ರಾಧಿಕಾ : ನಮ್ಮ ಬೆಂಗಳೂರಿನಲ್ಲಿ ಆಗಾಗ ಕರೆಂಟ್‌ ಹೋಗ್ತಾನೇ ಇರುತ್ತಲೇ, ಇದು ಒಳ್ಳೆಯದಕ್ಕೆ ಅಂತೀಯಾ?

ವೇದಿಕಾ : ಹಗಲು ಹೊತ್ತು ಏನೋ ಹೇಗೋ…. ರಾತ್ರಿ ಹೊತ್ತು ಆಗಾಗ ಕರೆಂಟು ಹೋದಾಗೆಲ್ಲ, ಮನೆ ಮಂದಿಯೆಲ್ಲ ಒಟ್ಟಾಗಿ ಒಂದೇ ಕಡೆ ಕುಳಿತು, ಒಂದಿಷ್ಟು ಕಷ್ಟಸುಖ ಮಾತನಾಡಿಕೊಳ್ತಾರೆ ಅನ್ನೋಂದತೂ ನಿಜ! ಇಲ್ಲದಿದ್ದರೆ ಅವರವರ ಮೊಬೈಲು, ಲ್ಯಾಪ್‌ ಟಾಪ್‌, FB‌, ಇನ್‌ ಸ್ಟಾಗ್ರಾಂಗಳಲ್ಲಿ ತಾವೆಲ್ಲ ಒಂದೇ ಮನೆಯವರು ಅನ್ನೋದು ಅವರಿಗೆಲ್ಲಿ ನೆನಪಿರುತ್ತದೆ?

ಮೇದಿನಿ : ನಿನ್ನ ಮಾತು ನಿಜ, `ಸಾಮಾಜಿಕ ಜಾಲತಾಣ’ಗಳಿಂದ ಸಾಮಾಜಿಕ ಜೀವನವನ್ನೇ ಕಳೆದುಕೊಂಡ ಈ ಜನರನ್ನು ಒಟ್ಟುಗೂಡಿಸಲು, ಒಂದು ಸಂಸ್ಥೆ ತನ್ನ ಟ್ಯಾಗ್‌ ಲೈನಿಗೆ ಈಗ, `ಕನೆಕ್ಟಿಂಗ್‌ ಪೀಪಲ್ ಬೈ ಡಿಸ್‌ ಕನೆಕ್ಟಿಂಗ್‌ ದಿ ಪವರ್‌’ ಅಂತ ಹೊಸದಾಗಿ ಸೇರಿಸಿಕೊಳ್ಳಲಿದೆಯಂತೆ!

ಶೆಟ್ಟರು ತಮ್ಮ ಹೈಸ್ಕೂಲಿನ ಮಗ ರಜಾ ದಿನಗಳಲ್ಲಿ ಅಂಗಡಿ ನೋಡಿಕೊಳ್ಳಲಿ ಎಂದು ಕೂರಿಸಿ, ಆಗಾಗ ಹೊರಗಿನ ಕೆಲಸಕ್ಕೆ ಹೋಗತೊಡಗಿದರು.

ಅಪ್ಪನ ಬಳಿ ಸೈ ಎನಿಸಿಕೊಳ್ಳಲೇಬೇಕು ಎಂದು ಮರಿಶೆಟ್ಟರಿಗೆ ಎಲ್ಲಿಲ್ಲದ ಹುಮ್ಮಸ್ಸು ಮೂಡಿತು. ಅಂದು ವ್ಯಾಪಾರ ಮುಗಿಸಿದ ಮಗರಾಯ ಅಪ್ಪನಿಗೆ ವರದಿ ಒಪ್ಪಿಸುತ್ತಿದ್ದ.

“ನೋಡಪ್ಪ, ಒಬ್ಬ ಗಿರಾಕಿ ಲೂಸ್‌ ಇಂಗು ಬೇಕು ಅಂತ 100 ಗ್ರಾಂ. ಕೇಳಿದ. ನಾನು ಕೈಯಲ್ಲೇ ಅಳೆದು ಕೊಟ್ಟೆ….”

“ತಕ್ಷಣ ಕೈ ತೊಳೆದುಕೊಂಡೆ ಏನು?” ಶೆಟ್ಟರಿಗೆ ಶ್ಯಾನೆ ಅನುಮಾನ.

“ಇಲ್ಲ….ಇಲ್ಲ….. ನಾನು ನಿನ್ನ ಮಗನಲ್ಲವೇ? ಅಮ್ಮ ಮಧ್ಯಾಹ್ನದ ಅಡುಗೆ ಮಾಡುತ್ತಿದ್ದರು. ಅಲ್ಲಿಗೆ ನುಗ್ಗಿದವನೇ, ಕುದಿಯುತ್ತಿದ್ದ ಸಾರಿನಲ್ಲಿ ನನ್ನ ಕೈ ಅದ್ದಿ, ಇವತ್ತು ಸಾರಿಗೆ ಬೇರೆ ಇಂಗು ಹಾಕಬೇಡಮ್ಮ ಅಂತ ಅಮ್ಮನಿಗೆ ಎಚ್ಚರಿಸಿದೆ. ನೋಡಿದ್ಯಾ…. ಒಂದು ದಿನದ ಅಡುಗೆ ಇಂಗಿನ ಖರ್ಚು ಉಳಿಸಿಬಿಟ್ಟೆ….?” ಎಂದ ಮಗ ತಂದೆಯ ಶಭಾಷ್‌ ಗಿರಿ ಎದುರುನೋಡುತ್ತಿದ್ದ.

“ಅಯ್ಯೋ ಪೆದ್ದು ಮುಂಡೇದೇ…. ಒಂದೇ ದಿನ ಯಾಕೋ ನಿನ್ನ ಪೂರ್ತಿ ಕೈ ಅದ್ದಿದೆ? ಒಂದೊಂದು ದಿನ ಒಂದೊಂದೇ ಬೆರಳು ಅದ್ದಿದ್ದರೆ 5 ದಿನಗಳ ಅಡುಗೆ ಇಂಗು ಉಳಿಸಬಹುದಿತ್ತು ಗೊತ್ತಾ?” ಶೆಟ್ಟರು ಗುಡುಗಿದಾಗ ಮಗರಾಯ ಬೇಸ್ತು ಬಿದ್ದ!

ಮೂವರು ಜಿಪುಣಾಗ್ರೇಸ ಗೆಳೆಯರ ಮಧ್ಯೆ ವಾಗ್ವಾದ ನಡೆದಿತ್ತು.

ಮಹೇಶ : ನೀವೆಲ್ಲ ಯಾ ಮಹಾ ಸಿರಿವಂತಿಕೆ ಕಂಡಿದ್ದೀರಿ….. ನಮ್ಮ ತಾತಾ ಒಂದು ಭವ್ಯ ಬಂಗಲೆ ಕಟ್ಟಿಸಿದ್ದರು…. ಅದರ ಮೇಲಿನಿಂದ ಧುಮುಕಿದ ಒಬ್ಬ ವ್ಯಕ್ತಿ ಕೆಳಗೆ ನೆಲ ತಲುಪಲು 1 ವರ್ಷ ಬೇಕಾಯ್ತಂತೆ ಗೊತ್ತಾ? ಆ ಬಂಗಲೆ ಎಷ್ಟು ಎತ್ತರಕ್ಕಿರಬೇಕು, ಅದರ ಭವ್ಯತೆ ಏನು ಅಂತ ನೀವೇ ಊಹಿಸಿಕೊಳ್ಳಿ!

ಸುರೇಶ : ನಿಮ್ಮ ತಾತಂದು ಏನು ಮಹಾ…. ನಮ್ಮ ಮುತ್ತಾತ ಕಟ್ಟಿಸಿದ ಭವ್ಯ ಕಟ್ಟಡ ಎಷ್ಟು ಎತ್ತರಕ್ಕೆ ಇತ್ತು ಅಂತಂದ್ರೆ ಅದರ ತಾರಸಿಯಿಂದ ಕೆಳಗೆ ಧುಮುಕಿದ ವ್ಯಕ್ತಿಯೊಬ್ಬ ನೆಲ ಮುಟ್ಟಲು 10 ವರ್ಷ ಬೇಕಾಯ್ತಂತೆ ಗೊತ್ತಾ….?

ಇವರಿಬ್ಬರಿಗೆ ಮುಖಭಂಗ ಮಾಡಲೇಬೇಕು ಎಂದು ಗಿರೀಶ ನಿಶ್ಚಯಿಸಿದ.

ಗಿರೀಶ : ನಿಮ್ಮಿಬ್ಬರದೂ ಬಡಾಯಿ ಕೊಚ್ಚಿಕೊಂಡದ್ದು ಆಯ್ತಾ….? ಈಗ ನಮ್ಮ ಕೋಲುತಾತನ ಹಿರಿಮೆ ಬಗ್ಗೆ ಕೇಳಿ… ಅವರು ಕಟ್ಟಿಸಿದ ಭವ್ಯಾತಿಭವ್ಯ ಕಟ್ಟಡ ಎಷ್ಟು ಎತ್ತರ ಇತ್ತು ಅಂತಂದ್ರೆ…. ಅಲ್ಲಿಂದ ಹಾರಿದ ಒಂದು ಚಿಂಪಾಂಜಿ ನೆಲ ಮುಟ್ಟುವ ಹೊತ್ತಿಗೆ ಮನ್ಮಥನಂಥ ಮಾನವನಾಗಿದ್ದನಂತೆ!

ನಮ್ಮ ದ.ಭಾರತದಲ್ಲಿ ಜಿಪುಣತನ, ಜಾಣತನಗಳಿಗೆ ಶೆಟ್ಟರು ಫೇಮಸ್‌ ಆಗಿರುವಂತೆ ಉ.ಭಾರತದಲ್ಲಿ ಕಂಜೂಸಿ ಮಾರ್ವಾಡಿಗಳು ಅಷ್ಟೇ ಫೇಮಸ್‌.

ಒಮ್ಮೆ ಮಾರ್ವಾಡಿಯೊಬ್ಬ 10 ಲಕ್ಷಕ್ಕೆ ನೀರು ತುಂಬಿದ್ದ ಭವ್ಯವಾದ ಒಂದು ಬಾವಿಯನ್ನು ನಮ್ಮೂರ ಶೆಟ್ಟರಿಗೆ ಮಾರಿದ್ದ. ಎಲ್ಲಾ ಸರಿಹೋಯಿತು. ಅಷ್ಟಕ್ಕೆ ಮಾರ್ವಾಡಿ ಸುಮ್ಮನಿರ್ತಾನಾ?

ಶೆಟ್ಟರು ಮಾರನೇ ಬೆಳಗ್ಗೆ ತಮ್ಮ ಹೊಸ ಬಾವಿಯಿಂದ ನೀರು ಸೇದಿಕೊಳ್ಳಲು ಬಂದಾಗ, ಮಾರ್ವಾಡಿ ಅವರನ್ನು ತಡೆಯುತ್ತಾ, “ನೋಡ್ರಿ, ನಾನು ನಿಮಗೆ ಕೇವಲ ಬಾವಿ ಮಾತ್ರ ಮಾರಿದ್ದು, ಅದರ ಕಾಗದಪತ್ರ ಇಲ್ಲೇ ಇದೆ, ನೋಡಿಕೊಳ್ಳಿ. ಅದರಲ್ಲಿನ ನೀರನ್ನು ಖಂಡಿತಾ ನಿಮಗೆ ಮಾರಿಲ್ಲ! ಹೀಗಾಗಿ ಈ ಬಾವಿ ನಿಮ್ಮದಾದರೂ ಇದರ ನೀರು ಮಾತ್ರ ನಂದೇ! ನಿಮಗೆ ಯಾವಾಗ ಬೇಕಾದರೂ ನೀರು ಸೇದಿಕೊಳ್ಳಿ, ಒಂದು ಬಿಂದಿಗೆಗೆ 10/ ರೂ. ಕೊಡಲೇಬೇಕು!” ಎಂದು ಗುಡುಗಿದ.

ಕಕ್ಕಾಬಿಕ್ಕಿಯಾದ ಶೆಟ್ಟರು ಕ್ಷಣಾರ್ಧದಲ್ಲಿ ಸುಧಾರಿಸಿಕೊಂಡರು. “ನಾನೂ ಅದೇ ಅಂತೀನಿ…. ಅದನ್ನು ಹೇಳಲೆಂದೇ ಬಂದೆ. ನೀವು ನನಗೆ ಬಾವಿ ಮಾರಿದ್ದು ಸರಿ, ಆದರೆ ನೀರಲ್ಲ. ಆದರೆ ಇಲ್ಲಿ ಒಂದು ಕಾನೂನು ತೊಡಕು ಇದೆ ನೋಡಿ, ಈಗ ಬಾವಿ ನಂದು, ನೀರು ನಿಮ್ಮದು. ಹೀಗಾಗಿ ನಿಮ್ಮ ನೀರನ್ನು ನನ್ನ ಬಾವಿಯಲ್ಲಿ ಇಟ್ಟುಕೊಳ್ಳಲು ಪ್ರತಿದಿನ ನೀವು ನನಗೆ 5 ಸಾವಿರ ಬಾಡಿಗೆ ಕೊಡಲೇಬೇಕು. ಬೇಡ ಅನ್ನಿಸಿದ್ರೆ ಈಗಲೇ ಒಂದು ನಿಮಿಷದಲ್ಲಿ ನಿಮ್ಮ ನೀರನ್ನು ಪೂರ್ತಿ ತೆಗೆದುಕೊಂಡು ಹೋಗಿಬಿಡಿ. ನನ್ನ ಬಾವಿಯಲ್ಲೇ ಇರಬೇಕು ಅಂದ್ರೆ ಮಾತ್ರ ನೀವು ಬಾಡಿಗೆ ಕೊಡಲೇಬೇಕು. ನನ್ನ ಬಳಿ ಲೀಗಲ್ ಡಾಕ್ಯುಮೆಂಟ್ಸ್ ಇದೆ, ಬೇಕಾದ್ರೆ ನಿಮ್ಮ ಲಾಯರ್‌ ನ್ನು ವಿಚಾರಿಸಿ…..” ಎಂದಾಗ ಮಾರ್ವಾಡಿ ಸುಸ್ತು.

ಅದು 2020ರ ಕೊರೋನಾ ಕಾಲ. ಆರೋಗ್ಯದ ಕುರಿತು ಅತಿ ಕಾಳಜಿ ವಹಿಸುತ್ತಿದ್ದ ರತ್ನಾ, ಲಾಕ್‌ ಡೌನ್‌ ಮಧ್ಯೆ ಡಾಕ್ಟರಿಗೆ ಫೋನ್‌ ಮಾಡಿಯೇಬಿಟ್ಟಳು, “ನಿನ್ನೆಯಿಂದ ಬಸ್ಸುಗಳು ಓಡಾಡುತ್ತಿವೆ ಎಂದು ನಮ್ಮ ಯಜಮಾನರು ಆಫೀಸಿಗೆ ಹೋಗಿ ಬರುತ್ತಿದ್ದಾರೆ. ಆಫೀಸಿನಿಂದ ಬಂದ ತಕ್ಷಣ ಅವರ ಕೈಕಾಲು ತೊಳೆಯಲು ಸ್ಯಾನಿಟೈಸರ್‌ ನ್ನು ಮಗ್ಗಲ್ಲಿ ಸುರಿಯುತ್ತೇನೆ. ಬಿಸಿ ಬಿಸಿ ನೀರಲ್ಲಿ ಅವರ ಸ್ನಾನ ಆದ ನಂತರ, ಖಂಡುಗ ಡೆಟಾಲ್ ‌ಬೆರೆಸಿದ ನೀರಲ್ಲಿ ಅವರ ಬಟ್ಟೆ ಜಾಲಿಸಿ, ಹಿಂಡಿ ಹಾಕ್ತೀನಿ. ನಂತರ ಅವರು ಬಾಯಿ ಮುಕ್ಕಳಿಸಲು ಸೈಂಧವ ಲವಣ, ನಿಂಬೆ, ಕಪ್ಪು ಮೆಣಸು ಹಾಕಿದ ಬಿಸಿ ಬಿಸಿ ನೀರು ಕೊಡ್ತೀನಿ. ಚಳಿ ಅನ್ನಬಾರದು ಅಂತ ಕಾದು ಕೆಂಪಾದ ಐರನ್‌ ಬಾಕ್ಸ್ ನಿಂದ ಅವರು ಬಡ್ಕೊಂಡ್ರೂ ಬಿಡದೆ ಅವರ ಇಡೀ ಮೈ ಉಜ್ಜಿ ಬಿಡ್ತೀನಿ…. ಸದ್ಯಕ್ಕೆ ಇಷ್ಟು ಸಾಕಾ? ಇನ್ನೂ ಏನಾದ್ರೂ ಮಾಡಬೇಕಾ?”

ಡಾಕ್ಟರ್‌ : ಒಂದೇ ಒಂದು ಬಾಕಿ ಇದೆ. ಹಂಡೆ ಒಲೆಯ ನೀರಿಗೆ ಅವರನ್ನು ನೇರವಾಗಿ ಅದ್ದುವ ಮೊದಲು, ಅದಕ್ಕೆ ಖಂಡುಗ ಫಿನಾಯಿಲ್ ಸುರಿಯಲು ಮರೆಯಬೇಡಿ!

ಲಾಕ್‌ ಡೌನ್‌ ಇದ್ದಾಗಲೂ ಭಂಡ ಗುಂಡ ಕಾರು ತೆಗೆದುಕೊಂಡು ಊರೂರು ಅಂಡಲೆಯುತ್ತಿದ್ದ. ಆಗ ಅವನು ಮುಂದಿನ ದಾರಿ ಗೊತ್ತಾಗಲೆಂದು ಗೂಗಲ್ ಮ್ಯಾಪ್‌ ಆನ್‌ ಮಾಡುತ್ತಾನೆ, ಅದರಿಂದ ಈ ತರಹ ಸೂಚನೆಗಳು ಬರತೊಡಗಿದವು :

ಸರಿಯಾದ ರೂಲ್ ‌ದೊಣ್ಣೆ ಸೇವೆ ಬೇಕೇ? ಹಾಗಿದ್ದರೆ ಬಲಗಡೆ ತಿರುಗಿ. 100 ಸಲ ಬಸ್ಕಿ ಹೊಡೆದು ಬೆವರಿಳಿಸಬೇಕೇ? ಹಾಗಿದ್ದರೆ ಎಡಗಡೆಗೆ ತಿರುಗಿ. ಎರಡೂ ದಿಕ್ಕಿನಲ್ಲಿ ಪೊಲೀಸರಿಂದ ಓತಪ್ರೋತವಾಗಿ ಹಿತನುಡಿಗಳ ಮುತ್ತು ಉದುರುತ್ತದೆ. ಎರಡೂ ಕಡೆ ತಿರುಗುವುದು ಬೇಡ ಅಂದ್ರೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಯೂ ಟರ್ನ್‌ ತೆಗೆದುಕೊಂಡು ಮನೆಗೆ ಹೋಗಿ!

ಕೊರೋನಾ ಕಾಲದ ಲಾಕ್‌ ಡೌನ್‌ ಪರಿಣಾಮ! ಗುಂಡನಿಗೆ ಮನೆಯಲ್ಲೇ 2 ತಿಂಗಳಿನಿಂದ ಇದ್ದೂ ಇದ್ದೂ ಸಾಕಾಯ್ತು. ಟಿವಿ ನೋಡಿ ನೋಡಿ ಹುಚ್ಚು ಹಿಡಿಯುವುದೊಂದು ಬಾಕಿ. ಹೀಗಾಗಿ ಮನೆ ಮುಂದಿನ ಜಗುಲಿಯಲ್ಲಿ ಬಂದು ಕುಳಿತ.

ಎದುರಿಗೆ ತರಕಾರಿ ಗಾಡಿಯವನು ತಲೆಗೊಂದು ಟವೆಲ್ ಸುತ್ತಿಕೊಂಡು, ಮಾಸ್ಕ್ ಹಾಕಿಕೊಂಡು, ಲುಂಗಿ ಎತ್ತಿ ಕಟ್ಟಿ ತನ್ನ ಮಾಮೂಲಿ ಸ್ಟೈಲ್ ‌ನಲ್ಲಿ ಕಿವಿಯ ಬಳಿ ಎಡಗೈ ಹಿಡಿದು ಜೋರಾಗಿ `ತರಕಾರಿ…’ ಎಂದು ತನ್ನ ಗಾಡಿ ತಳ್ಳಿಕೊಂಡು ಬರುತ್ತಿದ್ದ.

ಅವನನ್ನು ನೋಡಿದ್ದೇ ಗುಂಡನಿಗೆ ಥಟ್ಟನೇ ಒಂದು ಐಡಿಯಾ ಹೊಳೆಯಿತು. “ಏನಪ್ಪ, ನೀನು ಈ ಬಿಸಿಲಲ್ಲಿ ಎಷ್ಟು ಅಂತ ಹೊರಗೆ ಸುತ್ತಾಡುತ್ತೀಯಾ? ನಾನು 2 ರೌಂಡ್‌ ಸುತ್ತಾಡಿ ಬರ್ತೀನಿ. ತರಕಾರಿ ಮಾರಿದ ದುಡ್ಡನ್ನು ಪ್ರಾಮಾಣಿಕವಾಗಿ ನಿನಗೆ ತಂದುಕೊಡ್ತೀನಿ. ನೀನು ಸ್ವಲ್ಪ ವಿಶ್ರಾಂತಿ ಪಡೆ,” ಎಂದ ಗುಂಡ.

ಆಗ ತರಕಾರಿಯನು ಮಾಸ್ಕ್ ಪೇಟ ಸರಿಸಿ ತನ್ನ ಮುಖ ಸರಿಯಾಗಿ ತೋರಿಸುತ್ತಾ, “ಏ ಗುಂಡಾ…. ನಾನು ಕಿಟ್ಟಿ ಕಣೋ! ಈ ಐಡಿಯಾ ನನಗೆ ಮೊದಲೇ ಹೊಳೆಯಲಿಲ್ಲ ಅಂದುಕೊಂಡ್ಯಾ? ಅಸಲಿ ತರಕಾರಿಯವನನ್ನು ಮನೆಯಲ್ಲಿ ಕೂರಿಸಿ, 3 ಬೀದಿ ಮುಗಿಸಿಕೊಂಡು ನಿಮ್ಮ ರಸ್ತೆಗೆ ಬಂದಿದ್ದೀನಿ….” ಎಂದು ಕಿಟ್ಟಿ ಎಂದಿನ ತನ್ನ ಕೀರಲು ಕಂಠದಲ್ಲಿ ಹೇಳಿದಾಗ, ಗುಂಡ ಸುಸ್ತೋ ಸುಸ್ತು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ