ಊಟ ಮುಗಿಸಿ ಮಧ್ಯಾಹ್ನದ ವಿಶ್ರಾಂತಿಗಾಗಿ ಆಗ ತಾನೇ ನಿರ್ಮಲಾ ಹಾಸಿಗೆ ಮೇಲೆ ಅಡ್ಡಾಗಿದ್ದಳು. ಅಷ್ಟರಲ್ಲಿ ಅವಳ ಆಪ್ತಗೆಳತಿ ಮಧುಮಿತಾ ಫೋನ್ ಮಾಡಿದಳು.
“ಓಹೋ… ದೇವಿಯವರು ಹನೀಮೂನ್ ಮುಗಿಸಿಕೊಂಡು ಬಂದ್ರು ಅಂತ ಕಾಣ್ಸುತ್ತೆ. ಇಷ್ಟು ಸುದೀರ್ಘ ದಿನಗಳಲ್ಲಿ ಒಂದು ಸಲವಾದರೂ ಈ ಬಡಪಾಯಿ ಫ್ರೆಂಡ್ ನೆನಪಾಗಲಿಲ್ಲವೇ?” ನಿರ್ಮಲಾ ಬೇಕೆಂದೇ ಗೆಳತಿಯನ್ನು ಛೇಡಿಸಿದಳು.
“ಅಯ್ಯೋ ನಿಮ್ಮಿ….. ಕೋಪ ಮಾಡಿಕೋಬೇಡವೇ…. ಕಳೆದ ಹಲವು ದಿನಗಳು ಎಷ್ಟು ಹೆಕ್ಟಿಕ್ ಆಗಿಹೋಗಿತ್ತು ಅಂದ್ರೆ, ಕೇಳಲೇಬೇಡ. ಒಂದು ಬದಲಾವಣೆ ಇರಲಿ ಅಂತ, ಉ.ಭಾರತದ ಪುಷ್ಕರ್ ತೀರ್ಥಯಾತ್ರಾ ಸ್ಥಳವನ್ನು ನಮ್ಮ ಹನೀಮೂನ್ ಸ್ಪಾಟ್ ಅಂತ ಆವರಿಸಿಕೊಂಡಿದ್ದೆ. ಅಲ್ಲೆಲ್ಲ ಅಲೆದಾಡಿ ಸಾಕಾಗಿ ಹೋಯ್ತಮ್ಮ. ಹನೀಮೂನ್ ಗಾಗಿ ಇಂಥ ಸ್ಥಳವೇ ಅಂತ ವಿಜಯ್ ಸಿಡಿ ಸಿಡಿ ಅಂತಿದ್ದ.
“ಹೀಗಾಗಿ ಅಲ್ಲಿದ್ದಷ್ಟು ದಿನ ನೀನೇನು ಹನೀಮೂನ್ ಗೆ ಅಂತ ಇಲ್ಲಿಗೆ ಬಂದೆಯಾ….. ತೀರ್ಥಯಾತ್ರೆಗಾ ಅಂತ ರೇಗಾಡುತ್ತಲೇ ಇದ್ದ. ಯಾಕೋ…. ಹನೀಮೂನ್ ಗಾಗಿ ನಾನು ಪುಷ್ಕರ್ ಜಾಗ ಆರಿಸಿದ್ದು ಸರಿ ಹೋಗಲೇ ಇಲ್ಲ. ಅಲ್ಲಿ ಎಲ್ಲಾ ಕಡೆ ದೇವಾಲಯ, ಸಣ್ಣಪುಟ್ಟ ಮಂದಿರ, ಪಂಡಿತರು, ಪೂಜಾರಿ, ಮಂತ್ರಗಳು, ಘಂಟೆಯ ಸದ್ದು, ಪೂಜೆ ಪುನಸ್ಕಾರಗಳೇ ಆಗಿಹೋಯ್ತು…..”
“ವಿಜಯ್ ಗೆ ರೇಗಲು ಬೇರೆ ನೆಪವೇ ಬೇಕಾಗಲಿಲ್ಲ. ಎಲ್ಲಿ ನೋಡಿದರೂ ಈ ವೈರಾಗ್ಯ ಮೂರ್ತಿಗಳೇ ತುಂಬಿರುವ ಇಂಥ ಜಾಗ ನಮಗೆ ಈಗ ಬೇಕಿತ್ತಾ? ಒಂದಿಷ್ಟು ರೊಮ್ಯಾಂಟಿಕ್ ಮೂಡ್ ಬಂತು ಅಂತ ಅಂದುಕೊಳ್ಳುವಷ್ಟರಲ್ಲಿ ಈ ಮಂದಿರಗಳ ಘಂಟಾಘೋಷದಿಂದ ಇದ್ದಬದ್ದ ಮೂಡ್ ಎಲ್ಲಾ ಆಫ್ ಆಗಿ ಹೋಗುತ್ತದೆ! ಹೀಗೆ…. ಅವನ ಮಾತು ಮುಗಿಯುತ್ತಿರಲಿಲ್ಲ.”
ಮಧುಮಿತಾಳ ಮಾತು ಕೇಳುತ್ತಿದ್ದಂತೆ ನಿರ್ಮಲಾ ಜೋರಾಗಿ ನಗತೊಡಗಿದಳು.
“ಅಯ್ಯೋ ಹುಚ್ಚು ಹುಡುಗಿ…. ಪುಷ್ಕರ್ ನಂಥ ಯಾತ್ರಾಸ್ಥಳಕ್ಕೆ ಈಗ ಹೋಗುವ ಅಗತ್ಯ ಏನಿತ್ತು? ಇದನ್ನು ಮಧುಚಂದ್ರದ ಡೆಸ್ಟಿನೇಶನ್ ಅಂತ ಯಾಕೆ ಆರಿಸಿದೆ? ಹೊರಟಿದ್ದು ರಾಜಸ್ಥಾನಕ್ಕೆ…. ಜೈಪುರ್, ಜೈಸಲ್ಮೇರ್ ನಂಥ ರೊಮ್ಯಾಂಟಿಕ್ ಸಿಟಿಗಳು ನೆನಪಾಗಲಿಲ್ಲವೇ? ಚಿತ್ತೋರ್, ಉದಯ್ ಪುರ್, ಬೂಂದಿ…. ಇನ್ನೂ ಬೇಕಾದಷ್ಟು ಸ್ಥಳಗಳಿವೆ. ಅದೆಲ್ಲ ಬಿಟ್ಟು ನಿನ್ನ ಕಣ್ಣೇಕೆ ಪುಷ್ಕರದಲ್ಲಿ ನೆಟ್ಟಿತು?”
“ಹಾಗಲ್ವೇ ನಿಮ್ಮಿ…. ಈ ಸಣ್ಣಪುಟ್ಟ ತೊರೆ, ನದಿ, ಝರಿಗಳು ನನಗೆಷ್ಟು ಇಷ್ಟ ಅಂತ ನಿನಗೆ ಗೊತ್ತಿಲ್ಲವೇ? ಅಂಥ ಪ್ರಕೃತಿ ದೃಶ್ಯಗಳ ಮುಂದೆ ಬೇರೇನೂ ಬೇಡ ಅನಿಸುತ್ತೆ. 2 ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ನಾನು ಪುಷ್ಕರಕ್ಕೆ ಫ್ರೆಂಡ್ಸ್ ಜೊತೆ ಹೋಗಿದ್ದೆ. ಆಗ ಅಲ್ಲಿನ ಗುಲಾಬೋ ಬಗೀಚಾ (ರೋಸ್ ಗಾರ್ಡನ್), ಸುಂದರ ಝರಿ ತೊರೆ ನೋಡಿ ಮುಂದೆ ಹನೀಮೂನ್ ಗೆ ಇಲ್ಲಿಗೆ ಬರಬೇಕು ಅಂತ ಡಿಸೈಡ್ ಮಾಡಿದ್ದೆ.
“ಆದರೆ ನಾವು ಮಧುಚಂದ್ರದ ನೆಪದಲ್ಲಿ ಈ ಸೀಸನ್ನಿನಲ್ಲಿ ಬಂದಾಗ, ಇಲ್ಲಿ ಗುಲಾಬಿ ಅರಳಿರುತ್ತದೋ ಇಲ್ಲವೋ…. ಗೂಗಲ್ ಮಾಡಿಯೂ ತಿಳಿದುಕೊಳ್ಳಲಿಲ್ಲ. ನೀನು ಇದನ್ನೆಲ್ಲ ಗಮನಿಸದೆ ಯಾಕೆ ಇಂಥ ಜಾಗ ಫಿಕ್ಸ್ಸ ಮಾಡಿದೆ ಅಂತ ವಿಜಯ್ ಟೂರಿಂಗ್ ಪೂರ್ತಿ ಗೊಣಗಿದ್ದೇ ಬಂತು!” ಮಧು ಬಹಳ ಬೇಸರದಲ್ಲಿ ಹೇಳಿಕೊಂಡಳು.
“ಪುಷ್ಕರದಂಥ ಧಾರ್ಮಿಕ ಸ್ಥಳಗಳಲ್ಲಿ ರಾಶಿ ರಾಶಿ ಮಂದಿರಗಳಿರುತ್ತವೆ, ಎಲ್ಲೆಲ್ಲೂ ಧಾರ್ಮಿಕ ವಾತಾವರಣ ತುಂಬಿರುತ್ತೆ ಅಂತ ನಿನಗೆ ಗೊತ್ತೇ ಆಗಲಿಲ್ಲವೇ? ಯಾಕೆ ಇಂಥ ಅವಾಂತರ ಮಾಡಿಕೊಂಡೆ?” ನಿರ್ಮಲಾ ಕೇಳಿದಳು.
“ಏನು ಹೇಳಲಿ….. ಯಾವ ಕಡೆ ಹೊರಡೋದು ಅಂತ ಮನೆಯಲ್ಲಿ ಡಿಸ್ಕಸ್ ಮಾಡುತ್ತಿದ್ದಾಗ, ನಮ್ಮತ್ತೆ, ವಿಜಯ್ ನ ಅಜ್ಜಿ ಎಲ್ಲರೂ ಇದೇ ಜಾಗ ಬಹಳ ಚೆನ್ನಾಗಿರುತ್ತೆ. ಜೀವನದ ಶುಭಾರಂಭವನ್ನು ಒಂದು ಪುಣ್ಯಕ್ಷೇತ್ರ, ಯಾತ್ರಾಸ್ಥಳದಿಂದ ಶುರು ಮಾಡಿ ಅಂತ ಆಶೀರ್ವಾದ ಮಾಡಿದರು. ಹೀಗಾಗಿ ಇವೆಲ್ಲ ಸೇರಿ ನಾವು ಪುಷ್ಕರ್ ಸ್ಥಳ ಆರಿಸಿಕೊಳ್ಳುವಂತಾಯಿತು,” ನಿರ್ವಿಕಾರ ಧ್ವನಿಯಲ್ಲಿ ಮಧು ಹೇಳಿದಳು.
“ಏನೇ ನೀನು… ಇಷ್ಟೆಲ್ಲ ಆಧುನಿಕಳಾಗಿ ನೀನು ನಿನ್ನ ಮಧುಚಂದ್ರದ ಜಾಗ ಆರಿಸಲಾರದೆ ಹೋದೆಯಲ್ಲ…..” ಎಂದು ನಿರ್ಮಲಾ ಬೇಸರಪಟ್ಟುಕೊಂಡಳು.
“ಹೌದು ಕಣೆ….. ರಜೆಯ 4 ದಿನಗಳು ಅನ್ಯಾಯವಾಗಿ ಹೇಗೆ ಹೇಗೋ ಕಳೆದುಹೋಯ್ತಲ್ಲ ಅಂತ ಬೇಜಾರಾಗಿ ಹೋಯ್ತು. ಜೊತೆಗೆ ವಿಜಯ್ ನ ಬೈಗುಳ ಅದು ಬೇರೆ ಕಿರಿಕಿರಿ….. ಪುಷ್ಕರಕ್ಕೆ ಬದಲಾಗಿ ಉದಯಪುರಕ್ಕೆ ಹೋಗಿದ್ದರೆ, ಪ್ರತಿ ಜಾಗದಲ್ಲೂ ರೊಮ್ಯಾಂಟಿಕ್ ದೃಶ್ಯಗಳಿರುತ್ತಿದ್ದವು….. ಅಲ್ಲಿಗೆ ಹೋಗಿದ್ದಿದ್ದರೆ ಆರಾಮವಾಗಿ ಹನೀಮೂನ್ ಎಂಜಾಯ್ ಮಾಡಬಹುದಿತ್ತು!” ಮಧು ಹೇಳಿದಳು.
“ಆಯ್ತು ಬಿಡು, ಈಗ ಅನುಭವಿ ನೀನು. ಮುಂದಿನ ವರ್ಷ ಮೊದಲ ಆ್ಯನಿವರ್ಸರಿಗೆ ಸರಿಯಾಗಿ ಪ್ಲಾನ್ ಮಾಡಿ ಹೊರಡು. ಎಷ್ಟೋ ನವದಂಪತಿಗಳು ಇಂಥ ಮಧುಚಂದ್ರಕ್ಕೆ ಹೊರಡಲು ಆಗುವುದೇ ಇಲ್ಲ, ಪ್ಲಾನಿಂಗ್ ಇರಲ್ಲ, ಸಮಯದ ಅಭಾವ, ಏನೇನೋ ಕಷ್ಟಗಳು….. ಆದರೂ… ನವದಂಪತಿಗೆ ಈ ಮಧುಚಂದ್ರ ಏನೋ ಒಂದು ಹೊಸ ಹುರುಪು, ಉತ್ಸಾಹ ನೀಡುತ್ತದೆ. ನೀನು ಏನಂತೀಯಾ….?” ನಿರ್ಮಲಾ ಕೇಳಿದಳು.
ಅರ್ಥೈಸಿಕೊಳ್ಳಲು ಸುವರ್ಣಾವಕಾಶ
“ನಿಜಕ್ಕೂ ಇದು ನವದಂಪತಿಗಳಿಗೆ ಒಂದು ಸುವರ್ಣಾವಕಾಶವೇ ಸರಿ. ದಂಪತಿಗಳಿಬ್ಬರೂ ಎಲ್ಲೋ ಬೇರೆ ಕಡೆ ಹುಟ್ಟಿ ಬೆಳೆದು, ಒಂದಾಗಿ ಮುಂದೆ ಜೀವನ ಸಾಗಿಸುವರು, ಒಂದಿಷ್ಟು ಪರಸ್ಪರರ ಬಗ್ಗೆ ಅರಿತುಕೊಳ್ಳಲು ಸರಿಹೋಗುತ್ತದೆ. ಪರಸ್ಪರರ ಸ್ವಭಾವ, ಅಭ್ಯಾಸಗಳು, ಜೀವನಮೌಲ್ಯ, ಜೀವನಶೈಲಿ ಇತ್ಯಾದಿಗಳ ಬಗ್ಗೆ ಸ್ಪಷ್ಟ ತಿಳಿಯಬಹುದು.
“ನಾನೂ ವಿಜಯ್ ಈ ಟ್ರಿಪ್ ನಲ್ಲಿ ಈ ಮೂಲಕ ಪರಸ್ಪರರ ಕುರಿತು ಎಲ್ಲಾ ವಿವರ ತಿಳಿದುಕೊಳ್ಳುವಂತಾಯಿತು. ಮಧುಚಂದ್ರದ ಈ ಏಕಾಂತದಲ್ಲಿ ನಾವಿಬ್ಬರೂ ಪರಸ್ಪರ ಮಾನಸಿಕತೆ, ಪರ್ಸನಾಲ್ಟಿ ಕುರಿತು ಗಂಭೀರವಾಗಿ, ಆಳವಾದ ವಿವರ ತಿಳಿದುಕೊಂಡೆ. ಇದು ನಮ್ಮಿಬ್ಬರ ನಡುವಣ ಅಂಡರ್ ಸ್ಟ್ಯಾಂಡಿಂಗ್ ಗೆ ಬಹಳ ಅನುಕೂಲವಾಯಿತು. ಇದರಿಂದ ಮುಂದಿನ ಭವಿಷ್ಯದ ಕುರಿತು ಒಂದು ಸ್ಪಷ್ಟ ಚಿತ್ರಣ ಕಂಡುಕೊಳ್ಳಲು ಅವಕಾಶವಾಯಿತು.
ಪರಸ್ಪರರ ಕುರಿತು ಅಪೇಕ್ಷೆ ಆಕಾಂಕ್ಷೆ
“ಈ ಸಂದರ್ಭದಲ್ಲಿ ಪರಸ್ಪರರ ಅಪೇಕ್ಷೆ ಆಕಾಂಕ್ಷೆಗಳ ಕುರಿತು ಸಹ ಹೆಚ್ಚು ಚರ್ಚಿಸಿದೆ. ಜೀವನ ಸಂಗಾತಿಗಳಾಗಿ ಪರಸ್ಪರ ಹೇಗೆ ಪೂರಕವಾಗಿರಬೇಕು, ಭಾವನಾತ್ಮಕ ಸಹಕಾರ ನೀಡಬೇಕು, ಮಾನಸಿಕ ಒತ್ತಾಸೆ ಇರಬೇಕು ಎಂದೆಲ್ಲ ಚರ್ಚಿಸಿದೆ.
ಮಾನಸಿಕ ಒತ್ತಡದಿಂದ ಮುಕ್ತಿ
“ಮದುವೆಯ 2-3 ತಿಂಗಳಿನಿಂದಲೇ ನಾವು ಇದಕ್ಕೆ ಬೇಕಾದ ತಯಾರಿ, ಫಂಕ್ಷನ್ ಹೇಗೆ ನಡೆಯುತ್ತದೋ, ಸಂಗಾತಿ ಹೇಗೋ ಏನೋ…. ಮುಂತಾದ ಎಲ್ಲಾ ಒತ್ತಡಗಳಲ್ಲಿ ಸಿಲುಕಿ ನಲುಗಿದ್ದೆ. ಜೊತೆಗೆ ವಿಜಯ್ ದು ಜಾಯಿಂಟ್ ಫ್ಯಾಮಿಲಿ. ತಾಯಿ ತಂದೆ, ಅಜ್ಜಿ, ತಮ್ಮ ತಂಗಿ ಎಲ್ಲಾ ಇದ್ದರು. ಆ ಮನೆಯ ಹಿರಿಯ ಸೊಸೆಯಾಗಿ ಹೇಗೆ ಜವಾಬ್ದಾರಿ ನಿರ್ವಹಿಸುವೆನೋ ಎಂಬ ಟೆನ್ಶನ್ ನನಗೆ ಸದಾ ಕಾಡುತ್ತಿತ್ತು.
“ಒಬ್ಬ ಪತಿಯಾಗಿ ತಾನು ಹೇಗೆ ಯಶಸ್ವಿಯಾಗಬಲ್ಲೆ ಎಂದು ಅವನಿಗೂ ಬಹಳ ಟೆನ್ಶನ್ ಇತ್ತು. ಹೊಸ ಜವಾಬ್ದಾರಿ, ಹೊಸ ಜೀವನದ ಆತಂಕ ಎಲ್ಲರಲ್ಲೂ ಇದ್ದದ್ದೇ! ಹೀಗಾಗಿ ಬೇರೆ ಎಲ್ಲಾ ಒತ್ತಡಗಳನ್ನೂ ಮರೆತು ನಾವು ಪರಸ್ಪರ ಉತ್ತಮ ಕ್ವಾಲಿಟಿ ಟೈಂ ಕೊಟ್ಟುಕೊಳ್ಳಲು ಸಾಧ್ಯವಾಯಿತು. ಹಾಗಾಗಿ ಎಷ್ಟೋ ಒತ್ತಡಗಳು ತಾವಾಗಿ ಕಡಿಮೆಯಾದವು.
ಹೊಸ ಜೀವನದ ಸಡಗರ ಸಂಭ್ರಮ
“ಈ ಮಧುಚಂದ್ರದ ಮೂಲಕ ತಮ್ಮಿಬ್ಬರ ಗಮನ ಪರಸ್ಪರರ ಮೇಲೆ ಕೇಂದ್ರಿತವಾಗಿತ್ತು. ಇದರಿಂದ ನಮ್ಮ ಹೊಸ ಜೀವನದಲ್ಲಿ ಉಂಟಾದ ಬದಲಾವಣೆ, ಅದರ ಸಡಗರ, ಸಂಭ್ರಮಗಳತ್ತ ಫೋಕಸ್ ಮಾಡಲು ಸಾಧ್ಯವಾಯಿತು. ಇದನ್ನು ವೈಯಕ್ತಿಕವಾಗಿ ಇಬ್ಬರೂ ಗುರುತಿಸಿಕೊಂಡೆವು.
ಪರಸ್ಪರರ ಅಂತರಂಗಕ್ಕೊಂದು ಆಯಾಮ
“ಫಿಜಿಕಲ್ ಇಂಟಿಮೆಸಿ ಒಂದು ಯಶಸ್ವಿ ಮದುವೆಯ ಮಹತ್ವಪೂರ್ಣ ಮೈಲಿಗಲ್ಲು. ಈ ಮಧುಚಂದ್ರದ ಮೂಲಕ ಪರಸ್ಪರರ ಅಂತರಂಗ ಅರಿತುಕೊಂಡು, ಒಬ್ಬರಗೊಳಗೊಬ್ಬರು ವಿಲೀನವಾದೆವು. ಇದು ನಮ್ಮ ಮುಂದಿನ ಹೊಸ ಜೀವನಕ್ಕೆ ಒಂದು ಹೊಸ ಆಯಾಮವಾಯಿತು.
“ಏಕಾಂತದಲ್ಲಿ ನಾವು ಬಹಳ ಎಂಜಾಯ್ ಮಾಡಿದೆವು, ಇಲ್ಲಿ ಯಾರ ಅಡೆತಡೆ, ಆಕ್ಷೇಪಣೆ, ಸಂಕೋಚದ ಪರದೆ ಇರಲಿಲ್ಲ. ಹೀಗಾಗಿ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಮುಂದೆ ಸಂಸಾರದ ಜವಾಬ್ದಾರಿ ಇದ್ದದ್ದೇ, ಕೆಲಸದ ಒತ್ತಡ, ಎರಡೂ ಕಡೆ ಸಂಭಾಳಿಸಬೇಕಾದ ಅನಿವಾರ್ಯತೆ, ಹೊಸ ದಂಪತಿಗಳಿಗೆ ಈ ತರಹದ ಟೆನ್ಶನ್ ತಪ್ಪಿದ್ದಲ್ಲ. ಈ ಎಲ್ಲದರ ಕಾರಣ ಇಬ್ಬರ ನಡುವೆ ರೊಮಾನ್ಸ್ ಎಲ್ಲೋ ಹಿಂದೆ ಸರಿದುಬಿಡುತ್ತದೆ. ನಮ್ಮಿಬ್ಬರ ನಡುವೆ ಎಂದೂ ರೊಮಾನ್ಸ್ ಬತ್ತದಿರಲಿ ಎಂದು ಪ್ರಾಮಿಸ್ ಮಾಡಿಕೊಂಡೆವು.
ಭಾವನಾತ್ಮಕ ಬಾಂಧವ್ಯ
“ಮನೆ, ಪರಿವಾರ, ತಾಯಿ ತಂದೆ, ಅಣ್ಣ ತಂಗಿಯರು ಎಲ್ಲರ ನಡುವೆಯೂ ನಾವು ನಮ್ಮದೇ ಆದ ಪ್ರತ್ಯೇಕ ಪ್ರೈವೆಸಿ ಉಳಿಸಿಕೊಂಡು, ನಮ್ಮ ಗಾಢ ಸಂಬಂಧವನ್ನು ಮುಂದುವರಿಸಿದೆವು. ಇದರಿಂದ ನಮ್ಮೊಳಗಿನ ಭಾವನಾತ್ಮಕ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು. ಇದು ಯಾಜ್ಜೀವನ ಪರಸ್ಪರರಿಗಾಗಿ ಬಾಳುವ ತುಡಿತ ತಂದುಕೊಟ್ಟಿತು.
“ಈ ಟ್ರಿಪ್ ನಿಂದ ನಾವು ಒಂದು ಸುಖೀ ಭವಿಷ್ಯದ ಕನಸು ಕಾಣುತ್ತಾ, ಅದನ್ನು ಸಾಕಾರಗೊಳಿಸಲು ಎಲ್ಲಾ ಪ್ರಯತ್ನಕ್ಕೆ ತೊಡಗಿದೆವು. ಏಕಾಂತದಲ್ಲಿ ಪರಸ್ಪರರಿಗೆ ದೊರೆತ ಸಾನ್ನಿಧ್ಯದಿಂದಾಗಿ ಎಲ್ಲಾ ಮಾತುಕತೆಗಳಿಂದ ನಮ್ಮ ನಮ್ಮ ಅಗತ್ಯಗಳು, ಮುಂದಿನ ಭವಿಷ್ಯದ ಕುರಿತು ಕನಸು, ಕಲ್ಪನೆಗಳು ಎಲ್ಲವನ್ನೂ ಅರ್ಥ ಮಾಡಿಕೊಂಡೆವು.
“ಆದ್ದರಿಂದಲೇ ನಾನು ಹೇಳುವುದು ನಿಮ್ಮಿ, ನವದಂಪತಿಗೆ ಈ ಮಧುಚಂದ್ರ ಹೊಸ ಜೀವನಕ್ಕೆ ಅತ್ಯಗತ್ಯ ಬೂಸ್ಟಿಂಗ್ ಡೋಸ್. ಇದು ಅವರಿಬ್ಬರ ಹೊಸ ಜೀವನದ ಮೈಲಿಗಲ್ಲಾಗಿದ್ದು, ಮುಂದಿನ ಸುಖೀ ಭವಿಷ್ಯಕ್ಕೆ ಬುನಾದಿ ಆಗಲಿದೆ,” ಎಂದಾಗ ಮಧುಮಿತಾಳ ಮಾತುಗಳನ್ನು ನಿರ್ಮಲಾ ಒಪ್ಪಿದಳು.
– ಜಿ.ಎನ್. ರೇಣುಕಾ





