ರಾಧಿಕಾ : ನಮ್ಮ ಬೆಂಗಳೂರಿನಲ್ಲಿ ಆಗಾಗ ಕರೆಂಟ್ ಹೋಗ್ತಾನೇ ಇರುತ್ತಲೇ, ಇದು ಒಳ್ಳೆಯದಕ್ಕೆ ಅಂತೀಯಾ?
ವೇದಿಕಾ : ಹಗಲು ಹೊತ್ತು ಏನೋ ಹೇಗೋ.... ರಾತ್ರಿ ಹೊತ್ತು ಆಗಾಗ ಕರೆಂಟು ಹೋದಾಗೆಲ್ಲ, ಮನೆ ಮಂದಿಯೆಲ್ಲ ಒಟ್ಟಾಗಿ ಒಂದೇ ಕಡೆ ಕುಳಿತು, ಒಂದಿಷ್ಟು ಕಷ್ಟಸುಖ ಮಾತನಾಡಿಕೊಳ್ತಾರೆ ಅನ್ನೋಂದತೂ ನಿಜ! ಇಲ್ಲದಿದ್ದರೆ ಅವರವರ ಮೊಬೈಲು, ಲ್ಯಾಪ್ ಟಾಪ್, FB, ಇನ್ ಸ್ಟಾಗ್ರಾಂಗಳಲ್ಲಿ ತಾವೆಲ್ಲ ಒಂದೇ ಮನೆಯವರು ಅನ್ನೋದು ಅವರಿಗೆಲ್ಲಿ ನೆನಪಿರುತ್ತದೆ?
ಮೇದಿನಿ : ನಿನ್ನ ಮಾತು ನಿಜ, `ಸಾಮಾಜಿಕ ಜಾಲತಾಣ'ಗಳಿಂದ ಸಾಮಾಜಿಕ ಜೀವನವನ್ನೇ ಕಳೆದುಕೊಂಡ ಈ ಜನರನ್ನು ಒಟ್ಟುಗೂಡಿಸಲು, ಒಂದು ಸಂಸ್ಥೆ ತನ್ನ ಟ್ಯಾಗ್ ಲೈನಿಗೆ ಈಗ, `ಕನೆಕ್ಟಿಂಗ್ ಪೀಪಲ್ ಬೈ ಡಿಸ್ ಕನೆಕ್ಟಿಂಗ್ ದಿ ಪವರ್' ಅಂತ ಹೊಸದಾಗಿ ಸೇರಿಸಿಕೊಳ್ಳಲಿದೆಯಂತೆ!
ಶೆಟ್ಟರು ತಮ್ಮ ಹೈಸ್ಕೂಲಿನ ಮಗ ರಜಾ ದಿನಗಳಲ್ಲಿ ಅಂಗಡಿ ನೋಡಿಕೊಳ್ಳಲಿ ಎಂದು ಕೂರಿಸಿ, ಆಗಾಗ ಹೊರಗಿನ ಕೆಲಸಕ್ಕೆ ಹೋಗತೊಡಗಿದರು.
ಅಪ್ಪನ ಬಳಿ ಸೈ ಎನಿಸಿಕೊಳ್ಳಲೇಬೇಕು ಎಂದು ಮರಿಶೆಟ್ಟರಿಗೆ ಎಲ್ಲಿಲ್ಲದ ಹುಮ್ಮಸ್ಸು ಮೂಡಿತು. ಅಂದು ವ್ಯಾಪಾರ ಮುಗಿಸಿದ ಮಗರಾಯ ಅಪ್ಪನಿಗೆ ವರದಿ ಒಪ್ಪಿಸುತ್ತಿದ್ದ.
``ನೋಡಪ್ಪ, ಒಬ್ಬ ಗಿರಾಕಿ ಲೂಸ್ ಇಂಗು ಬೇಕು ಅಂತ 100 ಗ್ರಾಂ. ಕೇಳಿದ. ನಾನು ಕೈಯಲ್ಲೇ ಅಳೆದು ಕೊಟ್ಟೆ....''
``ತಕ್ಷಣ ಕೈ ತೊಳೆದುಕೊಂಡೆ ಏನು?'' ಶೆಟ್ಟರಿಗೆ ಶ್ಯಾನೆ ಅನುಮಾನ.
``ಇಲ್ಲ....ಇಲ್ಲ..... ನಾನು ನಿನ್ನ ಮಗನಲ್ಲವೇ? ಅಮ್ಮ ಮಧ್ಯಾಹ್ನದ ಅಡುಗೆ ಮಾಡುತ್ತಿದ್ದರು. ಅಲ್ಲಿಗೆ ನುಗ್ಗಿದವನೇ, ಕುದಿಯುತ್ತಿದ್ದ ಸಾರಿನಲ್ಲಿ ನನ್ನ ಕೈ ಅದ್ದಿ, ಇವತ್ತು ಸಾರಿಗೆ ಬೇರೆ ಇಂಗು ಹಾಕಬೇಡಮ್ಮ ಅಂತ ಅಮ್ಮನಿಗೆ ಎಚ್ಚರಿಸಿದೆ. ನೋಡಿದ್ಯಾ.... ಒಂದು ದಿನದ ಅಡುಗೆ ಇಂಗಿನ ಖರ್ಚು ಉಳಿಸಿಬಿಟ್ಟೆ....?'' ಎಂದ ಮಗ ತಂದೆಯ ಶಭಾಷ್ ಗಿರಿ ಎದುರುನೋಡುತ್ತಿದ್ದ.
``ಅಯ್ಯೋ ಪೆದ್ದು ಮುಂಡೇದೇ.... ಒಂದೇ ದಿನ ಯಾಕೋ ನಿನ್ನ ಪೂರ್ತಿ ಕೈ ಅದ್ದಿದೆ? ಒಂದೊಂದು ದಿನ ಒಂದೊಂದೇ ಬೆರಳು ಅದ್ದಿದ್ದರೆ 5 ದಿನಗಳ ಅಡುಗೆ ಇಂಗು ಉಳಿಸಬಹುದಿತ್ತು ಗೊತ್ತಾ?'' ಶೆಟ್ಟರು ಗುಡುಗಿದಾಗ ಮಗರಾಯ ಬೇಸ್ತು ಬಿದ್ದ!
ಮೂವರು ಜಿಪುಣಾಗ್ರೇಸ ಗೆಳೆಯರ ಮಧ್ಯೆ ವಾಗ್ವಾದ ನಡೆದಿತ್ತು.
ಮಹೇಶ : ನೀವೆಲ್ಲ ಯಾ ಮಹಾ ಸಿರಿವಂತಿಕೆ ಕಂಡಿದ್ದೀರಿ..... ನಮ್ಮ ತಾತಾ ಒಂದು ಭವ್ಯ ಬಂಗಲೆ ಕಟ್ಟಿಸಿದ್ದರು.... ಅದರ ಮೇಲಿನಿಂದ ಧುಮುಕಿದ ಒಬ್ಬ ವ್ಯಕ್ತಿ ಕೆಳಗೆ ನೆಲ ತಲುಪಲು 1 ವರ್ಷ ಬೇಕಾಯ್ತಂತೆ ಗೊತ್ತಾ? ಆ ಬಂಗಲೆ ಎಷ್ಟು ಎತ್ತರಕ್ಕಿರಬೇಕು, ಅದರ ಭವ್ಯತೆ ಏನು ಅಂತ ನೀವೇ ಊಹಿಸಿಕೊಳ್ಳಿ!
ಸುರೇಶ : ನಿಮ್ಮ ತಾತಂದು ಏನು ಮಹಾ.... ನಮ್ಮ ಮುತ್ತಾತ ಕಟ್ಟಿಸಿದ ಭವ್ಯ ಕಟ್ಟಡ ಎಷ್ಟು ಎತ್ತರಕ್ಕೆ ಇತ್ತು ಅಂತಂದ್ರೆ ಅದರ ತಾರಸಿಯಿಂದ ಕೆಳಗೆ ಧುಮುಕಿದ ವ್ಯಕ್ತಿಯೊಬ್ಬ ನೆಲ ಮುಟ್ಟಲು 10 ವರ್ಷ ಬೇಕಾಯ್ತಂತೆ ಗೊತ್ತಾ....?
ಇವರಿಬ್ಬರಿಗೆ ಮುಖಭಂಗ ಮಾಡಲೇಬೇಕು ಎಂದು ಗಿರೀಶ ನಿಶ್ಚಯಿಸಿದ.
ಗಿರೀಶ : ನಿಮ್ಮಿಬ್ಬರದೂ ಬಡಾಯಿ ಕೊಚ್ಚಿಕೊಂಡದ್ದು ಆಯ್ತಾ....? ಈಗ ನಮ್ಮ ಕೋಲುತಾತನ ಹಿರಿಮೆ ಬಗ್ಗೆ ಕೇಳಿ... ಅವರು ಕಟ್ಟಿಸಿದ ಭವ್ಯಾತಿಭವ್ಯ ಕಟ್ಟಡ ಎಷ್ಟು ಎತ್ತರ ಇತ್ತು ಅಂತಂದ್ರೆ.... ಅಲ್ಲಿಂದ ಹಾರಿದ ಒಂದು ಚಿಂಪಾಂಜಿ ನೆಲ ಮುಟ್ಟುವ ಹೊತ್ತಿಗೆ ಮನ್ಮಥನಂಥ ಮಾನವನಾಗಿದ್ದನಂತೆ!





