ರಶ್ಮಿಕಾ ಮಂದಣ್ಣ ಇತ್ತೀಚೆಗೆ ಫಿಲ್ಮಿ ಇವೆಂಟ್ಸ್ ಹಾಗೂ ಪಾರ್ಟಿಗಳಿಗೆ ಕೇವಲ ಸೀರೆ ಉಟ್ಟುಕೊಂಡೇ ಮಿಂಚುತ್ತಿರುತ್ತಾಳೆ! ಏಕೆಂದರೆ ಇತ್ತೀಚೆಗೆ FB, ಇನ್ ಸ್ಟಾಗ್ರಾಂಗಳಲ್ಲಿ ಇವಳ ಸೀರೆಯ ಲುಕ್ಸ್ ಎಲ್ಲರನ್ನೂ ಹೆಚ್ಚು ಆಕರ್ಷಿಸುತ್ತಿದೆ. ಶಿಫಾನ್, ಕಾಟನ್ ಪ್ರಿಂಟೆಡ್, ಬೆನಾರಸ್ ಸಿಲ್ಕ್, ಕಾಂಜೀವರಂ ಸೀರೆಗಳಲ್ಲಿ ರಶ್ಮಿಕಾ ಬಲು ಸ್ಟೈಲಿಶ್ ಲುಕ್ಸ್ ನಲ್ಲಿ ಕಂಡುಬರುತ್ತಿದ್ದಾಳೆ. ಈ ಲುಕ್ಸ್ ಹಿಂದೆ ಒಂದು ವಿಶೇಷ ಸಮಾಚಾರವಿದೆ, ಅದೇ ಅವಳ ಫಿಗರ್! ಯಾರ ಫಿಗರ್ ಪರ್ಫೆಕ್ಟ್ ಇದೆಯೋ, ಅಂಥವರು ಎಂಥ ಮಾಡ್ ಡ್ರೆಸ್ ಧರಿಸಿದರೂ, ಅದು ಸೀರೆ ಮುಂದೆ ಏನೇನೂ ಅಲ್ಲ! ನೀವು ಏಕೆ ರಶ್ಮಿಕಾ ತರಹ ಫಿಗರ್ ಮೇಂಟೇನ್ ಮಾಡಿ, ಸೀರೆ ಲುಕ್ಸ್ ನಿಮ್ಮದಾಗಿಸಿಕೊಳ್ಳಬಾರದು.

ಗಂಡಸರ ದುನಿಯಾದಲ್ಲಿ ಗೋಲೂಳ ಹಂಗಾಮ!
`ಮಿರ್ಜಾಪುರ್’ ಚಿತ್ರದಲ್ಲಿ ಶ್ವೇತಾ ತ್ರಿಪಾಠಿ ನಿಭಾಯಿಸಿದ ಗೋಲೂ ಪಾತ್ರ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿದೆ. 39ರ ಶ್ವೇತಾ DD ಕಾಲದಿಂದ ಡಿಸ್ನಿವರೆಗೂ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಳೆ. ಆದರೆ ಈಕೆಗೆ `ಮಿರ್ಜಾಪರ್’ ಚಿತ್ರದಿಂದ ಉತ್ತಮ ಐಡೆಂಟಿಟಿ ಸಿಕ್ಕಿತು. ಹೊಡಿ ಕೊಚ್ಚು ಕೊಲ್ಲು ಎಂಬುದೇ ಮೂಲಮಂತ್ರವಾದ ಈ ಸೀರೀಸ್ ನಲ್ಲಿ ಗೋಲೂ ಗನ್ನು, ಲಾಂಗ್ ಹಿಡಿದು ಧಡಾಧಡ್ ಗಂಡಸರ ರುಂಡಮುಂಡಗಳನ್ನು ಚೆಂಡಾಡುತ್ತಾಳೆ. ಆದರೆ ಈ ಸೀರೀಸ್ ಇಂದಿನ ಯುವಜನತೆಗೆ ಏನನ್ನು ಕಲಿಸುತ್ತದೆ ಎಂದು ಆ ನಿರ್ದೇಶಕರೇ ಹೇಳಬೇಕಷ್ಟೆ. ಆದರೂ ಇದು ಶ್ವೇತಾಳ ಪಾಲಿಗೆ ಬಂಪರ್ ಚಾನ್ಸ್ ಒದಗಿಸಿದೆ. ಇದರ ಮುಂದಿನ ಭಾಗಗಳಲ್ಲಿ ಇವಳ ಇನ್ನಾವ ಭದ್ರಕಾಳಿಯ ರೂಪ ಕಾದಿದೆಯೋ….?

ಅವಾರ್ಡ್ಸ್ ಇದೀಗ ಬಾರ್ಟರ್ ನಲ್ಲಿ ಲಭ್ಯ!
ಬಾಲಿವುಡ್ ನ ಅವಾರ್ಡ್ ಶೋಗಳು ಸದಾ ಸಂಶಯದ ಸುಳಿಯಲ್ಲಿ ತೇಲಾಡುತ್ತವೆ. ಇದಕ್ಕೆ ಸಂಬಂಧಿಸಿದ ವಿವಾದಗಳು ಒಂದೇ ಎರಡೇ? ಈ ಕಾರಣದಿಂದ ಈ ಶೋಗೆ ಹಲವು ತಾರೆಯರು ಹಾಜರಾಗುವುದೇ ಇಲ್ಲ. ಇದರ ಕುರಿತಾಗಿ ಇತ್ತೀಚೆಗೆ ಒಂದು ಪಾಡ್‌ಕಾಸ್ಟ್ ನಲ್ಲಿ ನಟ ಇಮ್ರಾನ್ ಹಾಶ್ಮಿ ಹೇಳಿದ್ದೆಂದರೆ, ಆತನೂ ಸಹ ಹಿಂದೆಲ್ಲ ಈ ಶೋಸ್ ನಲ್ಲಿ ಭಾಗವಹಿಸುತ್ತಿದ್ದನಂತೆ. ನಂತರ ಗೊತ್ತಾಗಿದ್ದೆಂದರೆ, ಯಾರು ಇಲ್ಲಿನ ವೇದಿಕೆಯಲ್ಲಿ ಬಂದು ಸೊಂಟ ಬಳುಕಿಸಿ `ಜೀ ಹುಜೂರ್’ ಅಂತಾರೋ ಅವರಿಗೆ ಮಾತ್ರ ಅವಾರ್ಡ್ಸ್ ಕಟ್ಟಿಟ್ಟ ಬುತ್ತಿ ಅಂತ ಗೊತ್ತಾಯಿತಂತೆ! ಅಂದ್ರೆ ಅವಾರ್ಡ್ಸ್ ನಿಮ್ಮ ಪ್ರತಿಭೆಗೆ ಬದಲು ಬಾರ್ಟರ್ ಪ್ರಕಾರ ಸಿಗಲಿದೆ. ಈ ಮಾತೇನೋ ಸರಿ, ಆದರೆ ಇಂಥ ಶೋಸ್ ನಲ್ಲಿ ಪಾಲ್ಗೊಳ್ಳದಿದ್ದರೆ ಇಮ್ರಾನ್, ಇತರರ ಮುಂದೆ ನೀನು ಹಿಂದಕ್ಕೆ ಸರಿದು, ಲೈಮ್ ಲೈಟ್ ನಿಂದ ವಂಚಿತರಾಗುತ್ತೀಯ ಅಂತಾರೆ ಹಿತೈಷಿಗಳು.

ಅತುಲ್ಯ ಭಾರತದ ಅಮೂಲ್ಯ ನಿಧಿಗಳು
DD ತನ್ನ ಮನರಂಜನಾತ್ಮಕ, ಜ್ಞಾನವರ್ಧಕ ಕಾರ್ಯಕ್ರಮಗಳಿಂದಾಗಿ ಹಿಂದಿನಿಂದಲೂ ಖ್ಯಾತಿ ಗಳಿಸಿದೆ. ಇದೇ ಸರಣಿಯಲ್ಲಿ DD ರಾಷ್ಟ್ರೀಯ ಮಟ್ಟದಲ್ಲಿ `ಅತುಲ್ಯ ಭಾರತ್ ಕೀ ಅಮೂಲ್ಯ ನಿದಿಯಾ’ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಯಾವ ಉತ್ಪನ್ನಗಳು ಭಾರತದ ವಿವಿಧ ರಾಜ್ಯಗಳಲ್ಲಿ ಅಂದ್ರೆ ಜ್ಯಾಗ್ರಫಿಕ್ ಇಂಡಿಕೇಶನ್ ಟ್ಯಾಗ್ಸ್ ಗಳಿಸಿವೆಯೋ ಅಂಥವುಗಳ ಮೇಲೆ ಕೇಂದ್ರೀಕೃತ ಗೊಂಡಿರುತ್ತದೆ. ಇಂಥ ಟ್ಯಾಗ್ ವುಳ್ಳ ಉತ್ಪನ್ನಗಳ ಸಂಪೂರ್ಣ ಮಾಹಿತಿ ನೀಡುವ ವಿಭಿನ್ನ ರಾಜ್ಯಗಳ ವಿಶೇಷಜ್ಞರು, ರೈತರು, ಉತ್ಪಾದಕರು ಈ ಶೋನಲ್ಲಿ ಶಾಮೀಲಾಗುತ್ತಾರೆ. ಈ ಶೋನ ಮೂಲ ಉದ್ದೇಶ ಈ ವಿಶಿಷ್ಟ ಉತ್ಪನ್ನಗಳ ಕಥೆ ತಿಳಿಸುವುದು ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ರೈತರು, ಕುಶಲಕರ್ಮಿಗಳ ಪರಿಶ್ರಮ, ಸಮರ್ಪಣಾ ಮನೋಭಾವಗಳನ್ನೂ ಆದರಿಸಲಾಗುತ್ತದೆ. ಅವರ ಕೈಚಳಕದಿಂದ ಇಂಥ ಉತ್ಪನ್ನಗಳನ್ನು ನಾವು ವಿಶ್ವದ ಮೂಲೆ ಮೂಲೆಗೆ ರಫ್ತು ಮಾಡುವಂತಾಗಿದೆ! ಈ ಕಾರ್ಯಕ್ರಮವನ್ನು `ಕ್ಯೂಂಕಿ ಸಾಸ್ ಭೀ ಕಭೀ ಬಹೂ ಥಿ’ ಖ್ಯಾತಿಯ ನಟ ಅಮನ್ ವರ್ಮ ಪ್ರಸ್ತುತಪಡಿಸುತ್ತಾರೆ.

ದೆವ್ವದ ಅವತಾರದಲ್ಲಿ ಊರ್ವಶಿ
ಏನೇ ಆಗಲಿ ಬಾಲಿವುಡ್ ನಲ್ಲಿ ಉಳಿಯಲೇಬೇಕು ಎಂದು ಹಠ ತೊಟ್ಟಿರುವ ಊರ್ವಶಿ ರೌತೇಲಾ, ಇದೀಗ ರೊಮ್ಯಾಂಟಿಕ್ ಹಾರರ್ `ಕುಸೂರ್’ ಚಿತ್ರದಲ್ಲಿ ಆಫತಾಬ್ ಶಿವದಾಸನಿ ಜೊತೆ ಕಾಣಿಸಲಿದ್ದಾಳೆ. ಮೊದಲೇ ಹಾರರ್ ಚಿತ್ರ, ಅದರಲ್ಲಿ ರೊಮಾನ್ಸ್ ಬೆರೆತು…. ಚಿತ್ರಾನ್ನ ಆಗದಿದ್ದರೆ ಸರಿ! ಇಂಥದ್ದರಲ್ಲಿ ಊರ್ವಶಿ ಎಂಥ ಪಾತ್ರದಲ್ಲಿ ನಿಮ್ಮ ಮುಂದೆ ಧುತ್ತೆಂದು ಬಂದಿಳಿಯಬಹುದೋ ನೀವೇ ಊಹಿಸಿಕೊಳ್ಳಿ. 2019ರ ನಂತರ ಅಫತಾಬ್ ಸಹ ಅತಿ ಉತ್ಸಾಹದಿಂದ ಈ ಚಿತ್ರ ಗೆಲ್ಲಿಸಿಕೊಡು ನಿಟ್ಟಿನಲ್ಲಿ ದುಡಿಯುತ್ತಿದ್ದಾನೆ. ಊರ್ವಶಿ ಸಹ ಈ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಂಬಿಕೆ ಇರಿಸಿಕೊಂಡಿದ್ದಾಳೆ. ಒಂದು ಕಡೆ ಇವರ ಬೇಳೆ ಬೇಯಲಿಲ್ಲವೆಂದರೆ, ಇನ್ನೊಂದು ಕಡೆ ಬೇಯಿಸಿಕೊಳ್ಳಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ, ಏನಂತೀರಿ?

OTTಯ ಅಚ್ಚುಮೆಚ್ಚಿನ ಎಹಸಾಸ್
ಎಹಸಾಸ್ ಚನ್ನಾಳನ್ನು ನೀವು `ಕೋಟಾ ಫ್ಯಾಕ್ಟರಿ’ ಚಿತ್ರದಲ್ಲಿ ಗಮನಿಸಿರಬಹುದು. ತನ್ನ ಅತಿಯಾದ ಬೋಲ್ಡ್ ನೆಸ್ ಹಾಗೂ ಓವರ್ ಆ್ಯಕ್ಟಿಂಗ್ ಗೆ ಖ್ಯಾತಳಾದ ಈಕೆ, ಖ್ಯಾತ ಪ್ರೊಡಕ್ಷನ್ ಕಂಪನಿಯ ಅಚ್ಚುಮೆಚ್ಚಿನ ನಟಿ ಎನಿಸಿದ್ದಾಳೆ. ಇದೇ ತಂಡದ ನಿರ್ಮಾಣಗಳಾದ `ಹಾಸ್ಟೆಲ್ ಡೇಸ್, ಗರ್ಲ್ಸ್ ಹಾಸ್ಟೆಲ್’ ಚಿತ್ರಗಳಲ್ಲಿ ಎಹಸಾಸ್ ಳ ನಟನೆಯನ್ನು ಇಂದಿನ ಆಧುನಿಕ ಯುವ ನಿರ್ದೇಶಕರು ಬಲು ಪಸಂದಾಗಿಸಿಕೊಂಡಿದ್ದರು. ಸುದ್ದಿಗಾರರ ಪ್ರಕಾರ, ಇದೀಗ ಬಿಗ್ ಪ್ರೊಡಕ್ಷನ್ ಹೌಸ್ ಗಳು ಸಹ ಎಹಸಾಸ್ ಳನ್ನೇ ಹಾಕಿಕೊಂಡು ಚಿತ್ರ ಮಾಡಬೇಕೆಂದು ಮುನ್ನುಗ್ಗುತ್ತಿದ್ದಾರಂತೆ. ಅಂತೂ ಎಹಸಾಸ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾಳೆ!

“ಕಲಿಯಲು ನಾವು ತಯಾರಿಲ್ಲ!” ಖಿಲಾಡಿ ಕುಮಾರ್
ಬಹಳ ದಿನಗಳಿಂದ ಸತತ ಫ್ಲಾಪ್ ಚಿತ್ರಗಳನ್ನೇ ನೀಡುತ್ತಿರುವ ಖಿಲಾಡಿ ಕುಮಾರ್ ಅಕ್ಷಯ್, ತನ್ನ ಫ್ಲಾಪ್ ಬಯೋಪಿಕ್ಸ್ ಹಾಗೂ ಇನ್ನಿತರ ಚಿತ್ರಗಳಿಂದ ಏನನ್ನೂ ಕಲಿಯಲು ಶತಾಯಗತಾಯ ತಯಾರಿಲ್ಲ. `ಬಡೇ ಮಿಯಾ ಛೋಟೆ ಮಿಯಾ’ ಚಿತ್ರದಿಂದ ನಿರ್ಮಾಪಕ ವಾಸು ಭಗ್ನಾನಿಯನ್ನು ಅಖಂಡ ಸಾಲಕ್ಕೆ ಸಿಲುಕಿಸಿದ ಮೇಲೂ ಈ ಖಿಲಾಡಿಗೆ ಪ್ರೇಕ್ಷಕರ ಮೂಡ್ ಅರ್ಥ ಆಗುತ್ತಿಲ್ಲ. ಈತನ ಮುಂಬರಲಿರುವ `ಸರ್ ಫಿರಾ’ ಚಿತ್ರ, ಸೂರ್ಯ ಹೀರೋ ಆಗಿದ್ದ `ಸೂರಾರೈ ಪೋಟ್ರು’ ತಮಿಳಿನ ಹಿಟ್ ಚಿತ್ರದ ರೀಮೇಕ್, ಪರೇಶ್ ರಾವ್ ರಂಥ ಘಟಾನುಘಟಿ ಕಾಮಿಡಿಯನ್ ಜೊತೆ ಅಕ್ಷಯ್ ನಟಿಸಿದ್ದಾನೆ. ಯಾವ ಯಶಸ್ವಿ ದಕ್ಷಿಣದ ಚಿತ್ರದ ಡಬ್ಬಿಂಗ್ ನ್ನು ಉತ್ತರ ಭಾರತದವರು ಈಗಾಗಲೇ OTTಯಲ್ಲಿ ನೋಡಿ ಆಗಿರುತ್ತದೋ, ಅಂಥದ್ದನ್ನೇ ಮತ್ತೊಮ್ಮೆ ಹಿಂದಿಯಲ್ಲಿ ನೋಡಲು ಏಕೆ ಥಿಯೇಟರ್ ಗೆ ಬರುತ್ತಾರೆ? ಇದೇಕೋ ಈ ಖಿಲಾಡಿ ತಲೆಗೆ ಹೋಗುತ್ತಲೇ ಇಲ್ಲ!

ಅಂತೂ ಇಂತೂ ಚಂದನ್ ಈಸ್ ಶೈನಿಂಗ್!
OTTಯ ವೀಕ್ಷಕರಿಗೆ `ಪಂಚಾಯತ್’ ಧಾರಾವಾಹಿ ಮಾಡಿರುವ ಮೋಡಿ ಅಂತಿಂಥದ್ದಲ್ಲ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರ ಪ್ರೇಕ್ಷಕರಿಗೆ ಅಚ್ಚುಮೆಚ್ಚು! ಈ ಸೀರೀಸ್ ನಲ್ಲಿ ರಘುವೀರ್ ಯಾದವ್, ನೀನಾ ಗುಪ್ತಾ, ಜಿತೇಂದ್ರ ಕುಮಾರ್ ನಂತರ ಎಲ್ಲರೂ ಅತಿ ಮೆಚ್ಚಿಕೊಂಡಿರುವ ಪಾತ್ರ ಅಂದ್ರೆ ವಿಕಾಸ್ ನದು, ಅಂದರೆ ಇವನೇ ಚಂದನ್ ರಾಯ್! ಇದೀಗ ಚಂದನ್ ಪಟ್ಟ ಪರಿಶ್ರಮ ಸಾರ್ಥಕವಾಗಿ, ಅವನಿಗೆ ಬಾಲಿವುಡ್ ನಿಂದಲೂ ಕರೆ ಬರತೊಡಗಿದೆ! ಹಿಂದೆಯೂ ಆತ ಹಿರಿತೆರೆಯಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚಿದ್ದುಂಟು. ಸಂಜೀವ್ ರ ಈತನನ್ನು ವಿಶೇಷವಾಗಿ ತಮ್ಮ ಮುಂದಿನ ಚಿತ್ರಕ್ಕಾಗಿ ಸೈನ್ ಮಾಡಿಸಿದ್ದಾರೆ. ಅಂತೂ ಇಂತೂ ಚಂದನ್ ಈಸ್ ಶೈನಿಂಗ್ ನೌ!





