ಕಬ್ಬು ಕಟಾವು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ, ಮಗು ಹಾಗೂ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ಹೊರವಲಯದ ಕಟ್ಟೆಕೆರೆ ಸಮೀಪ ನಡೆದಿದೆ.

ಜಮಖಂಡಿ ಹೊರವಲಯದ ಮುಧೋಳ ರಸ್ತೆಯಲ್ಲಿ ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಮಹಾರಾಷ್ಟ್ರ ಮೂಲದ ಕಬ್ಬು ಕಟಾವು ಕಾರ್ಮಿಕರ ತಂಡ ಮುಧೋಳ ಕಡೆಯಿಂದ ಜಮಖಂಡಿ ಕಡೆಗೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್​ನ ಟ್ರ್ಯಾಲಿ ಏಕಾಏಕಿ ಕಟ್​ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್​, ರಸ್ತೆ ಪಕ್ಕದ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ.

ಮೃತರನ್ನು ಮನೀಷ್​ ಪಾಂಡೆ  (23), ಲಕ್ಷ್ಮೀ ಚಿರಮಡಿ (27), ರೇಖಾ  ಭೂಕೆ (28) ಮತ್ತು 2 ವರ್ಷದ ಮಗು ಹಲಕಿ ಪಾಂಡೆ ಎಂದು ಗುರುತಿಸಲಾಗಿದೆ. ಮೃತಪಟ್ಟ ನಾಲ್ವರೂ ಮಹಾರಾಷ್ಟ್ರದ ಯುತನಾಳ ಜಿಲ್ಲೆಯ ಗುಪ್ತವಾಡ ಗ್ರಾಮದ ಒಂದೇ ಕುಟುಂಬದವರು ಎನ್ನಲಾಗಿದೆ.ಪ್ರಾಥಮಿಕ ಮಾಹಿತಿ ಪ್ರಕಾರ, ಟ್ರ್ಯಾಕ್ಟರ್​ನ ಟ್ರ್ಯಾಲಿ ಹಿಂಬದಿಯಿಂದ ಕಟ್​ ಆಗಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.

8 ಮಂದಿಗೆ ಗಂಭೀರ ಗಾಯ : ಟ್ರ್ಯಾಕ್ಟರ್‌ನಲ್ಲಿ ಒಟ್ಟು 20 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಟ್ರ್ಯಾಕ್ಟರ್ ಪಲ್ಟಿಯಾದ ರಭಸಕ್ಕೆ ಇಂಜಿನ್ ಮತ್ತು ಟ್ರಾಲಿಯ ಅಡಿಯಲ್ಲಿ ಸಿಲುಕಿ ನಾಲ್ವರು ಮೃತಪಟ್ಟರೆ, ಉಳಿದ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ: ಜಮಖಂಡಿ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಂದಕಕ್ಕೆ ಬಿದ್ದಿದ್ದ ಟ್ರ್ಯಾಕ್ಟರ್ ಅನ್ನು ಕ್ರೇನ್ ಮೂಲಕ ಮೇಲೆತ್ತಿ, ಅದರಡಿ ಸಿಲುಕಿದ್ದವರನ್ನು ಹೊರತೆಗೆಯಲಾಗಿದೆ. ಮೃತರ ದೇಹಗಳನ್ನು ಹಾಗೂ ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದಿಂದ ಬಂದಿದ್ದ ಕೂಲಿ ಕಾರ್ಮಿಕರ ಬದುಕು ಇದೀಗ ಬೀದಿಗೆ ಬಿದ್ದಂತಾಗಿದ್ದು, ಆಸ್ಪತ್ರೆ ಆವರಣದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ