ಕಥೆ ಉಮಾ ಶೂರ್ಪಾಲಿ

`ಜೀವನವೇ ಸುಖ ಪಯಣ…..’ ಎನ್ನುತ್ತಾ ವೈವಾಹಿಕ ಜೀವನ ಆರಂಭಿಸಿದ ರಾಜೇಶ್ಕಮಲಮ್ಮ ಮುಂದೆ ಎಂದಾದರೂ ಅದನ್ನು ತಮ್ಮ ಮಧ್ಯಮ ವರ್ಗದ ಜೀವನದಲ್ಲಿ ನನಸಾಗಿಸಿಕೊಳ್ಳಲು ಸಾಧ್ಯವಾಯಿತೇ…..?

“ರಾಧಾ ಬೇಗ ಬಾರೇ…. ನನಗೆ ತಡವಾಗುತ್ತೆ, ನಿನ್ನಿಂದಾಗಿ ನಾನು ಆ ಬಾಸ್‌ ಕೈಲಿ ಇಲ್ಲದ್ದನ್ನು ಅನ್ನಿಸಿಕೊಳ್ಳಬೇಕು….,” ಎಂದು ರೇಗುತ್ತಲೇ ಸ್ಕೂಟರ್‌ ಸ್ಟಾರ್ಟ್‌ ಮಾಡಿದ ಮಾಧವ.

“ಬಂದೇ ಬಂದೇ….” ಎಂದು ಗೊಣಗುತ್ತಲೇ, “ಅತ್ತೆ, ಇವತ್ತು ಮಕ್ಕಳಿಗೋಸ್ಕರ ಚಪಾತಿ ಮಾಡಲಿಕ್ಕೆ ಆಗಲಿಲ್ಲ, ನೀವೇ ಮಾಡಿಬಿಡಿ. ಹಾಗೆಯೇ ನಾಳೆ ಬುಧವಾರ ಅವರ ಪಿಟಿ ಯೂನಿಫಾರ್ಮ್ ಒಗೆದಿಲ್ಲ, ಅದನ್ನು ಮಾತ್ರ ಒಗೆದಿಟ್ಟು ಬಿಡಿ,” ಎನ್ನುತ್ತಲೇ ಅವರ ಉತ್ತರಕ್ಕೂ ಕಾಯದೆ ಸ್ಕೂಟರ್‌ ಏರಿ ಮಾಧವನ ಜೊತೆ ಹೊರಟೇಬಿಟ್ಟಳು ರಾಧಾ.

ಪಾಪ ಕಮಲಮ್ಮ ….. ಏನೋ ಹೇಳಲು ತೆರೆದ ಬಾಯಿ ಹಾಗೇ ಮೌನದಿ ತನ್ನ ನಾಲಿಗೆಯನ್ನು ತಾನೇ ಕಚ್ಚಿಕೊಂಡಿತು. ಹಾಗೂ ಹೀಗೂ ಮೊಮ್ಮಕ್ಕಳು ಶಾಲೆಯಿಂದ ಬರುವುದರೊಳಗಾಗಿ ಚಪಾತಿ, ಪಲ್ಯ ಮಾಡಿಟ್ಟು, ಅವರ ಪಿಟಿ ಯೂನಿಫಾರ್ಮ್ ನ್ನು ಡಿಟರ್ಜೆಂಟ್‌ ನಲ್ಲಿ ನೆನೆಸುತ್ತಾ ತಮ್ಮ ಗತ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ನೆನೆಯತೊಡಗಿದರು.

ರಾಜೇಶ್‌ ವೆಡ್ಸ್ ಕಮಲಾ ಆಹಾ….! ತಮ್ಮ ಕನಸಿನ ರಾಜಕುಮಾರಿ/ವರ ನಂತಿರುವ ವಧು/ವರನ ನೋಡಿ ಇಬ್ಬರೂ ಖುಷಿಯಿಂದ ಒಪ್ಪಿ ಮದುವೆಯಾದರು. ಸಂಸಾರದ ಪ್ರಾರಂಭದ ದಿನಗಳಲ್ಲಿ ಒಂದು ಕೆಲಸ ಮಾಡಿದರೆ ಹೆಂಡತಿ ಕೈ ಎಲ್ಲಿ ಸವೆಯುವುದೋ ಎಂದು ತುಂಬು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುವ ಪತಿ ರಾಜೇಶ್‌ ದೊರೆತಿದ್ದು ತನ್ನ ಪೂರ್ವ ಜನ್ಮದ ಸುಕೃತವೆಂದು ಸಾರಿ ಸಾರಿ ಹೇಳುತ್ತಿದ್ದ ಕಾಲವದು.

ಅತ್ತೆ ಮಾವನ ಸೇವೆ ಮಾಡುತ್ತಾ, ಗಂಡನ ತುಂಬು ಪ್ರೀತಿ ಮತ್ತು ವಾತ್ಸಲ್ಯದಿಂದ ಸ್ವರ್ಗವೇ ಮೈವೆತ್ತಂತಹ ಕಳೆ ಕಮಲಾರ ಮುಖದಲ್ಲಿತ್ತು. ತಮ್ಮ ಜೀವದ ಕುಡಿಯ ಆಗಮನದಿಂದ ದಂಪತಿಗಳಿಬ್ಬರೂ ತುಂಬಾ ಸಂಭ್ರಮಿಸಿದ್ದರು. ಅವಳಿ ಜವಳಿ ಮಕ್ಕಳಾಗುವ ಸೂಚನೆಯನ್ನು ಡಾಕ್ಟರ್‌ ನೀಡಿದಾಗ, ಅವರಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಗಂಡು, ಒಂದು ಹೆಣ್ಣು. ಮಕ್ಕಳಿಬ್ಬರು ಪೂರ್ಣ ಚಂದಿರನಂತಿದ್ದವು. ಮಾಧವ ಮತ್ತು ಮಾನಸಾ ಎಂದು ಹೆಸರಿಟ್ಟು ಮಕ್ಕಳ ಲಾಲನೆ ಪಾಲನೆ ಪೋಷಣೆ ಅವರ ವಿದ್ಯಾಭ್ಯಾಸದ ಚಿಂತನೆ, ಹಿರಿ ಜೀವಗಳ ಅನಾರೋಗ್ಯ, ಅವರ ಸೇವೆ ಮಾಡುವುದರಲ್ಲಿ ಜೀವನ ಕಳೆಯುತ್ತ ಸಂತೃಪ್ತಿ ಪಡೆದರು ದಂಪತಿಗಳು.

ತಮಗೋಸ್ಕರ ಎಂದು ತಾವು ಬಾಳಿದವರೇ ಅಲ್ಲ. `ಒಂದು ಸಲ ಮಕ್ಕಳು ದೊಡ್ಡವರಾಗಲಿ, ರೀ ಆಗ ನಾವು ಫ್ರೀ ಆಗ್ತೀವಿ,’ ಎಂದರೂ ಒಂದಾದ ಮೇಲೊಂದರಂತೆ ಮಕ್ಕಳು ಬೆಳೆದು ದೊಡ್ಡವರಾದಾಗ, ಮದುವೆಯೊಂದಾದರೆ ನಾವು ಫ್ರೀ ಎನ್ನುತ್ತಾ ಜೀವನದ ಜೋಕಾಲಿ ತಳ್ಳುತ್ತಿರುವಾಗಲೇ, ಹಿರಿಜೀವಗಳ ಸಾವಿನಿಂದ ನೊಂದ ಪತಿ ರಾಜೇಶ್‌ ಆಕಸ್ಮಿಕ ಹೃದಯಾಘಾತವಾಗಿ ತೀರಿ ಹೋದರು.

ಕಮಲಮ್ಮನವರ ಜೀವನದ ಜೀವನಾಡಿ ಇಲ್ಲದಂತಾಗಿ ಹೃದಯ ಕಲ್ಲಾದರೂ, ಮಕ್ಕಳ ಬೆನ್ನೆಲುಬಾಗಿ ನಿಂತು ಯಶಸ್ವಿಯಾಗಿ ತನ್ನೆಲ್ಲ ಜವಾಬ್ದಾರಿಯನ್ನು ಹೊತ್ತು ಅವರಿಬ್ಬರ ಮದುವೆಯನ್ನೂ ಮಾಡಿ ಮುಗಿಸಿದರು.

`ಈಗ ನಾನು ಫ್ರೀ ರೀ…. ಜವಾಬ್ದಾರಿಗಳೆಲ್ಲ ಮುಗಿದವು,’ ಎಂದು ರಾಜೇಶ್‌ ರಾಯರ ಫೋಟೋ ಮುಂದೆ ನಿಂತು `ಇನ್ನು ಮುಂದಾದರೂ ನಮಗಾಗಿ ಬದುಕೋಣ. ನಮ್ಮಿಷ್ಟದಂತೆ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸೋಣ,’ ಎನ್ನುವ ಮಾತುಗಳು ಹೃದಯದಾಳಕ್ಕೆ ಇಳಿಯುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು.

ದುಃಖವನ್ನು ಮನದಲ್ಲೇ ತಡೆಹಿಡಿದು, ಮತ್ತೇ ತಮ್ಮ ಕರ್ತವ್ಯದತ್ತ ಮುಖ ಮಾಡಿದ ಕಮಲಮ್ಮ, ಈಗ ರಾಜೇಶ್‌ ರಾಯರು ತೀರಿಕೊಂಡು ಹತ್ತು ವರ್ಷಗಳಾದರೂ ತಾವು ಮಾತ್ರ ಫ್ರೀ ಆಗಲಿಲ್ಲ!

ಮಗನ ಇಬ್ಬರು ಗಂಡು ಮಕ್ಕಳ ಜೊತೆಗೆ ಮಗಳೂ ಸಹ ತಾವು ಟೂರು ಹೋಗುತ್ತಿರುವುದರಿಂದ ಮಗಳನ್ನು ನೋಡಿಕೊಳ್ಳುವ ಭಾರವನ್ನು ತಮ್ಮ ಮೇಲೆಯೇ ಹೇರಿದಾಗ ಮಕ್ಕಳ ವರ್ತನೆಗೆ ನೊಂದು ಬೆಂದು, ಮೊಮ್ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಸಾರ್ಥಕತೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಮಲಮ್ಮ ತಮ್ಮ ಈ ಇಳಿವಯಸ್ಸಿನಲ್ಲೂ ಹಗಲಿರುಳು ದುಡಿಯುತ್ತಾ ಈ ಜೀವನದಲ್ಲಿ ಫ್ರೀ ಅಂತ ಆಗುವುದು ಯಾವಾಗ….? ಎಂದು ರಾಯರ ಫೋಟೋದತ್ತ ದೃಷ್ಟಿ ಹರಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ