ತನ್ನ ಅಜ್ಜಿ ಹೇಳಿದ್ದನ್ನು ಸದಾ ನೆನಪಿಸಿಕೊಳ್ಳುತ್ತಾ, ಸಾಂಪ್ರದಾಯಿಕತೆಯೊಂದಿಗೆ ಇಂದಿನ ಆಧುನಿಕತೆ ಬೆರೆಸಿಕೊಂಡು, ಮಗಳ ಬಾಣಂತನಕ್ಕೆಂದು ವಿದೇಶಕ್ಕೆ ಬಂದಿಳಿದ ಭಾರತೀಯ ತಾಯಿ ತನ್ನ ಕರ್ತವ್ಯದಲ್ಲಿ ಯಶಸ್ಸು ಕಂಡಳೇ………?
ಕಾರ್ಡು ಉಜ್ಜಿ ಮಣಭಾರದ ಬಾಗಿಲು ಹಿಂದೆ ತಳ್ಳಿ, “ಅಮ್ಮಾ…. ಅಪ್ಪಾ…. ಬನ್ನಿ,” ಎಂದ ಮಗಳ ಹಿಂದೆ ನಡೆದು ಅವಳ ಮನೆ ಅಪಾರ್ಟ್ ಮೆಂಟ್ ನ ಕಾಮನ್ ಏರಿಯಾಕ್ಕೆ ಕಾಲಿಟ್ಟು, ಅವಳು ಏರುತ್ತಿರುವ ಒಂದೇ ನೋಟದ ಹದಿನೆಂಟು ಮೆಟ್ಟಿಲ ಆ ಸ್ಟೇರ್ ಕೇಸ್ ನೋಡಿದೆ.
“ಮೈ ಗಾಡ್… ದಿನಾ ಹೀಗೆ ಎಷ್ಟು ಸಲ ಹತ್ತಿ ಇಳೀತೀಯೇ….?” ಗಾಬರಿಯಲ್ಲಿ ಕೇಳಿದೆ, “ಮೂರ್ನಾಲ್ಕು ಅಂತಸ್ತಿಗೆಲ್ಲ ಲಿಫ್ಟ್ ಕೂಡ ಇರಲ್ವಂತೆ, ಇಲ್ಲೂ ಇಲ್ಲ….”
“ಓ ಅಮ್ಮಾ….. ಇದೇನೂ ಸಮಸ್ಯೆ ಅಲ್ಲ. ಒಳ್ಳೆ ಎಕ್ಸರ್ ಸೈಜ್ ಆಗುತ್ತೆ. ಡಾಕ್ಟರ್ ಕೂಡ ಇದನ್ನೇ ಎನ್ಕರೇಜ್ ಮಾಡ್ತಾರೆ,” ನಗುತ್ತಾ ಹೇಳಿದ ಮಗಳನ್ನೇ ನೋಡಿದೆ.
`ಇದೇನು ಅಜ್ಜಿಯೇ ಇವಳ ರೂಪದಲ್ಲಿ ಹುಟ್ಟಿದಳಾ….? ನಿಜ…. ನೇಹಾ ಅಜ್ಜಿಯಂತೆ ತುಂಬಾ ಚುರುಕಾಗಿದ್ದಾಳೆ. ಹೊಟ್ಟೆಯ ಭಾಗ ಬಿಟ್ಟರೆ ದೇಹ ದಪ್ಪವೇ ಇಲ್ಲ.’
`ಬಸಿರು ಕಾಯಿಲೆ ಅಲ್ಲ ಕಣೇ ರೆಸ್ಟ್ ತಗೊಳಕ್ಕೆ. ಕಡೇ ತನಕ ಚಟುವಟಿಕೆ ಇದ್ರೆ, ಸಲೀಸಾಗಿ ಹೆರ್ಗೆ ಆಗುತ್ತೆ…..’ ಹೀಗೆ ಹೇಳ್ತಾ ಇದ್ದ ಅಜ್ಜಿ ಮತ್ತೆ ನೆನಪಾದಳು.
ಜಗತ್ತಿನ ಮಹಾನಗರದ ಡಾಕ್ಟರ್ ಎಂಬಿಬಿಎಸ್, ಸ್ಪೆಷಲೈಸೇಷನ್ ಅಂತ ಅದೇನೋ ಡಿಗ್ರಿ ಮಾಡಿ ಈಗ ಹೇಳ್ತಿರೋ ಮಾತು. ಐವತ್ತು ವರ್ಷಗಳ ಹಿಂದೇ ಸ್ಕೂಲಿನ ಮೆಟ್ಟಿಲೂ ಹತ್ತದ ಮಲೆನಾಡ ಮೂಲೆಯ ನನ್ನಜ್ಜಿ ಹೇಳ್ತಿದ್ದು, ನನ್ನೂರಲ್ಲಿ ಅದೆಷ್ಟು ಹೆರಿಗೆಗಳನ್ನೂ ಮಾಡಿಸಿದ್ದಳು ಒಂದಾದರೂ ಫೇಲಾಗದಂತೆ. ಬಸುರಿಯರಿಗೆಲ್ಲ ಅವಳು ಹೇಳುತ್ತಿದ್ದುದು ಇದೇ ಮಾತು.
“ಇವೆಲ್ಲ ತಲೆತಲಾಂತರದಿಂದ ಹರಿದುಬಂದ ನಮ್ಮ ಜೀವನಾನುಭವ ಅಲ್ವಾ, ಅದಕ್ಕೆ ಯಾವ ಡಿಗ್ರಿ ಬೇಕಿತ್ತು…..?” ನಸುನಕ್ಕೆ.
ಬಂದಾಗ ಮನೆ ಮುಂದೆಯೇ ಕಂಡ ದೊಡ್ಡದಾದ ಅಂಗಳ, ಅಂಗಳದ ತುಂಬಾ ಮರಗಳು, ಮರಗಳಲ್ಲಿ `ಆಟಂ’ನ ಆಟಕ್ಕೆ ಹಳದಿ. ಕೆಂಪು ಬಣ್ಣ ಹೊತ್ತ ಎಲೆಗಳು ಹಾರ್ದಿಕ ಸ್ವಾಗತ ಕೋರಿದಂತೆ ಭಾಸವಾಗಿತ್ತು. ಇವು ಎಲೆಯೋ, ಹೂವೋ ಎಂದು ಅನುಮಾನ ಹುಟ್ಟಿಸುವಷ್ಟು ಅಂದವಿತ್ತು. ಇವು ಉದುರುವ ಹಣ್ಣೆಲೆಗಳಂತೆ, ನನ್ನಜ್ಜಿಯ ಕೊನೆ ದಿನಗಳಂತೆ….ಯಾಕೋ ಪುಟ್ಟಜ್ಜಿ ಇಲ್ಲಿ ಗಟ್ಟಿಯಾಗಿ ನನ್ನಲ್ಲಿ….? ಮೊಟ್ಟ ಮೊದಲಿಗೆ ಮರಗಳ ಇಂಥ ವರ್ಣಮಯ ದೃಶ್ಯ ನೋಡಿದ್ದ ಬೆನ್ನ ಹಿಂದೇ ಪ್ರೀತಿಯ ಅಜ್ಜಿಯ ನೆನಪೂ ಹಿಂಬಾಲಿಸಿದಾಗ ನನ್ನ ಮುಖ ಬೀಗಿದ್ದು ನನಗೇ ಅನುಭವಕ್ಕೆ ಬಂದಿತು.
ಮೆಟ್ಟಿಲು ಹತ್ತಿ ಸುತ್ತಲೂ ಕಣ್ಣಾಡಿಸಿದೆ. ಎಡಕ್ಕೊಂದು, ಬಲಕ್ಕೊಂದು, ಹಿಂದೆಯೂ ಎರಡು ಮನೆಗಳು ಕಂಡಿತು. ಎಡಬದಿಯ ಬಾಗಿಲನ್ನು ತೆರೆದ ಮಗಳು, ಅಳಿಯ “ಅಪ್ಪ ಅಮ್ಮ ವೆಲ್ ಕಂ,” ಎಂದರು.
ಮನೆ ಬಹಳ ಅಚ್ಚುಕಟ್ಟಾಗಿತ್ತು. ಜರ್ಮನ್ ಮಾದರಿಯ ಅಡುಗೆಮನೆ, ಬಾತ್ ರೂಂ, ಹಾಲ್, ಎಲ್ಲವೂ ಬಿಳಿಯ ಬಣ್ಣದಲ್ಲಿ ವುಡನ್ ಫ್ಲೋರಿಂಗ್, ಕೂತರೆ ಹತ್ತಿಯಷ್ಟು ಮೃದುವಾದ ಸೋಫಾಸೆಟ್. ಎಲ್ಲಿ ನೋಡಿದರೂ ಗೋಡೆಯುದ್ದಕ್ಕೂ ನಿಂತ ಫಳಗುಟ್ಟುವ ಕಿಟಕಿ, ಬಾಗಿಲು. ಎಲ್ಲವೂ ಗಾಜು….
“ಓಹ್…. ಗಾಜಿನಮನೆ ಅದ್ಭುತ ಕಣೆ,” ನನ್ನ ಮಾತಿಗೆ ಮಗಳು ಅಳಿಯ ನಕ್ಕರು.
ಹಾಲಿನಲ್ಲಿದ್ದ ಬಾಗಿಲು ಎನ್ನುವ ಕಿಟಕಿ ತೆರೆದೆ. ಎದುರಿಗೇ ನಾವು ಇದೀಗ ಬಂದ ನೀಟಾದ ರಸ್ತೆ, ಎದುರು ಸಾಲಿನಲ್ಲಿ ಇಳಿಜಾರಿನ ಹೆಂಚು ಹೊದೆಸಿದ ಜರ್ಮನ್ ಟಿಪಿಕಲ್ ಗಳು ಬಹಳ ಚಂದವಾಗಿ ಕಂಡಿತು. ಬಲಪಕ್ಕಕ್ಕೆ ಇಪ್ಪತ್ತು ಅಡಿ ದೂರದಲ್ಲಿ ಪಕ್ಕದ ಫ್ಲಾಟ್ ಬಾಲ್ಕನಿ. ಸುತ್ತಮುತ್ತ ಬೆರಗಿನಿಂದ ನೋಡುವಾಗಲೇ ಛಿಲ್ ಎನ್ನುವ ಕುಳಿರ್ಗಾಳಿ ಮತ್ತೆ ನನ್ನನ್ನು ನಡುಗಿಸಿತ್ತು. ತಕ್ಷಣ ಒಳಸರಿದು ಬಾಗಿಲು ಭದ್ರಪಡಿಸಿದೆ. ಬಾಗಿಲು ಭದ್ರಪಡಿಸಿದರೂ ಅಜ್ಜಿಯಂತೂ ನನ್ನೊಡನೆ ನೆನಪಾಗಿ ಮರಿಮಗಳ ಮನೆಯೊಳಗೆ ನುಗ್ಗಿಯಾಗಿತ್ತು.
`ಅದೆಂತ ಚಳಿ ಚಳಿ ಅಂತ ಅಡ್ರಿ ಕೂತ್ಕತೀರಿ. ಏಳು, ಎದ್ದು ಮುಂದ್ಗಡೆ ಅಂಗ್ಳ ಗುಡ್ಸಿ, ನೀರು, ರಂಗೋಲಿ ಹಾಕೇಳು…. ಹೆಣ್ಮಕ್ಳು ಇದಕ್ಕೆಲ್ಲ ಮುದುರ್ಕೊಂಡು ಕೂತ್ರೆ ನಡ್ಯುತ್ತಾ….? ಇಕಾ, ಈ ಕಾಪಿ ಕುಡ್ದು ಏಳು…’ ಅಂತ ಹತ್ತರ ವಯಸ್ಸಿನ ನನ್ನಕ್ಕ ಸರಸಿಯನ್ನು ಎಬ್ಬಿಸುವಾಗ ನಾನು ನಗ್ತಿದ್ದೆ.
“ಅಮ್ಮಾ ಕಾಫಿ ತಗೋ, ಪ್ರಯಾಣ ಮಾಡಿ ಸುಸ್ತಾಗಿದ್ದೀ. ಕುಡಿದ ಮೇಲೆ ಫ್ರೆಶ್ ಆಗಿ ಬರುವಂತೆ, ಸುತ್ತ ಎಲ್ಲ ತೋರಿಸ್ತೀನಿ….” ಎಂದು ಕೈಲಿ ಕಾಫಿ ಲೋಟ ಹಿಡಿದು ನಿಂತ ಮಗಳನ್ನೇ ನೋಡಿ ಬಾಲ್ಯಾವಸ್ತ ಎರಡನ್ನೂ ಸವಿದಂತೆ ಪ್ರೀತಿಯಿಂದ ನಕ್ಕೆ.
ನಿಜ ಸುಸ್ತಾಗಿತ್ತು. ಮ್ಯೂನಿಕ್ ಏರ್ ಪೋರ್ಟ್ ನಲ್ಲಿ ವಿಮಾನ ಇಳಿದಾಗ ಆಗಲೇ ಬೆಳಗಿನ ಏಳು ಗಂಟೆ. ನಾವು ಮನೆ ಬಿಟ್ಟು 24 ಗಂಟೆಗೂ ಹೆಚ್ಚಿನ ಸಮಯವಾಗಿತ್ತು. ವಿಮಾನ ಮತ್ತು ಏರ್ ಪೋರ್ಟ್ ನಲ್ಲಿ ಗಂಟೆಗಳ ಕಾಲ ಕುಳಿತು ಕಾಲಿನ ಗಂಟುಗಳು ಪದ ಹೇಳುತ್ತಿದ್ದವು.
“ಥೂ ಈ ಜರ್ನಿ ಸಾಕೋ ಸಾಕೆನಿಸುತ್ತೆ,” ಇವರ ಹತ್ತಿರ ಗೊಣಗಿದ್ದೆ.
“ಸಾಕು… ನಿನಗೇನಂತ ವಯಸ್ಸಾಗಿ ಹೋಯ್ತು….? 55ಕ್ಕೆ 60 ದಾಟಿದ ಹಾಗೆ ಮೊಣಕಾಲು ಗಂಟು ನೋಯ್ತಿದೆ ಅಂತಿಯಾ…..?”
“ಅರೇ…. ಯಾರು ಹೀಗೆ ತಿವಿತಿರೋದು….?”
ಕ್ಷಣ ಅಷ್ಟೇ. ವಿಶ್ವದ ತುಣುಕೇ ಕಣ್ಣೆದುರು ಕಂಡಂಥ ಮ್ಯೂನಿಕ್ ಏರ್ ಪೋರ್ಟ್ ಮನಸ್ಸನ್ನು ಸೆರೆಹಿಡಿದು ಒಳಗೆ ಹಣಕಿದ ಮಾತನ್ನು ಒಳಗೇ ತಳ್ಳಿಬಿಟ್ಟಿತು.
ಪ್ರಥಮ ವಿದೇಶ ಪ್ರವಾಸ, ಅದೂ ಮಗಳ ಬಾಣಂತನಕ್ಕಾಗಿ. ಎಲ್ಲ ಹೊಸತಾಗಿ ಹೊರಜಗತ್ತಿಗಿಂತ ವಿಭಿನ್ನವಾಗಿ ಕಾಣ್ತಿದೆ. ಇಲ್ಲಿ ಕಂಡುಬಂದದ್ದು ಹೆಚ್ಚಿನವರು ಜರ್ಮನ್ನರೇ. ಎಲ್ಲರ ಮುಖದಲ್ಲೂ ಅದೆಂಥ ಜೀವನೋತ್ಸಾಹ….! ಆ ಹೊಳೆಯುವ ಮುಖಗಳನ್ನು ನೋಡುವುದೇ ಒಂಥರಾ ಖುಷಿ ಕೊಟ್ಟಿತು. ಚಂದದ ಉಡುಗೆಗಳಾದ ಫ್ರಾಕ್, ಪ್ಯಾಂಟ್, ನವಿರಾದ ಟಾಪುಗಳು, ಉದ್ದನೆಯ ಕೋಟು, ಕುತ್ತಿಗೆಯಲ್ಲೊಂದು ಸ್ಟೋಲ್, ನೀಟಾದ ಸೆಲ್ ನಲ್ಲಿರೋ ಹೊಳೆಯುವ ಬ್ಲಾಂಡ್ ಹೇರ್. ಮುದ್ದಾದ ಕೆಂಪು ಮುಖಗಳು, ಉದ್ದನೆಯ ಮಾಟದ ಮೂಗು, ತೆಳು ತುಟಿಗಳು, ಚಿಕ್ಕ ಕಣ್ಣಾದರೂ ಜೀವಂತಿಕ ಚಿಮ್ಮಿಸುವ ಕಾಂತಿ. ನಿಜ ಎಷ್ಟೊಂದು ಲವಲವಿಕೆಯ ವೀನಸ್ ದೇವತೆಗಳಂತಿರುವ ಹೆಣ್ಣುಗಳು. ಅಷ್ಟೇ ಸುಂದರಕಾಯದ ಗಂಡುಗಳು ಇಡೀ ನಿಲ್ದಾಣವನ್ನು ಜೀವಂತಿಕೆಯನ್ನು ಫಳಗುಟ್ಟಿಸುತ್ತಿದ್ದರು.
ಉದ್ದುದ್ದದ ಎಸ್ಕಲೇಟರ್ ಗಳನ್ನು ಹತ್ತಿಳಿದು, ಕರೆದೊಯ್ಯಲು ಬಂದ ಅಳಿಯನನ್ನು ಹಿಂಬಾಲಿಸಿ ಮೆಟ್ರೋ ಸ್ಟೇಷನ್ನಿಗೆ ಬಂದಾಗ ಮತ್ತೆ ಅದೇ ನೋಟಗಳು. ಮ್ಯೂನಿಕ್ಕಿನ ದಶ ದಿಕ್ಕುಗಳಿಗೂ ಹೋಗುವ `ಯೂಬಾನ್’ನ ರೈಲುಗಳು ನಿಮಿಷಕ್ಕೆ ಒಂದರಂತೆ ಬರುತ್ತಲೇ ಇತ್ತು. ಹೊಸತೆಲ್ಲವನ್ನೂ ಶೇಖರ್ ಮತ್ತು ವಿನಯ್ ನನಗೆ ವಿವರಿಸುತ್ತಿದ್ದರೂ, ಮನಸ್ಸು ಮಾತ್ರ ಯಾವಾಗ ಮಗಳನ್ನು ನೋಡ್ತೀನೋ ಎಂದೇ ಹಪಹಪಿಸುತ್ತಿತ್ತು.
`ಈಗಾಗಲೇ ಒಂಬತ್ತು ತಿಂಗಳೇ ತುಂಬುತ್ತೇ ನೇಹಾಳಿಗೆ. ಒಬ್ಬಳೇ ಹೇಗೆ ಎಲ್ಲವನ್ನೂ ನಿಭಾಯಿಸುತ್ತಿರುವಳೋ…? ಬಯಕೆ ಇರುತ್ತೆ, ಯಾರಿದ್ದಾರೆ ಪೂರೈಸಲು, ಏನಾದರೂ ಅಗತ್ಯ ಬಿದ್ದರೆ ಆಫೀಸಿನಿಂದ ಅಳಿಯನೇ ಓಡಿಬರಬೇಕು….’ ಈ ಯೋಚನೆಗಳಲ್ಲಿ ಹೈರಾಣಾಗಿದ್ದೆ. `ಹೋಗಲಿ, ಮುಂಚಿತವಾಗಿ ಬರೋಣ ಎಂದರೆ, ಮೂರು ತಿಂಗಳಿಗಿಂತ ಹೆಚ್ಚು ಕಾಲ ವೀಸಾ ಕೊಡದೆ ಜರ್ಮನ್ ಎಂಬೆಸ್ಸಿಯ ಜಿಗುಟುತನ.`
ಮಗಳು ಗರ್ಭಿಣಿಯಾದರೆ ನೀವ್ಯಾಕೆ ಹೋಗ್ಬೇಕು….?’ ಅವರಿಗೆ ಅರ್ಥವಾಗದ ಭಾರತೀಯರ ಕಕ್ಕುಲಾತಿಗಳು.

`ಬಾಣಂತನ ಎಂದರೆ ಹೀಗೇ ಮಾಡ್ಬೇಕು…. ಮೊದಲ ಮೂರು ತಿಂಗಳು ಕಟ್ಟುನಿಟ್ಟಾಗಿ ಮಲಗಿದ್ರೆ, ಬೆನ್ನು ನೋವು ಜನ್ಮೇಪಿ ಬರಲ್ಲ. ಹೇಳಿದ ಪಥ್ಯ ಮಾಡಿ ಸಡ್ಲ (ಹೆಚ್ಚಿನ ದಪ್ಪ) ಆಗಿದ್ದ ಮೈಯನ್ನ ಸಮಾ ಮಾಡ್ಕೊಬೇಕು. ಮೆಣಸಿನ ಖಾರ ಬಿದ್ದು, ಸೇರಿದ್ದ ಬೊಜ್ಜೆಲ್ಲ ಒಣಗಿ, ಸಣ್ಣಪುಟ್ಟ ಶೀತ, ಕೆಮ್ಮು ಅಂಟ್ಕೊಳೋದು ತಪ್ಪಬೇಕು. ಸೊಂಟನೋವು ಬರದಿರೋ ತರಹ ಮನೆ ಮದ್ದು ಮಾಡ್ಬೇಕು. ಏನು ಬಾಣಂತನ ಅಂದ್ರೆ ಹುಡುಗಾಟನಾ….?’ ಅಜ್ಜಿ ಹೀಗೆ ಹೇಳ್ತಿದ್ಲು ಅಂತ ಅವರಿಗೆ ಹೇಳಕ್ಕಾಗುತ್ತಾ. ಹೇಳಿದ್ರೂ ನಂಬ್ತಾರಾ…? ಅವರಲ್ಲಿರೋರೆಲ್ಲ ಇದ್ಯಾವುದೂ ಇಲ್ಲದೇ ಚೆನ್ನಾಗೇ ಇರ್ತಾರೆ. ಹೇಗೆ ನಮ್ಮ ಪದ್ಧತಿ ಅರ್ಥವಾಗುತ್ತೆ…..?’
ಆದ್ರೂ ಸದ್ಯ, ಬಹಳ ಲೆಕ್ಕಾಚಾರದಲ್ಲಿ ತೀರಾ ಕೊನೆಯ ಸಮಯಕ್ಕೇ ಅವರು ಕೊಟ್ಟಿದ್ದ ಮೂರು ತಿಂಗಳ ವೀಸಾವನ್ನು ಜತನವಾಗಿಟ್ಟುಕೊಂಡು ಹೊರಟಿದ್ದಾಗಿತ್ತು.
`ಬಸಿರು ಬಾಣಂತನ….. ಲೇಹ್ಯದ ಪುಡಿ ಮಾಡ್ಬೇಕು. ಸಾಮಾನು ತಂದ್ಕೊಡೋ…. ರಕ್ತ ಮಂಜಿಷ್ಠ, ತಾಳೀಸ್ ಪತ್ರ, ಬಜೆ, ಒಣಶುಂಠಿ, ಉತ್ತತ್ತಿ, ಬಾದಾಮಿ, ದ್ರಾಕ್ಷಿ ಇಷ್ಟು ಸಾಕು ಉಳಿದ್ದೆಲ್ಲ ಮನೇಲಿದೆ…..’ ಎಷ್ಟು ಹೆರಿಗೆ ಮಾಡಿಸಿದ್ಲೋ ನನ್ನೂರಲ್ಲಿ. ಈಗ ನನ್ನ ಜೊತೆಯೇ ಬಂದಿದಾಳೆ ಮರಿಮಗಳ ಬಾಣಂತನಕ್ಕೂ, ಸೂಟ್ ಕೇಸಿನಲ್ಲಿ ಅಮ್ಮನ ಸಹಾಯದಿಂದ ಮಾಡಿತಂದಿದ್ದ ಲೇಹ್ಯ, ಪುಡಿಗಳಲ್ಲಿ ಅಂತರ್ಗತವಾಗಿ ಅಡಗಿ….!
ನನ್ನ ಹೊಟ್ಟೆಯಲ್ಲಿ ಮಗಳು ನೇಹಾ ಇದ್ದಾಗ, ಅಜ್ಜಿಗೆ ಎಂಬತ್ನಾಲ್ಕು ಇರಬಹುದು. ಓಡಾಡದೇ ಕೂತಲ್ಲೇ ಇದ್ದರೂ, ಉತ್ಸಾಹ ಮಾತ್ರ ನಲವತ್ತೆಂಟರದ್ದು. ದಿನಾ ನನಗೆ ಉಪದೇಶ. `ಕೆಲ್ಸ ಮಾಡು, ಆದ್ರೆ ದಬದಬಾ ಅಂತ ಓಡೋ ಹಂಗೆ ನಡೀಬ್ಯಾಡ್ವೇ…. ಇಕಾ, ಮದ್ಲನ್ನ ತುಸು ತುಪ್ಪದಲ್ಲಿ ತಿಂದು ಬಾಯಿರುಚಿಗೆ ಎಂತದಾರ ಉಣ್ಣು…. ನಿನ್ನ ಮಗ್ನೋ, ಮಗ್ಳೋ ಅದಕ್ಕೆ ಮದ್ಲೇ ಖಾರ ಬೀಳದು ಬ್ಯಾಡಾ……’ ಅಜ್ಜಿಯ ನೆನಪು ಕ್ಷಣ ನನ್ನನ್ನು ಮ್ಯೂನಿಕ್ ವೈಭವದಿಂದ ಮರೆ ಮಾಡಿತ್ತು.
ಪ್ಲಾಸ್ಟಿಂಗ್ ನಿಲ್ದಾಣದಲ್ಲಿ ರೈಲು ನಿಂತಿತು. ಪ್ಲಾರ್ಟ್ ಫಾರ್ಮ್ ಸಮಕ್ಕೇ ರೈಲು ನಿಲ್ಲುವ ಇಲ್ಲಿನ ವ್ಯವಸ್ಥೆ ಇಷ್ಟವಾಯಿತು. ಕಷ್ಟವೇ ಇಲ್ಲದೆ ಮೂವತ್ತು ಕಿಲೋ ತೂಕದ ಸೂಟ್ ಕೇಸ್ ನ್ನು, ಅದರೊಂದಿಗಿನ ಹಿಡಿಕೆಯಲ್ಲಿ ತೂರಿಸಿಟ್ಟ ಕ್ಯಾಬಿನ್ ಬ್ಯಾಗೊಂದನ್ನು ಹಾಗೇ ಜಾರಿಸಿ ಪ್ಲಾಟ್ ಫಾರ್ಮ್ ಗೆ ಇಳಿಸುವ ವ್ಯವಸ್ಥೆ ಕಂಡು ಮುದವಾಯಿತು. ಚಳಿ ಎಂದರೆ ಮುದುಡುವ ನಾನೂ ಇಲ್ಲಿ ಚೂರು ಚುರುಕಾಗಲೇಬೇಕಿತ್ತು. ಹೌದು, ಆಗಲೇ ಡಿಸೆಂಬರ್ ತಿಂಗಳ ಕೊನೆ, ಛಿಲ್ ಎನ್ನುವಂಥ ಗಾಲಿ ಮುದುರಿಕೊಳ್ಳುವಂಥಾ ಚಳಿಯೂ ಶುರುವಾಗಿತ್ತು. ಹಾದಿಯಲ್ಲಿ ಎಲ್ಲರ ಕೈಗಳೂ ಉದ್ದ ಕೋಟಿನ ಜೇಬೊಳಗೆ, ಲೆದರ್ ಜ್ಯಾಕೆಟ್ಟಿನ ಜೇಬೊಳಗೆ ತೂರಿಕೊಂಡಿದ್ದ. ನಾವು ಮಾತ್ರ ಹೊರಗಿನ ರಸ್ತೆಗೆ ಬರಬೇಕಿತ್ತು. ಹಾಗಾಗಿ ಕೈಗಳು ಹೊರಗಿನ ಚಳಿಗೆ ಚೂರು ಬಿಗಿದುಕೊಳ್ಳುತ್ತಿತ್ತು. ಒಂದಿಷ್ಟು ಕಸರತ್ತು ಮಾಡುತ್ತಲೇ, ಎಸ್ಕಲೇಟರ್ ನಲ್ಲಿ ಲಗೇಜ್ ಕೂರಿಸಿ ನಿಂತಾಗ ರಸ್ತೆಯ ಬದಿ ಕಂಡಿತ್ತು. ಅಲ್ಲಿ ಟ್ಯಾಕ್ಸಿಗಳೂ ಕಂಡಿತು. ನಿಟ್ಟುಸಿರು ಬಿಟ್ಟೆ.
“ಹಲೋ, ಗೂಟೆನ್ ಮಾರ್ಗೆನ್…..” ಜರ್ಮನ್ ಭಾಷೆಯಲ್ಲೇ ಆ ಟ್ಯಾಕ್ಸಿ ಡ್ರೈವರ್ ಗೆ ಗುಡ್ ಮಾರ್ನಿಂಗ್ ಹೇಳಿದ್ದ ಅಳಿಯ ವಿನಯ್. ನಮ್ಮೆಲ್ಲರ ಕಡೆ ತಿರುಗಿದ ಆ ಆರಡಿ ಎತ್ತರದ ಜರ್ಮನ್ ಮನುಷ್ಯ. ದೈತ್ಯ ದೇಹಿಯ ಮುಖದಲ್ಲಿ ದಪ್ಪ ಮೀಸೆ, ಚಿಕ್ಕ ಕಣ್ಣುಗಳು, ಕೆಂಪು ಮೂಗು, ಕೆಂಪು ಕಿವಿ, ಬಲಿಷ್ಠ ಕೆಂಪು ಕೈಗಳು…. ನಾನು ಆ ಆಜಾನುಬಾಹುವನ್ನು ಕಣ್ಣು ಪಿಳುಕಿಸದೆ ನೋಡಿದೆ. ಆತನೂ ಪ್ರತಿಯಾಗಿ ವಿಶ್ ಮಾಡಿ, ನನ್ನೆಡೆಗೂ ತಿರುಗಿ, “ಗೂಟೆನ್ ಮಾರ್ಗೆನ್,” ಎಂದ ನನಗೂ ಜರ್ಮನ್ ಭಾಷೆ ಬರುತ್ತದೆ ಎನ್ನುವ ಭಾವದಲ್ಲಿ ನಾನು, “ಹಲೋ…” ಎಂದು ಮುಗುಳ್ನಕ್ಕೆ.
“ಕ್ಯೊನಿಗ್ ಸ್ಟ್ರಾಸ್ಸೆ, ನಂ.32,” ಎಂದರು ವಿನಯ್.
“ಓ.ಕೆ….” ಎನ್ನುತ್ತಾ ಟ್ಯಾಕ್ಸಿ ಹೊರಟೇಬಿಟ್ಟಿತ್ತು.
“ರಸ್ತೆಯ ಹೆಸರು, ಮನೆ ನಂಬರ್ ಹೇಳಿದ್ರೆ ಸಾಕು. ಕಣ್ಣು ಮುಚ್ಚಿ ಕರ್ಕೊಂಡು ಹೋಗ್ತಾರೆ,” ಎಂದು ನನ್ನವರು ಹೇಳಿದರು.
ನಮ್ಮ ಬೆಂಗಳೂರಿನಲ್ಲಿ ಅಡ್ರೆಸ್ ಹುಡುಕುವ ಫಜೀತಿ, ಪ್ರಯಾಸ ಕಣ್ಣೆದುರು ಕಟ್ಟಿತು. ಮನೆ ನಿರಾಯಾಸವಾಗಿ ಸಿಕ್ಕಿತು. ಮಗಳು ಕಾಯುತ್ತಿದ್ದಳು. ಕಣ್ಣು ತುಂಬಿ ಬಂದಿತು. ಎರಡನೇ ಮಹಡಿಯ ಫ್ಲಾಟ್ ನಿಂದ ಇಳಿದು ಬಂದ ತುಂಬಿದ ಬಸುರಿಯನ್ನು ಕಾಣುತ್ತಲೇ ಹೋಗಿ ಅವಳನ್ನು ತಬ್ಬಿಕೊಂಡಿದ್ದೆ, “ಹುಷಾರಿದ್ದೀಯಾ ಕಂದ…..” ಎನ್ನುವಾಗ ಗಂಟಲು ಕಟ್ಟಿತ್ತು.
`ಛೇ…. ಚೊಚ್ಚಲ ಬಸುರಿಗೆ ಇಷ್ಟು ಕಾಲ ಏನೂ ಉಪಚಾರ ಮಾಡಕ್ಕಾಗಲಿಲ್ಲ,’ ಎನ್ನುವ ನೋವು ಆಗಾಗ ಕಾಡುತ್ತಲೇ ಇದ್ದದ್ದು ಈಗ ಕಣ್ಣೀರಾಗಿ ತುಳುಕಿತ್ತು. ನೇಹಾಗೆ ನನ್ನ ನೋವು ಅರ್ಥವಾಗಿತ್ತು. `ಹೇ…. ಕಮಾನ್ ಅಮ್ಮಾ…. ನಾನು ಆರಾಮಿದ್ದೀನಿ. ನೀನು ಈಗ ಹದಿನೈದು ದಿನದ ಹಿಂದೆ ಇವರ ಫ್ರೆಂಡ್ ಜೊತೆ ಕಳಿಸಿದ್ದ ಕೋಡುಬಳೆ, ಮೈಸೂರು ಪಾಕ್ ಸಖತ್ತಾಗಿತಮ್ಮಾ…. ನಾನೇ ಹೆಚ್ಚು ತಿಂದಿದ್ದು…..” ಮಾತು ಮರೆಸುತ್ತಾ ನನ್ನ ತಳಮಳವನ್ನು ತಿಳಿಯಾಗಿಸಲು ಪ್ರಯತ್ನಿಸಿದ ಮಗಳನ್ನು ಕಂಡು ಮನಸ್ಸು ಮತ್ತಷ್ಟು ತುಂಬಿ ಬಂದಿತು. `ಹೋಗಲಿ ಈಗಾದ್ರೂ ಜೊತೆ ಇರ್ತೀನಲ್ಲಾ…. ಮನಸ್ಸನ್ನು ಸಮಾಧಾನಿಸಿಕೊಳ್ಳುತ್ತಾ ಅವಳ ಹಿಂದೆ ತೆರೆದ ಗೇಟಿನಲ್ಲಿ ಒಳಬಂದೆ.
ಅಲ್ಲಿಂದ ಇಲ್ಲಿಗೆ ಬರುವರೆಗಿನ ಪ್ರಯಾಣ ನೆನೆಪಿಸಿಕೊಳ್ಳುತ್ತಾ ಮಗಳು ಕೊಟ್ಟ ಕಾಫಿ ಕುಡಿದಾಗ, ಚಳಿಗೆ ಹಿತವಾಗಿತ್ತು. ಸ್ನಾನ ಮುಗಿಸಿ ಬಂದು ತಿಂಡಿ ತಿಂದು, “ಅಮ್ಮಾ… ಬಾರಮ್ಮಾ…. ಈ ಮನೆ ಸುತ್ತಲಿನ ಗಾರ್ಡನ್ ತೋರಿಸ್ತೀನಿ…..” ಎಂದ ಮಗಳ ಮಾತಿಗೆ ಖುಷಿಯಾಗಿ ಅಂಗಳಕ್ಕಿಳಿದೆ. ಚಂದದ ಗಾರ್ಡನ್, ಹಿಂಭಾಗದಲ್ಲಿ ಎತ್ತರದ ಸಿಡಾರ್ ಮರಗಳು, ಪುಟ್ಟಪುಟ್ಟ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು ಹೇರಳವಾಗಿದ್ದವು.
ನನ್ನ ಬಾಲ್ಯದ ಮನೆಯಂಗಳದಲ್ಲೂ ಹೀಗೇ ಹಸಿರು. ಎಲ್ಲಿಯಾದರೂ ಹೊಸತೊಂದು ಹೂವಿನ ಗಿಡ ಅಜ್ಜಿಗೆ ಕಂಡರೂ ಅದರ ಗೆಲ್ಲೋ, ಸಸಿಯೋ ತಂದು ಹಿತ್ತಲಲ್ಲಿ ಊರಿದಳೆಂದೇ ಅರ್ಥ. ನನಗೂ ಹಸಿರಿನ ಹುಚ್ಚು ಹತ್ತಿದ್ದು ಅವಳಿಂದಲೇ….. ಅದ್ಯಾವುದೋ ಹೆಸರು ಗೊತ್ತಿಲ್ಲದ ನಿತ್ಯ ಹರಿದ್ವರ್ಣ ಮರಕ್ಕೆ ಸುಂದರವಾದ ಬಳ್ಳಿಯೊಂದು ಹಬ್ಬಿ ಮೇಲೆ ಗಾಳಿಗೆ ತಲೆದೂಗುತ್ತಿದ್ದದ್ದು ಕಂಡಾಗಲೇ, ಅಜ್ಜಿಯ ಕಂಚಿ ಮರ (ಹೇರಳೆಕಾಯಿ) ಅದಕ್ಕವಳು ಹಬ್ಬಿಸಿದ್ದ ವೀಳ್ಯದೆಲೆ ಬಳ್ಳಿ ನೆನಪಾಯಿತು.
ಅಜ್ಜಿ ಮಾತ್ರ ಅದನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. `ಮೈಲಿಗೇಲಿ ವೀಳ್ಯದೆಲೆ ಕಿತ್ತರೆ, ಬಳ್ಳಿ ಮತ್ತೆ ಕಂಡಿಮರ ಎರಡೂ ಸಾಯುತ್ತೆ,’ ಅಂತ ಅವಳ ತಟವಟ. ಅಣ್ಣ ತಮಾಷೆಗೆ ಅಜ್ಜಿಯನ್ನು, `ಸೀತೆ, ನಿನ್ ಜೀವ ಯಾವ್ ದೀ ಕಂಚಿಕಾಯಿಯಲ್ಲಿ ಇರಬೇಕು. ರಾಕ್ಷಸನ ಗುಹೆಯ ರಾಜಕುಮಾರಿ ಜೀವ ಗಿಳಿ ಕಣ್ಣಲ್ಲಿದ್ದ ಕಥೆ ಥರ….’ ಎಂದು ರೇಗಿಸುತ್ತಿದ್ದ. ಪಕ್ಕದ ಮನೆಯ ಕಿಟಕಿಯಲ್ಲಿ ಮುದ್ದಾದ ಬಿಳಿಯ ಬೆಕ್ಕೊಂದು `ಮ್ಯಾಂವ್’ ಎಂದು ನನ್ನ ಗಮನ ಸೆಳೆದಿತ್ತು. ಅದು ಧ್ಯಾನಸ್ಥನಾದಂತೆ ಕಣ್ಣು ಮುಚ್ಚಿ ಕುಳಿತಿತ್ತು. ಆ ಎಳೆ ಬಿಸಿಲಿಗೆ ಮನೆಯಲ್ಲಿದ್ದ ಇಬ್ಬರು ಹೆಂಗಸರು ಅಂಗಳದ ಬೆಂಚಿನಲ್ಲಿ ಯಾವ ಮುಜುಗರ ಇಲ್ಲದೆ ಬಿಸಿಲ ಸ್ನಾನದ ಸವಿ ಅನುಭವಿಸುತ್ತಿದ್ದರು. ನಾನೂ ಅಲ್ಲಿದ್ದ ಮರದ ಬೆಂಚಿನಲ್ಲಿ ಕೂತು ಅಲ್ಲಿಯ ಸ್ವಚ್ಛ ಹವೆಯನ್ನು ಆಘ್ರಾಣಿಸುತ್ತಾ, ಅಲ್ಲಿ ಹಾರಾಡುವ ಪುಟ್ಟ ಪುಟ್ಟ ಹಕ್ಕಿಗಳನ್ನು ನೋಡುತ್ತಿದ್ದಾಗ, “ಹಲೋ…. ಗೂಟೆನ್ ಮಾರ್ಗೆನ್…..” ಎನ್ನುವ ದನಿ ಕೇಳಿಸಿ ತಲೆಯೆತ್ತಿದೆ.
ಎರಡನೇ ಫ್ಲಾಟಿನ ಆ ಗಂಡಸಿಗೆ , `ಗುಡ್ ಮಾರ್ನಿಂಗ್,” ಎಂದು ಪ್ರತಿ ವಿಶ್ ಮಾಡಿದ ಮಗಳು, “ದಿಸ್ ಈಸ್ ಮೈ ಮಾಮ್… ಇಂಡಿಯಾದಿಂದ ಬಂದಿದ್ದಾರೆ,” ಎಂದು ಪರಿಚಯಿಸಿದಳು.
ಆತ ಹಾರ್ದಿಕವಾದ ಸ್ಮೈಲ್ ಕೊಟ್ಟ. ನಾನು ನಕ್ಕು, “ಹಲೋ…” ಎಂದೆ. ಆತ ನಾವು ಮನೆಗೆ ಹೋಗುವುದನ್ನೇ ಕಾಯುತ್ತಿದ್ದರೇನೋ, ಹಿಂದೆಯೇ ಬಾಗಿಲ ಗಂಟೆ ಸದ್ದು ಮಾಡಿತು. ತೆರೆದ ಬಾಗಿಲ ಬಳಿ ಅದೇ ಮನುಷ್ಯ. “ಪ್ಲೀಸ್ ಕಮ್…..” ಎಂದಳು ನೇಹಾ. ಒಳ ಬಂದ ಆತ. ನನ್ನ ಕೈಗೆ ಪ್ಲೇಟೊಂದನ್ನು ನೀಡುತ್ತಾ, “ಐ ಆ್ಯಮ್ ಸೆಲ್ ಟ್ರೕಂಗ್ಲರ್. ವೆಲ್ ಕಮ್ ಟು ಬಾಯರ್ನ್ ಲ್ಯಾಂಡ್,” ಎಂದಾಗ ಏನೂ ತೋಚದೆ, ಕೈಯಲ್ಲಿದ್ದ ಪ್ಲೇಟ್ ನೋಡಿದೆ, ಅದರಲ್ಲಿ ಎರಡು ಬ್ರೆಡ್ ಮತ್ತು ಅದರ ಮೇಲೆ ಉಪ್ಪು. ಅದೇನೆಂದು ಅರ್ಥವಾಗಲಿಲ್ಲ. ಆದರೂ “ಥ್ಯಾಂಕ್ ಯೂ….” ಎಂದೆ.
“ಶೆಕಾರ್, ಮಿಸ್ಸೆಸ್ ಶೆಕಾರ್ ಟುಮಾರೋ ಪ್ಲೀಸ್ ಕಮ್ ಫಾರ್ ಟೀ…..” ಎಂದು ಆಹ್ವಾನವಿತ್ತ.
ಶೇಖರ್ ಹಾರ್ದಿಕವಾಗಿ ನಕ್ಕು ಆಗಲಿ ಎಂದರು. ಜರ್ಮನ್ನರು ಬಿಗುವಂತೆ, ಯಾರನ್ನೂ ಮಾತಾನಾಡಿಸುವುದಿಲ್ಲವಂತೆ. ಆದರೆ ಇವರೆಷ್ಟು ಸಿಂಪಲ್, ಸಹೃದಯರು, ಎಷ್ಟು ಫ್ರೆಂಡ್ಲಿ ಅನಿಸಿತು.
“ಹೊಸಬರಿಗೆ ಈ ಬ್ರೆಡ್ ಮತ್ತು ಉಪ್ಪು ಕೊಟ್ಟು, ಬಾಯರ್ನ್ (ಜರ್ಮನಿಯ ರಾಜ್ಯ) ವೆಲ್ ಕಮ್ ಅನ್ನೋದು ಇಲ್ಲಿನ ಸಿಸ್ಟಂ ಅಪ್ಪಾ….,” ಎಂದ ಮಗಳನ್ನು ನೋಡುತ್ತಾ ಅಜ್ಜಿ ನೆನಪಾದಳು.
`ಅಯ್ಯೋ ಮಗೂ, ಹಬ್ಬದ ದಿನ ಯಾರಾದ್ರೂ ಎಲೆಗೆ ಮೊದ್ಲು ಉಪ್ ಬಡಿಸ್ತಾರೇನೇ….? ಅದು ಅಶುಭ. ತೆಗಿ ತೆಗಿ… ಅಭಿಗಾರ ಮಾಡು. ಪಾಯಸದ ತೊಟ್ಟು ಜೋರ್ಸು. ಆಮೇಲೆ ಪಲ್ಯ, ಕೋಸಂಬರಿ, ಮಜ್ಜಿಗೆ ಹುಳಿ, ಚಿತ್ರಾನ್ನ, ಅನ್ನ, ತೊವ್ವೆ, ತುಪ್ಪ…. ಆಮೇಲೆ ಉಪ್ಪು ತಿಳೀತಾ….’ ಜಾರುತ್ತಿದ್ದ ತಲೆ ಮೇಲಿನ ಕೆಂಪು ಮಜಡಿ ಸೀರೆ ಸರಿಯಾಗಿ ಹೊದ್ಧುಕೊಳ್ಳುತ್ತಾ, `ಬಾ ಈ ಕಡೆ ತೋರಿಸ್ತೀನಿ….’ ಎಂದು ಹನ್ನೆರಡು ವಯಸ್ಸಿನ ನನಗೆ ಅಂದು ಮಡಿ ಸೀರೆ ಉಡಿಸಿ, ಊಟ ಬಡಿಸುವ ಹದ ಹೇಳಿಕೊಟ್ಟು, ಉಪ್ಪಿನ ಶುಭಾಶುಭಗಳನ್ನು ಹೇಳುತ್ತಾ ಹೋದ ಅಜ್ಜಿ ಈ ತಟ್ಟೆಯ ಉಪ್ಪಿನಲ್ಲಿ ಕಂಡಳು. `ನೋಡೇ, ಇಲ್ಲಿ ಇದು ಶುಭ ಅಂತೆ,’ ಮನದಲ್ಲೇ ಅಜ್ಜನೊಡನೆ ಸ್ವಗತಿಸಿಕೊಂಡು ನಕ್ಕೆ.
ಎರಡು ದಿನಗಳು ಕಳೆದವು. ಈಗ ಸೆಲ್ಲರ್ ನಲ್ಲಿ ವಾಷಿಂಗ್ ಮೆಷಿನ್ ಗೆ ಬಟ್ಟೆ ಹಾಕುವುದನ್ನು ಕಲಿತು, ಮಗಳಿಗೆ ಅಷ್ಟು ಕೆಲಸ ಕಮ್ಮಿ ಮಾಡಿಸಿದೆ.
“ನೇಹಾ, ಈ ಬೆಳಗ್ಗೆ ಸೆಲ್ಲರ್ ನಲ್ಲಿ ಮೆಷಿನ್ ಗೆ ಬಟ್ಟೆ ಹಾಕುವಾಗ ಒಬ್ಬ ಹೆಂಗಸು ಸಿಕ್ಕಿದ್ದರು. ಅದು ಏಕೋ ಏನೋ ಮಾತಾಡ್ಲಿಲ್ಲ. ಸ್ವಲ್ಪ ಎತ್ತರ, ದಪ್ಪ ಇದ್ದರು. ವಯಸ್ಸಾಗಿ ಮುಖ ನಿರಿಗೆಗಟ್ಟಿತ್ತು. ಹಾಗೆ ಸೋತಂತಿದ್ದರೂ ನೀಟಾಗಿ ಡ್ರೆಸ್ ಮಾಡಿಕೊಂಡೇ ಬಟ್ಟೆ ತೆಗೆಯೋಕೆ ಬಂದಿದ್ದರು. ತಲೆ ತುಂಬ ಇದ್ದ ಕೆಂಚು ಕೂದಲು ಯಾಕೋ ಸಹಜವಾದದ್ದು ಎನಿಸಲಿಲ್ಲ…. ಬರೀ `ಹಲೋ,’ ಎಂದಷ್ಟೇ ಹೇಳಿ ದುಡುದುಡು ಹೊರಟು ಹೋದರು.
ಬೆಳಗ್ಗೆಯಿಂದಲೇ ಆ ಹೆಂಗಸು ಏಕೋ ಏನೋ ನನ್ನನ್ನು ಕಾಡುತ್ತಲೇ ಇದ್ದರು. ಮಗಳ ಬಳಿ, “ಯಾಕೋ ತುಂಬ ಹೈಫೈ ಇರಬೇಕು. ನಾವೇ ಶ್ರೇಷ್ಠ ಅನ್ನೋ ಗರ್ವ ಅಂತ ಕಾಣಿಸುತ್ತೆ, ನಾವೆಲ್ಲ ಇಲ್ಲಿ ಸೆಕೆಂಡ್ ಕ್ಲಾಸ್ ಸಿಟಿಝನ್ಸ್ ಅದಕ್ಕೇ ತಾತ್ಸಾರ ಅನ್ಸುತ್ತೆ,” ಎಂದು ಯೋಚಿಸುತ್ತಾ ಹೇಳಿದೆ.
“ಅಮ್ಮಾ….. ಅವರು ಮಿಸ್ ಎಮಿಲಿ ಅಂತ. ಬಹಳ ಒಳ್ಳೆಯವರು. ಅವರಿಗೆ ಸ್ಟಮಕ್ ಕ್ಯಾನ್ಸರ್. ಯಾರೂ ಇಲ್ಲದೆ ಒಬ್ಬರೇ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಧೈರ್ಯವಾಗಿದ್ದಾರೆ. ನಮ್ಮ ಫ್ಲೋರಿನ ಹಿಂದುಗಡೆಯೇ ಅವರ ಫ್ಲಾಟ್. ಏನೇ ತೊಂದರೆ ಆದರೂ ಆ್ಯಂಬುಲೆನ್ಸ್ಗೆ ಫೋನ್ ಮಾಡ್ತಾರೆ. ಇನ್ಶೂರೆನ್ಸ್ ಇರುವುದರಿಂದ ಯೋಚನೆ ಇಲ್ಲ. ಇಲ್ಲಿ ಇಂಥವರಿಗೆ ಬಹಳ ಅನುಕೂಲ ಇದೆ. ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೋಗುತ್ತಾರೆ, ಸ್ವಲ್ಪ ಹುಷಾರಾದರೆ ಮನೆಗೆ ವಾಪಸ್ ಬರುತ್ತಾರೆ. ಕೀಮೋಥೆರಪಿ ನಡೀತಾನೇ ಇದೆ…..” ಎಂದಳು.
ಇದನ್ನು ಕೇಳಿ ಮನಸ್ಸು ನೊಂದಿತು, ಆಕೆಯ ಧೈರ್ಯದ ಬಗ್ಗೆ ಅಚ್ಚರಿಯೂ ಆಯಿತು.
ಮರು ಬೆಳಗ್ಗೆಯೇ ಎಮಿಲಿ ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡು, ನನಗೆ ಮತ್ತೆ ಎದುರಾಗಿದ್ದರು. ನಾನು ಕಸ ಎಸೆಯಲು ಕೆಳಗೆ ಅಂಗಳಕ್ಕೆ ಬಂದಿದ್ದೆ. ಡಿಸೆಂಬರ್ ನ ಬೆಳಗಿನ ಚಳಿ ಹೆಚ್ಚಿತ್ತು. ಇಲ್ಲಿನವರೋ ಶಿಸ್ತಾಗಿ ಬಟ್ಟೆ ಧರಿಸುವುದನ್ನು ಕಂಡಿದ್ದೆ. ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ. ಜೀವನಪ್ರೀತಿಗಲ್ಲ ಅಂತಾರೆ….! ಹಾಗೆಯೇ ಮಿಸ್ ಎಮಿಲಿ ಕೂಡ ನೇರಳೆ ಬಣ್ಣದ ಪ್ಯಾಂಟ್, ಕೆಂಪು ಬಣ್ಣದ ಶರ್ಟ್, ನೇರಳೆ ಬಣ್ಣದ ಉದ್ದನೆಯ ವೆಲ್ವೆಟ್ ಕೋಟು, ತಲೆಗೆ ಚಂದದ ನೇರಳೆ ಬಣ್ಣದ ಟೋಪಿ, ಕುತ್ತಿಗೆಗೆ ಕೆಂಪು ಉಲ್ಲನ್ನಿನ ನೆಕ್ ವಾರ್ಮರ್, ಕೆಂಪು ಬಣ್ಣದ ಲೆದರ್ ಶೂ, ತುಟಿಗೆ ಗಾಢ ಕೆಂಪು ಲಿಪ್ ಸ್ಟಿಕ್, ಕೈಯಲ್ಲಿ ಒಂದಿಷ್ಟು ದೊಡ್ಡದೇ ಎನ್ನಬಹುದಾದ ಬ್ಯಾಗ್, ಜೊತೆಯಲ್ಲಿ ಹೊಸಬನೊಬ್ಬ…..ನನ್ನಜ್ಜಿಯ ಜೀವನ ಪ್ರೀತಿಗೂ ಕಡಿಮೆ ಏನಿರಲಿಲ್ಲ. ಆದರೆ ಎಮಿಲಿ ಥರ ಟಿಪ್ ಟಾಪ್ ಎಲ್ಲಿ…..? ಪಾಪ, ಮೂವತ್ತೈದಕ್ಕೇ ವಿಧವೆ. ತಲೆಗೂದಲಿಗೆ ವಿದಾಯ. ಪ್ರತಿ ತಿಂಗಳೂ ಕ್ಷೌರಿಕನಿಗೆ ತಲೆ ಕೊಡಬೇಕು, ರವಿಕೆ ಹಾಕುವಂತಿಲ್ಲ. ದೇಹಕ್ಕೆ ಸುತ್ತಿಕೊಳ್ಳಲು ಕೇವಲ ಕೆಂಪು ಸೀರೆ ಮಾತ್ರ. ಮೂರು ಹೊತ್ತೂ ಆ ಕೆಂಪು ಸೀರೆಯನ್ನು ಬೋಳಾದ ತಲೆ ಮೇಲಿಂದ ಹೊದ್ದು, ರವಿಕೆಯಿಲ್ಲದ ಎದೆ ಬಳಸಿ ಸೊಂಟಕ್ಕೆ ಸಿಗಿಸಿಯೇ ಕೆಲಸ. ಹರೆಯದಲ್ಲಿ ಹೇಗಿದ್ದರೋ, ನನಗೆ ಬುದ್ಧಿ ತಿಳಿದು ನೋಡಿದ್ದು, ಆಕೆಯ ದೇಹದ ಅವಯವಗಳೆಲ್ಲ ಬತ್ತಿ ಕಡ್ಡಿಯಂತಾದ ಕೋಲು ಶರೀರದಲ್ಲೇ. ಅವಳು ನೊಂದುಕೊಂಡಿದ್ದೆಲ್ಲ ಚರಿತ್ರೆಯಾಗಿ, ವಾಸ್ತವವನ್ನು ತಿಳಿಯಾಗಿಸಿಕೊಂಡ ಮೇಲೇ ಪೂರ್ತಿ ಅಜ್ಜಿಯ ಪಾತ್ರದಲ್ಲೇ…. ಆ ಮಟ್ಟಿನ ಮೃದು ಭಾಗಗಳಿಲ್ಲದೆ ಶುಷ್ಕವಾದ ಮೇಲೇ….!
ಆದರೆ ಜೀವನ ಪ್ರೀತಿಯಂತೂ ಈ ಎಮಿಲಿ ಥರಾನೇ! ಬೇರೆ ವಿಚಾರಗಳಲ್ಲಿ….! ನೆಲ್ಲಿಕಾಯಿ ಹಿಂಡಿ, ಮಾವು, ಹುಣಿಸೆಕಾಯಿ ತೊಕ್ಕು, ತರಹೇವಾರಿ ಉಪ್ಪಿನಕಾಯಿ, ಸಂಡಿಗೆ, ಹಪ್ಪಳ, ಅವಲಕ್ಕಿ, ಅರಳು ಡಬ್ಬ. ಗೋಕುಲಾಷ್ಟಮಿ, ಗಣೇಶ ಹಬ್ಬದ ಮನಾರದುಂಡೆ, ಚಕ್ಕುಲಿ, ತೇಂಗೊಳಲು, ಉಂಡಲಿಗೆ, ಕರಿಗಡುಬು, ಕಡ್ಲೇ ಉಂಡೆ ಅಬ್ಬಬ್ಬ…. ಅದೆಂಥಾ ಉತ್ಸಾಹ… ಆಕೆ ಕ್ಷಣ ಕೂತಿದ್ದುಂಟಾ….? ಮತ್ತೆ ದೇವಸ್ಥಾನದಲ್ಲಿ ಹರಿಕಥೆಗೂ ಸೈ, ಹದಿನೈದು ದಿನಕ್ಕೊಂದು ಸಲ ಟೆಂಟ್ ನಲ್ಲಿ ಸಾಮಾಜಿಕ ಸಿನಿಮಾನೂ ಸೈ, ಜೀವನಪ್ರೀತಿ ಇಲ್ಲದಿದ್ದರೆ ಹೀಗೆಲ್ಲ ಮಾಡಕ್ಕೆ ಆಗುತ್ತಿತ್ತಾ…..?
ಇಷ್ಟು ಶಿಸ್ತಿನ ಅಲಂಕಾರದಲ್ಲೂ ಮಿಸ್ ಎಮಿಲಿಯ ಮುಖ ಬಾಡಿತ್ತು. ಎಂದಿನ ಕಳೆ ಕಾಣಲಿಲ್ಲ., “ಹಲೋ….” ಎಂದರು. ಪ್ರತಿಯಾಗಿ ನಾನೂ ಹೇಳಿದೆ. ಎಲ್ಲೋ ಹೊರಟವರನ್ನು ಎಲ್ಲಿಗೆಂದು ಕೇಳಬಾರದೆಂದು, ಜೊತೆಗೆ ಕೇಳಲು ಜರ್ಮನ್ ಭಾಷೆ ಕೂಡ ಬಾರದೆ ಸುಮ್ಮನಿದ್ದೆ. ಟಿಪ್ ಟಾಪ್ ಎಮಿಲಿ, ಆತನ ಸಹಾಯದೊಂದಿಗೆ ಸಿಟಿ ಕಾರ್ಪೋರೇಶನ್ ಆಸ್ಪತ್ರೆಯ ವ್ಯಾನಿನಲ್ಲಿ ಕುಳಿತಿದ್ದು ಕಂಡಿತು,`ಇಷ್ಟು ಟಿಪ್ ಟಾಪಾಗಿ ಮತ್ತೆ ಕೀಮೋಥೆರಪಿಗೆ….!’ ಅಚ್ಚರಿಯಲ್ಲೂ ಮನಸ್ಸು ಮರುಗಿ ತೀರಾ ಭಾರವಾಯ್ತು. ಇದೆಂಥ ಒಂಟಿತನದ ಬದುಕು ಇವರದ್ದು……!
ಒಳಗೆ ಬಂದು ನೇಹಾಗೆ ಹೇಳಿದಾಗ ಅವಳಿಗೂ ಬೇಸರವಾಯಿತು. “ಇಲ್ಲಿ ಬಹಳಷ್ಟು ಮನೆಗಳಿದ್ದು ಕೆಲವರು ಹೊರಗೆ ಹಲೋ ಹೇಳುವಷ್ಟು ಮಾತ್ರ ಪರಿಚಿತರಾದರೂ, ಅಮ್ಮಾ… ನಾನು ಗರ್ಭಿಣಿ ಎಂದು ತಿಳಿದ ಮೇಲೆ ಎಲ್ಲರೂ ನನ್ನನ್ನು ವಿಶೇಷವಾಗಿ ಮಾತಾಡಿಸ್ತಾರೆ. ಮಿಸ್ ಎಮಿಲಿ ಕೂಡ. ಕೆಳಗಿನ ಮನೆ ಸ್ಟ್ರೀಸಾ ಮತ್ತು ಅವಳ ಗಂಡ, ನಿನಗೆ ಏನಾದ್ರೂ ಹೆಲ್ಪ್ ಬೇಕಾದರೆ ಕೇಳು ಅಂದಿದ್ದಾರಮ್ಮಾ… ನನಗೂ ಆಶ್ಚರ್ಯ…..” ಮಗಳ ಮಾತು ಕೇಳುತ್ತಾ ನನಗೂ ಅಚ್ಚರಿಯಾಯಿತು.
ಈ ಬಸಿರು, ಬಾಣಂತನ ಸೃಷ್ಟಿ ಕ್ರಿಯೆಯ ವಿಸ್ಮಯ, ನಿಗೂಢತೆಯೇ ಹಾಗೆ. ಒಂದು ಹೆಣ್ಣು ಸೃಷ್ಟಿ ಕ್ರಿಯೆಯ ಅಂಗವಾಗಿ ನಿಂತಾಗ ಇಡೀ ಸುತ್ತಮುತ್ತಲು ಅವಳೆಡೆಗೆ ಪ್ರೀತಿಯ ಮೃದುಭಾವ ಹೊಂದಿಬಿಡುತ್ತದೆ.
ಬಯಕೆಯೆಂದು ತಮಗೆ ತೋಚಿದ್ದನ್ನು ತಂದುಕೊಡು, ಬಾಣಂತಿಯನ್ನು ಬರಿಗೈಲಿ ನೋಡಬಾರದೆಂದು ಹಾಲು, ಕಾಫಿಯ ಲೋಟ ಹಿಡಿದು ಬಂದು, `ಇಕಾ ಬಿಸಿ ಇದೆ ಕುಡಿ….’ ಎಂದು ಕಕ್ಕುಲಾತಿ ತೋರುತ್ತಿದ್ದ ನನ್ನೂರಿನವರು ನೆನಪಾದರು. ಅಂತೂ ಲೋಕದ ಪರಿಧಿಯಲ್ಲಿ ಈ ಕ್ರಿಯೆಗೆ ಯಾವಾಗಲೂ ಸಹಾಯ ಹಸ್ತ, ಪ್ರೀತಿ ಜೊತೆ ಸಿಗುವುದು ಮುಂದೆ ಬರಲಿರುವ ಆ ನಿಷ್ಕಪಟ, ಭಗದ್ರೂಪಿ ಕಂದನಿಂದಲೇ ಅನ್ನೋದಂತು ಸತ್ಯ.
ಮಗಳ ಹೊಳೆಯುವ ಮುಖವನ್ನೇ ನೋಡಿದೆ. ಹೊಳೆದರೂ ಭಾರ ಬಿಂಬಿಸುತ್ತಿದ್ದ ಮುಖ, ಹೊಟ್ಟೆ. ಇನ್ನು ಹೆರಿಗೆಗೆ ಹೆಚ್ಚು ದಿನಗಳಿಲ್ಲ ಎನಿಸಿತು. ನನ್ನೆದೆಯ ತಾಯ್ತನ ಪೂರ್ತಿ ಬಸಿದಂತೆ ಅವಳ ಹೊರೆಗೂದಲ ಮೇಲೆ ಕೈಯ್ಯಾಡಿಸುತ್ತಾ, `ದೇವರೇ, ಇವಳಿಗೆ ಸುಸೂತ್ರ ಹೆರಿಗೆಯಾಗಲಿ…..’ ಎಂದು ಪ್ರಾರ್ಥಿಸಿದೆ.
ಇವಳು ಹುಟ್ಟುವಾಗ ನಾನಂತೂ ಎರಡು ದಿನ ಒದ್ದಾಡಿದ್ದೆ. ಏಕೆ ಬಸಿರಾದೆನೋ ಎಂದು ಹಲುಬಿದ್ದೆ. ನನ್ನೂರಿನ ಸರ್ಕಾರವೇ ಆಸ್ಪತ್ರೆಯಲ್ಲೇ ಹೆರಿಗೆ. ಅಜ್ಜಿಗೆ ಆಗಂತೂ ಹೆರಿಗೆ ಮಾಡಿಸುವ ಮನಸ್ಸಿರಲಿಲ್ಲ. ಯಾರೂ ಒಪ್ಪುತ್ತಲೂ ಇರಲಿಲ್ಲ. ಅವಳಿಗೂ ಅದು ತನ್ನ ಕಾಲವಲ್ಲ ಎಂದು ಅರಿವಾಗಿತ್ತು. ಒಂದಿಷ್ಟು ಕೂತಲ್ಲೇ ಕೂತು ಹೀಗೀಗೆ ಇವರು ಅಂತ ಹೇಳ್ತಿದ್ದಿದ್ದಷ್ಟೆ.
ಎರಡು ದಿನ ಕಳೆದಿತ್ತು. ಬೆಳಗ್ಗೆ ಎದ್ದಾಗ ಯಾಕೋ ಚಳಿ ಎನಿಸಿತ್ತು. ಎಂದಿನಂತೆ ಅಡುಗೆಮನೆಯ ಶಟರ್ಸ್ ಮೇಲೆತ್ತಿದೆ, `ಓ…’ ಹೆಚ್ಚುಕಮ್ಮಿ ಕಿರುಚಿದ್ದೆ. ಹೊರಗೆ ದಿನನಿತ್ಯದ ಕತ್ತವಳ ಅಳುಮೋರೆಯ ಮ್ಯೂನಿಕ್ ಇರಲಿಲ್ಲ. ಈ ನಾಲ್ಕು ದಿನಗಳಲ್ಲಿ ಕಾಣದ ಬೆಳಕು ಹೊರಗೆ…. ಬೆಳಗು ಮೂಡಿರದಿದ್ದರೂ ತೆಳುವಾದ ಧವಳತೆ…. ಕತ್ತಲಲ್ಲಿ ಕರಗಿರುತ್ತಿದ್ದ ಗಿಡಮರ, ನೆಲವೆಲ್ಲಾ ಮಾಯಾಲೋಕದ ತೆಳು ಬಿಳುಪು ಹೊದ್ದಂತೆ ಆ ಕತ್ತಲ ಕಡುಕಪ್ಪು ಮಾಯವಾಗಿತ್ತು, ದಂಗಾದೆ. ನಾನು ಬರುವ ಹಿಂದೆ ಸ್ವಲ್ಪವೇ ಹಿಮ ಬಿದ್ದಿತ್ತಂತೆ. ಅಲ್ಲಲ್ಲಿ ನೆಲದಲ್ಲಿ ಮಂಜುಗಡ್ಡೆಯ ಭಾಗ ಕಂಡಿದ್ದೆ. ಆದರೆ, ಮೊದಲ ಬಾರಿಗೆ ಇಂಥ ಚಿತ್ರಣ ಕಂಡಿದ್ದು……ಗಡಬಡಾಯಿಸಿ ಹಾಲಿನ ಶಟರ್ಸ್ ತೆಗೆದೆ. ಇಡೀ ಮ್ಯೂನಿಕ್ ಧವಳ ಸುಂದರಿಯಾಗಿದ್ದಳು. ಆದಾವ ಮಾಯದಲ್ಲಿ, ಎಲ್ಲರೂ ನಿದ್ರಾವಸ್ಥೆಯಲ್ಲಿ ಇರುವಾಗ, `ಲೈಟ್ ಕ್ರಿಸ್ಮಸ್’ಗಾಗಿ ಎದುರು ನೋಡುತ್ತಿದ್ದ ಜರ್ಮನ್ನರ ನೆಲದಲ್ಲಿ ಅವರ ಯೇಸು ತನ್ನ ಕರುಣೆಯನ್ನು ಶುಭ್ರ ಶ್ವೇತ ಹಿಮರೂಪದಲ್ಲಿ ಸುರಿಸಿ ಹೋಗಿದ್ದರೋ, ಇಷ್ಟು ಅಗಾಧವಾಗಿ…..!
ಎದುರಿನ ಎತ್ತರದ ವೀಪಿಂಗ್ ವಿಲ್ಲೋ ಮರದ ಕಡ್ಡಿಕಡ್ಡಿಗಳೆಲ್ಲಾ ಬೆಳ್ಳನೆಯ ಆರ್ಕಿಡ್ ಹೂಗಳನ್ನು ಪೋಣಿಸಿಟ್ಟುಕೊಂಡಂತೆ, ಸೋನಿಫೆರಸ್ ನ ಹಸಿರ ತುಂಬಾ ಮಲ್ಲಿಗಿ ಅರಳಿದಂತೆ, ಪಕ್ಕದ ಬಲ್ಬಿನ ಆಕಾರದ ಗಿಡ ದೊಡ್ಡದಾದ ಹ್ಯೋಾಜೆನ್‌ಬಲ್ಬಿನಂತೆ, ನೆಲ ಬಿಳುಪಿನ ಚಾದರ ಹೊದ್ದಂತೆ, ರಸ್ತೆಗೂ ಫುಟ್ ಪಾತಿಗೂ ವ್ಯತ್ಯಾಸವೇ ತಿಳಿಯದಂತೆ, ಎಲ್ಲೆಲ್ಲೂ ಬೆಳಕಿನ ಉಜ್ವಲಲೋಕ, ಎಲ್ಲೆಡೆಯಲ್ಲೂ ಅರಳಿದ ಅರಳೆ ಅರಳರಳಿ ನಗುತ್ತಿತ್ತು….`ಓ… ನಾಳೆಯೇ ಕ್ರಿಸ್ಮಸ್. ಈಗ ಜರ್ಮನ್ನರು ಅದೆಷ್ಟು ಸಂಭ್ರಮಿಸಿ ಕ್ರಿಸ್ಮಸ್ ಆಚರಿಸುತ್ತಾರೆ…..” ನೆನೆದೇ ರೋಮಾಂಚನಾಯಿತು.
ಹಿಂದೇ, ಅಂಗಳಕ್ಕೆ ಬಂದ ಎಮಿಲಿ ಕಾಣಿಸಿದರು. ನನಗೆ ಆಶ್ಚರ್ಯ, `ಇಷ್ಟು ಬೇಗ ಅದೇನು ಹೀಗೆ ಅಂಗಳಕ್ಕೆ….?’ ನೋಡಿದೆ. ಅವರ ಮುಖದಲ್ಲಿ ಸಂಭ್ರಮ ಸುರಿಯುತ್ತಿತ್ತು. ಬೆಚ್ಚಗಿನ ಉಡುಗೆಯಲ್ಲಿ ಚಂದವಾಗಿ ಅಲಂಕರಿಸಿಕೊಂಡಾಕೆ ಮಗುವಿನಂತೆ ರಾಶಿ ರಾಶಿ ಬಿದ್ದ ಹಿಮವನ್ನು ಬಾಚಿ ಬೊಗಸೆ ತುಂಬಾ ಹಿಡಿದರು. ಕೆನ್ನೆಗೆ ಒತ್ತಿಕೊಂಡರು. ಅಲ್ಲೇ ಮಂಡಿಯೂರಿ ಕುಳಿತು ಪುಟ್ಟದೊಂದು ಹಿಮಮಾನವನನ್ನು ಮಾಡಿಯೇಬಿಟ್ಟರು. ಹಸಿರು ರಿಬ್ಬನ್ ಕಟ್ಟಿ, ಕ್ಯಾರೆಟ್ ನಿಂದ ಮೂಗು ಮಾಡಿ, ಕಣ್ಣಿಗೆ ಎರಡು ಕಪ್ಪು ವಸ್ತುವಿಟ್ಟರು. ಎದ್ದು ನಿಂತು ಆಕಾಶಕ್ಕೆ ಕೈಮುಗಿಯುತ್ತಾ, ಇನ್ನೊಮ್ಮೆ ಹಿಮರಾಶಿಯನ್ನು ತಡವುತ್ತಾ, ಅಲ್ಲಷ್ಟು ನಡೆಯುತ್ತಾ ಒಳನಡೆದವರ ಮುಖ ಆಯಾಸದಲ್ಲೂ ಕಾಂತಿಯುತವಾಗಿತ್ತು.
`ಕೀಮೋಥೆರಪಿಯ ಆಯಾಸ ಹಿಮ ನೋಡಿ ಮರೆತರಾ….’ ಈಗ ಮಾತ್ರ ನನ್ನ ಬಗ್ಗೆ ನನಗೇ ನಾಚಿಕೆ ಎನಿಸಿತು. `ಚಳಿ ಅಂತ ಮುದುರಿ ಒಲೆ ಮುಂದೆ ಕೂತಾಯ್ತಾ….’ ಅಂತ ಅಜ್ಜಿ ಬಾಲ್ಯದಲ್ಲಿ ಬಯ್ಯುತ್ತಿದ್ದದ್ದು ನೆನಪಾಯಿತು.
“ಅಪ್ಪಾ…. ಅಮ್ಮಾ…. ಬನ್ನಿ. ಸ್ವಲ್ಪ ಹೊತ್ತು ವಾಕ್ ಹೋಗೋಣ. ಇಲ್ಲಿ ಸುತ್ತಮುತ್ತ ನೋಡಿದ ಹಾಗಾಗುತ್ತೆ,” ಎಂದಳು ಮಗಳು.
ಇಲ್ಲಿ ಬಂದ ಮರುದಿನ ಕೇಳಿದ್ದರೂ, “ಅಯ್ಯೋ…. ಈ ಚಳಿಯಲ್ಲಿ ಹೆಪ್ಪುಗಟ್ಟಿದ ಹಿಮ ಅಲ್ಲಲ್ಲಿ, ಜಾರುತಲ್ವಾ….? ಜೊತೆಗೆ, ಎಷ್ಟೆಲ್ಲಾ ಬಟ್ಟೆ ರಾಶಿ ಹೇರಿಕೊಂಡು ನನ್ನ ಕೈಲಾಗಲ್ಲಪ್ಪ, ಬಿಸಿಲು ಇದ್ದರೆ ಹೋಗಬಹುದು…..” ಎಂದು ಮುದುರಿಕೂತ ನನ್ನ ಮನಃಸ್ಥಿತಿ ಈಗ ಥಟ್ಟನೆ ಬದಲಾಯಿತು.
“ನೇಹಾ, ಇತ್ತು ಲಾಕ್ ಹೋಗೋಣ ಕಣೆ….” ಎಂದು ರೆಡಿಯಾಗಿ ಹೊರಟ ನನ್ನನ್ನು ಕಂಡ ಮಗಳು, “ಈ ಹಿಮರಾಶಿಯಲ್ಲಿ……?” ಎಂದು ಅಚ್ಚರಿಯಿಂದ ಕೇಳಿದರೂ, ನಗುತ್ತಾ ಒಳನಡೆದೆ ರೆಡಿಯಾಗಲು.
ಯುದ್ಧಕ್ಕೆ ಹೊರಟಂತೆ ಅಡಿಮುಡಿ ಥರ್ಮಲ್ಲು, ಸ್ವೆಟರ್, ಟೋಪಿ, ಕೋಟು, ಚರ್ಮದ ಬೂಡ್ಸ್, ಗ್ಲೌಸ್ ಹಾಕಿಕೊಂಡು ಹೊರಬಿದ್ದೆ. ಇಡೀ ಮ್ಯೂನಿಕ್ ಬೆಳ್ಳನೆಯ ಹಿಮದಲ್ಲಿ ಮುಳುಗಿತ್ತು. ಕಾಲು ಎರಡಡಿ ಹಿಮದಲ್ಲಿ ಹೂತು ಹೋಗುತ್ತಿತ್ತು, ಚಳಿ ನಡುಗಿಸುತ್ತಿತ್ತು. ಹಿಮದಲ್ಲಿ ನಡೆದು ಅಭ್ಯಾಸವಿಲ್ಲ.

`…. ಏನು ಯಾವಾಗ್ಲೂ ಕರು ತರ ಚಂಗ್ ಚಂಗ್ ಅಂತ ಓಡ್ಕೊಂಡೆ ನಡೀತೀ. ನಿಧಾನಕ್ಕೆ ನಡ್ಯೋದು ಕಲಿ. ಹೊಸಲು ಎಡವಿ ಬಿದ್ದು, ಎದುರು ಬರೋವರೆಗೆ ಡಿಕ್ಕಿ ಹೊಡ್ಕಂಡು ಹಣೆ ಜಜ್ಕೊಂಡು…..’ ಉದ್ದಕ್ಕೆ ಎಚ್ಚರಿಕೆ ಬೈಗಳ ಸುರಿಸ್ತಿದ್ದ ಅಜ್ಜಿ ಮತ್ತೆ ನೆನಪಾದಳು.
ಈಗ ಓಡೋದಿರಲಿ. ಅಲ್ಲಲ್ಲಿ ಹರಳುಗಟ್ಟಿದ ಹಿಮದ ಸಣ್ಣ ತುಣುಕಿನ ಮೇಲೆ ಕಾಲು ಇಟ್ಟರೆ ಸಾಕು ಸುಂಯ್ ಎಂದು ಜಾರಿಸುತ್ತಿತ್ತು. ಐವತ್ತೈದು ದಾಟಿದವಳು ಜಾರಿ ಬಿದ್ದರೆ, ಕೈ ಕಾಲು ಸೊಂಟ ಮುರಿದರೆ ಮಗಳ ಬಾಣಂತನ….?’
`ಮಾರಾಯ್ತಿ…. ನೋಡೀಗ ನಿನ್ ಮಾತಿನಂತೆ…..’ ಅಜ್ಜಿಯನ್ನು ನೆನೆಯುತ್ತಾ ನಿಧಾನವಲ್ಲ, ಅತಿ ನಿಧಾನಕ್ಕೆ ಶೇಖರ್ ಕೈಹಿಡಿದು, ಹೆಜ್ಜೆಯಿಡುತ್ತಾ ಹಿಮದಲ್ಲಿ ನಡೆಯುವ ಅಭ್ಯಾಸ ಮಾಡಿಕೊಂಡಾಗ, ಮನಸ್ಸು ಸಂಭ್ರಮದಲ್ಲಿ ತೊಯ್ದುಹೋಯ್ತು. ಹೊಸತು ಹಿಮರಾಶಿಗೆ ಕೈ ಹಾಕಿದೆ. ಅಂಟದ, ಹಗುರವಾದ ಸಕ್ಕರೆಯ ಹುಡಿಯಂತಿತ್ತು. ಒತ್ತಿದೆ ಉಂಡೆಯಾಯ್ತು. ಕೆನ್ನೆಗೊತ್ತಿಕೊಂಡರೆ ಎಳೆಯ ಕಂದನ ಸ್ಪರ್ಶದ ಅನುಭವವಾಯ್ತು. ಮಗಳ ಮುಖ ನೋಡಿದೆ, ಸ್ವಲ್ಪ ಬಾಡಿತ್ತು. ಇಂದು ಹಿಮ ಸುರಿದಂತೆ ನಾಳೆಯೇ ಹಿಮದಷ್ಟೇ ಮುದ್ದಾದ ಕಂದ ಬರುವನೇ…..? ನನ್ನನ್ನು ಮುದುಡಿ ಕೂಡುವ ಎಮಿಲಿಯ ಜೀವನಪ್ರೀತಿಗೆ, ಒಳ ಕೂತು ನೆನಪಲ್ಲಿ ಎಬ್ಬಿಸಿದ ಅಜ್ಜಿಗೆ ಶರಣು ಎನ್ನುತ್ತಾ ಮನೆ ಕಡೆ ಹೊರಟಾಗ, ಮಗಳ ಹೆಜ್ಜೆ ಸ್ವಲ್ಪ ಭಾರವಾಗಿತ್ತು.
“ಸ್ಟ್ರೀಸಾ, ಐ ನೀಡ್ ಯುವರ್ ಹೆಲ್ಪ್….” ಎಂದಿದ್ದೇ ತಡ, ಕೆಳಗಿನ ಮನೆ ಹುಡುಗಿ ಓಡೋಡಿ ಬಂದಿದ್ದಳು. ನವೀನ್ ಆಫೀಸ್ ಗೆ ಹೋಗಿಯಾಗಿತ್ತು. ನೇಹಾಗೆ ಆನಂತರವೇ ನೋವು ಆರಂಭವಾಗಿತ್ತು.
ಒಳಗೆ ಕೂತ ಅಜ್ಜಿ, `ಮೊದ್ಲು ಜೀರಿಗೆ ಕಷಾಯ ಮಾಡ್ಕೊಡು. ಹೆರ್ಗೆ ನೋವೇ ಆದ್ರೆ ಹೆಚ್ಚುತ್ತೆ. ಉಷ್ಣಕ್ಕಾದ್ರೆ ಕಮ್ಮಿ ಆಗುತ್ತೆ….’ ಎನ್ನುತ್ತಿದ್ದ ಮಾತು ನೆನಪಾಗಿ ಬಿಸಿಬಿಸಿ ಕಷಾಯ ಮಾಡಿಕೊಟ್ಟೆ.
ಬೆಳಗ್ಗೆ ಸಣ್ಣಗಿದ ನೋವು, ಮಧ್ಯಾಹ್ನವಾಗುತ್ತಾ ಹೆಚ್ಚಿತ್ತು. ಸ್ಟ್ರೀಸಾ ಜೊತೆ ಕಾರಿನಲ್ಲಿ ರಿಜಿಸ್ಟರ್ ಮಾಡಿಸಿದ್ದ ಕಾರ್ಪೋರೇಶನ್ ಆಸ್ಪತ್ರೆಗೆ ಹೋಗಿದ್ದಾಯ್ತು. ಎಷ್ಟು ಚಂದದ ಆಸ್ಪತ್ರೆ, ರೂಮುಗಳು. ನಗುಮುಖದ ಸುಂದರಿಯರಾದ ನರ್ಸ್ ಗಳು. ಆದರೆ ನೋವು…..? ಇದಕ್ಕೆ ಯಾವುದರ ಹೋಲಿಕೆ. ಅಳಿಯ ಓಡೋಡಿ ಬಂದಾಯ್ತು. ದಿನವೆಲ್ಲ ಕಳೆದರೂ ಒಂದೇ ತರಹ ನೋವು, ಎಲ್ಲರೂ ಅಲ್ಲಿರುವಂತಿರಲಿಲ್ಲ. ಮನೆಗೆ ಬಂದು ರಾತ್ರಿಯೆಲ್ಲಾ ದೇವರ ಧ್ಯಾನದಲ್ಲಿ ಕಳೆದೆ.
`ದೇವರೇ, ನನ್ನಜ್ಜಿ ಎಷ್ಟು ಗರ್ಭಿಣಿಯರ ನೋವು ಕಳೆಸಿ ನಗಿಸಿದ್ದಾಳೆ. ಅವಳ ಪುಣ್ಯ ಅವಳ ಮರಿಮಗಳನ್ನೂ ಕಾಪಾಡೋ ಹಾಗೆ ಅನುಗ್ರಹಿಸು…..’ ಕಣ್ಣಲ್ಲಿ ನೀರಿಳಿಸುತ್ತಾ, ಕರುಳು ಕರಗಿಸಿಕೊಂಡು ಪ್ರಾರ್ಥಿಸಿ ಕಳೆದಿದ್ದೆ.
ಡಿಸೆಂಬರ್ ಕೊನೆಯ ಚಳಿ ಇನ್ನೂ ಹೆಚ್ಚಿತ್ತು. ನಿನ್ನೆಯಷ್ಟೇ ಇಲ್ಲಿಯ `ಲೈಟ್ ಕ್ರಿಸ್ಮಸ್’ ಆಚರಣೆಯಾಗಿತ್ತು. ಮೈತುಂಬಾ ಪದರಪದರದ ಉಡುಗೆ ತೊಟ್ಟು, ಹಿಮದಲ್ಲೇ ಗಟ್ಟಿ ಹೆಜ್ಜೆಯೂರುತ್ತಾ, ಯೂ ಬಾನ್ ಎಸ್ ಬಾನ್ ರೈಲುಗಳನ್ನು ಹಿಡಿದು ಆಸ್ಪತ್ರೆಗೆ ಬಂದಾಗ, ಅಚ್ಚರಿಯೊಂದು ಎದುರಾಗಿತ್ತು. ನೇಹಾಳನ್ನು ಕಂಡು ನನ್ನ ಕಣ್ಣಲ್ಲಿ ದಳದಳನೆ ನೀರಿಳಿಯಿತು. ಕಾರಣ, ನೋವು ಹೆಚ್ಚಾಗದೆ ಅವಳಿಗೀಗ ಬಿಸಿ ನೀರಿನ ಟ್ರೀಟ್ ಮೆಂಟ್ ನಡೆಯುತ್ತಿತ್ತು. ನಾನು ಕಂಡು, ಕೇಳರಿಯದ ವಿಧಾನ. ದುಂಡನೆಯ ದೊಡ್ಡ ಬಾತ್ ಟಬ್. ಅದರಲ್ಲಿ ಸುಖೋಷ್ಣ ನೀರು, ಅದರಲ್ಲಿ ಕುಳಿತ ಮಗಳು. ಆಗಾಗ ನೋವಿನಲ್ಲಿ ಮುಖ ಹಿಂಡುತ್ತಿತ್ತು. ಏಕೋ ಸಂಕಟವಾಯಿತು. ಇದೇನು ಎಂದು ಗೊತ್ತಿಲ್ಲದ ಆತಂಕ ಹೆಚ್ಚಿತು. ಮಗಳು ಅಳಿಯ ನನಗೇ ಧೈರ್ಯ ಹೇಳಿದರು. ಹೊರಬಂದೆ, ದೊಡ್ಡದಾದ ಹಾಲ್ ನಲ್ಲಿ ಮಾತನಾಡದೆ ಕೂತುಬಿಟ್ಟೆ.
ಬಾಲ್ಯದಲ್ಲಿ ನಾವು ಕಂಡ ಯಾವ ಸೌಕರ್ಯ, ಸಲಕರಣೆ ಇಲ್ಲದೆ ಕತ್ತಲ ಕೋಣೆಯಲ್ಲಿ ಅಜ್ಜಿ ಮಾಡಿಸುತ್ತಿದ್ದ ಅಮ್ಮನ ಹೆರಿಗೆ, ಅಕ್ಕಪಕ್ಕದವರ ಹೆರಿಗೆ ಎಲ್ಲವೂ ಕಣ್ಮುಂದೆ ಹಾದುಹೋಯಿತು. `ಅದ್ಯಾಕಿಷ್ಟು ಕಂಗೆಟ್ಟು ಕೂತ್ಯೇ….? ಇದೇನು ಪ್ರಾಣ ತೆಗ್ಯೋ ಕಾಯ್ಲೆನಾ ಕಸಾಲೆನಾ…..? ಒಂಚೂರು ತಡ್ಕೊಂಡ್ರಾಯ್ತಪ್ಪ. ಘಳ್ಗೆ ಬಂದ್ ಕೂಡ್ಲೇ ಆದಾಗ್ ಅದೇ ಭೂಮಿಗೆ ಬರದೇ ಸೈ, ಒಂದ್ ಚವಣಾನೂ ಹೆಚ್ಗೆ ಅಲ್ಲಿರಲ್ಲ….’ ಎಷ್ಟು ಸಲೀಸಾಗಿ ಹೆರಿಗೆಯ ಸೃಷ್ಟಿ ಸತ್ಯದ ಅರ್ಥ, ಅವಲೋಕನ ಮಾಡಿ ಅಜ್ಜಿ ಹೇಳ್ತಿದ್ಲು…..!
ಅತ್ತಿತ್ತ ನೋಡಿದೆ. ಕಣ್ಣೆದುರು ಅಚ್ಚರಿಯ ಪ್ರಸಂಗಗಳೂ ಕಂಡ….. ಗರ್ಭಿಣಿಯ ಹಿಂದೆ ಆತಂಕದಲ್ಲಿ ಆಸರೆಯಾಗುವ ಅಪ್ಪ, ಅಮ್ಮ, ಗಂಡ, ಅಕ್ಕ ಅಂತ ಯಾರೂ ಇಲ್ಲದೆ ಹೆರಿಗೆ ಸಮಯಕ್ಕೆ ಸರಿಯಾಗಿ ಕಿಟ್ ಬ್ಯಾಗ್ ಹಿಡಿದು ಬಂದ ತರುಣಿ ಕಂಡಳು. ನೋವು ಆರಂಭವಾದರೂ ಯಾರೂ ಜೊತೆಯಿಲ್ಲದೆ ಏಕಾಂಗಿಯಾಗಿ ಮುಖ ಹಿಂಡುತ್ತಾ, ಹೊಟ್ಟೆ ನೀವಿಕೊಳ್ಳುತ್ತಾ, ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದ ಹೆಣ್ಣೊಬ್ಬಳು ಕಂಡಳು. ಎಷ್ಟು ಧೈರ್ಯವಂತರು ಎನಿಸಿತು. ಆಸ್ಪತ್ರೆ ವ್ಯವಸ್ಥೆ, ಡಾಕ್ಟರ್, ನರ್ಸ್ ಎಲ್ಲರೂ ಇವರ ಬಗ್ಗೆ ನಿಷ್ಠೆಯಿಂದ ಕಾಳಜಿ ಮಾಡುವ ವಿಚಾರ ತಿಳಿಯಿತು.
ಸುಲಿಗೆ, ಲಂಚ, ಅಸಡ್ಡೆ, ಶ್ರೀಮಂತ, ಬಡ ಇದ್ಯಾ ತಟವಟವಿಲ್ಲದ ಸ್ವಾಸ್ಥ್ಯ ದೇಗುಲ ಎಂದೂ ತಿಳಿಯಿತು. ಸಹಜಕ್ರಿಯೆಗೆ ಸಹಜವಾಗಿ ವರ್ತಿಸು, ಜೊತೆ ಇದ್ದರೆ ಸರಿ. ಇಲ್ಲದಿದ್ದರೂ ಸೈ ಎನ್ನುವ ಈ ನೆಲ ನಂಬಿಕೆಯಲ್ಲಿ ಯಾರೂ ಇಲ್ಲದಿದ್ದರೂ ನಿರಾಳ!
ಮನಸ್ಸು ಸ್ವಲ್ಪ ಶಾಂತವಾಯಿತು. ಮುಂದಿನ ಇನ್ನೊಂದು ಗಂಟೆಯಲ್ಲಿ ಮಗಳು, ಅವಳೊಂದಿಗೆ ಅಳಿಯನನ್ನೂ ಹೆರಿಗೆ ವಾರ್ಡ್ ಗೆ ಕರೆದೊಯ್ದಾಗ, `ಮಗೂ ಆಲ್ ದಿ ಬೆಸ್ಟ್…..’ ಒಳಗಿನ ಅಧೈರ್ಯ ಓಡಿಸುತ್ತಾ, ಈ ನೆಲದ ವ್ಯವಸ್ಥೆಯನ್ನು ನಂಬುತ್ತಾ, ಅಜ್ಜಿ ಮಾಡಿದ ಪರೋಪಕಾರ ಧ್ಯಾನಿಸುತ್ತಾ….. ಹೇಳಿದೆ.
ಸರಳವಾಗಿ ಈ ನೆಲದ ಅತಿಥಿಯಾಗಿ ಇಳಿದಿದ್ದ ಮೊಮ್ಮಗ….!
“ವಾವ್…. ಲುಕ್ ಎಟ್ ಹಿಸ್ ಹೇರ್….” ಅಲ್ಲಿನವರಿಗೆ ಅಪರೂಪ ಎನಿಸುವ ತಲೆ ತುಂಬ ಭಾರತೀಯ ಕಪ್ಪು ಕೂದಲನ್ನು ಹೊತ್ತು ಹುಟ್ಟಿದ್ದ ಮಗವನ್ನು ನೋಡಿದವರೆಲ್ಲರ ಉದ್ಗಾರ. ಸಹಜವಾಗಿ ಮೊಮ್ಮಗ ಎಲ್ಲರನ್ನೂ ಸೆಳೆದಿದ್ದವು. ಆದರೆ….? ಬಾಣಂತಿಗೆ ತಂದಿಟ್ಟ ಊಟ ನೋಡಿ ನಾನಂತೂ ಹೌಹಾರಿ ಹೋದೆ. ಹತ್ತು ಇಂಚು ಡಯಾಮೀಟರಿನ ಕೇಕ್, ಆರೆಂಜ್ ಜೂಸ್, ಮಫಿನ್ಸ್, ದೊಡ್ಡ ಬೌಲ್ ಹಸಿ ಸಲಾಡ್, ನೀರಿನ ಬಾಟಲಿ…. ರಾತ್ರಿಗೆ ಸೂಪ್, ಬ್ರೆಡ್, ಸಲಾಡ್, ಜೂಸ್….. ಇತ್ಯಾದಿ.
`ಮೂರು ದಿನ ಬರೀ ರವೆ ಗಂಜಿ, ಧಾರಾಳವಾಗಿ ಹಾಲು, ಒಂದಷ್ಟು ಕಾಪಿ, ನಾಲ್ಕನೇ ದಿನದಿಂದ ಹನ್ನೊಂದು ದಿನದ ಬೆಳಗ್ಗೆ ರವೆ ಗಂಜಿ, ಮಧ್ಯಾಹ್ನ ರಾತ್ರಿ ಮೆತ್ತಗಿನ ಅನ್ನ, ಮೆಣಸಿನ ಸಾರು, ಕಾಫಿ ಇಷ್ಟೇ ಸೈ…. ಕುದಿಸಿಟ್ಟ ನೀರು ಇಷ್ಟಿಷ್ಟೇ. ಬಾಣಂತಿ ಹೆಚ್ಚು ನೀರೂ ಕುಡಿಯಬಾರದು. ಕಟ್ಟುನಿಟ್ಟಾಗಿ ಮಾಡಿಕೊಂಡ್ರೆ ಮುಪ್ಪರಡಿದರೂ ನನ್ನ ಹಾಗೆ ಕೋಲು ತರನೆ ಇರ್ತೀ. ಇಲ್ಲಾಂದ್ರೆ ಕಾಯಿಲೆ ಕಸಾಲೆ, ಮೈಬಂದು ಹೇರಿಕೊಳ್ಳುತ್ತೆ….’ ಮನಸ್ಸಲ್ಲಿ ಸಾಂಪ್ರದಾಯಿಕ ಅಜ್ಜಿ ಪಿಸುಗುಟ್ಟುತ್ತಿದ್ದಳು.
ನನ್ನ ದೃಷ್ಟಿ ಚಂದವಾಗಿ ಪ್ಯಾಕ್ ಮಾಡಿಟ್ಟ ಮಫಿನ್, ಸಲಾಡ್ ಮೇಲಿತ್ತು. ಮನೆಯಿಂದ ಆಹಾರ ತರುವಂತಿಲ್ಲ, ನಾಲ್ಕನೇ ದಿನ ಮನೆಗೆ ಕಳಿಸೋದು. ತಲೆಯಲ್ಲಿದ್ದ ಸಂಪ್ರದಾಯದ ನಂಬಿಕೆ, ಕಾಲಮಾನದ ಬದಲಾವಣೆ ಸಂಘರ್ಷ ಕಾಡಿತು…..! ವಿಧಿಯಿಲ್ಲದೆ ಒಂದೆರಡು ತುಂಡು ಕೇಕ್, ಹಾಲು ಕೊಟ್ಟೆ. ಉಳಿದ ಸಲಾಡ್, ಜೂಸ್ ಎಲ್ಲ ನಮ್ಮ ಹೊಟ್ಟೆ ಸೇರಿತು. `ಹಸಿ ಪದಾರ್ಥ ಬಿಲ್ ಕುಲ್ ಬೇಡ…..’ ಅಂತ ಅಜ್ಜಿ ಒಳಗಿನಿಂದ ತಿವಿದು ಎಚ್ಚರಿಸುತ್ತಿದ್ದಳು. ರಾತ್ರಿಗೆ ಬರೀ ಹಾಲಿನಲ್ಲಿ ರವೆ, ಏಲಕ್ಕಿ ಹಾಕಿ ದಪ್ಪ ಗಂಜಿ ಮಾಡಿ ತಂದೆ.
ಮರು ಬೆಳಗ್ಗೆ ಬಾಣಂತಿಗೆ ಹತ್ತು ಗಂಟೆಗೆ ಅಪಾಯಿಂಟ್ ಮೆಂಟ್. ನರ್ಸಿಂಗ್ ಡಿಪಾರ್ಟ್ ಮೆಂಟ್ ನಿಂದ ಮಗುವಿಗೆ ನ್ಯಾಪಿ ಬದಲಾಯಿಸುವುದರಿಂದ ಹಿಡಿದು ತಾಯಂದಿರನ್ನು ಸ್ವಾವಲಂಬಿ ಮಾಡುವ ಎಲ್ಲ ನರ್ಸಿಂಗ್ ತರಬೇತಿ ಕೊಡುತ್ತಾ, ಹೇಳುತ್ತಾ ಹೋದ ಅಲ್ಲಿಯ ಸಿಸ್ಟರ್, ಆಸ್ಪತ್ರೆಯ ವಾತಾವರಣ ನಮ್ಮ ಬಾಣಂತನದ ವ್ಯಾಖ್ಯಾನವನ್ನೇ ಬದಲಾಯಿಸಿದಂತೆ ನಾನು ಪಿಳಿಪಿಳಿ ಕಣ್ಣುಬಿಟ್ಟು ನೋಡಿದ್ದೆ. ನಮ್ಮಲ್ಲಿ ಹೀಗೆ ಸಾಧ್ಯವಾ….? ಸಾಧುವಾ….? ಕಾಲ ಬದಲಾದಂತೆ ನಾವು ಹೀಗಾಗಬೇಕಾ….?
`ಯಾಕಿಲ್ಲ ನಮ್ಮಲ್ಲೂ ಬದಲಾಗಿದೆ. ನೀನಿನ್ನೂ ಹಳತು ಪೂರ್ತಿ ಬಿಡಲು ತಯಾರಿಲ್ಲ…..’ ಮನಸ್ಸು ಅಣಕಿಸಿತು.
ಹೌದು ನಾನು ಪೂರ್ತಿ ಬದಲಾಗಿಲ್ಲ. ಆಗಬೇಕಾದರೂ ಯಾಕೆ? ಅಜ್ಜಿ ಹೇಳಿದ ಬಾಣಂತನದ ಎಷ್ಟೋ ವಿಚಾರಗಳು ವೈಜ್ಞಾನಿಕವಾಗಿ ಕೂಡ ಸತ್ಯ ಅಂತ ಪ್ರೂವ್ ಆದ ಉದಾಹರಣೆಗಳಿವೆ. ಒಂದಷ್ಟು ಕಾಲದ ಜೊತೆ ಬದಲಾವಣೆ, ಇನ್ನಷ್ಟು ಮೂಲನ್ನೂ ಉಳಿಸಿಕೊಳ್ಳೋದು. ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು ಎನ್ನುವ ತರ್ಕಕ್ಕೆ ಒಲಿದೆ….!
ಎಂದೂ ಒಳಬಾರದ ಮಿಸ್ ಎಮಿಲಿ ಇಂದು ಮನೆಗೆ ಬಂದರು. ಆಕೆ ಬಂದಿದ್ದು, ಐದು ದಿನದ ಹಿಂದಷ್ಟೇ ಜನಿಸಿ ನಿನ್ನೆಯಷ್ಟೇ ಮನೆಗೆ ಬಂದಿದ್ದ ನನ್ನ ಮೊಮ್ಮಗನನ್ನು ನೋಡಿ `ವೆಲ್ ಕಮ್’ ಹೇಳಿಹೋಗುವ ಅವರ ಶಿಷ್ಟಾಚಾರ ಪಾಲನೆಗಾಗಿ.
ಮಗುವಿಗೆ ವಾಲಿಯಂಥ ದನಿ ಹುಟ್ಟಿಸುವ ಸುಂದರವಾದ ಒಂದು ಆಟಿಕೆ, ಪುಟಾಣಿ ಕ್ರಿಸ್ ಮಸ್ ಗಿಡ ಹಿಡಿದು ಬಂದರ ಮುಖದಲ್ಲಿ ಇವೆಲ್ಲಕ್ಕಿಂತ ಸುಂದರವಾದ ನಗೆಯಿತ್ತು. ನಾಲ್ಕಾರು ದಿನದ ಹಿಂದಷ್ಟೇ ಆಸ್ಪತ್ರೆಯಿಂದ ಹಿಂದಿರುಗಿ ಬಂದ ಕುರುಹುಗಳೇ ಕಾಣಿಸದಂತಿತ್ತು ಆ ನಗೆ.. ಕಂದನ ತಲೆ ತುಂಬಿದ್ದ ಕಪ್ಪು ಬಣ್ಣದ ಕೂದಲನ್ನು ಕಂಡು, `ವಾವ್, ಎಂಥ ಕಪ್ಪು ಹೊರೆಗೂದಲು. ಎಷ್ಟು ಸುಂದರನಿದ್ದಾನೆ ಬಾಲ ಯೇಸುವಿನಂತೆ,’ ಎಂದು ಜರ್ಮನ್ ನಲ್ಲಿ ಉದ್ಗಾರ ಎಳೆದರು.
ದೇಶ, ಬಣ್ಣ, ಜಾತಿ, ಮತ ಯಾವುದಾದರೇನು…… ಕ್ಷಣದಲ್ಲಿ ಎಲ್ಲವನ್ನೂ ಬೆಸೆದುಬಿಡುವ ಗುಣ ಹಸುಕಂದನಿಗಿದೆ ಎನ್ನುವುದನ್ನು ಮನೆಗೆ ಬಂದ ಮೊಮ್ಮಗ ಮತ್ತು ಎಮಿಲಿ ತೋರಿಸಿಕೊಟ್ಟರು.
`ನಿಮ್ಮ ಮತ್ತು ನಿಮ್ಮ ನೆಲದ ಜೀವನೋತ್ಸಾಹ, ಆತ್ಮವಿಶ್ವಾಸ, ಧೈರ್ಯ ನಮಗೆ ಅನುಕರಣೀಯ,’ ಎಂದು ಸ್ವಗತಿಸಿಕೊಂಡೆ.
ಮಗುವನ್ನು ಎತ್ತಿಕೊಂಡೇ ಕೂತರು, ನಾನು ಕೊಟ್ಟ ಟೀ, ಬಿಸ್ಕತ್ತುಗಳನ್ನು ಬಿಮ್ಮಿಲ್ಲದೆ ಸ್ವೀಕರಿಸಿ, ಮಗುವನ್ನೇ ನೋಡುತ್ತಾ, “ಈ ಬಾಲ ಯೇಸು ಮತ್ತೆ ಈ ಲೈಟ್ ಕ್ರಿಸ್ಮಸ್ ನನ್ನ ಕ್ಯಾನ್ಸರ್ ಓಡಿಸುತ್ತಾರೆಂದು ನಂಬಿರುವೆ,” ಎಂದಾಗ, ಅವರೊಳಗಿನ ನೋವು, ಮುಳುಗುವವನು ಹುಲ್ಲುಗರಿಕೆ ಹಿಡಿದಂಥ ತೊಳಲಾಟ ನನ್ನ ಕಣ್ಣು ಹನಿಗೂಡಿಸಿತು.
“ಹಾಗೇ ಆಗಲಿ…!” ಎಂದು ಹಾರೈಸುತ್ತಾ ನಾನವರ ಕೈಯೊತ್ತಿದೆ!
ಎರಡು ತಿಂಗಳ ನನ್ನ ಆರೈಕೆಯಲ್ಲಿ (ಅಜ್ಜಿ ಹೇಳಿದ ಅನೇಕ ಮನೆಮದ್ದುಗಳೊಂದಿಗೆ) ಬಾಣಂತಿ ಮಗು ನಳನಳ ಎಂದೇ ನಕ್ಕರು. ಸೋರೇಕಾಯಿ, ಸಬ್ಬಸಿಗೆ, ಕ್ಯಾರೆಟ್, ಬೀನ್ಸ್, ಟರ್ನಿಪ್ ತರಕಾರಿಗಳನ್ನು ಧಾರಾಳವಾಗಿ, ಕೆಲವು ಹಣ್ಣುಗಳನ್ನೂ ಮಿತವಾಗಿ ಕೊಟ್ಟೆ. (ಅಜ್ಜಿ ಬೇಡವೆಂದು ಒಳಗೆ ಕೂತು ಗೊಣಗಿದರೂ….) ಅಂತೂ ಶುಂಠಿ, ಗಸಗಸೆ ಉಂಡೆ, ಮೆಂತ್ಯ ಉಂಡೆ, ಮೆಣಸಿನ ಸಾರು, ಮೆಂತ್ಯ ದೋಸೆ, ಸಜ್ಜಿಗೆ ಎಲ್ಲ ಮಾಡೋದು, ಕೊಡೋದು ಕಂಡರು. ವಾರಕ್ಕೊಮ್ಮೆ ಮನೆಗೇ ಬಂದು ಮಗು ತೂಕ, ಬೆಳವಣಿಗೆ ಗಮನಿಸು ‘ಹೆಬಾಮೆ’ (ಮಿಡ್ ವೈಫ್) ಮೂಗಿನ ಮೇಲೆ ಬೆರಳಿಡುತ್ತಾ….
“ಅದೇನು, ಇದೇನು…. ಇದರ ಲಾಭವೇನು….?” ಎಂದೆಲ್ಲಾ ಕೇಳಿದಳು. ಎಲ್ಲವನ್ನೂ ವಿವರಿಸಿದೆ.
“ಓ…. ದಟ್ ಈಸ್ ಲೈ ಬೇಬಿಸ್ ಗ್ರೋತ್ ಈಸ್ ಸೋ ವಂಡರ್ ಫುಲ್ ಹೆಲ್ದಿ….” ಕಣ್ಣರಳಿಸುತ್ತಾ ನನ್ನ ಬೆನ್ನು ತಟ್ಟಿದಳು.
`ಅಷ್ಟಲ್ಲದೇ ಮತ್ತೇನು, ತಲೆ ತಲಾಂತರದಿಂದ ಬಂದ ಅನುಭವ ವ್ಯರ್ಥ ಆಗುತ್ತಾ….?’ ಒಳಗಿದ್ದ ಅಜ್ಜಿ ಹೇಳು ಅಂತ ನನ್ನನ್ನು ತಿವಿದಳು.
ಆಗಾಗ ಅಂಟು ಶುಂಠಿ, ಮೆಂತ್ಯದುಂಡೆಯನ್ನು ಚೀರೂ ತಿನ್ನುತ್ತಿದ್ದ ಹೆಬಾಮೆ, “ವಾವ್…..” ಎಂದು ಮೊಟ್ಟೆ ಹೊಡೆಯುತ್ತಾ, “ನಾನು ಇಂಡಿಯಾದ ಆಯುರ್ವೇದ ಔಷಧಿ ಬಗ್ಗೆ ಸ್ವಲ್ಪ ಓದಿದ್ದೆ. ಇಲ್ಲಿ ಪ್ರಾಕ್ಟಿಕಲ್ ಆಗಿ ನೋಡಿ, ತಿಂದು ಅದರ ರಿಸ್ಟ್ ಕೂಡ ಕಂಡೆ. ಓ…. ದಿಸ್ ಈಸ್ ಮೈ ಬೆಸ್ಟ್ ಎಕ್ಸ್ ಪೀರಿಯನ್ಸ್ ಆಫ್ ಮೈ ಪ್ರೊಫೆಷನ್….” ಎಂದಳು.
`ದೇವರೇ, ಕಾಣದ ದೇಶಕ್ಕೆ ಹೋಗಿ ಈ ಮನೆ ಔಷಧಿಯಿಂದ ನಾನು ಬಾಣಂತನ ಮಾಡಿ, ಏನಾದ್ರೂ ತೊಂದರೆಯಾದ್ರೆ, ಅಜ್ಜಿಯಂತೆ ಸಲಹೆ ಕೊಡಕ್ಕೆ ಯಾರೂ ಇಲ್ಲದ ಪರದೇಶ, ಮಗು ಬಾಣಂತಿ ಗತಿಯೇನು….?’ ಎಂದು ಚಿಂತೆ ಮಾಡುತ್ತಿದ್ದೆ ಮನಸ್ಸು ನಿರಾಳವಾಯಿತು. ಸಾಂಪ್ರದಾಯಿಕ ಆಧುನಿಕತೆ ಎರಡೂ ಅಷ್ಟಿಷ್ಟು ತೊಗೊಳ್ಳೋದೇ ಉತ್ತಮ ಎಂದೂ ಮನವರಿಕೆಯಾಗಿತ್ತು. ಯಾವುದನ್ನೇ ಆಗಲಿ ಸಾರಾಸಗಟಾಗಿ ಅಲ್ಲಗೆಳೆಯುವುದನ್ನು ಬಿಟ್ಟರೆ ಒಳಿತಾಗುವುದೆಂದು ಇಲ್ಲಿಯ ವಾತಾವರಣ ಕಲಿಸಿತ್ತು.
ವೀಸಾ ಅವಧಿ ಮುಗಿಯಿತು. ಸೂಟ್ ಕೇಸ್ ಹಿಡಿದು ಕೆಳಗಿಳಿದು, ಗೇಟ್ ದಾಟುವಾಗ, ಮೂರು ತಿಂಗಳ ಬಾಣಂತಿ ಮಗುವನ್ನು ಬಿಟ್ಟು ಹೊರಟ ದುಃಖ ಕಾಡಿ ಮಗುವನ್ನು ಬಿಗಿದಪ್ಪಿಕೊಂಡೆ.
“ಅಮ್ಮಾ ಕಮಾನ್…..” ಎಂದ ನೇಹಾಳ ಕಣ್ಣುಗಳೂ ಹನಿಗೂಡಿತ್ತಾದರೂ, ಈಗವಳು ಈ ನೆಲದ ಧೈರ್ಯವನ್ನು ಒಗ್ಗೂಡಿಸಿಕೊಂಡಿದ್ದಳು.
ಮೂರು ತಿಂಗಳ ಬಾಣಂತಿಗೆ ಆಸರೆ ಬೇಕು ಎಂದರೆ ಅಲ್ಲಿನವರು ನಕ್ಕಾರು. ಆದರೂ ನಾನು ಒಳಗೊಳಗೇ ಮುಸುಮುಸು ಎಂದಿದ್ದೆ. ಯಾವ ಚಿಂತೆಯಿಲ್ಲದ ಮುದ್ದು ಮೊಮ್ಮಗ ಬೊಚ್ಚು ಬಾಯಲ್ಲಿ ವಿಶ್ವವನ್ನೇ ಮರುಳು ಮಾಡುವಷ್ಟು ಚಂದವಾಗಿ ನಗುತ್ತಿದ್ದ. ಆ ಬೊಚ್ಚು ನಗೆಯಲ್ಲಿ ನೆರಳಂತೆ ನೆನಪಾಗಿ ಹಿಂಬಾಲಿಸಿದ್ದ ಅಜ್ಜಿಯೂ ಕಂಡಳು. `ಗೆದ್ದೆ ಬಿಡು,’ ಎಂದಂತಾದಾಗ ಹೃದಯ ಹಗುರವಾದಂತಾಗಿ, `ಗೆಲ್ಲಿಸಿದ್ದು ನೀನೇ….’ ಎಂದುಕೊಂಡೆ. ಅಗಲುವ ನೋವನ್ನು ಹಿಂದಿಕ್ಕಿ, ಮಗಳ ಕಣ್ಣೊರೆಸಿ ಟ್ಯಾಕ್ಸಿಯೇರಿದೆ, ಕೈಬೀಸುತ್ತಾ ಕಣ್ಣೊರೆಸಿಕೊಂಡೆ…!!





