– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಮೊದಲ ಹಾಗೂ ಅತಿ ಹಿರಿಯ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ತನ್ನ 50ನೇ ವರ್ಷ ಪೂರೈಸಿದ್ದು, ಇದು ಭಾರತೀಯ ಚಿತ್ರರಂಗದ ಪಿಆರ್ ಇತಿಹಾಸದಲ್ಲೇ ಅಪರೂಪದ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1976ರಲ್ಲಿ ದಿ. ಡಿ.ವಿ. ಸುಧೀಂದ್ರ ಅವರು ಸ್ಥಾಪಿಸಿದ ಈ ಸಂಸ್ಥೆ, ಇದುವರೆಗೆ 3000ಕ್ಕೂ ಹೆಚ್ಚು ಸಿನಿಮಾಗಳಿಗೆ ಪ್ರಚಾರ ಕಾರ್ಯ ನಿರ್ವಹಿಸಿದ್ದು, ಭಾರತದಲ್ಲಿ ಯಾವುದೇ ಪಿಆರ್ ಸಂಸ್ಥೆ 50 ವರ್ಷಗಳ ಕಾಲ ನಿರಂತರವಾಗಿ ಸಕ್ರಿಯವಾಗಿರುವ ದಾಖಲೆ ಇಲ್ಲ ಎಂಬುದು ವಿಶೇಷ.
ಪ್ರಸ್ತುತ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್ ಮುನ್ನಡೆಸುತ್ತಿದ್ದು, ಅವರ ಪುತ್ರ ಸುನೀಲ್ ಸುಧೀಂದ್ರ, ಡಿ.ಜಿ. ವಾಸುದೇವ್ ಹಾಗೂ ಪವನ್ ವೆಂಕಟೇಶ್ ಸಹಕಾರ ನೀಡುತ್ತಿದ್ದಾರೆ.
ಗೋಲ್ಡನ್ ಜುಬಿಲಿಯ ಪೂರ್ವಭಾವಿಯಾಗಿ ಇತ್ತೀಚೆಗೆ ನಡೆದ ಸುವರ್ಣ ಸಂಭ್ರಮ ಲೋಗೊ ಅನಾವರಣ ಸಮಾರಂಭದಲ್ಲಿ ಹಿರಿಯ ನಟ ಜೆ.ಕೆ. ಶ್ರೀನಿವಾಸಮೂರ್ತಿ, ನಟ ಕೋಮಲ್ ಕುಮಾರ್ ಮತ್ತು ನಟಿ ಅನು ಪ್ರಭಾಕರ್ ಮುಖರ್ಜಿ ಲೋಗೊ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಕೆ. ಶ್ರೀನಿವಾಸಮೂರ್ತಿ, “ರಾಘವೇಂದ್ರ ಚಿತ್ರವಾಣಿ 50 ವರ್ಷ ಪೂರೈಸಿರುವುದು ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ಈ ಸಂಸ್ಥೆ ನೂರು ವರ್ಷಗಳ ಸಂಭ್ರಮವನ್ನೂ ಕಾಣಲಿ” ಎಂದು ಹಾರೈಸಿದರು.
ಏಪ್ರಿಲ್ ತಿಂಗಳಲ್ಲಿ ಗೋಲ್ಡನ್ ಜುಬಿಲಿ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್ ಮಾಹಿತಿ ನೀಡಿದ್ದಾರೆ.





