ಸರಸ್ವತಿ*
ಹಾಲಿವುಡ್ ಸಿನಿಮಾ ಮಿಷನ್ ಸಾಂಟಾ ಇದೇ ಕ್ರಿಸ್ಮಸ್ ಗೆ ತೆರೆಗೆ ಬರ್ತಿದೆ. ಸಂಪೂರ್ಣ ಅನಿಮೇಷನ್ ನಿಂದ ಕೂಡಿರುವ ಈ ಚಿತ್ರದ ಬಗ್ಗೆ ಇದೀಗ ಇಂಟ್ರೆಸ್ಟಿಂಗ್ ವಿಷಯವೊಂದು ರಿವೀಲ್ ಆಗಿದೆ. ಮಿಷನ್ ಸಾಂಟಾ ಚಿತ್ರ ಕರ್ನಾಟಕ ಮತ್ತು ಭಾರತೀಯ ಅನಿಮೇಷನ್ ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಯಾಕೆಂದರೆ ಈ ಚಿತ್ರವು ಸಂಪೂರ್ಣವಾಗಿ ಭಾರತೀಯ ಅನಿಮೇಟರ್‌ಗಳಿಂದ ನಿರ್ಮಿಸಲ್ಪಟ್ಟಿದೆ. ರಾಜ್ಯ ಮತ್ತು ದೇಶದ ಪ್ರತಿಭೆಗಳ ವಿಶ್ವ ದರ್ಜೆಯ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ.
ಮಿಷನ್ ಸಾಂಟಾ ಸಿನಿಮಾದ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣ ಅನಿಮೇಷನ್ ಕೆಲಸವನ್ನು ಭಾರತದಲ್ಲಿ ಭಾರತೀಯ ಅನಿಮೇಷನ್ ಕಲಾವಿದರು ನಿರ್ವಹಿಸಿದ್ದಾರೆ.
ಮಿಷನ್ ಸಾಂಟಾ ಚಿತ್ರವನ್ನು ಜರ್ಮನಿಯ ಟೂನ್2ಟ್ಯಾಂಗೊ ಜೊತೆ ಸಹ-ನಿರ್ಮಾಣ ಮಾಡಲಾಗಿದೆ. ಜರ್ಮನಿಯಲ್ಲಿ ಮಾರ್ಕ್13 ಮತ್ತು ಆಸ್ಟ್ರೇಲಿಯಾದಲ್ಲಿ ಕಾಸ್ಮಿಕ್ ಡಿನೋ ಪೋಸ್ಟ್-ಪ್ರೊಡಕ್ಷನ್‌ನೊಂದಿಗೆ, ಅಂತರರಾಷ್ಟ್ರೀಯ ಸಹಯೋಗದ ಮೂಲಕ ಜಾಗತಿಕ ಅನಿಮೇಷನ್ ಪವರ್‌ಹೌಸ್ ಆಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸುತ್ತದೆ.
ಈ ಸಿನಿಮಾ ಭಾರತದ ಅನಿಮೇಷನ್ ಪರಿಸರ ವ್ಯವಸ್ಥೆಯು ಬೆಳೆಯುತ್ತಿರುವ ಪ್ರಬುದ್ಧತೆ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಭಾರತದ ಕರ್ನಾಟಕದ ಅನಿಮೇಷನ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಸ್ಟುಡಿಯೋ 56 ಅನಿಮೇಷನ್ ನ 150ಕ್ಕೂ ಹೆಚ್ಚು ಉನ್ನತ ಮಟ್ಟದ ಅನಿಮೇಷನ್ ಕಲಾವಿದರು ಬೆಂಗಳೂರಿನಿಂದ 20 ತಿಂಗಳ ಕಾಲ ಮಿಷನ್ ಸಾಂಟಾ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಹರೀಶ್ ಕೃಷ್ಣಮೂರ್ತಿ, ಅಶ್ವಿನ್ ನಾರಾಯಣ್, ಸಿ ಕಾರ್ತಿಕೇಯನ್, ರೋಷನ್ ಇಂಗೋಲ್, ಮನರಾಜ್ ಸಿಂಗ್, ಕುನಾಲ್ ದೀಪ್ ಮತ್ತು ಅಖಿಲ್ ಮಾಗೋತ್ರ ಸೇರಿದಂತೆ ಹಲವಾರು ಕನ್ನಡ ಪ್ರತಿಭೆಗಳು ಈ ಚಿತ್ರಕ್ಕೆ ದುಡಿದಿದ್ದಾರೆ.
ಚಿತ್ರದ ಮಹತ್ವದ ಬಗ್ಗೆ ಮಾತನಾಡಿದ ಬ್ರಾಡ್ ವಿಷನ್ ಇಂಡಿಯಾದ ನಿರ್ಮಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಗೌರಿ ಶ್ರೀರಾಮ್, “ಈ ಚಿತ್ರವು ಭಾರತೀಯ ಅನಿಮೇಷನ್ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿದೆ. ಹಾಗೂ ಕರ್ನಾಟಕದ ಹೆಮ್ಮೆಯಾಗಿದೆ. ಮಿಷನ್ ಸಾಂಟಾ ಈ
ಕ್ರಿಸ್‌ಮಸ್‌ನಲ್ಲಿ ತಮ್ಮ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯಲು ಬಯಸುವ ಭಾರತೀಯ ಕುಟುಂಬಗಳಿಗೆ ಡಿಸ್ನಿ ಮಟ್ಟದ ಕಥೆ ಹೇಳುವಿಕೆ ಅನುಭವ ನೀಡುತ್ತದೆ ” ಎಂದರು.





