ಸುಮಾರು ಒಂದು ದಶಕದ ಕಾಲ ವಿವಾಹದ ಸುಳ್ಳು ಭರವಸೆ ನೀಡಿ ಮನೆಕೆಲಸದವಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್‌ ನಟ ನದೀಮ್‌ ಖಾನ್‌ ಅವರನ್ನು ಬಂಧಿಸಲಾಗಿದೆ.

41 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಈ ಬಂಧನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ʻಧುರಂಧರ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನದೀಮ್‌ ಖಾನ್‌ ಅವರನ್ನ ಜನವರಿ 22ರಂದು ಬಂಧಿಸಲಾಗಿದ್ದು, ಪ್ರಸ್ತುತ ಪೊಲೀಸ್‌ ವಶದಲ್ಲಿದ್ದಾರೆ.

ದೂರಿನ ಪ್ರಕಾರ, ಮಹಿಳೆ ವಿವಿಧ ನಟರ ಬಳಿ ಮನೆಗೆಲಸ ಮಾಡುತ್ತಿದ್ದಾಗ ಹಲವು ವರ್ಷಗಳ ಹಿಂದೆ ನದೀಮ್‌ ಖಾನ್‌ ಅವರ ಪರಿಚಯವಾಗಿತ್ತು. ನಂತರ ಇಬ್ಬರೂ ಹತ್ತಿರವಾಗಿದ್ದರು ಎಂದು ತಿಳಿದುಬಂದಿದೆ.

ನದೀಮ್‌ ಖಾನ್‌ ಅವರು ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯ ಮೇಲೆ, ಕಳೆದ ಹತ್ತು ವರ್ಷಗಳಲ್ಲಿ ಅನೇಕ ಬಾರಿ ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ನದೀಮ್‌ ಖಾನ್‌ ಮದುವೆಯಾಗಲು ನಿರಾಕರಿಸಿದ್ದರು. ಇದರಿಂದಾಗಿ, ಮಹಿಳೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ದೂರಿನಲ್ಲಿ, “ಸುಮಾರು ಹತ್ತು ವರ್ಷಗಳ ಹಿಂದೆ ನದೀಮ್‌ ಖಾನ್‌ ಅವರ ನಿವಾಸದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದೆ. ನಂತರ ಅವರು ಮದುವೆಯ ಭರವಸೆ ನೀಡಿದ ನಂತರ ಅವರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದೆ. ಈ ಸಂಬಂಧವು ವರ್ಷಗಳ ಕಾಲ ಮುಂದುವರೆಯಿತು, ಆದರೆ ಭರವಸೆ ಈಡೇರದಿದ್ದಾಗ ದೂರು ದಾಖಲಿಸಲು ನಿರ್ಧರಿಸಿದೆ” ಎಂದು ಉಲ್ಲೇಖಿಸಲಾಗಿದೆ.

“ಮಹಿಳೆಯ ಹೇಳಿಕೆಯ ಆಧಾರದ ಮೇಲೆ ನಾವು ನಟನನ್ನು ಬಂಧಿಸಿದ್ದೇವೆ ಮತ್ತು ಆರೋಪಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನದೀಮ್‌ ಖಾನ್‌ ಅವರು ಅಮಿತಾಭ್‌ ಬಚ್ಚನ್‌, ಅಸ್ರಾನಿ, ಆದಿಲ್‌ ಹುಸೇನ್‌ ಮತ್ತು ಸಂಜಯ್‌ ಮಿಶ್ರಾ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡಿದ್ದಾರೆ. ʻಧಡಕ್‌ʼ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ʻಧುರಂಧರ್‌ʼ ಸಿನಿಮಾದಲ್ಲಿ ನದೀಮ್‌ ಅವರು ರೆಹಮಾನ್‌ ಡಕಾಯಿತ್ ಮನೆಯ ಬಾಣಸಿಗ ʻಅಖ್ಲಾಕ್‌ʼ ಪಾತ್ರ ನಿರ್ವಹಿಸಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ