ರಸಿಕಾ ದುಗ್ಗಲ್
ಹಾಲಿವುಡ್ ನಟಿ ರಸಿಕಾ, ತನ್ನ ಚಿತ್ರೋದ್ಯಮದ ಸಂಘರ್ಷವನ್ನು ದೊಡ್ಡ ಚಾಲೆಂಜ್ ಆಗಿ ಏಕೆ ಭಾವಿಸುತ್ತಾಳೆ ಎಂಬುದನ್ನು ಆಕೆಯ ಮಾತುಗಳಲ್ಲೇ ವಿವರವಾಗಿ ತಿಳಿಯೋಣವೇ….?
`ಮಿರ್ಜಾಪುರ್’ OTT ಯಲ್ಲಿ ಸೀರೀಸ್ ಆಗಿ ಅದ್ಭುತ ಯಶಸ್ಸು ಕಂಡಿದೆ. ಇದರಲ್ಲಿ ವೀಣಾ ತ್ರಿಪಾಠಿಯ ಪಾತ್ರ ನಿಭಾಯಿಸಿರುವ ಬಾಲಿವುಡ್ ನಟಿ ರಸಿಕಾ ದುಗ್ಗಲ್ ಳಿಗೆ ಬಾಲ್ಯದಿಂದಲೇ ಸಿನಿಮಾದಲ್ಲಿ ನಟಿಸಬೇಕೆಂಬ ದೊಡ್ಡ ಗೀಳಿತ್ತು. ಜಾರ್ಖಂಡ್ ರಾಜ್ಯದ ಜೆಮ್ ಶೆಡ್ ಪುರ್ ಈಕೆಯ ತವರೂರು.
ಬಾಲಿವುಡ್ ನಲ್ಲಿ ಅತಿ ಮೃದುಭಾಷೆಯ, ಸೌಂದರ್ಯದ ಖನಿ ಎಂದೇ ಗುರುತಿಸಲ್ಪಡುವ ರಸಿಕಾ, ದೆಹಲಿಯಲ್ಲಿ ಸೋಶಿಯಲ್ ಕಮ್ಯುನಿಕೇಶನ್ ಮೀಡಿಯಾದಲ್ಲಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾಗಾಗಿ ಪದವಿ ಪಡೆದಿರುತ್ತಾಳೆ. ರಸಿಕಾ ತನ್ನ ಕೆರಿಯರ್ ಆರಂಭಿಸಿದ್ದು 2007ರಲ್ಲಿ `ಅನ್ವರ್’ ಚಿತ್ರದಿಂದ. ಇದರಲ್ಲಿ ಈಕೆಯದು ಸಣ್ಣ ಪಾತ್ರವಾದರೂ ಗಮನಾರ್ಹವಾಗಿ ಗುರುತಿಸಲ್ಪಟ್ಟಳು. ಹೀಗಾಗಿ ಮುಂದೆ ಅನೇಕ ಚಿತ್ರಗಳಲ್ಲಿ ಸಾಲು ಸಾಲಾಗಿ ಪಾತ್ರಗಳು ದೊರಕಿದವು. `ನೋ ಸ್ಮೋಕಿಂಗ್, ಹೈಜ್ಯಾಕ್, ತಹನ್, ಅಜ್ಞಾತ್, ಕ್ಷಯ್’ ಇತ್ಯಾದಿ ಚಿತ್ರಗಳಲ್ಲಿ ಮಿಂಚಿದ್ದಲ್ಲದೆ, `ಪೌಡರ್, ರಿಶ್ತಾ ಡಾಟ್ ಕಾಮ್, ಕಿಸ್ಮತ್’ ಮುಂತಾದವು ಕಿರುತೆರೆಯ ಧಾರಾವಾಹಿಗಳಲ್ಲೂ ಉತ್ತಮ ಹೆಸರು ಗಳಿಸಿದಳು.
ಅಂದ ಮಾತ್ರಕ್ಕೆ ಇವಳ ಫಿಲ್ಮಿ ಜರ್ನಿ ಅತ್ಯಂತ ಯಶಸ್ವಿ ಅಂತೇನೂ ಅಲ್ಲ. ಮುಂದೆ OTTಯಲ್ಲಿ ನಟಿಸತೊಡಗಿದಂತೆ ಅನೇಕ ಅವಕಾಶಗಳು ಕೈ ಬೀಸಿ ಕರೆದವು. ಆ ರೀತಿ ಆಕೆ ಪ್ರಸಿದ್ಧಿ ಪಡೆದಳು. ಈಕೆಗೆ ಗೋಳಾಡುವ ಪಾತ್ರಗಳೆಂದರೆ ಅಲರ್ಜಿ. ಆದರೆ ಭಾರತೀಯ ಚಿತ್ರೋದ್ಯಮದಲ್ಲಿ ಹೆಣ್ಣುಮಕ್ಕಳು ಬಿಕ್ಕಿ ಬಿಕ್ಕಿ ಅಳದಿದ್ದರೆ ಹೇಗೆ? ಹೀಗೆ ಕಣ್ಣೀರುಗರೆಯುವ ಕನಿಷ್ಠ 2-3 ದೃಶ್ಯಗಳುಳ್ಳ ಚಿತ್ರಗಳು ಈಕೆಗೆ ಸತತ ಸಿಗತೊಡಗಿದವು. ಹೀಗೆ ಕೇವಲ ತಾನು ಅಳುಮೂಂಜಿ ಪಾತ್ರಕ್ಕೆ ಅಂಟಿಕೊಳ್ಳಬಾರದು, ವೈವಿಧ್ಯಮಯ ಪಾತ್ರ ಇರಬೇಕೆಂದು ಬಹಳ ಪ್ರಯತ್ನಪಟ್ಟು, ಹಲವು ನಿರ್ಮಾಪಕ, ನಿರ್ದೇಶಕರ ಕದ ತಟ್ಟಿ ಹೋರಾಡಿದಳು. ಅಂತೂ ಇಂತೂ OTT ಇವಳಿಗೆ ಅಂಥ ಅವಕಾಶ ನೀಡಿತು.
ಇತ್ತೀಚೆಗಷ್ಟೇ ರಸಿಕಾಳ `ಶೇಖರ್ ಹೋಮ್’ ವೆಬ್ ಸೀರೀಸ್ ರಿಲೀಸ್ ಆಗಿದೆ. ಇದೊಂದು. ಪತ್ತೇದಾರಿ ಸರಣಿಯ ಧಾರಾವಾಹಿ ಆಗಿದ್ದು, ಇದರಲ್ಲಿ ಈಕೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಸಿಕಾ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ. ಆಕೆ ತನ್ನ ಫಿಲ್ಮಿ ಕೆರಿಯರ್ ಬಗ್ಗೆ ಏನು ಹೇಳ ಬಯಸುತ್ತಾಳೆ? ಇಲ್ಲಿವೆ ರಸಿಕಾ ಜೊತೆ ನಡೆಸಿದ ಸಂದರ್ಶನದ ಮುಖ್ಯಾಂಶಗಳು : ಉತ್ತಮ ಸ್ಕ್ರಿಪ್ಟ್ ಸಿಗಬೇಕು

ಈ ವೆಬ್ ಸೀರೀಸ್ ರಸಿಕಾಳಿಗೆ ನಿಜಕ್ಕೂ ದೊಡ್ಡ ಚಾಲೆಂಜ್ ಆಗಿತ್ತು. ಈ ಪಾತ್ರದಲ್ಲಿ ಮಿಂಚುತ್ತಿರುವ ರಸಿಕಾಳಿಗೆ ಅದು ಬಹಳ ಹಿಡಿಸಿದೆಯಂತೆ. “ಇದಕ್ಕೆ ಮುಂಚೆ ನಾನು ಡಿಟೆಕ್ಟಿವ್ ಡ್ರಾಮಾ ಬಗ್ಗೆ ಇಷ್ಟು ಡೀಟೈಲ್ ಆಗಿ ಎಕ್ಸ್ ಪ್ಲೋರ್ ಮಾಡಿರಲಿಲ್ಲ. ಇಂಥ ಸುವರ್ಣಾವಕಾಶ ನನಗೆ ಈ ವೆಬ್ ಸೀರೀಸ್ ನಿಂದ ಸಿಕ್ಕಿದೆ. ಮೆನನ್ ರ ನಿರ್ದೇಶನದಲ್ಲಿ ನಟಿಸಬೇಕೆಂದು ನನಗೆ ಅನೇಕ ದಿನಗಳಿಂದಲೂ ಬಹಳ ಆಸೆ ಇತ್ತು. “ಏಕೆಂದರೆ ಇವರ `ಹಜಾರೋ ಖ್ವಾಯಿಶೇ ಐಸಿ’ ಚಿತ್ರ ಬಾಲಿವುಡ್ ನಲ್ಲಿ ಅತಿ ಪ್ರಶಂಸೆ ಪಡೆದಿತ್ತು, ನನ್ನ ಅಚ್ಚುಮೆಚ್ಚಿನ ಚಿತ್ರವದು! `ಶೇಖರ್ ಹೋಮ್’ ಇವರದೇ ನಿರ್ದೇಶನದಲ್ಲಿ ಮೂಡಿಬರಲಿದೆ ಎಂದು ತಿಳಿದಾಗ, ನನಗಂತೂ ಇದರಲ್ಲಿ ಒಂದು ಪಾತ್ರ ಸಿಗಬಾರದಿತ್ತೇ ಎಂದು ಬಹಳ ಹಪಹಪಿಸಿದ್ದೆ.
“ನನ್ನ ಬಳಿ ಇದರ ಕುರಿತಾದ ಸ್ಕ್ರಿಪ್ಟ್ ಬಂದಾಗ, ಅದನ್ನು ಓದಿ, ಅದರ ಕಥೆಯಿಂದ ಬಹಳ ಪ್ರಭಾವಿತಳಾದೆ. ಇದಕ್ಕೆ ಮುಂಚೆ ನಾನು ಪತ್ತೇದಾರಿ ಸರಣಿಯ `ಡಾರ್ಕ್ ಫೇಸ್’ನಲ್ಲಿ ನಟಿಸಿದ್ದೆ. ಇದು ಅದಕ್ಕಿಂತ ವಿಭಿನ್ನ ಪಾತ್ರ ಎಂದು ಬೇಗ ಗುರುತಿಸಿದೆ.”
ಸಣ್ಣ ಚಿತ್ರಗಳ ರಿಲೀಸ್ ಸುಲಭವಲ್ಲ
ರಸಿಕಾ ಸಾಕಷ್ಟು ವರ್ಷಗಳಿಂದ ಬಾಲಿವುಡ್ ನಲ್ಲಿ ನುರಿತ ನಟಿ ಎನಿಸಿದ್ದಾಳೆ. ತನ್ನ ಅನುಭವದಿಂದ ಆಕೆ ಸಾಕಷ್ಟು ಪಳಗಿದ್ದಾಳೆ. ಬಾಲಿವುಡ್ ಚಿತ್ರಗಳಿಗಿಂತ ಆಕೆ OTTಯಲ್ಲಿ ಹೆಚ್ಚು ಯಶಸ್ವಿ ಎನಿಸಿದ್ದಾಳೆ. ಈಕೆಯ `ಮಿರ್ಜಾಪುರ್, ಮೇಡ್ ಇನ್ ಹೆವೆನ್, ಔಟ್ಆಫ್ ಲವ್, ಎ ಸೂಟೆಬಲ್ ಬಾಯ್’ ಇತ್ಯಾದಿ ಎಲ್ಲವೂ ಹೆಚ್ಚು ಯಶಸ್ವಿ ಎನಿಸಿದವು. ಈ ಸೀರೀಸ್ ಕುರಿತಾಗಿ ವಿವರಿಸುತ್ತಾ, “ OTTಗೆ ಮೊದಲು ನಾನು ಹಲವಾರು ಚಿತ್ರಗಳಲ್ಲಿ ನಟಿಸಿದ್ದೆ. ಆದರೆ ಅವು ವೆರಿ ಸಕ್ಸೆಸ್ ಫುಲ್ ಎಂದೇನೂ ಹೆಸರು ಗಳಿಸಿಲಿಲ್ಲ, ಹೀಗೆ ಬಂದು ಹಾಗೆ ಹೋದವು. ಹೆಚ್ಚು ಹೆಚ್ಚು ವೀಕ್ಷಕರಿಗೆ ಈ ಚಿತ್ರಗಳು ತಲುಪಬೇಕೆಂದು ಬಹಳ ಪ್ರಯತ್ನಿಸಿದೆ, ಆದರೆ ಹಾಗೆ ಆಗಲಿಲ್ಲ.
“ಆದರೆ ಈ ಚಿತ್ರಗಳು ವಿಮರ್ಶಕರ ದೃಷ್ಟಿಯಿಂದ ಉತ್ತಮ ಎಂದೆನಿಸಿದವು. `ಮಂಟೋ, ಕಿಸ್ಸಾ….’ ಇತ್ಯಾದಿ ಯಾವುದೇ ಚಿತ್ರ ಇರಬಹುದು, ಇವುಗಳ ಬಿಡುಗಡೆಯೇ ಬಲು ದೊಡ್ಡ ಸಮಸ್ಯೆ ಆಗಿಹೋಯಿತು. ಇವು ಲೋ ಬಜೆಟ್ ಚಿತ್ರಗಳು, ಬಾಲಿವುಡ್ ನ ಮಹಾನ್ ಸ್ಟಾರುಗಳಾರೂ ಇದರಲ್ಲಿ ಇರಲಿಲ್ಲ. “ಆದರೆ ವೆಬ್ ಸೀರೀಸ್ ನಲ್ಲಿ `ಮಿರ್ಜಾಪುರ್’ ನಂತರ `ಡೆಲ್ಲಿ ಕ್ರೈಮ್, ಔಟ್ ಆಫ್ ಲವ್’ ಇತ್ಯಾದಿ ಚಿತ್ರಗಳು ಬಿಡುಗಡೆ ಆದವು. ನಂತರ, ನನಗೆ ವೀಕ್ಷಕರ ಜೊತೆ ನೇರ ಸಂಪರ್ಕ ಅಥವಾ ಟಚ್ ನಲ್ಲಿರಲು ಸಾಧ್ಯವಾಯಿತು.
“ಇದರಿಂದ ನನಗೆ ಬಹಳ ಹೆಚ್ಚಿನ ಅಂಶಗಳನ್ನು ಕಲಿಯುವಂತಾಯಿತು, ಬಹಳ ಸಂತೋಷವಾಯಿತು. ಜನ ನಿಮ್ಮನ್ನು ನಿಮ್ಮ ಕೆಲಸದಿಂದ ಗುರುತಿಸುವಂತಾಗಬೇಕು, ಅದನ್ನು ಅವರು ಮನಸಾರೆ ಮೆಚ್ಚಿಕೊಳ್ಳಬೇಕು, ಆಗ ಮಾತ್ರ ಒಬ್ಬ ನಟಿಯಾಗಿ ನಾನು ಯಶಸ್ವಿ ಎನಿಸಬಲ್ಲೆ!”

ವೀಕ್ಷಕರನ್ನು ಅರ್ಥ ಮಾಡಿಕೊಳ್ಳಬೇಕು
ಕೆಲಸದ ಸಲುವಾಗಿ ವೀಕ್ಷಕರ ಜೊತೆ ಉತ್ತಮ ಟಚ್ ಹೊಂದಿರುವುದು, ಯಾವ ನಟ ನಟಿಯರಿಗೇ ಆಗಲಿ, ಯಶಸ್ಸಿಗೆ ಉತ್ತಮ ಸೋಪಾನ ಎಂದೇ ತಿಳಿಯಬೇಕು. ಇದೇ ಕೆಲಸವನ್ನು ಈಕೆ ವೆಬ್ ಸೀರೀಸ್ ಚಿತ್ರಗಳಿಂದ ಸಾಧಿಸಿದಳು. ಆಕೆ ಪ್ರಕಾರ, “ವೆಬ್ ಸೀರೀಸ್`ಮಿರ್ಜಾಪುರ್’ನ ಎಲ್ಲಾ ಶೋಸ್ ಬಿಲ್ ಕುಲ್ ಡಿಫರೆಂಟ್ ಆಗಿತ್ತು. ಅದರ ರೀಚ್ ಬಾಕಿ ಸೀರೀಸ್ ಗಿಂತ ಬಲು ವಿಭಿನ್ನ ಎಂದೇ ಹೇಳಬಹುದು.
“ನಾನು ಹೊರಗಡೆ ಎಲ್ಲಿಯೇ ಓಡಾಡಲಿ, ಜನ ಈಗಲೂ ನನ್ನನ್ನು ಈ ಸೀರೀಸ್ ನ ಪಾತ್ರದ ದೃಷ್ಟಿಯಿಂದಲೇ ಗುರುತಿಸುತ್ತಾರೆ, ಆ ಪಾತ್ರದಲ್ಲಿ ನಾನು ಅಂಥ ಪರಕಾಯ ಪ್ರವೇಶ ಹೊಂದಿದ್ದೇನೆ ಎಂದು ಅವರು ಹೊಗಳುವಾಗ, ನಾನು ಆ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿದ್ದೇನೆ ಎಂದು ಗುರುತಿಸಿಕೊಂಡು ಹೆಮ್ಮೆ ಎನಿಸಿತು. ಜನ ಇಂದಿಗೂ ಆ ಸೀರೀಸ್ ಬಗ್ಗೆ ಹೇಳುತ್ತಿದ್ದರೆ ಬಹಳ ಖುಷಿ ಅನ್ಸುತ್ತೆ.
“ನಾನು ಯಾವುದೇ ಚಿತ್ರದಲ್ಲಿ ಉತ್ತಮವಾಗಿ ನಟಿಸಿದಾಗಲೂ, ವೀಕ್ಷಕರು ನನ್ನನ್ನು ತಮ್ಮ ನೆರೆಮನೆಯ ಹುಡುಗಿ ಎಂಬಂತೆ ಆದರಿಸುತ್ತಾರೆ. ಇದರಿಂದ ನನಗೆ ಅವರ ಪ್ರೋತ್ಸಾಹದ ಶ್ರೀರಕ್ಷೆ ಸದಾ ಇದ್ದೇ ಇರುತ್ತದೆ. ಇದರಿಂದಾಗಿ ವೀಕ್ಷಕರ ಜೊತೆ ನಮ್ಮ ಬಾಂಧವ್ಯದ ಬೆಸುಗೆ ಸದೃಢವಾಗುತ್ತದೆ, ಇದು ನನಗೆ ಆಸ್ಕರ್ ಅವಾರ್ಡ್ ಸಿಕ್ಕಿದಷ್ಟೇ ತೃಪ್ತಿ, ಸಮಾಧಾನ ತಂದುಕೊಡುತ್ತದೆ!”
ಪ್ರಭಾವ ಬೀರುವ ಪಾತ್ರಗಳು
ಎಲ್ಲಾ ಚಿತ್ರಗಳು ಹಾಗೂ ವೆಬ್ ಸೀರೀಸ್, ರಸಿಕಾಳನ್ನು ಒಂದಲ್ಲ ಒಂದು ರೂಪದಲ್ಲಿ ಪ್ರಭಾವಿತಗೊಳಿಸಿವೆ. ಆದರೆ ಅದರಲ್ಲಿ ಯಾವುದು ಅತಿ ಮೆಚ್ಚಿನದು ಎಂದು ಪ್ರಶ್ನಿಸಿದರೆ, ರಸಿಕಾ `ಡೆಲ್ಲಿ ಕ್ರೈಮ್’ ಚಿತ್ರದಲ್ಲಿನ ತನ್ನ ನೀತಿ ಸಿಂಗ್ ಪಾತ್ರದ ಕುರಿತಾಗಿ ಬಹಳ ನೆನಪಿಸಿಕೊಳ್ಳುತ್ತಾಳೆ.
“ಈ ಪಾತ್ರ ನನಗೆ ನನ್ನ ಕಾಲೇಜಿನ ದಿನಗಳನ್ನು ಬಹಳ ನೆನಪಿಸುತ್ತದೆ. ಏಕೆಂದರೆ ತುಂಬು ಬಿಸಿ ರಕ್ತದ ಆ ದಿನಗಳಲ್ಲಿ, ಅತಿಯಾದ ಆದರ್ಶವಾದಿ ಆಗಿರಬೇಕು ಎಂದು ಯಾವ ಯಂಗ್ ಸ್ಟರ್ ಗಾದರೂ ಅನಿಸುತ್ತದೆ.
“ತಾನೇ ಎಲ್ಲಾ ಪರಿಸ್ಥಿತಿಗಳನ್ನೂ ಬದಲಾಯಿಸಿಬಿಡಬೇಕು ಎಂದು ನಾನು ಆವೇಶ ಪಡುತ್ತಿದ್ದಂತೆಯೇ ಈ ಪಾತ್ರ ಇಲ್ಲಿ ನಡೆದುಕೊಳ್ಳುವುದನ್ನು ನೋಡಿದರೆ, ನಮ್ಮಿಬ್ಬರಲ್ಲಿ ಬಹಳ ಹೋಲಿಕೆಗಳಿವೆ ಎಂದೆನಿಸುತ್ತದೆ.
“ಇದರ ಜೊತೆಗೆ ನಾನು ಹೆಚ್ಚಿನ ಆತ್ಮವಿಶ್ವಾಸ ಬೆಳೆಸಿಕೊಂಡದ್ದು ಮಾತ್ರವಲ್ಲ, ಪ್ರೇಕ್ಷಕರ ಸಂಪರ್ಕದಿಂದಾಗಿ ಅಷ್ಟೇ ಮೃದುಭಾಷಿ ಆಗಿದ್ದೇನೆ. ಈ ಸ್ಥಿತಿಯನ್ನು ನಾನು ಹಲವಾರು ಸಲ ಎದುರಿಸಿದ್ದೇನೆ.
“ಏಕೆಂದರೆ ಸಾಫ್ಟ್ ಸ್ಪೋಕನ್ ಆಗಿರುವುದರಿಂದ, ಜನ ಟೇಕನ್ ಟು ಬಿ ಗ್ರಾಂಟೆಡ್ಆಗಿಸಿಕೊಂಡು, ಸೀರಿಯಸ್ ಆಗಿ ತೆಗೆದುಕೊಳ್ಳದೆ, ಸಿಲ್ಲಿಸಿಲ್ಲಿ ಪರ್ಸನಲ್ ಪ್ರಶ್ನೆಗಳನ್ನು ಕೇಳುವುದರ ಮೂಲಕ ಪಬ್ಲಿಕ್ ನಲ್ಲಿ ಉತ್ತರಿಸಲಾಗದಂತೆ ಇಕ್ಕಟ್ಟಿಗೆ, ಧರ್ಮಸಂಕಟಕ್ಕೆ ಸಿಲುಕಿಸಿ ಬಿಡುತ್ತಾರೆ.
“ಏನೇ ಆಗಲಿ, ಅವರವರ ಭಾವಕ್ಕೆ ಅವರವರ ಭಕುತಿಗೆ, ನಂಬಿಕೆಗೆ ಕೆಲವು ಪ್ರಶ್ನೆಗಳು ಬಿಟ್ಟದ್ದು ಎಂದು ನಾನು ಅದನ್ನು ಅಲ್ಲೇ ಕೈ ಬಿಡುತ್ತೇನೆ. ಹಾಗೆಂದು ಪ್ರೇಕ್ಷಕರನ್ನು ಎಂದೂ ನಾನು ದೂರ ಮಾಡಿಕೊಳ್ಳವವಳಲ್ಲ!”
ಫಿಲ್ಮಿ ಜರ್ನಿ ಸಂಘರ್ಷವೇ ನನ್ನ ಚಾಲೆಂಜ್!
ತನ್ನ ಫಿಲ್ಮಿ ಜರ್ನಿಯ ಸಂಘರ್ಷವನ್ನೇ ರಸಿಕಾ ದೊಡ್ಡ ಚಾಲೆಂಜ್ ಆಗಿ ಸ್ವೀಕರಿಸುತ್ತಾಳೆ. “ಇದು ಯಾವ ವ್ಯಕ್ತಿಯನ್ನೇ ಆಗಲಿ, ಹೆಚ್ಚು ಮೋಟಿವೇಟ್ ಮಾಡಿಸುತ್ತದೆ. ತನ್ನನ್ನು ತಾನು ಇಂಪ್ರೂವ್ ಮಾಡಿಕೊಳ್ಳುವ ಸದವಕಾಶ ನೀಡುತ್ತದೆ, ಇದರಿಂದಾಗಿ ಪ್ರತಿಯೊಬ್ಬ ನಟ/ನಟಿ ತಾನು ನಟಿಸುತ್ತಿರುವ ಚಿತ್ರದ ಭಾಷೆ, ನೆಲ, ಜಲ, ಜನರಿಗೆ ಎಷ್ಟು ಬಾಧ್ಯರಾಗಿರಬೇಕೆಂದು ಸ್ಪಷ್ಟವಾಗಿ ತೋರಿಸಿಕೊಡುತ್ತದೆ.
“ಇದಕ್ಕಾಗಿ ಹೆಚ್ಚು ಸೀರಿಯಸ್ ಆಗದೆ, ಇದನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ನಿಭಾಯಿಸಬೇಕಾಗುತ್ತದೆ. ಇದು ಪ್ರತಿಯೊಬ್ಬ ಕಲಾವಿದರನ್ನೂ ಹುರಿದುಂಬಿಸುತ್ತದೆ, ಮುಂದಿನ ಚಿತ್ರಗಳ ಆಯ್ಕೆಯಿಂದ ತಾನೆಷ್ಟು ಮಾತ್ರ ಪ್ರೇಕ್ಷಕರ ಮನದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲೇ ಎಂದು ತೋರಿಸಿಕೊಡಲು ಸಹಕಾರಿಯಾಗಿದೆ.
“ಇಂಥದ್ದೆಲ್ಲ ಇಲ್ಲದಿದ್ದರೆ ಲೈಫ್ ಬೋರಿಂಗ್ ಆಗುತ್ತದೆ. ನಾವು ಯಾವುದನ್ನು ಹೇಗೆ ತೆಗೆದುಕೊಳ್ಳುತ್ತೇವೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. ಮುಂದೆ ಕಾಮಿಡಿ ಪಾತ್ರಗಳನ್ನು ಮಾಡುವ ಆಸೆ ಇದೆ, ನೋಡೋಣ….” ಎನ್ನುವ ರಸಿಕಾಳಿಗೆ ಗೃಹಶೋಭಾ ಓದುಗರೆಲ್ಲರ ಪರವಾಗಿ ಆಲ್ ದಿ ಬೆಸ್ಟ್!
– ಪ್ರತಿನಿಧಿ





