ಹಬ್ಬದ ಋತುವಿನಲ್ಲಿ ಹೊಸ ಬಟ್ಟೆ ಹಾಗೂ ಸೊಗಸಾದ ಕೂದಲಿನಿಂದ ನೀವು ಎಲ್ಲರ ಗಮನ ಸೆಳೆಯಲು ಬಯಸಿದರೆ, ಸಲಹೆಗಳು ನಿಮಗೆ ಬಹಳ ಉಪಯುಕ್ತವೆನಿಸುತ್ತವೆ…..!

ಆಶಾ ಈ ದಸರಾ ಹಬ್ಬಕ್ಕಾಗಿ ಬಹಳ ಸುಂದರವಾದ ಉಡುಪನ್ನು ಖರೀದಿಸಿದ್ದಳು. ನೆಟ್‌ ದುಪಟ್ಟಾ ಮತ್ತು ಅಲೆ ಅಲೆಯಾದ ವಿನ್ಯಾಸದೊಂದಿಗೆ ತಿಳಿ ಗುಲಾಬಿ ಬಣ್ಣದ ತೋಳಿಲ್ಲದ ಸೂಟ್‌ ನಲ್ಲಿ ಅವಳು ಬಹಳ ಮುದ್ದಾಗಿ ಕಾಣುತ್ತಿದ್ದಳು. ಸಂಜೆ ರೆಡಿಯಾಗುತ್ತಿದ್ದಾಗ ಡ್ರೆಸ್‌ ಗೆ ತಕ್ಕಂತೆ ಹೇರ್‌ ಸ್ಟೈಲ್ ‌ಮಾಡಲು ಯತ್ನಿಸಿದಳು. ಆದರೆ, ಅದಕ್ಕೆ ತಕ್ಕಂತೆ ಸರಿಯಾದ ಲುಕ್ ಸಿಗಲಿಲ್ಲ. ಅವಳ ಕೂದಲು ಶುಷ್ಕವಾಗಿ ಮತ್ತು ನಿರ್ಜೀವವಾಗಿ ಕಂಡು ಬಂತು ಹಾಗೂ ಹೇರ್‌ ಸ್ಟೈಲ್ ‌ಕೂಡ ಸರಿಹೊಂದಲಿಲ್ಲ. ಇನ್ನು ತಲೆ ಕೂದಲನ್ನು ಹಾಗೇ ಬಿಟ್ಟುಕೊಂಡು ನೋಡಿದಾಗಲೂ ಅದೇಕೋ ಚೆನ್ನಾಗಿ ಕಾಣಲಿಲ್ಲ.

ವಾಸ್ತವವಾಗಿ, ದಸರಾಗೆ ಮೊದಲು ಆಶಾ, ಪರೀಕ್ಷೆಗೆ ಹಾಜರಾಗಲು ಪ್ರಾರಂಭಿಸಿದಳು. ಅಲ್ಲಿಂದ ಬಂದ ನಂತರ ಶಾಪಿಂಗ್ ಮಾಡಲು ಆರಂಭಿಸಿದಳು. ಇದರಿಂದಾಗಿ ಕೂದಲಿನ ಆರೈಕೆ ಮಾಡಲಾಗದೆ, ಸುಂದರವಾಗಿ ಕಾಣುವ ಸಮಯ ಬಂದಾಗ ಕೂದಲಿನಿಂದಾಗಿಯೇ ಅವಳಿಗೆ ನಿರಾಶೆಯಾಯಿತು.

ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆ ಅತ್ಯಂತ ಸುಂದರವಾಗಿ ಕಾಣಲು ಬಯಸುತ್ತಾಳೆ. ವರ್ಣರಂಜಿತ ಹೊಸ ಬಟ್ಟೆ, ತೆರೆದ ಕೂದಲಿನೊಂದಿಗೆ ಸ್ಟೈಲಿಶ್‌ ಆಗಿ ಎಲ್ಲರ ಗಮನ ಸೆಳೆಯಲು ಬಯಸುತ್ತಾಳೆ. ಆದರೆ ಹಬ್ಬದ ಸಮಯದಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಹಬ್ಬದ ತಯಾರಿ, ಗೃಹಾಲಂಕಾರದಲ್ಲೇ ಕಳೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೂದಲ ಆರೈಕೆ ಮಾಡಿಕೊಳ್ಳಲು ಸಮಯ ಮೀಸಲಿಡುವುದು ತುಸು ಕಷ್ಟವೆನಿಸುತ್ತದೆ.

ಹೆಣ್ಣುಮಕ್ಕಳು ಹಬ್ಬ ಹರಿದಿನಗಳಲ್ಲಿ ಆಕರ್ಷಕವಾಗಿ ಕಾಣಲು ತಮ್ಮ ಕೂದಲನ್ನು ತೆರೆದುಕೊಳ್ಳುತ್ತಾರೆ. ಇಂತಹ ತೆರೆದ ಕೂದಲು ಚೆನ್ನಾಗಿ ಕಾಣುವಂತೆ ಮಾಡಲು ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅತ್ಯಗತ್ಯ. ಹಬ್ಬಗಳ ಆಗಮನದ ಸ್ವಲ್ಪ ಸಮಯದ ಮೊದಲು ಕೂದಲಿನ ಆರೈಕೆಯ ದಿನಚರಿಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯೂ ಇರುತ್ತದೆ. ಇದರಿಂದ ಉತ್ತಮ ಕೇಶ ವಿನ್ಯಾಸವನ್ನು ಮಾಡಬಹುದು ಅಥವಾ ಅಲೆಯಲೆಯಾದ ತೆರೆದ ಕೂದಲನ್ನು ಇರಿಸಿಕೊಳ್ಳಬಹುದು.

ಹಬ್ಬದ ಸೀಸನ್ಗೂ ಮುನ್ನ ಕೂದಲಿನ ಬಗ್ಗೆ ಕಾಳಜಿ ವಹಿಸಿ :

ಆಹಾರ ಕ್ರಮಕ್ಕೆ ಗಮನ ಕೊಡಿ

ಮೊದಲನೆಯದಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಅತಿ ಮುಖ್ಯ. ವಿಟಮಿಯನ್‌ ಸಿ, ಕಬ್ಬಿಣಾಂಶ ಮತ್ತು ಪ್ರೋಟೀನ್‌ ಸಮೃದ್ಧವಾಗಿರುವ ಆಹಾರ ಸೇವಿಸುವುದರಿಂದ ನಿಮ್ಮ ನೆತ್ತಿ ಮತ್ತು ಸ್ಕಾಲ್ಪ್ ನ್ನು ಆರೋಗ್ಯಕರವಾಗಿ ಇರಿಸುತ್ತದೆ. ಜೊತೆಗೆ ಕೂದಲು ಉದುರುವಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ನಿಮ್ಮ ಆಹಾರದಲ್ಲಿ ಹೆಚ್ಚು ಒಮೇಗಾ 3 ಮತ್ತು ಒಮೇಗಾ 6 ಆಹಾರಗಳಾದ ಮೊಟ್ಟೆ, ಬಾದಾಮಿ ಮತ್ತು ವಾಲ್ ‌ನಟ್‌ ಗಳನ್ನು ಸೇರಿಸಿಕೊಳ್ಳಿ.

ಕೂದಲನ್ನು ನಿಯಮಿತವಾಗಿ ಕತ್ತರಿಸಿ

ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಟ್ರಿಮ್ ಮಾಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಪ್ರತಿ 7-8 ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಸೀಳು ತುದಿ ಕೂದಲನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಸೀಳು ಕೂದಲನ್ನು ನಿವಾರಿಸಿ, ವಾಲ್ಯೂಮ್ ಉಂಟು ಮಾಡುತ್ತದೆ. ನಿಯಮಿತವಾದ ಟ್ರಿಮಿಂಗ್‌ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲಿಗೆ ಒಂದು ವಿಶಿಷ್ಟ ರೂಪ ನೀಡುವುದಲ್ಲದೆ, ತಾಜಾ ಮಾತ್ರವಲ್ಲ, ರೋಮಾಂಚನ ನೋಟವನ್ನು ನೀಡುತ್ತದೆ. ಇದು ಕೂದಲನ್ನು ಬಲಪಡಿಸುತ್ತದೆ ಮತ್ತು ನೀವು ಹೊಸ ಸ್ಟೈಲ್ ‌ಮಾಡಿಕೊಳ್ಳಲೂ ಅನುಕೂಲವಾಗುತ್ತದೆ.

ನಿಯಮಿತವಾಗಿ ಶುಚಿಗೊಳಿಸಿ

ಮುಂದಿನ ಹಂತ ಸೂಕ್ತವಾದ ಶ್ಯಾಂಪೂನೊಂದಿಗೆ ನಿಯವಿತವಾದ ಶುದ್ಧೀಕರಣವಾಗಿದೆ. ಅದೂ ಸಹ ವಿಶೇಷವಾಗಿ ಹಬ್ಬದ ಋತುವಿನಲ್ಲಿ. ಈ ಸಮಯದಲ್ಲಿ ನೀವು ಆಗಾಗ್ಗೆ ಮಾರುಕಟ್ಟೆ ಸೇರಿದಂತೆ ಮನೆಯಿಂದ ಹೊರಗೆ ಸುತ್ತಾಡುತ್ತೀರಿ ಹಾಗೂ ನೀವು ಧೂಳು ಮತ್ತು ಕೊಳೆ ಎದುರಿಸಬೇಕಾಗುತ್ತದೆ. ನಿಮ್ಮ ಕೂದಲಿಗೆ ಯಾವುದೇ ರಾಸಾಯನಿಕ ಚಿಕಿತ್ಸೆ ನೀಡಿದ್ದರೆ ನಿಮ್ಮ ಕ್ಲೆನ್ಸರ್‌ ಪಿಂ  ಸಮತೋಲನ ಮತ್ತು ಆರ್ದ್ರತೆ ಪರಿಣಾಮವನ್ನು ಹೊಂದಿರಬೇಕು. ಪ್ರತಿನಿತ್ಯ ಕೂದಲು ತೊಳೆಯುವ ಮಹಿಳೆಯರು ಸಲ್ಫೇಟ್ ಮುಕ್ತ ಶ್ಯಾಂಪೂ ಬಳಸುವುದು ಅವಶ್ಯಕ. ಅಲ್ಲದೆ, ನಿಮ್ಮ ಕೂದಲಿನ ಪ್ರಕಾರಕ್ಕೆ ಹೊಂದಿಕೆಯಾಗುವ ಶ್ಯಾಂಪೂ ಆಯ್ಕೆ ಮಾಡಿ ಮತ್ತು ತಲೆ ಹೊಟ್ಟು ಅಥವಾ ಶುಷ್ಕತೆಯಂತ ಸಮಸ್ಯೆಗಳನ್ನು ನಿಭಾಯಿಸಿ.

ಕೊಳಕು, ಹೆಚ್ಚುವರಿ ಎಣ್ಣೆ ಇತ್ಯಾದಿಗಳನ್ನು ತೆಗೆದುಹಾಕಲು ಶ್ಯಾಂಪೂವನ್ನು ನಿಮ್ಮ ನೆತ್ತಿಗೆ ನಿಧಾನವಾಗಿ ಲೇಪಿಸಿ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ದಿನವಿಡೀ ನಿಮ್ಮ ಕೂದಲನ್ನು ತಾಜಾ ಆಗಿಡಲು ಹಣ್ಣು ಅಥವಾ ನಿಂಬೆಯಂಥ ಲಘು ಪರಿಮಳ ಹೊಂದಿರುವ ಹರ್ಬಲ್ ಶ್ಯಾಂಪೂ ಬಳಸಬಹುದು.

ಕೂದಲಿಗೆ ಕಂಡೀಶನಿಂಗ್

ಹೇರ್‌ ಕಂಡೀಶನಿಂಗ್‌ ನ್ನು ನಿಯಮಿತವಾಗಿ ಮಾಡಿ. ಕೂದಲಿನ ಆರೈಕೆಗಾಗಿ ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಹಂತಗಳಲ್ಲಿ ಒಂದು. ಆ್ಯಲೋವೆರಾದಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಅದರಲ್ಲಿ ನಿಮ್ಮ ಬೆರಳನ್ನು ಅದ್ದಿ ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಒಣ ಅಥವಾ ಶುಷ್ಕವಾದ ಕಡೆ ಸ್ವಲ್ಪ ಹೆಚ್ಚಾಗಿ ಲೇಪಿಸಿ. ಈ ಕಂಡೀಶನರ್‌ ನ್ನು ಕೆಲವು ನಿಮಿಷಗಳ ಕಾಲ ಅಲ್ಲೇ ಬಿಟ್ಟರೆ ಅದು ಮ್ಯಾಜಿಕ್‌ ಆಗಿ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ಕೂದಲು ಸದಾ ಹೈಡ್ರೇಟೆಡ್ ಆಗಿರುತ್ತದೆ.

ಇದು ನಿಮ್ಮ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡುವುದಲ್ಲದೆ, ಕೂದಲನ್ನು ಬಲಿಷ್ಠಗೊಳಿಸುತ್ತದೆ. ಆ್ಯಲೋವೇರಾ ಮತ್ತು ಕೊಬ್ಬರಿ ಎಣ್ಣೆಯ ಸಂಯೋಜನೆ ನಿಮ್ಮ ಕೂದಲನ್ನು ಪೋಷಿಸಿ, ಆರೋಗ್ಯಕರವಾಗಿಡುತ್ತದೆ. ಆ್ಯಲೋವೆರಾ ಕಂಡೀಶನಿಂಗ್‌ ನಿಂದ ನಿಮ್ಮ ಕೂದಲು ನುಣುಪಾಗಿ, ಮೃದುವಾಗುತ್ತದೆ. ಇದರೊಂದಿಗೆ ನೀವು ಯಾವುದೇ ಹಬ್ಬಕ್ಕೆ ಟ್ರೆಂಡಿ ಕೇಶ ವಿನ್ಯಾಸ ಮಾಡಿಕೊಳ್ಳಲು ಸುಲಭವಾಗುತ್ತದೆ.

ನಿಮ್ಮ ಕೂದಲನ್ನು ನಿಯಮಿತವಾಗಿ ಬಾಚಿಕೊಳ್ಳುವುದರಿಂದ ನಿಮ್ಮ ಕೂದಲನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಅಗಲವಾದ ಹಲ್ಲಿರುವ ಬಾಚಣಿಗೆಯಿಂದ ಸರಿಯಾಗಿ ಬಾಚಿಕೊಳ್ಳುವುದರಿಂದ ಅದು ನೆತ್ತಿ ಮತ್ತು ಸ್ಕಾಲ್ಪ್ ನಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡಿ ನಿಮ್ಮ ಕೂದಲು ಫ್ರೀಝಿ ಹಾಗೂ ಸ್ಟೈಲಿಶ್‌ ಆಗಿ ಉಳಿಸುತ್ತದೆ.

ಹಬ್ಬಕ್ಕಾಗಿ ಹೇರ್ಮಾಸ್ಕ್

ಹಬ್ಬದ ಸಂದರ್ಭದಲ್ಲಿ ನಿಮ್ಮ ಕೂದಲನ್ನು ಸ್ಟೈಲಿಶ್‌ ಆಗಿ ಮಾಡಿಕೊಳ್ಳಲು, 6-8 ದಿನಗಳ ಮೊದಲೇ ಹೇರ್‌ ಮಾಸ್ಕ್ ಹಾಕಿಕೊಳ್ಳುವುದು ಅಗತ್ಯವಾಗಿದೆ. ಇದರಿಂದ ನಿಮ್ಮ ಕೂದಲು ಹೆಚ್ಚು ಹೈಡ್ರೀಕರಿಸಲ್ಪಡುತ್ತದೆ. ನೀವು ಮೆಹೆಂದಿಯ ಹೇರ್‌ ಮಾಸ್ಕ್ ಸಹ ಹಾಕಿಕೊಳ್ಳಬಹುದು. ಜೊತೆಗೆ ಆ್ಯಲೋವೇರಾ ಮತ್ತು ಕೊಬ್ಬರಿ ಎಣ್ಣೆ ಹೇರ್‌ ಮಾಸ್ಕ್, ಮೆಹೆಂದಿ ಮತ್ತು ನೆಲ್ಲಿಕಾಯಿ ಹೇರ್‌ ಮಾಸ್ಕ್, ಜೇನು ಮತ್ತು ಮೊಟ್ಟೆಯ ಹೇರ್‌ ಮಾಸ್ಕ್, ಅವಕಾಡೋ ಮತ್ತು ಆಲಿವ್ ‌ಎಣ್ಣೆಯ ಹೇರ್‌ ಮಾಸ್ಕ್, ಕೊಬ್ಬರಿ ಎಣ್ಣೆ ಮತ್ತು ಮೊಟ್ಟೆಯ ಹೇರ್‌ ಮಾಸ್ಕ್ ಗಳಂತಹ ಅನೇಕ ಉತ್ತಮ ಹೇರ್‌ ಮಾಸ್ಕ್ ಗಳಿವೆ. ಅಲ್ಲದೆ, ಕೂದಲಿಗೆ ಆಗಾಗ್ಗೆ ನಿಯಮಿತವಾಗಿ ಕೊಬ್ಬರಿ ಎಣ್ಣೆ ಲೇಪಿಸುವುದನ್ನು ಮರೆಯಬೇಡಿ.

ನಿಮ್ಮ ಕೂದಲಿನ ಆರ್ದ್ರತೆ ಉಳಿಸಲು ಎಣ್ಣೆಯನ್ನು ಬಳಸಿ. ಎಣ್ಣೆ ನಿಮ್ಮ ಕೂದಲನ್ನು ಹೈಡ್ರೇಟ್‌ ಗೊಳಿಸುತ್ತದೆ. ಇದು ನಿಮ್ಮ ಕೇಶ ವಿನ್ಯಾಸವನ್ನು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ನೀವು ಹೇರ್‌ ಮಾಸ್ಕ್ ನ್ನು ಹಚ್ಚಿಕೊಳ್ಳದ ದಿನಗಳಲ್ಲಿ, ನಿಮ್ಮ ಕೂದಲನ್ನು ತೊಳೆದ ನಂತರ, ಕೆಲವು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಕೂದಲಿಗೆ ಎಣ್ಣೆ ಲೇಪಿಸಿಡಿ. ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಬೆರಳುಗಳನ್ನು ಬಳಸಿ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ನೆತ್ತಿ ಹಾಗೂ ಸ್ಕಾಲ್ಪ್ ನ್ನು ಮಸಾಜ್‌ ಮಾಡಿ. ರಾತ್ರಿ ಮಲಗುವ ಮುನ್ನ ನಿಮ್ಮ ಕೂದಲಿಗೆ ಎಸೆನ್ಶಿಯಲ್ ಆಯಿಲ್ ‌ಗಳ ಮಿಶ್ರಣವನ್ನು ಹಚ್ಚಿ. ಇದರೊಂದಿಗೆ ಶುಷ್ಕ ಮತ್ತು ನಿರ್ಜೀವ ಕೂದಲು ಕೂಡ ಕೆಲವೇ ದಿನಗಳಲ್ಲಿ ಗುಣವಾಗುತ್ತದೆ.

ಎಣ್ಣೆ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಲೇಪಿಸಿದ ನಂತರ, ನಿಮ್ಮ ಕೂದಲನ್ನು ಬಿಸಿ ಟವೆಲ್ ‌ನಲ್ಲಿ 10 ನಿಮಿಷಗಳ ಕಾಲ ಸುತ್ತಿ ನಂತರ ಅದನ್ನು ಹಾಗೇ ಬಿಡಿ. ಬೆಳಗ್ಗೆ ಕೂದಲನ್ನು ಸೌಮ್ಯವಾದ ಕ್ಲೆನ್ಸರ್‌ ನೊಂದಿಗೆ ತೊಳೆಯಿರಿ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಕೊಬ್ಬರಿ ಎಣ್ಣೆ, ಸಾಸುವೆ ಎಣ್ಣೆ, ನೆಲ್ಲಿಕಾಯಿ, ಬಾದಾಮಿ ಅಥವಾ ಅಂತಹ ಗಿಡಮೂಲಿಕೆಗಳ ಎಣ್ಣೆಯನ್ನು ಆರಿಸಿ. ಇದು ಕೂದಲಿನ ಬೇರುಗಳನ್ನು ಸದೃಢಪಡಿಸಿ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಇವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಕೂದಲನ್ನು ಮೃದುಗೊಳಿಸಿ

ಹಬ್ಬಗಳ ಸಮಯದಲ್ಲಿ ಮೃದುವಾದ, ರೇಷ್ಮೆಯಂತಹ ಕೂದಲು ನಿಮ್ಮ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಇದಕ್ಕಾಗಿ ಈ ಕೆಳಗಿನ ವಸ್ತುಗಳನ್ನು ಬಳಸಿ.

ಒಂದು ಸ್ವಚ್ಛವಾದ ಗಾಜಿನ ಬಟ್ಟಲಿನಲ್ಲಿ 1 ಮೊಟ್ಟೆ, 1 ಟೀ ಚಮಚ  ಆ್ಯಲೋವೆರಾ ಜೆಲ್ ‌ಮತ್ತು ಕೆಲವು ಹನಿ ನಿಂಬೆರಸವನ್ನು ಮಿಶ್ರಣ ಮಾಡಿ, ಸ್ವಚ್ಛವಾಗಿ ಶುಷ್ಕವಾಗಿರುವ ಕೂದಲಿಗೆ ಲೇಪಿಸಿ. ನಿಮ್ಮ ತಲೆಗೆ ಶವರ್‌ ಕ್ಯಾಪ್‌ ನ್ನು ಹಾಕಿಕೊಂಡು ಒಂದು ಗಂಟೆ ಕಾಲ ಹಾಗೆಯೇ ಬಿಡಿ. ನಂತರ ಸೌಮ್ಯವಾದ ಶ್ಯಾಂಪೂ ಬಳಸಿ ತೊಳೆಯಿರಿ ಹಾಗೂ ಕೂದಲು ಒಣಗಲು ಬಿಡಿ.

ಹೀಟಿಂಗ್ಉಪಕರಣ ಬಳಸಬೇಡಿ

ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಹೇರ್‌ ಸ್ಟೈಲ್‌ ಮಾಡಲು ಹೀಟಿಂಗ್‌ ಉಪಕರಣಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಹೀಟಿಂಗ್‌ ಉಪಕರಣಗಳಿಂದಾಗಿ ಮಾಡಿದ ಸ್ಟೈಲಿಂಗ್‌ ನಿಮ್ಮ ಕೂದಲಿನ ನೈಸರ್ಗಿಕ ತೈಲಾಂಶವನ್ನು ತೆಗೆದು ಹಾಕುತ್ತದೆ. ಆದ್ದರಿಂದ ಬ್ಲೋ ಡ್ರೈಯಿಂಗ್‌, ಸ್ಟ್ರೇಟನಿಂಗ್‌ ಮತ್ತು ಕರ್ಲಿಂಗ್‌ ನ್ನು ತಪ್ಪಿಸಿ. ಬದಲಾಗಿ, ನೀವು ಆ್ಯಲೋವೆರಾ ಮತ್ತು ಕೊಬ್ಬರಿ ಎಣ್ಣೆಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡರೆ, ಅದು ನಿಮ್ಮ ಕೂದಲಿಗೆ ಅಗತ್ಯವಾದ ಡೀಟಾಕ್ಸ್ ಚಿಕಿತ್ಸೆಯನ್ನು ನೀಡಿ, ಅದನ್ನು ಮೃದು, ಬಲಿಷ್ಠ ಮತ್ತು ಆರೋಗ್ಯಕರವಾಗಿಡುತ್ತದೆ.

ಹಬ್ಬಗಳಲ್ಲಿ ಕೂದಲಿನ ಆರೈಕೆ

ಹಬ್ಬದ ದಿನದಂದು ನಿಮ್ಮ ಕೂದಲನ್ನು ಉತ್ತಮ ಶ್ಯಾಂಪೂ ಬಳಸಿ ತೊಳೆಯಿರಿ. ನಂತರ ಕಂಡೀಷನರ್‌ ಬಳಸಿ ಮತ್ತು ನೈಸರ್ಗಿಕವಾಗಿ ಒಣಗಲು ಬಿಡಿ. ನಿಮ್ಮ ಕೂದಲು ಸಿದ್ಧವಾದ ನಂತರ, ನಿಮ್ಮ ಉಡುಗೆಗೆ ಅನುಗುಣವಾಗಿ ಸುಂದರ, ಸೊಗಸಾದ, ಸರಳವಾದ ಕೇಶ ವಿನ್ಯಾಸವನ್ನು ಮಾಡಿ. ಹಬ್ಬ ಹರಿದಿಗಳಲ್ಲಿ ನಾವು ಅನೇಕ ಸಂದರ್ಭಗಳಿಗೆ ನಿರಂತರವಾಗಿ ಸಿದ್ಧವಾಗಿರಬೇಕು. ಅಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ವಿವಿಧ ಕೇಶ ವಿನ್ಯಾಸ ಮಾಡಿಕೊಳ್ಳಲು ಆಗಾಗ ಪ್ರಯತ್ನಿಸುತ್ತಿರಿ.

ಕೂದಲಿಗೆ ಬಣ್ಣ ನೀಡಿ

ನಿಮ್ಮ ಕೂದಲಿಗೆ ಬಣ್ಣ ಹಚ್ಚುವ ಮೂಲಕ ಕೂದಲಿಗೆ ವಿಭಿನ್ನ ಲುಕ್ಸ್ ನೀಡಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳನ್ನು ಬಳಸಿಕೊಳ್ಳಬಹುದು. ಅಗತ್ಯವಿದ್ದರೆ ಗೋರಂಟಿ ಅಥವಾ ಬೀಟ್‌ ರೂಟ್‌ ರಸವನ್ನು ಪ್ರಯತ್ನಿಸಬಹುದು. ಇದು ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಕಪ್ಪಾಗಿಸಿ, ಆಕರ್ಷಕವಾಗಿ ಮಾಡಿ, ನಿಮ್ಮ ಕೂದಲನ್ನು ಕಂಡೀಶನ್‌ ಮಾಡುತ್ತದೆ. ಬೀಟ್‌ ರೂಟ್‌ ರಸವನ್ನು ಬಳಸಿದ ನಂತರ, ನಿಮ್ಮ ಕೂದಲಿಗೆ ನೀರನ್ನು ಬಳಸಬಾರದು. ನಿಮ್ಮ ಕೂದಲಿಗೆ ಒಮ್ಮೆ ನೀರನ್ನು ಬಳಸಿದರೆ, ಬಣ್ಣ ಉಳಿಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಕೂದಲನ್ನು ಎಚ್ಚರಿಕೆಯಿಂದ ಬಾಚಿಕೊಳ್ಳಿ

ಅನಗತ್ಯವಾದ ಸೀಳುವಿಕೆ, ಎಳೆಯುವಿಕೆಯನ್ನು ತಪ್ಪಿಸಲು ಕೂದಲನ್ನು ನಿಧಾನವಾಗಿ ಬೇರ್ಪಡಿಸುವುದು ಮುಖ್ಯ. ಕಂಡೀಶನರ್ ನ್ನು ಹಚ್ಚಿದ ನಂತರ, ಅಗಲವಾದ ಹಲ್ಲಿನ ಬಾಚಣಿಗೆ ಅಥವಾ ಬ್ರಶ್‌ ನ್ನು ವಿಶೇಷವಾಗಿ ಡೀಟ್ಯಾಂಗ್ಲಿಂಗ್‌ ಆಗಿ ವಿನ್ಯಾಸಗೊಳಿಸಲಾಗಿದೆ. ತುದಿಗಳಿಂದ ಪ್ರಾರಂಭಿಸಿ ಮತ್ತು ಯಾವುದೇ ಗಂಟುಗಳು ಅಥವಾ ಸಿಕ್ಕುಗಳನ್ನು ತೆಗೆದುಹಾಕಿ ನಿಧಾನವಾಗಿ ಮೇಲಕ್ಕೆ ಬಾಚಿ, ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಹಬ್ಬದ ಋತುವಿನಲ್ಲಿ ನೀವು ಪ್ರತಿದಿನ ಹೊಸ ಕೇಶ ವಿನ್ಯಾಸವನ್ನು ಮಾಡಿಕೊಳ್ಳಲು ಹೀಟಿಂಗ್‌ ಬಳಸಿದಾಗ, ಅದು ನಿಮ್ಮ ಕೂದಲಿಗೆ ಹಾನಿಕರ ಆಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ನೀವು ಮುಂಚಿತವಾಗಿ ನಿಮ್ಮ ಕೂದಲ ಬಗ್ಗೆ ಕಾಳಜಿ ವಹಿಸಿದರೆ, ನಿಮ್ಮ ಇಚ್ಛೆಯ ಪ್ರಕಾರ ಅವುಗಳನ್ನು ಅಲಂಕರಿಸಲು ಬಹಳ ಸುಲಭವಾಗುತ್ತದೆ. ಹೀಟಿಂಗ್‌ ಉಪಕರಣಗಳನ್ನು ಬಳಸುವ ಅಗತ್ಯ ಇರುವುದಿಲ್ಲ.

ಗಿರಿಜಾ ಕುಮಾರಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ