ಶರತ್ ಚಂದ್ರ
ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮನಗಲಿ ಇಂದಿಗೆ ಹದಿನಾರು ವರುಷ.ಈ ಹಿಂದೆ ಪ್ರತೀ ವರ್ಷ ವಿಷ್ಣುವರ್ಧನ್ ರಸ್ತೆ ಯಲ್ಲಿರುವ ಕೆಂಗೇರಿ ಯ ವಿಷ್ಣುವರ್ಧನ್ ಸ್ಮಾರಕ ಕ್ಕೆ ಅಭಿಮಾನಿಗಳು ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ಆ ಜಾಗದ ವಿಚಾರವಾಗಿ ಕೋರ್ಟ್ ಕೇಸ್ ನಡೆಯುತ್ತಿರುವುದರಿಂದ ವಿಷ್ಣುವರ್ಧನ್ ಜನ್ಮ ದಿನ ಆಚರಣೆಯನ್ನು ಆಚರಿಸಲು ಡಾ.ವಿಷ್ಣು ಸೇನಾ ಸಮಿತಿ ಸ್ಮಾರಕದಿಂದ ಸ್ವಲ್ಪ ದೂರದಲ್ಲಿ ಜಾಗ ಕಲ್ಪಿಸಿತ್ತು. ಈ ಬಾರಿ ಕೂಡ ಅವರ ಪುಣ್ಯ ಸ್ಮರಣೆ ಯ ಪ್ರಯುಕ್ತ ವಿಷ್ಣುವರ್ಧನ್ ರಸ್ತೆಯಲ್ಲಿರುವ ಜೆ. ಎಸ್. ಎಸ್ ಕಾಲೇಜು ಮುಂಭಾಗ ವೀರಕಪುತ್ರ ಶ್ರೀನಿವಾಸ್ ಸ್ಥಳವಾಕಾಶ ಕಲ್ಪಿಸಿದ್ದಾರೆ. ಬೆಳಿಗ್ಗೆಯಿಂದಲೇ ಅಭಿಮಾನಿಗಳು ಸೇರಿ ತನ್ನ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಸಹಜವಾಗಿ ಯಾವುದೇ ನಟ ಕಾಲವಾದ ನಂತರ ನಿಧಾನವಾಗಿ ಜನ ಮರೆತು ಬಿಡುತ್ತಾರೆ.ಆದರೆ ಇತ್ತೀಚೆಗೆ ವಿಷ್ಣುವರ್ಧನ್ ಮತ್ತು ಪುನೀತ್ ರಾಜಕುಮಾರ್ ಅವರನ್ನು ಜನ ಪ್ರತೀ ದಿನ ನೆನೆಯುತ್ತಾರೆ. ಒಂದು ಕಾಲದಲ್ಲಿ ವಿಷ್ಣುವರ್ಧನ್ ಸಿನಿಮಾ ನೋಡಿಕೊಂಡು ಬೆಳೆದ ಅಭಿಮಾನಿಗಳು ದಾದಾನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ.ವಿಷ್ಣು ನಿಧನ ನಂತರ ಪ್ರತೀ ಬಡಾವಣೆಯಲ್ಲಿ ವಿಷ್ಣುವಿನ ಪುತ್ತಳಿ ಸ್ಥಾಪಿಸಲ್ಪಟ್ಟಿರುವುದು ಕಾಣಬಹುದು. ಅದರಲ್ಲೂ ಹೆಚ್ಚಿನ ಆಟೋಗಳಲ್ಲಿ ಶಂಕರ್ ನಾಗ್ ಬಿಟ್ಟರೆ ವಿಷ್ಣುವರ್ಧನ್ ಫೋಟೋಗಳು ಹೆಚ್ಚಾಗಿ ಕಾಣಬಹುದು.

ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕಕ್ಕೆ ಸಂಭಂದಪಟ್ಟಂತೆ ಆದ ಅನ್ಯಾಯದ ಬಗ್ಗೆ ಅವರ ಅಭಿಮಾನಿಗಳಿಗೆ ಈಗಲೂ ನೋವಿದೆ. ಪ್ರತೀ ವರ್ಷ ಸೆಪ್ಟೆಂಬರ್ 18ರಂದು ಈಗಲೂ ರಾಜ್ಯದ ಎಲ್ಲಾ ಕಡೆಗಳಿಂದ ಬೆಂಗಳೂರಿಗೆ ಬಂದು ಅಭಿಮಾನ ಪ್ರದರ್ಶಿಸುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ.

ವಿಷ್ಣುವರ್ಧನ್ ಅವರನ್ನು ಜನ ಪ್ರೀತಿಸಲು ಕಾರಣ ಕುಟುಂಬ ಸಮೇತ ನೋಡಬಹುದಾದ ಅವರು ಅಭಿನಯಿಸಿದ ಚಿತ್ರಗಳು, ಹೆಣ್ಣು ಮಕ್ಕಳನ್ನು ಗೌರವು ಸುತ್ತಿದ್ದ ರೀತಿ,ಬೇರೆಯವರಿಗೆ ಮಾದರಿಯಾಗುವಂತೆ ಅವರು ಬದುಕಿದ ರೀತಿ, ಆ ಕಾಲಕ್ಕೆ ಸ್ಟಾರ್ ವಾರ್ ಎದುರಿಸಿ ಸಂಯಮದಿಂದ ವರ್ತಿಸಿದ ರೀತಿ, ಒಂದಷ್ಟು ಜನಕ್ಕೆ ಮಾಡಿದ ಸಹಾಯ ಹೀಗೆ ಇಂದಿಗೂ ಅವರು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲಸಿದ್ದಾರೆ. ಸಾಹಸ ಸಿಂಹ ಚಿತ್ರದಲ್ಲಿ ಬರುವ ಹಾಡಿನಂತೆ ಎಷ್ಟೇ ವರ್ಷಗಳಾದರೂ ಕೂಡ ಕನ್ನಡಿಗರು ಹೇಳುವುದು ಒಂದೇ ಮಾತು ಮರೆಯದ ನೆನಪನು ಎದೆಯಲ್ಲಿ ತಂದೆ ನೀನು.





