ಮಿನಿ ಕಥೆ – ಉಮಾ ಶೂರ್ಪಾಲಿ
ಯೌವನದ ಹುಚ್ಚು ಆವೇಶಕ್ಕೆ ಒಳಗಾಗಿ, ಮಗ ತಮ್ಮನ್ನು ತೊರೆದು ಹೋದಾನೆಂದು ಮುಪ್ಪಿನ ಕಾಲದಲ್ಲಿ ತಮಗೆ ಯಾರು ಆಸರೆ ಎಂದು ಕಂಗಾಲಾಗಿದ್ದ ಹೆತ್ತವರಿಗೆ, ಮಗ ಕೊಟ್ಟ ಉತ್ತರವೇನು……?
“ಚಿರು… ಕಂದಾ…. ನಿನಗೇನೂ ನೋವಾಗಿಲ್ಲ ತಾನೇ?” ಎಂದು ಒಂದೇ ಸಮನೆ ಬಡಬಡಿಸುತ್ತಾ ಗಾಬರಿಯಿಂದ ಮೇಲೆದ್ದಳು ಶರಧಿ.
ಪಕ್ಕದಲ್ಲಿ ಗಾಢ ನಿದ್ರೆಯಲ್ಲಿದ್ದ ಪತಿ ಆಕಾಶ್ ನನ್ನು ನೋಡಿ ಇದುವರೆಗೂ ತಾನು ಕಂಡಿದ್ದೆಲ್ಲ ಕನಸೆಂದು ಗ್ರಹಿಸಿ ಕೂಡಲೇ ಮನದಲ್ಲಿ ಮನೆ ದೇವರಿಗೆ ನಮಸ್ಕರಿಸಿ ಮನದ ದುಗುಡವನ್ನು ಭಗವಂತನಿಗೆ ಅರ್ಪಿಸುತ್ತಾ ನಿರುಮ್ಮಳಾದಳು.
ಇತ್ತ ಚಿರಂಜೀವಿ ಕೆಲಸದಲ್ಲಿ ಮಗ್ನನಾಗಿದ್ದರೂ ಮನಸ್ಸು ಮಾತ್ರ ಹೆತ್ತವರಾದ ಶರಧಿ ಮತ್ತು ಆಕಾಶರನ್ನು ಪದೇ ಪದೇ ನೆನೆಯುತ್ತಿತ್ತು. ಹುಟ್ಟಿನಿಂದಲೂ ನಮ್ಮಿಬ್ಬರ ಜೀವನಾಡಿ ನೀನೆಂದು ಬಹಳ ಮುದ್ದಿನಿಂದ ಬೆಳೆಸಿ ತನ್ನಿಷ್ಟದಂತೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಹಗಲು ರಾತ್ರಿಯೆನ್ನೆದೆ ದುಡಿದ ಅಪ್ಪ, ಹೃದಯದ ಮಿಡಿತ ಕ್ಷಣಾರ್ಧದಲ್ಲಿ ಅರಿತು ಪ್ರೀತಿಯಿಂದ ಅಮೃತ ಧಾರೆಯೆರೆದ ಅಮ್ಮ. ಅವರ ಮುಖ ಕಣ್ಮುಂದೆ ಬಂದಾಗ ಒಂದು ಕ್ಷಣ ತನ್ನ ಇಂದಿನ ನಿರ್ಧಾರದ ಬಗ್ಗೆ ಪರಾಮರ್ಶೆಗೆ ಒಳಪಟ್ಟ ಚಿರು.
ಹೌದು ಹದಿಹರೆಯದ ವಯಸ್ಸಿನಲ್ಲಿ ಸಾಮಾನ್ಯವಾಗಿ ಹುಟ್ಟುವಂತಹ ಈ ಆಕರ್ಷಣೆಯನ್ನು ಜೀವಮಾನದ ಅತ್ಯಮೂಲ್ಯ ಅನುಬಂಧವನ್ನಾಗಿ ಮಾಡಿಕೊಳ್ಳುವ ಭರದಲ್ಲಿ ಹೆತ್ತವರ ಋಣವನ್ನು ತೃಣ ಸಮಾನವಾಗಿ ಕಾಣುತ್ತಿರುವುದು ಅವರಿಗಾಗಿ ಕೃತಿಗೆ ಫೋನ್ ಮಾಡಿದ.
“ಕೃತಿ ನಮ್ಮ ನಡುವೆ ಇರುವಂಥದ್ದು ವಯೋ ಸಹಜ ಆಕರ್ಷಣೆಯೇ ಹೊರತು ಬೇರೆ ಏನೂ ಅಲ್ಲ….
“ನನಗೆ ಹೆತ್ತವರ ಕನಸಿನ ಗೋಪುರನ್ನು ಉರುಳಿಸಿ ನಮ್ಮ ಪ್ರೇಮಸೌಧ ನಿರ್ಮಿಸಿಕೊಳ್ಳುವಂತಹ ದುರಾಸೆ ಎಂದೆಂದಿಗೂ ಬರಲು ಸಾಧ್ಯವಿಲ್ಲ. ನರನಾಡಿಗಳಲ್ಲಿ ಜೀವನ್ಮುಖಿಯಾಗಿ ಹರಿಯುತ್ತಿರುವ ಪ್ರೀತಿ ವಾತ್ಸಲ್ಯದ ಅಮೃತವನ್ನು ಉಣಬಡಿಸಿದವರಿಗೆ ಜೀವವಿರುವವರೆಗೂ ಹೆತ್ತವರ ಇಷ್ಟದಂತೆ ಬದುಕುವುದೇ ನನ್ನ ಜೀವನದ ಪರಮ ಗುರಿ,” ಎಂದು ತಿಳಿಸುತ್ತಾ ಫೋನಿಟ್ಟ.
ಚಿರಂಜೀವಿಯ ಮಾತುಗಳನ್ನು ಕೇಳಿದ ಕೃತಿಗೆ ಹೆತ್ತವರ ಪರ ಅವನಿಗಿರುವ ಅಪರಿಮಿತ ಪ್ರೀತಿ ಮತ್ತು ಗೌರವವನ್ನು ಕಂಡು ತನ್ನ ಬಗ್ಗೆ ತನಗೇ ಬೇಸರ ಮೂಡುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಎಷ್ಟೊಂದು ಕಷ್ಟಗಳನ್ನು ಸಹಿಸಿ ತನ್ನನ್ನು ವಿದ್ಯಾವಂತಳನ್ನಾಗಿ ಮಾಡಿದ ಹೆತ್ತ ತಾಯಿಯೊಂದಿಗೆ ಒಂದು ದಿನ ಕುಳಿತುಕೊಂಡು ಹುಟ್ಟಿದಾರಂಭದಿಂದ ತನ್ನ ಜೀವನದ ಬಗ್ಗೆ ಆಕೆಯೂ ಕಂಡಿರಬಹುದಾದಂತಹ ಕನಸುಗಳು ಏನೆಂದು ಕೇಳದೆಯೇ ಸ್ವೇಚೆಯಿಂದ ತನ್ನ ಬಾಳದಾರಿಯನ್ನು ಮಾತ್ರ ಸುಗಮವಾಗಿಸಿಕೊಳ್ಳಬೇಕೆಂದು ಯೋಚಿಸಿ ಪ್ರೇಮ ವಿವಾಹವಾಗುವ ತನ್ನ ನಿರ್ಧಾರದ ಬಗ್ಗೆ ಮನಸ್ಸಿನಲ್ಲಿ ನಡೆದ ಚಿಂತನಮಂಥನದಿಂದ ಜ್ಞಾನೋದಯವಾಗಿ ಹುಟ್ಟಿಗೆ ಕಾರಣರಾದವರ ಪ್ರೀತಿಗಿಂತ ಮಿಗಲಾದದ್ದು ಈ ಜಗದಲ್ಲಿ ಬೇರೇನೂ ಇಲ್ಲ….
ಸದಾ ಅವರಿಷ್ಟದಂತೆ ಮುನ್ನಡೆಯುವುದರಲ್ಲಿಯೇ ಅಡಗಿರುವುದು ಜೀವಮಾನದ ಸಾರ್ಥಕತೆಯೆಂಬುದು ಅರಿವಾಗಿ ನಿಡಿದಾದ ನಿಟ್ಟುಸಿರು ಚೆಲ್ಲಿದಾಗ ಮನಸ್ಸಿಗೆ ನಿರಾಳವಾದ ಭಾವ ಮೂಡಿತು.
ಹೆತ್ತವರ ಪ್ರಾರ್ಥನೆಗೆ ಕಣ್ಣಿಗೆ ಕಾಣದ ದೈವ ಸಹಮತಿಸಿದಾಗ ಮಾತ್ರ ಕರುಳು ಕುಡಿಯ ರೂಪದಲ್ಲಿ ಹರಿಯೊಲುಮೆಯು ವರವಾಗಿ ಬದುಕಿಗೇ ಶ್ರೀರಕ್ಷೆಯಾಗುತ್ತದೆ. ಜಗನ್ನಿಯಾಮಕನ ಅಸೀಮ ಕೃಪಾ ಕಟಾಕ್ಷವನ್ನು ಮರೆಯಲು ಸಾಧ್ಯವೇ….?
ಅನಂತ ಪ್ರೀತಿಯ ವ್ಯಾಪ್ತಿಯನ್ನು ಮರೆತು ಬದುಕುವುದು ಮಾನವ ಧರ್ಮವಲ್ಲವೆಂದು ಗುರುಗಳ ಅಮೃತೋಪದೇಶವನ್ನು ಟಿವಿ ಪರದೆಯ ಮೇಲೆ ಯೂಟ್ಯೂಬ್ ಮೂಲಕ ಕೇಳುತ್ತಾ ಕುಳಿತಿರುವ ಶರಧಿ ಮತ್ತು ಆಕಾಶ್ ರಿಗೆ ಬಾಗಿಲ ಕರೆಗಂಟೆ ಬಾರಿಸುತ್ತಲೇ ಎದುರಿಗೆ ನಿಂತಿದ್ದ ಮಗ ಚಿರಂಜೀವಿ.
ಬೆಳಗ್ಗೆ ಮನೆಯನ್ನು ಮರೆತಾಗ ಚಿಂತಿಸದೇ ಸಂಜೆಯಾಗುತ್ತಲೇ ಮರಳಿಗೂಡಿಗೆ ಬಂದೇ ಬರುವನೆಂಬ ತಮ್ಮ ಅಪಾರವಾದ ನಂಬಿಕೆಯು ಸಾಕ್ಷಾತ್ಕಾರವಾಗಿದ್ದನ್ನು ಕಂಡು `ಪ್ರೀತಿ ನೀನಿಲ್ಲದೇ ನಾನು ಹೇಗಿರಲಿ…?’ ಎಂದು ನೊಂದಿರುವಂತಹ ಹೆತ್ತವರ ಮನಸ್ಸು ಆತ್ಮ ಸಂತೃಪ್ತಿಯನ್ನು ನೀಡಿದಂತಹ ಪರಮಾಪ್ತನಿಗೆ ಚಿರಋಣಿಯಾಗಿತ್ತು.





