ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡರ ಪ್ರತಿಮೆ, ಗುಜರಾತಿನ ಕೇವಾಡಿಯಾದಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಾಬಾಯಿ ಪಟೇಲರ 182 ಮೀಟರ್ ಎತ್ತರದ “ಏಕತಾ ಪ್ರತಿಮೆ”ಯ ಮುಖ್ಯಶಿಲ್ಪಿ, ಶತಾಯುಷಿ ರಾಮ್ ಸುತಾರ್ (100) ಬುಧವಾರ ರಾತ್ರಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ನೋಯ್ಡಾದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅವರ ಪುತ್ರ ಅನಿಲ್ ಸುತಾರ್ ಗುರುವಾರ ತಿಳಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ, ಸಂಸತ್ತಿನ ಆವರಣದಲ್ಲಿ ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವ ಮಹಾತ್ಮಗಾಂಧಿ ಪ್ರತಿಮೆ, ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ರಾಷ್ಟ್ರದ ಅನೇಕ ನಾಯಕರ ಪ್ರತಿಮೆಗಳು, ದೇಶ, ವಿದೇಶಗಳಲ್ಲಿ ಪ್ರತಿಷ್ಠಾಪಿಸಿರುವ ಹಲವಾರು ನಾಯಕರ ಪ್ರತಿಗಳ ಶಿಲ್ಪಿಯೂ ಅವರಾಗಿದ್ದರು. ರಾಮ್ ಸುತಾರ್ ಅವರ ಸುಮಾರು 350 ಪ್ರತಿಮೆಗಳು ದೇಶದ 150ಕ್ಕೂ ಹೆಚ್ಚು ನಗರಗಳಲ್ಲಿ ಸ್ಥಾಪಿತವಾಗಿವೆ.
ರಾಮ್ ಸುತಾರ್ ತಮ್ಮ ಕಲಾ ನೈಪಣ್ಯದಿಂದಲೇ “ಸ್ಟ್ಯಾಚು ಮ್ಯಾನ್” ಎಂದು ಗುರುತಿಸಿಕೊಂಡಿದ್ದರು.
ರಾಮ್ ಸುತಾರ್ ಅವರು ಶಿಲ್ಪಕಲೆಗೆ ನೀಡಿದ ಗಣನೀಯ ಕೊಡುಗೆಗಾಗಿ 1999ರಲ್ಲಿ ಪದ್ಮಶ್ರೀ, 2016ರಲ್ಲಿ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿಗ ಗೌರವಗಳು ಸಂದಿವೆ. ಮಹಾರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಮಹಾರಾಷ್ಟ್ರ ಭೂಷಣ” ಪ್ರಶಸ್ತಿಯೂ ಅವರಿಗೆ ಲಭಿಸಿತ್ತು.
ರಾಮ್ ಸುತಾರ್ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.





