್ಟಿದ ಮಗಳೇ ಚೈತ್ರಾ. ಅದ್ದರಿಂದ ಸಹಜವಾಗಿ ಅಪ್ಪ, ಅಮ್ಮ, ಅಕ್ಕ, ಅಣ್ಣಂದಿರ ಮುದ್ದು ತುಸು ಜಾಸ್ತಿಯಾಗೇ ಇತ್ತು. ಅಕ್ಕ ಹಾಗೂ ಅಣ್ಣಂದಿರ ಮಮತೆಯ ಸುಧೆಯಲ್ಲಿ ಚೈತ್ರಾ ಬೆಳೆಯತೊಡಗಿದಳು.

ಮೈತ್ರಿ ತಮಗಿಂತ ದೊಡ್ಡವಳು ಅಕ್ಕಾ ಎನಿಸಿದ ಕಾರಣ, ತಮ್ಮಂದಿರಾದ ಬಾಲು ಹಾಗೂ ಕಿರಣ್‌ ಮೈತ್ರಿಗಿಂತ ಚೈತ್ರಾಳ ಜೊತೆ ಹೆಚ್ಚಾಗಿ ಕೀಟಲೆ ಮಾಡುತ್ತಾ, ಅವಳನ್ನು ಅಳಿಸುತ್ತಾ, ನಗಿಸುತ್ತಾ ಇರುತ್ತಿದ್ದರು. ಇನ್ನು ಮೈತ್ರಿಯಂತೂ ಅವಳನ್ನು ಎತ್ತಿಕೊಂಡೇ ತಿರುಗುವಳು. ತನ್ನ ಗೆಳತಿಯರನ್ನು ಮನೆಗೆ ಕರೆತಂದು ತಂಗಿಯನ್ನು ತೋರಿಸುವಳು. ಬಂದವರು, `ನಿನ್ನ ತಂಗಿ ತುಂಬಾ ಮುದ್ದಾಗಿದ್ದಾಳೆ,’ ಎಂದರೆ ಅವಳಿಗೆ ಖುಷಿಯೋ ಖುಷಿ.

ಚೈತ್ರಾ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ, ಮೈತ್ರಿಯ ಮದುವೆ ನಿಶ್ಚಿತವಾಗಿತ್ತು. ಮೈತ್ರಿಯ ಮದುವೆಯಾಗುವ ಹುಡುಗ ಅದೇ ಊರಿನ ಅವಳ ಗೆಳತಿ ಶೈಲಾಳ ಅಣ್ಣನಾಗಿದ್ದ. ಮೈತ್ರಿ ಹಾಗೂ ಶೈಲಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಆತ್ಮೀಯ ಸ್ನೇಹಿತರಾದ ಕಾರಣ ಒಬ್ಬರ ಮನೆಗೆ ಒಬ್ಬರು ಹೋಗುವುದು ಬರುವುದು ಇತ್ತು. ಶೈಲಾಳ ಅಣ್ಣ ಅವನ ಅಜ್ಜಿಯ ಮನೆಯಿದ್ದ ಮೈಸೂರಿನಲ್ಲಿ ಓದುತ್ತಿದ್ದ. ಓದು ಮುಗಿದ ನಂತರ ಅದೇ ಊರಿನಲ್ಲಿ ಕೆಲಸ ಸಿಕ್ಕಿದ ಕಾರಣ ಅವನು ಅಲ್ಲಿಯೇ ಇದ್ದ.

ಮೈತ್ರಿಗೆ ಅವನ ಪರಿಚಯ ಇರಲಿಲ್ಲ. ಮೈತ್ರಿ ಹಾಗೂ ಶೈಲಾ ಪದವಿಯ ಕೊನೆ ವರ್ಷದಲ್ಲಿ ಇದ್ದರು. ಗೆಳತಿಯರಿಬ್ಬರೂ ಮತ್ತೊಬ್ಬ ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ಹೊರಟಿದ್ದರು. ಎಲ್ಲರೂ ಸೀರೆ ಉಟ್ಟುಕೊಂಡು ಬರಬೇಕು ಎಂದು ಮಾತನಾಡಿಕೊಂಡಿದ್ದರು. ಮೈತ್ರಿ ಬಿಳಿ ಬಣ್ಣದ ಸೀರೆಯ ಮೇಲೆ ಕಪ್ಪು ಚುಕ್ಕೆಗಳಿದ್ದ ಜಾರ್ಜೆಟ್‌ ಸೀರೆ ಉಟ್ಟು, ಅದಕ್ಕೊಪ್ಪುವ ಬಿಳಿ ಬಣ್ಣದ ಬ್ಲೌಸ್‌ ಧರಿಸಿದ್ದಳು. ಅವಳ ಹಾಲು ಬಿಳುಪು ಬಣ್ಣಕ್ಕೆ ಆ ಸೀರೆ ತುಂಬಾ ಚೆನ್ನಾಗಿ ಕಾಣುತ್ತಿತ್ತು. ಅಕ್ಕನನ್ನು ಎವೆಯಿಕ್ಕದೆ ನೋಡಿದ ಚೈತ್ರಾ, “ಅಕ್ಕಾ…. ನೀನು ತುಂಬಾ ಸುಂದರವಾಗಿ ಕಾಣುತ್ತಿದ್ದೀಯಾ. ಇವರು ಒಂದು ಬಿಳಿ ಗುಲಾಬಿ ತರ್ತೀನಿ,” ಎಂದು ಅಂಗಳಕ್ಕೆ ಓಡಿಹೋಗಿ ಬಿಳಿ ಗುಲಾಬಿಯನ್ನು ಕಿತ್ತು ತಂದು ಅಕ್ಕನಿಗೆ ಮುಡಿಸಿದಳು.

ಅವಳು ಹೊರಟಾಗ ಬಾಲು, “ಜೋಪಾನ ಮೈತ್ರಿ…. ಯಾರಾದರೂ ಎತ್ತಿಕೊಂಡು ಹೋದಾರು,” ಎಂದು ಕಣ್ಣು ಮಿಟುಕಿಸಿ ರೇಗಿಸಿದ.

“ಸಾಕು ಸುಮ್ಮನಿರೋ…” ಎನ್ನುತ್ತಾ ಹುಸಿ ಮುನಿಸು ತೋರುತ್ತಾ ತಮ್ಮನಿಗೆ ಒಂದು ಏಟು ಕೊಟ್ಟು ಗೆಳತಿಯ ಮನೆಗೆ ಹೊರಟಳು.

ಅದೇ ಗುಂಗಿನಲ್ಲಿ ಶೈಲಾಳ ಮನೆಗೆ ಬಂದ ಮೈತ್ರಿ, “ಶೈಲೂ…ಶೈಲೂ…” ಎಂದು ಕೂಗಿದಳು.

ತಕ್ಷಣ ಬಾಗಿಲಲ್ಲಿ ಪ್ರತ್ಯಕ್ಷಳಾದ ತರುಣನನ್ನು ನೋಡಿ ನಾಚಿ ತಲೆ ತಗ್ಗಿಸಿದಳು. ಅವನೂ ಸಹ ಈ ರೂಪರಾಶಿಯನ್ನು ನೋಡುತ್ತಾ ಮಾತು ಮರೆತು ಹಾಗೆಯೇ ನಿಂತ. ಅಷ್ಟರಲ್ಲಿ ಹೊರಗೆ ಬಂದ ಶೈಲಾ, “ಬಾರೇ ಒಳಗೆ,” ಎನ್ನುತ್ತಾ, “ಅಣ್ಣಾ, ಇವಳು ನನ್ನ ಗೆಳತಿ ಮೈತ್ರಿ….” ಎಂದು ತನ್ನಣ್ಣ ಮಧುವಿಗೆ ಪರಿಚಯಿಸಿ, ನಂತರ “ಇವನು ನನ್ನ ಅಣ್ಣ ಮಧು ಕಣೇ….” ಎಂದು ಗೆಳತಿಗೆ ಪರಿಚಯಿಸಿದಳು.

40wa-birthday-story2

ಮಧು ಕಡೆ ತಿರುಗಿ ಪರಿಚಯದ ನಗು ಬೀರಿ, “ಬಾರೇ ಹೋಗೋಣ,” ಎಂದು ಇಬ್ಬರೂ ಹೊರಟರು. ದಾರಿಯಲ್ಲಿ ಶೈಲಾ, “ಅಣ್ಣ ಒಂದು ತಿಂಗಳು ಇದೇ ಊರಿನಲ್ಲಿ ಇರುತ್ತಾನೆ ಕಣೇ, ನನಗಂತೂ ತುಂಬಾ ಖುಷಿ,” ಎಂದು ತನ್ನ ಸಂತಸ ವ್ಯಕ್ತಪಡಿಸಿದಳು.

ಮೂರ್ನಾಲ್ಕು ಬಾರಿ ಮೈತ್ರಿಯನ್ನು ನೋಡಿದ ಮಧು, ತಂಗಿಯ ಬಳಿ, “ಶೈಲೂ… ನಾನು ಮೈತ್ರಿಯನ್ನು ಮದುವೆ ಆಗಬೇಕೆಂದಿದ್ದೇನೆ. ಅವಳನ್ನು ನನ್ನ ಸಂಗಾತಿಯಾಗಿ ತರುವುದು ನಿನಗೆ ಸೇರಿದ್ದು,” ಎಂದು ತನ್ನ ಆಸೆಯನ್ನು ಒಂದೇ ಮಾತಿನಲ್ಲಿ ಹೇಳಿಕೊಂಡಿದ್ದ.

ಶೈಲಾ ಕೀಟಲೆ ಮಾಡುತ್ತಾ, “ಎರಡು ಮೂರು ಸಲ ನೋಡಿದ್ದೀಯಾ ಅಷ್ಟರಲ್ಲಿ ಅವಳನ್ನು ಮೆಚ್ಚಲು ಕಾರಣ……” ಎಂದಳು.

“ಮೊದಲ ದಿನ ಬಿಳಿ ಸೀರೆಯಲ್ಲಿ ಅವಳ ಸೌಂದರ್ಯ ರಾಶಿಯನ್ನು ನೋಡಿದಾಗಲೇ ನಿನಗೆ ಹೇಳಬೇಕೆಂದಿದ್ದೆ. ಆ ದಿನವೇ ಅವಳು ನನ್ನ ಹೃದಯದಲ್ಲಿ ಸೇರಿ ಹೋಗಿದ್ದಾಳೆ,” ಎಂದು ಭಾವುಕನಾಗಿ ನುಡಿದ.

“ತಾಳಿ ರಾಯರೇ, ನಿನ್ನ ಬಡ ತಂಗಿ ಸಹ ಇಲ್ಲಿ ಇದ್ದಾಳೆ. ನನ್ನ ಗೆಳತಿಯ ನೆನಪಲ್ಲಿ ಮೈಮರೆಯಬೇಡ,” ಎಂದು ತಮಾಷೆ ಮಾಡಿದಳು.

ನಂತರ ಶೈಲಾ ಅಪ್ಪ, ಅಮ್ಮನಿಗೆ ವಿಷಯ ತಿಳಿಸಿ, ಅದನ್ನು ಮೈತ್ರಿ ಮನೆಯವರಿಗೂ ಹೇಳಿ, ಮದುವೆಗೆ ಎಲ್ಲರನ್ನೂ ಒಪ್ಪಿಸುವಲ್ಲಿ ಸಹಕರಿಸಿದಳು.

ಮದುವೆಗೆ ಎರಡು ತಿಂಗಳ ಸಮಯವಿತ್ತು. ಮಧು ದಿನಾಲೂ ಇಲ್ಲಿಗೆ ಬಂದರೂ ಮೈತ್ರಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅದಕ್ಕೆ ಮಧು, ಚೈತ್ರಾಳ ಬಳಿ ಬಂದು, “ಚೈತ್ರಾ ಹೇಗಾದರೂ ನಿನ್ನಕ್ಕನನ್ನು ಭೇಟಿ ಮಾಡಿಸಿದರೆ, ನಿನಗೆ ಪುಸ್ತಕ ತೆಗೆದುಕೊಡುವೆ,” ಎಂದು ಅವಳನ್ನು ಓಲೈಸಿದ.

ಚೈತ್ರಾಗೆ ಚಿಕ್ಕ ವಯಸ್ಸಿನಲ್ಲೇ ಪುಸ್ತಕ ಓದು ಹವ್ಯಾಸವಿದ್ದ ಕಾರಣ, `ಪುಸ್ತಕ ತೆಗೆದುಕೊಟ್ಟರೆ ಹೇಳಿದ ಕೆಲಸ ಮಾಡಿಕೊಡುವೆ,’ ಎಂದು ಎಲ್ಲರಿಂದ ಪುಸ್ತಕ ಪಡೆದು ಅದನ್ನು ಸಂಗ್ರಹಿಸಿದ್ದಳು.

ಅದನ್ನು ತಿಳಿದು ಮಧು ಕೂಡ ಚೈತ್ರಾಳ ಬಳಿ ಪುಸ್ತಕದ ಆಮಿಷ ಒಡ್ಡಿದ್ದ. ಪುಸ್ತಕ ಎಂದ ತಕ್ಷಣ ಚೈತ್ರಾಳಿಗೆ ಖುಷಿಯಾಗಿ, “ಸಂಜೆ ದೇವಸ್ಥಾನಕ್ಕೆ ಬನ್ನಿ ಭಾವ. ನಾನು ಅಕ್ಕನನ್ನು ಕರೆದುಕೊಂಡು ಬರ್ತೀನಿ,” ಎಂದು ದೊಡ್ಡವರ ತರಹ ಹೇಳಿದಳು.

ಮೈತ್ರಿಯ ಮದುವೆ ಸಂಭ್ರಮದಿಂದ ನಡೆಯಿತು. ಅವಳು ಮೈಸೂರಿಗೆ ಹೋದ ಮೇಲೆ ಚೈತ್ರಾಳಿಗೆ ಮೈತ್ರಿ ಇರದ ಕೊರತೆ ಎದ್ದು ಕಾಣತೊಡಗಿತು. ಮದುವೆಯಾದ ವರ್ಷದಲ್ಲೇ ಮೈತ್ರಿಗೆ ಹೆಣ್ಣು ಮಗುವಾದಾಗ ಚೈತ್ರಾ ಮಗುವನ್ನು ಬಿಟ್ಟು ಕದಲುತ್ತಿರಲಿಲ್ಲ. ಮಗುವಿಗೆ ಆರು ತಿಂಗಳು ತುಂಬಿದ ನಂತರ ಮೈತ್ರಿ ಊರಿಗೆ ಹೋದಳು.

ಹಾಗೆಯೇ ದಿನಗಳು ಉರುಳುತ್ತಿತ್ತು. ಚೈತ್ರಾ ಅಣ್ಣಂದಿರ ಜೊತೆಗೆ ಹರಟೆ ತರಲೆ ಮಾಡುತ್ತಾ ಕಾಲೇಜು, ಗೆಳತಿಯರು ಎಂದು ಸಮಯ ಕಳೆಯುತ್ತಿದ್ದಳು. ಮನೆಯಲ್ಲಿ ಅಕ್ಕಪಕ್ಕದಲ್ಲಿ ಎಲ್ಲರಿಗೂ ಚೈತ್ರಾ ಎಂದರೆ ಅಷ್ಟು ಪ್ರೀತಿ. ಅಪರೂಪಕ್ಕೆ ಅಕ್ಕ ಮೈತ್ರಿಯ ಮನೆಗೆ ಹೋಗಿ ನಾಲ್ಕು ದಿನ ಆಗುತ್ತಿದ್ದಂತೆ, ಬಾಲು ಅಥವಾ ಕಿರಣ್‌ ಹೋಗಿ, “ನೀನಿಲ್ಲಾ ಅಂದರೆ ಮನೆಯಲ್ಲಿ ಇರಲು ಬೇಸರ ಬಾ ಊರಿಗೆ,” ಎಂದು ಕರೆದುಕೊಂಡು ಬರುತ್ತಿದ್ದರು.

ಮನೆಯಲ್ಲಿ ಬಾಲುವಿನ ಮದುವೆಗಾಗಿ ಬಲವಂತ ಮಾಡುತ್ತಿದ್ದರು. ಚೈತ್ರಾ ಸಹ, “ಬಾಲು, ನೀನು ಮದುವೆಯಾದರೆ ನನಗೆ ಅತ್ತಿಗೆ ಜೊತೆಯಾಗುತ್ತಾರೆ. ನಾವಿಬ್ಬರೂ ಗೆಳತಿಯರಾಗ್ತೀವಿ. ಪ್ಲೀಸ್‌ ಮದುವೆಯಾಗು,” ಎಂದು ಬಲವಂತ ಮಾಡಿದಳು.

ಬಾಲು ತಮಾಷೆಯಾಗಿ, “ಅಮ್ಮಾ….. ಈ ಬಜಾರಿ ಮನೆಯಲ್ಲಿ ಇದ್ದರೆ ನನ್ನ ಹೆಂಡತಿಗೆ ಉಳಿಗಾಲವಿರಲ್ಲ. ನಿನ್ನನ್ನು ಮನೆಯಿಂದ ಕಳುಹಿಸಿಯೇ ನಾನು ಮದುವೆಯಾಗುವುದು,” ಎಂದು ಬಾಲು ತಮಾಷೆಯಾಗಿ ಕೈ ಮುಗಿದು ನಿಂತಾಗ, ಚೈತ್ರಾ ಕೋಪದಿಂದ ಮುಖ ಊದಿಸಿಕೊಂಡು, “ನಾನೇನು ಕೆಟ್ಟವಳಲ್ಲ,” ಎನ್ನತ್ತಾ ಓಡುತ್ತಿದ್ದಳು.

ಒಂದು ದಿನ ಬಾಲು ಹತ್ತಿರ ಅಮ್ಮ ಮಾತನಾಡುವುದು ಚೈತ್ರಾಳಿಗೆ ಕೇಳಿಸಿತು. “ಬಾಲು ನೀನು ಮದುವೆ ಮಾಡಿಕೋ. ಹುಡುಗಿ ಮನೆಯವರು ಕೇಳುತ್ತಿದ್ದಾರೆ,” ಎಂದರು ಅಮ್ಮ.

“ಅಮ್ಮಾ….. ಮೊದಲು ಚೈತ್ರಾಳಿಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡೋಣ. ಅವಳು ಸುಖವಾಗಿ ಇದ್ದಾಳೆ ಅಂತ ಆದಮೇಲೆ ನಾನು ಮದುವೆಯಾಗುವುದು. ಬೇರೆ ಮನೆಯಿಂದ ಬಂದ ಹೆಣ್ಣುಮಕ್ಕಳು, ನಾವು ಚೈತ್ರಾಳನ್ನು ಪ್ರೀತಿಸುವುದನ್ನು ನೋಡಿ ಅಸೂಯೆಪಡಬಹುದು. ನಮ್ಮ ಪ್ರೀತಿ ಹೀಗೆ ಇದ್ದರೂ, ಅದರಿಂದ ಚೈತ್ರಾಳ ಮನಸ್ಸಿಗೆ ಸಣ್ಣ ನೋವಾದರೂ ನಾನು ಸಹಿಸುವುದಿಲ್ಲ. ನನಗೆ ಚೈತ್ರಾಳ ಸಂತೋಷ ಮುಖ್ಯ. ಈಗಲೇ ಮದುವೆಗೆ ಬಲವಂತ ಮಾಡಬೇಡ,” ಎಂದು ಬಾಲು ಹೇಳಿದ.

ಅದನ್ನು ಕೇಳಿದ ಚೈತ್ರಾಳಿಗೆ, ಅಣ್ಣ ತನ್ನ ಮೇಲೆ ಇಟ್ಟಿರುವ ಪ್ರೀತಿಗೆ ಕಣ್ಣು ತುಂಬಿ ಬಂದಿತು.

ಒಂದು ದಿನ ಚೈತ್ರಾ ಗೆಳತಿಯ ಜೊತೆಗೆ ಹೊರಗೆ ಹೊರಟಿದ್ದಳು. ಆಗ ಅಣ್ಣ ಕಿರಣ್‌ ಒಬ್ಬ ಯುವಕನ ಜೊತೆ ಬಂದು, “ಚೈತ್ರಾ, ಹೊರಗಡೆ ಹೋಗ್ತಿದ್ದೀಯಾ…..? ನೋಡು, ಇವನು ನನ್ನ ಗೆಳೆಯ ಶೇಖರ್‌,” ಎಂದು ತಂಗಿಗೆ ಹೇಳಿ, ಗೆಳೆಯನ ಕಡೆ ತಿರುಗಿ, “ಶೇಖರ್‌, ಇವಳು ನನ್ನ ಮುದ್ದಿನ ತಂಗಿ ಚೈತ್ರಾ ಹಾಗೂ ಅವಳ ಗೆಳತಿ,” ಎಂದು ಇಬ್ಬರನ್ನೂ ಪರಿಚಯಿಸಿದ.

ಶೇಖರ್‌ ನನ್ನು  ನೋಡಿ ಚೈತ್ರಾಳಿಗೆ ಮಾತು ಮರೆತಂತೆ ಹಾಗೆಯೇ ನಿಂತು ನೋಡತೊಡಗಿದಳು. ಕಿರಣ್‌ ನಾಟಕೀಯವಾಗಿ, “ತಾವು ಇನ್ನೂ ದಯ ಮಾಡಿಸಬಹುದು….” ಎಂದ. ಇದರಿಂದ ಎಚ್ಚೆತ್ತ ಚೈತ್ರಾ ಗೆಳತಿಯ ಸಂಗಡ ಹೊರಟಳು.

ಅವಳ ಗೆಳತಿ, “ನಿಮ್ಮಣ್ಣನ ಫ್ರೆಂಡ್‌ ತುಂಬಾ ಹ್ಯಾಂಡ್‌ ಸಮ್ ಆಗಿದ್ದಾನೆ,” ಎಂದಳು.

ಗೆಳತಿಯ ಜೊತೆಗೆ ಸುತ್ತಾಡಿ ಅವಳು ಮನೆಗೆ ಬಂದಾಗ ಸಮಯ ಏಳು ಗಂಟೆಯಾಗಿತ್ತು. ಮನೆಗೆ ಬಂದವಳೇ, “ಅಮ್ಮಾ….. ಅಣ್ಣಂದಿರೆಲ್ಲಿ….?” ಎಂದು ಕೇಳಿದಳು.

“ಸಂಜೆ ಬಂದಿದ್ದ ಅವನ ಗೆಳೆಯನ ಜೊತೆ ಹೋಗಿದ್ದಾರೆ,” ಎಂದರು ಅಮ್ಮ.

ಚೈತ್ರಾ ಮುಖ ತೊಳೆದು ದೇವರಿಗೆ ಊದುಬತ್ತಿ ಹಚ್ಚಿ ಕಣ್ಮುಚ್ಚಿ ನಿಂತಾಗ ಕಾಣಿಸಿದ್ದು ಶೇಖರನ ನಗು ಮುಖ. `ಛೇ… ಇವನೊಬ್ಬ’ ಎಂದುಕೊಂಡಳು.

ಅಣ್ಣಂದಿರ ಜೊತೆ ಮಾತನಾಡಲು ವಾರ ವಾರ ಶೇಖರ್‌ ಮನೆಗೆ ಬರುತ್ತಿದ್ದ. ಹಾಗೆಯೇ ಚೈತ್ರಾ ಸಹ ಅವನ ಜೊತೆ ಮಾತನಾಡುತ್ತಾ ಸಮಯ ಕಳೆಯತೊಡಗಿದಳು. ಅವಳಿಗೆ ಯಾವಾಗಲೂ ಶೇಖರನದೇ ನೆನಪು. `ಏಕೋ…. ಅವನನ್ನು ಬಿಟ್ಟು  ತಾನು ಇರಲಾರೆ,’ ಎನಿಸತೊಡಗಿತು. ಅವನನ್ನು ಮದುವೆಯಾಗಲು ಮನೆಯಲ್ಲಿ ಒಪ್ಪುವುದಿಲ್ಲ. ಅವನು ಬೇರೆ ಜಾತಿಯವನು ಎಂದು ಗೊತ್ತಿದ್ದೂ, ದಿನ ಕಳೆದಂತೆ ಮನಸ್ಸು ಅವನ ಕಡೆಗೆ ವಾಲತೊಡಗಿತ್ತು.`ಆದಷ್ಟೂ ಅವನಿಂದ ದೂರವಿರಬೇಕು,’ ಎಂದು ಸ್ವಲ್ಪ ದಿನ ಮೈತ್ರಿ ಮನೆಗೆ ಹೋದಳು. ದೂರ ಹೋದರೂ ಕುಂತಲ್ಲಿ ನಿಂತಲ್ಲಿ ಅವನದೇ ನಗು ಮುಖ ಕಾಣತೊಡಗಿತು. `ಛೇ…. ಯಾಕೆ ಹೀಗೆ ಕಾಡ್ತೀಯಾ….? ನನ್ನ ಮನದಿಂದ ದೂರ ಹೋಗು,’ ಎಂದು ಎಷ್ಟೋ ಸಲ ಬೈದುಕೊಳ್ಳುತ್ತಿದ್ದಳು. ಏನು ಮಾಡಿದರೂ ಅವನನ್ನು ದೂರ ಮಾಡಲು ಸಾಧ್ಯವಿಲ್ಲದೇ, ಅಲ್ಲಿಯೂ ಇರಲಾರದೆ ನಾಲ್ಕು ದಿನಕ್ಕೆ ಮೈಸೂರಿನಿಂದ ವಾಪಸ್ಸು ಬಂದಳು. ಮರಳಿ ಮನೆಗೆ ಬಂದವಳಿಗೆ ಎರಡು ದಿನವಾದರೂ ಶೇಖರನ ದರ್ಶನವಾಗಲಿಲ್ಲ. ಅಣ್ಣಂದಿರ ಬಳಿ ಕೇಳಲು ಸಂಕೋಚವಾಯಿತು.

ಇತ್ತ ಶೇಖರ್‌ ಮನೆಗೆ ಬಂದಾಗ ಚೈತ್ರಾಳನ್ನು ಕಾಣದೆ ಅವನಿಗೂ ಬೇಸರವಾಗಿತ್ತು. ಸ್ನೇಹಿತರು ಅದು ಇದೂ ಮಾತನಾಡುವಾಗ, “ಇನ್ನು ಎಂಟು ದಿನ ಚೈತ್ರಾ ಇಲ್ಲದೆ ಹೇಗಪ್ಪಾ ಇರುವುದು. ಅವಳಿಲ್ಲದೆ ಮನೆಯೆಲ್ಲಾ ನಿಶ್ಶಬ್ದವಾಗಿದೆ,” ಎಂದು ಬಾಲು ಹೇಳಿದಾಗ, ಚೈತ್ರಾ ಊರಿಗೆ ಹೋಗಿದ್ದಾಳೆ ಎಂದು ತಿಳಿಯಿತು.

ತಾನೂ ರಜೆ ಹಾಕಿ ಊರಿಗೆ ಹೋದ. ಎಲ್ಲಿಗೆ ಹೋದರೂ ಅವಳದೇ ನೆನಪು. ಅಲ್ಲಿಯೂ ಇರಲಾರದೆ ಮತ್ತೆ ವಾಪಸ್‌ ಬಂದ. ಸಂಜೆ ಆಗುತ್ತಿದ್ದಂತೆ ಅವನ ಕಾಲುಗಳು ಚೈತ್ರಾಳ ಮನೆ ಕಡೆಗೆ ಎಳೆದವು. ಅವಳ ಅಣ್ಣಂದಿರ ನೆಪ ಮಾಡಿಕೊಂಡು ಅವಳ ಮನೆಗೆ ಹೋದ. ಗೇಟು ತೆಗೆದು ಒಳಹೋದ. ಗುಲಾಬಿ ಗಿಡದ ಬಳಿ ನಿಂತ ಚೈತ್ರಾಳನ್ನು ನೋಡಿದ್ದೆ ಅವನ ಕಣ್ಣಲ್ಲಿ ನೂರು ಕ್ಯಾಂಡಲ್ ಬಲ್ಬಿನಷ್ಟು ಪ್ರಭೆ!

ಗೇಟು ತೆಗೆದ ಸದ್ದಿಗೆ ಚೈತ್ರಾ ತಿರುಗಿ ನೋಡಿದಳು. ಶೇಖರನನ್ನು ಕಂಡು ಅವಳ ಕಣ್ಣುಗಳೂ ಮಿನುಗಿದವು. ಮಾತು ಮರೆತು ಒಬ್ಬರನ್ನೊಬ್ಬರು ನೋಡುತ್ತಾ ನಿಂತರು. ಅಷ್ಟರಲ್ಲಿ ಅಲ್ಲಿಗೆ ಬಂದು ಕಿರಣ್‌, “ಶೇಖರ್‌ಬಾರೋ,” ಎಂದು ಕರೆದಾಗ ಇಬ್ಬರೂ ವಾಸ್ತವಕ್ಕೆ ಬಂದರು.

“ನಾಳೆ ಚೈತ್ರಾಳ ಹುಟ್ಟಿದ ದಿನ. ನಾವೆಲ್ಲರೂ ಒಟ್ಟಿಗೆ ದೇವಸ್ಥಾನಕ್ಕೆ ಹೋಗ್ತೀವಿ. ಶೇಖರ್‌, ನೀನೂ ಬಾ,” ಎಂದು ಕಿರಣ್‌, ಬಾಲು ಇಬ್ಬರೂ ಶೇಖರ್‌ ನನ್ನು ಕರೆದರು. ಅವನು ಬರುವುದಾಗಿ ಒಪ್ಪಿಕೊಂಡ.

ಮರುದಿನ ಚೈತ್ರಾ ಎಣ್ಣೆ ನೀರು ಹಾಕಿಕೊಂಡು, ಅಪ್ಪ ತಂದುಕೊಟ್ಟ ಮೈಸೂರು ಸಿಲ್ಕ್ ಸೀರೆ ಉಟ್ಟಿದ್ದಳು. ರಕ್ತಗೆಂಪಿನ ಸೀರೆಗೆ ಎರಡಂಗುಲ ಜರಿ ಅಂಚಿದ್ದ ಈ ಸೀರೆ ಅವಳಿಗೆ ತುಂಬಾ ಸುಂದರವಾಗಿ ಕಾಣುತ್ತಿತ್ತು. ಕೂದಲನ್ನು ಮೇಲಕ್ಕೆ ಎತ್ತಿ ಕ್ಲಿಪ್‌ ಹಾಕಿದ್ದಳು. ಅದೇ ಬಣ್ಣದ ಬಳೆ, ಸರ ಧರಿಸಿದ್ದ ಚೈತ್ರಾ, ನೋಡಲು ಮುದ್ದಾಗಿ ಕಾಣುತ್ತಿದ್ದಳು.

ನೀಲಕಂಠ ರಾಯರು ಹಾಗೂ ಶಾರದಮ್ಮನವರಿಗೆ ಮಗಳನ್ನು ನೋಡಿದಷ್ಟೂ ತೃಪ್ತಿಯಾಗುತ್ತಿರಲಿಲ್ಲ. ಎಲ್ಲರೂ ಹೊರಡುವ ಸಮಯಕ್ಕೆ ಸರಿಯಾಗಿ ಶೇಖರ್‌ ಸಹ ಬಂದ. ಚೈತ್ರಾಳನ್ನು ನೋಡಿ ಅವನಿಗೆ ಮಾತೇ ಮರೆತು ಹೋಯಿತು. ಅವಳಿಗಾಗಿ ತಂದ ಪುಸ್ತಕಗಳನ್ನು ಹೇಗೆ ಕೊಟ್ಟನೋ ತಿಳಿಯಲಿಲ್ಲ.

ಎಲ್ಲರೂ ದೇವಸ್ಥಾನಕ್ಕೆ ಹೋದರು. ಶೇಖರನೇ ತನ್ನ ಪತಿಯಾದರೆ ಎಷ್ಟು ಚಂದ ಎನಿಸಿತು ಚೈತ್ರಾಳಿಗೆ. ಅಂತೂ ಪೂಜೆ ಮುಗಿಸಿ, ಎಲ್ಲರೂ ಹೋಟೆಲ್ ‌ಗೆ ಹೋಗಿ ಊಟ ಮಾಡಿ, ಮನೆಗೆ ಬಂದರು.

ಮರುದಿನ ಚೈತ್ರಾ, ಕಾಲೇಜಿಗೆ ಹೋಗುವಾಗ ದಾರಿಯಲ್ಲಿ ಶೇಖರ್‌ ನಿಂತಿದ್ದ. “ನಾನು ನಿಮ್ಮ ಬಳಿ ಮಾತನಾಡಬೇಕು ಸಂಜೆ ಸಿಗ್ತೀರಾ….?” ಎಂದು ಕೇಳಿದ.

ye-to-hona-hi-tha-story

“ಸರಿ,” ಎಂದಳು ಚೈತ್ರಾ.

ಶೇಖರನಿಗೂ ಸಹ ಚೈತ್ರಾಳನ್ನು ಬಿಟ್ಟಿರಲು ಸಾಧ್ಯವಿಲ್ಲ ಎನಿಸಿತು. ಮೊದಲು ಅವಳ ಅಭಿಪ್ರಾಯ ತಿಳಿದು ನಂತರ ಅವಳ ಮನೆಯಲ್ಲಿ ಮಾತನಾಡೋಣ ಎಂದುಕೊಂಡ.

ಸಂಜೆ ಅವಳನ್ನು ಭೇಟಿಯಾಗಿ ಶೇಖರ್‌ ತನ್ನ ಅಭಿಪ್ರಾಯ ಹೇಳಿದಾಗ, ಚೈತ್ರಾ ಸಹ ನಾಚುತ್ತಾ, “ನನಗೂ ಅಷ್ಟೇ. ನಿಮ್ಮನ್ನು ಬಿಟ್ಟಿರುವ ಶಕ್ತಿಯಿಲ್ಲ,” ಎಂದಳು.

“ಮೊದಲು ಕಿರಣ್‌ ಜೊತೆ ಮಾತನಾಡುವೆ,” ಎಂದು ಶೇಖರ್‌ ಹೇಳಿದ. ನಂತರ ಇಬ್ಬರೂ ಮನೆಗೆ ಬಂದರು.

ಕಿರಣ್‌ ಬಳಿ ಮಾತನಾಡಿದಾಗ, “ಖಂಡಿತಾ ನಮ್ಮ ಅಪ್ಪ ಒಪ್ಪುವುದಿಲ್ಲ. ಈ ಮದುವೆ ಸಾಧ್ಯವಿಲ್ಲ,” ಎಂದ.

ಮನೆಯಲ್ಲಿ ಎಲ್ಲರೂ ಚೈತ್ರಾಳಿಗೆ ಬುದ್ಧಿ ಹೇಳಿದರು,  “ಈಗ ನಿಮಗೆ ಆಕರ್ಷಣೆ! ಮದುವೆ ಮಾಡಿಕೊಳ್ಳುತ್ತೀರಿ. ಮುಂದೆ ಬೇರೆ ಬೇರೆ ವಾತಾವರಣದಲ್ಲಿ ಬೆಳೆದ ಇಬ್ಬರಿಗೂ ಹೊಂದಿಕೊಳ್ಳಲು ಕಷ್ಟ,” ಎಂದು ಎಷ್ಟೋ ವಿಧವಾಗಿ ತಿಳಿಸಿ ಹೇಳಿದರು.

“ಮದುವೆಯಾದರೆ ಅವನನ್ನು ಮಾತ್ರ…. ಇಲ್ಲಾಂದರೆ ಹೀಗೆ ಇರ್ತೀನಿ,” ಎಂದು ಚೈತ್ರಾ ಹಠ ಹಿಡಿದಳು.

ಕಡೆಗೆ ನೀಲಕಂಠ ರಾಯರು ಮಗಳಿಗೆ ಎರಡು ದಿನ ಅವಕಾಶ ಕೊಟ್ಟು, “ನೀನು ಅವನನ್ನು ಮದುವೆಯಾದರೆ ನಾವಂತೂ ನಿನ್ನನ್ನು ಮನೆಗೆ ಸೇರಿಸುವುದಿಲ್ಲ. ದೇವಸ್ಥಾನದಲ್ಲಿ ಮದುವೆ ಮಾಡಿಕೊಡ್ತೀವಿ. ನಂತರ ನೀನು ನಮ್ಮೆಲ್ಲರನ್ನು ಸಂಪೂರ್ಣವಾಗಿ ಮರೆಯಬೇಕು. ಮನೆಗೆ ಬರುವುದು, ಫೋನ್‌ ಮಾಡುವುದು…. ಏನೂ ಮಾಡಬಾರದು. ಹಾಗಿದ್ದರೆ ಮದುವೆ ಮಾಡುವೆ. ಯೋಚಿಸಿ ನಿನ್ನ ನಿರ್ಧಾರ ಹೇಳು,” ಎಂದರು.

“ಎಷ್ಟೇ ಯೋಚಿಸಿದರೂ ಶೇಖರನ ಬಿಟ್ಟು ಬದುಕಲು ಸಾಧ್ಯವಿಲ್ಲ,” ಎಂಬ ಉತ್ತರ ಚೈತ್ರಾಳಿಂದ ಬಂದಿತು. ನೀಲಕಂಠರಾಯರು ಒಂದು ವಾರದಲ್ಲಿ ಅವಳ ಮದುವೆ ತಯಾರಿ ನಡೆಸಿದರು.

ಇತ್ತ ಶೇಖರನ ಮನೆಯಲ್ಲಿ ಸಹ ವಿರೋಧವಿತ್ತು. “ಅವಳು ಉತ್ತಮ ಜಾತಿಯ ಹುಡುಗಿ. ನಾವು ಸೊಸೆ ಎಂದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಅವಳ ಹತ್ತಿರ ಮಾಡಿಸಿಕೊಂಡು ತಿನ್ನಲು ನಮಗೆ ಆಗುವುದಿಲ್ಲ. ನೀವಿಬ್ಬರು ದೂರ ಇರಿ. ಮದುವೆಯಾದ ತಕ್ಷಣ ಬೆಂಗಳೂರಿನಲ್ಲಿ ಮನೆ ಇದೆಯಲ್ಲ ಅಲ್ಲಿಯೇ ಇರಿ,” ಎಂದರು ಅವನ ತಂದೆ ತಾಯಿ.

ಅಂತೂ ಶೇಖರ್‌ ಹಾಗೂ ಚೈತ್ರಾ ಮದುವೆಯಾದ ದಿನದಿಂದಲೇ ಇಬ್ಬರೂ ಕುಟುಂಬದಿಂದ ದೂರವಾದರು. ಮೊದ ಮೊದಲು ಇಬ್ಬರೂ ಬಹಳ ಖುಷಿಯಿಂದ ಇದ್ದರು.

ದಿನಕಳೆದಂತೆ ಚೈತ್ರಾಳಿಗೆ ತವರು ಮನೆಯ ಯೋಚನೆ ಶುರುವಾಯಿತು. `ಅಷ್ಟೊಂದು ಪ್ರೀತಿಸುವ ಮನೆಯವರನ್ನು ಮರೆತು ನಾನು ಹೇಗೆ ಇದೀನಿ…..? ಅಣ್ಣಂದಿರು ಹೇಗಿದ್ದಾರೆ…..? ಅಮ್ಮ ನನ್ನನ್ನು ಎಷ್ಟು ನೆನೆಸುತ್ತಾರೋ….? ಅಪ್ಪನಿಗೆ ದಿನಾ ರಾತ್ರಿ ಮಲಗುವಾಗ ನಾನೇ ಹಾಲು ಬಿಸಿ ಮಾಡಿ ಕೊಡ್ತಿದ್ದೆ…..’ ಎಂದೆಲ್ಲಾ ನೆನಪಾಗತೊಡಗಿತು.

`ಇತ್ತ ಶೇಖರ್‌ ಸಹ ಒಂಟಿಯಾದರು. ಅವರ ಮನೆಯವರೂ ಸಹ ಯಾರೂ ಬರುವುದಿಲ್ಲ. ನಾವು ತಪ್ಪು ನಿರ್ಧಾರ ಮಾಡಿದೆವೋ ಏನೋ….’ ಎಂದು ರಾತ್ರಿಯೆಲ್ಲ ಕನವರಿಸತೊಡಗಿದಳು.

ಸಂಜೆ ಆಫೀಸಿನಿಂದ ಬಂದಾಗ, “ರೀ, ಇನ್ನೂ ಆರು ತಿಂಗಳಿಗೆ ನಮ್ಮ ಮಗು ಬರುವುದು,” ಎಂದು ಹೇಳಿದಳು. ಶೇಖರ್‌ಖುಷಿಯಿಂದ ಕುಣಿದು ಕುಪ್ಪಳಿಸಿದ.

ಆದರೆ ಚೈತ್ರಾಳಿಗೆ ಯೋಚನೆಯಾಯಿತು. `ನಮ್ಮ ಬಾಲ್ಯ ಎಷ್ಟು ಸುಂದರವಾಗಿತ್ತು. ಈಗ ಅಕ್ಕ ಮೈತ್ರಿ ಮಗುವಿಗೂ ಎರಡೂ ಕಡೆ ಅಜ್ಜ ಅಜ್ಜಿ ಹಾಗೂ ಚಿಕ್ಕಪ್ಪ, ಚಿಕ್ಕಮ್ಮ, ಮಾವಂದಿರು, ಅತ್ತೆ….  ಹೀಗೆ ಎಷ್ಟೊಂದು ಪ್ರೀತಿಸುವ ಸಂಬಂಧಗಳಿವೆ….. ಆದರೆ ಈಗ ನಮ್ಮ ಮಗು ಯಾರೂ ಇಲ್ಲದೆ ಒಂಟಿಯಾಗಿ ಬೆಳೆಯಬೇಕಾ…..? ನಾವು ಅಷ್ಟೇ, ಮನೆಯವರ ಪ್ರೀತಿ ಇಲ್ಲದೆ ಜೀವನ ಪರ್ಯಂತ ಇರೋಕೆ ಸಾಧ್ಯವಾ….? ನಾವು ಇನ್ನೆಷ್ಟು ಕಾಲ ಮನೆಯವರ ಪ್ರೀತಿಯಿಲ್ಲದೆ ಜೀವನ ಪರ್ಯಂತ ಹೀಗೆ ಇರೋದು…?’ ಕುಳಿತರೆ, ನಿಂತರೆ ಇದೇ ಯೋಚನೆಯಿಂದ ಚೈತ್ರಾಳ ಆರೋಗ್ಯ ಕೆಡಲಾರಂಭಿಸಿತು.

ಶೇಖರನಿಗೆ ಯೋಚನೆ ಶುರುವಾಯಿತು. `ಏನಾದರಾಗಲಿ ನಾನೇ ಒಂದು ಸಲ ಚೈತ್ರಾಳ ತವರಿಗೆ ಹೋಗಿ ಬರುವೆ,’ ಎಂದು ನಿರ್ಧಾರಿಸಿ, “ಚೈತ್ರಾ….. ನಾಳೆ ಆಫೀಸ್‌ ಕೆಲಸದ ಮೇಲೆ ಬೇರೆ ಊರಿಗೆ ಹೋಗಬೇಕು. ನಿನ್ನ ಜೊತೆ ಇರಲು ನನ್ನ ಗೆಳೆಯನ ಹೆಂಡತಿಗೆ ಹೇಳ್ತೀನಿ. ನಿನ್ನನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗಲು ಮನಸ್ಸಿಲ್ಲ ಬೇಗೆ ಬರುತ್ತೇನೆ, ಸಾರಿ ಚೈತ್ರಾ…..” ಎಂದು ಅವಳನ್ನು ಒಪ್ಪಿಸಿದ.

“ರೀ, ನೀವು ಆರಾಮವಾಗಿ ಹೋಗಿಬನ್ನಿ. ನನ್ನ ಬಗ್ಗೆ ಯೋಚಿಸಬೇಡಿ,” ಎಂದಳು.

ಶೇಖರ್‌ ಮೊದಲೇ ಗೆಳೆಯ ಕಿರಣ್‌ ಗೆ ಫೋನ್‌ ಮಾಡಿ ಎಲ್ಲಾ ವಿಷಯವನ್ನೂ ತಿಳಿಸಿದ್ದರಿಂದ ಚೈತ್ರಾಳ ಮನೆಯಲ್ಲಿ ಎಲ್ಲರೂ ಇವನಿಗಾಗಿಯೇ ಕಾಯುತ್ತಿದ್ದರು. ಅವನು ಮನೆ ತಲುಪುತ್ತಿದ್ದಂತೆ ಎಲ್ಲರೂ ಅವನನ್ನು ಸುತ್ತುವರೆದು, “ಚೈತ್ರಾ ಹೇಗಿದ್ದಾಳೆ…..?” ಎಂದು ಕೇಳಿದರು.

“ನಿಮ್ಮಗಳ ಪ್ರೀತಿ ಇಲ್ಲದೆ ಅವಳು ಹೇಗೆ ಇರುತ್ತಾಳೆ…..?  ನಾವು ತಪ್ಪು ಮಾಡಿದ್ದೀವಿ ಮಾವ, ನೀವು ನಮ್ಮನ್ನು ಕ್ಷಮಿಸಿ ನನ್ನ ಚೈತ್ರಾಳನ್ನು ಉಳಿಸಿಕೊಡಿ. ಈಗ ಅವಳು ಮೂರು ತಿಂಗಳ ಗರ್ಭಿಣಿ.  ನಿಮ್ಮಗಳ ಮಮತೆ, ಪ್ರೀತಿ ಇಲ್ಲದೆ ಹಗಲು ರಾತ್ರಿ ಅದೇ ಯೋಚನೆಯಲ್ಲಿ ಕಂಗೆಟ್ಟು ಹೋಗಿದ್ದಾಳೆ,” ಎಂದು ಕೈ ಮುಗಿದು ವಿನಂತಿಸಿದ.

“ನಾನೂ ತಪ್ಪು ಮಾಡಿದೆ. ಜಾತಿ ಜಾತಿ ಎಂದು ನಿಮ್ಮನ್ನು ದೂರಮಾಡಿದೆವು. ಈಗ ಅದರ ಅರಿವಾಗುತ್ತಿದೆ. ನನ್ನ ಮಗಳನ್ನು ಇಷ್ಟು ಪ್ರೀತಿಯಿಂದ ನೋಡಿಕೊಳ್ಳುವ ನಿನ್ನನ್ನು ನನ್ನ ಅಳಿಯ ಎಂದು ಹೇಳಲು ನನಗೆ ಹೆಮ್ಮೆ ಆಗುತ್ತಿದೆ,” ಎಂದ ನೀಲಕಂಠ ರಾಯರು, “ನಾನೂ ಹಠ ಮಾಡಿಬಿಟ್ಟೆ. ನಿಮ್ಮಿಬ್ಬರ ಜೀವನ ನಿಮ್ಮದು. ನೀವು ಸಂತೋಷವಾಗಿ ಇರುವುದು ಮುಖ್ಯ ಎಂದು ನನಗೆ ಅನಿಸಲೇ ಇಲ್ಲ. ಇಷ್ಟು ಪ್ರೀತಿ ತೋರಿಸಿದ್ದ ನಮ್ಮನ್ನು ಬಿಟ್ಟು ನಿನ್ನ ಜೊತೆ ಹೋಗಬೇಕಾದರೆ ನಿಮ್ಮ ಪ್ರೀತಿಯ ಪ್ರೀತಿಯ ಶಕ್ತಿ ಎಷ್ಟೆಂಬುದನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ.

“ನೀನು ಬರದೆ ಇದ್ದರೂ ಭಾನುವಾರ ನಾವೇ ಬರುವ ತೀರ್ಮಾನ ಮಾಡಿದ್ದೆವು. ಈಗ ನೀನೇ ಬಂದಿರುವಿ. ಸರಿ….. ನಿಮ್ಮ ತಾಯಿ ತಂದೆಯ ಜೊತೆ ಮಾತನಾಡಿ ಅವರನ್ನೂ ಕರೆದುಕೊಂಡು ಭಾನುವಾರ ಬರುತ್ತೇವೆ,” ಎಂದು ಶೇಖರನಿಗೆ ಸಮಾಧಾನ ಹೇಳಿ ಕಳುಹಿಸಿದರು ರಾಯರು.

ಊರಿನಿಂದ ವಾಪಸ್ಸಾದ ಶೇಖರ್‌ ಬಹಳ ಖುಷಿಯಿಂದ ಇದ್ದ. “ಚೈತೂ…. ಭಾನುವಾರ ನಮ್ಮ ಮನೆಗೆ ನನ್ನ ಗೆಳೆಯರು ಬರುತ್ತಾರೆ. ನಿನಗೆ ಅಡುಗೆ ಮಾಡಲು ಕಷ್ಟ ಆಗಬಾರದು ಎಂದು ನಾನು ಹೋಟೆಲ್ ನಿಂದ ಊಟ, ತಿಂಡಿ ತರಿಸ್ತೀನಿ,” ಎಂದ.

ಅಂದು ಭಾನುವಾರ ಶೇಖರನ ಸಂಭ್ರಮ ನೋಡಿ ಚೈತ್ರಾಳಿಗೆ ಅಚ್ಚರಿ. `ಎಲ್ಲೋ ಅವರಿಗೆ ತುಂಬಾ ಬೇಕಾದವರು ಬರಬಹುದು,’ ಎಂದುಕೊಂಡಳು.

ಮಧ್ಯಾಹ್ನದ ಊಟಕ್ಕೆ ಬೆಳಗ್ಗೆಯೇ ಹೋಟೆಲ್ ‌ಗೆ ಆರ್ಡರ್‌ ಮಾಡಿದ. ತಿಂಡಿಯನ್ನೂ ಅವನೇ ಮಾಡಿ, ಹೆಂಡತಿ ಬೇಡವೆಂದರೂ ಕೇಳದೆ ಬಲವಂತವಾಗಿ ತಿನ್ನಿಸಿದ. ಸುಮಾರು 11 ಗಂಟೆಗೆ ಹೊತ್ತಿಗೆ ಕಾಲಿಂಗ್‌ ಬೆಲ್ ‌ಆದಾಗ ಚೈತ್ರಾಳೆ ಹೋಗಿ ಬಾಗಿಲು ತೆರೆದಳು. ಎದುರಿಗೆ ಅಪ್ಪ, ಅಮ್ಮ, ಅತ್ತೆ ಮಾವ ಹಾಗೂ ಅಣ್ಣಂದಿರಾದ ಬಾಲು, ಕಿರಣ್‌ ಎಲ್ಲರನ್ನೂ ನೋಡಿ ಅವಳಿಗೆ ನಂಬಲು ಆಗಲಿಲ್ಲ. ಸಂತೋಷದಿಂದ ಜೋರಾಗಿ ಅಳಲಾರಂಭಿಸಿದಳು.

ಆಗ ಕಿರಣ್‌ ತಂಗಿಯ ತಲೆ ನೇವರಿಸುತ್ತಾ, “ಏ ಚೈತೂ…. ಇನ್ನೂ ಮಗು ತರಹ ಅಳ್ತೀಯಾ….? ಅಳುವುದೇನಿದ್ದರೂ ಅದು ನಿನ್ನ ಮಗುವಿನದು ಮಾತ್ರ….. ನೀನು ಅಮ್ಮನಾಗುತ್ತಿರುವೆ ನೀನಿನ್ನೂ ಮಗುವಲ್ಲ ಕಣೇ…..” ಎಂದು ತಂಗಿಯನ್ನು ಸಂತೈಸಿದ.

ಎಲ್ಲರೂ ಮುಖದಲ್ಲೂ ನಗು ತುಂಬಿ ಚೈತ್ರಾಳ ಮನೆ ನಂದನವನವಾಯಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ