ಬೆಂಗಳೂರಿನಲ್ಲಿ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ (ಜ.4) ನಡೆದ 23ನೇ ಚಿತ್ರಸಂತೆ ಚಿತ್ರರಸಿಕರ ಮನಸೂರೆಗೊಂಡಿತು. 'ಪ್ರಕೃತಿ' ವಿಷಯಾಧಾರಿತವಾಗಿ ನಡೆದ ಈ ಚಿತ್ರಸಂತೆಯಲ್ಲಿ 1500ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದು, 3 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯಿತು.
‘‘ಪ್ರಕೃತಿ, ಪರಿಸರ ವಿಷಯವನ್ನಾಧರಿಸಿ ಚಿತ್ರಸಂತೆ ಆಯೋಜಿಸಿದ್ದೇವೆ. ಈ ವರ್ಷ 22 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ 1500ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಪೈಕಿ ಅರ್ಧದಷ್ಟು ಕಲಾವಿದರಿಗೆ ಮಾತ್ರ ಭೌತಿಕವಾಗಿ ಚಿತ್ರಸಂತೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಉಳಿದ ಕಲಾವಿದರಿಗೆ ವರ್ಚುವಲ್ ಮೂಲಕ ಜನವರಿ ತಿಂಗಳಾಂತ್ಯದವರೆಗೆ ಪ್ರದರ್ಶನ ನಡೆಸಲು ಅವಕಾಶ ಕಲ್ಪಿಸಲಾಗಿದೆ,’’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಹೇಳಿದರು.
ಕಲಾವಿದರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸಲಾಗಿದೆ. ರಾಜ್ಯದ ಕಲಾವಿದರಿಗೆ ಶೇ.50ರಷ್ಟು ಮೀಸಲು ನೀಡಲಾಗಿದೆ. ಮೇಘಾಲಯ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಜಾರ್ಖಂಡ್, ಲಕ್ಷ ದ್ವೀಪ, ಅಸ್ಸಾಂ ಸೇರಿದಂತೆ ನಾನಾ ರಾಜ್ಯಗಳಿಂದಲೂ ಕಲಾವಿದರು ಆಗಮಿಸಿದ್ದಾರೆ ಎಂದು ಹೇಳಿದರು.
ಒಟ್ಟು 1500ಕ್ಕೂ ಹೆಚ್ಚು ಮಳಿಗೆ ನಿರ್ಮಿಸಿದ್ದು, ಸಾಮಾನ್ಯ ವರ್ಗಕ್ಕೆ 1165, ವಿಶೇಷಚೇತನರಿಗೆ 186, ಹಿರಿಯ ನಾಗರಿಕರಿಗೆ 87 ಮತ್ತು ವಿಶೇಷಚೇತನ ಹಿರಿಯ ನಾಗರಿಕರಿಗೆ 6 ಮಳಿಗೆಗಳನ್ನು ಒದಗಿಸಲಾಗಿತ್ತು. ಪುರುಷ ಮತ್ತು ಮಹಿಳಾ ಕಲಾವಿದರಿಗೆ ಕ್ರಮವಾಗಿ ಶೇ.67 ಮತು ಶೇ. 33ರ ಅನುಪಾತದಲ್ಲಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ವೃತ್ತಿಪರ ಕಲಾವಿದರಿಗೆ 1162 ಮತ್ತು ಹವ್ಯಾಸಿ ಕಲಾವಿದರಿಗೆ 225 ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಾಪ್ರದರ್ಶನ ಉದ್ಘಾಟಿಸಿದರು. ರಸ್ತೆ ನಡುವೆ, ಇಕ್ಕೆಲಗಳಲ್ಲಿ, ಮರದ ರೆಂಬೆ-ಕೊಂಬೆಗಳ ಮೇಲೆ, ಕಣ್ಣು ಹಾಯಿಸಿದಷ್ಟು ದೂರ ಕಲಾಕೃತಿಗಳು ಮೇಳೈಸಿದವು. ಸ್ತ್ರೀಯ ಭಾವ-ಭಂಗಿಗಳು ಹಲವು ಕಲಾಕೃತಿಗಳಲ್ಲಿ ಅನಾವರಣಗೊಂಡಿದ್ದರೆ, ಗ್ರಾಮೀಣ ಬದುಕು, ನಿಸರ್ಗ, ಕಾಡು ಪ್ರಾಣಿಗಳು, ಪುರಾಣದ ಸನ್ನಿವೇಶಗಳು ಕಲೆಯಲ್ಲಿ ಜೀವ ತಳೆದು ನಿಂತಂತಿದ್ದವು. ಮನುಷ್ಯ ಹಲವು ಬಗೆಯ ತೊಳಲಾಟ ಕಲಾಕೃತಿಯಲ್ಲಿ ವಿಶೇಷವಾಗಿ ಕಂಡುಬಂದವು. ಮೈಸೂರು ಶೈಲಿ ಸಾಂಪ್ರದಾಯಿಕ ಚಿತ್ರಗಳು, ಮಧುಬನಿ, ಮ್ಯೂರಲ್ ಆರ್ಟ್ನ ಕಂಚಿನ ವಿಗ್ರಹಗಳು, ಮರ, ಸೆರಾಮಿಕ್, ಹಳೆಯ ವಸ್ತುಗಳು, ಗಾಜು, ಬಟ್ಟೆ ಒಣ ಹೂವು ಸೇರಿದಂತೆ ಕಾಂತಾರಾ ದೈವದ ವಿನ್ಯಾಸಗಳು ಮನಸೂರೆಗೊಂಡವು. ಜೇನುಗೂಡು, ವೃಕ್ಷ ಸಂಪತ್ತಿನ ಪರಿಕಲ್ಪನೆಗಳ ಸಂಭ್ರಮ ವಿಶೇಷವಾಗಿತ್ತು. ಒಟ್ಟಾರೆ ಇಡೀ ದಿನ ಸಂತೆಗೆ ಜನಸಾಗರವೇ ಹರಿದು ಬಂದಿತ್ತು.





