ಹಬ್ಬಗಳ ಸಂದರ್ಭದಲ್ಲಿ ನಮ್ಮ ನೆಂಟರಿಷ್ಟರು, ಫ್ರೆಂಡ್ಸ್ ಗೆಲ್ಲ ಗಿಫ್ಟ್ ನೀಡುವುದು ಹಿಂದಿನಿಂದಲೂ ಬಂದ ಪದ್ಧತಿ. ಚಾಕಲೇಟ್‌, ಸ್ವೀಟ್‌ ಬಾಕ್ಸ್, ಗ್ಯಾಜೆಟ್ಸ್, ಹೋಂ ಅಪ್ಲೈಯೆನ್ಸೆಸ್‌….. ಈ ರೀತಿ ಏನಾದರೊಂದನ್ನು ಗಿಫ್ಟ್ ನೀಡುವ ವಾಡಿಕೆ ಇದೆ. ಆದರೆ ಈಗ ಕಾಲ ಬದಲಾಗಿದೆ. ಇದಕ್ಕೆ ತಕ್ಕಂತೆ ನಮ್ಮ ಆಚಾರವಿಚಾರಗಳೂ ಅಷ್ಟಿಷ್ಟು ಬದಲಾವಣೆ ಕಾಣುತ್ತಲೇ ಇರುತ್ತವೆ. ಉಡುಗೊರೆ ಪಡೆದವರು ಅದರಿಂದ ಸುಪ್ರೀತರಾಗಿ ಮುಖದಲ್ಲಿ ಮಂದಹಾಸ ತಂದುಕೊಂಡಾಗ, ಗಿಫ್ಟ್ ಕೊಟ್ಟವರಿಗೂ ಸಾರ್ಥಕ ಎನಿಸುತ್ತದೆ. ಆ ಉಡುಗೊರೆ ಅವರಿಗೆ ಉಪಯೋಗಕ್ಕೆ ಬಂದರೆ ಅದಿನ್ನೂ ಬೆಸ್ಟ್! ಹೀಗಾಗಿ ಎಲ್ಲೆಲ್ಲೂ ಪರಿಸರ ಮಾಲಿನ್ಯ ತಾಂಡವ ಆಡುತ್ತಿರುವ ಈ ಆಧುನಿಕ ಕಾಲದಲ್ಲಿ, ಪರಿಸರಸ್ನೇಹಿ ಸಣ್ಣಪುಟ್ಟ ಗಿಡಗಳನ್ನೇ ಉಡುಗೊರೆಯಾಗಿ ಕೊಟ್ಟರೆ ಎಂಥ ಚಂದ ಅಲ್ಲವೇ? ಇದರಿಂದ ಗ್ರೀನ್‌ ಫೆಸ್ಟಿವ್ ‌ಸೆಲೆಬ್ರೇಟ್‌ ಮಾಡಿದಂತೆಯೂ ಆಗುತ್ತದೆ.

ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ಪರಿಸರ ಮಾಲಿನ್ಯ ತುಂಬಿ ತುಳುಕಾಡುತ್ತಿದೆ. ಹೀಗಾಗಿ ಸಸ್ಯ ಸಂಕುಲವನ್ನು ಉಡುಗೊರೆಯಾಗಿ ನೀಡುವುದು ಖಂಡಿತಾ ಒಪ್ಪುತ್ತದೆ. `ಸ್ಟೇಟ್‌ ಆಫ್‌ ಇಂಡಿಯಾಸ್‌ ಎನ್‌ ವಾರ್ಯನ್ ಮೆಂಟ್‌’ ಅಂದ್ರೆ  2019ರ ಜೂನ್‌ ನಲ್ಲಿ ಜಾರಿಗೊಳಿಸಿದ ಡೇಟಾ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 12.5%ಗೂ ಅಧಿಕ ಜನರು ಕಲುಷಿತ ಗಾಳಿಯ ಸೇವನೆಯಿಂದ ಸಾಯುತ್ತಾರೆ. ಇದು ವಾಯು ಮಾಲಿನ್ಯದ ಪ್ರಕೋಪ ತೋರಿಸುತ್ತದೆ. ಕಳೆದ 5 ವರ್ಷಗಳಿಂದ ಕಡಿಮೆ ವಯಸ್ಸಿನ ಮಕ್ಕಳು ಸರಾಸರಿ 8.5% ಿಕ್ಕದಲ್ಲಿ ವಾಯು ಮಾಲಿನ್ಯದಿಂದಾಗಿ ಸಾವನ್ನಪ್ಪುತ್ತಿದ್ದಾರೆ.

ಪ್ರತಿ ವರ್ಷ ದೀಪಾವಳಿ ಹಬ್ಬದ ಆಚರಣೆ ನಂತರ, ಎಷ್ಟು ವೇಗವಾಗಿ ವಾಯು ಮಾಲಿನ್ಯ ಪಟಾಕಿಗಳ ಕೆಮಿಕಲ್ಸ್ ನಿಂದ ಇನ್ನಷ್ಟು ಮತ್ತಷ್ಟು ಕೆಡುತ್ತಿದೆ ಎಂಬುದು ತಿಳಿದ ಸಂಗತಿ. ವಾರಗಟ್ಟಲೆ ಕಪ್ಪು ಹೊಗೆ ಪ್ರತಿ ಮಹಾನಗರದಲ್ಲೂ ದಟ್ಟವಾಗಿ ಸುತ್ತಾಡುತ್ತಾ ಇರುತ್ತದೆ. ಹೀಗಾಗಿ ನಮ್ಮ ಕೈಲಾದ ಪ್ರಯತ್ನ ನಾವು ಮಾಡುತ್ತಾ, ಈ ವಾಯು ಮಾಲಿನ್ಯ ತಡೆಗಟ್ಟಲು ಹೋರಾಡಬೇಕಿದೆ. ಮುಖ್ಯವಾಗಿ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಮ್ಮೆಲ್ಲ ನೆಂಟರಿಷ್ಟರು, ಬಂಧುಬಳಗ, ಫ್ರೆಂಡ್ಸ್ ಗೆಲ್ಲ ಇಂಥ ಸಣ್ಣಪುಟ್ಟ ಬಗೆಬಗೆಯ ಗಿಡಗಳನ್ನು ಉಡುಗೊರೆಯಾಗಿ ಕೊಡಬಹುದು. ಈ ಸಣ್ಣ ಗಿಡಗಳು ಖಂಡಿತಾ ನಮ್ಮ ಜೇಬಿಗೆ ಹೆಚ್ಚಿನ ಹೊರೆ ಆಗುವುದಿಲ್ಲ. ಇವು ನಮ್ಮ ಪರಿಸರದ ಸಮತೋಲನ ಕಾಯ್ದುಕೊಳ್ಳುವುದರಲ್ಲೂ ಬಲು ಸಹಕಾರಿ.

Snake

ಇವನ್ನು ಗಿಫ್ಟ್ ಆಗಿ ಕೊಡಿ

ಗಿಫ್ಟ್ ನೀಡಲು ಸ್ನೇಕ್‌ ಪ್ಲಾಂಟ್‌ ಒಂದು ಉತ್ತಮ ವಿಕಲ್ಪವಾಗಿದೆ. ಈ ಗಿಡವನ್ನು ಏರ್‌ ಪ್ಯೂರಿಫೈರ್‌ ಎಂದೇ ಗುರುತಿಸಲಾಗುತ್ತದೆ. ಇದು ಕೇವಲ ನೋಡಲು ಸುಂದರವಷ್ಟೇ ಅಲ್ಲ, ಪರಿಸರದ ದೃಷ್ಟಿಯಿಂದ ಬಹಳ ಲಾಭಕಾರಿ. ಇದನ್ನು ನಮ್ಮ ಬೆಡ್ ರೂಮಿನಲ್ಲಿರಿಸುವುದೇ ಬೆಟರ್‌. ಏಕೆಂದರೆ, ಸೂರ್ಯಾಸ್ತದ ನಂತರ ಈ ಗಿಡ ಆಮ್ಲಜನಕ ನೀಡಲು ಆರಂಭಿಸುತ್ತದೆ, ಅದೇ ಇದರ ವೈಶಿಷ್ಟ್ಯ! ಮತ್ತೊಂದು ಪ್ಲಸ್‌ ಪಾಯಿಂಟ್‌ ಎಂದರೆ, ದಿನ ಬಿಟ್ಟು ದಿನ ರೆಗ್ಯುಲರ್‌ ಆಗಿ ಇದಕ್ಕೆ ನೀರು ಹನಿಸುತ್ತಿರಬೇಕು ಎಂಬ ಜಂಜಾಟವಿಲ್ಲ. ಇದರ ಕುಂಡದ ಮಣ್ಣು ಪೂರ್ತಿ ಒಣಗಿದಂತಾದಾಗ, ನೀರು ಹನಿಸಿದರೆ ಸಾಕು.

ಇಂಥದ್ದೇ ಮತ್ತೊಂದು ಆಯ್ಕೆ ಎಂದರೆ ಪೆಪರೋಮಿಯಾ ಗಿಡ. ಇದನ್ನು ನಿಮ್ಮ ಸಹೋದ್ಯೋಗಿ, ಫ್ರೆಂಡ್ಸ್ ಜೊತೆಗೂ ಧಾರಾಳ ಹಂಚಿಕೊಳ್ಳಬಹುದು. ಇದನ್ನು ಅವರು ತಮ್ಮ ಮನೆ/ಆಫೀಸ್‌ ಎರಡೂ ಕಡೆ ಬಳಸಿಕೊಳ್ಳಬಹುದು. ಇದು ನೋಡಲು ಆಕರ್ಷಕ, ಲೋ ಮೇಂಟೆನೆನ್ಸ್ ಸಾಕು. ಇದನ್ನು ವಿಶೇಷವಾಗಿ ವಿಚಾರಿಸಿಕೊಂಡು ಆರೈಕೆ ಮಾಡಬೇಕೆಂಬ ಗೋಜಿಲ್ಲ. ಇದು ಅತಿ ಸುಂದರವಾಗಿದ್ದು, ಕಡಿಮೆ ಜಾಗ ಬೇಡುತ್ತದೆ. ನಿಮ್ಮ ಫ್ರೆಂಡ್ಸ್ ಗೆ ಗಾರ್ಡನಿಂಗ್‌ ನಲ್ಲಿ ಆಸಕ್ತಿ ಇದ್ದರೆ, ಅಂಥವರಿಗೆ ಆ್ಯಂಥೊರಿಯಂ ಗಿಡವನ್ನು ಸಹ ಉಡುಗೊರೆಯಾಗಿ ನೀಡಬಹುದು. ಇದರ ಹೂವಿನ ಕೆಂಬಣ್ಣ ಇಡೀ ವಾತಾವರಣಕ್ಕೆ ಹೊಸ ಕಳೆ ನೀಡುತ್ತದೆ.

ಮುಖದಲ್ಲಿ ಮಂದಹಾಸವಿರಲಿ

ಏರ್‌ ಪ್ಲಾಂಟ್‌ ಡೆಸರ್ಟ್‌ ರೋಸ್‌, ಪಾನೀಟೇಲ್ ‌ಪಾಮ್. ಬಿಗೋನಿಯಾ, ಚೈನೀಸ್‌ ಎವರ್‌ ಗ್ರೀನ್‌, ಮನೀ ಪ್ಲಾಂಟ್‌, ಆ್ಯಲೋವೆರಾ, ಜೇಡ್‌ ಪ್ಲಾಂಟ್‌ ಇತ್ಯಾದಿ ಗಿಡಗಳು ಕಡಿಮೆ ಆರೈಕೆಯಲ್ಲೇ ಚೆನ್ನಾಗಿ ಬೆಳೆಯುತ್ತವೆ. ಇವು ಮನೆಯ ಒಳಾಲಂಕಾರಕ್ಕೆ ಹೆಚ್ಚು ಪೂರಕ.

ಇಷ್ಟು ಮಾತ್ರವಲ್ಲದೆ, ಕೆಲವು ಗಿಡಗಳು ದೊಡ್ಡದಾಗಿ ಮುಂದೆ ಮರವಾಗಿ ನೆರಳು ನೀಡುವಂಥದ್ದನ್ನೂ ಸಹ, ಸಸ್ಯ ರೂಪದಲ್ಲಿದ್ದಾಗ ನಾವು ಗಿಫ್ಟ್ ಕೊಡಬಹುದು. ಇವುಗಳಲ್ಲಿ ಬೇವು, ನೇರಳೆ, ಮಾವು, ಸೀಬೆ, ಅಶೋಕ ವೃಕ್ಷಗಳೂ ಸೇರಿವೆ. ಇವನ್ನು ನಮ್ಮ ಮನೆಗಳ ಅಂಗಳದಲ್ಲಿ ಧಾರಾಳವಾಗಿ ಬೆಳೆಯಬಹುದು.

ನೀವು ಈ ಗಿಡಗಳನ್ನು ಉತ್ತಮ ಪ್ಯಾಕಿಂಗ್‌ ಮಾಡಿ ನೀಡಬಹುದು. ಅಂದ್ರೆ ಕೇವಲ ಗಿಫ್ಟ್ ರಾಪ್‌ ಮಾಡಿ ಕೊಟ್ಟರಾಯಿತು ಅಂದುಕೊಳ್ಳಬೇಡಿ. ಉತ್ತಮ ಫ್ಲವರ್‌ ಪಾಟ್‌ ಯಾ ಪ್ಲಾಂಟ್‌ ಪಾಟ್‌ ಗಳಲ್ಲಿ ಇವನ್ನು ನೀಡಬಹುದು, ಅಗತ್ಯವೆನಿಸಿದರೆ ಜೊತೆಗೆ ಚಾಕಲೇಟ್‌ ಸಹ ನೀಡಿ.

ಹೊಸತೇನಾದರೂ ಮಾಡಿ

ಹಬ್ಬಗಳ ಸಂದರ್ಭದಲ್ಲಿ ಜನ ತಮ್ಮ ನೆಂಟರಿಷ್ಟರಿಗೆ ಹೊಳೆಯುವ ಗಿಫ್ಟ್ ರಾಪ್‌ ಗಳಲ್ಲಿ ಸುತ್ತಿದ ಉಡುಗೊರೆ ನೀಡಬಯಸುತ್ತಾರೆ. ಅದು ಬಹುತೇಕ ಸ್ವೀಟ್‌ ಬಾಕ್ಸ್ ಆಗಿರಬಹುದು ಅಥವಾ ಷೋಕೇಸ್‌ ಐಟಂ. ಇದರ ಬದಲಾಗಿ ಇಂಥ ಹಸಿರು ತುಂಬಿದ ಗಿಡಗಳನ್ನು ಉಡುಗೊರೆ ನೀಡುವುದು ಹೊಸ ಪದ್ಧತಿಯಾದರೂ ಇದರಲ್ಲಿ ಹಿಂಜರಿಕೆ ಬೇಡ. ಆದರೆ ಈ ಕಡೆ ಬಹಳ ಜನ ಗಮನ ನೀಡುತ್ತಿಲ್ಲ ಎಂಬುದು ನಿಜ. ಆದರೆ ಪರಿಸರ ಕೆಟ್ಟಿದೆ, ಅದನ್ನು ಕಾಪಾಡಿಕೊಳ್ಳಬೇಕು ಎಂದು ಘೋಷಣೆ ಕೂಗಲು ಹಿಂದಿಳಿಯುವುದಿಲ್ಲ.

ಕಳೆದ ದೀಪಾವಳಿ ಹಬ್ಬದಲ್ಲಿ ಒಂದು ಪ್ರಸಿದ್ಧ ಖಾಸಗಿ ಕಂಪನಿ, ತನ್ನ ಸಿಬ್ಬಂದಿಗೆ ಹೀಗೆ ಸ್ವೀಟ್‌ ಬಾಕ್ಸ್, ಇನ್ನಿತರ ಉಡುಗೊರೆ ಬದಲು ಉತ್ತಮ ಪ್ಲಾಂಟ್‌ ಪಾಟ್‌ ನಲ್ಲಿ ಎಲ್ಲರಿಗೂ ಇಂಥ ಗಿಡ ವಿತರಿಸಿತು. ಎಷ್ಟೋ ಸಿಬ್ಬಂದಿಗೆ ಆಡಳಿತ ಮಂಡಳಿ ಹೀಗೇಕೆ ಮಾಡಿತು ಎಂದು ಅರ್ಥವಾಗಲೇ ಇಲ್ಲ. ಹೀಗಾಗಿ ಅದನ್ನು ನಿರ್ಲಕ್ಷಿಸಿದ ಸಿಬ್ಬಂದಿ, ಎಚ್ಚೆತ್ತುಕೊಳ್ಳುವ ಮೊದಲೇ ಅವರಿಗೆ ನೀಡಲಾಗಿದ್ದ ಗಿಡಗಳು ಒಣಗಿ ಹೋದವು.

ಹೀಗಾಗಿ ನಾವೆಲ್ಲರೂ ಪ್ರಯತ್ನಪಟ್ಟು ಇಂಥ ಪರಿಸರಸ್ನೇಹಿ ಗಿಡಗಳನ್ನೇ ಉಡುಗೊರೆಯಾಗಿ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಇಂಥ ನೇಚರ್‌ ಫ್ರೆಂಡ್ಲಿ ಗಿಫ್ಟ್ ಮಾತ್ರವೇ ಮುಂದಿನ ಪರಿಸರ ಮಾಲಿನ್ಯ ತಡೆಗಟ್ಟಲು ಮೂಲಾಧಾರ. ನೀವು ನೀಡುವುದು ಮಾತ್ರವಲ್ಲದೆ, ಇಂಥದ್ದನ್ನೇ ನಿಮ್ಮ ಪ್ರೆಂಡ್ಸ್ ಸಹ ಎಲ್ಲರಿಗೂ ನೀಡುವಂತೆ ಪ್ರೇರೇಪಿಸಿ. ಇಂದು ನಾವು ಆರಂಭಿಸುವ ಈ ಆಂದೋಲನ ಮುಂದೆ ಖಂಡಿತಾ ಉತ್ತಮ ಪರಿಣಾಮ ನೀಡಬಲ್ಲದು.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ