ಷೇರು ಮಾರುಕಟ್ಟೆ, ಸ್ಟಾಕ್ ಎಕ್ಸ್ ಚೇಂಜ್ ಮುಂತಾದವುಗಳಲ್ಲಿ ಹೂಡಿಕೆ, ಆ ಮೂಲಕ ಅಗತ್ಯವಿದ್ದಾಗ ಷೇರುಗಳನ್ನು ಕೊಂಡು, ಮಾರುವುದು ಇತ್ಯಾದಿಗಳೆಲ್ಲ ಸಾಮಾನ್ಯ ಜನರಿಗೆ ನಿಜಕ್ಕೂ ಕಬ್ಬಿಣದ ಕಡಲೆಯೇ ಸರಿ. ಇದನ್ನು ಸರಳವಾಗಿ ಅರಿಯೋಣವೇ……..?
ಗೃಹಿಣಿಯರಿಗೆ, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ನೌಕರಸ್ಥರಿಗೆ, ಸ್ವಂತ ಉದ್ಯೋಗಿಗಳಿಗೆ, ನಿವೃತ್ತರಿಗೆ ತಮ್ಮ ಸಂಪಾದನೆಯ ಹಣವನ್ನು ಉಳಿತಾಯ ಮಾಡಲು ಹಲವಾರು ಮಾರ್ಗಗಳಿವೆ. ಬ್ಯಾಂಕ್ ಠೇವಣಿಗಳು (ಡೆಪಾಸಿಟ್), ಅಂಚೆ ಕಛೇರಿ ಠೇವಣಿಗಳು. ಬ್ಯಾಂಕ್ ಅಥವಾ ಅಂಚೆ ಕಛೇರಿಗಳಲ್ಲಿ ತೆರೆಯಬಹುದಾದ ಸಾರ್ವಜನಿಕ ಭವಿಷ್ಯ ನಿಧಿ (ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಖಾತೆಗಳು), ಉತ್ತಮ ಕಂಪನಿಗಳ ಸ್ಥಿರ ಠೇವಣಿಗಳು (ಎಫ್.ಡಿ), ಚಿನ್ನ, ಮ್ಯೂಚುವಲ್ ಫಂಡ್ಸ್ ಹೀಗೆ. ಅದೇ ರೀತಿಯಲ್ಲಿ ಕಂಪನಿಗಳ ಷೇರುಗಳಲ್ಲಿ ಹಣ ಹೂಡುವುದೂ ಒಂದು ಉತ್ತಮ ಹೂಡಿಕೆಯೇ ಸರಿ. ಷೇರು ಸೂಚ್ಯಂಕ ದಾಖಲೆಯ ಎತ್ತರಕ್ಕೆ ಏರಿತು, ಷೇರು ಹೂಡಿಕೆಯಲ್ಲಿ ಅಷ್ಟು ಲಾಭ ಆಯಿತು ಇಷ್ಟು ಲಾಭ ಆಯಿತು ಅಂತೆಲ್ಲ ನಾವು ದಿನ ಬೆಳಗಾದರೆ ಕೇಳುತ್ತಲೇ ಇರುತ್ತೇವೆ. ಹಾಗಾಗಿ, ಕಂಪನಿಯ ಷೇರುಗಳಲ್ಲಿ ಹಣವನ್ನು ಹೂಡುವುದು ಹೇಗೆ ಎಂಬ ಬಗ್ಗೆ ನಾವು ವಿವರವಾಗಿ ತಿಳಿಯೋಣ.
ಮುಂಬೈ ಷೇರು ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ 82,000 ಗಡಿ ದಾಟಿತು, ಕೆಲವು ತಿಂಗಳುಗಳ ಹಿಂದೆಯಷ್ಟೇ ಅದು 75,000ದ ಆಸುಪಾಸಿನಲ್ಲಿತ್ತು. ಕೆಲವು ವರ್ಷಗಳ ಹಿಂದೆಯಷ್ಟೇ 50,000 ದಲ್ಲಿತ್ತು ಅಂತೆಲ್ಲ ನಾವು ಮಾಧ್ಯಮಗಳಲ್ಲಿ ಓದಿರುತ್ತೇವೆ ಅಥವಾ ನೋಡಿರುತ್ತೇವೆ. ಹಾಗೆಯೇ ರಾಷ್ಟ್ರೀಯ ಷೇರು ಸೂಚ್ಯಂಕ, ನಿಫ್ಟಿ, 15,000ದ ಗಡಿಯನ್ನೂ, 20,000ದ ಮಟ್ಟವನ್ನೂ, 25,000ದ ಹಂತವನ್ನೂ ದಾಟಿತು ಅಂತಲೂ ಸುದ್ದಿ ಬರುತ್ತಿರುತ್ತದೆ.
ಮೋಟಾರು ಉದ್ಯಮ, ಬ್ಯಾಂಕಿಂಗ್ ಮತ್ತು ಹಣಕಾಸು ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಉಕ್ಕು, ಸಿಮೆಂಟ್, ಟೆಲಿಕಾಂ ಮುಂತಾದ ಕ್ಷೇತ್ರಗಳ ಪ್ರಮುಖ ಕಂಪನಿಗಳ ಷೇರುಗಳು ಸೆನ್ಸೆಕ್ಸ್ ನಲ್ಲಿ ಸ್ಥಾನ ಪಡೆದಿವೆ. ಈ ಸೂಚ್ಯಂಕದಲ್ಲಿ 30 ಕಂಪನಿಗಳಿವೆ. ವಿವಿಧ ಕ್ಷೇತ್ರಗಳ ಉದ್ಯಮಗಳಲ್ಲಿರುವ ಈ ಎಲ್ಲ ಕಂಪನಿಗಳ ವಹಿವಾಟು, ಫಲಿತಾಂಶಗಳನ್ನು ಗಮನಿಸಿ ಹಾಗೂ ಮುಂದಿನ ವರ್ಷಗಳಿಗೂ ನಿರೀಕ್ಷೆಗಳನ್ನು ಇಟ್ಟುಕೊಂಡು ಅಂತಹ ಕಂಪನಿಗಳ ಷೇರು ಬೆಲೆಗಳಲ್ಲಿ ಏರಿಕೆ, ಇಳಿಕೆ ಉಂಟಾದಂತೆ, ಸೂಚ್ಯಂಕದಲ್ಲೂ ಏರಿಳಿತಗಳು ಉಂಟಾಗುತ್ತಿರುತ್ತವೆ.
ಹಾಗೆಯೇ ನಿಫ್ಟಿಯಲ್ಲಿ ಬೇರೆ ಬೇರೆ ಉದ್ಯಮಗಳ ಒಟ್ಟಾರೆ 50 ಕಂಪನಿಗಳಿವೆ. ಷೇರು ಬೆಲೆಗಳ ಏರಿಳಿತಗಳು ಒಂದು ರಾಷ್ಟ್ರದ ಆರ್ಥಿಕ ಸ್ಥಿತಿಗತಿ ಹಾಗೂ ಆಗುಹೋಗುಗಳನ್ನು ಪ್ರತಿಬಿಂಬಿಸುವ. ಯಾವುದೇ ಹೊಸ ಉದ್ಯಮವನ್ನು ಸ್ಥಾಪಿಸಬೇಕು ಎಂದಾದರೆ ಹಾಗೂ ಈಗಿರುವ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವುದಾದರೆ ಹಣಕಾಸಿನ ಅಗತ್ಯಗಳಿಗಾಗಿ ಕಂಪನಿಗಳು ಸಾಮಾನ್ಯವಾಗಿ ಬ್ಯಾಂಕ್ ಗಳಿಂದ ದೊರಕುವ ಸಾಲವನ್ನು ಅವಲಂಬಿಸುತ್ತವೆ.
ಹಾಗೆಯೇ ಈಗಾಗಲೇ ತಮ್ಮ ಉತ್ಪನ್ನಗಳನ್ನು ತಯಾರಿಸುವ ಸ್ವಲ್ಪ ದೊಡ್ಡ ಕಂಪನಿಗಳು ಆರಂಭಿಕ ಸಾರ್ವನಿಕ ನೀಡಿಕೆ (ಐಪಿಒ)ಗಳ ಮೂಲಕ ಹೂಡಿಕೆದಾರರಿಂದ ಬಂಡವಾಳವನ್ನು ಸಂಗ್ರಹಿಸುವ ಮಾರ್ಗವನ್ನೂ ಹಿಡಿಯುತ್ತವೆ.
ಐಪಿಓಗಳಲ್ಲಿ ಹೂಡಿಕೆ : ಐಪಿಒಗಳಲ್ಲಿ ಹಣ ತೊಡಗಿಸಬೇಕಾದರೆ ಕನಿಷ್ಠ 15,000ಗಳು ಇದ್ದರೂ ಸಾಕು. ಉದಾಹರಣೆಗೆ ಎರಡು ವರ್ಷಗಳ ಹಿಂದೆ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಕಂಪನಿಯು ತನ್ನ ಐಪಿಒಗಳಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಒಂದು ಷೇರಿಗೆ 904 ರೂ. ಎಂದು ನಿಗದಿಪಡಿಸಿತ್ತು. ಆಗ ಹೂಡಿಕೆದಾರರಿಗೆ ಒಟ್ಟಾರೆ 13,560 ರೂ.ಗಳಿಗೆ 15 ಷೇರುಗಳು ದೊರಕಿದ್ದವು. ಕೆಲವೇ ತಿಂಗಳುಗಳಲ್ಲಿ ಒಂದು ಷೇರಿನ ಬೆಲೆ 566ಕ್ಕೆ ಕುಸಿದಿತ್ತು.
ಹೂಡಿಕೆದಾರರು ಗಾಬರಿಯಾಗಿ, ಆತಂಕಗೊಂಡು ಆಗ ಮಾರುತ್ತಿದ್ದರೆ ಅವರಿಗೆ ಅವರ 13,560 ರೂ. ಹೂಡಿಕೆಗೆ ಬರೀ 8,490 ರೂ. ಅಷ್ಟೇ ದೊರಕುತ್ತಿತ್ತು. ಕ್ರಮೇಣ ಷೇರಿನ ಬೆಲೆ ಏರುತ್ತಾ ಇತ್ತೀಚೆಗೆ ಒಂದು ಷೇರಿಗೆ 1,222 ರೂ. ಕೂಡ ಆಗಿತ್ತು. ಮೊದಲು ಷೇರುಗಳನ್ನು ಮಾರದೆ, ಈಗ ಅವರಲ್ಲಿದ್ದ ಎಲ್ಲ 15 ಷೇರುಗಳನ್ನು ಮಾರುತ್ತಿದ್ದರೆ ಅವರ 13,560 ರೂ. ಹೂಡಿಕೆಗೆ ಪ್ರತಿಯಾಗಿ 18,330 ರೂ. ದೊರಕುತ್ತಿತ್ತು.

ಹಾಗೆಯೇ ಒಂದು ಷೇರಿನ ಬೆಲೆ 566 ರೂ. ಇದ್ದಾಗ ಯಾರಾದರೂ 15 ಷೇರು ಖರೀದಿಸಿದ್ದರೆ ಅವರು ಹೂಡಬೇಕಾದ ಮೊತ್ತ ಬರೀ 8,490 ರೂ. ಅಷ್ಟೆ. ಅದನ್ನು ಅವರು ಒಂದು ಷೇರಿಗೆ 1,222 ರೂ. ಇದ್ದಾಗ ಮಾರುತ್ತಿದ್ದರೆ ಅವರ 8,490 ರೂ. ಹೂಡಿಕೆಗೆ ಅವರಿಗೆ 18,330 ರೂ. ದೊರಕುತ್ತಿತ್ತು. ಅಂದರೆ ಕೆಲವೇ ತಿಂಗಳುಗಳಲ್ಲಿ ಹೂಡಿಕೆಯ ಎರಡರಷ್ಟು ಹಣ ವಾಪಸ್ಸು ಬರುತ್ತಿತ್ತು. ಆದರೆ ಇದೆಲ್ಲ ಬರೀ ಲೆಕ್ಕಾಚಾರದ ಸಲುವಾಗಿ ಮಾತ್ರ.
ಷೇರಿನ ಬೆಲೆ ಅತ್ಯಂತ ಕಡಿಮೆ ಇರುವಾಗ ಖರೀದಿಸಿ. ಗರಿಷ್ಠ ಮಟ್ಟ ಇರುವಾಗ, ಮಾರುವುದು ಎಂಬುದೆಲ್ಲ ಬರೀ ಕಾಗದದಲ್ಲಿ ಮಾತ್ರ. ಏಕೆಂದರೆ ಅಷ್ಟು ಕರಾರುವಾಕ್ಕಾಗಿ ಷೇರಿನ ಬೆಲೆಯ ಏರಿಳಿತಗಳನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ.
ದ್ವಿತೀಯ ಮಾರುಕಟ್ಟೆ : ಮೇಲೆ ಎಲ್ಐಸಿಯ ಉದಾಹರಣೆ ಕೊಡುತ್ತಾ ಒಂದು ಷೇರಿನ ಬೆಲೆ 566 ರೂ. ಇದ್ದಾಗ 15 ಷೇರು ಖರೀದಿಸಿದ್ದರೆ ಎಂದು ಪ್ರಸ್ತಾಪಿಸಿದೆವಲ್ಲವೇ? ಹಾಗೇ ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಷೇರುಗಳನ್ನು ಖರೀದಿಸುವುದಕ್ಕೆ ದ್ವಿತೀಯ ಷೇರು ಮಾರುಕಟ್ಟೆ (ಸೆಕೆಂಡರಿ ಮಾರ್ಕೆಟ್) ಯಲ್ಲಿ ಷೇರು ವ್ಯವಹಾರ ಅನ್ನುತ್ತೇವೆ. ಇಲ್ಲಿ ಎಷ್ಟು ಕನಿಷ್ಠ ಮೊತ್ತವಿದ್ದರೂ ಷೇರುಗಳನ್ನು ಖರೀದಿಸಬಹುದಾಗಿದೆ. ಉದಾಹರಣೆಗೆ ಐದು ನೂರು ರೂ., ಒಂದು ಸಾವಿರ ರೂ. ಹೀಗೇ….
ಷೇರು ವ್ಯವಹಾರಗಳ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲದರು ಹಾಗೂ ಅನುಭವವನ್ನು ಇನ್ನೂ ಗಳಿಸದವರು, ಸೆಕೆಂಡರಿ ಮಾರ್ಕೆಟ್‌ವ್ಯವಹಾರಕ್ಕೆ ಇಳಿಯುವ ಮೊದಲು ಅನುಭವಿಗಳ ಸಲಹೆಗಳನ್ನು ಪಡೆಯುವುದು ಒಳ್ಳೆಯದು ಅಥವಾ ಮೊದ ಮೊದಲು ಒಳ್ಳೆಯ ಕಂಪನಿಗಳ ಐಪಿಒಗಳಲ್ಲಿ ಹಣ ಹೂಡಿ ಅನುಭವ ಗಳಿಸಿದ ಬಳಿಕ ಬೇರೆ ಷೇರುಗಳನ್ನು ಖರೀದಿಸುವ ಬಗ್ಗೆ ಯೋಚಿಸಬಹುದು.
ಡಿಮ್ಯಾಟ್ ಖಾತೆ : ಐಪಿಒಗಳಲ್ಲಿ ಹಣ ಹೂಡಬೇಕಾದರೆ ಹಾಗೂ ದ್ವಿತೀಯ ಮಾರುಕಟ್ಟೆಯಲ್ಲಿ ಷೇರುಗಳನ್ನು ಖರೀದಿಸಬೇಕಾದರೆ ಡಿಮ್ಯಾಟ್ ಖಾತೆಯನ್ನು ಹೊಂದುವುದು ಅಗತ್ಯ. ವಾಣಿಜ್ಯ ಬ್ಯಾಂಕುಗಳಲ್ಲಿ, ಎಸ್‌ಬಿಐ ಸೆಕ್ಯೂರಿಟೀಸ್, ಐಸಿಐಸಿಐ ಸೆಕ್ಯುರಿಟೀಸ್, ಝೀರೋದಾ ಬ್ರೋಕಿಂಗ್ ಸಂಸ್ಥೆ, ಏಂಜೆಲ್ ಬ್ರೋಕಿಂಗ್ ಸಂಸ್ಥೆ ಮುಂತಾದ ಸಂಸ್ಥೆಗಳಲ್ಲಿ ಇಂತಹ ಡಿಮ್ಯಾಟ್ ಖಾತೆಗಳನ್ನು ತೆರೆಯಬಹುದು. ಇದಕ್ಕೆ ಬ್ಯಾಂಕು ಉಳಿತಾಯ ಖಾತೆ, ಆದಾಯ ತೆರಿಗೆ ಇಲಾಖೆಯ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಗಳು ಬೇಕಾಗುವ.
ಕೆಲವು ಸಂಸ್ಥೆಗಳಲ್ಲಿ ಯಾವುದೇ ವೆಚ್ಚವಿಲ್ಲದೆ ಡಿಮ್ಯಾಟ್ ಖಾತೆ ತೆರೆಯಬಹುದಾದರೂ ಇನ್ನು ಕೆಲವಡೆಗಳಲ್ಲಿ ವೆಚ್ಚ ತಗುಲುವುದು. ಐಪಿಒಗಳಲ್ಲಿ ಷೇರು ದೊರಕಿದರೆ (ಅಲಾಟ್ ಆದರೆ) ಅಥವಾ ದ್ವಿತೀಯ ಮಾರುಕಟ್ಟೆಯಲ್ಲಿ ಷೇರು ಖರೀದಿಸಿದರೆ, ಅಂತಹ ಷೇರುಗಳು ಈ ರೀತಿಯ ಡಿಮ್ಯಾಟ್ ಖಾತೆಗೆ ಜಮಾ ಆಗುವ. ಮುಂದೆ ಷೇರುಗಳನ್ನು ಮಾರುವಾಗ, ಈ ಡಿಮ್ಯಾಟ್ ಖಾತೆಯಿಂದ ಅಷ್ಟು ಷೇರುಗಳು ಹೊರಹೋಗುವ.
ವಹಿವಾಟಿನ ಖಾತೆ (ಟ್ರೇಡಿಂಗ್ ಅಕೌಂಟ್) : ಷೇರು ಖರೀದಿ ಹಾಗೂ ಮಾರಾಟ ನಡೆಸಬೇಕಾದರೆ ಹೂಡಿಕೆದಾರರು ಟ್ರೇಡಿಂಗ್ ಖಾತೆ ಹೊಂದುವುದು ಅಗತ್ಯ. ಮೇಲೆ ತಿಳಿಸಿದಂತಹ ಸಂಸ್ಥೆಗಳಲ್ಲಿ ಟ್ರೇಡಿಂಗ್ ಖಾತೆಗಳನ್ನು ಹೊಂದಬಹುದು. ವಹಿವಾಟು ನಡೆಸುವಾಗ ಅದಕ್ಕೆ ಶಿಲ್ಕು ಕೊಡಬೇಕಾಗುವುದು, ಸಂಸ್ಥೆಯಿಂದ ಸಂಸ್ಥೆಗೆ ಈ ಶಿಲ್ಕುಗಳ ದರಗಳಲ್ಲಿ ವ್ಯತ್ಯಾಸವಿದೆ.
ಲಾಭಾಂಶ (ಡಿವಿಡೆಂಡ್) : ಕಂಪನಿಗಳು ಉತ್ತಮ ವಹಿವಾಟನ್ನು ನಡೆಸಿ, ಒಳ್ಳೆಯ ಲಾಭವನ್ನು ಗಳಿಸಿದಾಗ ತನ್ನ ಷೇರುಗಳಲ್ಲಿ ಹಣ ತೊಡಗಿಸಿದವರಿಗೆ ಅಂದರೆ ಷೇರುಧಾರರಿಗೆ (ಷೇರು ಹೋಲ್ಡರ್ ಗಳಿಗೆ) ಲಾಭಾಂಶವನ್ನು ಅವರು ಹೊಂದಿದ ಷೇರುಗಳ ಸಂಖ್ಯೆಗೆ ಅನುಗುಣವಾಗಿ ನೀಡು. ಕಂಪನಿಗಳು ಲಾಭಾಂಶವನ್ನೇ ನೀಡದೇ ಇರಬಹುದು ಅಥವಾ ಒಮ್ಮೆ ಅಥವಾ ಒಂದು ಬಾರಿಗಿಂತ ಹೆಚ್ಚು ಬಾರಿ ಲಾಭಾಂಶವನ್ನು ನೀಡುವ ಸಾಧ್ಯತೆಗಳೂ ಇವೆ.

ಹಕ್ಕಿನ ಷೇರು (ರೈಟ್ಸ್ ಷೇರು) : ಕೆಲವೊಮ್ಮೆ ಕಂಪನಿಗಳು ತಮ್ಮ ವ್ಯವಹಾರದ ವಿಸ್ತರಣೆಗೆ ಅಥವಾ ಹೊಸ ಘಟಕಗಳನ್ನು ಸ್ಥಾಪಿಸುವುದಕ್ಕೆ ಹಣಕಾಸಿನ ಅಗತ್ಯ ಬೀಳುವಾಗ ತಮ್ಮ ಈಗಿನ ಷೇರುಧಾರರನ್ನೇ ಅವಲಂಬಿಸುವುದು. ಅದಕ್ಕಾಗಿ ಅವರಿಗೆ ಅವರವರ ಹಕ್ಕಿನ ಷೇರುಗಳನ್ನು ನೀಡುವ ಯೋಜನೆ ಹಾಕಿಕೊಳ್ಳುವುದು. ಈ ಹಕ್ಕಿನ ಷೇರಿನ ಬೆಲೆಯು ಮಾರುಕಟ್ಟೆಯಲ್ಲಿರುವ ಬೆಲೆಗಿಂತ ತುಸು ಕಡಿಮೆ ಇರುವ ಕಾರಣ ಷೇರುಧಾರರಿಗೆ ಇದಕ್ಕೆ ಅರ್ಜಿ ಸಲ್ಲಿಸುವುದು ಆಕರ್ಷಣೀಯ ಎನಿಸುವುದು. 1:1 ಎಂದು ಹಕ್ಕಿನ ಷೇರಿನ ಅನುಪಾತವನ್ನು ಘೋಷಿಸಿದರೆ ಈಗ ಒಂದು ಷೇರು ಇರುವವರು ಮತ್ತೆ ಒಂದು ಷೇರು ಪಡೆಯಲು ಹಕ್ಕುದಾರರಾಗಿರುತ್ತಾರೆ ಎಂದು ಅರ್ಥ.
ಈಗಾಗಲೇ ನೂರು ಷೇರುಗಳಿದ್ದರೆ, ರೈಟ್ಸ್ ಇಶ್ಯೂನಲ್ಲಿ ನೂರು ಷೇರುಗಳಿಗೆ ಅರ್ಜಿ ಸಲ್ಲಿಬಹುದು. ಹಾಗೆಯೇ 1:2 ಎಂದರೆ ಎರಡು ಷೇರಿಗೆ ಒಂದು ಷೇರಿನ ಹಕ್ಕು ಎಂದರ್ಥ. ಹಕ್ಕಿನ ಅರ್ಹತೆಗಿಂತಲೂ ಸ್ವಲ್ಪ ಹೆಚ್ಚಿಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು. ಕಂಪನಿಯುವ ಹೆಚ್ಚಿನ ಷೇರುಗಳನ್ನು ನೀಡುವ ಸಾಧ್ಯತೆಯೂ ಇದೆ. ಹಾಗೆಯೇ ಹಕ್ಕಿನ ಷೇರನ್ನು ಬೇರೆಯವರಿಗೆ ಬೇಕಾದರೆ ಬಿಟ್ಟುಕೊಡಬಹುದು (ರಿನೌನ್ಸ್ ಮಾಡುವುದು) ಅಥವಾ ಹಕ್ಕಿನ ಷೇರು ಆಕರ್ಷಣೀಯ ಎನಿಸದಿದ್ದರೆ ಅರ್ಜಿ ಸಲ್ಲಿಸದೇ ಕೂಡ ಇರಬಹುದು.
ಬೋನಸ್ ಷೇರು : ಕಂಪನಿಗಳು ಉತ್ತಮ ಲಾಭಗಳನ್ನು ಪಡೆಯುತ್ತಾ ಬಂದ ಹಾಗೆ ತಮ್ಮ ಮೀಸಲಿಗೆ (ರಿಸರ್ವ್) ಹೆಚ್ಚಿನ ಮೊತ್ತವನ್ನು ಸೇರಿಸುತ್ತಾ ಬರುತ್ತವೆ. ಮೀಸಲಿನ ಪ್ರಮಾಣ ಹೆಚ್ಚುತ್ತಾ ಹೋದಂತೆ ಒಮ್ಮೊಮ್ಮೆ ಷೇರುಧಾರರಿಗೆ ಉಚಿತವಾಗಿ ಷೇರುಗಳನ್ನು ನೀಡಿ ಅವರನ್ನು ಖುಷಿಪಡಿಸುತ್ತಿವೆ. ಈ ರೀತಿ ಉಚಿತವಾಗಿ ನೀಡುವ ಷೇರುಗಳನ್ನು ಬೋನಸ್ ಷೇರು ಅನ್ನುತ್ತಾರೆ. ಈಗಿರುವ ಷೇರುಗಳ ಸಂಖ್ಯೆಗೆ ಅನುಗುಣವಾಗಿ ಬೋನಸ್ ಷೇರುಗಳನ್ನು ನೀಡಲಾಗುವುದು. ಉದಾಹರಣೆಗೆ 1:1 ಅಥವಾ 1:2 ಅಥವಾ 2:3 ಹೀಗೆ ಮುಂದೆ ಡಿವಿಡೆಂಟ್ ಗಳನ್ನು ನೀಡುವಾಗ ಈ ಬೋನಸ್ ಷೇರುಗಳಿಗೂ ಡಿವಿಡೆಂಡ್ ಅನ್ವಯವಾಗುವುದು.
ವ್ಯವಹಾರದ ತೆರಿಗೆ ಮತ್ತು ಬ್ರೋಕರೇಜ್ : ಷೇರುಗಳನ್ನು ಮಾರಾಟ ಮಾಡುವಾಗ ಅಥವಾ ದ್ವಿತೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡುವಾಗ, ಬ್ರೋಕಿಂಗ್ ಸಂಸ್ಥೆಗಳ ಮೂಲಕ ಮಾಡುವ ಕಾರಣ ಅವರ ಶುಲ್ಕವಾದ ಬ್ರೋಕರೇಜ್ ಗಳನ್ನು ನೀಡಬೇಕಾಗುವುದು. ಈ ಶುಲ್ಕ ಸಂಸ್ಥೆಯಿಂದ ಸಂಸ್ಥೆಗೆ ವ್ಯಾತ್ಯಾಸವಾಗುವುದು. ಹಾಗೆಯೇ ಪ್ರತಿ ಷೇರು ವಹಿವಾಟಿಗೂ ಸರ್ಕಾರಕ್ಕೆ ಸಲ್ಲುವ ವ್ಯವಹಾರದ ತೆರಿಗೆ (ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್) ಇರುತ್ತದೆ.
ಆದಾಯ ತೆರಿಗೆ : ಷೇರುಗಳನ್ನು ಮಾರಿ ಲಾಭ ಬಂದರೆ ಆ ಲಾಭದ ಅಂಶಕ್ಕೆ ಆದಾಯ ತೆರಿಗೆ ಅನ್ವಯವಾಗುವುದು. ಐಪಿಒಗಳು ದೊರಕಿ ಒಂದು ವರ್ಷದ ಒಳಗೆ ಮಾರಿದರೆ ಅಥವಾ ಯಾವುದಾದರೂ ಷೇರುಗಳನ್ನು ಖರೀದಿಸಿ ಅವುಗಳನ್ನು ಒಂದು ವರ್ಷದ ಒಳಗೆ ಮಾರಾಟ ಮಾಡಿದ ಲಾಭದ ಮೇಲೆ ಶೇ.20 ರಷ್ಟು ಆದಾಯ ತೆರಿಗೆ (ಅಲ್ಪಾವಧಿ ತೆರಿಗೆ) ನೀಡಬೇಕಾಗುವುದು. ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರದ ಮುಂಗಡ ಪತ್ರ (ಯೂನಿಯನ್ ಬಜೆಟ್)ದ ಬಳಿಕ ಈ ತೆರಿಗೆಯು ಈ ಹಿಂದಿನ ಶೇ.15-20ಕ್ಕೆ ಏರಿದೆ. ಹಾಗೆಯೇ ಷೇರುಗಳನ್ನು ಖರೀದಿಸಿದ ಒಂದು ವರ್ಷದ ಬಳಿಕ ಮಾರಿದರೆ ಲಾಭದ ಮೇಲೆ 12.5% ಆದಾಯ ತೆರಿಗೆ (ದೀರ್ಘಾವಧಿ ತೆರಿಗೆ) ಆಗುವುದು. ಈ ಹಿಂದೆ ಅದು ಶೇ.10ರಷ್ಟಿತ್ತು. ಹೆಚ್ಚಿನ ವಿವರಗಳನ್ನು ತೆರಿಗೆ ಸಲಹೆಗಾರರಿಂದ ಪಡೆದುಕೊಳ್ಳಬಹುದು..
ದಾಲ್ ಸ್ಟ್ರೀಟ್, ವಾಲ್ ಸ್ಟ್ರೀಟ್ : ಷೇರು ಮಾರುಕಟ್ಟೆಯಲ್ಲಿ ಈ ಎರಡು ಶಬ್ದಗಳು ಯಾವಾಗಲೂ ಕೇಳಿ ಬರುತ್ತಿರುತ್ತವೆ. ಮುಂಬೈ ಷೇರು ವಿನಿಮಯ ಕೇಂದ್ರವಿರುವ ಜೀಜೀ ಭಾಯ್ ಟವರ್ ಇರುವುದು ದಾಲ್ ಸ್ಟ್ರೀಟ್ ನಲ್ಲಿ ಹಾಗೂ ಅಮೆರಿಕಾದ ಪ್ರಮುಖ ಷೇರು ವಿನಿಮಯ ಕೇಂದ್ರವಾದ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ಸಂಸ್ಥೆ ಇರುವುದು ವಾಲ್ ಸ್ಟ್ರೀಟ್ ನಲ್ಲಿ.
ಕಂಪನಿಗಳ ಬಗ್ಗೆ ಅರಿತುಕೊಂಡು ಐಪಿಒಗೆ ಅರ್ಜಿ ಸಲ್ಲಿಸಿ ಷೇರು ಅಲಾಟ್ ಆದ ಬಳಿಕ ಅಥವಾ ಉತ್ತಮ ಷೇರುಗಳನ್ನು ಖರೀದಿಸಿದ ಅನಂತರ, ನಿರಂತರವಾಗಿ ಅಂತಹ ಕಂಪನಿಯ ಆಗುಹೋಗುಗಳ ಬಗ್ಗೆ ಗಮನಿಸುತ್ತಿರಬೇಕು. ಮುಂದೆ ಅಂತಹ ಷೇರುಗಳನ್ನು ಮಾರುವ ನಿರ್ಧಾರ ತೆಗೆದುಕೊಳ್ಳಲು ಅಥವಾ ಇನ್ನಷ್ಟು ಷೇರುಗಳನ್ನು ಖರೀದಿಸಲು ಇವು ಸಹಕಾರಿ. ಷೇರು ಹೂಡಿಕೆಯಿಂದ ಲಾಭ ಬರಬಹುದಾದರೂ ಕೆಲವೊಮ್ಮೆ ನಷ್ಟ ಸಂಭವಿಸಬಹುದು. ಹಾಗಾಗಿ ಉಳಿತಾಯದ ಎಲ್ಲ ಮೊತ್ತವನ್ನೂ ಷೇರುಗಳಲ್ಲಿ ಹೂಡುವ ಬದಲು ಸ್ವಲ್ಪ ಅಂಶವನ್ನು ಮಾತ್ರ ಹೂಡುವುದು ಜಾಣತನ. ಉಳಿತಾಯದ ಹಣವನ್ನು ಬ್ಯಾಂಕು ಠೇವಣಿ, ಮ್ಯೂಚುವಲ್ ಫಂಡ್ ಮೊದಲಾದ ಮಾರ್ಗಗಳಲ್ಲಿ ಹೂಡುವಂತೆ ಷೇರು ಹೂಡಿಕೆ ಕೂಡ ಆ ಪಟ್ಟಿಯಲ್ಲಿ ಒಂದು ಭಾಗವಾಗಿರಲಿ.
ಐಪಿಒಗಳಲ್ಲಿ ಹಣ ಹೂಡು ಮೊದಲು, ದ್ವಿತೀಯ ಷೇರು ಮಾರುಕಟ್ಟೆಯಲ್ಲಿ ಷೇರು ಖರೀದಿಸುವ ಮೊದಲು ತಜ್ಞರ, ಅನುಭವಿಗಳ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಅಪೇಕ್ಷಣೀಯ. ಯಾವ ಯಾವುದೋ ದೂರವಾಣಿ ಸಂಖ್ಯೆಗಳಿಂದ ಮೋಸದ ಸಂದೇಶಗಳು ಬರುವ ಸಾಧ್ಯತೆಗಳಿವೆ. ಯಾವುದೋ ನಿರ್ದಿಷ್ಟ ಷೇರುಗಳನ್ನು ಖರೀದಿಸುವುದರಿಂದ ಅವುಗಳ ಬೆಲೆ ಕೆಲವೇ ಸಮಯದಲ್ಲಿ ಹೆಚ್ಚಾಗುವುದು, ದೊಡ್ಡ ಮೊತ್ತವನ್ನು ನೀಡಿದರೆ ಉತ್ತಮ ಷೇರುಗಳನ್ನು ಖರೀದಿಸುವ ಬಗ್ಗೆ ಶಿಫಾರಸು ಕೊಡಲಾಗುವುದು ಅಂತೆಲ್ಲ ಕಿರು ಸಂದೇಶಗಳು (ಎಸ್.ಎಂ.ಎಸ್) ಅಥವಾ ವಾಟ್ಸ್ ಆ್ಯಪ್ ಸಂದೇಶಗಳು ಸೈಬರ್ ವಂಚಕರು ಕಳುಹಿಸುವ ಸಂದೇಶಗಳಾಗಿರುತ್ತವೆ. ಅಂತಹವರು ಹೇಳುವ ಯಾವುದೋ ಷೇರನ್ನು ಖರೀದಿಸುವುದು ಅಥವಾ ಲಿಂಕ್ ನ್ನು ಒತ್ತುವುದು ಮುಂತಾದವುಗಳನ್ನು ಮಾಡುವುದರಿಂದ ಮೋಸ ಹೋಗುವುದು ಖಚಿತ, ಹುಷಾರಾಗಿರಬೇಕು.
– ಬಿ.ಎನ್. ಭರತ್ ಬಾಳಿಕೆ





