ರಸ್ತೆಯಲ್ಲಿ ಕಸ ಗುಡಿಸುವಾಗ ತಮಗೆ ಸಿಕ್ಕಿದ್ದ ಸುಮಾರು 55 ಲಕ್ಷ ರೂ. ಮೌಲ್ಯದ 360 ಗ್ರಾಂ ಚಿನ್ನವನ್ನು ಅದರ ಮಾಲೀಕರಿಗೆ ಮರಳಿಸಿದ್ದ ಚೆನ್ನೈ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಪದ್ಮಾರನ್ನು ನಟ ರಜನೀಕಾಂತ್‌ ತಮ್ಮ ಮನೆಗೆ ಕರೆಸಿ ಸನ್ಮಾನಿಸಿದ್ದಾರೆ.

ಚೆನ್ನೈನ ಟಿ.ನಗರದಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪದ್ಮಾ ಅವರಿಗೆ ಕೆಲವು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಪೌಚ್​ವೊಂದು ದೊರೆತಿತ್ತು. ಅದನ್ನು ತೆರೆದು ನೋಡಿದಾಗ ಅದರಲ್ಲಿ 45 ಸವರನ್​ (ಸುಮಾರು 360ಗ್ರಾಂ) ಚಿನ್ನಾಭರಣಗಳಿದ್ದವು. ಇದನ್ನು ನೋಡಿದ ಪದ್ಮಾ, ತಕ್ಷಣವೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಪಾಂಡಿ ಬಜಾರ್​ ಪೊಲೀಸ್​
ಠಾಣೆಗೆ ಒಪ್ಪಿಸಿದ್ದರು. ಪೊಲೀಸರು ತನಿಖೆ ನಡೆಸಿ ಆ ಆಭರಣಗಳನ್ನು ಅದರ ವಾರಸುದಾರರಿಗೆ ತಲುಪಿಸಿದ್ದರು.

ರಜನಿಯಿಂದ ಆಹ್ವಾನ: ಪದ್ಮಾ ಅವರ ಈ ಕಾರ್ಯವನ್ನು ತಿಳಿದ ಸೂಪರ್​ ಸ್ಟಾರ್ ರಜನಿಕಾಂತ್​, ಮಂಗಳವಾರ ಪದ್ಮಾ ಅವರನ್ನು ತಮ್ಮ ಪೋಯಸ್​ ಗಾರ್ಡನ್​ ನಿವಾಸಕ್ಕೆ ಆಹ್ವಾನಿಸಿದ್ದರು. ಪತಿ ಹಾಗೂ ಮಕ್ಕಳೊಂದಿಗೆ ಬಂದಿದ್ದ ಪದ್ಮಾ ಅವರಿಗೆ ರಜನಿಕಾಂತ್​ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಪದ್ಮಾ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಎರಡು ಸವರನ್​ (ಸುಮಾರು 16 ಗ್ರಾಂ) ತೂಕದ ಓಂ ಪದಕವಿರುವ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದರು.

ಸನ್ಮಾನದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪದ್ಮಾ, “ನಾನು ರಜನಿಕಾಂತ್​ ಅವರ ದೊಡ್ಡ ಅಭಿಮಾನಿ. ಅವರನ್ನು ಭೇಟಿಯಾಗುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ. ನನ್ನ ಕಷ್ಟದ ಬದುಕಿನಲ್ಲಿ ಈ ಭೇಟಿ, ಅವರು ನೀಡಿದ ಗೌರವವನ್ನು ನಾನು ಜೀವನದಲ್ಲಿ ಎಂದಿಗೂ ಮರೆಯಲಾಗದು” ಎಂದು ಭಾವುಕರಾಗಿ ಹೇಳಿದ್ದಾರೆ.

ಇದೇ ಕಾರಣಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸ್ಟಾಲಿನ್‌ ಕೂಡಾ ಪದ್ಮಾ ಅವರಿಗೆ 1 ಲಕ್ಷ ರೂ. ನೀಡಿ ಗೌರವಿಸಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ