ಆ್ಯಪಲ್ ಟೀ
ಸಾಮಗ್ರಿ : 2 ಮಾಗಿದ ಸೇಬಿನ ಹೋಳು, ಒಂದಿಷ್ಟು ಗ್ರೀನ್ ಟೀ ಬ್ಯಾಗ್ಸ್, 1 ತುಂಡು ಚಕ್ಕೆ, ರುಚಿಗೆ ತಕ್ಕಷ್ಟು ಸಕ್ಕರೆ, ಜೇನುತುಪ್ಪ, ನಿಂಬೆರಸ, ತುಸು ತುರಿದ ಶುಂಠಿ, ಅಗತ್ಯವಿದ್ದಷ್ಟು ನೀರು.
ವಿಧಾನ : ಮೊದಲು ಸೇಬಿನ ಸಿಪ್ಪೆ ಹೆರೆದು, ಹೋಳಾಗಿಸಿ ನೀಟಾಗಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಇದನ್ನು ಬಿಸಿ ನೀರಿಗೆ ಹಾಕಿ ಕುದಿಸಿರಿ. ಜೊತೆಗೆ ಗ್ರೀನ್ ಟೀ ಬ್ಯಾಗ್, ಚಕ್ಕೆ, ತುರಿದ ಶುಂಠಿ ಸಹ ಇರಲಿ. 10 ನಿಮಿಷ ಬಿಟ್ಟು ಕೆಳಗಿಸಿ, ನೀಟಾಗಿ ಸೋಸಿಕೊಳ್ಳಿ ಇದಕ್ಕೆ ಸಕ್ಕರೆ, ಜೇನು, ನಿಂಬೆ ರಸ ಬೆರೆಸಿ, ತಕ್ಷಣ ಸವಿಯಲು ಕೊಡಿ.

ವೆಡ್ಡಿಂಗ್ ವೆಲ್ ಕಂ ಡ್ರಿಂಕ್
ಸಾಮಗ್ರಿ : ತುಪ್ಪದಲ್ಲಿ ಹುರಿದು ಪುಡಿ ಮಾಡಿದ ಗೋಡಂಬಿ, ಬಾದಾಮಿ, ಪಿಸ್ತಾ, ದ್ರಾಕ್ಷಿ ತುಸು ತೇದ ಜಾಯಿಕಾಯಿ, ಜಾಪತ್ರೆ, ಕಾದಾರಿದ ಹಾಲು, ಹಾಲಲ್ಲಿ ನೆನೆಸಿದ ಕೇಸರಿ, ಕಾಳು ಮೆಣಸು, ಚಿಟಕಿ ಉಪ್ಪು, ಅರಿಶಿನ, ಏಲಕ್ಕಿಪುಡಿ, ಒಣಶುಂಠಿ ಪುಡಿ, ಒಣ ಗುಲಾಬಿ ದಳಗಳು, ಸಕ್ಕರೆ.
ವಿಧಾನ : ಮಿಕ್ಸಿಗೆ ಎಲ್ಲಾ ಡ್ರೈ ಫ್ರೂಟ್ಸ್, ಹಾಲಲ್ಲಿ ನೆನೆಸಿದ ದ್ರಾಕ್ಷಿ, ಮಸಾಲೆ, ಗುಲಾಬಿ ದಳಗಳೊಂದಿಗೆ ತುಸು ಹಾಲು ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ. ನಂತರ ಇದನ್ನು ಅಗತ್ಯವಿದ್ದಷ್ಟು ಕಾದಾರಿದ ಹಾಲಿಗೆ ಬೆರೆಸಿಕೊಂಡು ಸಕ್ಕರೆ ಜೊತೆ ಕದಡುತ್ತಾ ಹದನಾಗಿ ಕಾಯಿಸಿ. ಬಿಸಿ ಬಿಸಿಯಾಗಿ ಇದನ್ನು ಸವಿಯಲು ಕೊಡಿ.

ಮಿಕ್ಸ್ಡ್ ವೆಜ್ ಟೊಮೇಟೊ ಸೂಪ್
ಸಾಮಗ್ರಿ : ಮಾಗಿದ 5-6 ಹುಳಿ ಟೊಮೇಟೊ, ತುಸು ಹೆಚ್ಚಿದ ಬೀನ್ಸ್, ಕ್ಯಾರೆಟ್, ಸೌತೇಕಾಯಿ, ಬೀಟ್ ರೂಟ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಕೆಚಪ್, ಬ್ರೆಡ್ ಕ್ರೂಟಾನ್ಸ್, ತುಸು ತುಪ್ಪ.
ವಿಧಾನ : ಪ್ರೆಶರ್ ಕುಕರ್ ನಲ್ಲಿ ಮೊದಲು ತುಪ್ಪ ಬಿಸಿ ಮಾಡಿ ಬ್ರೆಡ್ ಚೂರು ಹಾಕಿ ಕರಿದು ತೆಗೆಯಿರಿ. ನಂತರ ಇದಕ್ಕೆ ಧಾರಾಳ ನೀರು ಬೆರೆಸಿ, ಸಣ್ಣಗೆ ಹೆಚ್ಚಿದ ತರಕಾರಿ ಹಾಕಿ ಹದನಾಗಿ ಬೇಯಿಸಿ. ಕೆಳಗಿಳಿಸಿ ಆರಿದ ನಂತರ ಇದನ್ನು ಸೋಸಿ, ವೆಜ್ ಸ್ಟಾಕ್ ಬೇರ್ಪಡಿಸಿ. ಅದನ್ನು ಒಲೆಯ ಮೇಲಿರಿಸಿ ಉಪ್ಪು, ಮೆಣಸು, ಕೆಚಪ್ ಬೆರೆಸಿ ಮಂದ ಉರಿಯಲ್ಲಿ ಹದನಾಗಿ ಕುದಿಸಿ. ಕೊನೆಯಲ್ಲಿ ಬ್ರೆಡ್ ಚೂರು ಬೆರೆಸಿ, ಬಿಸಿ ಬಿಸಿಯಾಗಿ ಊಟಕ್ಕೆ ಮೊದಲು ಸವಿಯಲು ಕೊಡಿ.

ಚಿಕನ್ ಸೂಪ್
ಸಾಮಗ್ರಿ : 3-4 ಪೀಸ್ ಬೋನ್ ಲೆಸ್ ಚಿಕನ್, ಹೆಚ್ಚಿದ 1 ಆಲೂ, ಅರ್ಧ ಸೌತೇಕಾಯಿ, 2 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.
ವಿಧಾನ : ಮೇಲಿನ ಎಲ್ಲಾ ಪದಾರ್ಥಗಳನ್ನು ಕುಕ್ಕರಿನಲ್ಲಿ ಬೇಯಿಸಿಕೊಂಡು ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಮಿಕ್ಸಿಗೆ ಹಾಕಿ ಬ್ಲೆಂಡ್ ಮಾಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಈ ಮಿಶ್ರಣ ಅದಕ್ಕೆ ಬೆರೆಸಿ, ಉಪ್ಪು ಮೆಣಸು ಸೇರಿಸಿ ಕುದಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಮ್ಯಾಕ್ರೋನಿ ಸಲಾಡ್
ಸಾಮಗ್ರಿ : 2 ಕಪ್ ಬೇಯಿಸಿದ ಮ್ಯಾಕ್ರೋನಿ, ಹೆಚ್ಚಿದ 2 ಈರುಳ್ಳಿ, 1 ಸಣ್ಣ ಸೌತೇಕಾಯಿ, ಅರ್ಧ ಅನಾನಸ್ ಹೋಳು, 1 ದೊಡ್ಡ ಕ್ಯಾರೆಟ್ ನ ಹೋಳು, 1-1 ಕೆಂಪು, ಹಸಿರು, ಹಳದಿ ಕ್ಯಾಪ್ಸಿಕಂ, 1 ಗಿಟುಕು ತೆಂಗಿನ ತುರಿ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಡ್ರೆಸ್ಸಿಂಗ್ ಗಾಗಿ 2-3 ಚಮಚ ವಿನಿಗರ್, ಅರ್ಧರ್ಧ ಚಮಚ ಮಿಕ್ಡ್ಸ್ ಹರ್ಬ್ಸ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ-ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು-ಮೆಣಸು, ನಿಂಬೆರಸ, ತುಸು ಆಲಿಲ್ ಆಯಿಲ್.
ವಿಧಾನ : ಬೆಂದ ಮ್ಯಾಕ್ರೋನಿಯನ್ನು ಸೋಸಿ ಬೇರ್ಪಡಿಸಿ ಒಂದು ಬೇಸನ್ನಿನಲ್ಲಿ ಹರಡಿರಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ, ನೀಟಾಗಿ ಕಲಸಿ, 1 ಗಂಟೆಕಾಲ ಫ್ರಿಜ್ ನಲ್ಲಿರಿಸಿ ನಂತರ ಊಟದ ಜೊತೆ ಸವಿಯಲು ಕೊಡಿ.

ಚಿಕನ್ ಬಿರಿಯಾನಿ
ಸಾಮಗ್ರಿ : 1 ಕಿಲೋ ಬೋನ್ ಲೆಸ್ ಚಿಕನ್ ಪೀಸ್, ಅರ್ಧ ಸೌಟು ಆಲಿವ್ ಎಣ್ಣೆ, ಒಂದಿಷ್ಟು ಲವಂಗ, ಚಕ್ಕೆ, ಏಲಕ್ಕಿ, ಪಲಾವ್ ಎಲೆ, ಕಾಳುಮೆಣಸು, ಮೊಗ್ಗು (ಒಟ್ಟಾರೆ 1 ದೊಡ್ಡ ಚಮಚ, ಇಡಿಯಾಗಿರಲಿ). 4-5 ಟೊಮೇಟೊಗಳ ಪ್ಯೂರಿ, ತುಸು ಅರಿಶಿನ, ಜೀರಿಗೆ, ಉಪ್ಪು, ಖಾರ, ಗರಂಮಸಾಲ, ಚಾಟ್ ಮಸಾಲ, ಅರ್ಧ ಕಿಲೋ ಬಾಸುಮತಿ ಅಕ್ಕಿ, ತುಪ್ಪ.
ವಿಧಾನ : ಮೊದಲು ಪ್ರೆಷರ್ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹಿಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಇಡಿಯಾದ ಮಸಾಲೆ ಪದಾರ್ಥ ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ಟೊಮೇಟೊ ಪ್ಯೂರಿ ಬೆರೆಸಿ 2-3 ನಿಮಿಷ ಕೆದಕಬೇಕು. ಆಮೇಲೆ ಚಿಕನ್ ಪೀಸ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಜೊತೆಗೆ ತುಸು ನೀರು ಬೆರೆಸಿ, ಮುಚ್ಚಳ ಮುಚ್ಚಿರಿಸಿ ಬೇಯಲು ಬಿಡಿ. ನಂತರ ಅದಕ್ಕೆ ಉಪ್ಪು, ಖಾರ, ಅರಿಶಿನ ಇತ್ಯಾದಿ ಎಲ್ಲಾ ಮಸಾಲೆ ಹಾಕಿ ಕೈಯಾಡಿಸಿ. ಆಮೇಲೆ ತೊಳೆದ ಅಕ್ಕಿ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಮಿಶ್ರಣ ಉದುರಾಗಿ ಬರುವಷ್ಟು ನೀರು ಬೆರೆಸಿ, 3 ಸೀಟಿ ವಿಷಲ್ ಕೂಗಿಸಿ. ಕೆಳಗಿಳಿಸಿ ತಣಿದ ನಂತರ, ಧಾರಾಳ ತುಪ್ಪ ಹಾಕಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.

ವೆಜ್ ಹಾಂಡಿ ಬಿರಿಯಾನಿ
ಸಾಮಗ್ರಿ : 2 ಕಪ್ ಬಾಸುಮತಿ ಅಕ್ಕಿ, ಒಂದಿಷ್ಟು ಹೆಚ್ಚಿದ ಬೀನ್ಸ್, ಆಲೂ, 3 ಬಗೆಯ ಕ್ಯಾಪ್ಸಿಕಂ, ಹೂಕೋಸು, ಹಸಿ ಬಟಾಣಿ (ತಲಾ ಅರ್ಧರ್ಧ ಕಪ್), 2-3 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 1 ಕಪ್ ಹುಳಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು, ಅರಿಶಿನ, ನಿಂಬೆರಸ, ಅರ್ಧ ಸೌಟು ತುಪ್ಪ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್), ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ.
ವಿಧಾನ : ಹೂಕೋಸು, ಬಟಾಣಿ, ಬೀನ್ಸ್, ಆಲೂಗಳಿಗೆ ತುಸು ಉಪ್ಪು ಹಾಕಿ ಬೇಯಿಸಿ ಬೇರೆ ಇಡಿ. ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಲ್ಲಿ ನೆನೆ ಹಾಕಿಡಿ. ನಂತರ ನೀರು ಬಸಿದು, ಇದಕ್ಕೆ ಉಪ್ಪು ಬೆರೆಸಿ, ದೊಡ್ಡ ತಟ್ಟೆಯಲ್ಲಿ ಹರಡಿ ಹಾಗೇ ಇಡಿ. ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಹೊಂಬಣ್ಣಕ್ಕೆ ತಿರುಗಿದ ನಂತರ ಇದನ್ನು ಹೊರ ತೆಗೆದು ಬೇರೆಯಾಗಿಡಿ. ನಂತರ ಈ ಕುಕ್ಕರ್ ನಲ್ಲಿ 6 ಕಪ್ ನೀರು ಬಿಸಿ ಮಾಡಿ. ಕುದಿ ಬಂದಾಗ ಇದಕ್ಕೆ ಚಕ್ಕೆಲವಂಗ ಇತ್ಯಾದಿಗಳನ್ನೆಲ್ಲಾ ಹಾಕಿ ಮರಳಿಸಿ. ನಂತರ ಇದಕ್ಕೆ ಅಕ್ಕಿ ಬೆರೆಸಿ 2 ಸೀಟಿ ಬರುವಂತೆ ಬೇಯಿಸಿ. ತಣಿದ ನಂತರ ದೊಡ್ಡ ತಟ್ಟೆಗೆ ಹರಡಿಕೊಳ್ಳಿ. ಅದೇ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಗಳನ್ನು ಪೇಸ್ಟ್ ಮಾಡಿಕೊಂಡು ತುಪ್ಪಕ್ಕೆ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಇದಕ್ಕೆ ಅರಿಶಿನ, ಖಾರ, ಗರಂ ಮಸಾಲೆ, ಚಾಟ್ ಮಸಾಲ ಇತ್ಯಾದಿ ಹಾಕಿ ಕೆದಕಬೇಕು. ನಂತರ ಬೆಂದ ತರಕಾರಿ ಹಾಕಿ ಬಾಡಿಸಿ. ನಂತರ ಇದಕ್ಕೆ ಮೊಸರು ಬೆರೆಸಿ ಕೈಯಾಡಿಸಿ. 2-3 ನಿಮಿಷ ಕೆದಕಿ ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಅಗಲವಾದ ಬಾಣಲೆಯನ್ನು ಒಲೆ ಮೇಲಿರಿಸಿ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಮೊದಲ ಪದರವಾಗಿ ಸ್ವಲ್ಪ ಅನ್ನ ಹರಡಿರಿ. ಅದರ ಮೇಲೆ ಬಾಡಿಸಿದ ತುಸು ತರಕಾರಿ ಬರಲಿ. ನಂತರ ಇದರ ಮೇಲೆ ಮೊದಲು ಬಾಡಿಸಿಕೊಂಡ ತುಸು ಈರುಳ್ಳಿ, ಕ್ಯಾಪ್ಸಿಕಂ ಇತ್ಯಾದಿ ಸಹ ಬರಲಿ. ಇದರ ಮೇಲೆ ನಿಂಬೆಹಣ್ಣು ಹಿಂಡಿಕೊಳ್ಳಿ. ಈ ರೀತಿ ಒಂದರ ಮೇಲೊಂದು ಪದರವಾಗಿ ಇವುಗಳು ರಿಪೀಟ್ ಆಗಲಿ. ನಂತರ ಇದಕ್ಕೆ ಮುಚ್ಚಳ ಮುಚ್ಚಿರಿಸಿ, ಅದು ಹಬೆ ಬಿಡದಂತೆ ಚಪಾತಿ ಹಿಟ್ಟನ್ನು ಸುತ್ತಲೂ ಅಂಟಿಸಿಬಿಡಿ. ಹೀಗೆ 15-20 ನಿಮಿಷ ಇದು ಸಂಪೂರ್ಣ ಮಂದ ಉರಿಯಲ್ಲಿ ಹೀಗೆ ಒಲೆ ಮೇಲಿರಲಿ. ನಂತರ ಕೆಳಗಿಳಿಸಿ, ಎಲ್ಲವನ್ನೂ ಚೆನ್ನಾಗಿ ಕೆದಕಿ, ಬೆರೆಸಿಕೊಂಡು ನಂತರ ಸಲಾಡ್, ರಾಯ್ತಾ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಮಲಾಯಿ ಕೋಫ್ತಾ
ಸಾಮಗ್ರಿ : 4 ಬೆಂದ ಆಲೂ, 250 ಗ್ರಾಂ ಪನೀರ್, 50 ಗ್ರಾಂ ಮೈದಾ, 3-4 ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಫ್ರೆಶ್ ಕ್ರೀಂ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಅರಿಶಿನ, ಕಿಚನ್ ಕಿಂಗ್ ಮಸಾಲ, ಕಸೂರಿಮೇಥಿ, ಸಕ್ಕರೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು-ಪುದೀನಾ, ಕರಿಯಲು ಎಣ್ಣೆ.
ವಿಧಾನ : ಬೆಂದ ಆಲೂ ಹೋಳನ್ನು 4-5 ಗಂಟೆ ಕಾಲ ಫ್ರಿಜ್ ನಲ್ಲಿ ಇಡಬೇಕು. ನಂತರ ಇದನ್ನು ಹೊರ ತೆಗೆದು ತುರಿದ ಪನೀರ್, ಮೈದಾ, ತುಸು ಉಪ್ಪು, ಖಾರ ಹಾಕಿ ಚೆನ್ನಾಗಿ ಮಸೆಯಿರಿ. ಇದು ಬಹಳ ಗಟ್ಟಿ ಅಥವಾ ಮೃದು ಆಗಿರಬಾರದು. ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಪುದೀನಾ, ತುಪ್ಪದಲ್ಲಿ ಹುರಿದ ಗೋಡಂಬಿ-ದ್ರಾಕ್ಷಿಗಳನ್ನು ಬೆರೆಸಿ, ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಇದೀಗ ಕೋಫ್ತಾ ರೆಡಿ!
ನಂತರ ಗ್ರೇವಿಗಾಗಿ 2 ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್, ತುಸು ಗೋಡಂಬಿ, ಹಾಲು ಸೇರಿಸಿ ನೀಟಾಗಿ ಪೇಸ್ಟ್ ಮಾಡಿ. ಕಸೂರಿಮೇಥಿ ಬಿಟ್ಟು ಉಳಿದೆಲ್ಲ ಮಸಾಲೆ ಬೆರೆಸಿ ಅದನ್ನು ಬೇರೆಯಾಗಿ ಪೇಸ್ಟ್ ಮಾಡಿಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಈ ಎರಡೂ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಅರ್ಧ ಕಪ್ ನೀರು ಬೆರೆಸಿ ಕುದಿಸಬೇಕು. ಗ್ರೇವಿ ಗಟ್ಟಿಯಾಗ ತೊಡಗಿದಂತೆ ಅದಕ್ಕೆ ಫ್ರೆಶ್ ಕ್ರೀಂ ಬೆರೆಸಿ ಕೆದಕಬೇಕು. ನಂತರ ತುಸು ಸಕ್ಕರೆ, ಕಸೂರಿಮೇಥಿ ಸಹ ಬೆರೆಸಿಕೊಳ್ಳಿ. 1-2 ಕುದಿ ಬಂದಾಗ, ಕರಿದ ಕೋಫ್ತಾಗಳನ್ನು ಇದರಲ್ಲಿ ತೇಲಿಬಿಟ್ಟು, ಒಡೆಯದಂತೆ ಕೆದಕಬೇಕು. ಆಮೇಲೆ ಇದನ್ನು ಬಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸವಿಯಿರಿ.

ಮಸಾಲ ಸೋಯಾ ಹಾಂಡಿ
ಸಾಮಗ್ರಿ : 2 ಕಪ್ ಸೋಯಾ ಚಂಕ್ಸ್ (ನೀರಿನಲ್ಲಿ ನೆನೆ ಹಾಕಿಡಿ), 1 ಕಪ್ ಬ್ರೆಡ್ ಕ್ರಂಬ್ಸ್, ಒಂದಿಷ್ಟು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಈರುಳ್ಳಿ, 2 ಚಮಚ ಕಾರ್ನ್ ಫ್ಲೋರ್, ಕರಿಯಲು ಎಣ್ಣೆ, 100 ಗ್ರಾಂ ಹುರಿದ ಇಡೀ ಮಸಾಲೆ, ಜೊತೆಗೆ ತುಸು ಧನಿಯಾ ಪುಡಿ, ಜೀರಿಗೆ ಪುಡಿ, ಸಕ್ಕರೆ, ಹುಣಿಸೇ ಕಿವುಚಿದ ರಸ, ಉಪ್ಪು, ಹೆಚ್ಚಿದ ಕೊ.ಸೊಪ್ಪು.
ವಿಧಾನ : ನೆನೆದ ಸೋಯಾ ಚಂಕ್ಸ್ ನ್ನು ಸಣ್ಣದಾಗಿ ಹೆಚ್ಚಿಡಿ. ಇದಕ್ಕೆ ಬ್ರೆಡ್ ಕ್ರಂಬ್ಸ್, ಶುಂಠಿ, ಬೆಳ್ಳುಳ್ಳಿ, ತುಸು ಉಪ್ಪು, ಖಾರ, ಚಾಟ್ ಮಸಾಲ, ಹಸಿ ಮೆಣಸು ಎಲ್ಲಾ ಸೇರಿಸಿ ಮಿಕ್ಸಿಯಲ್ಲಿ ನೀರಿಲ್ಲದೆ ರುಬ್ಬಿಕೊಳ್ಳಿ. ಇದನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ಕಾರ್ನ್ ಫ್ಲೋರ್ ಬೆರೆಸಿಕೊಳ್ಳಿ. ನಂತರ ಇದರಿಂದ ನಿಂಬೆ ಗಾತ್ರದ ಸಣ್ಣ ಉಂಡೆ ಮಾಡಿ, ಓವಲ್ ಶೇಪ್ ನಲ್ಲಿ ಐಸ್ ಕ್ರೀಂ ಕಡ್ಡಿಗಳಿಗೆ ಸಿಗಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದನ್ನು ಬಿಳಿ ಕಾಗದದ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ. ನಂತರ ಅದೇ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಇಡೀ ಮಸಾಲೆ ಪದಾರ್ಥ ಹಾಕಿ ಹುರಿಯಿರಿ. ನಂತರ ಬಾಕಿ ಎಲ್ಲಾ ಮಸಾಲೆ ಸೇರಿಸಿ. ಸಕ್ಕರೆ, ಹುಣಿಸೇ ರಸ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ 1 ಕಪ್ ನೀರು ಬೆರೆಸಿ, ಉಪ್ಪು ಹಾಕಿ ಕುದಿಸಿರಿ. ನಂತರ ಗ್ರೇವಿ ಗಟ್ಟಿಯಾಗ ತೊಡಗಿದಂತೆ ಇದಕ್ಕೆ ಸೋಯಾ ಚಾಪ್ಸ್ ಹಾಕಿ, ಸ್ವಲ್ಪ ಹೊತ್ತು ಬೇಯಿಸಿ. ನಂತರ ಇದಕ್ಕೆ ಹೆಚ್ಚಿದ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಬಿಸಿ ಬಿಸಿಯಾಗಿ ಚಪಾತಿ, ರೊಟ್ಟಿ ಜೊತೆ ಸವಿಯಿರಿ.

ದಮ್ ಆಲೂ
ಸಾಮಗ್ರಿ : 1-5 ಸಣ್ಣ ಗಾತ್ರದ ಆಲೂ (ಬೇಯಿಸಿ, ಸಿಪ್ಪೆ ಸುಲಿದಿಡಿ), 2-3 ಈರುಳ್ಳಿ, 1 ಕಪ್ ಗಟ್ಟಿ ಹುಳಿ ಮೊಸರು, ತುಸು ಪಲಾವ್ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತುಸು ಕೊತ್ತಂಬರಿ ಬೀಜ, ಜೀರಿಗೆ, ಏಲಕ್ಕಿ, ಚಕ್ಕೆ, ಲವಂಗ, ಮೊಗ್ಗು, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ ಅರ್ಧ ಕಪ್), ಕಸೂರಿಮೇಥಿ, ಅರ್ಧ ಸೌಟು ಆಲಿವ್ ಎಣ್ಣೆ, ತುಸು ಹೆಚ್ಚಿ ಕೊ.ಸೊಪ್ಪು-ಪುದೀನಾ.
ವಿಧಾನ : ಸಿಪ್ಪೆ ಸುಲಿದ ಆಲೂಗಳಿಗೆ ಫೋರ್ಕಿನಿಂದ ಅಲ್ಲಲ್ಲಿ ಚುಚ್ಚಿ ರಂಧ್ರ ಮಾಡಿ. ನಂತರ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಇನ್ನು ಚೆನ್ನಾಗಿ ಶ್ಯಾಲೋ ಫ್ರೈ ಮಾಡಿ ಬೇರೆಯಾಗಿಡಿ. ಇಡಿಯಾದ ಮಸಾಲೆಗೆ ಡ್ರೈ ಫ್ರೂಟ್ಸ್ ಬೆರೆಸಿ ಬೇರೆಯಾಗಿಡಿ. ಅದೇ ಬಾಣಲೆಯಲ್ಲಿ ಉಳಿದ ಎಣ್ಣೆ ಬಿಸಿ ಮಾಡಿ, ಪಲಾವ್ ಎಲೆ ಹಾಕಿ ಚಟಪಟಾಯಿಸಿ. ಆಮೇಲೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕೆದಕಬೇಕು. ನಂತರ ಗೋಡಂಬಿ ಮಸಾಲೆ ಹಾಕಿ ಕೆದಕಬೇಕು. ನಂತರ ಮೊಸರು ಬೆರೆಸಿ ಕೈಯಾಡಿಸಿ. ನಂತರ ಅರಿಶಿನ, ಉಳಿದ ಮಸಾಲೆ ಪುಡಿ ಬೆರೆಸಿಕೊಳ್ಳಿ. ಇದನ್ನು 2-3 ನಿಮಿಷ ಸತತ ಕೈಯಾಡಿಸಿ. ನಂತರ ಇದಕ್ಕೆ ಆಲೂ, ಕಸೂರಿಮೇಥಿ, ಉಪ್ಪು ಸೇರಿಸಿ, ಮಂದ ಉರಿಯಲ್ಲಿ 2 ನಿಮಿಷ ಫ್ರೈ ಮಾಡಿ. ನಂತರ ಅರ್ಧ ಕಪ್ ನೀರು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಮಾಡಿ. ನಂತರ ಕೆಳಗಿಳಿಸಿ ಕೊ.ಸೊಪ್ಪು, ಪುದೀನಾ ಉದುರಿಸಿ ಬಿಸಿ ಬಿಸಿಯಾಗಿ, ಸಲಾಡ್ ಜೊತೆ ಚಪಾತಿ, ಪೂರಿ ಸಮೇತ ಸವಿಯಿರಿ.





