ಬಟಾಣಿ ಟಿಕ್ಕಿ

ಸಾಮಗ್ರಿ : 1 ಕಪ್‌ ಬೆಂದ ಹಸಿ ಬಟಾಣಿ, 4 ಮಧ್ಯಮ ಗಾತ್ರದ ಬೇಯಿಸಿ ಮಸೆದ ಆಲೂ, 1 ಕಪ್‌ ಮೈದಾ, ಸಣ್ಣಗೆ ಹೆಚ್ಚಿದ 1 ಈರುಳ್ಳಿ, ತುಸು ಬೆಳ್ಳುಳ್ಳಿ ಎಸಳು, ಹಸಿ ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಚಾಟ್‌ ಮಸಾಲ, ನಿಂಬೆರಸ, ಅರ್ಧ ಸೌಟು ಎಣ್ಣೆ, ಸಾಸುವೆ, ಜೀರಿಗೆ.

ವಿಧಾನ : ಒಂದು ಬೇಸನ್ನಿಗೆ ಮಸೆದ ಆಲೂ, ಮೈದಾ, ಚಿಟಕಿ ಉಪ್ಪು ಖಾರ ಸೇರಿಸಿ ಪೂರಿ ಹಿಟ್ಟಿನಂತೆ ಮೃದುವಾಗಿ ಕಲಸಿ ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಒಂದೊಂದಾಗಿ ಹೆಚ್ಚಿದ ಪದಾರ್ಥ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಬೇಕು. ಆಮೇಲೆ ಬೆಂದ ಬಟಾಣಿ ಸೇರಿಸಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಕೆಳಗಿಳಿಸಿ. ಅಗತ್ಯ ಎನಿಸಿದರೆ ನಿಂಬೆಹಣ್ಣು ಹಿಂಡಿಕೊಳ್ಳಿ. ನೆನೆದ ಮೈದಾ ಮಿಶ್ರಣಕ್ಕೆ ತುಸು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿ ಮಾಡಿ ಲಟ್ಟಿಸಿಕೊಂಡು, ನಡುವೆ 1-2 ಚಮಚ ಬಟಾಣಿ ಹೂರಣ ತುಂಬಿಸಿ, ಎಲ್ಲಾ ಕಡೆಯಿಂದ ಕ್ಲೋಸ್‌ ಮಾಡಿ, ಅಳ್ಳಕವಾದ ಬಾಣಲೆಯಲ್ಲಿ ಧಾರಾಳ ಎಣ್ಣೆ ಬಿಟ್ಟು ಶ್ಯಾಲೋ ಫ್ರೈ ಮಾಡಿ. ಇದನ್ನು ಮಂದ ಉರಿಯಲ್ಲಿ ತಿರುವಿ ಹಾಕುತ್ತಾ, ಎರಡೂ ಬದಿ ಬೇಯಿಸಿ. ಹೊಂಬಣ್ಣ ಬಂದ ನಂತರ ಹೊರತೆಗೆದು, ಚಿತ್ರದಲ್ಲಿರುವಂತೆ ಪುದೀನಾ ಚಟ್ನಿ, ಹುಳಿ ಸಿಹಿ ಚಟ್ನಿ, ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

Tasty_Capsicum_Lollipop

ಟೇಸ್ಟಿ ಕ್ಯಾಪ್ಸಿಕಂ ಲಾಲಿಪಾಪ್

ಸಾಮಗ್ರಿ : 1 ಕಪ್‌ ರವೆ, ಅರ್ಧ ಕಪ್‌ ಮೈದಾ, ಒಂದಿಷ್ಟು ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಅರ್ಧ ಕಪ್‌ ಬೇಯಿಸಿ ಮಸೆದ ಆಲೂ, ಹೆಚ್ಚಿದ 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ, ಒಂದಿಷ್ಟು ಐಸ್‌ ಕ್ರೀಂ ಕಡ್ಡಿ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಹಿಡಿದು, ತುಸು ಚಪ್ಪಟೆ ಮಾಡಿ, ಚಿತ್ರದಲ್ಲಿರುವಂತೆ ಐಸ್‌ ಕ್ರೀಂ ಕಡ್ಡಿ ಸಿಗಿಸಿಡಿ. ಲಾಲಿಪಾಪ್‌ ನಂತಾದ ಇವನ್ನು ಕಾದ ಎಣ್ಣೆಯಲ್ಲಿ (ಮಂದ ಉರಿ ಇರಲಿ) ಹೊಂಬಣ್ಣ ಬರುವಂತೆ ಕರಿದು, ಪುದೀನಾ ಚಟ್ನಿ, ಸಲಾಡ್‌ ಜೊತೆ ಬಿಸಿಯಾಗಿ ಸವಿಯಲು ಕೊಡಿ. ಜೊತೆಗೆ ಹಬೆಯಾಡುವ ಕಾಫಿ, ಟೀ ಇರಲಿ.

Masala_Rice_Donut

ಮಸಾಲ ರೈಸ್ಡೋನಟ್

ಸಾಮಗ್ರಿ : 2 ಕಪ್‌ ಅನ್ನ, ಅರ್ಧ ಕಪ್‌ ಕಾರ್ನ್‌ ಫ್ಲೋರ್‌, ಬೇಯಿಸಿ ಮಸೆದ 2 ಆಲೂ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿ ಶುಂಠಿ, ಪುದೀನಾ, ಕೊ.ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಗರಂಮಸಾಲ, ಟೊಮೇಟೊ ಸಾಸ್‌,  ಬೇರೆಯಾಗಿ ನೆನೆಸಿ ಬೇಯಿಸಿದ ಕಡಲೆಕಾಳು, ಆಲೂ ತುಂಡು, ಕರಿಯಲು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಮಸೆದ ಆಲೂ ಜೊತೆ ಉಳಿದೆಲ್ಲ ಸಾಮಗ್ರಿ ಸೇರಿಸಿ, ಪಕೋಡ ಮಿಶ್ರಣದಂತೆ ಕಲಸಿಡಿ. ಇದರಿಂದ ಸಣ್ಣ ಉಂಡೆ ಮಾಡಿ, ಚಪ್ಪಟೆಯಾಗಿ ತಟ್ಟಿಕೊಂಡು, ನಡುವೆ ರಂಧ್ರ ಮಾಡಿ, ಉದ್ದಿನ ವಡೆ ಆಕಾರ ಕೊಡಿ. ಹೀಗೆ ಎಲ್ಲವನ್ನು ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಬರುವಂತೆ ಕರಿದು ತೆಗೆಯಿರಿ. ಇದನ್ನು ಟಿಶ್ಯು ಪೇಪರ್‌ ಮೇಲೆ ಹರಡಿ, ಹೆಚ್ಚುವರಿ ಜಿಡ್ಡಿನಂಶ ಹೋಗಲಾಡಿಸಿ, ಚಿತ್ರದಲ್ಲಿರುವಂತೆ ಸಾಸ್‌ ನಿಂದ ಅಲಂಕರಿಸಿ. ಜೊತೆಗೆ ಬೆಂದ ಕಡಲೆಕಾಳು, ಆಲೂ ತುಂಡುಗಳನ್ನು (ಚಿತ್ರದಲ್ಲಿರುವಂತೆ) ಸಲಾಡ್‌ ಆಗಿ ಅಲಂಕರಿಸಿ, ಸವಿಯಲು ಕೊಡಿ.

Chatpati_Tamatar_Bhajiya

ಟ್ಯಾಂಗಿ ಟೊಮೇಟೊ ಬಜ್ಜಿ

ಸಾಮಗ್ರಿ : 3-4 ಗಟ್ಟಿ ಹುಳಿ ಟೊಮೇಟೊ, 1 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓಮ, ಹುರಿದು ಪುಡಿ ಮಾಡಿದ ಜೀರಿಗೆ, ಇಂಗು, ಚಾಟ್‌ ಮಸಾಲ, ಗರಂಮಸಾಲ, ಪುದೀನಾ ಚಟ್ನಿ, ಕರಿಯಲು ಎಣ್ಣೆ.

ವಿಧಾನ : ಟೊಮೇಟೋಗಳನ್ನು ಗುಂಡಗಿನ, ದಪ್ಪ ಬಿಲ್ಲೆಗಳಾಗಿಸಿ. ಇವಕ್ಕೆ ಪುದೀನಾ ಚಟ್ನಿ ಸವರಿ ತುಸು ಹೊತ್ತು ಹಾಗೇ ಬಿಡಿ. ಒಂದು ಬಟ್ಟಲಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ತುಸು ನೀರು ಬೆರೆಸಿ, ಬೋಂಡ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿಡಿ, ತುಂಬಾ ತೆಳು ಆಗಬಾರದು. ಇದರಲ್ಲಿ ಒಂದೊಂದೇ ಟೊಮೇಟೊ ಬಿಲ್ಲೆ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದರ ಮೇಲೆ ಚಾಟ್ ಮಸಾಲ ಉದುರಿಸಿ, ಸಾಸ್‌ ಜೊತೆ ಸವಿಯಲು ಕೊಡಿ.

Tofu-Tikka-Masala

ಪನೀರ್ಟಿಕ್ಕಾ ಮಸಾಲ

ಸಾಮಗ್ರಿ : 250 ಗ್ರಾಂ ರೆಡಿಮೇಡ್‌ ತಾಜಾ ಪನೀರ್‌, ಒಂದಿಷ್ಟು ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿಮೊಸರು, ಹುರಿದು ಪುಡಿ ಮಾಡಿದ ಜೀರಿಗೆ, ಚಾಟ್‌ ಮಸಾಲ, ಅರ್ಧ ಸೌಟು ಎಣ್ಣೆ, ತುಸು ಕೊ.ಸೊಪ್ಪು.

ವಿಧಾನ : ಮೊದಲು ಪನೀರ್‌ ನ್ನು ಸಣ್ಣ ತುಂಡುಗಳಾಗಿಸಿ, ತುಸು ಎಣ್ಣೆಯಲ್ಲಿ ಶ್ಯಾಲೋ ಫ್ರೈ ಮಾಡಿ ತೆಗೆಯಿರಿ. ಅದೇ ಬಾಣಲೆಗೆ ಮತ್ತಷ್ಟು ಎಣ್ಣೆ ಸೇರಿಸಿ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಎಲ್ಲಾ ಪದಾರ್ಥ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಉಪ್ಪು, ಖಾರ, ಮಸಾಲೆ ಸಹ ಹಾಕಿ ಕೆದಕಬೇಕು. ಕೊನೆಯಲ್ಲಿ ಮೊಸರು ಬೆರೆಸಿ ಕೆದಕುತ್ತಾ, ಫ್ರೈ ಮಾಡಿದ ಪನೀರ್‌ ಹಾಕಿ ಕೈಯಾಡಿಸಿ. ಕೊ.ಸೊಪ್ಪು ಉದುರಿಸಿ, ಪುದೀನಾ ಚಟ್ನಿ ಜೊತೆ ಸ್ಟಾರ್ಟರ್‌ ಆಗಿ ಸವಿಯಲು ಕೊಡಿ.

Aloo_Lachha_Paneer_Balls

ಆಲೂ ಪನೀರ್ಬೋಂಡ

ಸಾಮಗ್ರಿ : 250 ಗ್ರಾಂ ತುರಿದ ಪನೀರ್‌, ಬೇಯಿಸಿ ಮಸೆದ 4 ಆಲೂ, 1 ಕಪ್‌ ಮೈದಾ, ಅರ್ಧರ್ಧ ಕಪ್‌ ಕಾರ್ನ್‌ ಫ್ಲೋರ್‌, ಬ್ರೆಡ್ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಚಾಟ್‌ ಮಸಾಲ, ಅರಿಶಿನ, ಓಮ, ನಿಂಬೆರಸ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಪದಾರ್ಥ ಸೇರಿಸಿಕೊಂಡು, ತುಸು ನೀರು ಬೆರೆಸುತ್ತಾ, ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ಈ ಮಿಶ್ರಣ ತೆಳು ಆಗಬಾರದು, ಉಂಡೆ ಕಟ್ಟುವಾಗ ಮುರಿಯದಂತೆ ಆಗಬಾರದು. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್‌, ಪುದೀನಾ ಚಟ್ನಿ ಜೊತೆ ಇದನ್ನು ಬಿಸಿ ಬಿಸಿಯಾಗಿ ಸವಿಯಲು ಕೊಡಿ. ಜೊತೆಗೆ ಹಬೆಯಾಡುವ ಟೀ/ಕಾಫಿ ಇರಲಿ.

Chatpate_Banana_Kabab

ಬಾಳೇಕಾಯಿ ಬಜ್ಜಿ

ಸಾಮಗ್ರಿ : 5-6 ಬಾಳೇಕಾಯಿ, ಅರ್ಧ ಕಪ್‌ ನಷ್ಟು ಬೇಯಿಸಿ ಮಸೆದ ಆಲೂ, 1-1 ಕಪ್‌ ಮೈದಾ ಬ್ರೆಂಡ್‌ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಧನಿಯಾಪುಡಿ, ಚಾಟ್‌ ಮಸಾಲ, ಗರಂಮಸಾಲ, ಅರಿಶಿನ, ಓಮ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ.

ವಿಧಾನ : ಬಾಳೇಕಾಯಿಗಳನ್ನು ಕುಕ್ಕರ್‌ ನಲ್ಲಿ ಇಡಿಯಾಗಿ ಬೇಯಿಸಿ, ಸಿಪ್ಪೆ ಸುಲಿದು ಮಸೆದಿಡಿ. ಇದಕ್ಕೆ ಮೇಲಿನ ಉಳಿದೆಲ್ಲವೂ ಸಾಮಗ್ರಿ ಬೆರೆಸಿ, ಪಕೋಡ ಮಿಶ್ರಣದಂತೆ ಕಲಸಿಕೊಳ್ಳಿ. ಇದರಿಂದ ಸಣ್ಣ ಉಂಡೆ ಹಿಡಿದು, ಚಪ್ಪಟೆ ಮಾಡಿ, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಸಲಾಡ್‌ ಜೊತೆ ಬಿಸಿಯಾಗಿ ಸವಿಯಿರಿ.

Kakdi_Ke_Appe

ಆಲೂ ಪಾಲಕ್ಅಪ್ಪೆ

ಸಾಮಗ್ರಿ : 2 ಆಲೂ, 1 ಕಪ್‌ ರವೆ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು, ಶುಂಠಿ, ಪಾಲಕ್‌ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿ ಮೊಸರು, ಬೇಕಿಂಗ್‌ ಸೋಡ, ಚಾಟ್‌ ಮಸಾಲ, ಗರಂಮಸಾಲ, ಅರ್ಧ ಸೌಟು ಎಣ್ಣೆ.

ವಿಧಾನ : ಮೊದಲು ಆಲೂ ಸಿಪ್ಪೆ ಹೆರೆದು ಅದನ್ನು ನೀಟಾಗಿ ತುರಿದಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದರಲ್ಲಿ ಇದನ್ನು ಹದನಾಗಿ ಬಾಡಿಸಿ ಪಕ್ಕಕ್ಕಿಡಿ. ಅದೇ ಬಾಣಲೆಗೆ ಮತ್ತಷ್ಟು ಎಣ್ಣೆ ಹಾಕಿ ಹೆಚ್ಚಿದ ಎಲ್ಲಾ ಪದಾರ್ಥ ಹಾಕಿ ಬಾಡಿಸಿ. ಕೊನೆಯಲ್ಲಿ ಇದಕ್ಕೆ ಆಲೂ ಫ್ರೈ ಸಹ ಹಾಕಿ ಕೆದಕಿ ಕೆಳಗಿಳಿಸಿ. ಅದೇ ಬಾಣಲೆಯಲ್ಲಿ ರವೆ ಹುರಿದುಕೊಂಡು ಒಂದು ಬಟ್ಟಲಿಗೆ ಹಾಕಿಡಿ. ಇದಕ್ಕೆ ಹುಳಿ ಮೊಸರು, ಸೋಡ, ಬಾಡಿಸಿದ ಆಲೂ ಮಿಶ್ರಣ ಹಾಕಿ ಚೆನ್ನಾಗಿ ಗೊಟಾಯಿಸಿ 1 ಗಂಟೆ ಕಾಲ ಹಾಗೇ ಬಿಡಿ. ನಂತರ ಗುಳಿಯಪ್ಪ ಬಾಣಲೆಯಲ್ಲಿ ಪ್ರತಿ ಕುಳಿಗೂ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಈ ಮಿಶ್ರಣ ಸಮನಾಗಿ ಹರಡಿರಿ. ಮುಚ್ಚಳ ಮುಚ್ಚಿರಿಸಿ, ಒಂದೊಂದನ್ನೇ ತಿರುವಿಹಾಕಿ ಬೇಯಿಸಿ. ಬಿಸಿ ಇರುವಾಗಲೇ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.

Bread_Chops

ಬ್ರೆಡ್ಚಾಪ್ಸ್

ಸಾಮಗ್ರಿ : 7-8 ಬ್ರೆಡ್‌ ಸ್ಲೈಸ್‌, ಬೇಯಿಸಿ ಮಸೆದ 2 ಆಲೂ, ಅರ್ಧ ಕಪ್‌ ಕಡಲೆಹಿಟ್ಟು, ಒಂದಿಷ್ಟು ಹೆಚ್ಚಿದ ಹಸಿ ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುರಿದು ಪುಡಿ ಮಾಡಿದ ಜೀರಿಗೆ, ಧನಿಯಾಪುಡಿ, ಗರಂಮಸಾಲ, ಚಾಟ್‌ ಮಸಾಲ, ಪುದೀನಾ ಚಟ್ನಿ, ಅರ್ಧ ಸೌಟು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ನೀರಿನಲ್ಲಿ ಅದ್ದಿ ಹಿಂಡಿದ ಬ್ರೆಡ್‌ ಸ್ಲೈಸ್‌ ಜೊತೆಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿ ಹಾಕಿ ಪಕೋಡ ಮಿಶ್ರಣಕ್ಕೆ ಕಲಸಿಡಿ. ಇದರಿಂದ ಸಣ್ಣ ಉಂಡೆ ಮಾಡಿ, ಚಪ್ಪಟೆ ತಟ್ಟಿಕೊಂಡು, ಅಳ್ಳಕವಾದ ಬಾಣಲೆಯಲ್ಲಿ ಎಣ್ಣೆ ಬಿಡುತ್ತಾ ಶ್ಯಾಲೋ ಫ್ರೈ ಮಾಡಿ. ನಂತರ ಇವನ್ನು ಒಂದು ತಟ್ಟೆಯಲ್ಲಿ ಜೋಡಿಸಿ, ಮೇಲೆ ಹೆಚ್ಚಿದ ಈರುಳ್ಳಿ, ಟೊಮೇಟೊ, ಕೊ.ಸೊಪ್ಪು, ಪುದೀನಾ ಚಟ್ನಿ ಹರಡಿ, ಕಾಫಿ/ಟೀ ಜೊತೆ ಬಿಸಿಯಾಗಿ ಸವಿಯಲು ಕೊಡಿ.

AA-drustick-leaves-friters-(6)

ನುಗ್ಗೆಸೊಪ್ಪಿನ ಪಕೋಡ

ಸಾಮಗ್ರಿ : 1-2 ಕಪ್‌ ಕಡಲೆಹಿಟ್ಟು, 1 ಕಪ್‌ ಬಿಡಿಸಿದ ನುಗ್ಗೆಸೊಪ್ಪು, ಒಂದಿಷ್ಟು ಸಣ್ಣಗೆ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಈರುಳ್ಳಿ, ಬೆಳ್ಳುಳ್ಳಿ ಶುಂಠಿ, ಕೊ.ಸೊಪ್ಪು, ಪುದೀನಾ, ಕರಿಬೇವು, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಜೀರಿಗೆ, ಓಮ, ಕರಿಯಲು ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿಕೊಂಡು, ತುಸು ನೀರು ಬೆರೆಸಿ ಪಕೋಡ ಮಿಶ್ರಣವಾಗಿ ಕಲಸಿಡಿ. ಇದರಿಂದ ತುಸು ಮಿಶ್ರಣ ಹಿಡಿದು, ಚಿತ್ರದಲ್ಲಿರುವಂತೆ ಆಕಾರ ನೀಡಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಟೊಮೇಟೊ ಸಾಸ್‌ ಜೊತೆ ಇದನ್ನು ಬಿಸಿಯಾಗಿ ಸವಿಯಿರಿ.

AA-Festive-slice-(7)

ಫೆಸ್ಟಿವ್ ಸ್ಲೈಸ್

ಸಾಮಗ್ರಿ : 1 ಕಪ್‌ ಕಂಡೆನ್ಸ್ಡ್ ಮಿಲ್ಕ್, ಅರ್ಧರ್ಧ ಕಪ್‌ ಬೆಣ್ಣೆ  ಕೋಕೋನಟ್‌ ಪೌಡರ್‌, 1 ಕಪ್‌ ಚಾಕಲೇಟ್‌, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್‌), 1 ಕಪ್‌ ತರಿತರಿಯಾದ ಸಿಹಿ ಬಿಸ್ಕತ್ತು.

ವಿಧಾನ : ಒಂದು ಬಾಣಲೆಯಲ್ಲಿ ಮೊದಲು ಬೆಣ್ಣೆ ಬಿಸಿ ಮಾಡಿ. ಮಂದ ಉರಿ ಮಾಡಿಕೊಂಡು ಇದಕ್ಕೆ ಕಂಡೆನ್ಸ್ಡ್ ಮಿಲ್ಕ್ ಬೆರೆಸಿ ಕೆದಕಬೇಕು. 5 ನಿಮಿಷ ಬಿಟ್ಟು ಬಿಸ್ಕತ್ತಿನ ತರಿ, ಕೋಕೋನಟ್‌ ಪೌಡರ್‌, ಡ್ರೈ ಫ್ರೂಟ್ಸ್ ಹಾಕಿ ನಿಧಾನವಾಗಿ ಕೈಯಾಡಿಸಿ. ಒಂದು ಪೈ ಡಿಶ್‌ ಗೆ ತುಪ್ಪ ಸವರಿ, ಇದನ್ನು ಅದಕ್ಕೆ ಹಾಕಿಡಿ. ಡಬಲ್ ಬಾಯ್ಲರ್‌ ವಿಧಾನದಲ್ಲಿ ಚಾಕಲೇಟ್‌ ಕರಗಿಸಿ. ಅದಕ್ಕೆ ತುಸು ಬೆಣ್ಣೆ ಬೆರೆಸಿಕೊಳ್ಳಿ. ಅದನ್ನು ಈ ಮಿಶ್ರಣದ ಮೇಲೆ ಒಂದು ಪದರ ಬರುವಂತೆ ಹರಡಿರಿ. ಇದನ್ನು ಫ್ರಿಜ್‌ ನಲ್ಲಿ 1-2 ತಾಸು ಇರಿಸಿ ಸೆಟ್ ಆಗಲು ಬಿಡಿ. ನಂತರ ಹೊರತೆಗೆದು ತುಂಡರಿಸಿ, ಬೋಂಡಬಜ್ಜಿ ಜೊತೆ ಸವಿಯಿರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ