ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: 45
ನಿರ್ದೇಶನ: ಅರ್ಜುನ್ ಜನ್ಯ
ನಿರ್ಮಾಣ: ಎಂ. ರಮೇಶ್ ರೆಡ್ಡಿ
ತಾರಾಂಗಣ: ಶಿವರಾಜ್ ಕುಮಾರ್,ಉಪೇಂದ್ರ,ರಾಜ್ ಬಿ ಶೆಟ್ಟಿ,ಕೌಸ್ತುಭ ಮಣಿ,ಸುಧಾರಾಣಿ,ಮೊಟ್ಟೈ ರಾಜೇಂದ್ರನ್,ಪ್ರಮೋದ್ ಶೆಟ್ಟಿ,ಮಂಜು ಪಾವಗಡ ಮತ್ತಿತರರು
ರೇಟಿಂಗ್: 3/5

ಪ್ರತಿಯೊಂದು ಸಿನಿಮಾ ಸಹ ಜೀವನದ ಬಗ್ಗೆ ವಿಭಿನ್ನ ದೃಷ್ಟಿಕೋನ ಜೊತೆಗೆ ಹೊಸ ಕಥೆಯನ್ನು ಹೇಳಲು ಪ್ರಯತ್ನಿಸುತ್ತದೆ ಮತ್ತು 45 ನಿಖರವಾಗಿ ಆ ವರ್ಗಕ್ಕೆ ಸೇರಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ 45 ಚಿತ್ರದ ಮೂಲಕ ತಮ್ಮನಿರ್ದೇಶನ ಕ್ಷೇತ್ರಕ್ಕೆ ಚೊಚ್ಚಲ ಪ್ರವೇಶ ಮಾಡಿದ್ದಾರೆ, ಇದು ಸ್ಯಾಂಡಲ್‌ವುಡ್‌ನ ಮೂರು ಪ್ರತಿಭಾನ್ವಿತ ನಟರಾದ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರನ್ನು ಒಂದಾಗಿಸಿದ ಮಹತ್ವಾಕಾಂಕ್ಷೆಯ ಚಿತ್ರವಾಗಿದೆ. ಅರ್ಜುನ್ ಜನ್ಯ ಗರುಡ ಪುರಾಣದಿಂದ ಸ್ಫೂರ್ತಿ ಪಡೆದು ಪುರಾಣ, ಕಥೆ, ಕರ್ಮ, ಸಾವು ಮತ್ತು ದೇವರ ತೀರ್ಪನ್ನು ಬೆರೆಸಿ ಕಥೆಯನ್ನು ಹೇಳಿದ್ದಾರೆ.
45 ಸ್ಪಷ್ಟವಾಗಿ ಒಂದು ಫ್ಯಾಂಟಸಿ ಕಥೆಯಾಗಿದೆ. ವಿನಯ್ (ರಾಜ್ ಬಿ ಶೆಟ್ಟಿ) ತನ್ನ ತಾಯಿ (ಮಾನಸಿ ಸುಧೀರ್) ಜೊತೆ ವಾಸಿಸುವ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್. ತಾಯಿ ಹೊರತಾಗಿ ತಾನು ಪ್ರೀತಿಸಿದಾಕೆ ಮೇಘನಾ (ಕೌಸ್ತುಭಾ ಮಣಿ) ಅವನ ಪ್ರಪಂಚ. ವಿನಯ್ ಆಫೀಸಿಗೆ ತೆರಳುವ ಸಮಯದಲ್ಲಿ ಆಕಸ್ಮಿಕವಾಗಿ ರೋಸಿ ಎಂಬ ನಾಯ ಅವನ ಬೈಕ್ ಗೆ ಅಡ್ಡಬಂದು ಸಾವನ್ನಪ್ಪುತ್ತದೆ. ಈ ಒಂದು ಸಣ್ಣ ಘಟನೆಯು ಜೀವನ ಮತ್ತು ಸಾವಿನ ನಡುವಿನ ರೇಖೆಯನ್ನು ಗುರುತಿಸುವ ಘಟನೆಗಳ ಸರಣಿಗೆ ನಾಂದಿ ಹಾಡಿದೆ. ಅದು ಅವನ ಜೀವನದಲ್ಲಿ ರಾಯಪ್ಪ (ಉಪೇಂದ್ರ) ಹಾಗೂ ಶಿವಪ್ಪನ (ಶಿವರಾಜ್ಕುಮಾರ್) ಆಗಮನಕ್ಕೆ ಕಾರಣವಾಗುತ್ತದೆ.ಅವನ ಬದುಕಿಗೆ 45 ಸಂಖ್ಯೆಯ ನಂಟು ಕಟ್ಟಿಕೊಳ್ಳುತ್ತದೆ. ಹಾಗಾದರೆ ಅದೇನು? ಈ ರಾಯಪ್ಪ, ಶಿವಪ್ಪ ಏಕೆ ಬರುತ್ತಾರೆ? ಅಂತಿಮವಾಗಿ ಎಲ್ಲ ಜಿಡುಕಿನಿಂದ ಬಿಡಿಸಿಕೊಳ್ಳಲು ವಿನಯ್ ಯಶಸ್ವಿಯಾದನೆ ತಿಳಿಯಲು ನೀವು ಚಿತ್ರಮಂದಿರಗಳಲ್ಲಿ 45 ಸಿನಿಮಾ ನೋಡಬೇಕಿದೆ.

arjun

ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು ಕನ್ನಡ ಚಿತ್ರರಂಗಕ್ಕೆ ವಿಶಿಷ್ಟವಾದ ಥೀಮ್ ಅನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಅವರನ್ನು ಶ್ಲಾಘಿಸಲೇಬೇಕು ಆದರೆ 150 ನಿಮಿಷಗಳ ಈ ಚಿತ್ರದಲ್ಲಿ ಗ್ರಾಫಿಕ್ಸ್ ಹಾಗೂ ಸಿಜಿ ಅತಿಯಾಗಿದ್ದಂತೆ ಕಾಣುತ್ತದೆ. ಚಿತ್ರದಲ್ಲಿ ಬಳಕೆಯಾದ ಈ ಗ್ರಾಫಿಕ್ಸ್ ಹಾಗೂ ‘ VFX ನ ಗುಣಮಟ್ಟ ಉತ್ತಮವಾಗಿದೆ ಎನ್ನಲಾಗದು. ಚಿತ್ರಕಥೆಯ ನಿರೂಪಣೆಯಲ್ಲಿ ಗಟ್ಟಿತನವಿರಬೇಕಿದ್ದ ಕಡೆಗಳಲ್ಲಿ VFX ಅನ್ನು ಅವಲಂಬಿಸಿರುವುದು ಚಿತ್ರದ ಮೈನಸ್ ಪಾಯಿಂಟ್ ಎನ್ನಬಹುದು. ಹಲವೆಡೆಗಳಲ್ಲಿ ಹಿನ್ನೆಲೆ ಸಂಗೀತದ ಅಬ್ಬರ ಜೋರಾಗಿದೆ. ಹಿನ್ನೆಲೆಯಲ್ಲಿ ಬರುವ ಹಾಡುಗಳು ಕೆಲವೊಮ್ಮೆ ಇಷ್ತವಾದರೂ ಅರ್ಜುನ್ ಜನ್ಯಾ ಅವರ ಎಂದಿನ ಸಂಗೀತದ ಪ್ರಭಾವ ಇಲ್ಲಿಲ್ಲ.
ಕೆ.ಎಂ. ಪ್ರಕಾಶ್ ಅವರ ಸಂಕಲನ, ಸತ್ಯ ಹೆಗ್ಡೆ ಅವರ ಛಾಯಾಗ್ರಹಣವು ಸಹ ಸಾಕಷ್ಟು ಕಡೆಗಳಲ್ಲಿ ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶವಿತ್ತು ಎನಿಸುವಂತಿದೆ.
ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಮೂರು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾರೆ ಶಿವರಾಜ್‌ಕುಮಾರ್ ಅವರ ಪಾತ್ರ ಮಧ್ಯಂತರದ ಹೊತ್ತಿಗೆ ಬರುವ ಎಂಟ್ರಿ ಸೀನ್ ನಿಂದ ಗಮನ ಸೆಳೆಯುತ್ತದೆ. ಶಿವಣ್ನ ಹಾಗೂ ಸುಧಾರಾಣಿಯವರ ಜೋಡಿಯ ದೃಶ್ಯ ಮಾತ್ರ ಅದರ ಸಂಭಾಷಣೆ ಹಾಗೂ ಅಭಿನಯದಿಂದ ಉತ್ತಮವಾಗಿ ಮೂಡಿದೆ. ಉಪೇಂದ್ರ ಅವರ ಅಭಿನಯವು ಅವರ ಈ ಹಿಂದಿನ ಚಿತ್ರ “ಯುಐ” ಸಿನಿಮಾವನ್ನು ನೆನಪಿಸಿದೆ. ಆದರೂ ಅವರ ಪಾತ್ರ ಚಿತ್ರದುದ್ದಕ್ಕೂ ಆವರಿಸಿಕೊಂಡಿರುವುದಲ್ಲದೆ ಇದು ಸಾಮಾನ್ಯ ಖಳನಾಯಕನ ಪಾತ್ರಗಳಿಗಿಂತ ಭಿನ್ನವಾಗಿದೆ.,ಅವರ ಪಾತ್ರದ ವಿಶೇಷತೆಯೇ ಚಿತ್ರದ ಒಂದು ಮಟ್ಟಿನ ಹೈಲೈಟ್ ಆಗಿದೆ. ರಾಜ್ ಶೆಟ್ಟಿ ತಾವೊಬ್ಬ ಸಾಮಾನ್ಯ ಮನುಷ್ಯನಾಗಿ ಕಾಣಿಸಿಕೊಂಡಿದ್ದು ಭಯದೊಂದಿಗೆ ಬದುಕುವವನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಇನ್ನು ಪ್ರಮೋದ್ ಶೆಟ್ಟಿ ಮತ್ತಿತರೆರ ಪಾತ್ರಗಳು ಈ ಮೂರು ಮುಖ್ಯ ಪಾತ್ರಗಳ ಪೋಷಣೆಗೆ ಎಷ್ಟು ಬೇಕೋ ಅಷ್ಟು ಬಂದು ಹೋಗುತ್ತದೆ.
ಒಟ್ಟಾರೆ 45 ಒಂದು ಮಹತ್ವಾಕಾಂಕ್ಷೆಯ, ಪುರಾಣ, ತತ್ವಶಾಸ್ತ್ರ ವಿಷಯಾಧಾರಿತ ಸಿನಿಮಾ ಆಗಿದ್ದು ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರ ಅದ್ಭುತ ಅಭಿನಯದಿಂದ ಕೂಡಿದೆ. ಆದರೆ ನಿರ್ದೇಶಕ ಅರ್ಜುನ್ ಜನ್ಯ ಮುಂದಿನ ಬಾರಿ, ನಿರ್ದೇಶನಕ್ಕಿಳಿದರೆ ಕೇವಲ ಒಂದು ವಿಭಾಗದ ಮೇಲೆ ಮಾತ್ರವೇ ಗಮನಹರಿಸಿ ಕೆಲಸ ಮಾಡಬೇಕಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ