ಮಿನಿ ಕಥೆ –  ಎಸ್‌. ವಾಣಿ

`ಹಿರಿ ಮಗಳಾಗಬೇಡ…. ಹಿತ್ತಿಲ ಬಾಗಲಾಗಬೇಡಎಂಬಂತೆ ಹಿರಿ ಮಗಳಾಗಿ ಹುಟ್ಟಿದ ತಪ್ಪಿಗೆ ಸದಾ ಮಧ್ಯಮ ವರ್ಗದ ಮನೆಯವರಿಗಾಗಿ ದುಡಿಯುತ್ತಾ ಧರಿತ್ರಿ ಕೊನೆಗೆ ಕಂಡುಕೊಂಡಿದ್ದಾದರೂ ಏನು…..?

ಅಪ್ಪನಿಗೆ ಬರುವ ಆದಾಯ ಅಮ್ಮನ ಔಷಧಿಗೆ ಸಾಕಾಗುತ್ತಿಲ್ಲ. ಇರುವುದೆಲ್ಲ ಮಾರಿದ್ದು ಆಯ್ತು, ಕೊನೆಗೂ ಅಮ್ಮನನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ, ನಮ್ಮನ್ನೆಲ್ಲ ಬಿಟ್ಟು ಅಗಲಿದಳು ಹೆತ್ತವಳು. ಅಮ್ಮ ಹೋದ ಚಿಂತೆಯಲ್ಲಿ ಅಪ್ಪ ಕೆಲಸ ಬಿಟ್ಟು ಮನೆಯಲ್ಲಿ ಕೂತರು. ಮನೆಯ ಮೊದಲ ಮಗಳಾದ ನಾನು ಓದುವುದನ್ನು ಅರ್ಧಕ್ಕೆ ಬಿಟ್ಟು ಇಬ್ಬರು ತಂಗಿ, ತಮ್ಮನಿಗಾಗಿ ದುಡಿಯಲು ಹೊರಟೆ.

ಒಂದು ಕಂಪನಿಯಲ್ಲಿ ರಿಸೆಪ್ಶನಿಸ್ಟ್ ಆಗಿ ಸೇರಿಕೊಂಡೆ. ಹೆಣ್ಣನ್ನು ನೋಡೇ ಇಲ್ಲ ಎಂಬಂತೆ ಬಿಟ್ಟ ಕಣ್ಣು ಬಿಟ್ಟಂತೆ ಕೆಕ್ಕರಿಸಿ ನೋಡುವ ಗಂಡಸರು, ಕಣ್ಣಿನಲ್ಲೇ ಕಾಮುಕತೆಯ ವಿಕೃತ ಮನಸುಗಳು. ಸಣ್ಣ ಸಣ್ಣ ತಪ್ಪಿಗೂ ಸಿಡಿಮಿಡಿಗೊಳ್ಳುವ ಬಾಸ್‌. ಮನೆಯಲ್ಲೂ ಕೆಲಸ. ತಂಗಿಯರಿಬ್ಬರೂ ಯಾವಾಗ್ಲೂ ಓದು ಓದು ಅಂತ ಪುಸ್ತಕ ಹಿಡಿದು ಕುಳಿತುಬಿಡುತ್ತಿದ್ದರು. ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಅಡುಗೆ ಮಾಡಿ ಬಡಿಸುವುದು….. ಹೀಗೆ ಹಲವು ವರ್ಷಗಳು ಉರುಳಿತು.

“ಧರಿತ್ರಿ ಅಂತ ನಿನಗೆ ಹೆಸರಿಟ್ಟಿದ್ದು ಸಾರ್ಥಕವಾಯ್ತಮ್ಮ….. ಆ ಭೂಮಿ ತೂಕದ ಸಹನೆ ನಿನಗೆ!” ಎಂದು ಅಮ್ಮ ಅಪ್ಪ ಸದಾ ಹೇಳುತ್ತಿದ್ದರು.

ನನಗಾಗಿ ಯಾವ ಹಣವನ್ನು ಬ್ಯಾಂಕ್‌  ಬ್ಯಾಲೆನ್ಸ್ ನಲ್ಲಿ ಇಟ್ಟಿರಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ತಂಗಿ, ತಮ್ಮ ನನಗಾಗುವರು ಎಂದು ಅಚಲವಾಗಿ ನಂಬಿದ್ದೆ. ಈ ನಡುವೆ ಕುಡಿಯಲು ಹಣ ಬೇಕು ಎಂದು ಅಪ್ಪ ನನ್ನ ಹಿಂದೆ ದುಂಬಾಲು ಬೀಳುತ್ತಿದ್ದರು. ಈ ಜೀವನ ಸಾಕಾಗಿ ಹೋಗುತ್ತಿತ್ತು.

ನನ್ನ ಆಸೆ ಆಕಾಂಕ್ಷೆಗಳನ್ನು ಮರೆತೇಬಿಟ್ಟೆ. ನೋಡು ನೋಡುತ್ತಾ ನನಗೆ 35 ವರ್ಷ ದಾಟಿತ್ತು. ತಂಗಿಗೆ ದೊಡ್ಡ ಹುದ್ದೆ ಸಿಕ್ಕಿತೆಂದು ಬೆಂಗಳೂರಿಗೆ ಹೋಗಿ ಅಲ್ಲೇ ಒಬ್ಬ ಹುಡುಗನನ್ನು ಪ್ರೀತಿಸಿ, ನನಗೂ ಒಂದು ಮಾತು ಹೇಳದೆ ಮದುವೆಯೂ ಆಗಿಬಿಟ್ಟಳು.

ತಮ್ಮ ಚೆನ್ನಾಗಿ ಓದಿ ನನ್ನನ್ನು ಸಾಕುವನೆಂದು ನಿಟ್ಟುಸಿರುಬಿಟ್ಟೆ…. ಆದರೆ ಅವನೂ ಅಕ್ಕನಂತೆ ಬೆಂಗಳೂರು ಸೇರಿಕೊಂಡು ಶ್ರೀಮಂತರ ಮನೆಯ ಅಳಿಯನಾದ. ನನ್ನನ್ನು ಅಕ್ಕಾ ಎಂದು ಹೇಳಿಕೊಳ್ಳಲು ಇಷ್ಟ ಪಡದಷ್ಟು ಬೇಡವಾಗಿದ್ದೆ.

ಇನ್ನೊಬ್ಬಳು ತಂಗಿ ಪಕ್ಕದ ಊರಿನ ಹುಡುಗನನ್ನು ಪ್ರೀತಿಸಿ ಅವನೊಂದಿಗೆ ಮದುವೆ ಆಗುವ ಮೊದಲೇ ಇವಳ ಕೈಗೆ ಮಗುವನ್ನು ಕೊಟ್ಟು ಹೊರಟಿದ್ದ. ತಾಯಿಯ ಸ್ಥಾನದಲ್ಲಿ ನಿಂತು ಹೋರಾಡಿ ಪ್ರೀತಿಸಿದವನ ಜೊತೆಯಲ್ಲಿ ಮದುವೆ ಮಾಡಿಸಿದೆ. ತಂಗಿ ಸುಖವಾಗಿ ಬಾಳಲಿ ಎಂದು ಇದ್ದಬದ್ದ ಹಣವನ್ನೆಲ್ಲಾ ಅವಳಿಗೆ ಕೊಟ್ಟು ನಿಟ್ಟುಸಿರು ಬಿಟ್ಟೆ.

ಅಪ್ಪ ಕುಡಿದು ಕುಡಿದು ಆರೋಗ್ಯದಲ್ಲಿ ಏರುಪೇರಾಗಿ ಒಂದು ದಿನ ನಮ್ಮನ್ನೆಲ್ಲಾ ಬಿಟ್ಟು ಅಗಲಿದರು. ವಯಸ್ಸು 50 ದಾಟಿ ಬಿಳಿ ಕೂದಲು ಅಣುಕಿಸುತ್ತಿತ್ತು. ಒಂಟಿ ಬದುಕು. ಮದುವೆ ಆಗುವ ವಯಸ್ಸು ಮೀರಿತ್ತು. ಆಸೆ, ಭಾವನೆಗಳು ಸತ್ತೇ ಹೋಗಿವೆ. ಇಂದು ಒಡಹುಟ್ಟಿದವರಿಗೆ ಅವರ ಜೀವನವೇ ಅವರಿಗೆ ಮುಖ್ಯವಾಗಿತ್ತು.

talash-story-1

ನಾನೂ ಹೀಗೆ ಯೋಚನೆ ಮಾಡಿದ್ದಿದ್ದರೆ…. ಅವರು ಇಂದು ಓದಿ ಉತ್ತಮ ಬಾಳನ್ನು ಬಾಳಲು ಸಾಧ್ಯವಾಗುತ್ತಿರಲಿಲ್ಲವೇನೋ….? ಈ ಮನೆಗೆ ದೀಪದಂತೆ ಉರಿದುರಿದು ನಾನೇ ಕರಗಿ ಹೋದೆ. ನನ್ನ ಸಮವಯಸ್ಕರನ್ನು ನೋಡಿ, ನಾನು ಅವರಂತೆ ಗಂಡ, ಮಕ್ಕಳ ಜೊತೆ ಬಾಳಬೇಕು ಎಂದು ನನಗೂ ಆಸೆ ಆಗುತ್ತದೆ. ಆದರೆ ಕಂಕಣ ಭಾಗ್ಯ ನನಗೆ ಕೂಡಿ ಬರಲೇ ಇಲ್ಲ! ನನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಯಾರೂ ಮುಂದೆ ಬರಲಿಲ್ಲ.

ಕನ್ನಡಿ ಮುಂದೆ ನಿಂತು ನೋಡಿದೆ. ಹರೆಯದಲ್ಲಿ ನಿನ್ನ ಬಗ್ಗೆ ನೀನು ಯೋಚಿಸಲಿಲ್ಲ. ನಿನ್ನ ಒಳ್ಳೆಯತನ ತ್ಯಾಗ ಇಂದು ನಿನಗೆ ಮುಳ್ಳಿನ ಹೆಜ್ಜೆಯಾಗಿದೆ ಎನಿಸಿತು.

ನಾನು ದೊಡ್ಡವಳು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ತಂಗಿ, ತಮ್ಮ ಬದುಕು ಕಟ್ಟಿಕೊಂಡಂತೆ ನನಗೂ ಬದುಕು ಕಟ್ಟಿಕೊಳ್ಳುವ ಆಸೆ ಇರಲಿಲ್ಲವೇ….? ನನಗೂ ಒಂದು ಬದುಕನ್ನು ಕಟ್ಟಿಕೊಡಬೇಕೆಂದು ನನ್ನ ತಮ್ಮ ತಂಗಿಯರಿಗೆ ಒಂದು ಬಾರಿಯೂ ಅನಿಸಲಿಲ್ಲವೇ….? ಒಮ್ಮೆಯಾದರೂ ನನ್ನ ಕಷ್ಟ ಸುಖಗಳನ್ನು ಕೇಳಲಿಲ್ಲ. ನನ್ನ ಜೀವನವನ್ನು ನನ್ನವರಿಗಾಗಿ ತ್ಯಾಗ ಮಾಡಿದ್ದೆ. ನಿಜವಾಗಲೂ ಇವರು ನನ್ನವರೇ…?

ಸ್ವಾರ್ಥ ಜಗತ್ತಿನಲ್ಲಿ ನಿಸ್ವಾರ್ಥ ಬೆತ್ತಲಾಗುತ್ತದೆ ಎಂದು ಇವರನ್ನು ನೋಡಿ ತಿಳಿದುಕೊಂಡೆ. ಬದುಕು ಕಲಿಸಿದ ಪಾಠವನ್ನು ಯಾವ ಶಾಲೆಯಲ್ಲೂ ಕಲಿಯಲು ಆಗುವುದಿಲ್ಲ. ಇನ್ನು ಮದುವೆ ಆಗುವ ಆಸೆ ಇಲ್ಲ. ಒಂದು ಅನಾಥಾಶ್ರಮವನ್ನು ಸೇರಿಕೊಂಡು ಅನಾಥರಿಗೆ ಸೇವೆ ಮಾಡಬೇಕೆಂದು ತೀರ್ಮಾನ ಮಾಡಿರುವೆ. ನನ್ನ ನಿರ್ಧಾರ ಸರಿ ಅಲ್ವಾ…..?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ