ಮಹೇಶ : ಕಳೆದ ಸಲದ ಒಲಿಂಪಿಕ್ಸ್ ನಲ್ಲಿ ವೆಯ್ಟ್ ಲಿಪ್ಟಿಂಗ್‌ ಚಾಂಪಿಯನ್‌ ಎನಿಸಿರುವ ಮೀರಾಬಾಯಿ ಚಾನೂ 49 ಕಿಲೋ ವರ್ಗದಲ್ಲಿ, ಸುಲಭವಾಗಿ 205 ಕಿಲೋ ತೂಕ ಎತ್ತಿಳಿಸಿ ನಮ್ಮ ದೇಶಕ್ಕೆ ಚಿನ್ನ ತಂದಿದ್ದಾರೆ! ಎಂಥ ಗ್ರೇಟ್‌ ಅಲ್ಲವೇ?

ಸುರೇಶ : ಅದು ಸರಿ ಮಾರಾಯ, ನನ್ನ ಹೆಂಡತಿ 60 ಕಿಲೋ ತೂಗುತ್ತಾಳೆ. ಆದರೆ ಮಾರುಕಟ್ಟೆಗೆ ಹೋದಾಗ, ತರಕಾರಿ ಚೀಲ 1 ಕಿಲೋ ತೂಕಕ್ಕಿಂತ ಭಾರ ಎನಿಸಿದರೆ, ತಕ್ಷಣ ಆ ಚೀಲವನ್ನು ನನ್ನ ಕೈಗೆ ರವಾನಿಸುತ್ತಾಳೆ…. ಇವಳಿಗೂ ಆಗಾಗ ಚಿನ್ನ ಕೊಡಿಸಬೇಕಂತೆ….!

ಮಹೇಶ : ಅಯ್ಯೋ ಪಾಪ… ಗಂಡಂದಿರ ಗೋಳು ಕೇಳುವವರು ಯಾರು?

ವಿದೇಶಿ : ನಿಮ್ಮ ದೇಶದಲ್ಲಿ ನೀವು ಕಾರನ್ನು ರಸ್ತೆಯ ಎಡಬದಿಗೆ ಚಲಿಸುತ್ತೀರೋ ಬಲ ಬದಿಗೋ?

ಸ್ವದೇಶಿ : ನಮ್ಮ ದೇಶದ ರಸ್ತೆಯಲ್ಲಿ ಗುಂಡಿ, ಹಳ್ಳ ಬಿಟ್ಟು ಯಾವ ಭಾಗ ಅಳಿದುಳಿದಿರುತ್ತದೋ ಆ ಭಾಗದಲ್ಲಿ ಚಲಿಸುತ್ತೇವಷ್ಟೆ!

ಗೀತಾ : ಬೆಂಗಳೂರಿನಲ್ಲಿ ಯಾವ ಕಾರಣದಿಂದ ಇಷ್ಟೊಂದು ಸುಲಭವಾಗಿ ಟ್ರಾಫಿಕ್‌ ಆ್ಯಕ್ಸಿಡೆಂಟ್ಸ್ ಆಗುತ್ತಲೇ ಇರುತ್ತದೆ?

ಸುಧಾ : ಶಿಸ್ತಾಗಿ ಟ್ರಾಫಿಕ್‌ ರೂಲ್ಸ್ ‌ಪಾಲಿಸಿದರೆ ಇದೇ ಗತಿ, ಮನಸ್ಸು ಬಂದಂತೆ ಗಾಡಿ ಓಡಿಸಿದರೆ ಯಾವ ತಂಟೆ ತಕರಾರೂ ಇಲ್ಲ!

ಯಾರೋ ಒಬ್ಬ ಆಧುನಿಕ ತರುಣ ಟಿಪ್‌ ಟಾಪ್‌ ಆಗಿ ಡ್ರೆಸ್‌ ಮಾಡಿಕೊಂಡು ಬಾಡಿಗೆ ಮನೆಗಾಗಿ ಹುಡುಕಾಡುತ್ತಾ ಬೆಂಗಳೂರೆಲ್ಲ ಅಲೆದಾಡಿಬಿಟ್ಟ!

ಅಂತೂ ಒಬ್ಬ ಮನೆಯಾಕೆ ದೊಡ್ಡ ಮನಸ್ಸು ಮಾಡಿ ಇವನಿಗೆ ಬಾಡಿಗೆಗೆ ಮನೆ ನೀಡಲು ನಿರ್ಧರಿಸಿದಳು.

ವಿಶಾಲಮ್ಮ : ಅದು ಸರಿ ಕಣ್ರೀ, ನೀವು ಕೆಲಸ ಮಾಡೋದು ಯಾವ ಕಂಪನಿ?

ತರುಣ : ನಾನು ಇನ್‌ ಫೋಸಿಸ್‌ ಗಾಗಿ ವರ್ಕ್‌ ಮಾಡ್ತೀನಿ ಮೇಡಂ!

ವಿಶಾಲಮ್ಮ : ಓಹ್‌….. ಆ ಬಸ್‌ ಕಂಪನಿಯಾ? ಸಾರಿ ಕಣ್ರೀ, ನಾವು ಉತ್ತಮ ಕಂಪನಿಯ ಸಿಬ್ಬಂದಿಗೆ ಮಾತ್ರ ಬಾಡಿಗೆಗೆ ಮನೆ ಕೊಡೋದು!

ತರುಣ : ಅಯ್ಯೋ! ನಮ್ಮ ಕಂಪನಿ ಅತ್ಯುತ್ತಮ, ಹಾಗಲ್ಲ ಅಂತ ನಿಮಗೆ ಹೇಳಿದವರು ಯಾರು?

ವಿಶಾಲಮ್ಮ : ಕಂಡಿದ್ದೀನಿ ಹೋಗ್ರಿ… ನಮ್ಮ  ನಮಗಿಂತ ನಿಮ್ಮಲ್ಲೇ ಹೆಚ್ಚು ಬಸ್ಸುಗಳು ಓಡಾಡೋದು… ಇಡೀ ಬೆಂಗಳೂರು ಟ್ರಾಫಿಕ್‌ ಮಯ ಆಗದೇ ಇದ್ದೀತೇ?

ರಾಮಣ್ಣ : ಅಂತೂ ನಮ್ಮ ಬೆಂಗಳೂರಿನಲ್ಲಿ ಬಿಸ್‌ ನೆಸ್‌ ಜೋರಾಗಿ ನಡೀತಿದೆ ಅಂತ ಆಯ್ತು ಕಣ್ರೀ.

ಶ್ಯಾಮಣ್ಣ : ಹಾಗಂತ ಯಾರು ನಿಮಗೆ ಹೇಳಿದ್ದು? ಅದಕ್ಕಿಂತಲೂ ಪೇಯಿಂಗ್‌ ಗೆಸ್ಟ್ ಬಿಸ್‌ ನೆಸ್‌ ಬಲು ಹೈಕ್ಲಾಸಾಗಿ ನಡೀತಿದೆ ಅಂತೀನಿ!

ಮೋಹನ್‌ (ಬೆಂಗಳೂರಿನಿಂದ) : ಅಮ್ಮ…. ಮೊಬೈಲ್ ‌ನಲ್ಲಿ ಸ್ವಲ್ಪ ಜೋರಾಗಿ ಮಾತನಾಡಿ. ಇಲ್ಲಿ ಬೆಂಗಳೂರಿನಲ್ಲಿ ಒಂದೇ ಸಮ ಜೋರಾಗಿ ಮಳೆ ಸುರಿಯುತ್ತಿದೆ.

ತಾಯಿ (ಹುಬ್ಬಳ್ಳಿಯಿಂದ) : ಅಯ್ಯೋ ಹೋಗೋ ಮಾರಾಯ! ಈಗ ತಾನೇ ಅದೇ ಬೆಂಗಳೂರಿನಲ್ಲಿ ಇರುವ ನನ್ನ ತಂಗಿ ಜೊತೆ ಮಾತನಾಡಿದ್ದೀನಿ… ಅವರ ಏರಿಯಾಗೆ ಮಳೆ ಬಂದು 3 ದಿನ ಆಯ್ತು ಅನ್ಲಿಕ್‌ ಹತ್ಯಾಳ!

ಮೋಹನ್‌ : ಬೆಂಗಳೂರಿನ ಎಲ್ಲಾ ಏರಿಯಾ, ಬೀದಿ, ರಸ್ತೆ, ತಿರುವುಗಳಲ್ಲೂ ಒಂದೇ ತರಹ ಮಳೆ ಆಗುತ್ತೆ ಅಂತ ನಿನಗೆ ಹೇಳಿದವರು ಯಾರು? ಬಸ್ಸಿನಲ್ಲಿ ಕುಳಿತು 4-5 ರಸ್ತೆ ದಾಟಿ ಅದರ ಮುಂದಿನ ತಿರುವಿನ ಏರಿಯಾಗೆ ಹೋದರೆ ಅಲ್ಲಿ ಮಳೆ ಕಂಡ್ರೆ ಕೇಳು!

ರಮೇಶ : ನಿನಗೆ ಗೊತ್ತೇ? ಗಾಡಿ ಓಡಿಸುವಾಗ ಯಾರೋ ಒಬ್ಬರು ನಮ್ಮ ಬೆಂಗಳೂರಿನಲ್ಲಿ ಬ್ರೇಕ್‌ ಹಾಕಿ ಗಾಡಿ ನಿಲ್ಲಿಸಿದರು ಅಂತಿಟ್ಕೋ, ಆಗ ಹಿಂದಿರುವ ಎಲ್ಲರೂ ಸಾಲಾಗಿ ಅಲ್ಲಲ್ಲೇ ನಿಂತು ಬಿಡ್ತಾರೆ ಕಣಪ್ಪ…..

ಮಹೇಶ : ಏ…. ಬಹುಶಃ ಅದು ಯಾರೋ ಟ್ರಾಫಿಕ್‌ ಪೊಲೀಸ್‌ ಚೆಕ್ಕಿಂಗ್‌ ಗೋಸ್ಕರ ಬಂದಿದ್ದಾನೆ ಅಂತ ಅವರೆಲ್ಲ ಭಾವಿಸಿರಬೇಕು, ತಮ್ಮ ಕಣ್ಣಿಗೆ ಬೀಳದವನು ಇವನ ಕಣ್ಣಿಗೆ ಹೇಗೆ ಬಿದ್ದ ಅಂತ ಯೋಚಿಸುತ್ತಿರಬಹುದು!

ಲೀಲಾ : ನೀನೇನೇ ಹೇಳು, ನಮ್ಮ ಬೆಂಗಳೂರಿನ 100 ಮಂದಿ ಸಾಫ್ಟ್ ವೇರ್‌ ಎಂಜನಿಯರ್‌ ಗಳಲ್ಲಿ 90 ಮಂದಿಯಾದರೂ ಲೈಫ್ ನಲ್ಲಿ ಫ್ರಸ್ಟ್ರೇಟೆಡ್‌ ಆಗಿಹೋಗಿರುತ್ತಾರೆ!

ಶೀಲಾ : ಉಳಿದವರು FB‌/ಇನ್ಸ್ಟಾ ಹೊಂದಿರುತ್ತಾರೆ, ಪಾಪದ ಇನ್ನೂ ಕೆಲವಕ್ಕೆ ಮದುವೆ ಆಗಿಹೋಗಿರುತ್ತದೆ!

ರಾಜೇಶ್‌ : ಇದೇನಪ್ಪ, 1 ಕಿಲೋ ಆಲೂಗಡ್ಡೆ ಕೇಳಿದರೆ 150 ರೂ. ಅಂತೀಯಲ್ಲ… ಇದು ಸರಿಯಾ?

ತರಕಾರಿ ಗಾಡಿಯವನು : ನೀವು ಲ್ಯಾಪ್ ಟಾಪ್‌ ನೇತು ಹಾಕಿಕೊಂಡು ತರಕಾರಿ ಕೊಳ್ಳಲು ಬಂದಾಗಲೇ, ನೀವು ಪ್ರಸಿದ್ಧ IT ಉದ್ಯೋಗಿ ಅಂತ ನಮಗೆ ಗೊತ್ತಾಗೋಲ್ವ?

ರಾಜೇಶ್‌ : IT ಉದ್ಯೋಗಿ ಆದ ಮಾತ್ರಕ್ಕೆ….?

ತರಕಾರಿ ಗಾಡಿಯವನು : ಅಂದ ಮೇಲೆ ನಿಮ್ಮಂಥವರಿಗೆ ತಿಂಗಳಿಗೆ ಕನಿಷ್ಠ 1.5 ಅಥವಾ 2 ಲಕ್ಷ ಸಂಬಳ ಇದ್ದೇ ಇರುತ್ತೆ. ಜುಜುಬಿ 150 ರೂ.ಗಳಿಗೆ ಲೆಕ್ಕ ಹಾಕ್ತೀರಾ?

ರಾಜೇಶ್‌ : ನಿನ್ನಂತೆಯೇ ಆ ಆಟೋದವನು, ಕಿರಾಣಿ ಅಂಗಡಿಯವನು, ಬಾಡಿಗೆ ಕೊಡುವವರು, ಹಾಲು ಮಾರುವವನು ಎಲ್ಲರೂ ಹೀಗೆ ಅಂದುಕೊಳ್ತೀರಿ. ನಿಮ್ಮ ಕನಸು ಬೇಗ ನನಸಾಗಬಾರದೇ?

ರಾಗಿಣಿ : ಈ ನಮ್ಮ ಮಹಾನಗರಿಯಲ್ಲಿ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಇರುವ ಅಂತವರನ್ನು ಯಾವುದರಲ್ಲಿ ಅಳೆಯುತ್ತಾರೆ ಅಂತೀಯಾ?

ಶಾಲಿನಿ : ಕಿ.ಮೀ.ಗಳಲ್ಲಿ…. ಸರಿ ತಾನೇ?

ರಾಗಿಣಿ : ಅದೆಲ್ಲ ಬೇರೆ ಊರುಗಳಿಗೆ.

ಟ್ರಾಫಿಕ್‌ ಮಧ್ಯೆ ಈ ರಸ್ತೆಯಿಂದ ಆ ಏರಿಯಾ ರಸ್ತೆಗೆ ಬರಬೇಕಾದರೆ ಎಷ್ಟು ಗಂಟೆ ಕಾಲ ಆಯ್ತು ಅಂತ ಇಲ್ಲಿ ಅಳೆಯುತ್ತಾರೆ, ನೆನಪಿಟ್ಟುಕೋ!

ವಿನೋದ್‌ : ನಮ್ಮೂರಿನ ಟ್ರಾಫಿಕ್‌ ನಲ್ಲಿ ಇಷ್ಟೊಂದು ಸದ್ದುಗದ್ದಲ ಯಾಕೋ ಮಾರಾಯ?

ಗಿರೀಶ್‌ : ಬಸ್ಸಿನ ಡ್ರೈವರ್‌ ಗಳು ಬ್ರೇಕ್‌ ಬಳಸುವುದಕ್ಕಿಂತ ಹೆಚ್ಚಾಗಿ ಹಾರ್ನ್‌ ಬಳಸುತ್ತಿದ್ದರೆ ಇನ್ನೇನು ಗತಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ