– ರಾಘವೇಂದ್ರ ಅಡಿಗ ಎಚ್ಚೆನ್.
“ರಂಗಭೂಮಿಗೆ ಗೌರವ ಎನ್ನುವ ಕಾರಣಕ್ಕೆ ನಾನು ರಾಜ್ಯಸಭೆ ಸದಸ್ಯೆಯಾಗಿದ್ದೆ ನಾನು ರಾಜಕಾರಣಿಯಲ್ಲ, ನಾನೊಬ್ಬ ಕಲಾವಿದೆ, ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಇಂದೂ ಯಾರಿಗಾದರೂ ಸಹಾಯವಾಗುತ್ತದೆ ಎಂದರೆ ಹೋಗುತ್ತೇನೆ.” ರಂಗಕರ್ಮಿ, ಗಾಯಕಿಯೂ ಆಗಿರುವ ಬಿ, ಜಯಶ್ರೀ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ‘ಮನೆಯಂಗಳದಲ್ಲಿ ಮಾತುಕತೆ’ ಯಲ್ಲಿ ಅವರು ತಮ್ಮ ಮನದಾಳದ ಮಾತನ್ನಾಡಿದರು, ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಅವರು ಭಾಗವಹಿಸಿದ್ದರು.
ಹಿಂದಿ ಕಲಿತದ್ದೇಕೆ?: : ”ಬಾಲ್ಯದಲ್ಲಿ ಓದುವ ಮನಸ್ಸಾಗಿ ನಾಟಕ ತೊರೆದು ತಾತ ಗುಬ್ಬಿ ವೀರಣ್ಣನವರ ಅನುಮತಿ ಪಡೆದು ಶಿಕ್ಷಣ ಮುಗಿಸಿದೆ. ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ (ಎನ್‌ಎಸ್‌ಡಿ) ಸೇರಿಕೊಂಡೆ. ಆದರೆ, ಹಿಂದಿ ಬರುತ್ತಿರಲಿಲ್ಲ. ಓದಿದ್ದರೂ ಅಷ್ಟು ಚೆನ್ನಾಗಿ ಇಂಗ್ಲಿಷ್ ಬರುತ್ತಿರಲಿಲ್ಲ. ಹಿಂದಿಯಲ್ಲಿ ಮಾತನಾಡುತ್ತಾ ಇಬ್ರಾಹಿಂ ಅಲ್ಯಾಜಿ ಅವರನ್ನುಸ್ತ್ರೀಲಿಂಗದಲ್ಲಿ ಸಂಬೋಧಿಸಿದ್ದೆ. ಮುಂದೆ ಹೀಗಾಗಬಾರದೆಂಬ ಉದ್ದೇಶದಿಂದ ಸುಮಾರು ಒಂದೂವರೆ ತಿಂಗಳು ಕೇವಲ ಮೂಕಾಭಿನಯ ಮಾಡಿದೆ. ನಂತರ ದಿನಪತ್ರಿಕೆ ಓದುವ ಮೂಲಕ ಹಿಂದಿ ಕಲಿತೆ,” ಎಂದು ಜಯಶ್ರೀ ಹೇಳಿದ್ದಾರೆ.

“ಎನ್‌ಎಸ್‌ಡಿಯಲ್ಲಿ ನಾನು ಮತ್ತು ಜ್ಯೋತಿ ದಕ್ಷಿಣ ಭಾಗದವರಾಗಿದ್ದರಿಂದ, ಅಲ್ಲಿ ಪ್ರವೇಶ ಪಡೆದು ಮೂರು ವರ್ಷ ಕಳೆದರೂ ಪಾತ್ರಗಳು ದೊರೆಯುತ್ತಿರಲಿಲ್ಲ. ಇದರಿಂದ ಕಲಿಯುವುದು ಹೇಗೆಂದು ಕೋಪಗೊಂಡೆವು. ಆದರೆ, ಅಲ್ಯಾಜಿ ಬಳಿ ದೂರು ಹೇಳುವುದು ಸಾಧ್ಯವಾಗದ ಮಾತು ಎಂಬುದು ಗೊತ್ತಿತ್ತು. ಹೀಗಾಗಿ, ಅವರ ಕಿವಿಗೆ ಬೀಳುವಂತೆ ಬೇಸರ ಮತ್ತು ಕೋಪದ ಮಾತುಗಳನ್ನಾಡುತ್ತಿದ್ದೆವು. ಅದು ಅಲ್ಯಾಜಿ ಅವರಿಗೆ ತಿಳಿಯಿತು. ಒಂದು ದಿನ ನಾಟಕದ ಅಭ್ಯಾಸ ಮುಗಿದ ನಂತರ ಅಲ್ಯಾಜಿ ಅವರು ನಮ್ಮನ್ನು ಕರೆದು ಏನು ಕಲಿತಿದ್ದೀರ ನಟಿಸಿ ಎಂದರು. ಆಗ ಸ್ವಲ್ಪವೂ ತೊದಲದೆ ನಟಿಸಿದೆವು. ಆಗ ಅಲಾಜಿ ನಮ್ಮನ್ನು ತಬ್ಬಿಕೊಂಡು ನೀವು ಗೆದ್ದಿದ್ದೀರಿ ಎಂದು ಬೆನ್ನು ತಟ್ಟಿದರು. ಅಂದುನಮಗಾದ ಖುಷಿ ಯಾವುದೇ ಬಿರುದು, ಪ್ರಶಸ್ತಿ ದೊರೆತರೂ ಸಿಗದು,” ಎಂದರು.

ಪಕ್ಷಾತೀತವಾಗಿ ಅನುದಾನ ಬಳಕೆ: “ ರಾಜ್ಯಸಭೆ ಸದಸ್ಯೆಯಾಗಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು, ಮನಸ್ಸಿಲ್ಲದಿದ್ದರೆ ಏನೂ ಸಾಧ್ಯವಿಲ್ಲ ಎಂಬುದು ತಿಳಿಯಿತು. ಅಲ್ಲಿ ಯಾರೂ ಆತ್ಮೀ ಯರಲ್ಲ, ಯಾರೂಶತ್ರುಗಳಲ್ಲ ನಾನು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರಿಂದ ನನಗೆ ನಿರ್ದಿಷ್ಟ ಕ್ಷೇತ್ರವಿರಲಿಲ್ಲ. ಇಡೀ ಭಾರತ ನನ್ನದಾಗಿತ್ತು. ಯಾವುದೇ ಬೇಧವಿಲ್ಲದೆ, ಪಕ್ಷಾತೀತವಾಗಿ ಎಲ್ಲರ ಒಳಿತಾಗಿ ಅನುದಾನ ಬಳಸಿದ್ದೇನೆ. ರಸ್ತೆ, ಚರಂಡಿ, ಸಮುದಾಯ ಭವನ, ದೇವಸ್ಥಾನಗಳಿಗೆ ಅನುದಾನ ಕೊಡುತ್ತಿರಲಿಲ್ಲ, ಶಾಲೆ, ಆಸ್ಪತ್ರೆ, ಮಹಿಳೆಯರು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅನುದಾನ ನೀಡಿದ್ದೇನೆ,” ಎಂದು ಡಾ. ಬಿ. ಜಯಶ್ರೀ ಹೇಳಿದರು.

ಮೊಬೈಲ್ ನಿಂದ ಸಂಬಂಧಗಳು ಕಳೆದುಹೋಗಿದೆ: “ಪ್ರಸ್ತುತ ಕಾಲಘಟ್ಟದಲ್ಲಿ ಜೀವಂತಿಕೆ ಉಳಿಸಿಕೊಂಡಿರುವ ಕಲೆ ಎಂದರೆ ರಂಗಭೂಮಿ ಒಂದೇ. ಅದರ ಮೇಲೆ ತಂತ್ರಜ್ಞಾನಗಳ ಪ್ರಯೋಗ ಮಾಡಬೇಡಿ. ಬದಲಿಗೆ ನಿಮ್ಮ ಕ್ರಿಯಾಶೀಲತೆ ಬಳಸಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಾಟಕಗಳಲ್ಲಿ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ಆದರೆ ಪ್ರಯೋಗವೇ ಒಂದಿರುತ್ತದೆ, ಅಲ್ಲಿ ತೋರಿಸುವುದೇ ಒಂದಿರುತ್ತದೆ. ಹೀಗೆ ತಂತ್ರಜ್ಞಾನದ ಮೊರೆ ಹೋಗಿ ನಿಮ್ಮಲ್ಲಿರುವ ಕಲೆ ಮತ್ತು ಶಕ್ತಿಯನ್ನು ಸಾಯಿಸಬೇಡಿ ಎಂದು ಹೇಳಿದರೆ ಇಂದಿನವರು ಕೇಳುವುದಿಲ್ಲ. ಹಾಗಾಗಿ ಯುವಜನರಿಗೆ ಬುದ್ಧಿ ಹೇಳುವ ಸ್ಥಿತಿಯಲ್ಲಿ ನಾವಿಲ್ಲ, ಅದನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಅವರೂ ಇಲ್ಲ. ಈಗ ಏನಿದ್ದರೂ ಮೊಬೈಲ್ ಪ್ರಪಂಚದಲ್ಲಿ ಸಾಕಷ್ಟು ತಲ್ಲೀನರಾಗಿರುವ ಅವರಿಗೆ ಎಲ್ಲವೂ ಮೊಬೈಲ್ ಆಗಿದ್ದು, ಸಂಬಂಧಗಳನ್ನು ಕಳೆದುಕೊಂಡಿದ್ದಾರೆ ” ಎಂದು ಜಯಶ್ರೀಯವರು ಅಭಿಪ್ರಾಯಪಟ್ಟರು.

ರಂಗಗೀತೆ ಹೃದಯಕ್ಕೆ ತಲುಪುತ್ತದೆ: “ಕಲ್ಪನಾಲೋಕದಲ್ಲಿ ಸುತ್ತುವುದು – ಅದು ಚಿತ್ರಗೀತೆ. ಆದರೆ ರಂಗಗೀತೆ ಹೃದಯಕ್ಕೆ ತಲುಪುವ ಗೀತೆ. ಹಾಗಾಗಿ ವೇದಿಕೆಯಲ್ಲಿ ಕೇವಲ ರಂಗ ಗೀತೆಗಳನ್ನು ಮಾತ್ರವೇ ಹಾಡುವುದು ” ಎಂದು ಜಯಶ್ರೀ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
‘ತಾತ ಗುಬ್ಬಿ ವೀರಣ್ಣ ಹೆಸರಿನಲ್ಲಿ ಎಲ್ಲೂ ಕೆಲಸ ಕೇಳಿಕೊಂಡು ಹೋಗಲಿಲ್ಲ, ಯಾವುದೇ ಕೆಲಸ ಮಾಡಿಲ್ಲ. ನಾನೇನಾದರೂ ತಪ್ಪು ಹೆಜ್ಜೆ ಇಟ್ಟರೆ ಅವರಿಗೆ ಕೆಟ್ಟ ಹೆಸರು ಬರುವುದು ಇಷ್ಟವಿರಲಿಲ್ಲ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವಾಗಲೂ ಗುಬ್ಬಿ ವೀರಣ್ಣ ಅವರ ಹೆಸರನ್ನು ಬಳಸಿಲ್ಲ’ ಎಂದ ಜಯಶ್ರೀಯವರು ರಂಗಭೂಮಿ ಎಂಬುದೇ ಕಣ್ಣಾಮುಚ್ಚೆ ಕಾಡೇಗೂಡೇ ಇದ್ದಂತೆ. ಹರಿಯುವ ನೀರು ಇದ್ದಂತೆ. ಆದರೆ, ಬಣ್ಣ, ಆಕಾರ ಇಲ್ಲ. ರಂಗದ ಮೇಲೆ ಬಣ್ಣ ಹಾಕಿದಾಗಲೇ ಕಾಣುವುದು. ಕಲಾವಿದರೆಲ್ಲರೂ ಕಣ್ಣಾಮುಚ್ಚೆ ಕಾಡೇಗೂಡೇ ಆಡುತ್ತಿದ್ದೆವು. ಇದೇ ನೆನಪಿನಲ್ಲಿ ಆತ್ಮಕತೆಗೆ ‘ಕಣ್ಣಾಮುಚ್ಚೆ ಕಾಡೇಗೂಡೇ ಹೆಸರಿಟ್ಟಿದ್ದೇನೆ’ ಎಂದು ತಿಳಿಸಿದರು. ‘ಇಷ್ಟವಾದ ಪಾತ್ರ ಹಾಗೂ ಹಾಡು ಯಾವುದು ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ರೀತಿ ಕೇಳಿದರೆ ಏನು ಹೇಳುವುದು? ದೇಹದಲ್ಲಿ ಯಾವ ಅಂಗ ಇಷ್ಟವಾಯಿತು ಎಂದು ಕೇಳಿದಂತೆ. ಎಲ್ಲ ಪಾತ್ರ, ಹಾಡು ಮುಖ್ಯ. ಎಲ್ಲದ್ದಕ್ಕೂ ಅದರದೇ ವ್ಯಕ್ತಿತ್ವ ಮತ್ತು ಬಣ್ಣ ಇರುತ್ತದೆ’ ಎಂದು ಸ್ಪಷ್ಟಪಡಿಸಿದರು.

ನಾನು ಕೈಕೂಸಾಗಿದ್ದ ವೇಳೆ ಅನಿವಾರ್ಯ ಕಾರಣಕ್ಕೆ ಅಮ್ಮ ಬಣ್ಣ ಹಚ್ಚಿದ್ದಳು. ಈ ಕಾರಣಕ್ಕಾಗಿಯೇ ನನ್ನಪ್ಪ ಗಲಾಟೆ ಮಾಡಿ ನನ್ನಮ್ಮನನ್ನು ಬಿಟ್ಟು ನೋದರು. ಆ ನಂತರ ಎದೆಗುಂದದೆ ನೋವುಗಳನ್ನು ನುಂಗಿಕೊಂಡು ನನ್ನನ್ನು ಬೆಳೆಸಿದಳು. ನನ್ನಮ್ಮನ ಆ ನೋವುಂಡ ಮನಸ್ಸೇ ನನ್ನ ಈ ಸಾಧನೆಗೆ ಕಾರಣ ಎಂದ ಜಯಶ್ರೀ ನಾನು ಗುಬ್ಬಿ ವೀರಣ್ಣನವರ ಮೊದ್ದು ಗಳು. ವೀರಣ್ಣನವರ ಮಗಳು ಜಿ.ವಿ.ಮಾಲ ನನ್ನ ತಾಯಿ, ನಾನು ಕೈಕೂಸಗಿದ್ದಾಗ ಒಂದು ಘಟನೆ ನಡೆಯುತ್ತದೆ. ನನ್ನ ದೊಡ್ಡಮ್ಮನವರು ಅಕ್ಕಮಹಾದೇವಿ ಪಾತ್ರ ಮಾಡುತ್ತಿದ್ದರು. ಆ ವೇಳೆ ಅವರು ದಡಾರದಿಂದ ಬಳಲುತ್ತಿದ್ದರು. ಅವರಿಗೆ ಪಾತ್ರದಲ್ಲಿ ಅಭಿನಯಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತ ಕಂಪನಿ ನಾಟಕ: ನಿಲ್ಲಿಸುವ ಹಾಗಿಲ್ಲ. ಆಗ
ನಮ್ಮಮ್ಮ ನನ್ನ ತಾತನ ಗೋಳು ನೋಡಿ ಈ ಪಾತ್ರದಲ್ಲಿ ಅಭಿನಯಿಸಲು ಮುಂದಾಗುತ್ತಾರೆ. ಈ ವೇಳೆ ತಾತ ನಿನಗೆ ಮದುವೆಯಾಗಿದೆ ಬಣ್ಣಹಚ್ಚುವುದು ಬೇಡ ಅನ್ನುತ್ತಾರೆ. ಆದರೆ ಎಂದೂ ಗುಬ್ಬಿ ನಾಟಕ ಕಂಪನಿಯ ಪ್ರದರ್ಶನ ನಿಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಾತ್ರ ಮಾಡಲು ಮುಂದಾಗುತ್ತಾರೆ. ಆಗ ನಮ್ಮಪ್ಪ ಬಣ್ಣಹಚ್ಚಿದರೆ ಶೂಟ್ ಮಾಡುತ್ತೇನೆ. ಎಂದು ಬೆದರಿಸುತ್ತಾರೆ. ಆದರೂ ಅವನ ಮಾತು ಕೇಳದೆ ಅಮ್ಮ ನಟಿಸುತ್ತಾರೆ. ಹೀಗಾಗಿ ನಮ್ಮಪ್ಪ ನಾನು ಚಿಕ್ಕವಳಿರುವಾಗಲೇ ನಮ್ಮನ್ನು ತೊರೆದರು. ಗುಬ್ಬಿ ನಾಟಕ ಕಂಪನಿ ನನ್ನನ್ನು ಬೆಳೆಸಿತು ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು.
ಮತ್ತೆ ಮುಂದುವರಿದು ಈ ಘಟನೆಯಾದ 12 ವರ್ಷದ ನಂತರ ನಮ್ಮಪ್ಪ ನನ್ನ ನೋಡಲು ಬಂದರು. ಗುಬ್ಬಿ ‘ದಶಾವತಾರ’ ನಾಟಕದಲ್ಲಿ ಅಭಿಯಿಸುತ್ತಿದ್ದ ವೇಳೆ ನನ್ನನ್ನು ನೋಡಲು ಬಂದರು. ಆ ವೇಳೆ ನಾನು ಅವರ ಮೇಲೆ ಪ್ರೀತಿ ವ್ಯಕ್ತವಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅಮ್ಮನ ಕಷ್ಟನೋಡಿ ಅವತ್ತೇ ನಾನು ಯಾರ ಮೇಲೂ ಅವಲಂಬಿತಳಾಗದೇ ನಮ್ಮ ಕಾಲು ಮೇಲೆ ನಾನು ನಿಲ್ಲಬೇಕು ಎಂದು ತೀರ್ಮಾನಿಸಿದೆ. ಹಲವು ಕಷ್ಟಗಳು ಬಂದರೂ ಅವುಗಳನ್ನು ಧೈರ್ಯದಿಂದ ಮೆಟ್ಟಿನಿಂತೆ ಎಂದರು.
ಈ ವೇಳೆ ಕನ್ನಡ ಮತ್ತು ಸಂಸತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದರು.





