– ರಾಘವೇಂದ್ರ ಅಡಿಗ ಎಚ್ಚೆನ್.
“ಕಷ್ಟದ ಸಮಯದಲ್ಲಿ ನಮ್ಮ ಕನ್ನಡ ಚಿತ್ರರಂಗದದವರು ಯಾರೂ ಬೆಂಬಲ ನೀಡಲಿಲ್ಲ. ಆದ್ರೆ ಬೇರೆ ಭಾಷೆಯ ಸ್ನೇಹಿತರು ಸಮಾಧಾನದ ಮಾತುಗಳನ್ನು ಹೇಳಿದರು. ನಮ್ಮ ಚಿತ್ರರಂಗದವರು ಕರುಣೆ ತೋರಿಸಲಿಲ್ಲ. ” ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. ರಾಗಿಣಿ ದ್ವಿವೇದಿ. ಕನ್ನಡ ಮಾತ್ರವಲ್ಲ ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದು ಪಂಚಭಾಷೆ ತಾರೆ ಎನಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 15 ವರ್ಷ ಪೂರೈಸಿದ ಹಿನ್ನೆಲೆ ಮಾದ್ಯಮದವರೊಡನೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
“ನಾನು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಅಂತಾ ಬಹಳ ಪ್ರೀತಿ ತೋರಿಸುತ್ತೇನೆ. ಆದರೆ ನಮ್ಮ ಚಿತ್ರರಂಗದವರು ನನಗೆ ಪ್ರೀತಿ ತೋರಿಸಲಿಲ್ಲ. ಕನ್ನಡ ಚಿತ್ರರಂಗ ನನಗೆ ಪ್ರಾಣ. ಮನೆ ತರ. ಆದರೆ ಬೇರೆ ಇಂಡಸ್ಟ್ರಿಯಿಂದ ಬಂದಿರೋ ಪ್ರೀತಿ, ಸಪೋರ್ಟ್, ಕೆಲಸ ಏನಿದೆಯೋ ಆ ತರಹದ ಪ್ರೀತಿ ನನಗೆ ಕನ್ನಡದಿಂದ ಸಿಕ್ಕಿಲ್ಲ. ನಾನು ಈ ಚಿತ್ರರಂಗಕ್ಕೆ ಎಷ್ಟೆಲ್ಲಾ ಕೊಟ್ಟಿದ್ದೇನೆ – ಪ್ರಾಣ, ಪ್ರೀತಿ, ಹೆಸರು. ಇಂದಿಗೂ ನಾನು ಬೇರೆ ಕಡೆ ಹೋದರೆ ನಾನು ಕನ್ನಡ ನಟಿ ಎಂದು ಹೇಳಿಕೊಂಡು ನಮ್ಮ ಇಂಡಸ್ಟ್ರಿಯನ್ನು ಪ್ರಮೋಟ್ ಮಾಡುತ್ತೇನೆ. ಆದರೆ, ಈ ಚಿತ್ರರಂಗದಲ್ಲಿ ನನಗೆ ಆ ಪ್ರೀತಿ, ಬೆಂಬಲ ಸಿಕ್ಕಿಲ್ಲ ” ಎಂದು ನಟಿ ರಾಗಿಣಿ ಬೇಸರ ವ್ಯಕ್ತಪಡಿಸಿದ್ದಾರೆ.

“ನನಗೆ ಯಾರೂ ಇರಲಿಲ್ಲ. ಕಷ್ಟದ ಸಮಯದಲ್ಲಿ ಯಾರೂ ಇರಲಿಲ್ಲ. ನಾನು ಎಲ್ಲರೊಂದಿಗೆ ಒಳ್ಳೆ ಸಮಯಕ್ಕಿಂತ ಕಷ್ಟದ ಸಮಯದಲ್ಲಿದ್ದೆ. ಆದ್ರೆ ನನಗೆ ಯಾರೂ ಇರಲಿಲ್ಲ. ಆದ್ರೂ ಅದ್ಯಾವುದೋ ಶಕ್ತಿ ಇತ್ತು. ಸಾಮಾನ್ಯ ಜನರು ನನ್ನನ್ನು ಮುಂದಕ್ಕೆ ಕರೆದೊಯ್ದರು” ನಟಿ ಭಾವುಕರಾಗಿ ಹೇಳಿದ್ದಾರೆ.
ರಾಗಿಣಿ ದ್ವಿವೇದಿಯವರು “ಹೋಳಿ” ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ‘ವೀರಮದಕರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾಗಿಣಿ ತಮ್ಮ ಹದಿನೈದು ವರ್ಷಗಳ ಸಿನಿಮಾ ವೃತ್ತಿಪಯಣವನ್ನು ಮೆಲುಕು ಹಾಕಿದ್ದಾರೆ.
ರಾಗಿಣಿ ದ್ವಿವೇದಿ ಅಭಿನಯದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ವೃಷಭ’ ವಿಶ್ವದಾದ್ಯಂತ ಡಿಸೆಂಬರ್ 25ರಂದು ಅದ್ದೂರಿಯಾಗಿ ತೆರೆ ಕಾಣಲು ಸಜ್ಜಾಗಿದೆ. ಕನ್ನಡ ನಿರ್ದೇಶಕ ನಂದ ಕಿಶೋರ್ ನಿರ್ದೇಶನದ ಮಲಯಾಳಂನ ‘ವೃಷಭ’ ಸಿನಿಮಾದಲ್ಲಿ ರಾಗಿಣಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವುದು ಂಆತ್ರವಲ್ಲದೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅವರು ಸೂಪರ್ ಸ್ಟಾರ್ ಮೋಹನ್ಲಾಲ್ ಪುತ್ರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.





