ಪ್ರಶ್ನೆ : ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ವಸ್ತುನ್ನು ಹೆಸರಿಸಿ.

ಉತ್ತರ : ಇಡ್ಲಿ, ದೋಸೆ ಹಿಟ್ಟು!

ಪತಿ : ಅಕಸ್ಮಾತ್‌ ಮುಂದೊಂದು ದಿನ ನಾನು ಕಣ್ಮರೆಯಾಗಿ ತಪ್ಪಿಸಿಕೊಂಡು ಬಿಟ್ಟರೆ, ಆಗ ಏನು ಮಾಡ್ತೀಯಾ?

ಪತ್ನಿ : ತಕ್ಷಣ ಪೇಪರ್‌ ನಲ್ಲಿ ಜಾಹೀರಾತು ಕೊಡ್ತೀನಿ.

ಪತಿ : ವಾಹ್‌…. ಏನಂತ ಕೊಡ್ತೀಯಾ?

ಪತ್ನಿ : ಗಂಡ ಬೇಕಾಗಿದ್ದಾನೆ!

ಪತ್ನಿ : ರೀ, ನಾವು ಭೂತ ಓಡಿಸ್ಬೇಕಾದ್ರೆ ತಾಯಿತ ಕಟ್ತೀವಿ, ಅದೇ ಭೂತವನ್ನು ಕರೀಬೇಕಾದ್ರೆ…..?

ಪತಿ : ತಾಳಿ ಕಟ್ತೀವಿ…..!

ಮಹಿಳೆ : ಸ್ವಾಮೀಜಿ, ನನ್ನ ಗಂಡನನ್ನು ಸದ್ಯಕ್ಕೆ ಸಿಲುಕಿರೋ ಹಗರಣದಿಂದ ಪಾರು ಮಾಡಿ.

ಸ್ವಾಮೀಜಿ : ತಾಯಿ, ಯಾವುದಾದರೂ ಹಗರಣವೇ ಇಲ್ಲದ ರಾಜಕಾರಣಿಯ ಮನೆಯಿಂದ ಸಾಸುವೆ ತಂದರೆ, ನಿನ್ನ ಗಂಡನ್ನ ಪಾರು ಮಾಡಬಹುದು.

ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು :

  1. ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ “ಅವಳು ನಿನ್ನನ್ನೇ ನೋಡುತ್ತಿದ್ದಾಳೆ!”
  2. ಬಸ್‌ ಕಂಡೆಕ್ಟರ್‌ ಹೇಳಿದ ಸುಳ್ಳು ಕಥೆ “ನೆಕ್ಸ್ಟ ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.”
  3. ಪೋಷಕರು ಹೇಳಿದ ಸುಳ್ಳು ಕಥೆ “10ನೇ ತರಗತಿವರೆಗೆ ಕಷ್ಟಪಟ್ಟರೆ ಸಾಕು…. ಆಮೇಲೆ ಆರಾಮವಾಗಿ ಇರಬಹುದು.”
  4. ಕಾಲೇಜ್‌ ಪ್ರಿನ್ಸಿಪಾಲ್ ‌ಹೇಳಿದ ಸುಳ್ಳು ಕಥೆ “ಈ ಕೋರ್ಸ್‌ ಗೆ ಮುಂದೆ ಬಹಳ ಸ್ಕೋಪ್‌ ಇದೆ.”
  5. ಹೊಸದಾಗಿ ನೇಮಕಗೊಂಡ ಸಹೋದ್ಯೋಗಿ ಹೇಳಿದ ಸುಳ್ಳು ಕಥೆ “ಸಂಬಳ ಕಡಿಮೆ. ಆದರೆ ಏನಂತೆ…. ಕಲಿಯಲು

ಬಹಳಷ್ಟು ಅವಕಾಶ ಇದೆ.”

  1. ಬಡ್ತಿ ತಿರಸ್ಕರಿಸುವಾಗ ಬಾಸ್‌ ಹೇಳಿದ ಸುಳ್ಳು ಕಥೆ “ನಿನ್ನ ಪರ್ಫಾರ್ಮೆನ್ಸ್ ತೃಪ್ತಿದಾಯಕವಾಗಿಲ್ಲ.”
  2. ಹುಡುಗಿಯನ್ನು ನೋಡಲು ಹೋದಾಗ, ಅತ್ತೆ ಮನೆಯವರು ಹೇಳಿದ ಸುಳ್ಳು ಕಥೆ “ನಮ್ಮ ಹುಡುಗಿ ಅಡುಗೆ ಚೆನ್ನಾಗಿ ಮಾಡ್ತಾಳೆ. ಈ ಅವಲಕ್ಕಿ ಇವಳೇ ಮಾಡಿದ್ದು…..!!”
  3. ಮದುವೆಗೆ ಮೊದಲು ಹುಡುಗ ಹುಡುಗಿಗೆ ಹೇಳಿದ ಸುಳ್ಳು ಕಥೆ “ನಾನು ಅಕೇಶನಲಿ ಡ್ರಿಂಕ್ಸ್ ತಗೋಳ್ತೀನಿ ಅಷ್ಟೆ……!!”
  4. ಪ್ರಶಸ್ತಿ ವಿತರಣೆಯ ಸಮಯದಲ್ಲಿ ಅತಿಥಿ ಹೇಳಿದ ಸುಳ್ಳು ಕಥೆ “ನನ್ನ ದೃಷ್ಟಿಯಲ್ಲಿ ಎಲ್ಲರೂ ವಿನ್ನರ್ಸ್‌.”
  5. ಬಟ್ಟೆ ಅಂಗಡಿಯ ಸೇಲ್ಸ್ ಮನ್‌ ಹೇಳಿದ ಸುಳ್ಳು ಕಥೆ “ಈ ಬಣ್ಣ ನಿಮಗೆ ಕರೆಕ್ಟ್ ಆಗಿ ಸೂಟ್‌ ಆಗುತ್ತೆ….”
  6. ಟೇಬಲ್ ಮೇಟ್‌ ಹೇಳಿದ ಸುಳ್ಳು ಕಥೆ “ಬಿಯರ್‌ ಆಲ್ಕೋಹಾಲ್ ಅಲ್ಲ ಮಾರಾಯ….”

ಇನ್ನೊಂದು ಎಕ್ಟ್ರಾಡಿನರಿ ಮಹಾನ್‌ ಸುಳ್ಳು ಕಥೆ ಗಂಡ ತನ್ನ ಹೆಂಡತಿಗೆ ಹೇಳಿದ್ದು  “ನನ್ನ ಹೃದಯದಲ್ಲಿ ನಿನ್ನನ್ನು ಬಿಟ್ಟು ಯಾರಿಗೂ  ಜಾಗ ಇಲ್ಲ…..!!”

ಟೀಚರ್‌ : `ಸಕ್ಕರೆ’ ಎಂಬ ಪದ ಬಳಸಿ ಒಂದು ವಾಕ್ಯ ರಚಿಸಿರಿ.

ಗುಂಡ : ನಿನ್ನೆ ಸಂಜೆ ನಾನು ಒಂದು ಕಪ್‌ ಚಹಾ ಕುಡಿದೆ.

ಟೀಚರ್‌ : ಇದರಲ್ಲಿ ಸಕ್ಕರೆ ಎಲ್ಲಿ ಬಂತೋ…?

ಗುಂಡ : ಅದು ಚಹಾದಲ್ಲಿ ಕರಗಿದೆ ಟೀಚರ್‌!

ಟೀಚರ್‌ : ಮಕ್ಕಳೇ, ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ, ಅಲ್ಲವೇ? ಅದಕ್ಕೆ ಏನಂತಾರೆ?

ಸೀನ : ಅಷ್ಟೆಲ್ಲ ಗೊತ್ತಿದ್ದರೆ ನಾವೇಕೆ ನಿಮ್ಮ ಕ್ಲಾಸ್‌ ಅಟೆಂಡ್‌ ಮಾಡ್ತಿದ್ವಿ?

ಟೀಚರ್‌ : ಹಾಳಾಗಿ ಹೋಗಲಿ, ಇವತ್ತಿನ ಜೀವಶಾಸ್ತ್ರದ ಪ್ರಮುಖ ಕಾನ್ಸೆಪ್ಟ್ ದ್ಯುತಿ ಸಂಸ್ಲೇಷಣೆ (ಫೋಟೋಸಿಂಥೆಸಿಸ್‌). ಈಗ ಹೇಳಿ, ದ್ಯುತಿ ಸಂಸ್ಲೇಷಣೆ ಅಂದ್ರೆ ಏನು?

ನಾಣಿ : ಅದೇ… ಇವತ್ತಿನ ನಮ್ಮ ಸಸ್ಯಶಾಸ್ತ್ರ ಪಾಠದ ಟಾಪಿಕ್‌!

`ವೆಂಕಿ ಮರ ಹತ್ತಿ ಮಾವಿನ ಹಣ್ಣು ಕೀಳಲು ಬರುತ್ತಿದ್ದಾನೆ.’ ಮಕ್ಕಳೇ, ಈ ವಾಕ್ಯನ್ನು ಮಾವಿನಿಂದ ಹೇಗೆ ಆರಂಭಿಸಬಹುದು, ಪ್ರಯತ್ನಿಸಿ ನೋಡೋಣ!

ಗುಂಡ : ಮಾವಿನ ಹಣ್ಣುಗಳೇ! ವೆಂಕಿ ಮರ ಹತ್ತಿ ನಿಮ್ಮನ್ನು ಕೇಳಲು ಬರುತ್ತಿದ್ದಾನೆ, ಎಚ್ಚರ!

ಟೀಚರ್‌ : ಮಕ್ಕಳೆ, ಶಾಲೆ ಅಂದ್ರೆ ನಿಮ್ಮೆಲ್ಲರಿಗೂ ಬಹಳ ಇಷ್ಟ ಅಲ್ಲವಾ?

ವಾಣಿ : ಹೌದು ಟೀಚರ್‌, ರಜಾ ದಿನಗಳಿಗಿಂತಲೂ ಶಾಲೆಯೇ ನಮಗೆ ಇಷ್ಟ. ಇಲ್ಲಿ ನಮ್ಮ ಎಲ್ಲ ಫ್ರೆಂಡ್ಸ್ ಇರ್ತಾರಲ್ಲ…..?

ಟೀಚರ್‌ : ಹಾಗಿದ್ದರೂ ವಿದ್ಯಾರ್ಥಿಗಳಿಗೆ ಶಾಲೆ ಕುರಿತು ಹಿಡಿಸದೆ ಇರುವಂಥ, ದ್ವೇಷಿಸುವಂಥ ವಿಷಯ ಇದೆ ಅಂತೀರಾ?

ವೆಂಕಿ : ಯಾಕಿಲ್ಲ? ಪರೀಕ್ಷೆ ಎಂಬ ಭೂತ ಇದ್ದೇ ಇದೆಯಲ್ಲ!

ಟೀಚರ್‌ : ಮಕ್ಕಳೆ, ನಮ್ಮ ಶಾಲೆಯನ್ನು ಸದಾ ಸರ್ವದಾ ಶುಚಿಯಾಗಿ, ಶುಭ್ರವಾಗಿ ಇರಿಸಿಕೊಳ್ಳುವುದು ಹೇಗೆ?

ರಾಣಿ : ಬಹಳ ಸುಲಭ ಮೇಡಂ, ಪ್ರತಿ ತಿಂಗಳಿಗೊಮ್ಮೆ 1-2 ತಿಂಗಳು ಶಾಲೆಗೆ ರಜೆ ಕೊಡುತ್ತಿರಬೇಕು, ಆಗ ಶಾಲೆಯನ್ನು ಗಲೀಜು ಮಾಡುವವರು ಯಾರಿರುತ್ತಾರೆ?

ಟೀಚರ್‌ : ಮಕ್ಕಳೆ, ನಿಮಗೆ ಇವತ್ತಿನ ವ್ಯಾಕರಣದ ಪಾಠ ಅರ್ಥ ಆಯ್ತು ತಾನೇ!

ಮಕ್ಕಳು : ಏನೋ…. ಸುಮಾರಾಗಿ ಆಗಿದೆ ಅನ್ಸುತ್ತೆ.

ಟೀಚರ್‌ : ಹಾಗ್ದಾರೆ ಈಗ ಹೇಳಿ, `ನಮ್ಮ ದೇಶ ಒಂದಲ್ಲ ಒಂದು ದಿನ ಲಂಚವಿಲ್ಲದ ನಾಡಾಗಲಿದೆ!’ ಈ ವಾಕ್ಯ ಯಾವ ಕಾಲದಲ್ಲಿದೆ?

ರಿಂಕು : ಎಂದೆಂದೂ ನಡೆಯದ ಇಂಪಾಸಿಬಲ್ ಕಾಲ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ