ಕಥೆ – ಜಾನಕಿ ರಾವ್
ಕೆಸರಿನ ಕಮಲವಾಗಿದ್ದ ಪುಷ್ಪಾ ಜಗದೀಶರ ಕೈ ಹಿಡಿದು ಆ ಮನೆಗೆ ನಂದಾದೀಪವಾಗಿ ಬಾಳಿ ಬದುಕಿದರು. ಆ ದೀಪದಡಿಯಲ್ಲೂ ಒಂದು ಕತ್ತಲೆ ಇತ್ತು ಎಂಬುದು ರಾಯರಿಗೆ ಮುಂದಾದರೂ ತಿಳಿಯಿತೇ……?
ಸಂಕಲ್ಪದ ಸಮಯ ಮೀರುತ್ತಾ ಇದೆ, ಅಮ್ಮಾವರನ್ನ ಕರೀರಿ ರಾಯರೇ ಎಂಬ ಪುರೋಹಿತರ ಮಾತು ಕಿವಿಗೆ ಬಿದ್ದ ಕ್ಷಣಕ್ಕೆ ಹೋಮ ಕುಂಡದ ಮುಂದೆ ಕುಳಿತಿದ್ದ ಜಗದೀಶರ ಕಣ್ಣು ಅಸಹನೆಯಿಂದ ಹೆಂಡತಿಯನ್ನು ಅರಸತೊಡಗಿತು.
ಅಷ್ಟರಲ್ಲಿ, ಗಾಢ ಹಸಿರು ಬಣ್ಣದ ಬಂಗಾರದೆಳೆಯ ಸೀರೆ…. ಎತ್ತಿ ಕಟ್ಟಿದ ತುರುಬು, ತುರುಬಿನ ಸುತ್ತ ಸುತ್ತಿದ ಮಲ್ಲಿಗೆಯ ದಂಡೆ, ಪಚ್ಚೆ ನೆಕ್ಲೇಸ್, ಪಚ್ಚೆ ಬಳೆ, ಪಚ್ಚೆಯೋಲೆ ಧರಿಸಿ ದೇವಿಯಂತೆ ಕಂಗೊಳಿಸುತ್ತಾ ಬಂದ ಮಡದಿ ಪುಷ್ಪಾರತ್ತ ತಿರುಗಿ, “ಟೈಂ ಸೆನ್ಸ್ ಇಲ್ಲ ನಿನಗೆ,” ಎನ್ನುತ್ತಾ ವಟಗುಟ್ಟಲು ಆರಂಭಿಸಿದರು.
“ತಾಳ್ಮೆ ರಾಯರೇ…. ಇನ್ನೇನು ಅಮ್ಮಾವರು ಬಂದಾಯ್ತಲ್ಲ….. ಗಂಡ ಹೆಂಡತಿ ಒಂದೇ ಮನಸ್ಸಿನಿಂದ ಆ ದೇವಿಯನ್ನು ಪ್ರಾರ್ಥನೆ ಮಾಡಿಕೊಳ್ಳಿ. ಇವತ್ತಿಗೆ ನಿಮ್ಮ ದಾಂಪತ್ಯಕ್ಕೆ 30 ವರ್ಷ…. ಹಾಗೆ ನಿಮ್ಮ 60ನೇ ಜನ್ಮದಿನ. ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಕೂಡಾ ಆಚರಿಸಿಕೊಳ್ಳುವಂತಾಗಲಿ ಅಂತ ಬೇಡಿಕೊಳ್ಳಿ,” ಎನ್ನುತ್ತಾ,
“ಅಮ್ಮಾವರೇ, ಬನ್ನಿ… ರಾಯರ ಬಲಭಾಗದ ಮಣೆ ಮೇಲೆ ಕೂತ್ಕೊಳ್ಳಿ….” ಎಂದರು ಪುರೋಹಿತರು. ಕೀಲಿ ಗೊಂಬೆಯಂತೆ ಬಂದ ಪುಷ್ಪಾ, ಜಗದೀಶ್ ರ ಪಕ್ಕದಲ್ಲಿ ಕುಳಿತರು. ಧಗಧಗ ಉರಿಯು ಹೋಮ ಕುಂಡದ ಅಗ್ನಿ ದಿಟ್ಟಿಸುತ್ತಾ ಕುಳಿತವರ ಮನ ಬೇಡ ಬೇಡವೆಂದರೂ ಹಿಂದಕ್ಕೆ ಜಾರಿತ್ತು. ಧೀಮಂತ ವ್ಯಕ್ತಿ ವೇಣುಗೋಪಾಲರ ಮುಖ ಕಣ್ಮುಂದೆ. ಅಂಥ ತಂದೆಯ ಮಗಳೆಂಬ ಭಾವ ಈ ಕ್ಷಣಕ್ಕೂ ತನಗೆ ಹೆಮ್ಮೆ ತರುವ ವಿಷಯ. ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿದ ಜಮೀನ್ದಾರ್ ವೇಣುಗೋಪಾಲರು ದೇವದಾಸಿ ಕಮಲಾಬಾಯಿಯ ಮಗಳು ಗಂಗಾಳಲ್ಲಿ ಅನುರಕ್ತರಾಗಿದ್ದು ಅಂದಿನ ದಿನಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ತಂದೆ, ತಾಯಿ, ಸಮಾಜ ಯಾರ ಮಾತಿಗೂ ಮಣಿಯದ ವೇಣು, ಜೀವನದಲ್ಲಿ ಹೆಣ್ಣು ಅಂತ ಸ್ವೀಕಾರ ಮಾಡುವುದಾದರೆ ಅದು ಗಂಗಾ ಮಾತ್ರ ಎಂದಾಗ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಗಂಗಾ, ಹಠಕ್ಕೆ ಬಿದ್ದು ಕುಲೀನ ಮನೆತನದ ಗಿರಿಜಾ ಜೊತೆ ಮದುವೆಗೆ ಒಪ್ಪಿಸಿ, ತಾನು ಜೀವನವಿಡೀ ಉಪಪತ್ನಿಯಾಗೇ ಉಳಿದಿದ್ದಳು.

ತಾಳಿ, ಸಪ್ತಪದಿ, ಅಗ್ನಿಸಾಕ್ಷಿ ಎಲ್ಲವನ್ನೂ ಮೀರಿದ ಅದ್ಭುತ ಬೆಸುಗೆ ವೇಣುಗೋಪಾಲ್-ಗಂಗಾರದ್ದು. ಇಡೀ ಸಮಾಜದ ಮುಂದೆ ರಾಜಾರೋಷಾಗಿ ಗಂಗಾ ತನ್ನವಳೆಂದು ಒಪ್ಪಿ ಅಪ್ಪಿ ಬದುಕು ಕಟ್ಟಿಕೊಟ್ಟಿದ್ದರು. ಆಸ್ತಿ ಅಂತಸ್ತು ಪ್ರೀತಿ ಎಲ್ಲದರಲ್ಲೂ ಗಿರಿಜಾ- ಗಂಗಾರಿಗೆ ಸಮಪಾಲು. ವೇಣುಗೋಪಾಲ್ ಮತ್ತು ಗಂಗಾರ ಒಲವಿನ ಕುಡಿಯೇ ಪುಷ್ಪಾ. ಹೆಸರಿಗೆ ತಕ್ಕಂತೆ ಮೃದು ಮನದ ಸೌಂದರ್ಯದ ಗಣಿ. ಅಪ್ಪ…. ಈ ಪದವೇ ಎಷ್ಟು ಚೇತೋಹಾರಿ!! ಪ್ರೀತಿ ಮಮತೆ ಜವಾಬ್ದಾರಿ ಎಲ್ಲದರಲ್ಲೂ ಅಪ್ಪನಿಗೆ ಅಪ್ಪನೇ ಸಾಟಿ. ಅಪ್ಪನ ಪಾಲಿಗೆ ಅಮ್ಮ ಮತ್ತು ನಾನು ಸರ್ವಸ್ವವಾಗಿದ್ದೆವು. ಅಮ್ಮನಿಗೋ ಅಪ್ಪನೇ ಪ್ರಪಂಚ, ಅಪ್ಪನೇ ದೇವರು. ದಿನಗಳು ಕ್ಷಣಗಳಾಗಿ ಓಡಿದ ಕಾಲಘಟ್ಟವದು. ಅಪ್ಪನ ಅಪ್ಪ, ಅಮ್ಮ, ಅಕ್ಕ ತಂಗಿಯರು ಮನಃಪೂರ್ವಕವಾಗಿ ಒಪ್ಪಿಕೊಳ್ಳದಿದ್ದರೂ ಎಂದೂ ಅಮ್ಮನನ್ನಾಗಲಿ, ನನ್ನನ್ನಾಗಲಿ ಆಡಿ ನೋಯಿಸುವ ಎದೆಗಾರಿಕೆ ತೋರಿದವರಲ್ಲ. ಅಪ್ಪ ಅದಕ್ಕೆ ಆಸ್ಪದ ಕೊಟ್ಟವರೂ ಅಲ್ಲ. ಅಂಥ ಸ್ಥಿತಿ ಬಂದರೆ ಉಳಿದ ಎಲ್ಲಾ ಸಂಬಂಧಗಳನ್ನೂ ನಮಗಾಗಿ ತ್ಯಜಿಸಲು ಅಪ್ಪ ಸಿದ್ಧರಾಗಿದ್ದರು. ಹಬ್ಬ ಹರಿದಿನಗಳಲ್ಲಿ ಅಪ್ಪನ ಮನೆಗೆ ಹೋಗಲು ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ಕಾರಣ ಜಗದೀಶ್. ಅಪ್ಪನ ಕೊನೆ ತಂಗಿಯ ಮಗ. ಅತ್ತೆ, ಮಾತು ಕಥೆ ಆಡದೆ ಅಂತರ ಕಾಯ್ದುಕೊಂಡರೂ ಜಗದೀಶ್ ಹೇಗೊ ನನ್ನ ಮನದಲ್ಲಿ ಸ್ಥಾನ ಪಡೆದಿದ್ದ. ಜಗದೀಶನ ಹೃದಯದಲ್ಲಿ ನಾನು ನಿಂತಿದ್ದೆ. ಇತಿಹಾಸ ಮರುಕಳಿಸಿತು. ವ್ಯತ್ಯಾಸವಿಷ್ಟೇ ಅಮ್ಮ ತಾಳಿ, ಸಪ್ತಪದಿ, ಅಗ್ನಿಸಾಕ್ಷಿ ಇಲ್ಲದೆ ಅಪ್ಪನ ಅರಮನೆಗೆ ರಾಣಿಯಾದರೆ ನಾನು ಅಗ್ನಿಸಾಕ್ಷಿಯಾಗಿ, ತೀವ್ರ ವಿರೋಧದ ನಡುವೆ ಜಗದೀಶನ ಮಡದಿಯಾಗಿ ಅರಮನೆಯಂಥ ಮನೆಗೆ ಬಲಗಾಲಿಟ್ಟು ಬಂದೆ.
“ಯಾವ ಲೋಕದಲ್ಲಿದ್ದಿ ಮಾರಾಯ್ತಿ,” ಎನ್ನುತ್ತಾ ಜಗದೀಶರು ಗುರುಗುಟ್ಟಿದಾಗ ನೆನಪುಗಳ ಲೋಕದಿಂದ ಹೊರಬಂದ ಪುಷ್ಪಾ ನಗು ನಗು ಬೀರುತ್ತಾ ಅತಿಥಿಗಳತ್ತ ನಡೆದರು.
ಬಂದ ಅತಿಥಿಗಳನ್ನೆಲ್ಲ ಕಳುಹಿಸಿ, ಸೂರು ಹಾರುವಂತೆ ಮಾತು, ನಗುವಿನ ಅಬ್ಬರದಲ್ಲಿ ಮುಳುಗಿದ್ದ ಹೆಣ್ಣುಮಕ್ಕಳು, ಅಳಿಯಂದಿರು, ಮಗ ಸೊಸೆ, ಅತ್ತಿಗೆಯಂದಿರು, ನಾದಿನಿ ಎಲ್ಲರನ್ನೂ ಒಮ್ಮೆ ಕಣ್ತುಂಬಿಕೊಂಡು ಕೋಣೆ ಸೇರಿದವಳಲ್ಲಿ ಏನೋ ನಿರಾಳತೆ. ರಾತ್ರಿಯೂಟಕ್ಕೂ ಕೆಳಗೆ ಬಾರದೆ, ಮೇಲೆಯೇ ಉಳಿದ ಹೆಂಡತಿಗಾಗಿ ಹಣ್ಣು ಹಾಲು ಹಿಡಿದು ಬಂದ ಜಗದೀಶರು, ಮೈ ಮರೆತು ಮಲಗಿದ್ದ ಹೆಂಡತಿಯನ್ನು ಕಂಡು ಉಸಿರೆತ್ತದೆ ತಾವು ಪಕ್ಕದಲ್ಲಿ ಉರುಳಿಕೊಂಡರು. ಹಿಂದಿನ ದಿನದ ಆಯಾಸವೆಲ್ಲ ಕಳೆದು ಸುಖ ನಿದ್ದೆ ಮುಗಿಸಿ ಕಣ್ಬಿಟ್ಟ ಜಗದೀಶರಿಗೆ ಹೆಂಡತಿಯ ದಿಂಬಿನ ಮೇಲಿದ್ದ ಪುಟ್ಟ ಡೈರಿ… ಮೇಲಿದ್ದ ಅರಳಿದ ಗುಲಾಬಿ ಹೂ ಆಶ್ಚರ್ಯ ಮೂಡಿಸಿತ್ತು.
`ಹುಚ್ಚು ಹೆಣ್ಣು, ನಿನ್ನೆ ಗಡಿಬಿಡಿಯಲ್ಲಿ ಬರ್ತ್ ಡೇ ವಿಶ್ ಮಾಡಲಾಗದಿದ್ದುದಕ್ಕೆ ಇವತ್ತು ವಿಶ್ ಮಾಡ್ತಾ ಇದ್ದಾಳೆ,’ ಅಂತ ಮುಗುಳ್ನಕ್ಕು, ಹೂವನ್ನು ಕೈಗೆತ್ತಿಕೊಂಡು ಡೈರಿ ಪುಟ ತಿರುವಿ ಕಣ್ಣಾಡಿಸ ತೊಡಗಿದರು…..!
“ಜಗದೀಶ್, ಇದೇನು ಇವಳ ಹುಚ್ಚಾಟ ಅಂತ ಬೈದುಕೊಳ್ಳಬೇಡಿ. ಹೇಳಲಾಗದೆ ಎದೆಯಲ್ಲೇ ಇಟ್ಟುಕೊಂಡ ನೂರು ಮಾತಿದೆ. ನಿಮ್ಮೆದುರು ನಿಂತು ಹೇಳುವ ಶಕ್ತಿ ಇಲ್ಲ ಅನ್ನಿಸಿತು. ಆಡದೆ ಉಳಿದ ಮಾತಿಗೆ ಅಕ್ಷರ ರೂಪ ಕೊಡುತ್ತಿದ್ದೇನೆ. ನಿನ್ನೆಗೆ ನಾನು ನಿಮ್ಮ ಬದುಕಿನಲ್ಲಿ ಬಂದು ಮೂವತ್ತು ವರ್ಷಗಳಾದವು. ಪಡೆದಿದ್ದು ಎಷ್ಟು ಕಳೆದುಕೊಂಡಿದ್ದು ಎಷ್ಟು ಎಂದು ಮನ ಸಣ್ಣ ಲೆಕ್ಕಾಚಾರ ಹಾಕಿತು. ಒಬ್ಬ ದೇವದಾಸಿ ಮನೆತನದಿಂದ ಬಂದ ನನಗೆ ನೀವು ಕಟ್ಟಿದ ಈ ಮಾಂಗಲ್ಯ ಸಮಾಜದಲ್ಲಿ ಎಲ್ಲವನ್ನೂ ತಂದುಕೊಟ್ಟಿದೆ.
“ಬೇಕು ಬೇಕು ಎಂಬ ಹಠಕ್ಕೆ ಬಿದ್ದು ನನ್ನನ್ನು ಪಡೆದಿರಿ. ಬದುಕಿಗೆ ಒಂದೇ ಹೆಣ್ಣು ಎಂಬ ರಾಮನ ನಿಷ್ಠೆ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದಿರಿ. ಈ ವಿಷಯದಲ್ಲಿ ನಾನು ಸದಾ ಹೆಮ್ಮೆ ಪಡುವೆ. ನಿಮ್ಮ ಮಾವ ಎಂದರೆ ನನ್ನ ಅಪ್ಪನಿಗಿಂತ ನೀವು ಎತ್ತರದಲ್ಲಿದ್ದೀರಿ, ಅಪ್ಪನ ಬದುಕಲ್ಲಿ ಎರಡು ಹೆಣ್ಣು. ನಿಮ್ಮ ಬದುಕಿನಲ್ಲಿ ನಾನೊಬ್ಬಳೇ. ಒಬ್ಬ ಹೆಣ್ಣು ಬಯಸುವ ಸೀರೆ, ಚಿನ್ನ ಎಲ್ಲವನ್ನೂ ಇತಿಮಿತಿ ಇಲ್ಲದಷ್ಟು ತಂದು ತುಂಬಿಸಿದಿರಿ. ಮುದ್ದಾದ ಮೂರು ಮಕ್ಕಳು. ಒಬ್ಬ ತಂದೆಯಾಗಿ ಕೂಡಾ ನೀವು ಎತ್ತರದ ಸ್ಥಾನ ಪಡೆದಿರಿ. ಮೂವತ್ತು ವರ್ಷಗಳ ಈ ದಾಂಪತ್ಯದಲ್ಲಿ ಎಂದೂ ಕೈ ಎತ್ತಿದ ನೆನಪಿಲ್ಲ. ಇವು ನನ್ನ ನಿಮ್ಮ ದಾಂಪತ್ಯದ ಒಂದು ಮುಖ.
“ಸಮಾಜ ನೋಡದ ಇನ್ನೊಂದು ಮುಖ ಇಲ್ಲಿದೆ ಜಗದೀಶ್. ನಿಮಗೆ ನೆನಪಿದೆಯಾ….? ಕಾಲ್ಗೆಜ್ಜೆ ಅಂದರೆ ನನಗೆ ಜೀವ. ನಿಮ್ಮ ಮನೆಯ ಹೊಸಿಲು ತುಳಿಯುವ ಮುಂಚೆ ಒಂದೇ ಒಂದು ದಿನಕ್ಕೂ ಕಾಲಿನಿಂದ ಗೆಜ್ಜೆ ತೆಗೆದವಳೇ ಅಲ್ಲ. ಮದುವೆ ಮರು ದಿನವೇ ಕಿವಿಗೆ ಬಿದ್ದಿದ್ದು `ಝಲ್ ಝಲ್ ಗೆಜ್ಜೆ ಹಾಕೊಂಡು ನಡೆಯೋದಕ್ಕೆ ಇದು ಸೂಳೆಯರ ಮನೆಯಲ್ಲ…. ಮರ್ಯಾದಸ್ಥ ಹೆಣ್ಣು ಹೇಗಿರಬೇಕೋ ಹಾಗಿರೋದು ಕಲಿ,’ ಎಂಬ ನಿಮ್ಮಮ್ಮನ ಬಿರು ನುಡಿ. ಎದೆ ಬಡಿತವೇ ನಿಂತ ಅನುಭವ ಆಗಿತ್ತು.
“ಯಾವತ್ತು ಇಂತಹ ಮಾತು ಕೇಳಿದವಳಲ್ಲದ ನಾನು ಓಡಿ ಬಂದು ನಿಮ್ಮಲ್ಲಿ ಹೇಳಿದ್ದೆ. ನನ್ನ ಕಣ್ಣೀರು ಒರೆಸಿದ ನೀವು, `ನೋಡು ಪುಷ್ಪಾ, ಎಲ್ಲರಿಗೂ ನೋವು ಕೊಟ್ಟೇ ನಾನು ನಿನ್ನನ್ನು ಈ ಮನೆಗೆ ಸೊಸೆಯಾಗಿ ತಂದೆ. ನೀನು ನನ್ನ ಬದುಕು, ನನ್ನ ಹೃದಯ ಸರ್ವಸ್ವ. ಒಬ್ಬ ಮನುಷ್ಯ ಮನುಷ್ಯನಾಗಿಯೇ ಗುರುತಿಸಿಕೊಳ್ಳೋದಕ್ಕೆ ಬರೀ ಹೃದಯ ಮಾತ್ರ ಸಾಕಾಗೋಲ್ಲ ಪುಷ್ಪಾ. ಕಾಲು, ಕೈ ಕಣ್ಣು ಕಿವಿ ಎಲ್ಲವೂ ಬೇಕು. ಒಂದೇ ಒಂದು ಬೆರಳು ಇಲ್ಲದಿದ್ದರೂ ಅವನನ್ನು ಹೆಳವ ಎಂದು ಸಮಾಜ ಗುರುತಿಸುತ್ತೆ.
“ಹಾಗೆಯೇ…. ಅಪ್ಪ ಅಮ್ಮ ಅಕ್ಕ ತಂಗಿ ಭಾವ….. ಎಲ್ಲಾ ಸಂಬಂಧ ನನಗೆ ಕಣ್ಣು ಕಿವಿ ಕಾಲು ಇದ್ದ ಹಾಗೆ. ಎಲ್ಲರೂ ಬೇಕು, ನಿನಗಾಗಿ ಯಾರನ್ನೂ ಕಳೆದುಕೊಳ್ಳಲಾರೆ. ಹಾಗೆ ಅವರಿಗಾಗಿ ನಿನ್ನನ್ನೂ ಬಿಡಲಾರೆ. ಬದುಕು ಎಂದರೆ ಹೊಂದಾಣಿಕೆ. ಈ ಮನೆಯ ಶಾಂತಿ ಸಮಾಧಾನಕ್ಕಿಂತ ಕಾಲ್ಗೆಜ್ಜೆ ಹಾಕ್ಕೊಳ್ಳೋ ನಿನ್ನ ಹಠ ಹೆಚ್ಚಾ….? ತೆಗೆದುಬಿಡು. ಇಲ್ಲಿಗೆ ಚಾಪ್ಟರ್ ಕ್ಲೋಸ್ ಅಲ್ವಾ….? ಅಂತ ಸ್ಪಷ್ಟವಾಗಿ ಹೇಳೋದನ್ನ ಹೇಳಿ ಎದ್ದು ಹೋದಿರಿ.

“ಅಷ್ಟೇ ಜಗದೀಶ್ ಮುಂದೆಯೂ ನಿಮ್ಮಿಂದ ಒಂದೇ ಒಂದು ಮಾತು ಹೇಳಿಸಿಕೊಳ್ಳಲು ಅವಕಾಶ ಕೊಡದಂತೆ ಬದುಕಿದೆ. ಹೇಗೆ ಬದುಕಿದೆ…. ಎಂಬುದರ ಕಲ್ಪನೆಯಾದರೂ ನಿಮಗಿದೆಯಾ? ಕೂತರು ತಪ್ಪು…. ಕಾಡಿಗೆ ಹಚ್ಚಿ, ಜಡೆ ತುಂಬಾ ಹೂ ಮುಡಿದರೂ ತಪ್ಪು… ಗೇಟಿನ ಹತ್ತಿರ ನಿಮ್ಮ ದಾರಿ ಕಾಯ್ತಾ ನಿಂತರೂ ತಪ್ಪು…. ಜೋರಾಗಿ ನಕ್ಕರೂ ತಪ್ಪು…. ಹೆಜ್ಜೆ ಹೆಜ್ಜೆಗೂ ನಿಮ್ಮಮ್ಮ ತಮ್ಮ ಬತ್ತಳಿಕೆಯಿಂದ ತೆಗೀತಾ ಇದ್ದಿದ್ದು, `ಅಯ್ಯೋ ಸಂಸಾರಸ್ಥರ ಮನೆ ಹೆಣ್ಣಾಗಿದ್ದರೆ ಹೇಗೆ… ಹೊಂದ್ಕೊಂಡು ಹೋಗ್ತಿದ್ಲು…’ ಅನ್ನೋ ಬಾಣ.
“ಒಂದು ಏಟು ಬೇಕಿದ್ದರೆ ತಡ್ಕೊಬಹುದು. ಆದರೆ ಈ ಚುಚ್ಚು ಮಾತು ಜೀವಂತ ಕೊಲ್ತಾ ಇತ್ತು. ಎಲ್ಲಕ್ಕಿಂತ ಹೆಚ್ಚು ನೋವು ಕೊಟ್ಟಿದ್ದು ಯಾವ್ದು ಗೊತ್ತಾ….. ನನ್ನ ಉಸಿರಾಗಿದ್ದ ವೀಣೆ ನುಡಿಸಬಾರದು, ಹಾಡಲೇ ಬಾರದು ಎಂದಿದ್ದು. ಸಂಗೀತ ದೈವಿಕ ಕಲೆ. ಅದಕ್ಕೂ ನನ್ನ ಮನೆತನಕ್ಕೂ ಸಂಬಂಧ ಕಟ್ಟಿದರಲ್ಲ. `ಹಾಡೋದು ಕುಣಿಯೋದು ಕುಲೀನ ಮನೆತನದ ಹೆಣ್ಣುಗಳು ಮಾಡೋಲ್ಲ. ಹಾಡು ಕುಣಿತ ನೋಡಿ ಬೀದೀಲಿ ಹೋಗೋ ಗಂಡಸರು ಮನೆ ಬಾಗಿಲು ತಟ್ಟೋಕೆ ಶುರು ಮಾಡಿದ್ರೆ ಕಷ್ಟ. ಮಹಾತಾಯಿ ನಾವು ಮರ್ಯಾದಸ್ತ ಜನ,’ ಎನ್ನುತ್ತಾ ಕಣ್ಣು ಬಾಯಿ ತಿರುಗಿಸುತ್ತಿದ್ದ ನಿಮ್ಮ ಅಮ್ಮ ಅಕ್ಕ ತಂಗಿಯರ ಮುಖ ಇನ್ನೂ ಕಣ್ಮುಂದೆ ಇದೆ.
“ಜಗದೀಶ್, ಹೆಜ್ಜೆ ಹೆಜ್ಜೆಗೂ ನನ್ನನ್ನು ತುಳಿದು ನೋಯಿಸೋದರಲ್ಲಿ ಇಡೀ ನಿಮ್ಮ ಮನೆ ಮಂದಿ ಕೈ ಜೋಡಿಸಿದರು. ಮೂರು ಮೂರು ದಿನಕ್ಕೆ ಬಂದು ಹೋಗೋ ನಿನ್ನತ್ತೆ….. ವರಸೆಯಲ್ಲಿ ನನಗೆ ಅಮ್ಮನಾಗಿದ್ದ ಗಿರಿಜಮ್ಮ, ಅವರ ಮಕ್ಕಳು ಅದ್ಯಾವ ಪರಿಯಲ್ಲಿ ಚುಚ್ಚಿ ನೋಯಿಸುತ್ತಾ ಇದ್ದರು ಎಂದರೆ,…… ಬಂದಾಗೆಲ್ಲ ಅಮ್ಮ ಒಂದು ಮನೆ ಹಾಳು ಮಾಡಿಯಾಯ್ತು. ಈಗ ಮಗಳ ಪಾಳಿ ಹೀಗೆ ಏನೇನೋ ಮಾತು…. ಎಷ್ಟೋ ಸಲ ಆತ್ಮಹತ್ಯೆ ಆಲೋಚನೆ ಕೂಡಾ ಮಾಡಿದ್ದೆ. ಬಹುಶಃ ಅಮ್ಮನ ಮೇಲಿನ ಎಲ್ಲ ಅಸಮಾಧಾನ ನನ್ನ ಮೇಲೆ ತೀರಿಸಿಕೊಂಡರೇನೋ…..
“ಅಪ್ಪನ ಆಕಸ್ಮಿಕ ಸಾವು, ಅದರ ಹಿಂದೆಯೇ ಅಮ್ಮನ ಸಾವು ನಿನ್ನ ಮನೆಯವರಿಗೆ ನೂರಾನೆ ಬಲ ಕೊಟ್ಟಿತು. ಅಪ್ಪ ಬದುಕಿದ್ದರೆ ನನ್ನ ಮೇಲಿನ ದೌರ್ಜನ್ಯಕ್ಕೆ ಆಸ್ಪದವೇ ಇರುತ್ತಿರಲಿಲ್ಲ. ಮೊದಲ ಹೆರಿಗೆಯಲ್ಲೇ ಅವಳಿ ಹೆಣ್ಣುಮಕ್ಕಳು ಹುಟ್ಟಿದಾಗ ಭೂಮಿಗಿಳಿದು ಹೋಗಿದ್ದೆ. ಅಣ್ಣ ತಮ್ಮ, ಅಕ್ಕ ತಂಗಿ, ಅಪ್ಪ ಅಮ್ಮ ಯಾರೂ ಇಲ್ಲದ ನಾನು ಪ್ರತಿರೋಧಿಸಿ ಎಲ್ಲಿಗೆ ಹೋಗ್ಬೇಕಿತ್ತು….. ಅದೂ ಎರಡು ಹೆಣ್ಣುಮಕ್ಕಳನ್ನು ಕಟ್ಟಿಕೊಂಡು. ಎಂಥ ಸಿಹಿ ಸೇಡು ತೀರಿಸಿಕೊಂಡರು ನಿಮ್ಮ ಮನೆ ಮಂದಿ…. ನಾನು ಹೆತ್ತ ಮಕ್ಕಳೂ ನನ್ನವರಾಗಿ ಉಳಿಯಲು ಅವಕಾಶ ಕೊಡಲಿಲ್ಲ.
“ಹೆತ್ತ ಮಕ್ಕಳಿಂದ ಹಿಡಿದು ಮನೆ ಕೆಲಸದವರೆಲ್ಲರ ದೃಷ್ಟಿಯಲ್ಲಿ ನೀವು ನಿಮ್ಮ ಮನೆಯವರು ದೇವರಾಗಿಬಿಟ್ಟಿರಿ. ಇಂತಹ ಹೆಣ್ಣಿಗೆ ಚೆಂದದ ಬಾಳು ಕೊಟ್ಟಿರೆಂಬ ಬಿರುದು ಬಾವಲಿ ನಿಮಗೆ. ನನಗೆ…. ನನಗೆ ಸಿಕ್ಕಿದ್ದೇನು ಜಗದೀಶ್…? ಒಂದೇ ಒಂದು ದಿನ ನಾನು ನಾನಾಗಿ ಬದುಕಲೇ ಇಲ್ಲ. ನನ್ನ ಊಟ, ತಿಂಡಿ, ಬಟ್ಟೆ, ಚಿನ್ನ, ಆಡೋ ಮಾತು ಪ್ರತಿಯೊಂದರಲ್ಲೂ ನಿಮ್ಮಮ್ಮನ ಹಿಡಿತ. ಜಗದೀಶ್, ಇನ್ನೊಂದು ವಿಷಯ ನಿಮಗೆ ನೆನಪಿದೆಯಾ…..? ನಿಮ್ಮ ಕೊನೆ ತಂಗಿಗೆ ಮದುವೆ ಫಿಕ್ಸ್ ಆದಾಗ ಈ ಅತ್ತಿಗೆ ಧಾರೆ ಎರೆಯೋದಾದರೆ ನನಗೆ ಮದುವೆಯೇ ಬೇಡ ಅಂತ ಹಠ ಹಿಡಿದಿದ್ದು. ಹಠಕ್ಕೆ ಸೋತ ನೀವು ನಿಮ್ಮ ಚಿಕ್ಕಪ್ಪ ಚಿಕ್ಕಮ್ಮನ ಮೂಲಕ ಕಾರ್ಯ ನೆರವೇರಿಸಿದ್ದು.
“ಅದೇ ತಂಗಿಯ ಮಗಳನ್ನು ನಮ್ಮ ಮಗನಿಗೆ ತಂದುಕೊಂಡಿರಿ. ನನ್ನನ್ನು ತುಚ್ಛವಾಗಿ ನೋಡಿದ ಮನೆಯ ಹೆಣ್ಣು ಈ ಮನೆಗೆ ಬೇಡವೆಂದು ಎಷ್ಟು ಗೋಗರೆದಿದ್ದೆ ನಾನು. ಆದರೆ ನೀವು ಮದುವೆ ನಡೆಸಿಯೇ ಬಿಟ್ಟಿರಿ. ಮಗಳನ್ನೂ ನಿಮ್ಮ ಅಕ್ಕನ ಮಗನಿಗೆ ಕೊಟ್ಟಿರಿ. ನನ್ನ ಸುತ್ತಮುತ್ತ ನಿಮ್ಮವರೇ ಆಲದ ಬೀಳಲಿನಂತೆ ಆರಿಸಿಕೊಂಡು ಬಿಟ್ಟರಲ್ಲ….. ಎಲ್ಲರೂ ಒಂದು…. ನಾನೊಬ್ಬಳೇ ಬೇರೆ. ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಉಳಿದುಬಿಟ್ಟಿರಿ. ಅದು ನಿಮ್ಮ ಅಸಹಾಯಕತೆಯೋ ಜಾಣ ಪೆದ್ದುತನವೋ ಗೊತ್ತಿಲ್ಲ. ಇರಲಿ ಬಿಡಿ ಇನ್ನು ಅದರ ಬಗ್ಗೆ ಚರ್ಚೆ ಮಾಡಲಾರೆ.

“ನೇರ ವಿಷಯಕ್ಕೆ ಬರುತ್ತೇನೆ ಜಗದೀಶ್…… ನನ್ನ ಬದುಕಿನ ಮುಕ್ಕಾಲು ಭಾಗ ಕೇವಲ ನಿಮ್ಮ ನೆರಳಾಗಿ ಕಳೆದೆ. ಉಸಿರಿದ್ದೂ ಹೆಣವಾದೆ. ಇನ್ನು ಉಳಿದ ದಿನಗಳಲ್ಲಿ ನಾನು ನಾನಾಗಿಯೇ ಬದುಕುವಾಸೆ ಇದೆ. ಇದೇನು ಹುಚ್ಚು ಈ ಹೆಂಗಸಿಗೆ, ಅಂದ್ಕೋಬೇಡಿ ಜಗದೀಶ್, ಈಗಲೂ ಕಾಲ್ಗೆಜ್ಜೆ ಹಾಕಿಕೊಂಡು ದುಡು ದುಡು ಓಡಾಡಬೇಕು, ಸ್ವರವೆತ್ತಿ ಹಾಡಬೇಕು, ಕೈ ಬತ್ತುವ ತನಕ ವೀಣೆ ನುಡಿಸಬೇಕು. ಈ ಮೋಟು ಜಡೆಗೆ ಮಲ್ಲಿಗೆ ಸುತ್ತಬೇಕು…. ಮಬ್ಬಾದ ಕಣ್ಣಿಗೆ ಕಾಡಿಗೆ ತೀಡುವಾಸೆ….
“ನೀನೇನು ಬರೀತಿಯ ಕಥೆ ಕವನ…. ನೀನು ಕಪಿ ಕಪಿಯಾಗಿಯೇ ಇರು ಕವಿಯಾಗೋದು ಬೇಡ ಅಂದಿದ್ದೀರಲ್ಲ ಅಂದು. ನೀವೇನೋ ತಮಾಷೆಗೆ ಹೇಳಿ ಮರೆತುಬಿಟ್ಟಿರಿ, ಆದರೂ ಪ್ರತಿ ಬಾರಿ ಪೆನ್ನು ಹಿಡಿದಾಗೆಲ್ಲ ಏನೋ ಹಿಂಜರಿಕೆ. ಮದುವೆಗೂ ಮುಂಚಿನ ಆ ದಿನಗಳಲ್ಲಿ ಎಷ್ಟೊಂದು ಆತ್ಮವಿಶ್ವಾಸವಿತ್ತು. ನನ್ನಲ್ಲಿ ಬರಿ ರೂಪ ಮಾತ್ರವಲ್ಲ ರೂಪಕ್ಕೆ ಕಲಶವಿಟ್ಟಂತೆ ಬಹಳಷ್ಟು ಟ್ಯಾಲೆಂಟ್ ಕೂಡಾ ಇತ್ತು. ಒಬ್ಬ ಒಳ್ಳೆಯ ಹಾಡುಗಾರ್ತಿ, ಬರಹಗಾರ್ತಿ ನನ್ನೊಳಗೆ ಇದ್ದಳಲ್ಲ. ನಿಮ್ಮವರ ಹೀಗಳಿಕೆಯ ಮಾತು ಕೇಳಿ ಕೇಳಿ ನಾನೊಬ್ಬಳು ದಂಡ ಪಿಂಡವೇನೋ ಎಂಬ ಭಾವ ಬಲವಾಗಿ ಬೇರೂರಿತು. ನಾನು ಕಳೆದುಕೊಂಡ ಆತ್ಮವಿಶ್ವಾಸ ಮತ್ತೆ ಪಡೆಯಬೇಕು. ಮತ್ತೆ ಮನಸ್ಸಿಗೆ ತೋಚಿದ್ದೆಲ್ಲಾ ಗೀಚುವಾಸೆ…. ಹೀಗೆ ನಿಮ್ಮ ಪಾಲಿಗೆ ಇವೆಲ್ಲಾ ಬಾಲಿಶ ಅನಿಸುತ್ತೆ ಗೊತ್ತಾ…..? ಆದರ ಇವು ನನ್ನ ಪಾಲಿಗೆ ಮರುಹುಟ್ಟು.
“ಮಕ್ಕಳೆಲ್ಲ ಅವರವರ ಬದುಕು ಕೊಟ್ಟಿಕೊಂಡಿದ್ದಾರೆ. ನನ್ನ ಅಗತ್ಯ ಅವರಿಗಿಲ್ಲ. ಇನ್ನು ನೀವು…. ನಿಮಗೆ ನೀವೇ ಕಟ್ಟಿದ ಬಲಿಷ್ಠ ಸಾಮ್ರಾಜ್ಯವಿದೆ. ಅಕ್ಕ ತಂಗಿ, ಗೆಳೆಯರು ಇವರ ನಡುವೆ ತೃಪ್ತರು ನೀವು. ನನ್ನ ಅನುಪಸ್ಥಿತಿ ನಿಮ್ಮನ್ನು ಕಾಡಲಿಕ್ಕಿಲ್ಲ. ಎಲ್ಲವನ್ನೂ ಯೋಚಿಸಿ ನಿರ್ಧಾರಕ್ಕೆ ಬಂದೆ. ಆಕ್ಸಿಡೆಂಟ್ ನಲ್ಲಿ ಗಂಡು ಮಕ್ಕಳನ್ನು ಕಳೆದುಕೊಂಡು ಒಂಟಿಯಾಗಿ ಕಾರುಣ್ಯ ಎನ್ನುವ ಆಶ್ರಮ ನಡೆಸ್ತಾ ಇರೋ ನನ್ನ ಗೆಳತಿಗೆ ಬೆನ್ನೆಲುಬಾಗಿ ಇದ್ದು ಬದುಕಿನ ಸಂಜೆಯನ್ನು ಸಾರ್ಥಕವಾಗಿಸಿಕೊಳ್ಳುವ ಉದ್ದೇಶದಿಂದ ಹೊರಟಿದ್ದೇನೆ. ಮತ್ತೆ ಮರಳಿ ಕರೆತರುವ ಪ್ರಯತ್ನ ಮಾಡಿದಿರಿ…. ನಾನೂ ಆ ಸೀತೆಯಂತೆ ಸ್ವಾಭಿಮಾನಿ. ಮಣ್ಣಲ್ಲೇ ಮಣ್ಣಾದೇನೇ ಹೊರತು ಮರಳಿ ಬರಲಾರೆ…..
ಇತಿ ನಿಮ್ಮ ಪುಷ್ಪಾ
ನಿಮ್ಮ ಪುಷ್ಪಾ…. ಎಂಬ ಕೊನೆಯ ಸಾಲಿನ ಮೇಲೆ ಮತ್ತೆ ಮತ್ತೆ ಕಣ್ಣಾಡಿಸಿದ ಜಗದೀಶರು ಮೊಬೈಲ್ ಕೈಗೆತ್ತಿಕೊಂಡು…..
“ನನ್ನ ಸೀತಮ್ಮನವರೇ…… ನಿಮ್ಮ ಮನೋಜ್ಞ ಬರಹ ಓದಿದೆ. ನಿಮ್ಮಷ್ಟು ಕನ್ನಡ ಪಾಂಡಿತ್ಯ ನನಗಿಲ್ಲ. ಇರುವ ಅಲ್ಪಜ್ಞಾನ ಬಳಸಿ ಬರೆಯುತ್ತಿದ್ದೇನೆ. ನಿನಗೆ ರಾಮಾಯಣದ ಕಥೆ ಗೊತ್ತಲ್ಲ. ರಾಮ, ಮತ್ತೆ ಮತ್ತೆ ಅಗ್ನಿ ಪರೀಕ್ಷೆಗೆ ಸೀತೆಯನ್ನು ಗುರಿಯಾಗಿಸಿದ, ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ….. ಸೀತೆಗೆ ಅನ್ಯಾಯವಾಯ್ತು ನಿಜ. ಲೋಕದ ಅನುಕಂಪ ಸೀತೆಗೆ…. ರಾಮನ ಸ್ಥಿತಿ ಬಗ್ಗೆ ಒಮ್ಮೆ ಯೋಚಿಸು. ಒಂದಲ್ಲ ನೂರು ಹೆಣ್ಣನ್ನು ವರಿಸು ಶಾಸ್ತ್ರ ಸಮ್ಮತ ಅವಕಾಶವಿದ್ದರೂ ರಾಮ ಕೊನೆ ಉಸಿರಿನ ತನಕ ಸೀತಾಪತಿಯಾಗಿಯೇ ಉಳಿದ. ಸೀತಾ ಪರಿತ್ಯಾಗ ರಾಮನಿಗೆ ಸಮ್ಮತವಿತ್ತೇ….? ಖಂಡಿತಾ ಇಲ್ಲ. ಸಮಾಜ ಒಬ್ಬ ರಾಜಾಧಿರಾಜನನ್ನು ದೇವರನ್ನೂ ಎಂಥ ಅಸಹಾಯಕ ಸ್ಥಿತಿಗೆ ತಳ್ಳಿತು ನೋಡು.
“ಇನ್ನು ನಾನು ಸಾಮಾನ್ಯ ಮನುಷ್ಯ. ನನ್ನ ಸ್ಥಿತಿಯೂ ಆ ರಾಮನ ಸ್ಥಿತಿಯೇ….! ಬದುಕಲ್ಲಿ ಮೆಚ್ಚಿದ್ದು ಒಬ್ಬಳನ್ನೇ…. ಅದು ನೀನು! ಸಮಾಜವನ್ನು ಎದುರಿಸಿ ನಿನ್ನನ್ನು ಪಡೆದೆ. ಒಂದನ್ನ ಪಡೆಯಲು ಒಂದನ್ನ ತ್ಯಾಗ ಮಾಡಲೇಬೇಕಾದ ಪರಿಸ್ಥಿತಿ. ನನ್ನನ್ನು ಪಡೆಯಲು ನಿನ್ನ ಅಸ್ತಿತ್ವವನ್ನೇ ನೀನು ಒತ್ತೆ ಇಡಬೇಕಾಯಿತು. ನೀನು ಹಾಕಿದ ಪ್ರತಿ ಕಣ್ಣೀರ ಹನಿ ಹನಿಯ ಲೆಕ್ಕವಿದೆ. ಆದರೆ ನಾನು ಅಸಹಾಯಕ. ಮೂವರು ಅಕ್ಕಂದಿರು, ಇಬ್ಬರು ತಂಗಿಯರ ನಡುವಿನ ಏಕಮಾತ್ರ ಗಂಡು ಸಂತಾನ ನಾನೆಂಬುದು ನಿನಗೆ ತಿಳಿದಿದೆ. ಕೇವಲ ನನ್ನ ಬದುಕಿನ ಸುಖ ಸಂತೋಷಕ್ಕಾಗಿ ಬೇರೆ ಮನೆ ಮಾಡಿ ನಿನ್ನೊಂದಿಗೆ ಬದುಕುವುದರಲ್ಲಿ ನ್ಯಾಯವಿತ್ತೇ? ನನ್ನವರೇ ನನಗೆ ಮುಳ್ಳಾದರು. ಆದರೂ ಅವರು ನನ್ನವರು. ಬಿಡಲು ಸಾಧ್ಯವಾಗದ ಸಂಬಂಧ. ಅಮ್ಮ ಅಕ್ಕ ತಂಗಿಯರು ತೀರಾ ಕೆಳಮಟ್ಟಕ್ಕೆ ಇಳಿದು ನಿನ್ನನ್ನು ನೋಯಿಸಿದರು ನಿಜ.
“ಆದರೆ ಈ ಮೂವತ್ತು ವರ್ಷಗಳ ಸಾಂಗತ್ಯದಲ್ಲಿ ಒಂದೇ ಒಂದು ಸಲವಾದರೂ, ನಿನ್ನ ಮನೆತನ, ಹಿನ್ನೆಲೆ ಬಗ್ಗೆ ನಾನು ಮಾತಾನಾಡಿದ್ದು ಇದೆಯಾ? ಹೆಸರಿಗೆ ತಕ್ಕಂತೆ ಗಂಗೆಯಷ್ಟೇ ಪವಿತ್ರಳಾದ ಆ ನಿನ್ನ ಅಮ್ಮ…. ನನ್ನತ್ತೆ ನನಗೆ ಅತ್ಯಂತ ಪ್ರೀತಿಪಾತ್ರರಾದ ಜೀವ ಅನ್ನೋದು ನಿನಗೂ ಗೊತ್ತಿರುವ ವಿಷಯ. ಅವರ ಮಗಳಾದ ನೀನು ನನ್ನವಳಾಗಿದ್ದು ನನ್ನ ಪುಣ್ಯದ ಫಲವೆಂಬ ಭಾವ ಈ ಕ್ಷಣಕ್ಕೂ ನನ್ನ ಹೃದಯದಲ್ಲಿದೆ.
“ಅಮ್ಮನಿಗೂ ಅಷ್ಟೇ, ಹತ್ತೂರು ಹುಡುಕಿದರೂ ನಿನ್ನಷ್ಟು ಮೃದು ಸ್ವಭಾವದ ಸೊಸೆ ಸಿಗುತ್ತಿರಲಿಲ್ಲ. ಎಲ್ಲಾ ಗೊತ್ತಿದ್ದೂ ಮನೆ ಒಡೆಯದಿರಲಿ ಎನ್ನುವ ಕಾರಣಕ್ಕೆ ಮೌನವಾಗುಳಿದೆ. ನಿನ್ನ ಪರ ನಿಂತಿದ್ದರೆ ಉಳಿದ ಎಲ್ಲಾ ಸಂಬಂಧ ಕಹಿಯಾಗುತ್ತಿತ್ತು. ನೀನು ನನ್ನವಳು, ಅರ್ಥ ಮಾಡಿಕೊಳ್ಳುತ್ತಿ ಎಂಬ ದೃಢ ನಂಬಿಕೆಯಲ್ಲೇ ಕುರುಡಾಗಿಬಿಟ್ಟೆ. ನಂಬಿಕೆಗೆ ಯಾಕೆ ಪೆಟ್ಟು ಕೊಟ್ಟೆ? ಮನೆ ಬಿಡುವಂಥ ಇಷ್ಟು ದೊಡ್ಡ ತೀರ್ಮಾನಕ್ಕೆ ಬರುವ ಮುನ್ನ ಒಮ್ಮೆ ನನ್ನಲ್ಲಿ ಚರ್ಚಿಸಬಹುದಿತ್ತು.
“ನಾನೇನು ರಾಕ್ಷಸನಲ್ಲ….. ನಾನೂ ಕೂಡ ಮನುಷ್ಯನೇ, ನಿನ್ನ ಕಷ್ಟ ಅರ್ಥ ಮಾಡಿಕೊಳ್ಳುತ್ತಿದ್ದೆ. ಮೊದಲೊಮ್ಮೆ ನಿನಗೆ ಹೇಳಿದ್ದೆ ನೆನಪಿದೆಯಾ, ನನ್ನ ಹೃದಯ ನೀನು….. ಬಾಕಿ ಎಲ್ಲಾ ಸಂಬಂಧ ಕಣ್ಣು ಕೈ ಕಾಲು ಅಂತ. ಕಣ್ಣು ಕೈ ಕಾಲು ಇಲ್ಲದೆಯೂ ಬದುಕಬಹುದು. ಆದರೆ ಹೃದಯವಿಲ್ಲದೆ ಬದುಕಲು ಸಾಧ್ಯವೇ? ಹೋಟೆಲ್, ಸಿನಿಮಾ ಅಂತ ಸುತ್ತಾಡಿಸಲಿಲ್ಲ, ಮನ ಬಿಚ್ಚಿ ಮಾತನಾಡಿಲ್ಲ….. ಎಲ್ಲವೂ ನಿಜ. ಆದರೆ ನೀನು ಅಂದಿಗೂ ಇಂದಿಗೂ ನನ್ನ ಉಸಿರು. ನೀನಿಲ್ಲದ ಮನೆಯಲ್ಲಿ ನಾನು ಬದುಕುತ್ತೇನೆ ಎಂಬ ಕಲ್ಪನೆ ನಿನಗೆ ಹೇಗೆ ಬಂತು?
“ಏಳೇನು ಜನ್ಮದ ಬಂಧ ಅಂತ ಡೈಲಾಗ್ ಹೇಳಲಾರೆ. ಆದರೆ ಈ ಜನುಮಕ್ಕೆ ಮುಗಿಯದ ಬಂಧನ ಇಷ್ಟು ಮಾತ್ರ ಹೇಳಬಲ್ಲೆ, ಬದುಕಿನ ಜವಾಬ್ದಾರಿ ಎಲ್ಲಾ ಮುಗಿಸಿದ್ದೇನೆ. ಅಪ್ಪ ಅಮ್ಮನಿಗೆ ಒಬ್ಬ ಮಗನಾಗಿ, ಅಕ್ಕ ತಂಗಿಯರಿಗೆ ಅಣ್ಣನಾಗಿ, ತಮ್ಮನಾಗಿ, ಮಕ್ಕಳಿಗೆ ತಂದೆಯಾಗಿ ಪರಿಪೂರ್ಣ ನ್ಯಾಯ ಕೊಟ್ಟ ತೃಪ್ತಿ ನನಗಿದೆ. ಒಬ್ಬ ಗಂಡನಾಗಿ ನಿನಗೆ ಸಂಪೂರ್ಣ ನ್ಯಾಯ ಕೊಡಲಾಗಿಲ್ಲ. ಆ ಪಶ್ಚಾತ್ತಾಪ ನನ್ನಲ್ಲಿದೆ. ಇನ್ನೂ ಕಾಲ ಮೀರಿಲ್ಲ. ಒಂದು ಅವಕಾಶ ಕೊಡ್ತೀಯಾ….?
“ನನಗೂ ಈ ಎಲ್ಲಾ ಬಂಧನಗಳು ಸಾಕೆನ್ನೆಸಿವೆ. ಒಂದೋ ಕಾರುಣ್ಯದಲ್ಲಿ ಮತ್ತೆ ಹೊಸ ಬದುಕು ಕಟ್ಟಿಕೊಳ್ಳೋಣ. ಇಲ್ಲವೇ ನಮ್ಮ ತೋಟದ ಮನೆಯಲ್ಲಿ ಹೊಸ ಜೀವನ ಶುರು ಮಾಡೋಣ. ಅಲ್ಲಿ ನಿನ್ನ ಗೆಜ್ಜೆನಾದ ಕಿವಿ ತುಂಬಿಕೊಳ್ಳುವೆ…. ನಿನ್ನ ಬರಹಕ್ಕೆ ನಾನೇ ಮೊದಲ ಓದುಗನಾಗುವೆ…. ನಿನ್ನ ಸ್ವರದೊಂದಿಗೆ ನಾನೂ ದನಿ ಕೂಡಿಸುವೆ…. ಒಲವಿಗೆ ವಯಸ್ಸಿನ ಬೇಲಿ ಎಲ್ಲಿದೆ ಹೇಳು….? ದೇವರ ಕೃಪೆಯಿದ್ದರೆ ಇನ್ನೂ ಹದಿನೈದು…ಇಪ್ಪತ್ತು ವರ್ಷಗಳು ನಾವು ಜೊತೆಯಾಗಿ ಕಳೆಯಬಹುದು. ಮತ್ತೊಮ್ಮೆ ಮಗದೊಮ್ಮೆ ಯೋಚಿಸಿ ನಿನ್ನ ತೀರ್ಮಾನ ತಿಳಿಸು……” ಎಂದು ಮೆಸೇಜ್ ಮಾಡಿದರು.
`ಹುಚ್ಚು ಹೆಣ್ಣೆ ಈ ದಾಂಪತ್ಯ ಬಂಧನ ಅನ್ನೋದು ಬಿಟ್ಟರೂ ಬಿಡದಿ ಮಾಯೆ ಅನ್ನೋ ಥರ. ಎಷ್ಟೇ ನೋವು ನಿರಾಸೆ ಇದ್ದರೂ ಮತ್ತೆ ಮತ್ತೆ ರಾಜಿಯಾಗಿ ಬದುಕುವುದೇ ಇದರ ಗುಟ್ಟು. ಒಂದಲ್ಲ ಎರಡಲ್ಲ ಮೂವತ್ತು ವರ್ಷಗಳ ಸಾಂಗತ್ಯ ನಮ್ಮದು. ಬಿಟ್ಟು ಬದುಕುವ ಮಾತೇ ಇಲ್ಲ. ಇಷ್ಟು ದಿನ ಸೋತು ಬದುಕಿದೆ. ಈಗ ನನ್ನ ಸರದಿ. ಮನದ ಭಾವಗಳ ಅನಾವರಣವೆಂದು. ಸೋತು ಗೆಲ್ಲುತ್ತೇನೆ ಹೆಣ್ಣೆ…. ಅದರಲ್ಲೂ ಹಿತವಿದೆ,’ ಎಂದು ಮನದಲ್ಲಿ ಅಂದುಕೊಂಡರು.
ಜಗದೀಶರ ಹೃದಯದ ಮಾತು ತಲುಪಬೇಕಾದವರ ಕಿವಿಗೆ ತಲುಪಿತೇನೋ ಎಂಬಂತೆ ಅತ್ತಲಿಂದ ಪುಟ್ಟದೊಂದು ಮೆಸೇಜ್.“ಸೀತಾಪತಿಯಾಗಿಯೇ ಉಳಿದ ರಾಮನ ಬಗ್ಗೆ ಹೇಳಿದಿರಿ. ಸೀತೆ ಬಗ್ಗೆ ರಾಮನೆದೆಯಲ್ಲಿ ಅಪರಿಮಿತ ಪ್ರೀತಿ ಇತ್ತು. ಈ ಮಾತು ಒಪ್ಪಿಕೊಳ್ಳುವೆ. ಆದರೆ ಜಗದೀಶ್ ಆ ಪ್ರೀತಿಯಿಂದ ಸೀತೆಗೆ ದಕ್ಕಿದ್ದೇನು? ಯಾವುದೇ ಪ್ರೀತಿ ನಮ್ಮ ಬದುಕಿಗೆ ಖುಷಿ ತುಂಬಿ ಕೊಡುವುದರಲ್ಲಿ ಸೋತರೆ ಅದು ಊಟಕ್ಕಿಲ್ಲದ ಉಪ್ಪಿನಕಾಯಿ ಅಲ್ವಾ? ನಿಮ್ಮ ಪ್ರೀತಿಯ ಬಗ್ಗೆ ಕೂಡಾ ಈ ಕ್ಷಣಕ್ಕೂ ಸಂಶಯವಿಲ್ಲ. ಆದರೆ ನಿಮ್ಮ ಅಸಹಾಯಕತೆಯೇ ನನ್ನ ಪಾಲಿಗೆ ಉರುಳಾಯ್ತು. ಈ ವಯಸ್ಸಿನಲ್ಲಿ ನಿಮ್ಮನ್ನು ಬಿಟ್ಟು ಬದುಕಬೇಕೆಂಬ ಕೆಟ್ಟ ಹಠ ಖಂಡಿತಾ ಇಲ್ಲ. ಆ ಮನೆಯಲ್ಲಿ ಉಸಿರು ಕಟ್ಟಿದಂತೆ ಬದುಕಲಾರೆ. ನೀವೇ ನನ್ನ ಬಳಿ ಬರುವುದಾದರೆ ಹೃತ್ಪೂರ್ವಕ ಸ್ವಾಗತ. ಕಡಲು ನದಿಯೆಡೆ ಬರುವಾಗ ಬೇಡವೆನ್ನಲು ಸಾಧ್ಯವೇ….?
ನೀ ಬರುವೆಯೆಂದು ಮನ ಕಾದಿದೆ
ಕಾಯುವ ಈ ಸುಖ ಹಿತಾಗಿದೆ
ಬಿಳಿಮೋಡ ಕಂಡ ಗಿರಿನವಿಲಿನಂದದಿ ಗರಿಬಿಚ್ಚಿ ಕುಣಿದಿದೆ
ಮನ ಮುದದಿಮತ್ತೆ ತಾ ಬರಲು ನದಿಯೆಡೆಗೆ ಕಡಲು ಹರುಷದಿ ಉಕ್ಕುಕ್ಕಿ ಹರಿದಿದೆ
ಹೊನಲುಯಸಿನ ಬೇಲಿ ಎಲ್ಲಿದೆ ಹೇಳು ಒಲವಿಗೆ ಇಳಿಸಂಜೆಲೂ ಅರಳೀತು ಬಾಳಮಲ್ಲಿಗೆ!
ಇತಿ ನಿಮ್ಮ ಪುಷ್ಪಾ
ಮೆಸೇಜ್ ನೋಡಿ ಮುಗುಳ್ನಕ್ಕು ಸಣ್ಣಗೆ ಶಿಳ್ಳೆ ಹೊಡೆಯುತ್ತಾ ಮಂಚ ಬಿಟ್ಟೆದ್ದರು ಜಗದೀಶ್.





