ಏನಂತೀರೀ?

ಸಿಂಹಿಣಿ ಸ್ಮೃತಿ ಮಂಧನ

ನಮ್ಮ ಸನಾತನ ಧರ್ಮದಲ್ಲಿ ಹೆಣ್ಣಿಗೆ ಬಹಳ ಪ್ರಾಮುಖ್ಯತೆ ಇದ್ದು ಆಕೆಯನ್ನು ಜನ್ಮಕೊಟ್ಟ ತಾಯಿಗೆ ಮತ್ತು ಭೂಮಿಗೆ ಹೋಲಿಸಲಾಗುತ್ತದೆ. ಭೂಮಿ ತಾಯಿಯಂತೆ ಹೆಣ್ಣು ಸಹಾ, ಅಪಾರ ಸಹನೆ, ಪ್ರೀತಿ, ವಾತ್ಸಲ್ಯ ಮತ್ತು ತ್ಯಾಗವನ್ನು ಹೊಂದಿರುವ ಕಾರಣ ಅಕೆಯನ್ನು ಕ್ಷಮಯಾಧರಿತ್ರಿ ಎಂದೂ ಸಹಾ ಕರೆಯಲಾಗುತ್ತದೆ. ಅದೇ ರೀತಿಯಾಗಿ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ, ಹೆಣ್ಣು ಅಬಲೆಯಲ್ಲ. ಕಷ್ಟ ಬಂದಾಗ ಆಕೆ ದುರ್ಗೆಯಂತೆ ದಶಪ್ರಹರ್ಣಿಯಾಗಿ ಸಬಲೆಯಾಗಬಲ್ಲಳು ಎಂಬುದಕ್ಕೆ ಪ್ರತೀಕವಾಗಿ ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡ ಉಪನಾಯಕಿ ಮತ್ತು ರಾಯಲ್ ಚಾಲೆಂಜರ್ಸ್ ಮಹಿಳಾ ತಂಡದ ಸಫಲ ನಾಯಕಿ ಸ್ಮೃತಿ ಮಂದನ ಇದ್ದಾರೆ ಎಂದರೂ ಅತಿಶಯವಾಗದು.

ತನ್ನ ವಯಕ್ತಿಕ ಜೀವನದಲ್ಲಿ ಬಂದ ಪ್ರವಾಹಕ್ಕೆ ಕೊಚ್ಚಿ ಹೋಗದೆ, ಸಾರ್ವಜನಿಕವಾಗಿ ಯಾವುದೇ ರೀತಿಯ ಆರೋಪ ಪ್ರತ್ಯಾರೋಪಗಳಿಲ್ಲದೇ ಕೆಸರಿನಲ್ಲಿ ಅರಳುವ ಕಮಲದಂತೆ ತಾಳ್ಮೆ ಮತ್ತು ಸಹನೆಯಿಂದ ಕೆಲವೇ ಕೆಲವು ದಿನಗಳಲ್ಲಿಯೇ ಸದ್ದಿಲ್ಲದೇ ಮೆಟ್ಟಿ ನಿಂತು ಐಪಿಲ್ ಮಹಿಳಾ ವಿಭಾಗದಲ್ಲಿ ವಯಕ್ತಿಕ ಆಟದಿಂದ ಮತ್ತು ನಾಯಕಿಯಾಗಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಎರಡನೇ ಬಾರಿ ಪ್ರಶಸ್ತಿಯನ್ನು ಪಡೆಯುವುದರಲ್ಲಿ ಸಫಲ ಆಗಿರುವುದು ಇಂದಿನ ಯುವತಿಯರಿಗೆ ಪ್ರೇರಣೆಯಾಗಿದ್ದು, ಭೂಮಿಯಂತೆ ನೋವನ್ನು ಸಹಿಸಿಕೊಂಡು ನಗುವನ್ನು ಹಂಚಿದ ಹಿಂದಿನ ಕಥೆ-ವ್ಯಥೆ ನಿಜಕ್ಕೂ ರೋಚಕವಾಗಿದೆ.

ಜುಲೈ 18, 1996 ರಂದು ಮುಂಬೈಯಲ್ಲಿ ಶ್ರೀಮತಿ ಸ್ಮಿತಾ ಮತ್ತು ಶ್ರೀ ಶ್ರೀನಿವಾಸ್ ಮಂಧಾನಾ ಎಂಬ ಮಧ್ಯಮ ವರ್ಗದ ಮಾರ್ವಾಡಿ ಹಿಂದೂ ಕುಟುಂಬದಲ್ಲಿ ಜನಿಸಿದ ಸ್ಮೃತಿ ನಂತರದ ದಿನಗಳಲ್ಲಿ ಅವರ ಕುಟುಂಬವು ಮಹಾರಾಷ್ಟ್ರದ ಸಾಂಗ್ಲಿಯ ಉಪನಗರವಾದ ಮಾಧವನಗರಕ್ಕೆ ಸ್ಥಳಾಂತರಗೊಂಡಿತು. ಸ್ಮೃತಿಳ ತಂದೆ ಮತ್ತು ಅಣ್ಣ ಶ್ರವಣ್ ಮಂಧಾನ, ಸ್ಥಳೀಯ ಮಟ್ಟದ ಕ್ರಿಕೆಟ್ ಆಟಗಾರರಾಗಿದ್ದು, ಆಕೆಯ ಸಹೋದರ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಜೂನಿಯರ್ ವಿಭಾಗದಲ್ಲಿ ಆಡಿದ್ದರಿಂದ ಸಹಜವಾಗಿಯೇ ಮನೆಯಲ್ಲಿ ಕ್ರಿಕೆಟ್ ಆಟದ ವಾತಾವರಣ ಇದ್ದದ್ದರಿಂದ ಸ್ಮೃತಿ ಸಹಾ ಕ್ರಿಕೆಟ್ ಆಟದೊಂದಿಗೆ ಆಕರ್ಷಿತಳಾಗಿ ಅಣ್ಣ ಮತ್ತು ಆತನ ಗೆಳೆಯರೊಂದಿಗೆ ಕ್ರಿಕೆಟ್ ಆಡತೊಡುವುದರ ಜೊತೆಗೆ ಸಾಂಗ್ಲಿಯ ಚಿಂತಾಮನ್ ರಾವ್ ವಾಣಿಜ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

ಆಕೆಗೆ ಕೇವಲ ಒಂಬತ್ತು ವರ್ಷ ಇರುವಾಗಲೇ ಮಹಾರಾಷ್ಟ್ರದ 15 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿ, ತನ್ನ ಹನ್ನೊಂದನೇ ವಯಸ್ಸಿನಲ್ಲೇ ಮಹಾರಾಷ್ಟ್ರದ 19 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಳು. ಅಕ್ಟೋಬರ್ 2013ರಲ್ಲಿ ವಡೋದರಾದದಲ್ಲಿ ನಡೆದ ಪಶ್ಚಿಮ ವಲಯದ 19 ವರ್ಷದೊಳಗಿನವರ ಪಂದ್ಯಾವಳಿಯಲ್ಲಿ ಗುಜರಾತ್ ತಂಡದ ವಿರುದ್ಧದ ಲಿಸ್ಟ್ ಎ ಪಂದ್ಯದಲ್ಲಿ ಕೇವಲ 150 ಎಸೆತಗಳಲ್ಲಿಯೇ ಅಜೇಯ 224 ರನ್ ಗಳಿಸುವ ಮೂಲಕ ದ್ವಿಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂದು ಹೆಗ್ಗಳಿಕೆಗೆ ಪಾತ್ರಳಾಗಿ ಪಂದ್ಯದಿಂದ ಪಂದ್ಯಕ್ಕೆ ಆಟದಲ್ಲಿ ಪ್ರಬುದ್ಧಳಾಗಿ ಬೆಳೆಯುತ್ತಾ, ಏಪ್ರಿಲ್ 2013 ರಲ್ಲಿ ಬಾಂಗ್ಲಾದೇಶ ಭಾರತ ಪ್ರವಾಸ ಮಾಡಿದಾಗ ಮಂಧಾನಾ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿ, ತನ್ನ ಚೊಚ್ಚಲ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿಯಾಗಿ 39 ರನ್ ಗಳಿಸಿ, ಆ ಸರಣಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ 48 ರನ್ ಗಳಿಸುವ ಮೂಲಕ ಭಾರತದ ಎಲ್ಲಾ ಮಾದರಿಯ ತಂಡದ ಅವಿಭಾಜ್ಯ ಅಂಗವಾಗಿ ಹೋದಳು

2018 ರಲ್ಲಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ಎರಡನೇ ಪಂದ್ಯ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ 109 ಎಸೆತಗಳಲ್ಲಿ 102೧೦೨ ರನ್ ಗಳಿಸಿ ಚೊಚ್ಚಲ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬಾರಲಿಲ್ಲ. ಭಾರತೀಯ ಪುರುಷರ ಕ್ರಿಕೆಟ್ ತಂಡ ಕಿಂಗ್ ವಿರಾಟ್ ಕೊಹ್ಲಿಯ ಅಭಿಮಾನಿಯಾಗಿರುವ ಮಂದಾನ, ಕೊಹ್ಲಿಯಂತೆಯೇ 18ನೇ ಸಂಖ್ಯೆಯ ಜೆರ್ಸಿಯನ್ನೇ ತೊಟ್ಟು ವಿರಾಟ್ ನಂತೆಯೇ ದಾಖಲೆ ಮೇಲೆ ದಾಖಲೆಯನ್ನು ಮಾಡುತ್ತಿದ್ದಾಳೆ. ಈಗಾಗಲೇ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ೧೭ ಶತಕಗಳನ್ನು ಗಳಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಜಂಟಿ ದಾಖಲೆಯನ್ನು ಹೊಂದಿದ್ದರೆ, ಸುಜೀ ಬೇಟ್ಸ್ ನಂತರ ಟಿ೨೦ಐಗಳಲ್ಲಿ 4000 ರನ್‌ಗಳನ್ನು ತಲುಪಿದ ಎರಡನೇ ಮಹಿಳಾ ಆಟಗಾರ್ತಿ ಮತ್ತು ಮಿಥಾಲಿ ರಾಜ್ ನಂತರ ಎರಡನೇ ಭಾರತೀಯ ಆಟಗಾರ್ತಿ ಮತ್ತು ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಪೂರ್ಣಗೊಳಿಸಿದ ಒಟ್ಟಾರೆ ನಾಲ್ಕನೇ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದು, ಇನ್ನೂ ಹತ್ತು ಹಲವಾರು ದಾಖಲೆಗಳು ಮಾಡುವುದು ನಿಶ್ಚಯವಾಗಿದೆ.

2025ರ ನವೆಂಬರ್ 2ರಂದು ನವಿ ಮುಂಬೈನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಗೆದ್ದ ತಂಡ ಉಪನಾಯಕಿಯಾಗಿದ್ದ ಮಂದಾನಾ ಆ ಇಡೀ ಪಂದ್ಯಾವಳಿಯಲ್ಲಿ ತನ್ನ ಸ್ಥಿರವಾದ ಪ್ರದರ್ಶನದ ಮೂಲಕ ಭಾರತ ತಂಡದ ಗೆಲುವಿನ ರೂವಾರಿಯಾಗಿ ಮೈದಾನದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅಭಿನಂದನೆ ಸಲ್ಲಿಸಿ ಸಂಭ್ರಮಿಸುತ್ತಿರುವಾಗ ವಿಶ್ವಕಪ್ ಗೆದ್ದ ಮೈದಾನದ ಮೂಲೆಯಲ್ಲಿಯೇ ಸ್ಮೃತಿಯೊಂದಿಗೆ ಬಹಳ ಸಡಗರದಿಂದ ಸಂಭ್ರಮಿಸುತ್ತಿದ್ದ ಯುವಕನೊಬ್ಬ ಮಂಡಿಯೂರಿ ಕ್ರಿಕೆಟ್ ಪಿಚ್ಚಿನ ಮಧ್ಯದಲ್ಲಿಯೇ ಆಕೆಯ ಕ್ಕೆಗಳಿಗೆ ಉಂಗುರ ತೊಡಿಸಿದ್ದರ ಕಡೆ ಎಲ್ಲರ ಗಮನ ಹರಿದು ಆತ ಯಾರಿರಬಹುದು ಎಂದು ಎಲ್ಲರೂ ಯೋಚಿಸುತ್ತಿದ್ದರೆ, ಸ್ಮೃತಿ ಮತ್ತು ಆಕೆಯ ಕುಟುಂಬ ಮತ್ತು ಸಹ ಆಟಗಾರ್ತಿಯರಿಗೆ ಬಾಲಿವುಡ್ ಸಿನಿಮಾ ರಂಗದಲ್ಲಿ ಅದಾಗಲೇ ಸಂಗೀತ ನಿರ್ದೇಶಕನಾಗಿ ಹೆಸರುವಾಸಿಯಾದ ಪಲಾಶ್ ಮುಚ್ಛಲ್ 2019ರಿಂದಲೂ ಮಂಧಾನಾಳ ಜೊತೆ ಡೇಟಿಂಗ್ ಮಾಡುತ್ತಿದ್ದ ವಿಷಯ ತಿಳಿದಿತ್ತು.

ಎರಡೂ ಮನೆಯವರ ಒಪ್ಪಿಗೆಯ ಮೇರೆಗೆ, ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ಅವರ ವಿವಾಹವು ನವೆಂಬರ್ 23, 2025 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಿಗದಿಯಾಗಿತ್ತು. ಮದುವೆಯ ಎರಡು ದಿನಗಳ ಮುಂಚೆಯೇ ಬಂಧುಗಳಲ್ಲದೇ ಆಕೆಯ ಎಲ್ಲಾ ಸಹಾ ಆಟಗಾರ್ತಿಯರೂ, ಆಕೆಯ ಮದುವೆ ಮೆಹಂದಿಯಲ್ಲಿ ಭಾಗಿಗಳಾಗಿ ನೃತ್ಯ ಮಾಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೋಡಿ ಎಂದರೆ ಹೀಗಿರಬೇಕು ಎನ್ನುವಂತಿತ್ತು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ. ಆ ಜೋಡಿಗೆ ಯಾವ ಕೆಟ್ಟ ಕಣ್ಣುಗಳ ದೃಷ್ಟಿ ತಾಕಿತೋ ಏನೋ ಮದುವೆಯ ಹಿಂದಿನ ದಿನದಂದು ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರನ್ನು ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾದ ಪರಿಣಾಮ ಅವರ ಮುದುವೆ ಮುಂದೂಡಲಾಗಿದೆ ಎಂಬ ವಿಷಯ ತಿಳಿದು ಬಂದರೆ ಇದಾದ ಕೆಲವು ಗಂಟೆಗಳ ನಂತರ, ವೈರಲ್ ಲಕ್ಷಣಗಳು ಮತ್ತು ಆಮ್ಲೀಯತೆಗೆ ಸಂಬಂಧಿಸಿದ ತೊಂದರೆಗಳಿಗಾಗಿ ಪಲಾಶ್ ಅವರನ್ನೂ ಸಹಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ವಿಷಯ ತಿಳಿದಾಗ, ಅಬ್ಬಾ ದೇವರೆ ಸ್ಮೃತಿ ಅವರ ತಂದೆ ಮತ್ತು ಭಾವೀ ಪತಿ ಇಬ್ಬರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಬಹುತೇಕ ಕ್ರಿಕೆಟ್ ಪ್ರೇಮಿಗಳು ಪ್ರಾರ್ಥಿಸಿದ್ದಂತೂ ಸುಳ್ಳಲ್ಲಾ.

ಆದರೆ ಡಿಸೆಂಬರ್ 7 ರಂದು ಸ್ಮೃತಿಯವರ ಕುಟುಂಬವು ಪಕಾಶ್ ಜೊತೆಯ ಆಕೆಯ ಮದುವೆಯನ್ನು ವಿವಿಧ ಕಾರಣಗಳಿಂದಾಗಿ ಅಧಿಕೃತವಾಗಿ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದಾಗ, ದಾಲ್ ಮೇ ಕುಚ್ ಕಾಲಾ ಹೈ ಎಂದೇ ಜನರು ಮಾತನಾಡಿ ಕೊಂಡರೂ, ಸ್ಮೃತಿ ಮತ್ತು ಪಲಾಶ್ ಕುಟಂಬ ಇದಾವುದರ ಕುರಿತೂ ಸಾರ್ವಜನಿಕವಾಗಿ ಯಾವುದೇ ಮಾತುಗಳನ್ನು ಆಡದಿರುವ ಮೂಲಕ ಸನ್ನಡತೆಯನ್ನು ತೋರಿಸಿದ್ದದ್ದು ಅಭಿನಂದನಾರ್ಹವಾಗಿತ್ತು. ಸುಮಾರು ಆರು ವರ್ಷಗಳ ಕಾಲ ಪರಿಚಯವಿದ್ದ ಹುಡುಗನೊಂದಿಗಿನ ಮದುವೆ ಇದ್ದಕ್ಕಿದ್ದಂತೆಯೇ ವಿವಿಧ ಕಾರಣಗಳಿಂದಾಗಿ ರದ್ದಾದಾಗ, ಆ ಆಘಾತದಿಂದ ಹೊರ ಬರುವುದು ಎಂತಹವರಿಗೂ ಸಹಾ ಕಷ್ಟವಾಗುತ್ತದೆ. ಅದರಲ್ಲೂ ಕ್ರೀಡೆಯಲ್ಲಿರುವವರಿಗೆ ಆ ವಯಕ್ತಿಕ ವಿಚಾರಗಳು ಅವರ ಆಟದ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ.

ಹೀಗೆ ಮದುವೆ ಮುರಿದು ಬಿದ್ದ ಕೇವಲ ಎರಡು ತಿಂಗಳಲ್ಲೇ WPL ಆರಂಭವಾದಾಗ, ತನ್ನ ವಯಕ್ತಿಕ ಜೀವನದಲ್ಲಿ ಆದ ದುರ್ಘಟನೆಗಳಿಂದಾಗಿ ರಾಯಲ್ ಚಾಲೆಂಜರ್ಸ್ ತಂಡದ ನಾಯಕಿಯಾಗಿ ಈ ಬಾರಿ ಸ್ಮೃತಿಯ ಆಟ ಆಷ್ಟೇನೂ ಇರದು ಎಂದು ಭಾವಿಸುವವರೆಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಸತತವಾಗಿ ಐದು ಪಂದ್ಯಗಳನ್ನು ಗೆಲ್ಲವೂ ಮೂಲಕ ಮೊದಲ ಕ್ವಾಲಿಫಯರ್ ತಂಡವಾಗಿದ್ದಲ್ಲದೇ, ನಂತರ ಎರಡು ಸೋಲಿನ ನಂತರವೂ ತನ್ನ ವಯಕ್ತಿಕ ಆಟದಿಂದಾಗಿ ನೇರವಾಗಿ ತಂಡವನ್ನು ಫೈನಲ್ ತೆಗೆದುಕೊಂಡು ಹೋದಾಗ ಆಕೆಯ ಆತ್ಮಸ್ಥೈರ್ಯ ಮಾನಸಿಕ ಧೈರ್ಯದ ಬಗ್ಗೆ ಎಲ್ಲರಿಗೂ ಅಭಿಮಾನ ಮೂಡಿತ್ತು.

ಸತತವಾಗಿ 17 ವರ್ಷಗಳ ಕಾಲ ಐಪಿಲ್ ಪ್ರಶಸ್ತಿಯ ಬರದಿಂದ ಬಳಲಿದ್ದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೊಟ್ಟ ಮೊದಲಬಾರಿಗೆ ಐಪಿಲ್ ಕಪ್ ಗೆದ್ದು ಕೊಟ್ಟಿದ್ದ ಸ್ಮೃತಿ ೨೦೨೬ರಲ್ಲಿಯೂ ಅದನ್ನೇ ಪುನರಾವರ್ತಿಸ ಬಲ್ಲಳೇ ಎಂದು ಎಲ್ಲರ ಚಿತ್ತ ಆಕೆಯತ್ತವೇ ಇದ್ದು. ಅತ್ತ ಗುಜರಾತ್ ತಂಡವನ್ನು ಸೋಲಿಸಿದ ದೆಹಲಿ ತಂಡ ಸತತವಾಗಿ ನಾಲ್ಕನೇ ಬಾರಿಗೆ ಫೈನಲ್ ತಲುಪಿತ್ತು. ಫೈನಲ್ ಹಿಂದಿನ ದಿನವಿಡೀ ಭಾರಿ ಜ್ವರದಿಂದ ಸ್ಮೃತಿ ಬಳಲಿ ಆಕೆ ಫೈನಲ್ ಆಡುವುದೇ ಅನುಮಾನ ಎಂದೇ ಎಲ್ಲರೂ ಭಾವಿಸಿರುವಾ, ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದ ಸ್ಮೃತಿ ದೆಹಲಿ ಪೇರಿಸಿದ್ದ ೨೦೩ ರನ್ನುಗಳ ವಿರುದ್ಧವಾಗಿ ಕೇವಲ ೯ ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಉರುಳಿ ಒಂದು ರೀತಿಯ ಆತಂಕ ಏರ್ಪಟ್ಟಾಗಲೂ ಜಾರ್ಜಿಯಾ ಓಲಿಯೊಂದಿಗೆ ಆಕ್ರಾಮಕ ಆಟಕ್ಕಿಳಿದು ಆ ಜ್ವರದಲ್ಲೇ ಪಂದ್ಯ ಗೆಲ್ಲಲೂ ಇನ್ನೇನು ಕೆಲವೇ ರನ್ನುಗಲ ಅವಶ್ಯತೆ ಇದ್ದಾಗ ಆಕರ್ಷಕ 87ರನ್ನುಗಳನ್ನು ಗಳಿಸಿ ಅರ್ ಸಿ ಬಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಪಡೆಯಲು ಕಾರಣೀಭೂತಳಾಗಿದ್ದು ನಿಜಲ್ಲೂ ಅದ್ಭುತ ಮತ್ತು ಅನನ್ಯವೇ ಸರಿ.

ದೇಹಕ್ಕಾದ ಗಾಯ ಕೆಲವೇ ಸಮಯಲ್ಲಿ ಮಾಗಬಹುದು ಆದರೆ ಅದೇ ಮನಸ್ಸಿಗೆ ಗಾಯವಾದರೆ ಅದು ಮಾಯುವುದು ಬಹಳ ಕಷ್ಟ. ಹುಚ್ಚಿಯಂತೆ ಆರುವರ್ಷಗಳ ಕಾಲ ಪ್ರೀತಿಸಿದ್ದ ಹುಡುಗ ಜೊತೆಗಿದ್ದಾಗ ವಿಶ್ವಕಪ್ ಗೆಲ್ಲುವುದು ಸುಲಭ. ಆದರೆ ಅವನೊಂದಿಗೆ ಸಪ್ತಪದಿ ತುಳಿಯುವ ಕೆಲವೇ ಗಂಟೆಗಳ ಮುಂಚೆ ಮದುವೆಯೇ ರದ್ದಾಗಿ ಹೋದಾಗ ಆಕೆಯ ಮಾನಸಿಕ ಸ್ಥಿತಿ ಹೇಗಾಗಿರ ಬೇಕು? ಆರು ವರ್ಷಗಳ ಕಾಲ ಕಟ್ಟಿದ್ದ ಕನಸಿನ ಗೋಪುರ ಕೆಲವೇ ಕ್ಷಣಗಳಲ್ಲಿ ಆಕೆಯ ಕಣ್ಣ ಮುಂದೆಯೇ ಛಿದ್ರ ಛಿದ್ರವಾಗಿ ಅಪಾರವಾದ ಗಾಯವಾಗಿತ್ತು.

ಇವೆಲ್ಲದರ ನಡುವೆಯೂ ಅಲ್ಲಿದೇ ನಮ್ಮನೆ ಇಲ್ಲಿ ಬಂದೆ ಸುಮ್ಮನೇ ಎನ್ನುವಂತೆ ತನ್ನ ಮೊದಲ ಪ್ರೀತಿ ಏನಿದ್ದರೂ ಕ್ರಿಕೆಟ್ ಎಂದು ಪ್ರೀತಿಸಿದ ಹುಡುಗ ನಂಬಲಸಾಧ್ಯ ರೀತಿಯಲ್ಲಿ ಮೋಸ ಮಾಡಿದಕ್ಕೆ ಪ್ರತಿಯಾಗಿ WPL-2026 ಟೂರ್ನಿಯಲ್ಲಿ ಅತೀ ಹೆಚ್ಚು ರನ್ನುಗಳನ್ನು ಗಳಿಸಿದ್ದಲ್ಲದೇ ಎರಡು ಬಾರಿ ಕೂದಲೆಳೆಯಿಂದ ಶತಕವನ್ನು ತಪ್ಪಿಸಿಕೊಂಡರೂ, ತನ್ನ ವಯಕ್ತಿಕ ಸಾಧನೆಗಳಿಗಿಂತ ತನ್ನ ಆಟ ತಂಡಕ್ಕೆ ಜಯ ತಂದುಕೊಟ್ಟರೆ ಸಾಕು ಎಂದು 2026ನೇ ಸಾಲಿನ WPL ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕಿಯಾಗಿ ಎರಡನೇ ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟ ಆಕೆಯನ್ನು ಕೇವಲ ಸ್ಮೃತಿ ಎನ್ನುವುದಕ್ಕಿಂತಲೂ ಸಿಂಹಿಣಿ ಸ್ಮೃತಿ ಮಂದಾನ ಎಂದು ಕರೆದರೂ ಅತಿಶಯವಾಗದು ಅಲ್ವೇ?

ಒಬ್ಬ RCB ಪ್ರೇಮಿಯಾಗಿ ಅದರಲ್ಲೂ ಒಬ್ಬ ಕನ್ನಡಿಗನಾಗಿ ಪ್ರತೀ ಬಾರಿಯೂ ಈ ಸಲಾ ಕಪ್ ನಮ್ದೇ! ನಮ್ದೇ!! ಎಂದು ಹೇಳುತ್ತಲೇ ಇದ್ದಾಗ, 2024ರಲ್ಲಿ ಸ್ಮೃತಿ ಮಂದಾನ ಮೊದಲ ಬಾರಿಗೆ IPL ಪ್ರಶಸ್ತಿ ಸ್ವೀಕರಿಸುವಾಗ ಈ ಸಲ ಕಪ್ ನಮ್ದು! ಎಂದು ಅಪ್ಪಟ ಕನ್ನಡದಲ್ಲಿ ಹೇಳಿದ್ದಾಗ ಮನಸ್ಸು ತಂಬಿ ಬಂದಿತ್ತು. ಈಗ ೨೦೨೬ರಲ್ಲಿ ಎರಡನೇ ಬಾರಿ ಪ್ರಶಸ್ತಿ ಸ್ವೀಕರಿಸುವಾಗ ಈ ಸಲ ಕೂಡಾ ಕಪ್ ನಮ್ದೇ! ಎಂದಾಗ ಸ್ಮೃತಿ ಮಂದಾನಾ ನನ್ನ ಮನಸ್ಸು ಕರಗಿದ್ದಂತೂ ಸತ್ಯ. ಬಹುಶಃ ಅದೇ ಅನುಭವ ನಿಮಗೂ ಆಗಿರಬೇಕು ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ