ಮೊನ್ನೆ ಯೋಗ ದಿನಾಚರಣೆಯ ಹಿಂದಿನ ದಿನ ಬೆಳಿಗ್ಗೆ ಸಂಪರ್ಕಕ್ಕೆಂದು ಹಲವಾರು ಜನರನ್ನು ಭೇಟಿ ಮಾಡಲು ಹೋಗುವ ಸಂಧರ್ಭದಲ್ಲಿ ನಮ್ಮ ಕಾರ್ಯಕರ್ತ ಗುರು ಆವರ ಮನೆಗೂ ಹೋಗಿದ್ದೆವು. ಅವರ ಮನೆಯ ಮುಂದೆ ನಮ್ಮ ಗಾಡಿಗಳನ್ನು ನಿಲ್ಲಿಸುವಾಗಲೇ ಗುರು ಎಲ್ಲಿಗೋ ಹೊರಡಲು ಅನುವಾಗಿದ್ದನ್ನು ನೋಡಿ, ಕ್ಷಿಪ್ರವಾಗಿ ನಾಳಿನ ಕಾರ್ಯಕ್ರಮದ ಸ್ವರೂಪ ತಿಳಿಸಿ, ನೀವೇಲ್ಲೋ ಹೊರಟಿದ್ದೀರಿ. ಹೋಗಿ ಬನ್ನಿ ನಿಮ್ಮ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದಾಗ. ಎಲ್ಲಿ ಜೀ ಶುಭ. ನಾನು ಹೋಗುತ್ತಿರುವುದೇ ಆಶುಭ ಕಾರ್ಯಕ್ರಮಕ್ಕೆ ಎಂದಾಗ ಒಮ್ಮೆಲೆ ಮನಸ್ಸು ಪಿಚ್ಚೆನಿಸಿತು. ಏಕೆ ಏನಾಯ್ತು ಎಂದರೆ. ಜೀ ನೆನ್ನೆ ರಾತ್ರಿ 9 ಗಂಟೆವರೆಗೂ ನಾನೂ ನನ್ನ ಸಹೋದ್ಯೋಗಿ ಒಟ್ಟಿಗೆ ಕೆಲಸ ಮಾಡಿ ಅವರನ್ನು ಮೆಟ್ರೋಗೆ ಹತ್ತಿಸಿ ಮನೆಗೆ ಬಂದಿದ್ದೆ. ಈಗ ಬೆಳಿಗ್ಗೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟಿದ್ದಾರೆ. ಒಂದು ವಾರದ ಕೆಳಗೆ ಅವರ ಮಾವನವರು ದೂರದ ಊರಿನಲ್ಲಿ ತೀರಿ ಹೋಗಿದ್ದಾರೆ ಎಂದು ಸಂಸಾರ ಎಲ್ಲಾ ಊರಿಗೆ ಹೋಗಿದ್ದರು. ಇವರೂ ಕೂಡಾ, ತಮ್ಮ ಮಾವನವರ ಅಂತ್ಯ ಸಂಸ್ಕಾರ ಮುಗಿಸಿ ಮಾವನವರ ಕಾರ್ಯಗಳಿಗೆ ಎರಡು ವಾರ ರಜಾ ಅಥವಾ work from home option ಕೇಳಿದ್ದರು. ಆದರೆ ಅವರ ಬಾಸ್, ಪ್ರಾಜೆಕ್ಟ್ ವರ್ಕ್ ತುಂಬಾನೇ ಇದೆ. ಪ್ರತೀದಿನ ಕಾಲ್ ಅಟೆಂಡ್ ಮಾಡ್ಲೇ ಬೇಕು. ನೀವಿಲ್ಲದಿದ್ದರೆ ಅದು ಆಗೋದಿಲ್ಲ ಅಂತ ಹೇಳಿದ್ದಕ್ಕೆ ಊರಿಂದ ವಾಪಸ್ ಕೆಲಸಕ್ಕೆ ಬಂದು ಕಡೆಯ ಮೂರು ದಿನಗಳ ಕಾರ್ಯಕ್ಕೆ ಮಾತ್ರಾ ಹೋಗುವುದಾಗಿ ತಿಳಿಸಿದ್ದರು. ಅವರು ರಜಾ ಹಾಕಿದ್ದರೆ ಪ್ರಾಜೆಕ್ಟ್ ಆಗೋದಿಲ್ಲ ಅಂತಾ ಹೇಳ್ತಾ ಇದ್ರೂ. ಈಗ ಆ ಮನುಷ್ಯನೇ ಇಲ್ಲಾ. ಇನ್ನು ಪ್ರಾಜೆಕ್ಟ್ ಕಥೆ ಅಷ್ಟೇ. ಅಂತಾ ಹೇಳಿದಾಗ ಮನಸ್ಸಿಗೆ ದುಃಖವಾಗಿ. ಭಗವಂತ ಮೃತರ ಆತ್ಮಕ್ಕೆ ಶಾಂತಿ ಕೊಡು ಮತ್ತು ಅವರ ಕುಟುಂಬಕ್ಕೆ ಎರಡೆರಡು ಆಧಾರ ಸ್ಥಂಭಗಳನ್ನು ಕಳೆದುಕೊಂಡ ಶಕ್ತಿಯನ್ನು ಭರಿಸುವ ಕೊಡು ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡೆ.
ಅದೇ ರೀತಿ ಎರಡ್ಮೂರು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬನ, ಸ್ನೇಹಿತ ಬೆಂಗಳೂರಿನ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಹೈದಿರಾಬಾದಿಗೆ ಹೊರಟಿದ್ದ. ಬುಧವಾರ ಅವನ ಕಡೆಯ ದಿನವಾಗಿದ್ದರೂ,ಅವನ ಬಾಸ್ ಶುಕ್ರವಾರದವರೆಗೂ ಕೆಲಸ ಮಾಡದಿದ್ದರೆ, ರಿಲೀವಿಂಗ್ ಲೆಟರ್ ಕೊಡುವುದಿಲ್ಲಾ ಎಂದು ಬೆದರಿಸಿ ಶುಕ್ರವಾರ ಸಂಜೆ ಕಳುಹಿಸಿ ಕೊಟಿದ್ದರು. ನನ್ನ ಸ್ನೇಹಿತನೇ ಅವನನ್ನು ಬಸ್ ಸ್ಟಾಂಡ್ ವರೆಗೂ ಕರೆದು ಕೊಂಡು ಹೋಗಿ ಒಟ್ಟಿಗೇ ಊಟ ಮುಗಿಸಿ ಬಸ್ ಹತ್ತಿಸಿ, ನಾಳೆ ಬೆಳಿಗ್ಗೆ ಹೈದರಾಬಾದ್ ತಲುಪಿದ ನಂತರ ಕರೆ ಮಾಡು ಎಂದು ತಿಳಿಸಿ ಮನೆಗೆ ಬಂದು ಬೆಚ್ಚಗೆ ಮಲಗಿದ್ದ. ಮಾರನೇ ದಿನ ಹೇಗೂ ಕಛೇರಿಗೆ ರಜಾ ಎಂದು ತಡವಾಗಿ ಎದ್ದು ಟಿವಿ ಹಾಕಿದರೆ, ಹಿಂದಿನ ರಾತ್ರಿ, ಆತನ ಗೆಳೆಯ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿ ಬಸ್ಸಿನ ಡೀಸಲ್ ಟ್ಯಾಂಕಿಗೆ ಬೆಂಕಿ ಹತ್ತಿಕೊಂಡು ಇಡೀ ಬಸ್ಸಿನಲ್ಲಿದ್ದ ಎಲ್ಲರೂ ಬೆಂದು ಕರಕಲಾಗಿ ಹೋಗಿದ್ದ ಹೃದಯ ವಿದ್ರಾವಕ ಸಂಗತಿ ತಿಳಿದು, ಒಂದು ವಾರಗಳ ಕಾಲ ನನ್ನ ಸ್ನೇಹಿತನೂ ಖಾಯಿಲೆಗೆ ಬಿದ್ದು ಸುಮಾರು ದಿನಗಳ ವರೆಗೆ ಖಿನ್ನತೆಗೆ ಒಳಗಾಗಿದ್ದ. ಅಂದು ಬಾಸ್ ಅವನನ್ನು ಬುಧವಾರವೇ ಕಳುಹಿಸಿಕೊಟ್ಟಿದ್ದರೆ ಒಂದು ಜೀವ ಉಳಿಯಬಹುದಿತ್ತೇನೋ?





