ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಳೆದ ವಾರದಿಂದ ಆರಂಭವಾಗಿರುವ 26ನೇ ಅವರೆ ಬೇಳೆ ಮೇಳಕ್ಕೆ ನಾಳೆ (ಜ.4) ತೆರೆಬೀಳಲಿದೆ.
ಪ್ರತಿ ವರ್ಷ ವಾಸವಿ ಕಾಂಡಿಮೆಂಟ್ಸ್​ ನಡೆಸಿಕೊಡುವ ಅವರೆ ಬೇಳೆ ಮೇಳದಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ವಾಸವಿ ಕಾಂಡಿಮೆಂಟ್ಸ್ ಈ ಬಾರಿ  ಮಾಗಡಿ ಹಾಗೂ ಸುತ್ತಮುತ್ತಲಿನ ರೈತರಿಂದ 60 ಟನ್​ಗೂ ಅಧಿಕ ಅವರೆ ಕಾಯಿ ಖರಿದಿಸಿದೆ. ನಾನಾ ಬಗೆಯ 120 ಖಾದ್ಯಗಳನ್ನು ತಯಾರಿಸಿ ಮೇಳದಲ್ಲಿ ಮಾರಾಟ ಮಾಡುತ್ತಿದೆ.

ಅವರೆ ಬೇಳೆ ಮೇಳದಲ್ಲಿ ಪಾಲ್ಗೊಳ್ಳುತ್ತಿರುವ ಜನರು ಅವರೆ ಬೇಳೆಯಿಂದ ತಯಾರಿಸಿದ ವಿವಿಧ ಭಕ್ಷ್ಯಗಳನ್ನು ಸವಿಯುತ್ತಿದ್ದಾರೆ. ಅವರೆ ಬೇಳೆ ದೋಸೆಯು ಆಹಾರ ಪ್ರಿಯರ ಮನ ಗೆದ್ದಿದೆ. ಅವರೆಬೇಳೆ ಕುನಾಫ ಕೇಕ್​ ಮತ್ತು ಮೊಮೊಸ್‌ನಂತಹ ಕೆಲವು ಪ್ರಯೋಗಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.ಅವರೆ ಬೇಳೆ ಮೇಳದಲ್ಲಿ ಪಾಲ್ಗೊಂಡಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರು ಹಾಗೂ ಸುತ್ತಮುತ್ತಲಿನ ಅವರೆಕಾಯಿ ಸೊಗಡು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕರ್ಷಣೆಯಾಗಬೇಕು. ಅದಕ್ಕೆ ಇಂತಹ ಮೇಳಗಳು ನೆರವಾಗಲಿ. ಇದಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ಮಾಗಡಿ ಅವರೆಕಾಯಿ ತನ್ನ ಸೊಗಡಿಗೆ ಬಹಳ ಪ್ರಸಿದ್ಧಿ. ಅವರೆಕಾಯಿ ಬಿಡಿಸುವ ಯಂತ್ರವನ್ನು ಕೃಷಿ ವಿಶ್ವವಿದ್ಯಾಲಯದವರು ಕಂಡು ಹಿಡಿದಿದ್ದಾರೆ ಎಂದು ತಿಳಿಸಿದರು.

ವಾರ ಕಾಲ ನಡೆಯುವ ಮೇಳದಲ್ಲಿ 5-6 ಲಕ್ಷ ಜನ ಪಾಲ್ಗೊಳ್ಳುತ್ತಾರೆ. ಐಸ್ ಕ್ರೀಮ್ ನಿಂದ ಹಿಡಿದು ದೋಸೆ, ಚಿತ್ರಾನ್ನಾ, ವಡೆ, ಬೋಂಡಾ, ಹೋಳಿಗೆ, ಬರ್ಪಿ, ಚಕ್ಕುಲಿ,  ಉಸುಳಿ, ನೀರು ದೋಸೆ, ಬೇಳೆ ಸಾರು, ಪಾಯಸ ಜಾಮೂನು, ಕೋಡುಬಳೆ, ಪಾನಿಪುರಿ ಸೇರಿದಂತೆ ನಾನಾ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದ್ದು, ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಮೇಳ ನಡೆಯುತ್ತಿದೆ. ಮಾತ್ರವಲ್ಲ, ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಳ್ಳುತ್ತಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ