ಬೆಂಗಳೂರಿನ ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಇಬ್ಬರು ಯುವತಿಯರು ಗಾಯಗೊಂಡಿದ್ದಾರೆ. ಈ ಘಟನೆ ವಿರುದ್ಧ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ದು, ಅನ್ಯ ಕೋಮಿನವರ ಪ್ರದೇಶದಿಂದಲೇ ಕಲ್ಲುಗಳು ತೂರಿ ಬಂದಿವೆ ಎಂದು ಆರೋಪಿಸಿದ್ದಾರೆ.
“ಓಂ ಓಂ ಶಕ್ತಿಯೇ, ಆದಿಪರಾಶಕ್ತಿಯೇ, ಓಂ ಶಕ್ತಿ, ಜಯ ಶಕ್ತಿ” ಎನ್ನುತ್ತಾ ಓಂ ಶಕ್ತಿ ಮಾಲಾಧಾರಿಗಳು ಶಕ್ತಿ ದೇವಿಯ ಜಪ ಮಾಡುತ್ತಾ ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ಪರವಶರಾಗಿದ್ದರು. ಕ್ಷಣಾರ್ಧದಲ್ಲೇ ಇಡೀ ಪ್ರದೇಶದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಭಕ್ತರು ದಿಕ್ಕಾಪಾಲಾದರು.
ಭಾನುವಾರ ರಾತ್ರಿ 8-30 ಗಂಟೆ ಸುಮಾರಿಗೆ ವಿಎಸ್ ಗಾರ್ಡನ್ ಬಳಿ ಮಾಲಾಧಾರಿಗಳು ಬರುತ್ತಿದ್ದಂತೆಯೇ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲೇಟು ಓಂ ಶಕ್ತಿ ಮಾಲಾಧಾರಿ ಯುವತಿಯರ ತಲೆಗೆ ಬಡಿದು ರಕ್ತ ಹರಿದಿದೆ.
ಕಲ್ಲು ತೂರಾಟದ ಬೆನ್ನಲ್ಲೇ, ಕೆರಳಿದ ಮಾಲಾಧಾರಿಗಳು ಜೆಜೆ ನಗರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಅನ್ಯ ಕೋಮಿನವರು ಬೇಕಂದೇ ಕಲ್ಲು ಎಸೆದಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ. ಪ್ರತಿ ದಿನ ಭಯದಲ್ಲೇ ಜೀವನ ನಡೆಸುತ್ತಿದ್ದೇವೆ. ನಮ್ಮ ಏರಿಯಾಗೂ ಅವರ ಏರಿಯಾ ನಡುವೆ ಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಠಾಣೆ ಎದುರು ಜಮಾಯಿಸಿದ ಜನ, ರಸ್ತೆ ವಾಹನ ಸಂಚಾರವನ್ನು ಅಡ್ಡಗಟ್ಟಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಯತ್ನ ನಡೆಸಿದರೂ ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರೆದಿತ್ತು. ಎಸಿಪಿ ಭರತ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಓಂ ಶಕ್ತಿ ಮಾಲಾಧಾರಿಗಳು ಮೆರವಣಿಗೆ ಮಾಡುತ್ತಿದ್ದಾಗ, ರಾತ್ರಿ 8.10ರ ಸುಮಾರಿಗೆ ಕತ್ತಲೆಯಲ್ಲಿ ಕಲ್ಲು ತೂರಾಟ ನಡೆದಿದೆ. ನಮ್ಮ ಮಗಳ ತಲೆ ಮೇಲೆ ಕಲ್ಲು ಬಿದ್ದು ಗಾಯಗೊಂಡಿದ್ದಾಳೆ ಎಂದು ಗಾಯಾಳು ಯುವತಿ ತಂದೆ ಹೇಳಿದ್ದಾರೆ.
ಅನ್ಯಕೋಮಿನವರ ಏರಿಯಾದಿಂದ ಕಲ್ಲುಗಳು ಬಂದು ನಮ್ಮ ಮೇಲೆ ಬಿದ್ದಿವೆ. ಕತ್ತಲೆಯಾದ್ದರಿಂದ ಯಾರು ಕಲ್ಲು ತೂರಿದ್ದಾರೆ ಎಂಬುದು ನಮಗೆ ಗೊತ್ತಾಗಿಲ್ಲ ಎಂದಿದ್ದಾರೆ.
ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ, ಓಂ ಶಕ್ತಿ ಮಾಲಾಧಾರಿಗಳ ಅಧ್ಯಕ್ಷ ಶಶಿಕುಮಾರ್ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.
ಕಲ್ಲೆಸೆತದಲ್ಲಿ ಇಬ್ಬರು ಯುವತಿಯರ ತಲೆಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಇನ್ಸ್ಪೆಕ್ಟರ್ಗಳ ತಂಡ ಪ್ರಕರಣದ ತನಿಖೆ ಮಾಡುತ್ತದೆ. ಆರೋಪಿಗಳನ್ನು ಬಂಧಿಸುವ ಕೆಲಸ ಆಗುತ್ತದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ತಿಳಿಸಿದ್ದಾರೆ.
ಕಲ್ಲುತೂರಾಟದ ಬಳಿಕ ಜೆಜೆ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಏರಿಯಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ನಿನ್ನೆ ರಾತ್ರಿಯಿಂದಲೇ 2 ಕೆಎಸ್ಆರ್ಪಿ ತುಕಡಿ ನಿಯೋಜಿಸಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.





