ಕನ್ನಡ, ತೆಲುಗು ಮತ್ತು ತಮಿಳು ಕಿರುತರೆಯಲ್ಲಿ ಮಿಂಚುತ್ತಿದ್ದ ನಟಿ ನಂದಿನಿ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳು ಕಲೈಗ್ನರ್ ಟಿವಿಯಲ್ಲಿ ಪ್ರಸಾರವಾಗುತ್ರಿದ್ದ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ನಂದಿನಿ, ಸಾವಿಗೂ ಮುನ್ನ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಲಭ್ಯವಾಗಿದೆ.
ಬಳ್ಳಾರಿ ಜಿಲ್ಲೆ ಕೊಟ್ಟೂರು ಮೂಲದ ಸಿ. ಎಂ. ನಂದಿನಿ, 2025ರ ಆಗಸ್ಟ್‌ನಿಂದ ಮೈಲಸಂದ್ರದ ಪಿಜಿಯಲ್ಲಿ ವಾಸಿಸುತ್ತಿದ್ದರು. ಭಾನುವಾರ ತನ್ನ ಗೆಳೆಯ ಪುನೀತ್ ಮನೆಗೆ ಹೋಗಿ ರಾತ್ರಿ 11.20ರ ಸುಮಾರಿಗೆ ವಾಪಸ್ ಬಂದಿದ್ದರು. ಪುನಃ ಪುನೀತ್ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಪುನೀತ್, ಪಿಜಿ ಮ್ಯಾನೇಜರ್‌ಗೆ ತಿಳಿಸಿದ್ದರು. ಪಿಜಿ ಮ್ಯಾನೇಜರ್ ಹಾಗೂ ಸಿಬ್ಬಂದಿ ನಂದಿನಿ ಕೊಠಡಿ ಬಳಿ ತೆರಳಿ ನೋಡಿದಾಗ ವೇಲ್‌ನಿಂದ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ನಂದಿನಿ ಅವರು ಡೈರಿಯಲ್ಲಿ ಡೆತ್‌ನೋಟ್ ಬರೆದಿರುವುದು ಕಂಡು ಬಂದಿದೆ. ‘‘ನನಗೆ ಸರಕಾರಿ ಕೆಲಸ ಇಷ್ಟವಿಲ್ಲ. ನಟನೆ ಬಗ್ಗೆ ಆಸಕ್ತಿಯಿದ್ದು, ಅದರಲ್ಲಿಯೇ ಮುಂದುವರಿಯಬೇಕು. ಆದರೆ, ಮನೆಯವರು ಇದಕ್ಕೆ ಒಪ್ಪುತ್ತಿಲ್ಲ’’ ಎಂದು ಬರೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅನುಕಂಪದ ಉದ್ಯೋಗ: ನಂದಿನಿ ತಾಯಿ ಬಸವರಾಜೇಶ್ವರಿ ಸರಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ. ಅವರು ಮಗಳ ಸಾವಿನ ಕುರಿತು ಹೇಳಿಕೆ ದಾಖಲಿಸಿದ್ದಾರೆ.
‘ಸರಕಾರಿ ಶಿಕ್ಷಕರಾಗಿದ್ದ ಪತಿ ಎಸ್.ಮಹಾಬಲೇಶ್ವರ ಅವರು 2021ರಲ್ಲಿ ಮೃತಪಟ್ಟಿದ್ದರು. ಹೀಗಾಗಿ, 2023ರಲ್ಲಿ ಮಗಳು ನಂದಿನಿಗೆ ಅನುಕಂಪದ ಆಧಾರದಲ್ಲಿ ಸರಕಾರಿ ಕೆಲಸ ಸಿಕ್ಕಿತ್ತು. ಆದರೆ, ಕೆಲಸಕ್ಕೆ ಹೋಗದ ನಂದಿನಿ, ನಟನಾ ಕ್ಷೇತ್ರದಲ್ಲಿಯೇ ಮುಂದುವರಿಯುವುದಾಗಿ ಹಠ ಮಾಡಿ ಬೆಂಗಳೂರಿಗೆ ಬಂದಿದ್ದಳು’ ಎಂದು ತಿಳಿಸಿದ್ದಾರೆ. ‘ ಮಗಳ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲಎಂದಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನ್ನಡದ ನೀನಾದೆನಾ, ಜೀವ ಹೂವಾಗಿದೆ, ಸಂಘರ್ಷ, ಮಧುಮಗಳು ಸೀರಿಯಲ್‌ನಲ್ಲಿ ನಂದಿನಿ ನಟಿಸಿದ್ದರು. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ನಂದಿನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಇದರಲ್ಲಿ ಅವರು ಕನಕ ಮತ್ತು ದುರ್ಗ ಎಂಬ ಎರಡು ಸವಾಲಿನ ಪಾತ್ರಗಳನ್ನು ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.





