ಅನುಪ್ರಿಯಾ ಗೋಯೆಂಕಾ

ಬಾಲಿವುಡ್‌ ನ ನವತಾರೆ ಅನುಪ್ರಿಯಾ ಗೊಯೆಂಕಾ ಮೂಲತಃ ಉ. ಪ್ರದೇಶ ರಾಜ್ಯದ ಕಾನ್ಪುರದವಳು. ಬಾಲ್ಯದಿಂದಲೇ ನಟನೆಯ ವ್ಯಾಮೋಹ ಬೆಳೆಸಿಕೊಂಡಿದ್ದ ಈಕೆಗೆ ಹೆತ್ತವರು ಬಹಳ ಸಪೋರ್ಟ್‌ ಮಾಡಿದರು. ಆ ರಾಜ್ಯ ಮಟ್ಟದ ಮಾಡೆಲ್ ಆಗಿ ಮಿಂಚಿ ನಂತರ ಸಣ್ಣಪುಟ್ಟ  ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಅನುಪ್ರಿಯಾ, ಮುಂದೆ ಬಾಲಿವುಡ್‌ ಚಿತ್ರಗಳಲ್ಲಿ ಎಂಟ್ರಿ ಗಿಟ್ಟಿಸಿದಳು.

`ಟೈಗರ್‌ ಝಿಂದಾ ಹೈ, ಪದ್ಮಾವತ್‌, ವಾರ್‌’ ಚಿತ್ರಗಳಲ್ಲಿನ ಈಕೆಯ ನಟನೆ ಮೆಚ್ಚುಗೆ ಪಡೆಯಿತು. ಆದರೆ ಇವಳ ಪರಿಶ್ರಮಕ್ಕೆ ತಕ್ಕಂತೆ ಈ ಯಾವ ಚಿತ್ರಗಳಲ್ಲೂ ಈಕೆಗೆ ಉತ್ತಮ ಐಡೆಂಟಿಟಿ ಸಿಗಲಿಲ್ಲ. ಹಿರಿತೆರೆ ಚಿತ್ರಗಳು ಮಾತ್ರವಲ್ಲದೆ, ಹಲವಾರು OTT ವೆಬ್‌ ಸೀರೀಸ್‌ ನಲ್ಲೂ ಕೆಲಸ ಮಾಡಿದ್ದಾಳೆ. ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ನಲ್ಲಿ ಈಕೆಯ ಇತ್ತೀಚಿನ ವೆಬ್‌ ಸೀರೀಸ್‌`ಸುಲ್ತಾನ್‌ ಆಫ್ ದಿಲ್ಲಿ’ ಭಾರಿ ಚರ್ಚೆಯಲ್ಲಿದೆ. ಈಕೆ ತನ್ನ ಸಿನಿ ಜರ್ನಿ ಹಾಗೂ ಕನಸಿನ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾಳೆ. ಆ ವಿವರಗಳನ್ನು ತಿಳಿಯೋಣವೇ?:

ಹೊಸ ಪಾತ್ರಗಳತ್ತ ಫೋಕಸ್

ಎಷ್ಟೋ ವರ್ಷಗಳವರೆಗೂ ಇದೇ ಇಂಡಸ್ಟ್ರಿಯಲ್ಲಿದ್ದೂ ಅನುಪ್ರಿಯಾಳಿಗೆ ಹೇಳಿಕೊಳ್ಳುವಂಥ ದೊಡ್ಡ ಮಟ್ಟದ ಐಡೆಂಟಿಟಿ ಸಿಕ್ಕಿಲ್ಲ. ಈ ಕುರಿತಾಗಿ ವಿವರಿಸುತ್ತಾ, “ನಾನು ಸದಾ ಉತ್ತಮ ಗುಣಮಟ್ಟದ ಪಾತ್ರಗಳು, ಅಂಥ ಚಿತ್ರಗಳನ್ನು ಮಾತ್ರ ಆರಿಸಿಕೊಳ್ಳುತ್ತೇನೆ. ಪಾತ್ರ ಚಿಕ್ಕದೋ ದೊಡ್ಡದೋ ಮುಖ್ಯವಲ್ಲ, ಆ ಚಿತ್ರಕ್ಕೆ ಅದು ಎಷ್ಟು ಮುಖ್ಯ ಎಂಬುದನ್ನು ಮಾತ್ರ ಗಮನಿಸುತ್ತೇನೆ. ಆ ಪಾತ್ರ ಎಷ್ಟು ಗಟ್ಟಿಯಾದುದು, ನಾನು ಯಾವ ತಂಡದಲ್ಲಿ, ಎಂಥವರ ಜೊತೆ ನಟಿಸುತ್ತಿದ್ದೇನೆ ಎಂಬುದು ನನಗೆ ಬಹಳ ಮುಖ್ಯ. ಆ ತಂಡದಿಂದ ನಾನು ಕಲಿಯುವಂತಿರಬೇಕು, ಆ ಪಾತ್ರ ನನಗೆ ಎಷ್ಟು ಸೂಕ್ತ ಇತ್ಯಾದಿಗಳನ್ನು ವಿಶ್ಲೇಷಿಸಿಯೇ ನಿರ್ಧಾರ ತಳೆಯುತ್ತೇನೆ. ನಾನು ರೊಮ್ಯಾಂಟಿಕ್‌, ಕಾಮಿಡಿ, ಗ್ರಾಮೀಣ ಪಾತ್ರಗಳನ್ನು ನಿಭಾಯಿಸಲು ಬಯಸುವೆ. ಇಷ್ಟು ಮಾತ್ರವಲ್ಲದೆ, ನನಗೆ ಪೀರಿಯಡ್‌ ಫಿಲ್ಮಂ (ಹೊಸ ಅಲೆ ಚಿತ್ರ) ಅಂದ್ರೆ ತುಂಬಾ ಇಷ್ಟ. ಅಂದಿನ ಆರ್ಟ್‌ ಮೂವಿ ಟ್ರೆಂಡ್‌ ಮತ್ತೆ ಮೂಡಿ ಬರಲಿ ಎಂದು ಬಯಸುತ್ತೇನೆ. ವಿಭಿನ್ನ ವಿಷಯ, ಉತ್ತಮ ಕೆಲಸಗಾರಿಕೆ, ಗಟ್ಟಿ ಪಾತ್ರಗಳನ್ನಷ್ಟೇ ಒಪ್ಪುತ್ತೇನೆ. ನನ್ನ ಬಳಿ ಬರುವ ಸ್ಕ್ರಿಪ್ಟ್ ನೋಡಿ, ಸಂಪೂರ್ಣ ಓದಿ, ಆ ಪಾತ್ರ ನನಗೆ 100% ಪೂರಕವಾಗಿದ್ದರೆ ಮಾತ್ರ ಚಿತ್ರ ಒಪ್ಪಿಕೊಳ್ತೀನಿ. ಹೀಗಾಗಿ ನಾನು ನಿರ್ಮಾಪಕ, ನಿರ್ದೇಶಕರಿಗೆ ವಿಧೇಯಳಾಗಿರುತ್ತೇನೆಯೇ ವಿನಾ ಗುಲಾಮಳಲ್ಲ! ಈ ಕಾರಣದಿಂದ ನಾನು ಹೆಚ್ಚು ಐಡೆಂಟಿಟಿ ಪಡೆಯಲಿಲ್ಲವೇನೋ…. ಗೊತ್ತಿಲ್ಲ!”

Anu-1

ಪಾತ್ರಕ್ಕೆ ತಕ್ಕಂತೆ ಬದಲಾವಣೆ

ಯಾವುದೇ ಹೊಸ ಪಾತ್ರವಿರಲಿ, ಅವನು ಅದಕ್ಕಾಗಿ ಬಹಳ ಕಷ್ಟಪಡುತ್ತಾಳೆ. “ಪ್ರತಿ ಚಿತ್ರಕ್ಕೂ ತನ್ನದೇ ಆದ ವೈಶಿಷ್ಟ್ಯ ಇರುತ್ತದೆ. `ವಾರ್‌’ ಚಿತ್ರಕ್ಕಾಗಿ ದೈಹಿಕವಾಗಿ ಫಿಟ್‌ ಆಗಿರುವ ಹುಡುಗಿಯೇ ಬೇಕಾಗಿತ್ತು. ಅದಕ್ಕಾಗಿ ನಾನು ಬೇಕಾದಷ್ಟು ವ್ಯಾಯಾಮ, ವರ್ಕ್‌ ಔಟ್‌ ಮಾಡಿ ದೇಹ ದಂಡಿಸಿ, ಹುರುಪುಗೊಳಿಸಿದೆ. ಅದೇ ತರಹ `ಪದ್ಮಾವತ್‌’ ಚಿತ್ರದ ರಾಣಿ ನಾಗಮತಿ ಪಾತ್ರಕ್ಕಾಗಿ, ಆ ಐತಿಹಾಸಿಕ ಪಾತ್ರದ ಬಗ್ಗೆ ಬಹಳ ಓದಿ ತಿಳಿದುಕೊಂಡೆ. ನಾನು ಮೂಲತಃ ಹುಟ್ಟಿ ಬೆಳೆದದ್ದು ರಾಜಸ್ಥಾನ ರಾಜ್ಯದಲ್ಲಿ, ನಂತರ ನನ್ನ ತಂದೆಗೆ ವರ್ಗವಾಗಲು ಕಾನ್ಪುರದಲ್ಲಿ ಪದವಿ ಶಿಕ್ಷಣಕ್ಕಾಗಿ ಕಾಲೇಜು ಸೇರಿದೆ. ಹೀಗಾಗಿ ರಾಜಸ್ಥಾನಿ ಸಂಪ್ರದಾಯದ ಬಗ್ಗೆ ನನಗೆ ಎಲ್ಲಾ ಚೆನ್ನಾಗಿ ಗೊತ್ತಿತ್ತು. ಆದರೂ ನಾನು ಆ ಪಾತ್ರಕ್ಕಾಗಿ, ಸಂಭಾಷಣೆ ಒಪ್ಪಿಸುವ ಶೈಲಿಯನ್ನು ಮತ್ತೆ ಮತ್ತೆ ಪ್ರಾಕ್ಟೀಸ್‌ ಮಾಡಿದೆ. ಈ ತರಹ ನಾನು ಆಯಾ ಪಾತ್ರಕ್ಕೆ ತಕ್ಕಂತೆ ಪರಕಾಯ ಪ್ರವೇಶ ಮಾಡುತ್ತೇನೆ.”

ಸುಲ್ತಾನ್ಆಗುವುದು ಮಜವಲ್ಲ

`ಸುಲ್ತಾನ್‌ ಆಫ್‌ ದಿಲ್ಲಿ’ ಸೀರೀಸ್‌ ನಲ್ಲಿ ಈಕೆ ಶಂಕರಿ ಪಾತ್ರದಲ್ಲಿ ನಟಿಸಿದ್ದಾಳೆ. ಅರವತ್ತರ ದಶಕದ ಕ್ರೈ ಸ್ಟೋರಿ ಇದು. ಇದರಲ್ಲಿ ಸ್ವಾಧೀನತೆ ಕಳೆದುಕೊಂಡ ಜನ, ಹೇಗೆ ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ, ಭವಿಷ್ಯದ ಬಗ್ಗೆ ನಿರಾಶಾವಾದಿಗಳಾಗುತ್ತಾರೆ ಎಂಬುದನ್ನು ಚರ್ಚಿಸಲಾಗಿದೆ. ಇಲ್ಲಿ ಒಬ್ಬ ಹೆಣ್ಣು ಗಂಡಸರ ಸಾಮ್ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಾಳೆ. ಇದರಲ್ಲಿ ಅವಳ ಸೆಕ್ಷುಯಾಲಿಟಿ ಹಾಗೂ ಸೆನ್ಸುಯಾಲಿಟಿ ದೊಡ್ಡ ಅಸ್ತ್ರವಾಗಿರುತ್ತದೆ. ಅತಿ ಚುರುಕಾದ ಈ ಪಾತ್ರ ಅಷ್ಟೇ ಸ್ಮಾರ್ಟ್‌ ಸಹ. ಈಕೆ ಎಂದೂ ತನ್ನ ನೈತಿಕತೆಯಿಂದ ಹಿಂಜರಿಯುವವಳಲ್ಲ. 7 ಕೆರೆ ನೀರು ಕುಡಿದ ಪಾತ್ರವದು, ಹೀಗಾಗಿ ಖಂಡಿತವಾದಿ ಕೂಡ. ಅವಳು ಇಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕಿದೆ. ಆ ಮೂಲಕ ತಾನು ಗಂಡಸರಿಗಿಂತ ಕೆಳಮಟ್ಟದಲ್ಲಿಲ್ಲ, ಸರಿಸಮಾನಳು ಎಂದು ನಿರೂಪಿಸುತ್ತಾಳೆ. ಅವಳು ಆ ಮಾಫಿಯಾ ಗ್ಯಾಂಗಿಗೆ ಸುಲ್ತಾನ್ ಆಗದಿದ್ದರೂ, ಅವನ ಸಂಗಾತಿಯಾಗಿ ಎಲ್ಲರನ್ನೂ ಆಳುತ್ತಾಳೆ!

Anu-3

ಇಂದಿಗೂ ನಿಲ್ಲದ ಆಡಿಶನ್

ಅನುಪ್ರಿಯ ಮುಂದೆ ವಿವರಿಸುತ್ತಾಳೆ, “ಈ ಸೀರೀಸ್‌ ಬಹಳ ಛಾಲೆಂಜಿಂಗ್‌ ಆಗಿತ್ತು, ಇಂಟಿಮೇಟ್‌ ಸೀನ್ಸ್ ನಲ್ಲಿ ಅಷ್ಟೇ ಬೋಲ್ಡ್ ಆಗಿ ನಟಿಸಿದ್ದೇನೆ. 45 ಡಿಗ್ರಿ ಸೆಖೆಯಲ್ಲಿ, ಮಾರಕಾಸ್ತ್ರಗಳ ಬಳಕೆಯ ಜೊತೆ ರಾಜಾಸ್ಥಾನ್‌ ನಲ್ಲಿ ಇದಕ್ಕಾಗಿ ಶೂಟಿಂಗ್‌ ಆಗಿತ್ತು. ರಾಜ್‌ ಕೋಟ್‌ ನಲ್ಲಿ ಕೆಲಸ ಮುಗಿಸುವಷ್ಟರಲ್ಲಿ ಹೈರಾಣಾಗುತ್ತಿದ್ದೆ, ಭಾವನಾತ್ಮಕವಾಗಿಯೂ ಅದು ಕಷ್ಟಕರವಾಗಿತ್ತು. ಆ್ಯಕ್ಷನ್ ದೃಶ್ಯಗಳು ಮುಗಿಯುತ್ತಿದ್ದಂತೆ ಮದುವೆ ಹೆಣ್ಣಾಗಿ ನಟಿಸಬೇಕಿತ್ತು. ಮೊದಲ ಬಾರಿಗೆ ನವವಧು ಆಗಿ ನಟಿಸಿದ್ದೇನೆ, ಹೀಗಾಗಿ ಆ ದೃಶ್ಯಗಳನ್ನು ಎಂದೂ ಮರೆಯಲಾರೆ.”

ಕನಸು ಕಾಣುವುದು ಅತ್ಯಗತ್ಯ

“ಯಾರಿಗೆ ತಾನೇ ಭವಿಷ್ಯದ ಕುರಿತು ಹೊಂಗನಸು ಇರುವುದಿಲ್ಲ? ಇದನ್ನು ಸಾಕಾರಗೊಳಿಸಲು ಯತ್ನಿಸದಿದ್ದರೆ, ನಮ್ಮ ಜೀವನ ತೀರಾ ಯಾಂತ್ರಿಕವಾಗಿ, ಅದು ರಸಹೀನ ಎನಿಸುತ್ತದೆ. ಎಲ್ಲರ ಜೀವನ ಹಾಳೆ ಮೇಲೆ ಎಳೆದ ಸರಳರೇಖೆ ಆಗಿರಲು ಸಾಧ್ಯವಿಲ್ಲ. ಒಂದು ಕನಸನ್ನು ನನಸಾಗಿಸಿಕೊಂಡೆ ಅಂದುಕೊಳ್ಳುವಷ್ಟರಲ್ಲಿ, ನಾನು ಇನ್ನೊಂದು ಕನಸು ಕಾಣಲು ಆರಂಭಿಸುತ್ತೇನೆ. ಮುಂದೆ ನಾನು ನಟಿಯಾಗಿ ಹೀಗೆ ಮಿಂಚಬಲ್ಲೆ ಎಂದು ಭಾವಿಸಿರಲಿಲ್ಲ.

“ಲಕ್ಷಾಂತರ ಅಭಿಮಾನಿಗಳು ನನ್ನ ಫಾಲೋಯೆರ್ಸ್‌ ಆಗಿದ್ದಾರೆ. ವೀಕ್ಷಕರು ನನ್ನ ಕೆಲಸ ಕಂಡು ಬೆನ್ನು ತಟ್ಟುತ್ತಿದ್ದಾರೆ. ಈ ನನ್ನ ಜರ್ನಿಯಲ್ಲಿ ಯಶಸ್ಸು ಬಲು ನಿಧಾನವಾಗಿ ಆಮೆ ವೇಗದಲ್ಲಿ ಲಭಿಸಿತು. ನಾನು ಉತ್ತಮ ಚಿತ್ರ ತಂಡ, ಅರ್ಥೈಸಿಕೊಳ್ಳುವ ಸಹನಟರ ಜೊತೆ ದುಡಿದಿದ್ದೇನೆ. ನಾನು ಅಂದುಕೊಂಡಂತೆಯೇ ಸಾಧಿಸುತ್ತಿದ್ದೇನೆ, ನನಗೆ ಇನ್ನೂ 4-5 ಗುರಿಗಳು ಇವೆ, ಅವನ್ನು ತಲುಪಿಯೇ ತೀರುತ್ತೇನೆ. ಸ್ಮಿತಾ ಪಾಟೀಲ್ ರ `ಮಿರ್ಚ್‌ ಮಸಾಲ,’ ರೇಖಾರ `ಉಮ್ರಾಮ್ ‌ಜಾನ್‌,’ ಶಬಾನಾ ಆಜ್ಮಿಯವರ `ಫೈರ್‌’ನಂಥ ಚಿತ್ರಗಳಲ್ಲಿ ನಟಿಸುವಾಸೆ. ಅಂಥ ಗಟ್ಟಿ ಪಾತ್ರ ಸಿಗಲಿ ಎಂದು ಪ್ರತಿ ಬಾರಿಯೂ ಆಡಿಶನ್‌ ಗೆ ರೆಡಿ ಆಗುತ್ತೇನೆ.

“ನನಗೆ ಬಾಲಿವುಡ್‌ ನಲ್ಲಿ ಯಾರೂ ಗಾಡ್‌ ಫಾದರ್‌ ಇಲ್ಲ! ನನಗಾಗಿ ವಿಶೇಷ ಕಾಳಜಿ ವಹಿಸುವವರು ಯಾರೂ ಇಲ್ಲ. ಹೀಗಾಗಿ ನಾನೇ ಎಲ್ಲೆಡೆ ಕದ ತಟ್ಟಿ ಕೆಲಸ ಹುಡುಕಿಕೊಳ್ಳಬೇಕಾಯಿತು. `ಟೈಗರ್‌ ಝಿಂದಾ ಹೈ, ಪದ್ಮಾವತ್‌’ ಚಿತ್ರಗಳ ನಂತರ ಆಡಿಶನ್ ನೀಡಬೇಕಾದ ಸಂದರ್ಭ ಎಷ್ಟೋ ಕಡಿಮೆ ಆಗಿದೆ. ಇದು ನನಗೆ ಎಷ್ಟೋ ಧೈರ್ಯ ತುಂಬುವ ವಿಷಯ.

“ಇಷ್ಟು ಮಾತ್ರವಲ್ಲದೆ, ಈಗಲೂ ಮುಂದಿನ ಆಫರ್‌ ಗಾಗಿ ನಿರ್ದೇಶಕರ ಕದ ತಟ್ಟುವ ಸ್ಥಿತಿ ಹೋಗಿಲ್ಲ. ನಾನು ಸಿನಿಮಾ ಮಾತ್ರವಲ್ಲದೆ, ಜಾಹೀರಾತುಗಳಿಗಾಗಿಯೂ ಸಾಕಷ್ಟು ದುಡಿಯುತ್ತೇನೆ. ಇದರ ಮಧ್ಯೆ ಪರಭಾಷಾ ನಟಿಯರ ಹಾವಳಿ ತಪ್ಪಿದ್ದಲ್ಲ, ಅವರಿಗಿಂತ ನಾವು ಹೆಚ್ಚು ಪ್ರಭಾವಶಾಲಿಗಳು ಎಂದು ಪ್ರೂವ್ ‌ಮಾಡಿದಾಗ ಮಾತ್ರ ನಮಗೆ ಮುಂದೆ ಹೆಚ್ಚಿನ ಅವಕಾಶ ಸಾಧ್ಯ!

ಬೋಲ್ಡ್ ಸೀನ್ಸ್ ಗೆ ಡೋಂಟ್ಕೇರ್‌!

“ಈ ಕುರಿತಾಗಿ ನಾನು ಸಹಜವಾಗಿಯೇ ಅದನ್ನು ಸ್ವೀಕರಿಸುತ್ತೇನೆ. ಆದರೆ ಅಂಥ ದೃಶ್ಯಗಳು ಆ ಕಥೆಗೆ ಪೂರಕ ಆಗಿರಬೇಕು, ಕೇವಲ ಕನಸಿನ ಕಾಲ್ಪನಿಕ ದೃಶ್ಯ ಎಂದು ತುರುಕುವ ಅಗತ್ಯವಿಲ್ಲ. ಹೆಂಗಸರ ಕಾಮುಕತೆ, ಅದರ ಆಳಅರಿವು ಇರುವಂಥ ನಿರ್ದೇಶಕರು ಮಾತ್ರವೇ ಅದನ್ನು ಕಾವ್ಯಮಯವಾಗಿ ತೋರಿಸಬಲ್ಲರು! ಕೇವಲ ಮಾರ್ಕೆಟ್‌ ಟ್ಯಾಕ್‌ ಟಿಕ್ಸ್ ಗಾಗಿ ಇಂಥ ಹಸಿ ಬಿಸಿ ದೃಶ್ಯಗಳೇ ಪ್ರಧಾನವಾಗಿರುವ ಎಷ್ಟೋ ಚಿತ್ರಗಳನ್ನು ನಾನು ಕೈ ಬಿಟ್ಟಿದ್ದೇನೆ. ಹೆಣ್ಣಿನ ಆಂತರಿಕ ನೋವು ಅರಿತ ಚಿತ್ರತಂಡ ಮಾತ್ರ ಇಂಥ ದೃಶ್ಯಗಳನ್ನು ಅಶ್ಲೀಲ ಆಗಿಸದೆ, ಗಂಭೀರವಾಗಿ ತೋರಿಸಲು ಸಾಧ್ಯ.”

ಕುಟುಂಬ ಇಲ್ಲದೆ ಹಬ್ಬ ಇಲ್ಲ!

ಅನುಪ್ರಿಯಾಳಿಗೆ ಹಬ್ಬಗಳ ಆಚರಣೆ ಎಂದರೆ ಎಲ್ಲಿಲ್ಲದ ಸಡಗರ! “ಹಬ್ಬ ಬರುವುದಕ್ಕೆ ಮೊದಲೇ, ನಾನು ಚಿತ್ರಗಳಿಂದ ಬಿಡುವು ಪಡೆದುಕೊಂಡು ನನ್ನ ಕುಟುಂಬದವರೊಂದಿಗೆ ಅದನ್ನು ಸಂಭ್ರಮದಿಂದ ಆಚರಿಸುತ್ತೇನೆ. ಎಲ್ಲರೂ ಕೂಡಿ ಒಂದೇ ಕಡೆ ಆಚರಿಸುವುದೇ ನಿಜವಾದ ಹಬ್ಬ, ಅದು ಎಷ್ಟೇ ಸರಳ ಅಥವಾ ಗ್ರಾಂಡಾಗಿ ಇರಲಿ, ಅದು ಬೇರೆ ವಿಷಯ. ಎಲ್ಲರೂ ಕಲೆತು ಊಟ ಮಾಡುವುದರಲ್ಲಿನ ಸೊಗಸೇ ಬೇರೇ.

“ಪರಿವಾರದವರೆಲ್ಲರೂ ಒಗ್ಗಟ್ಟಾಗಿರುವುದೇ ನಿಜವಾದ ಹಬ್ಬದ ಆಚರಣೆ. ಇದರಲ್ಲಿ ಮನೆಯ ಕ್ಲೀನಿಂಗ್‌, ಪೇಂಟಿಂಗ್‌, ಗೃಹಾಲಂಕಾರ, ಸಿಹಿ ತಿನಿಸಿನ ತಯಾರಿಕೆ, ಒಟ್ಟಾಗಿ ಕೂಡಿ ನಲಿಯುವುದು ಎಲ್ಲವೂ ಹಬ್ಬದ ಭಾಗವೇ ಆಗಿದೆ. ಹಿಂದಿನ ಆ ಸಾಂಪ್ರದಾಯಿಕ ಆಚರಣೆ, ಆ ವೈಭವ ನೆನೆಸಿಕೊಂಡರೆ ಈಗ ಎಲ್ಲವೂ ಯಾಂತ್ರಿಕ, ವ್ಯಾವಹಾರಿಕ, ಔಪಚಾರಿಕತೆ ಆಗಿಹೋಗಿದೆ.

“ಜನ ತಮ್ಮ ಫ್ರೆಂಡ್‌ ಸರ್ಕಲ್ ನಲ್ಲಿ ಒಂದಿಷ್ಟು ಶುಭಾಶಯಗಳ ಮೆಸೇಜ್‌ ಹರಿಯಬಿಟ್ಟು ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸುತ್ತಾರೆ. ಇವರಾದರೂ ವಾಸಿ, ಇದನ್ನು ಪಡೆದವರು ಅದಕ್ಕೆ ಉತ್ತರಿಸುವ ಗೋಜಿಗೂ ಹೋಗದೆ ಸೋಮಾರಿತನ ಪ್ರದರ್ಶಿಸುತ್ತಾರೆ. ಇಂಥಿಲ್ಲ ನನಗೆ ಬಿಲ್ ಕುಲ್ ‌ಇಷ್ಟವಿಲ್ಲ. ಇದರ ಬದಲು ನಾಲ್ಕು ಜನರೊಡನೆ ಮನಬಿಚ್ಚಿ ಬೆರೆತು, ಇರುವುದನ್ನು ಹಂಚಿಕೊಂಡು ಖುಷಿಪಡುವುದೇ ನಿಜವಾದ ಹಬ್ಬದ ಆಚರಣೆ! ಎಲ್ಲರೂ ತಂತಮ್ಮ ಅಹಂ, ಈಗೋ ಬಿಟ್ಟು, ಹಬ್ಬದ ನೆಪದಲ್ಲಾದರೂ ಒಂದಾಗಲಿ ಎಂದೇ ನಾನು ಹಾರೈಸುತ್ತೇನೆ. ಎಲ್ಲರಿಗೂ ಹ್ಯಾಪಿ ದೀಪಾವಳಿ!”

ಜಿ. ಸುಮಾ

ಅವಳ ಸಂಭಾವನೆ ಹೆಚ್ಚಾಗಿದೆ!

`ಟೈಗರ್‌ ಝಿಂದಾ ಹೈ, ಪದ್ಮಾವತ್‌ ಚಿತ್ರಗಳ ನಂತರ ಅನುಪ್ರಿಯಾಳ ಎದುರು ಬಾಲಿವುಡ್‌ ನ ಕರಾಳ ಮುಖದ ಮತ್ತೊಂದು ಪರಿಚಯವಾಯಿತು. ಈ 2 ಚಿತ್ರಗಳ ಯಶಸ್ಸಿನ ನಂತರ, ಇದ್ದಕ್ಕಿದ್ದಂತೆ ಈಕೆಗೆ ಕೆಲಸ ಸಿಗುವುದೇ ನಿಂತುಹೋಯಿತು! ಸಿನಿ ನಿರ್ಮಾಪಕರ ಸನ್ನೆಗೆ ತಕ್ಕಂತೆ ಕುಣಿಯುವ ಕಾಸ್ಟಿಂಗ್‌ ಡೈರೆಕ್ಟರ್ಸ್‌, ಬೇಕೆಂದೇ ಇವಳ ಕುರಿತಾಗಿ, ಈ 2 ಚಿತ್ರಗಳ ಯಶಸ್ಸಿನಿಂದ ಈಕೆ ಹೆಚ್ಚಿನ ಸಂಭಾವನೆ ಕೇಳುತ್ತಿದ್ದಾಳೆ ಎಂದು ಗಾಳಿ ಮಾತು ಹರಡಿದರು.

ಇದೆಂಥ ವಿಡಂಬನೆ! ಕಷ್ಟಪಟ್ಟು ನಟಿಸಿ, ಆ ಚಿತ್ರಗಳು ಯಶಸ್ಸು ಕಂಡರೆ, ಆ ಕಾರಣಕ್ಕಾಗಿ ಹೆಚ್ಚಿನ ಸಂಭಾವನೆ ಕೇಳುತ್ತಾಳೆಂದು ಇರುವ ಅವಕಾಶವನ್ನು ಕಿತ್ತುಕೊಳ್ಳುವುದೇ? ಇದೇ ಇಂದಿನ ಮಾಡರ್ನ್‌ ಬಾಲಿವುಡ್‌! ಚಿತ್ರ ಯಶಸ್ವಿಯಾದರೂ, ಅದರ ಆಧಾರದಿಂದ ಹೊಸ ಅವಕಾಶ ಸಿಗುತ್ತದೆ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ ಎಂಬುದಕ್ಕೆ ಅನುಪ್ರಿಯಾಳೇ ಪ್ರತ್ಯಕ್ಷ ಸಾಕ್ಷಿ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ