ಭಾರತದ ಭೇಟಿ ಸಂದರ್ಭ ಜಾಗತಿಕ ಪುಟ್ಬಾಲ್ ದಂತಕತೆ ಲಿಯೊನೆಲ್ ಮೆಸ್ಸಿ ಗುಜರಾತ್ನ ಜಾಮ್ನಗರದ ವನ್ಯಜೀವಿ ರಕ್ಷಣೆ, ಪುನರ್ವಸತಿ ಹಾಗೂ ಸಂರಕ್ಷಣೆ ಕೇಂದ್ರವಾದ ವಂತಾರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ವಂತಾರ ಸಂಸ್ಥಾಪಕ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ.
ಸನಾತನ ಧರ್ಮದ ಪ್ರಕಾರ ಆಶೀರ್ವಾದ ಪಡೆಯುವುದರ ಮೂಲಕ ಮೆಸ್ಸಿ ತಮ್ಮ ಭೇಟಿಯನ್ನು ಆರಂಭಿಸಿದರು. ಸಾಂಸ್ಕೃತಿಕ ಮೌಲ್ಯವನ್ನು ಪ್ರತಿಬಿಂಬಿಸುವಂಥ ಧಾರ್ಮಿಕ ಹಿಂದೂ ಆಚರಣೆಗಳಲ್ಲಿ ವಿದೇಶಿ ಆಟಗಾರರು ಭಾಗಿಯಾಗಿದ್ದರು.
ವಂತಾರಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ ಅನಂತ್ ಅಂಬಾನಿ ಅವರಿಗೆ ಸ್ಪ್ಯಾನಿಷ್ ನಲ್ಲಿ ಉತ್ತರಿಸಿದ ಮೆಸ್ಸಿ, “ವಂತಾರ ಏನು ಮಾಡುತ್ತಿದೆ ನಿಜವಾಗಿಯೂ ಸುಂದರವಾದಂಥದ್ದು. ಆ ಪ್ರಾಣಿಗಳಿಗಾಗಿ ಮಾಡುತ್ತಿರುವ ಕೆಲಸ, ಅವುಗಳು ಪಡೆದುಕೊಳ್ಳುವ ಕಾಳಜಿ, ಅವುಗಳ ಸಂರಕ್ಷಣೆ ಮತ್ತು ಅವುಗಳನ್ನು ನೋಡಿಕೊಳ್ಳುವುದು ಎಲ್ಲವೂ ಚಂದ. ನಿಜಕ್ಕೂ ಮೆಚ್ಚುಗೆ ಪಡೆಯುವಂಥದ್ದು. ನಾವು ಅದ್ಭುತ ಕ್ಷಣಗಳನ್ನು ಕಳೆದೆವು. ಈ ಅನುಭವ ನಮ್ಮ ಜೊತೆಗೆ ಉಳಿಯುತ್ತದೆ. ಈ ಅರ್ಥಪೂರ್ಣ ಕಾರ್ಯಕ್ಕೆ ಸ್ಫೂರ್ತಿ ನೀಡುವುದಕ್ಕೆ, ಬೆಂಬಲಿಸುವ ಸಲುವಾಗಿ ಖಂಡಿತಾ ಇಲ್ಲಿಗೆ ಮತ್ತೆ ನಾವು ಬರುತ್ತೇವೆ,” ಎಂದು ಹೇಳಿದರು.
ಈ ಭೇಟಿಯ ಕೊನೆಯಲ್ಲಿ ನಾರಿಯಲ್ ಉತ್ಸರ್ಗ್ ಹಾಗೂ ಮಟ್ಕಾ ಫೋಡ್ ಎಂಬ ಸಾಂಪ್ರದಾಯಿಕ ಆಚರಣೆಯಲ್ಲಿ ಮೆಸ್ಸಿ ಭಾಗವಹಿಸಿದರು. ಎಲ್ಲರ ಒಳಿತಿಗೆ ಹಾಗೂ ಶಾಂತಿಗಾಗಿ ಮಂತ್ರ ಪಠಣ ಮಾಡಲಾಯಿತು. ಮೆಸ್ಸಿ ಅವರು ಲಿಯೋ ಮೆಸ್ಸಿ ಫೌಂಡೇಷನ್ ಹೊಂದಿದ್ದು, ಸಾಮಾಜಿಕ ಕಾರ್ಯಗಳಿಗೆ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ವಿಶ್ವದಾದ್ಯಂತ ಕೆಲಸ ಮಾಡುತ್ತದೆ. ಅದಕ್ಕೆ ಹೊಂದಿಕೆ ಆಗುವ ರೀತಿಯಲ್ಲಿ ವಂತಾರದ ಉದ್ದೇಶ ಇದೆ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮೆಸ್ಸಿ ಜೊತೆ ಅವರ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುಯೆರೆಜ್ ಮತ್ತು ರೋಡ್ರಿಗೋ ಡಿ ಪಾಲ್ ಸಹ ಇದ್ದರು. ಸಂಗೀತದೊಂದಿಗೆ ಎಲ್ಲರಿಗೂ ಭರ್ಜರಿ ಸ್ವಾಗತ ಕೋರಲಾಯಿತು. ದೇವಸ್ಥಾನದಲ್ಲಿ ಮಹಾ ಆರತಿ ವೇಳೆ ಮೆಸ್ಸಿ ಪಾಲ್ಗೊಂಡರು. ಅಂಬೆ ಮಾತಾ ಪೂಜೆ, ಗಣೇಶನ ಪೂಜೆ, ಹನುಮಂತನ ಪೂಜೆ ಮತ್ತು ಶಿವನ ಅಭಿಷೇಕಗಳಲ್ಲಿಯೂ ಭಾಗಿಯಾದರು.





