ಐಟಿ ಕ್ಷೇತ್ರ ಸೇರಿದಂತೆ ಮತ್ತಿತರ ಸಾಧನೆಗಳ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಇದೀಗ ಸಂಚಾರ ದಟ್ಟಣೆಯಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವದಲ್ಲಿ ಅತಿಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಟಾಮ್‌ಟಾಮ್‌ ಸಂಚಾರ ಸೂಚ್ಯಂಕ ಬಿಡುಗಡೆ ಮಾಡಿರುವ ವರದಿಯಂತೆ ವಿಶ್ವದಲ್ಲಿ ಅತಿಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೆಕ್ಸಿಕೊ ಮೊದಲ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಸರಾಸರಿ ದಟ್ಟಣೆಯು ಶೇ 74.4ರಷ್ಟಿದೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ಶೇ 1.7ರಷ್ಟು ಹೆಚ್ಚಾಗಿದೆ. ಚಾಲಕರು 15 ನಿಮಿಷಗಳಲ್ಲಿ ಸರಾಸರಿ 4.2 ಕಿ.ಮೀ. ದೂರವನ್ನಷ್ಟೇ ಕ್ರಮಿಸಲು ಸಾಧ್ಯವಾಗಿದೆ. 10 ಕಿ.ಮೀ. ಸಾಗಲು ಸರಾಸರಿ 36 ನಿಮಿಷ ಒಂಬತ್ತು ಸೆಕೆಂಡ್ಸ್‌ ತೆಗೆದುಕೊಂಡಿತ್ತು. ದಟ್ಟಣೆ ಸಮಯದಲ್ಲಿ ಗಂಟೆಗೆ ಸರಾಸರಿ 13.9 ಕಿ.ಮೀ.ಗೆ ಇಳಿದಿತ್ತು ಎಂದು ವರದಿ ತಿಳಿಸಿದೆ.2025ರ ಮೇ 17ರಂದು ನಗರದಲ್ಲಿ ಪ್ರಯಾಣದ ಅನುಭವ ತುಂಬಾ ಕೆಟ್ಟದಾಗಿತ್ತು ಎನ್ನಲಾಗಿದೆ. ದಟ್ಟಣೆಯ ಮಟ್ಟವು ಶೇ 101ರಷ್ಟಿತ್ತು. ಆ ದಿನ ಸಂಜೆ 6ಕ್ಕೆ ದಟ್ಟಣೆ ಪ್ರಮಾಣವು ಶೇ 183ಕ್ಕೆ ಏರಿತು. 2.5 ಕಿ.ಮೀ. ಕ್ರಮಿಸಲು 15 ನಿಮಿಷ ತೆಗೆದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ. 2024ರಲ್ಲಿ 10 ಕಿಮೀ ಪ್ರಯಾಣಿಸಲು 34 ನಿಮಿಷ 10 ಸೆಕೆಂಡುಗಳು ಬೇಕಾಗುತ್ತಿತ್ತು. ಒಂದು ವರ್ಷದಲ್ಲಿ 1.59 ನಿಮಿಷ ಹೆಚ್ಚಳವಾಗಿದೆ. ಇನ್ನು, 2025ರಲ್ಲಿ ಬೆಂಗಳೂರಿನ ಒಟ್ಟಾರೆ ಸರಾಸರಿ ವಾಹನ ವೇಗ ಪ್ರತಿ ಗಂಟೆಗೆ 16.6 ಕಿಮೀ ದಾಖಲಾಗಿದೆ. ಅದರಲ್ಲೂ ಪೀಕ್‌ ಅವರ್‌ಗಳಾದ ಬೆಳಗ್ಗೆ 14.6 ಕಿಮೀ ಮತ್ತು ಸಂಜೆ 13.2 ಕಿಮೀಗಳಾಗಿವೆ ಎಂದು ಹೇಳಲಾಗಿದೆ.

ನಗರದ ನಿವಾಸಿಗಳು 2025 ರಲ್ಲಿ ಸಂಚಾರದಲ್ಲಿ ಸಿಲುಕಿಕೊಂಡು ಸುಮಾರು 168 ಗಂಟೆಗಳನ್ನು (ಸುಮಾರು 7 ದಿನಗಳು) ವ್ಯಯಿಸುತ್ತಾರೆ. ಚೆನ್ನೈ, ಹೈದರಾಬಾದ್ ಪಟ್ಟಿಯಲ್ಲಿ ಸಾಕಷ್ಟು ಕೆಳಮಟ್ಟದಲ್ಲಿವೆ, ಬೆಂಗಳೂರಿಗಿಂತ ಹೆಚ್ಚು ಆರೋಗ್ಯಕರವಾಗಿವೆ. 32 ನೇ ಸ್ಥಾನದಲ್ಲಿರುವ ಚೆನ್ನೈ ಶೇ.58.6 ರಷ್ಟು ಪಡೆದುಕೊಂಡಿದೆ.

ಭಾರತದ ಆರು ನಗರಗಳು ಜಾಗತಿಕವಾಗಿ ಅಗ್ರ 35 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪುಣೆ ಶೇಕಡ 71.1 ರಷ್ಟು ದಟ್ಟಣೆಯೊಂದಿಗೆ ಐದನೇ, ಮುಂಬೈ ಶೇ 63.2 (18ನೇ ಸ್ಥಾನ), ನವದೆಹಲಿ ಶೇ 60.2(23ನೇ ಸ್ಥಾನ), ಕೋಲ್ಕತ್ತ ಶೇ 58.9(29ನೇ ಸ್ಥಾನ), ಜೈಪುರ ಶೇ 58.7 (30ನೇ ಸ್ಥಾನ) ಮತ್ತು ಚೆನ್ನೈ ಶೇ 58.6ರಷ್ಟು(32ನೇ ಸ್ಥಾನ) ಜನದಟ್ಟಣೆ ಹೊಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ