ತಾನು ಸಂಪಾದಿಸಿದ ಗೌರವ ಸಹೋದರಿಯಿಂದಲೇ ಮಣ್ಣುಪಾಲಾಯ್ತು ಎಂದು ಸ್ಯಾಂಡಲ್​ವುಡ್​ ನಟಿ ಕಾರುಣ್ಯ ರಾಮ್​ ಕಣ್ಣೀರಿಟ್ಟಿದ್ದಾರೆ. ಮೂರು ವರ್ಷಗಳಿಂದ ತನ್ನ ತಂಗಿಯಿಂದ ನರಕಯಾತನೆ ಅನುಭವಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದೀಗ ತಂಗಿ ಹಾಗೂ ಆಕೆಯ ಐವರು ಆಪ್ತರ ವಿರುದ್ಧ ಸಿಸಿಬಿ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ಈ ಕುರಿತು ವೀಡಿಯೋ ಬಿಡುಗಡೆ ಮಾಡಿರುವ ಕಾರುಣ್ಯ, ಬೆಟ್ಟಿಂಗ್‌ ಚಟಕ್ಕೆ ಬಿದ್ದು ತಮ್ಮ ಕುಟುಂಬ ಹೇಗೆ ಹಾಳಾಗಿದೆ ಎಂದು ಹೇಳಿಕೊಂಡಿದ್ದಾರೆ.

ತಂಗಿ ಸಮೃದ್ಧಿ ರಾಮ್ ಸುಮಾರು 25 ಲಕ್ಷ ರೂಪಾಯಿ ಹಣ ವಂಚನೆ ಮಾಡಿದ್ದಾರೆ. ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ ದೋಚಿ ತನ್ನ ವೈಯಕ್ತಿಕ ಖರ್ಚಿಗೆ ಬಳಸಿಕೊಂಡಿದ್ದಾಳೆ ಎಂದು ಕಾರುಣ್ಯ ರಾಮ್​ ದೂರಿನಲ್ಲಿ ಆರೋಪಿಸಿದ್ದಾರೆ.

ಸಮೃದ್ಧಿ ಆಪ್ತರಾದ ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಹಾಗೂ ಸಾಗರ್ ಸಹ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದಿರುವ ಅವರು, ಬೆಟ್ಟಿಂಗ್‌ನಿಂದ ತನ್ನ ತಂಗಿಯ ವರ್ತನೆ ಬದಲಾಗಿತ್ತು. ಬೆಟ್ಟಿಂಗ್ ಆ್ಯಪ್‌ನಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಅದರಲ್ಲಿ ನಮ್ಮ ಕುಟುಂಬವೂ ಒಂದು ಎಂದು ಹೇಳಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಕಾರುಣ್ಯ ಕಣ್ಣೀರಿಟ್ಟಿದ್ದಾರೆ.

ಸಹವಾಸ ದೋಷದಿಂದ ಸಮೃದ್ಧಿ ಬೆಟ್ಟಿಂಗ್ ಜಾಲಕ್ಕೆ ಬಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾಳೆ. ಈ ಸಾಲ ತೀರಿಸಲಾಗದೆ ಪರಾರಿಯಾಗಿದ್ದು, ಈಗ ಸಾಲಗಾರರು ಅಕ್ಕ ಕಾರುಣ್ಯಗೆ ಕಿರುಕುಳ ನೀಡುತ್ತಿದ್ದಾರೆ. ಇದು ಅತಿರೇಕಕ್ಕೆ ಹೋದಾಗ ಕಾರುಣ್ಯ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗುವಂತಾಗಿದೆ.

ಮೂರು ವರ್ಷಗಳಿಂದ ಈ ನೋವನ್ನು ಯಾರಿಗೂ ಹೇಳಿಕೊಳ್ಳಲಾಗದೆ ನರಕಯಾತನೆ ಅನುಭವಿಸಿದ್ದೇನೆ. ನನ್ನ ತಂದೆ-ತಾಯಿ ಮಗಳನ್ನೇ ಕಳೆದುಕೊಂಡಿದ್ದಾರೆ. ದೈಹಿಕವಾಗಿ ಆಕೆ ಎಲ್ಲೋ ಇದ್ದಾಳೆ, ಆದರೆ ಮಾನಸಿಕವಾಗಿ ನಮ್ಮ ಜೊತೆಗಿಲ್ಲ. ಹೊತ್ತಿಲ್ಲದ ಹೊತ್ತಲ್ಲಿ ಸಾಲಗಾರರಿಂದ ಕರೆಗಳು ಬರುತ್ತವೆ. ಕೆಟ್ಟ ಕಮೆಂಟ್‌ಗಳನ್ನು ಮಾಡುತ್ತಾರೆ. ನನ್ನ ತಂದೆ ನಿವೃತ್ತ ಸರ್ಕಾರಿ ಅಧಿಕಾರಿ, ಅವರಿಗೆ ನೆಮ್ಮದಿ ಬೇಕು. ಅದಕ್ಕಾಗಿ ಕಾನೂನು ಹೋರಾಟಕ್ಕಿಳಿದಿದ್ದೇನೆ ಎಂದು ಕಾರುಣ್ಯ ಸ್ಪಷ್ಟಪಡಿಸಿದ್ದಾರೆ.

ಬೆಟ್ಟಿಂಗ್ ಆ್ಯಪ್‌ಗಳನ್ನು ಯಾರೂ ಪ್ರಮೋಟ್ ಮಾಡಬೇಡಿ ಎಂದು ಮನವಿ ಮಾಡಿರುವ ಕಾರುಣ್ಯ, ಇಂತಹ ಆ್ಯಪ್‌ಗಳಿಂದ ಕುಟುಂಬಗಳು ಹೇಗೆ ನಾಶವಾಗುತ್ತಿವೆ ಎಂಬುದಕ್ಕೆ ನನ್ನ ತಂಗಿಯೇ ಸಾಕ್ಷಿ ಎಂದಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಸಮೃದ್ಧಿ ಮತ್ತು ಆಕೆಯ ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ