ಶರತ್ ಚಂದ್ರ
ಯೋಗರಾಜ್ ಭಟ್ ಅವರು ಬರೆದಿರುವ ಹಾಡುಗಳೆಂದರೆ ಅದರಲ್ಲೇನೋ ವಿಶೇಷತೆ ಇರುತ್ತದೆ. ಅದು ಲವ್ ಸಾಂಗ್ ಆಗಿರಬಹುದು, ತರ್ಲೆ ಸಾಂಗ್ ಆಗಿರಬಹುದು ಅವರ ಸಾಹಿತ್ಯದಲ್ಲೇನೋ ಏನೋ ಕಿಕ್ ಇರುತ್ತದೆ. ಅದರಲ್ಲೂ ಅವರು ಬರೆದಿರುವ ಉತ್ತರ ಕರ್ನಾಟಕದ ಜವಾರಿ ಭಾಷೆಯ ಐಟಂ ಸಾಂಗ್ ಗಳಂತು ಸಿನಿ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ.
ಈಗ ಈ ಸಾಲಿಗೆ ‘ಶೇರ್ ‘ ಚಿತ್ರದ ಇತ್ತೀಚೆಗೆ ಬಿಡುಗಡೆಯಾದ ಐಟಂ ಸಾಂಗ್ ‘ತಯ್ಯ ತಕ್ಕ ತುಡುಗಿ ‘ಸೇರ್ಪಡೆಯಾಗಿದೆ.

ಈ ಹಾಡು A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲೇ 7 ಲಕ್ಷಕ್ಕಿಂತಲೂ ಹೆಚ್ಚಿನ ವೀಕ್ಷಣೆ ಪಡೆದಿದ್ದು ಮಿಲಿಯನ್ ವೀಕ್ಷಣೆಯತ್ತ ದಾಪುಗಲು ಹಾಕುತ್ತಿದೆ.ಈ ಹಿಂದೆ ನಿರ್ದೇಶಕ ಪ್ರಸಿದ್ಧ್ ನಿರ್ದೇಶಿಸಿ ಕಿರಣ್ ರಾಜ್ ನಾಯಕನಾಗಿ ನಟಿಸಿದ್ದ ‘ಭರ್ಜರಿ ಗಂಡು ‘ ಚಿತ್ರದಲ್ಲಿ ಹಿಟ್ ಹಾಡುಗಳನ್ನು ನೀಡಿದ್ದ ಗುಮ್ಮಿನೇನಿ ವಿಜಯ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ
.’ ಮೀಟ್ ಮಾಡೋಣ ‘ ಟ್ರೊಲ್ ಆಗುತ್ತೆ’ ಮುಂತಾದ ಟ್ರೆಂಡಿಂಗ್ ಹಾಡುಗಳಿಗೆ ದನಿಯಾದ ಐಶ್ವರ್ಯ ರಂಗರಾಜನ್ ಅವರ ಮಾದಕತೆಯಿಂದ ಕೂಡಿದ ಗಾಯನ ಈ ಹಾಡಿನ ಹೈಲೈಟ್ ಆಗಿದೆ. ಬಾಲಿವುಡ್, ಭೋಜಪುರಿ ಮತ್ತು ದಕ್ಷಿಣದ ಒಂದಷ್ಟು ಚಿತ್ರಗಳು ಹಾಗೂ ಆಲ್ಬಮ್ ಸಾಂಗ್ ಗಳಲ್ಲಿ ಡ್ಯಾನ್ಸ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ನಮ್ರತಾ ಮಲ್ಲಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಸ್ಯಾಂಡಲ್ ವುಡ್ ನ ಜನಪ್ರಿಯ ಕೊರಿಯೋಗ್ರಾಫರ್ ಕಲೈ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು ಪ್ರಸಿದ್ಧ್ ಅವರ ಚಿತ್ರಗಳಿಗೆ ಬೆನ್ನೆಲುಬಾಗಿರುವ DOP ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ ಈ ಹಾಡಿನಲ್ಲಿ ಅವರು ಲೈಟಿಂಗ್ಸ್ ಬಳಸಿರುವ ರೀತಿ ಈ ಹಾಡು ರಿಚ್ ಆಗಿ ಮೂಡಿ ಬರಲು ಸಹಕರಿಸಿದೆ. ಒಟ್ಟಿನಲ್ಲಿ ನಾಯಕ ಕಿರಣ್ ರಾಜ್ ಮತ್ತು ನೆಗೆಟಿವ್ ರೋಲ್ ಮಾಡಿರುವ ಕ್ರಿಸ್ ರೋಡ್ರಿಗ್ ಸಕತ್ ಸ್ಟೆಪ್ಸ್ ಹಾಕಿದ್ದು ಬಾಲರಾಜ್ ವಾಡಿ ಈ ಹಾಡಿನಲ್ಲಿ ಗಮನ ಸೆಳೆಯುತ್ತಾರೆ.

ಈಗಾಗಲೇ ರತ್ನಮಂಜರಿ ಮತ್ತು ಭರ್ಜರಿ ಗಂಡು ಚಿತ್ರಗಳನ್ನು ನಿರ್ದೇಶಿಸಿ ತಾನು ಒಬ್ಬ ಉತ್ತಮ ತಂತ್ರಜ್ಞ ಎಂದು ಸಾಬೀತು ಪಡಿಸಿರುವ ಪ್ರಸಿದ್ಧ್ ನಿರ್ದೇಶನದ ‘ಶೇರ್ ‘ಚಿತ್ರದ ಟೀಸರ್ ಈಗಾಗಲೇ ಗಮನ ಸೆಳೆದಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.ಇಲ್ಲಿ ತನಕ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಕಿರಣ್ ರಾಜ್ ಗೆ ಈ ಚಿತ್ರದಿಂದ ಮಾಸ್ ಅಭಿಮಾನಿಗಳು ಕೂಡ ಸೃಷ್ಟಿಯಾಗಬಹುದೇನೊ.
ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಶೀಘ್ರದಲ್ಲೇ ಚಿತ್ರಮಂದಿರದಲ್ಲಿ ‘ಶೇರ್’ ಘರ್ಜಿಸಲಿದೆ.





