ರಾಘವೇಂದ್ರ ಅಡಿಗ ಎಚ್ಚೆನ್.

ಹಿರಿಯ ಪರಿಸರ ವಿಜ್ಞಾನಿ ಮಾಧವ ಧನಂಜಯ ಗಾಡ್ಗೀಳ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಪಶ್ಚಿಮ ಘಟ್ಟಗಳ ಸಂರಕ್ಷಣಾ ವರದಿಯನ್ನು ರಚಿಸಿದ್ದ ಪರಿಸರವಾದಿ ಮತ್ತು ಬರಹಗಾರ ಡಾ. ಮಾಧವ ಗಾಡ್ಗೀಳ್ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ಪುಣೆಯ ಪ್ರಯಾಗ್ ಆಸ್ಪತ್ರೆಯಲ್ಲಿ  ನಿಧನರಾದರು. ಇಂದು ಸಂಜೆ ಪುಣೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1942 ಮೇ 24 ರಂದು ಪುಣೆಯಲ್ಲಿ ಜನಿಸಿದ ಮಾಧವ ಗಾಡ್ಗೀಳ್ ಅವರು ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ (ಪ್ರಾಣಿಶಾಸ್ತ್ರ) ಪದವಿ ಪಡೆದು 1965 ರಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪಡೆದು 1969 ರಲ್ಲಿ ಹಾರ್ವರ್ಡ್‌ನಿಂದ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು.
ಭಾರತಕ್ಕೆ 1971 ರಲ್ಲಿ ಮರಳಿದ ಬಳಿಕ 1973 ರಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ 2004 ರಲ್ಲಿ ಅಧ್ಯಕ್ಷರಾಗುವ ಮೂಲಕ ಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

Madhava 1

ಪರಿಸರ ಶಾಸ್ತ್ರಜ್ಞ, ಬರಹಗಾರ ಹಾಗೂ ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಗಾಡ್ಗೀಳ್ ಅವರು, ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದರು ಮತ್ತು 2010 ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ ಮುಖ್ಯಸ್ಥರಾಗಿದ್ದರು. ಇವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಗಾಡ್ಗೀಳ್‌ ಆಯೋಗದ ವರದಿ ಎಂದೇ ಕರೆಯಲಾಗುತ್ತಿತ್ತು.
ಗಾಡ್ಗೀಳ್ ಅವರ ಜೀವನದ ಬಹುಮುಖ್ಯ ಅಧ್ಯಾಯಗಳು ‘ಕರ್ನಾಟಕದಲ್ಲೇ’ ರೂಪುಗೊಂಡಿದ್ದಾವೆ. 1973ರಲ್ಲಿ ಅವರು ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಸೇರಿದರು. ಮುಂದಿನ 31 ವರ್ಷಗಳ ಕಾಲ ಅವರು ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸೆಂಟರ್ ಫಾರ್ ಇಕಾಲಾಜಿಕಲ್ ಸೈನ್ಸಸ್ (CES) ಅನ್ನು ಸ್ಥಾಪಿಸಿದರು. ಈ ಕೇಂದ್ರವೇ ಮುಂದೆ ಭಾರತದಲ್ಲಿ ಪರಿಸರ ವಿಜ್ಞಾನದ ಪ್ರಮುಖ ತೊಟ್ಟಿಲಾಗಿ ಬೆಳೆದಿದ್ದು ಇತಿಹಾಸ. 1970ರ ದಶಕದಲ್ಲಿ ಗಾಡ್ಗೀಳ್ ಮತ್ತು ಅವರ ತಂಡ ಬಂಡೀಪುರ, ದಾಂಡೇಲಿ ಸೇರಿ ಕರ್ನಾಟಕದ 85 ಅರಣ್ಯ ಶ್ರೇಣಿಗಳಲ್ಲಿ ವ್ಯಾಪಕ ಕ್ಷೇತ್ರ ಅಧ್ಯಯನ ನಡೆಸಿದರು. ಈ ಸಂಶೋಧನೆಗಳು ಕರ್ನಾಟಕದ ಅರಣ್ಯ ಮತ್ತು ಪರಿಸರ ನೀತಿಗಳ ಮೇಲೆ ದೀರ್ಘಕಾಲೀನ ಪ್ರಭಾವ ಬೀರಿದವು. ಅವರು ಕೇವಲ ಅರಣ್ಯವನ್ನು ಅಧ್ಯಯನ ಮಾಡಲಿಲ್ಲ; ಅರಣ್ಯದೊಳಗೆ ಬದುಕುವ ಬುಡಕಟ್ಟು ಜನಾಂಗ, ರೈತರು, ಮೀನುಗಾರರ ಜ್ಞಾನವನ್ನೂ ವಿಜ್ಞಾನಕ್ಕೆ ಸಮಾನವಾಗಿ ಪರಿಗಣಿಸಿದ್ದದ್ದೂ ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಗಾಡ್ಗಿಲ್ ಅವರಿಗೆ ಕರ್ನಾಟಕದೊಂದಿಗೆ ಭಾವನಾತ್ಮಕ ಸಂಬಂಧವೂ ಇತ್ತು. ಅವರು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು, ಅಲ್ಲದೇ ಬರೆಯುತ್ತಿದ್ದರು. ಕರ್ನಾಟಕ ಯೋಜನಾ ಮಂಡಳಿಯ ಸದಸ್ಯರಾಗಿದ್ದಾಗ, ತಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲೇ ಮಂಡಿಸುತ್ತಿದ್ದರು. ಈ ಕಾರಣಕ್ಕೆ, ವಿಜ್ಞಾನಿ ಮತ್ತು ಸಾಮಾನ್ಯ ಜನರ ನಡುವೆ ಅಪರೂಪದ ಸೇತುವೆಯಾಗಿ ಅವರು ನಿಂತಿದ್ದರು. 1983ರಲ್ಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತದ್ದು ಈ ಸಂಬಂಧಕ್ಕೆ ಸಾಕ್ಷಿಯಾಗಿದೆ.
ಗಾಡ್ಗಿಲ್ ಆಯೋಗ ಮತ್ತು ವಿವಾದ
ಈ ಗಾಡ್ಗಿಳ್ ಆಯೋಗ ರಚಿಸದಿದ್ದರೇ, ಅದು ವಿವಾದದ ರೂಪದಲ್ಲಿ ಮುನ್ನೆಲೆಗೆ ಬರೆದಿದ್ದರೇ, ಗಾಡ್ಗಿಲ್ ಸಹ 10ರಲ್ಲಿ ಒಬ್ಬರಾಗಿ ಉಳಿದಿರುತ್ತಿದ್ದರು. ಈ ಆಯೋಗದಿಂದಲೇ ಅವರ ದೂರದೃಷ್ಟಿ ಚಿಂತನೆ ಅಂದು ಮಲೆನಾಡಿನ ಜನರ ಕಣ್ಣು ತೆರೆಯಲು ಸಾಕ್ಷಿಯಾಯಿತು. 2011ರಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಗಾಡ್ಗಿಲ್ ನೇಮಕವಾದರು. ಅವರ ನೇತೃತ್ವದಲ್ಲಿ ರಚನೆಯಾದ ಗಾಡ್ಗೀಳ್ ವರದಿ, ಪಶ್ಚಿಮ ಘಟ್ಟಗಳ 75% ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ESA) ಎಂದು ಘೋಷಿಸಲು ಶಿಫಾರಸು ಮಾಡಿತು. ಕರ್ನಾಟಕದ ಮೂಲಕ ಹಾದುಹೋಗುವ ಪಶ್ಚಿಮ ಘಟ್ಟಗಳ ಭಾಗಕ್ಕೂ ಈ ವರದಿ ಅನ್ವಯಿಸಿತು. ಇದೇ ಕಾರಣಕ್ಕೆ, ಕರ್ನಾಟಕದಲ್ಲಿ ಈ ವರದಿ ಭಾರೀ ವಿವಾದಕ್ಕೆ ಕಾರಣವಾಯಿತು. ಅಭಿವೃದ್ಧಿ ವಿರೋಧಿ ಎಂದು ಕೆಲವರು ಆರೋಪಿಸಿದರೆ, ರಾಜಕೀಯವಾಗಿ ಅನುಕೂಲಕರವಲ್ಲ ಎಂಬ ಕಾರಣಕ್ಕೆ ವರದಿಯನ್ನು ಕಡೆಗಣಿಸಲಾಯಿತು. ಗಣಿಗಾರಿಕೆ, ಅಣೆಕಟ್ಟು, ರಸ್ತೆ, ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಈ ವರದಿ ದೊಡ್ಡ ಅಡ್ಡಿಯಾಯಿತು. ಅನಿಯಂತ್ರಿತ ಅಭಿವೃದ್ಧಿ ಭೂಕುಸಿತ, ಪ್ರವಾಹ ಮತ್ತು ದೀರ್ಘಕಾಲೀನ ಪರಿಸರ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಅಂದೇ ಗಾಡ್ಗಿಳ್ ಅಂದೇ ಮನಗಂಡಿದ್ದರು. ವರ್ಷಗಳ ನಂತರ, ಕೇರಳ ಮತ್ತು ಪಶ್ಚಿಮ ಘಟ್ಟಗಳ ಹಲವು ಭಾಗಗಳಲ್ಲಿ ಸಂಭವಿಸಿದ ಭೀಕರ ಪ್ರವಾಹಗಳು ಮತ್ತು ಭೂಕುಸಿತಗಳು, ಗಾಡ್ಗೀಳ್ ಅವರ ಮಾತುಗಳನ್ನು ಸತ್ಯವೆಂದು ಸಾಬೀತುಪಡಿಸಿದವು. ಅವರು ಹೇಳಿದ್ದಂತೆ, ಇದು ಕೇವಲ ಪರಿಸರ ಸಮಸ್ಯೆಯಲ್ಲ, ಮಾನವ ಬದುಕಿನ ಪ್ರಶ್ನೆ ಎನ್ನುವುದನ್ನು ಸಾರಿ, ಸಾರಿ ಹೇಳಿತ್ತು.
ಪರಿಸರ ಕ್ಷೇತ್ರದಲ್ಲಿನ ಸಾಧನೆಗಾಗಿ ಗಾಡ್ಗೀಳ್ ಅವರಿಗೆ ವೋಲ್ವೋ, ಟೈಲರ್ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಭಾರತ ಸರ್ಕಾರ 1981 ರಲ್ಲಿ ಅವರಿಗೆ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 2006 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿತು. 2024 ರಲ್ಲಿ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯನ್ನು ಪಡೆದಿದ್ದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಂಬನಿ
ಮಾಧವ ಗಾಡ್ಗೀಳ್ ಅವರ ನಿಧನಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಮಾಧವ ಗಾಡ್ಗೀಳ್ ಅವರ ನಿಧನ ಸುದ್ದಿ ತಿಳಿದು ಅತೀವ ದುಃಖವಾಯಿತು. ಪರಿಸರ ಸಂರಕ್ಷಣೆಗೆ ಮತ್ತು ಜೀವವೈವಿಧ್ಯತೆಯ ವಿಶ್ವದ ಅದ್ಭುತ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟದ ಉಳಿವಿಗೆ ಮತ್ತು ಸಂರಕ್ಷಣೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ಗಾಡ್ಗೀಳ್ ಅವರು ತಮ್ಮ 83ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದು, ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಹಲವು ನದಿಗಳ ಮೂಲ, ಆಮ್ಲಜನಕದ ಕಣಜ ಹಾಗೂ ಮುಂಗಾರು ಮಾರುತಗಳನ್ನು ತಡೆದು ದೇಶವ್ಯಾಪಿ ಮಳೆಯಾಗಲು ಸಹಕಾರಿಯಾಗಿರುವ ಪಶ್ಚಿಮಘಟ್ಟಗಳ ಗಿರಿ ಪ್ರದೇಶಗಳು ಗಣಿಗಾರಿಕೆ ಹಾಗೂ ಮಾಲಿನ್ಯ ಕಾರಕ ಕೈಗಾರಿಕೆಗಳಿಂದ ಕ್ರಮೇಣ ನಾಶವಾಗುತ್ತಿರುವ ಬಗ್ಗೆ ಸದಾ ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದ ಗಾಡ್ಗೀಳ್ ಅವರು ಸಲ್ಲಿಸಿರುವ ವರದಿಯಲ್ಲಿರುವ ಅಂಶಗಳು ಪ್ರಕೃತಿ ಪರಿಸರ ಸಂರಕ್ಷಣೆಗೆ ಭಾರತಕ್ಕೆ ಮಾರ್ಗದರ್ಶಿಸೂತ್ರಗಳಾಗಿವೆ ಎಂದು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ