ಕಳೆದ ವರ್ಷ ಹೈದರಾಬಾದ್ ನಲ್ಲಿ ಥಿಯೇಟರ್ ಹೊರಗೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಟಾಲಿವುಡ್ ನಟ ಅಲ್ಲು ಅರ್ಜುನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಪ್ರಕರಣದ 11ನೇ ಆರೋಪಿಯನ್ನಾಗಿ ಮಾಡಿದ್ದಾರೆ.
ಒಟ್ಟಾರೆ 23 ಮಂದಿ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದು, ನಟ ಅಲ್ಲು ಅರ್ಜುನ್ ಅವರ ಭದ್ರತಾ ತಂಡವು ಈ ಕೇಸ್ ನಲ್ಲಿ ಆರೋಪಿಯಾಗಿದೆ. ಥಿಯೇಟರ್ ಮ್ಯಾನೇಜ್ ಮೆಂಟ್ ಅನ್ನು ಪ್ರಕರಣದ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
2024 ಡಿಸೆಂಬರ್ 4ರಂದು ‘ಪುಷ್ಪ 2 : ದಿ ರೂಲ್’ ಪ್ರೀಮಿಯರ್ ಶೋ ತೆರೆಕಂಡ ಸಮಯದಲ್ಲಿ ಹೈದರಾಬಾದ್ ಆರ್‌ಟಿಸಿ ಥಿಯೇಟರ್‌ನ ಪ್ರೀಮಿಯರ್ ಸ್ಕ್ರೀನಿಂಗ್ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಜನಸಮೂಹ ಸೇರಿತ್ತು. ಈ ವೇಳೆ ಕಾಲ್ತುಳಿತ ಉಂಟಾಗಿ ಒಬ್ಬ ಮಹಿಳೆ ಮೃತಪಟ್ಟಿದ್ದರು.
ಹೈದರಾಬಾದ್‌ನ ಆರ್‌ಟಿಸಿ ಎಕ್ಸ್ ರಸ್ತೆಯಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ, ಪ್ರೀಮಿಯರ್ ಶೋ ಪುಷ್ಪ 2 ಸಮಯದಲ್ಲಿ ಅಲ್ಲು ಅರ್ಜುನ್ ಅವರನ್ನು ನೋಡಲು ಸೇರಿದ ಜನಸಮೂಹದಿಂದಾಗಿ ಉಂಟಾದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ರೇವತಿ ಸಾವನ್ನಪ್ಪಿದ್ದು, ಅವರ ಅಪ್ರಾಪ್ತ ಮಗ ಶ್ರೀತೇಜ್ಗೆ ಆಮ್ಲಜನಕದ ಕೊರತೆ ಉಂಟಾದ ಕಾರಣ ಹಾಸಿಗೆ ಹಿಡಿಯುವಂತಾಯಿತು. ಈ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಸುರಕ್ಷತಾ ಕ್ರಮಗಳನ್ನು ನೇರವೇರಿಸುವಲ್ಲಿ ವಿಫಲವಾಗಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ನಾಂಪಲ್ಲಿ 9ನೇ ACJM ಕೋರ್ಟ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಸಂಧ್ಯಾ ಥೀಯೆಟರ್ಗೆ ಭೇಟಿ ಕೊಡುತ್ತಾರೆಂದು ತಿಳಿದರೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಆರೋಪದ ಮೇಲೆ ಅದರ ಆಡಳಿತ ಮಂಡಳಿ ಮತ್ತು ಮಾಲೀಕರ ಹೆಸರನ್ನೂ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೇ ಜನಜಂಗುಳಿ ಹೆಚ್ಚಿದ್ದರೂ ಅದನ್ನು ಲೆಕ್ಕಿಸದೆ ಮಂದುವರೆದಿದ್ದಕ್ಕಾಗಿ ಅಲ್ಲು ಅರ್ಜುನ್ ಹೆಸರನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆ 24 ವ್ಯಕ್ತಿಗಳ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಅವರ ವೈಯಕ್ತಿಕ ಮ್ಯಾನೇಜರ್, ಸಿಬ್ಬಂದಿ ಸದಸ್ಯರು ಮತ್ತು ಎಂಟು ಖಾಸಗಿ ಬೌನ್ಸರ್‌ಗಳು ಸೇರಿದ್ದಾರೆ. ಅವರ ಬೇಜವಾಬ್ದಾರಿತನದ ನಡೆಯಿಂದಾಗಿ ಸಮಸ್ಯೆ ಉಲ್ಬಣಿಸಿದೆ ಎಂದು ತೀರ್ಮಾನಿಸಲಾಗಿದೆ.





