ಸಾಫ್ಟ್ ವೇರ್ ಕ್ಷೇತ್ರದಲ್ಲಿ 15ಕ್ಕೂ ಹೆಚ್ಟು ವರ್ಷಗಳ ಕಾಲ ಕೆಲಸ ಮಾಡಿದ್ದ ವಿಶ್ವನಾಥ್, ಶ್ವೇತಾ ದಂಪತಿ `ಇಂಡಿಯಾ ಸ್ವೀಟ್ ಹೌಸ್’ ಮೂಲಕ ಆಹಾರೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಮಲ್ಲೇಶ್ವರದಲ್ಲಿ ಮೊದಲ ಮಳಿಗೆಯೊಂದಿಗೆ ಆರಂಭವಾದ `ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ನಗರದಲ್ಲಿ 22ಕ್ಕೂ ಹೆಚ್ಚು ಶಾಖೆ ಹೊಂದಿದೆ.
ಆಹಾರೋದ್ಯಮದಲ್ಲಿ ವಿಶ್ವನಾಥ್, ಶ್ವೇತಾ ದಂಪತಿಯ ಸಿಹಿ ಸಾಧನೆಯ ಬಗ್ಗೆ ತಿಳಿಯೋಣವೇ?
ಸಾವಯವ ಪದಾರ್ಥಗಳೊಂದಿಗೆ ಸಾಂಪ್ರದಾಯಿಕ ಖಾದ್ಯಗಳು ಮತ್ತು ಹಾಲಿನ ಸಿಹಿ ತಿಂಡಿಗಳನ್ನು ನೀಡುತ್ತಿರುವ `ಇಂಡಿಯಾ ಸ್ವೀಟ್ ಹೌಸ್’ ಬೆಂಗಳೂರಿಗರಿಗೆ ಹೊಸ ರುಚಿ ಹತ್ತಿಸುವ ಮೂಲಕ ಪ್ರಸಿದ್ಧಿಯಾಗಿದೆ. ಹೌದು…. ವಿಶ್ವನಾಥ್ ಮತ್ತು ಶ್ವೇತಾ ದಂಪತಿ 2021ರಲ್ಲಿ ತಮ್ಮ ಆಪ್ತರಾದ ರಾಜೇಶ್ ಅವರ ಸಲಹೆ ಮತ್ತು ಪರಿಕಲ್ಪನೆಯಲ್ಲಿ ಮಲ್ಲೇಶ್ವರಂನಲ್ಲಿ `ಇಂಡಿಯಾ ಸ್ವೀಟ್ ಹೌಸ್’ನ ಮೊದಲ ಮಳಿಗೆಯನ್ನು ಆರಂಭಿಸಿದರು. ಪ್ರಸ್ತುತ ಕರ್ನಾಟಕದಾದ್ಯಂತ 32ಕ್ಕೂ ಹೆಚ್ಚು ಶಾಖೆಗಳನ್ನು ತೆರೆದಿದ್ದಾರೆ.
ಸಾಫ್ಟ್ ವೇರ್ ಕ್ಷೇತ್ರದಲ್ಲಿ 15ಕ್ಕೂ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡುವ ಮೂಲಕ ಅಪಾರ ತಾಂತ್ರಿಕ ಜ್ಞಾನ ಮತ್ತು ಅನುಭವವನ್ನು ಹೊಂದಿರುವ ಈ ದಂಪತಿ ಆಹಾರೋದ್ಯಮ ಕ್ಷೇತ್ರದಲ್ಲಿ ಪ್ರಗತಿಯ ಹೆಜ್ಜೆ ಹಾಕುವ ಮೂಲಕ ಸ್ವಾವಲಂಬಿ ಮತ್ತು ಸ್ವಉದ್ಯೋಗಿಗಳಾಗಿ ಬದುಕಬೇಕು ಎಂದು ಯೋಚಿಸುತ್ತಿರುವ ಅನೇಕರಿಗೆ ಮಾದರಿಯಾಗಿದ್ದಾರೆ.

ಆರಂಭ ಹೇಗೆ?
ಸಾವಯವ ಕೃಷಿಯ ಮೇಲಿನ ಪ್ರೀತಿಯಿಂದ ಬೆಂಗಳೂರಿನ ಸಮೀಪದ ನೆಲಮಂಗಲದ ಹತ್ತಿರ ತಮ್ಮದೇ ಆದ ಸುಮಾರು 6 ಎಕರೆಯಲ್ಲಿ ಫಾರ್ಮ್ ಒಂದನ್ನು ಮಾಡಿದ ಅವರು ಗೋಶಾಲೆಯ ಮಾದರಿಯ ಪರಿಸರದಲ್ಲಿ 100 ಹಸುಗಳನ್ನು ಖರೀದಿಸಿ ಸಾಕಿದರು. ಕರುಗಳಿಗೆ ನೀಡಿದ ಬಳಿಕ ಉಳಿಯುವ ಹಾಲನ್ನು ಬಾಟಲಿಗಳಲ್ಲಿ ತುಂಬಿಸಿ, ಬೆಂಗಳೂರು ಮತ್ತು ಹತ್ತಿರದ ಅಪಾರ್ಟ್ ಮೆಂಟ್ ಗಳಿಗೆ ಮಾರಾಟ ಮಾಡಲು ಆರಂಭಿಸಿದರು. ಡೇರಿಯೊಂದನ್ನು ಸ್ಥಾಪಿಸಬೇಕೆಂದು ನಿರ್ಧರಿಸಿದ ಅವರು ನಂತರ ಹಾಲಿನ ತಿಂಡಿಗಳನ್ನು ತಯಾರಿಸಿ, ಮಾರಾಟ ಮಾಡುವ ಉದ್ದೇಶದಿಂದ `ಇಂಡಿಯಾ ಸ್ವೀಟ್ ಹೌಸ್’ ಸ್ಥಾಪಿಸಲು ಮುಂದಾದರು. ತಮ್ಮ ಪರಿಶ್ರಮ ಮತ್ತು ಪರಿಜ್ಞಾನದಿಂದ ಅಲ್ಪಾವಧಿಯಲ್ಲಿಯೇ 32ಕ್ಕೂ ಹೆಚ್ಚು ಶಾಖೆಗಳನ್ನು ಕರ್ನಾಟಕದಾದ್ಯಂತ ಆರಂಭಿಸಿದರು. ತುಮಕೂರು, ಶಿವಮೊಗ್ಗ, ಮೈಸೂರು, ಚನ್ನಪಟ್ಟಣ, ಹಾಸನ ಮತ್ತು ಉಡುಪಿಗಳಲ್ಲಿಯೂ ಮಳಿಗೆಗಳನ್ನು ವಿಸ್ತರಿಸಿದ್ದಾರೆ. ತಾಜಾ ಮತ್ತು ಗುಣಮಟ್ಟದ ಸಾವಯವ ಪದಾರ್ಥಗಳೊಂದಿಗೆ ಸಾಂಪ್ರದಾಯಿಕ ಖಾದ್ಯಗಳು ಮತ್ತು ಹಾಲಿನ ಸಿಹಿ ತಿಂಡಿಗಳನ್ನು ಒದಗಿಸುವ ಮೂಲಕ ವಿಶ್ವಾಸಾರ್ಹತೆ ಮತ್ತು ಜನಮನ್ನಣೆ ಪಡೆದುಕೊಂಡಿದ್ದಾರೆ.

ತಾಜಾ ತಿಂಡಿಗಳು
ನೆಲಮಂಗಲದಲ್ಲಿರುವ ಅವರ ಕರ್ಮ ಡೈರಿ ಫಾರ್ಮ್ ನಲ್ಲಿ ಸುಮಾರು 150ಕ್ಕೂ ಹೆಚ್ಚು ಹಸುಗಳನ್ನು ಸಾಕಲಾಗಿದೆ. ಪ್ರತಿದಿನ ಸುಮಾರು 2000 ಲೀ. ಹಾಲು ಉತ್ಪಾದನೆಯಾಗುತ್ತದೆ. ಯಂತ್ರಗಳ ಸಹಾಯದಿಂದ ಮುಂಜಾನೆ 4 ಗಂಟೆಗೆ ಹಸುಗಳ ಹಾಲು ಕರೆದು, ನಂತರ ಹಾಲನ್ನು ಅತ್ಯಾಧುನಿಕ ಅರೆ ಸ್ವಯಂಚಾಲಿತ ಯಂತ್ರದಲ್ಲಿ ಸಂಸ್ಕರಿಸಲಾಗುತ್ತದೆ. ಬೆಳಗ್ಗೆ 9 ಗಂಟೆಯ ಹೊತ್ತಿಗೆ ಸಿಹಿ ತಿಂಡಿಗಳನ್ನು ತಯಾರಿಸಿ, ಬೆಳಗ್ಗೆ 10 ಗಂಟೆಯ ಹೊತ್ತಿಗೆ ರುಚಿಕರವಾದ ತಾಜಾ ಸಿಹಿ ತಿಂಡಿಗಳು ಮಳಿಗೆಗಳನ್ನು ತಲುಪಲಿವೆ. ಇಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
300-400 ಸಿಹಿ ತಿಂಡಿಗಳು
ಪರಿಶುದ್ಧ, ಆರೋಗ್ಯಕರ ಮತ್ತು ಸಾವಯವ ಪದಾರ್ಥಗಳನ್ನು ಬಳಸಿಕೊಂಡು ನಾನಾ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ ಭಾರತದ ಸಾಂಪ್ರದಾಯಿಕ ಸ್ವಾದವನ್ನು ಉಣಬಡಿಸುವ ಉದ್ದೇಶವನ್ನು ಹೊಂದಿರುವ ಇಂಡಿಯಾ ಸ್ವೀಟ್ ಹೌಸ್ ನಲ್ಲಿ ಧಾರವಾಡ ಪೇಡಾ, ಲಡ್ಡು, ಬೆಳಗಾವಿ ಕುಂದಾ, ಕರದಂಟು, ರಸಗುಲ್ಲಾ, ಖೀರ್, ಬರ್ಫಿ, ಮೈಸೂರು ಪಾಕ್, ಬಾದಾಮ್ ಹಲ್ವಾ ಸೇರಿದಂತೆ ಭಾರತದ ಮೂಲೆ ಮೂಲೆಗಳನ್ನು ಪ್ರತಿನಿಧಿಸುವ 300-400ಕ್ಕೂ ಹೆಚ್ಚು ವಿಧದ ರುಚಿಕರ ಸಿಹಿ ತಿಂಡಿಗಳು ಮತ್ತು ಖಾದ್ಯಗಳು ಒಂದೇ ಸೂರಿನಡಿ ದೊರೆಯುತ್ತವೆ. ಗುಣಮಟ್ಟ, ಬದ್ಧತೆ, ವಿಶ್ವಾಸಾರ್ಹತೆಯಿಂದಾಗಿ ಇಂಡಿಯಾ ಸ್ವೀಟ್ ಹೌಸ್ ಬ್ರಾಂಡ್ ಮಾರುಕಟ್ಟೆಯಲ್ಲಿ ಮನ್ನಣೆ ಪಡೆದಿದೆ. ಇದರಿಂದ ಪ್ರೇರಣೆ ಹೊಂದಿ ಭಾರತದಾದ್ಯಂತ ಇನ್ನಷ್ಟು ಹೆಚ್ಚಿನ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಹೊಂದಿದ್ದಾರೆ.





