ರಾಘವೇಂದ್ರ ಅಡಿಗ ಎಚ್ಚೆನ್.

ಬಿಗ್‌ಬಾಸ್ ಕನ್ನಡ ಸೀಸನ್ 12 ಗೆಲುವಿನ ಬಳಿಕ ಕರ್ನಾಟಕದ ಮನೆಮಾತಾಗಿರುವ ಗಿಲ್ಲಿ ನಟ, ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಅಪಾರ ಬೆಂಬಲದೊಂದಿಗೆ ಭಾರೀ ಜನಪ್ರಿಯತೆಯನ್ನು ಅನುಭವಿಸುತ್ತಿದ್ದಾರೆ. ಹೋದ ಕಡೆಲ್ಲ ಅಭಿಮಾನಿಗಳ ಜಯಘೋಷ, ಸೆಲ್ಫಿ, ಸಂಭ್ರಮ – ಗಿಲ್ಲಿಯ ಸುತ್ತಲೆಲ್ಲಾ ಕ್ರೇಜ್ ಜೋರಾಗಿದೆ. ಆದರೆ ಇದೇ ಸಮಯದಲ್ಲಿ ಗಿಲ್ಲಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ.

ಬಿಗ್‌ಬಾಸ್‌ಗೆ ತೆರಳುವ ಮೊದಲು ಗಿಲ್ಲಿ ನಟಿಸಿದ್ದ ‘ಸರ್ಕಾರಿ ಶಾಲೆ ಎಚ್8’ ಸಿನಿಮಾ ಇಂದು (ಫೆಬ್ರವರಿ 6) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಹಂತದಲ್ಲೇ ಚಿತ್ರದ ನಿರ್ಮಾಪಕರು ಗಿಲ್ಲಿ ವಿರುದ್ಧ ಫಿಲಂ ಚೇಂಬರ್‌ಗೆ ದೂರು ಸಲ್ಲಿಸಿದ್ದಾರೆ.

ಚಿತ್ರದ ನಿರ್ಮಾಪಕ ತೇಜಸ್ವಿ ಎಸ್ ಅವರ ಆರೋಪದ ಪ್ರಕಾರ, ಗಿಲ್ಲಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಸಂಪೂರ್ಣ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಬಿಗ್‌ಬಾಸ್‌ಗೆ ಹೋಗುವ ಮುನ್ನವೇ ಗಿಲ್ಲಿ ಕೇಳಿದಷ್ಟು ಹಣವನ್ನು ನಿರ್ಮಾಣ ತಂಡ ಪಾವತಿಸಿದೆ. ಆದರೆ ಇದೀಗ ಸಿನಿಮಾ ಬಿಡುಗಡೆ ಹೊತ್ತಿನಲ್ಲೂ ಅವರು ಪ್ರಚಾರ ಕಾರ್ಯಕ್ಕೆ ಸಂಪೂರ್ಣವಾಗಿ ದೂರ ಉಳಿದಿದ್ದಾರೆ ಎಂದು ಆರೋಪಿಸಿದ್ದಾರೆ.

“ಎಷ್ಟೇ ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸುತ್ತಿಲ್ಲ. ಕನಿಷ್ಠ ನಮ್ಮ ಸಿನಿಮಾದ ಬಗ್ಗೆ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ಕೂಡ ಹಂಚಿಕೊಂಡಿಲ್ಲ” ಎಂದು ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫಿಲಂ ಚೇಂಬರ್ ದೂರು ಸ್ವೀಕರಿಸಿದ್ದು, ಗಿಲ್ಲಿಯನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಸರ್ಕಾರಿ ಶಾಲೆ ಎಚ್8’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಸಿನಿಮಾ. ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕತೆ ಹಾಗೂ ನಿರ್ದೇಶನ ಮಾಡಿದ್ದಾರೆ. ಗಿಲ್ಲಿ ಜೊತೆಗೆ ಗುಣ ಹರಿಯಬ್ಬೆ, ಮೇಘಶ್ರೀ ಮತ್ತು ಜನಪದ ಕಲಾವಿದ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್, ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್ ಹಾಗೂ ನಮ್ರತಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಿಗ್‌ಬಾಸ್ ಬಳಿಕ ಗಿಲ್ಲಿಗೆ ಹೊಸ ಅವಕಾಶಗಳು ಬರುತ್ತಿರುವ ನಡುವೆಯೇ, ಈ ದೂರು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ