ಈ ಸಲದ ಹಬ್ಬಗಳಿಗಾಗಿ ನೀವು ವಿಭಿನ್ನ ಗೃಹಾಲಂಕಾರ ಬಯಸುವುದಾದರೆ, ಇಲ್ಲಿ ತಿಳಿಸಿರುವಂತೆ ಬೊಹೆಮಿಯನ್ ಶೈಲಿಯಲ್ಲಿ ಅತಿ ವಿಶಿಷ್ಟವಾಗಿ ಹೋಮ್ ಡೆಕೋರ್ ಗಾಗಿ ಏಕೆ ಟ್ರೈ ಮಾಡಬಾರದು…..?
ಹಬ್ಬಗಳು ಎಂದರೇನೇ ಹಾಗೆ, ಎಷ್ಟೆಷ್ಟು ವಿಧದಲ್ಲಿ ಗೃಹಾಲಂಕಾರ ಮಾಡಿದರೂ ನಮ್ಮ ಮನಸ್ಸಿಗೆ ಸಾಕು ಎನಿಸುವುದಿಲ್ಲ! ಇದನ್ನು ಇನ್ನಷ್ಟು ಮತ್ತಷ್ಟು ಆಕರ್ಷಕಗೊಳಿಸೋಣ ಎನಿಸುತ್ತದೆ. ಇತ್ತೀಚೆಗಷ್ಟೇ ಮಾಧವಿ ಮಧುಕರ್ ಮದುವೆ ಆಗಿದ್ದರು. ಒಂದು ದಿನ ಮಾಧವಿಯ ಗೆಳತಿ ದೇವಿಕಾ ಇವರಿಬ್ಬರನ್ನೂ ಡಿನ್ನರ್ ಗೆಂದು ಮನೆಗೆ ಆಹ್ವಾನಿಸಿದ್ದಳು. ಮದುವೆಯಾದ ಹೊಸತರಲ್ಲಿ ಮೊದಲ ಸಲ ಆಪ್ತ ಗೆಳತಿಯ ಮನೆಗೆ ಹೋಗುವುದು ಮಾಧವಿಗೆ ಸಂತಸದ ವಿಷಯವಾಗಿತ್ತು.
ದೇವಿಕಾಳ ಮನೆ ಬೆಂಗಳೂರಿನ ಪಾಶ್ ಏರಿಯಾದಲ್ಲಿ ಒಂದು ಭವ್ಯ ಅಪಾರ್ಟ್ ಮೆಂಟ್ ನ 6ನೇ ಮಹಡಿಯಲ್ಲಿತ್ತು. ಇವರು ದೇವಿಕಾಳ ಮನೆ ಪ್ರವೇಶಿಸಿ, ಅಲ್ಲಿನ ಸುಪರ್ಬ್ ಡ್ರಾಯಿಂಗ್ ರೂಂ ಕಂಡು ಬೆರೆಗಾದರು! ಅದನ್ನು ನೋಡುತ್ತಲೇ ಇರುವ ಮೂಗಿನ ಮೇಲೆ ಬೆರಳಿರಿಸಿ, ವಾಹ್! ಎಂದು ತಲೆದೂಗಿದರು. ಅಲ್ಲಿನ ಕಲರ್ ಫುಲ್, ಅತ್ಯಾಕರ್ಷಕ ಅಲಂಕಾರ ಎಂಥವರನ್ನೂ ದಂಗುಬಡಿಸುವಂತಿತ್ತು.
“ಅಬ್ಬಾ…. ಇದೆಂಥ ಕಲೆ! ಇಂಥ ಬೊಂಬಾಟ್ ಡ್ರಾಯಿಂಗ್ ರೂಂ ಇದೇ ಮೊದಲ ಸಲ ನೋಡ್ತಿದ್ದೀನಿ ಅನ್ಸುತ್ತೆ. ಇಂಥ ಅದ್ಭುತ ಐಡಿಯಾ ನಿನಗೆ ಎಲ್ಲಿಂದ ಹೊಳೆಯಿತು?” ಎಂದು ಮಾಧವಿ ಗೆಳತಿ ದೇವಿಕಾಳನ್ನು ಪ್ರಶ್ನಿಸಿದಳು.
ಅತಿಥಿಗಳಿಗೆ ಕಾಫಿ ಸ್ನಾಕ್ಸ್ ನೀಡಿದ ದೇವಿಕಾ, ಈ ಗೃಹಾಲಂಕಾರದ ಶೈಲಿಗೆ ಬೊಹೆಮಿಯನ್ ಹೋಂ ಡೆಕೋರ್ ಎನ್ನುತ್ತಾರೆ ಎಂದು ವಿವರಿಸಿದಳು. ಇದೇನು ವಿಚಿತ್ರ ಅಂದುಕೊಂಡಿರಾ? ಬನ್ನಿ, ಇದರ ವಿವರ ತಿಳಿಯೋಣ!

ವಿಶಿಷ್ಟ ಬಗೆಯ ಗೃಹಾಲಂಕಾರ
ವಿಭಿನ್ನ ಬಗೆಯ ಬಣ್ಣಗಳ ಬ್ಯೂಟಿಫುಲ್ ಸಂಯೋಜನೆ ಬೊಹೆಮಿಯನ್ ಹೋಂ ಡೆಕೋದ ಸ್ಪೆಷಾಲಿಟಿ. ಪ್ರಾಚೀನ ಕಾಲದಲ್ಲಿ ಇದನ್ನು ಉ.ಪ್ರ, ಬಿಹಾರ್, ರಾಜಸ್ಥಾನ್, ಮ.ಪ್ರದೇಶದ ದೊಡ್ಡ ಭವನಗಳಿಗೆಂದೇ ಬಳಸಿಕೊಳ್ಳುತ್ತಿದ್ದರು. ಇದೀಗ ಈ ಗೃಹಾಲಂಕಾರ ಇಡೀ ಭಾರತದ ಮನೆ ಮನೆಯನ್ನೂ ತಲುಪುತ್ತಿದೆ! ಇದನ್ನು ಇಷ್ಟಪಡುವವರು ತುಸು ವಿಭಿನ್ನವಾಗಿಯೇ ಯೋಚಿಸುತ್ತಾರೆ, ಅತಿ ಕ್ರಿಯೇಟಿವ್ ಆಗಿ ಗೃಹಾಲಂಕಾರದಲ್ಲಿ ತೊಡಗಿಕೊಳ್ಳುತ್ತಾರೆ. ಇಲ್ಲಿನ ಆರ್ಟಿಸ್ಟಿಕ್ ಶೈಲಿಯನ್ನು ನೋಡಿಯೇ ತಣಿಯಬೇಕು.
ವಿದೇಶಗಳಲ್ಲಿ ಹಿಪ್ಪಿ ಕಲ್ಚರ್ ಎಂಬುದು ಅನಾದಿಕಾಲದಿಂದಲೂ ಇದೆ. ಅದರ ಕೆಲವು ಶೇಡ್ಸ್, ಈ ಸ್ಟೈಲ್ ನಲ್ಲಿದೆ. ತೆಳು ಕ್ರೀಂ ಬಣ್ಣದ ಗೋಡೆಗಳು, ಒಂದು ಬಣ್ಣ ಬಣ್ಣದ ಕಾರ್ಪೆಟ್, ಮೃದು, ಬೆಚ್ಚಗಿನ ಸೋಫಾ ಮೇಲೆ ಬಣ್ಣ ಬಣ್ಣದ ಸಣ್ಣ ದೊಡ್ಡ ಕುಶನ್ಸ್, ಅಲ್ಲಿ ಇಲ್ಲಿ ಜೋಡಿಸಲಾದ ಹೂವಿನ ಕುಂಡಗಳು ಇತ್ಯಾದಿ ಈ ಬೊಹೆಮಿಯನ್ ಸ್ಟೈಲಿನ ಐಡೆಂಟಿಟಿ ಎನ್ನಬಹುದು.
ಈ ಸ್ಟೈಲಿನ ಮತ್ತೊಂದು ವೈಶಿಷ್ಟ್ಯ ಎಂದರೆ ಇದರಲ್ಲಿ ಪೇಂಟಿಂಗ್, ಫ್ಯಾಬ್ರಿಕ್, ಆ್ಯಕ್ಸೆಸರೀಸ್ ಇತ್ಯಾದಿ ಫಿನಿಶಿಂಗ್‌ಸ್ಟೇಕ್ಡ್ ಡೆಕೋರ್ ಐಟಮ್ಸ್ ನ್ನು ಬೆರೆಸಿಕೊಳ್ಳಬಹುದು. ಇದರಿಂದ ನಿಮ್ಮ ಗೃಹಾಲಂಕಾರಕ್ಕೆ ಹೊಸತೊಂದು ವೈಬ್ ತುಂಬಿಕೊಳ್ಳಲಿದೆ.
ಇದರಲ್ಲಿ ಬಣ್ಣಗಳ ಸಂಯೋಜನೆ ಪ್ರಧಾನ ಪಾತ್ರ ವಹಿಸುತ್ತದೆ. ಗೋಡೆಗಳ ಬಣ್ಣ ಪರದೆಗೆ, ಸೋಫಾ ಬಣ್ಣ ಅದರ ಕುಶನ್ಸ್ ಗೆ, ವುಡನ್ ಫರ್ನೀಚರ್ ಬಣ್ಣ ಅಲ್ಲಿನ ಗೋಡೆಗಳ ಪೇಂಟಿಂಗ್ಸ್ ಗೆ ಕಾಂಟ್ರಾಸ್ಟ್ ಆಗಿರುವುದೇ ಬೊಹೆಮಿಯನ್ ಸ್ಟೈಲ್ ನ ಸ್ಪೆಷಲ್! ಇದನ್ನೇ ಲೇಯರಿಂಗ್ ಯಾ ಮಿಕ್ಸಿಂಗ್ ಎನ್ನುತ್ತಾರೆ.

ಡಿಫರೆಂಟ್ ಲುಕ್ಸ್
ಬೊಹೆಮಿಯನ್ ಸ್ಟೈಲ್ ನಲ್ಲಿ ಕೈಗಳಿಂದಲೇ ರೂಪಿಸಿದ ಸಾಮಗ್ರಿ ಹಾಗೂ ಪುಸ್ತಕಗಳಿಗೆ ಹೆಚ್ಚಿನ ಮಹತ್ವವಿದೆ. ದೊಡ್ಡ ಬುಕ್ಸ್ ಬೀರು ಬದಲು ಸಣ್ಣ ಬುಕ್ ಶೆಲ್ಫ್ ನಿಂದ ಹಿಡಿದು, ಕಲಾಕೃತಿ ಇತ್ಯಾದಿಗಳನ್ನು ಆ ಇಡೀ ಕೋಣೆಯನ್ನು ದೊಡ್ಡದಾಗಿರಿಸುವಂತೆ ಆರಿಸಿ ಹಾಗೂ ಅವು ಹಸ್ತ ನಿರ್ಮಿತವಾದ್ದರಿಂದ, ತುಸು ವಿಭಿನ್ನವಾಗಿದೆ ಎನಿಸಿದರೂ ಪರವಾಗಿಲ್ಲ, ಏಕೆಂದರೆ ಇಂಥ ವಿಭಿನ್ನತೆಯೇ ಅದಕ್ಕೆ ಹೊಸ ಲುಕ್ಸ್ ನೀಡುವುದು. ಆರಾಮದಾಯಕ ಕುರ್ಚಿ, ಸೈಡ್ ಟೇಬಲ್, ಲೆದರ್ ಬೀನ್ ಬ್ಯಾಗ್, ಕೋಣೆ ಮಧ್ಯದಲ್ಲಿ ಅಲಂಕರಿಸುವ ರತ್ನಗಂಬಳಿ ಇತ್ಯಾದಿಗಳ ಬ್ಯಾಲೆನ್ಸ್ ನಿಂದಲೇ ಬೊಹೆಮಿಯನ್ ಸ್ಟೈಲ್ ಗೆ ಹೆಚ್ಚಿನ ಕಳೆ ಕೂಡುತ್ತದೆ. ನಡುನಡುವೆ ಇನ್ ಡೋರ್ ಪ್ಲಾಂಟ್ಸ್ ಇದ್ದರೆ ಗೋಪುರಕ್ಕೆ ಕಲಶಪ್ರಾಯವಾಗಿ ಶೋಭಾಯಮಾನ ಎನಿಸುತ್ತದೆ. ಹಸಿರ ಸಿರಿ ಒಳಾಲಂಕಾರಕ್ಕೆ ವಿಶಿಷ್ಟ ಟಚ್ ನೀಡುತ್ತದೆ. ಇದು ಪ್ರಕೃತಿಯನ್ನು ಮನೆಯೊಳಗೇ ಬರ ಮಾಡಿಕೊಂಡಂತೆ! ನ್ಯಾಚುರಲ್ ಹಸಿರು ಬಣ್ಣ ಇತರ ಬಣ್ಣಗಳಿಗಿಂತ ಹೆಚ್ಚು ಅಂದವಾಗಿ ಅರಳಿರುವಂತೆ ಎದ್ದು ತೋರುತ್ತದೆ. ಕೋಣೆಯ ಅಲಂಕಾರ ಆ ಮನೆಯ ಗೃಹಿಣಿಯ ಕಲಾಭಿರುಚಿಗೆ ಕೈಗನ್ನಡಿಯಾಗಿದೆ.
ನಿಮ್ಮ ಡ್ರಾಯಿಂಗ್ ರೂಂ. 10 X 10 ಅಡಿಯ ಗೋಡೆ ಹೊಂದಿದೆ ಎಂದಿಟ್ಟುಕೊಳ್ಳಿ. ಅದರ ಮೇಲೆ ನಿಮ್ಮ ಇಷ್ಟದ ಬ್ರೈಟ್ ಯಾ ಲೈಟ್ ಕಲರ್ ಬಳಸಿ, ಕೆಲವು ಕುಂಡಗಳನ್ನು ಹಗ್ಗದ ಸಹಾಯದಿಂದ ನೇತು ಬಿಡಲಾಗಿದೆ ಎಂದು ಭಾವಿಸೋಣ. ಅಗತ್ಯವೆನಿಸಿದರೆ ಇಲ್ಲಿ ನೀವು ಸೀರಿಯಲ್ ಸೆಟ್ ಲೈಟಿಂಗ್ ವ್ಯವಸ್ಥೆ ಸಹ ಮಾಡಿಕೊಳ್ಳಬಹುದು.
ಗೋಡೆಗಳಿಗೆ ಕೆಲವು ಶೆಲ್ಫ್ ಅಳವಡಿಸಿ, ಅದರಲ್ಲಿ ವಿಭಿನ್ನ ಸ್ಥಳಗಳಿಂದ ಖರೀದಿಸಿದ ಅಲಂಕಾರಿಕ ಸಾಮಗ್ರಿ ಇರಿಸಿ ಚೆಂದಗೊಳಿಸಬಹುದು. ಅದು ಅಗ್ಗ ಯಾ ದುಬಾರಿ ಎಂಬುದು ಮುಖ್ಯವಲ್ಲ, ಅದರಲ್ಲಿ ಗೃಹಿಣಿಯ ಕಾಂತಿಕೆ ಎದ್ದು ಕಾಣುವಂತಿರಬೇಕು. ಇಷ್ಟು ಮಾತ್ರವಲ್ಲ, ನೀವೇ ರಚಿಸಿದ ಯಾವುದೇ ಪೇಂಟಿಂಗ್, ಯಾವುದೇ ಕಲರ್ಡ್ ಸ್ಕ್ರಾಪ್ ಇತ್ಯಾದಿಯನ್ನೂ ಸಹ ಗೋಡೆಗೆ ತೂಗು ಹಾಕಬಹುದು.
ಸ್ನೇಕ್ ಪ್ಲಾಂಟ್, ಡ್ರಾಕೆನಾ ಇತ್ಯಾದಿ ಇನ್ ಡೋರ್ ಪ್ಲಾಂಟ್ಸ್ ಬಳಕೆ ಬಲು ಅಪರೂಪ. ಇವು ಮನೆಯೊಳಗಿನ ಗಾಳಿಯನ್ನು ಪರಿಶುದ್ಧಗೊಳಿಸುತ್ತವೆ. ಇಷ್ಟು ಮಾತ್ರವಲ್ಲದೆ, ನಿಮ್ಮ ಕೋಣೆಗೆ ಹೊಂದುವಂಥ ಇತರ ಡಿಸೈನಿಂಗ್ ಐಟಮ್ಸ್ ಗಳಾದ ವುಲ್ಲನ್ ನಿಟೆಡ್ ಟೆರಾಕೋಟಾ, ಪ್ಯಾಟರ್ನ್ ವುಳ್ಳ ಸೆರಾಮಿಕ್ ಪ್ಲಾಂಟರ್ಸ್ ನ್ನು ಸಹ ಬಳಸಿಕೊಳ್ಳಿ.

ಎಮೋಶನಲ್ ಟಚ್
ನಿಮ್ಮ ರೂಮಿನ ಥೀಮ್ ಇನ್ನಷ್ಟು ರಿಚ್ ಆಗಲು, ನಿಮ್ಮ ಮದುವೆಯ ಬೆಸ್ಟ್ ಫೋಟೋ, ಆರತಕ್ಷತೆಯ ಮುಖ್ಯ ಫೋಟೋ ಇತ್ಯಾದಿಗಳನ್ನು ಫ್ರೇಮ್ ಹಾಕಿಸಿ ಇಲ್ಲಿ ತೂಗುಹಾಕಿ. ಗೋಡೆಗಳ ಮೇಲೆ ವೈಟ್ ಡಾರ್ಕ್ ಕಲರ್ ನ ಸಾಮಗ್ರಿಗಳನ್ನು ಮ್ಯಾಚ್ ಮಾಡಬಹುದು. ಬಣ್ಣ ಬಣ್ಣದ ಮಿರರ್ ಸೆಟ್ಟಿಂಗ್ಸ್ ನಿಂದ ರೂಮನ್ನು ವೈಬ್ರೆಂಟ್ ಮಾಡಬಹುದು. ಇದರಲ್ಲಿ ನಿಮ್ಮ ಎಮೋಶನಲ್ ಟಚ್ ಎದ್ದು ಕಾಣುತ್ತದೆ.
ಜನರಿಗೆ ಬರುವ ಒಂದು ಸಾಮಾನ್ಯ ಸಂದೇಹವೆಂದರೆ, ಈ ಸ್ಟೈಲ್ ನ್ನು ಕೇಲವು ಅತಿ ಶ್ರೀಮಂತರು ಮಾತ್ರ ನಿಭಾಯಿಸಲು ಸಾಧ್ಯ, ಮಾಧ್ಯಮ ವರ್ಗದವರಿಗೆ ಇದು ಎಟುಕದು ಎಂಬುದು. ಆದರೆ ವಾಸ್ತವದಲ್ಲಿ ಹಾಗೇನಿಲ್ಲ, ನೀವು ಮಾರುಕಟ್ಟೆಯ ಪ್ರತಿಯೊಂದು ಇಂಚಿಂಚೂ ಬಲ್ಲವರಾಗಿದ್ದರೆ, ನಿಮ್ಮ ಗೃಹಾಲಂಕಾರಕ್ಕೆ ಅತಿ ಸೂಕ್ತವೆನಿಸುವ, ದುಬಾರಿ ಅಲ್ಲದೆ ಅಗ್ಗವಾಗಿರುವಂಥ ಎಲ್ಲಾ ಬಗೆಬಗೆಯ ಅಲಂಕಾರಿಕ ಸಾಮಗ್ರಿ ಆರಿಸಿ, ಈ ಬೊಹೆಮಿಯನ್ ಹೋಮ್ ಡೆಕೋರ್ ನಿಮ್ಮದಾಗಿಸಿಕೊಳ್ಳಿ! ಎಲ್ಲಕ್ಕೂ ಮುಖ್ಯ ಎಂದರೆ ನಿಮ್ಮ ಕೋಣೆಯ ಆಕಾರ, ಅದಕ್ಕೆ ಎಂತೆಂಥ ಸಾಮಗ್ರಿ ಆರಿಸಬೇಕು ಎಂಬುದು ಆಯಾ ಗೃಹಿಣಿಯ ಕಲಾಭಿರುಚಿಯನ್ನು ಆಧರಿಸಿದೆ. ಅಗತ್ಯವಾಗಿ ಇದನ್ನು ಈ ಸಲದ ಹಬ್ಬಗಳಿಗೆ ನೀವು ಸಹ ಟ್ರೈ ಮಾಡಿ ನೋಡಿ. ದಸರಾ, ದೀಪಾವಳಿ ಹಬ್ಬಗಳಲ್ಲಿ ಈ ಸಲ ನಿಮ್ಮ ಮನೆ ಬೊಹೆಮಿಯನ್ ಹೋಮ್ ಡೆಕೋರ್ ನಿಂದ ಲಕಲಕಿಸಲಿ!
– ಪ್ರತಿನಿಧಿ





