ಕಥೆ ಭೋಜರಾಜ ಸೊಪ್ಪಿಮಠ

ತಮ್ಮ ಮಾತನ್ನು ಆಧುನಿಕ ಸೊಸೆ ಪುರಸ್ಕರಿಸುವಳೋ ಇಲ್ಲವೋ ಎಂಬ ಗೊಂದಲ್ಲಿದ್ದ ಶಾಂತಾ, ಮನೆಯಲ್ಲಿ ಅಶಾಂತಿ ಮೂಡಬಾರದೆಂದು ಬಯಸುತ್ತಿದ್ದರು. ಇದನ್ನು ಸೊಸೆ ಸ್ವೀಕರಿಸಿದ್ದು ಹೇಗೆ……?

ಮಗ ಕಿರಣನಿಗೆ ಸರಿಯಾದ ವಯಸ್ಸಿನಲ್ಲಿ ಮದುವೆ ಮಾಡಬೇಕೆಂದು ನಿರ್ಧರಿಸಿದ್ದ ಶಾಂತಾ ಸಂದರ್ಭ ಸಿಕ್ಕಾಗೆಲ್ಲ ಅವನ ಮದುವೆಯ ವಿಷಯವಾಗಿ ಮಾತನಾಡುತ್ತಿದ್ದರು. ಅವರು ಹೇಳುವ ಮಾತುಗಳನ್ನು ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದ ಕಿರಣ್‌, `ಇರಲಿ ತಡೆಯಮ್ಮ, ಈಗೇನು ಅವಸರ,’ ಎಂದೆಲ್ಲ ಹೇಳುತ್ತಾ ಮುಂದೂಡುತ್ತಲೇ ಇದ್ದ.

ಮೊದಲಿನ ಹಾಗೆ ತನಗೆ ಮನೆಗೆಲಸ ನಿಭಾಯಿಸಲು ಕಷ್ಟವಾಗುತ್ತಿದೆ. ಅಲ್ಲದೆ, ಈಗ ನಿನಗೆ ಉದ್ಯೋಗ ಇದೆ. ಸರಿಯಾದ ವಯಸ್ಸು ಕೂಡ ಆಗಿದೆ. ಮುಂದಕ್ಕೆ ಹಾಕುವಂತಹ ಯಾವುದೇ ಕಾರಣಗಳು ಇಲ್ಲ, ಎಂದು ತಿಳಿಸಿ ಹೇಳಿದರೆ, `ಕೆಲಸ ಜಾಸ್ತಿಯಾದರೆ ಯಾರನ್ನಾದರೂ ಕೆಲಸದವರನ್ನು ಹುಡುಕೋಣ ಬಿಡು,’ ಎಂದು ಹೇಳಿ ಅಲ್ಲಿಗೆ ಮಾತು ಮುಗಿಸುತ್ತಿದ್ದ.

ಇವರು ಈಗಿನ ಕಾಲದ ಹುಡುಗರು. ಅವರ ಮನಸ್ಸಿನಲ್ಲಿ ಏನಿರುತ್ತದೋ ಆ ರೀತಿನೇ ನಿರ್ಧಾರ ತಗೋತಾರೆ. ಇನ್ನು ಹೆಚ್ಚು ಒತ್ತಾಯಿಸುವುದು ಬೇಡ ಎಂದು ದೃಢ ನಿರ್ಧಾರ ತೆಗೆದುಕೊಂಡಿದ್ದರು ಶಾಂತಾ.

ಅದೊಂದು ದಿನ ಊಟಕ್ಕೆ ಕುಳಿತಾಗ ಕಿರಣ್‌, “ಅಮ್ಮಾ…. ನಾನೊಂದು ಹುಡುಗಿಯನ್ನು ನೋಡಿದ್ದೀನಿ. ಅವಳು ಈ ಮನೆಗೆ ಸರಿ ಹೊಂದುತ್ತಾಳೆ ಅಂತ ನನ್ನ ಅನಿಸಿಕೆ. ಅವಳನ್ನೇ ಮದುವೆಯಾಗಬೇಕು ಎಂದುಕೊಂಡಿದ್ದೇನೆ,” ಎನ್ನುತ್ತಾ ಮೊಬೈಲ್ ‌ನಲ್ಲಿ ಆ ಹುಡುಗಿಯ ಫೋಟೋ ತೋರಿಸಿದ.

ಹುಡುಗಿಯೇನೋ ನೋಡಲು ಲಕ್ಷಣವಾಗಿದ್ದಳು. ಆದರೆ ಯಾವ ಜಾತಿ, ಗುಣ, ಸ್ವಭಾವಗಳೇನು ಅಂತ ಕೇಳಿದರೆ ಅವನ ಮನಸ್ಸಿಗೆ ನೋವಾಗಬಹುದೆಂದು ಅರಿತ ಶಾಂತಾ ಅವನನ್ನು ಕೇಳುವ ಪ್ರಯತ್ನ ಮಾಡದೆ ಚೆನ್ನಾಗಿದ್ದಾಳೆ ಎಂದಷ್ಟೇ ಹೇಳಿದಳು. ಈಗಾಗಲೇ ಅವನು ಅವಳನ್ನೇ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿಯಾದ ಮೇಲೆ ತಾನು ಯಾವುದೇ ರೀತಿಯಿಂದ ಮಾತನಾಡಿದರೂ ಅದು ಅವನಿಗೆ ಇಷ್ಟವಾಗದೇ ಹೋಗಬಹುದು. ಒಟ್ಟಿನಲ್ಲಿ ಜೀವನ ನಡೆಸುವವನು ಅವನು, ಅವನ ಇಷ್ಟವೇ ತನ್ನಿಷ್ಟ ಎಂದುಕೊಂಡು ಸುಮ್ಮನಾಗಿದ್ದರು.

ಸ್ವಲ್ಪ ದಿನಗಳ ನಂತರದಲ್ಲಿ ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಅವಳೊಂದಿಗೆ ಮಾತನಾಡುತ್ತಿದ್ದಾಗ ಒಂದು ಸ್ಪಷ್ಟತೆ ಸಿಕ್ಕಿತು. ಹುಡುಗಿಯ ಮನೆಯವರು ಆರ್ಥಿಕವಾಗಿ ತುಂಬಾ ಶ್ರೀಮಂತರೇನೂ ಅಲ್ಲ. ಮಧ್ಯಮ ವರ್ಗದವರು. ಹಾಗಂತ ಯಾವುದಕ್ಕೂ ಕೊರತೆ ಇರದಂತೆ ಜೀವನ ನಡೆದುಕೊಂಡು ಬಂದಿತ್ತು. ಆದರೆ ಅವಳು ಈಗಿನ ಕಾಲದ ಹುಡುಗಿಯಾಗಿದ್ದರಿಂದ ಅದಕ್ಕೆ ತಕ್ಕಂತೆ ವೇಷಭೂಷಣ ಧರಿಸುತ್ತಿದ್ದಳು.

ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರಲ್ಲ ಎಂಬ ಸಮಾಧಾನ ಶಾಂತಾರಲ್ಲಿ ಮೂಡಿತ್ತು. ಕೊನೆಗೂ ಎಲ್ಲರಿಗೂ ಒಮ್ಮತವಾದ ಒಂದು ದಿನದಂದು ಮದುವೆ ಮಾಡಿ ಮುಗಿಸಲಾಯಿತು.

ತಾಯಿಗೆ ಸಹಾಯವಾಗಲಿ ಎಂದು ಕೆಲಸದವರ ವಿಷಯ ಪ್ರಸ್ತಾಪಿಸಿದ್ದ ಕಿರಣ್‌, ಈಗ ಹೆಂಡತಿ ಬರುತ್ತಲೇ ಎಲ್ಲದಕ್ಕೂ ಕೆಲಸದವರನ್ನು ನೇಮಿಸಿಕೊಂಡ. ಮದುವೆಯಾದ ನಂತರ ಅವನು ತುಂಬಾ ಜಾಣತನದಿಂದ ವರ್ತಿಸುತ್ತಿದ್ದ. ಏಕೆಂದರೆ ತಾಯಿ ಒಂದು ಕೆಲಸ ಮಾಡಿದರೆ, ಹೆಂಡತಿ ವೈಷ್ಣವಿ ಒಂದೆರಡು ಕೆಲಸವಾದರೂ ಮಾಡಬೇಕಾಗುತ್ತದೆ ಎಂಬ ಕಾರಣದಿಂದಲೇ ಎಲ್ಲದಕ್ಕೂ ಕೆಲಸದವರನ್ನು ನೇಮಿಸಿದ್ದ.

ಬೆಳಗ್ಗೆ ಏಳುತ್ತಲೇ ಉಪಾಹಾರ ತಯಾರಾಗಿರುತ್ತಿತ್ತು. ಕಿರಣ್‌ ಸ್ನಾನ ಮುಗಿಸಿ ಬಂದಾಗ ಉಪಾಹಾರ ಮುಗಿಸಿ ಕೆಲಸಕ್ಕೆ ಹೊರಟು ಹೋಗುತ್ತಿದ್ದ. ಮನೆಯಲ್ಲಿರುತ್ತಿದ್ದ ವೈಷ್ಣವಿ ಟಿವಿ, ಮೊಬೈಲ್ ಎಂದೆಲ್ಲ ನೋಡುತ್ತಿದ್ದಳು. ಬೇಜಾರಾದರೆ ಹಗಲಿನಲ್ಲಿಯೇ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತಾ ಇಲ್ಲವೇ ತನಗೆ ಆಪ್ತರಾದವರ ಜೊತೆ ಮಾತನಾಡುತ್ತಾ ಸಮಯ ಕಳೆಯುತ್ತಿದ್ದಳು.

ಆದರೆ ಶಾಂತಾರ ಜೀವನ ಶೈಲಿಯೇ ಬದಲಾಯಿತು. ಮೊದಲಿನಿಂದಲೂ ತುಂಬಾ ಚಟುವಟಿಕೆಯಿಂದ ಇದ್ದ ಹೆಂಗಸಾಕೆ. ಮನೆಯಲ್ಲಿ ಏನಾದರೂ ಒಂದು ಕೆಲಸ ಮಾಡುತ್ತಿರಬೇಕು. ಹಾಗಿದ್ದರೆ ಆಕೆಗೆ ಹೊತ್ತು ಹೋಗುತಿತ್ತು. ಟಿವಿ ನೋಡುವ ಹುಚ್ಚು ಇರಲಿಲ್ಲ. ಕೆಲಸ ಮಾಡುತ್ತಿದ್ದರೆ ದೇಹಕ್ಕೆ ಶ್ರಮವಾದಂತಾಗಿ ಊಟ ಮಾಡಿದ ಆಹಾರ ಪಚನವಾಗುತ್ತದೆ. ಅಲ್ಲದೆ, ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ ಎನ್ನುವ ತತ್ವದವರು. ಆದರೆ ಈಗಿರುವ ಪರಿಸ್ಥಿತಿಯೇ ಬೇರೆ. ಮನೆಯಲ್ಲಿ ಮಾಡಲು ಯಾವುದೇ ಕೆಲಸ ಇಲ್ಲ. ಎಲ್ಲದಕ್ಕೂ ಕೆಲಸಗಾರರು. ಆದರೂ ಬಿಡದೆ ಧಾನ್ಯಗಳನ್ನು ಹೊರ ತೆಗೆದು ಸ್ವಚ್ಛಗೊಳಿಸುವುದು, ದೇವರ ಪೂಜೆಗಾಗಿ ದೀಪದ ಬತ್ತಿಗಳನ್ನು ತಯಾರಿಸುವುದು, ಸೋಫಾ, ಕುರ್ಚಿಗಳನ್ನು ಒರೆಸುವುದು ಮುಂತಾದ ಕೆಲಸಗಳನ್ನು ಹುಡುಕಿಕೊಂಡು ಮಾಡುತ್ತಿದ್ದರು. ವೈಷ್ಣವಿ ಇದನ್ನು ಕಂಡೂ ಕಾಣದಂತೆ ಸುಮ್ಮನೆ ಇದ್ದುಬಿಡುತ್ತಿದ್ದಳು. ಹಾಗಂತ ಶಾಂತಾ ಸೊಸೆಯ ಸೋಮಾರಿತನನ್ನು ಎತ್ತಿ ತೋರಿಸಲು ಪ್ರಯತ್ನಿಸಲಿಲ್ಲ.

ಒಂದು ದಿನ ವೈಷ್ಣವಿ, “ಮನೆಯಲ್ಲಿನ ಕೆಲಸ ಮಾಡಲು ಕೆಲಸಗಾರರು ಇದ್ದಾಗಲೂ ನೀವೇಕಮ್ಮ ಕೆಲಸ ಮಾಡಲು ಪ್ರಯತ್ನಿಸುತ್ತಿರುವಿರಿ?” ಎಂದು ಅತ್ತೆಯನ್ನು ಕೇಳಿದಳು. ಅದರಲ್ಲಿ ಅಪೇಕ್ಷೆ ಇರಲಿಲ್ಲ, ಬದಲಾಗಿ ಕಾಳಜಿ ಇತ್ತು.

“ಇಲ್ಲಮ್ಮ ನನಗೆ ಬೇಜಾರಾಗುತ್ತೆ. ನೀವೇನೋ ಓದಿದವರು. ಯಾವುದಾದರೂ ಒಂದು ಕೆಲಸದಿಂದ ಸಮಯ ಕಳೆಯುತ್ತೀರಿ. ಆದರೆ ನನಗೆ ದಿನ ಕೆಲಸ ಮಾಡಿಯೇ ರೂಢಿ. ಹಾಗಾಗಿ ಅದರಲ್ಲಿ ತೊಡಗಿಕೊಳ್ಳುತ್ತೇನೆ ಅಷ್ಟೆ. ಅದೂ ಅಲ್ಲದೆ, ನನಗೆ ಯಾವ ಕೆಲಸ ಮಾಡಲೂ ಸಾಧ್ಯವಾಗುತ್ತದೋ ಅಂತಹ ಕೆಲಸ ಮಾತ್ರ ಮಾಡ್ತೀನಿ,” ಎಂದು ಶಾಂತಾ ಉತ್ತರಿಸಿದಾಗ ಮಾತು ಮುಂದುವರಿಯಲಿಲ್ಲ.

ಒಂದು ದಿನ ಶಾಪಿಂಗ್‌ ಗೆ ಹೋಗುವುದಿದೆ ಎಂದು ಕಿರಣ್‌ ಬೇಗ ಮನೆಗೆ ಬಂದ. ಟೀ ಕುಡಿದು ಸ್ವಲ್ಪ ಹೊತ್ತಿನಲ್ಲೇ ತಯಾರಾದ. ತಾಯಿಗೆ ತಾನು ವೈಷ್ಣವಿಯೊಂದಿಗೆ ಹೊರಗಡೆ ಹೋಗಿ ಬರುವುದಾಗಿ ಹೇಳಿದ. ಶಾಂತಾ ಸಂತೋಷದಿಂದ ಹೋಗಿ ಬನ್ನಿ ಎಂದು ಒಪ್ಪಿಕೊಂಡರು. ಹತ್ತು ನಿಮಿಷಗಳು ಕಳೆದಿರಬಹುದು. ವೈಷ್ಣವಿ ತಾನು ಗಂಡನೊಂದಿಗೆ ಹೊರಹೋಗಲು ತಯಾರಾಗಿ ಹೊರಬಂದಳು.

ಅಲ್ಲಲ್ಲಿ ಹರಿದು ಹೋದ ಜೀನ್ಸ್ ಪ್ಯಾಂಟ್‌, ಟೀಶರ್ಟ್‌ ಧರಿಸಿದ್ದಳು. ತಲೆ ತುಂಬಾ ಕೂದಲನ್ನು ಹಾಗೆಯೇ ಬಿಟ್ಟು ತುಟಿಗೆ ಲಿಪ್‌ ಸ್ಟಿಕ್ ಹಚ್ಚಿ, ಕನ್ನಡಕ ಹಾಕಿಕೊಂಡಿದ್ದ ಅವಳನ್ನು ನೋಡಿದ ಶಾಂತಾರಿಗೆ ಅವಳು ಹೊರ ಹೊರಟಿದ್ದ ರೀತಿ ಸ್ವಲ್ಪ ಇಷ್ಟವಾಗಲಿಲ್ಲ. ಅದೇ ಸಮಯಕ್ಕೆ ಕಿರಣ್‌ ಗೆ ಫೋನ್‌ ಕಾಲ್ ‌ಬಂದಿತು. ಅವನು ಮಾತನಾಡುತ್ತಾ ಹೊರಗಡೆ ಹೋದ. ಇದೇ ಸಮಯ ಎಂದು ನಿರ್ಧರಿಸಿದ ಶಾಂತಾ ಸೊಸೆಗೆ, “ನೋಡಮ್ಮಾ…. ನೀನೀಗ ಮದುವೆಯಾದವಳು, ಗೃಹಿಣಿ. ಇಷ್ಟು ದಿನ ಚಿಕ್ಕವಳಾಗಿದ್ದೆ. ತಾಯಿ ತಂದೆಯ ಆಶ್ರಯದಲ್ಲಿದ್ದೆ. ಅವರ ಮುಂದೆ ನಿನ್ನ ಬೇಕು ಬೇಡಗಳಿಗೆಲ್ಲಾ ಹಠ ಮಾಡಿದಾಗ ಪ್ರೀತಿಯಿಂದ ನಿನ್ನ ಎಲ್ಲಾ ಆಸೆಗಳಿಗೆ ಸ್ಪಂದಿಸುತ್ತಿದ್ದರು. ವಯಸ್ಸು ಚಿಕ್ಕದಾಗಿದ್ದರಿಂದ ಏನು ಮಾಡಿದರೂ ಚೆಂದವೇ ಕಾಣಿಸುತ್ತಿತ್ತು. ಆದರೆ ಈಗ ನಿನ್ನ ಸ್ಥಿತಿ ಬದಲಾಗಿದೆ. ಒಂದು ಮನೆಯ ಗೃಹಿಣಿಯಂತೆ ಬದುಕಬೇಕಿದೆ.

“ಲಕ್ಷಣವಾಗಿ ಸೀರೆಯುಟ್ಟು ಹಣೆಯ ತುಂಬಾ ಕುಂಕುಮ ಹಚ್ಚಿಕೊಂಡು ಹೊರ ಹೊರಟರೆ ಎಂಥವರೂ ಕೂಡ ಗೌರವ ಕೊಡುತ್ತಾರೆ. ಇಂತಹ ತುಂಡು ಉಡುಗೆಯನ್ನು ಧರಿಸುವ ವಯಸ್ಸನ್ನು ನೀನು ದಾಟಿದ್ದೀಯಾ. ಇನ್ನು ಅದೇ ರೀತಿ ಬದುಕಬೇಕೆಂದರೆ ನೋಡಿದವರೆಲ್ಲರೂ ತಮಗೆ ತೋಚಿದಂತೆ ತಾವು ಒಂದೊಂದು ಮಾತನಾಡುತ್ತಾರೆ. ನಾವು ಎಷ್ಟಾದರೂ ಭಾರತ ನೆಲದ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದವರು. ಹೆಣ್ಣು ಹೀಗೆಯೇ ಇರಬೇಕೆಂದು ನಮ್ಮ ಹಿರಿಯರು ಒಂದು ಸಿದ್ಧಾಂತವನ್ನು ರೂಪಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಅವೆಲ್ಲ ನಮಗೆ ಕ್ಷೇಮ ಮತ್ತು ಶ್ರೀರಕ್ಷೆ ಆಗಿವೆ.

“ನಮ್ಮ ನಡತೆ, ನುಡಿ, ಹಾವಭಾವ, ವೇಷಭೂಷಣ ಎಲ್ಲವೂ, ಎಲ್ಲರಿಗೂ ಮಾದರಿಯಾಗಬೇಕೇ ವಿನಾ ಇತರರ ಭಾವನೆಗಳನ್ನು ಕೆರಳಿಸುವಂತೆ ಆಗಬಾರದು. ಒಬ್ಬ ಹಿರಿಯಳಾಗಿ, ಅನುಭವಸ್ಥೆಯಾಗಿ, ಈ ಮನೆಯ ಸಂಸ್ಕೃತಿಯ ಪ್ರತಿಪಾದಕಳಾಗಿ ನಿನಗೆ ಹೇಳುತ್ತಿದ್ದೇನೆ. ನಿನ್ನ ಗಂಡನನ್ನು ಮೊದಲುಗೊಂಡು ಇಲ್ಲಿ ಯಾರಿಗೂ ಇಂತಹ ಉಡುಗೆಗಳು ಇಷ್ಟವಾಗುವುದಿಲ್ಲ. ನಾನು ನಿನ್ನನ್ನು ಅವಹೇಳನ ಮಾಡುತ್ತಿಲ್ಲ, ಅಪಮಾನ ಮಾಡುತ್ತಿಲ್ಲ. ನಿನ್ನ ನಡತೆಯಿಂದಲೇ ನಿನಗೂ ಮತ್ತು ಮನೆಯ ಎಲ್ಲರಿಗೂ ಗೌರವ ಸಿಗುವಂತಾಗಬೇಕು. ಹಾಗೆ ಮಾಡುವುದು ನಿನ್ನ ಕೈಯಲ್ಲಿದೆ. ವಿಚಾರಿಸಿ ನೋಡು,” ಎಂದು ಶಾಂತಾ ಒಂದೇ ಉಸಿರಿಗೆ ಎಲ್ಲವನ್ನೂ ಹೇಳಿ ಮುಗಿಸಿದರು.

ವೈಷವಿಯೂ ಸಹ ಅತ್ತೆ ಶಾಂತಾ ಹೇಳುವುದನ್ನು ಸಹನೆಯಿಂದಲೇ ಕೇಳಿಸಿಕೊಂಡಳು. ಒಂದು ಕ್ಷಣ ಇಬ್ಬರಲ್ಲೂ ಮೌನ. ವೈಷ್ಣವಿಗೆ ಅದೇನನ್ನಿಸಿತೋ ಏನೋ…? ಬಿರಬಿರನೇ ಬೆಡ್‌ ರೂಮ್ ನತ್ತ ಹೋದವಳು ಜೋರಾಗಿ ಬಾಗಿಲನ್ನು ಹಾಕಿಕೊಂಡಳು. ಇದನ್ನು ನೋಡುತ್ತಿದ್ದ ಶಾಂತಾರಿಗೆ ಮನದಲ್ಲಿ ತಳಮಳ. ನಾನು ಅದೇನು ಹೇಳಬಾರದನ್ನು ಹೇಳಿದೆ? ಇರುವ ವಿಷಯವನ್ನು ನಯವಾಗಿ ತಿಳಿಸಿ ಹೇಳಿದ್ದೇನೆ ಅಷ್ಟೇ. ಇಷ್ಟಕ್ಕೆ ಕೋಪ ಮಾಡಿಕೊಂಡು ಹೋಗಿ ರೂಮಿನ ಬಾಗಿಲನ್ನು ಹಾಕಿಕೊಂಡು ಬಿಟ್ಟರೆ…..? ಹೊರಗೆ ಶಾಪಿಂಗ್‌ ಗೆ ಹೋಗುವ ಪ್ರೋಗ್ರಾಂ ನಿಲ್ಲಿಸಿಬಿಟ್ಟರೆ….? ನಿಮ್ಮಮ್ಮನಿಂದ ನನಗೆ ತೊಂದರೆಯಾಗುತ್ತಿದೆ ಎಂದು ಮಗನ ಮುಂದೆ ಹೇಳಿಬಿಟ್ಟರೆ…..? ಏನೆಲ್ಲಾ ಕಲ್ಪಿಸಿಕೊಂಡ ಶಾಂತಾ ಒಳಗೊಳಗೆ ಕುದಿಯತೊಡಗಿದರು.

ಅವಳು ಹಾಗೆ ವಿಚಾರಿಸುತ್ತಿರುವಾಗಲೇ ಫೋನ್‌ ನಲ್ಲಿ ಮಾತನಾಡುತ್ತಿದ್ದ ಕಿರಣ್‌ ಶಾಂತಾರ ಹತ್ತಿರ ಬಂದು, “ವೈಷ್ಣವಿ ಇನ್ನೂ ಬರಲಿಲ್ಲವೇ….?” ಎಂದು ಕೇಳಿದ.

ಶಾಂತಾರಿಗೆ ಏನು ಉತ್ತರಿಸಬೇಕೋ ತಿಳಿಯಲಿಲ್ಲ. ಗಂಡನ ದನಿ ಕೇಳಿ ಹೊರಬರಬಹುದೆಂಬ ವಿಚಾರದಿಂದ, “ರೂಮಿನಲ್ಲಿದ್ದಾಳೆ. ನೀನೇ ಹೋಗಿ ಅವಳನ್ನು ಕರೆ……” ಎಂದರು.

“ರೆಡಿಯಾಗಿ ಬರೋಕೆ ಅದಿಷ್ಟು ಹೊತ್ತು….. ಬರ್ತಾಳೆ ಬಿಡಮ್ಮ……” ಎಂದು ಅಲ್ಲಿಯೇ ಕುಳಿತುಕೊಂಡ. ಶಾಂತಾರಿಗೆ ಒಳಗೊಳಗೆ ದುಗುಡ.

ಒಂದೆರಡು ನಿಮಿಷದ ನಂತರ ರೂಮಿನ ಬಾಗಿಲನ್ನು ತೆರೆದ ಸದ್ದಿನಿಂದ ಕಿರಣ್‌ ಮತ್ತು ಶಾಂತಾ ಅತ್ತ ನೋಡಿದರು. ವೈಷ್ಣವಿ ರೂಮಿನಿಂದ ಹೊರ ಬಂದಳು. ಇಬ್ಬರೂ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು.

ವೈಷ್ಣವಿ ರೂಮಿನ ಮುಂದೆ ನಿಂತಿದ್ದಳು. ಹಸಿರು ಸೀರೆ ಉಟ್ಟು ಹಣೆಯಲ್ಲಿ ದೊಡ್ಡದಾದ ಕುಂಕುಮ ಹಚ್ಚಿಕೊಂಡು, ಕೈ ತುಂಬಾ ಬಳೆಗಳನ್ನು ಹಾಕಿಕೊಂಡಿದ್ದಳು. ಅವಳಿಗೆ ತನಗೆ ಅನುಕೂಲವಾದ ರೀತಿಯಲ್ಲಿ ಸೀರೆಯನ್ನು ಉಟ್ಟಿದ್ದಳಾದರೂ ಒಪ್ಪುವಂತೆಯೇ ಇತ್ತು. ಶಾಂತಾ ಹಾಗೂ ಕಿರಣ್‌ ರಿಗೆ ಆಶ್ಚರ್ಯವನ್ನು ಮೂಡಿಸಿತ್ತು.

ತದೇಕಚಿತ್ತದಿಂದ ಹೆಂಡತಿಯತ್ತಲೇ ನೋಡುತ್ತಿದ್ದ ಕಿರಣ್‌, ತಾಯಿಯತ್ತ ತಿರುಗಿ, “ನೋಡಿದೆಯೇನಮ್ಮಾ….. ನಿನ್ನ ಸೊಸೆ ಸೀರೆಯಲ್ಲಿ ಎಷ್ಟೊಂದು ಲಕ್ಷಣವಾಗಿ ಕಾಣಿಸುತ್ತಿದ್ದಾಳೆ. ಮನೆಯಲ್ಲಿ ಖಾಲಿ ಇದ್ದಾಗ ಇವಳಿಗೆ ಸೀರೆ ಉಡುವುದನ್ನು ನೀನೇ ಕಲಿಸಿರಬೇಕು. ಇಲ್ಲದಿದ್ದರೆ ಅಷ್ಟೊಂದು ಕರಾರುವಾಕ್ಕಾಗಿ ಧರಿಸಲು ಹೇಗೆ ಸಾಧ್ಯ? ಒಟ್ಟಿನಲ್ಲಿ ಅವಳನ್ನು ಅಪ್ಪಟ ಭಾರತೀಯ ನಾರಿಯನ್ನಾಗಿ ಮಾಡಿರುವಿ,” ಎಂದವನೇ ವೈಷ್ಣವಿಯತ್ತ ತಿರುಗಿ, “ಬಾ, ಅಲ್ಲಿ ಯಾಕೆ ನಿಂತಿರುವೆ…..?” ಎಂದು ಹತ್ತಿರ ಕರೆದ. ವೈಷ್ಣವಿ ಮೆಲ್ಲನೆ ಇಬ್ಬರೂ ಕುಳಿತೆಡೆಗೆ ಬಂದಳು. ಅವಳನ್ನು ಕಂಡ ಶಾಂತಾರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ವೈಷ್ಣವಿಯೇ, “ಅತ್ತೆ ನಾವು ಹೋಗಿ ಬರ್ತೀವಿ….” ಎಂದು ಅತ್ತೆಗೆ ಹೇಳಿದಳು.

“ಸರಿ ಹೋಗಿ ಬನ್ನಿ…..” ಎಂದಷ್ಟೇ ಹೇಳಿದರು. ಅವರಿಬ್ಬರು ಹೊರಗೆ ಹೋಗುವುದನ್ನೇ ನೋಡುತ್ತಾ ಕುಳಿತರು.

ಅದಾದ ನಂತರ ವೈಷ್ಣವಿ ಅತಿಯಾಗಿ ಮೊಬೈಲ್ ‌ಮತ್ತು ಟಿವಿ ನೋಡುವುದನ್ನು ನಿಲ್ಲಿಸಿದಳು. ತನ್ನತ್ತೆ ಮಾಡುತ್ತಿದ್ದ ಕೆಲಸಗಳನ್ನು ತಾನೂ ಮಾಡಲು ಶುರು ಮಾಡಿದಳು. ಹಾಗಾಗಿ ಶಾಂತಾ ತನಗೆ ಸಾಧ್ಯವಿರುವ ಬೇರೆ ಕೆಲಸ ಮಾಡತೊಡಗಿದಳು. ಅತಿಯಾದ ಅನುಕೂಲಗಳು ಕೂಡ ಸೋಮಾರಿತನವನ್ನು ಉಂಟು ಮಾಡುತ್ತವೆ ಎಂಬ ಸತ್ಯವನ್ನು ವೈಷ್ಣವಿ ಅರ್ಥ ಮಾಡಿಕೊಂಡಿದ್ದಳು.

ಅತ್ತೆ ಮತ್ತು ಸೊಸೆ ಸೌಹಾರ್ದತೆಯಿಂದ ಮನೆಯ ಪ್ರತಿಯೊಂದು ಕೆಲಸಕ್ಕೆ ಹೊಂದಿಕೊಂಡರು. ನಿಧಾನವಾಗಿ ಒಂದೊಂದೇ ಕೆಲಸಗಳನ್ನು ಮಾಡುತ್ತಾ ಕೆಲಸಗಾರರನ್ನು ನಿಲ್ಲಿಸಿದರು. ಪರಸ್ಪರ ಇಬ್ಬರೂ ಅರ್ಥ ಮಾಡಿಕೊಂಡು ನಡೆಯತೊಡಗಿದರು. ತೀರಾ ತಮಗೆ ಆಗದ ಕೆಲಸಗಳನ್ನು ಬೇರೆಯವರಿಂದ ಮಾಡಿಸಿ ತಮಗೆ ಸಾಧ್ಯವಾಗುವ ಕೆಲಸಗಳನ್ನೆಲ್ಲಾ ತಾವೇ ಮಾಡತೊಡಗಿದರು. ವೈಷ್ಯವಿ ಮೊದಲಿಗಿಂತ ಈಗ ತುಂಬಾ ಬದಲಾಗಿದ್ದಳು.

ಮನೆಯ ಪ್ರತಿಯೊಂದು ಜವಾಬ್ದಾರಿಯನ್ನು ತೆಗೆದುಕೊಂಡಿದ್ದಳು. ಶಾಂತಾ ಹೇಳುವ ಯಾವುದೇ ಮಾತಿಗೂ ಎದುರು ವಾದಿಸುತ್ತಿರಲಿಲ್ಲ. ಶಾಂತಾ ಕೂಡ ಸೊಸೆ ತನ್ನ ಮಾತನ್ನು ಕೇಳುತ್ತಾಳೆ ಎಂದು ಏನೇನೋ ಹೇಳುತ್ತಾ ಅವಳ ಮೇಲೆ ಅಧಿಕಾರ ಪ್ರಯೋಗ ಮಾಡಲು ಮುಂದಾಗಲಿಲ್ಲ. ಇಬ್ಬರಲ್ಲೂ ಸಾಮರಸ್ಯ ಮೂಡಿತ್ತು. ಸಿಟ್ಟು ಹಾಗೂ ದ್ವೇಷದಿಂದ ಸಾಧಿಸಲಾಗದನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಬಹುದು ಎಂಬ ಸತ್ಯವನ್ನು ಇಬ್ಬರೂ ಕಂಡುಕೊಂಡರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ