ಮಹಿಳಾ ಪ್ರೀಮಿಯರ್ ಲೀಗ್ (WPL 2026) 4ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯ ಜನವರಿ 9 ರಿಂದ (ಇಂದಿನಿಂದ) ಫೆ.5ರವರೆಗೆ ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿವೆ. 5 ತಂಡಗಳು ಭಾಗವಹಿಸುವ ಈ ಟೂರ್ನಿಯು, ಮುಂಬರುವ ಟಿ20 ವಿಶ್ವಕಪ್ಗೆ ಆಟಗಾರ್ತಿಯರ ಆಯ್ಕೆಗೆ ಪ್ರಮುಖ ವೇದಿಕೆಯಾಗಲಿದೆ.
ಇಂದು ಸಂಜೆ 6:30 ರಿಂದ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, 7:30ಕ್ಕೆ ಪಂದ್ಯ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಸೆಣಸಲಿವೆ.
2025 ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದರೆ, 2024ರಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿದೆ. ಕಳೆದ ಬಾರಿ ಬೆಂಗಳೂರು ತಂಡ ಸೋಲನುಭವಿಸಿ ಲೀಗ್ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದು, 2026 ರಲ್ಲಿ ಕಪ್ ಗೆಲ್ಲಲೇಬೇಕು ಎಂಬ ಪಣ ತೊಟ್ಟಿದೆ.
ಮುಂಬೈ ಇಂಡಿಯನ್ಸ್ ನಡೆದ ಮೂರು ಸೀಸನ್‌ಗಳಲ್ಲಿ ಎರಡು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆರ್‌ಸಿಬಿ ಒಂದು ಬಾರಿ ಗೆದ್ದಿದೆ. ಈ ಬಾರಿ 4ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವ ಸಾಲಿನಲ್ಲಿ ಇವೆರಡು ತಂಡಗಳ ಹೆಸರುಗಳು ಮುಂಚೂಣಿಯಲ್ಲಿವೆ.
ಇನ್ನೂ ಈ ಬಾರಿ ಇವರೆಡು ತಂಡಗಳನ್ನು ಹೊರತುಪಡಿಸಿ ಉಳಿದ 3 ತಂಡಗಳಿಗೆ ಹೊಸ ನಾಯಕಿಯರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 5 ಟೀಂ ಗಳು ಟ್ರೋಫಿಗಾಗಿ ಕಾದಾಟ ನಡೆಸಲಿವೆ.
ಟೂರ್ನಿ ಮಾದರಿ: ಈ ಹಿಂದಿನ ಆವೃತ್ತಿಗಳಂತೆಯೇ ಈ ಸಲವೂ ಪ್ರಶಸ್ತಿಗಾಗಿ 5 ತಂಡಗಳು ಸೆಣಸಲಿವೆ. ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅಂದರೆ ಪ್ರತಿ ತಂಡ ಉಳಿದ 4 ತಂಡದ ವಿರುದ್ಧ ತಲಾ 2 ಬಾರಿ ಆಡಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಪ್ಲೇ-ಆಫ್‌ನಲ್ಲಿ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳಲಿದೆ.
2 ನಗರ, ತಲಾ 11 ಪಂದ್ಯ: ಟೂರ್ನಿಯನ್ನು ಈ ಸಲವೂ ಎರಡು ನಗರಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ನವಿ ಮುಂಬೈನ ಡಿ.ವೈ.ಪಾಟೀಲ್, ವಡೋದರಾದ ಕೋಟಂಬಿ ಕ್ರೀಡಾಂಗಣಗಳು ತಲಾ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಮೊದಲ ಚರಣ ನವಿ ಮುಂಬೈನಲ್ಲಿ ನಡೆಯಲಿದ್ದು, ಲೀಗ್ ಹಂತದ 9, ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯ ವಡೋದರಾದಲ್ಲಿ ನಡೆಯಲಿವೆ.
ಟಿ20 ವಿಶ್ವಕಪ್ಗೆ ಸಿದ್ಧತೆ: 4ನೇ ಆವೃತ್ತಿಯ ಡಬ್ಲ್ಯುಪಿಎಲ್ ಜೂನ್- ಜುಲೈನಲ್ಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸಲು ನೆರವಾಗಲಿದೆ. ಭಾರತದ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಲು ಡಬ್ಲ್ಯುಪಿಎಲ್ ಅನ್ನು ಬಿಸಿಸಿಐ ಬಳಸಿಕೊಳ್ಳಲಿದೆ. ಅದೇ ರೀತಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದ. ಆಫ್ರಿಕಾ, ವೆಸ್ಟ್ಇಂಡೀಸ್, ನ್ಯೂಜಿಲೆಂಡ್ನ ಹಲವು ಆಟಗಾರ್ತಿಯರು ಟೂರ್ನಿಯಲ್ಲಿ ಆಡಲಿದ್ದಾರೆ.
ಹೊಸ ನಾಯಕಿಯರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಜೆಮಿಮಾ ರೊಡ್ರಿಗಸ್, ಯುಪಿ ವಾರಿಯರ್ಸ್‌ಗೆ ಆಸ್ಟ್ರೇಲಿಯನ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಹಾಗೂ ಆ್ಯಶ್ಲೀ ಗಾರ್ಡ್ನರ್ ಅವರು ಗುಜರಾತ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕಿಯರಾಗಿ ಕ್ರಮವಾಗಿ ಸ್ಮೃತಿ ಮಂಧಾನ ಮತ್ತು ಹರ್ಮನ್ ಪ್ರೀತ್ ಕೌರ್ ಅವರೇ ಮುಂದುವರಿದಿದ್ದಾರೆ.





