ಕಡು ಬಡತನದಲ್ಲಿ ಬಳಲುತ್ತಿದ್ದ ತಮ್ಮ ಜೀವನಕ್ಕೆ ಮೂಲಾಧಾರವಾಗಿದ್ದ ತಮ್ಮ ಹೊಲಿಗೆ ಯಂತ್ರ ಎಂದರೆ ಮಾಧವಿಯವರಿಗೆ ಎಲ್ಲಿಲ್ಲದ ಅಭಿಮಾನ! ಆದರೆ ಇವರ ಶ್ರೀಮಂತ ಆಧುನಿಕ ಸೊಸೆಯ ಸ್ಟೇಟಸ್ ಸಿಂಬಲ್ ಗೆ ಅದು ಮಂಕುಬಡಿಸುತ್ತಿತ್ತು. ಅದನ್ನು ಸೊಸೆ ಇಲ್ಲವಾಗಿಸಲು ಯತ್ನಿಸಿದಾಗ ಮುಂದೆ ಆ ಮನೆಯಲ್ಲಿ ನಡೆದದ್ದೇನು.......!
ಮಾಧವಿ ಮನೆಯ ಎದುರಿನ ಸಿಟ್ ಔಟ್ ನಲ್ಲಿ ಪೇಪರ್ ಓದುತ್ತಾ ಕುಳಿತಿದ್ದರು. ಅಷ್ಟರಲ್ಲಿ ಸೊಸೆ ಭುವನಾ, ``ಅತ್ತೆ... ಬನ್ನಿ, ತಿಂಡಿ ತಿನ್ನಿ. ದೋಸೆ ತಣ್ಣಗಾಗುತ್ತದೆ,'' ಎಂದು ಕರೆದಾಗ ಮೆಲ್ಲನೆ ಎದ್ದು ಅಡುಗೆ ಮನೆಗೆ ಬಂದು, ``ಇಷ್ಟು ಬೇಗ ಬೇಡಮ್ಮಾ.... ನನಗೆ ಹಸಿವೆ ಇಲ್ಲ, ಆಮೇಲೆ ತಿಂತೀನಿ,'' ಎಂದರು.
``ಅತ್ತೆ, ನೀವು ತಿನ್ನೋವರೆಗೂ ನಾನು ಈ ದೋಸೆ ಹಿಟ್ಟು ಹೊರಗಿಟ್ಟರೆ ಹಿಟ್ಟು ಹುಳಿಯಾಗುತ್ತೆ. ಎಲ್ಲರಿಗೂ ದೋಸೆ ಮಾಡಿ ಉಳಿದ ಹಿಟ್ಟನ್ನು ಫ್ರಿಜ್ ನಲ್ಲಿ ಇಟ್ಟರೆ ಕಿಚನ್ ಸ್ಲ್ಯಾಬ್ ನ್ನು ಬೇಗ ಬೇಗ ಕ್ಲೀನ್ ಮಾಡಬಹುದಲ್ಲ.....'' ಎಂದಳು ಭುವನಾ.
ಸೊಸೆಯ ಗಡಿಬಿಡಿ ನೋಡಿ, ``ಇನ್ನೂ ಸಮಯ ಏಳೂವರೆ ಅಷ್ಟೆ! ದಿನಾಲೂ ಇಷ್ಟು ಹೊತ್ತಿಗೆ ನಿನ್ನ ಗಂಡ, ಮಕ್ಕಳು ಮಾತ್ರ ತಿಂಡಿ ತಿನ್ನೋದು. ನಾನು, ನೀನು ಆಮೇಲೆ ತಾನೇ ತಿನ್ನೋದಲ್ವಾ.....? ಇವತ್ತು ಯಾಕೆ ಅವಸರ ಮಾಡ್ತಾ ಇದೀಯಾ...? ಎಲ್ಲಿಗಾದರೂ ಹೋಗಬೇಕಾ....? ಹಾಗಿದ್ದರೆ ಕಿಚನ್ ಕೆಲಸ ಎಲ್ಲವೂ ಹಾಗೇ ಬಿಡು. ಉಳಿದದ್ದು ನಾನು ಮಾಡ್ತೀನಿ. ನೀನು ಹೊರಡು,'' ಎನ್ನುತ್ತಾ ಸೊಸೆಯ ಕೈಯಿಂದ ದೋಸೆಯ ಸೌಟನ್ನು ತೆಗೆದುಕೊಂಡು ಕಾವಲಿಯ ಮೇಲೆ ಕಾದಿದ್ದ ದೋಸೆಯನ್ನು ಮೆಲ್ಲನೆ ಎಬ್ಬಿಸಿ ಡೈನಿಂಗ್ ಟೇಬಲ್ ಮುಂದೆ ತಿಂಡಿ ತಿನ್ನಲು ಕೂತಿದ್ದ ಮಗ ಶೈಲೇಶನ ಪ್ಲೇಟ್ ಗೆ ಹಾಕಿದರು.
``ಎಲ್ಲಿಗೂ ಹೋಗಲ್ಲ ಅತ್ತೆ. ನನ್ನ ಚಿಕ್ಕಪ್ಪನ ಮನೆಯ ಗೃಹಪ್ರವೇಶಕ್ಕೆ ಒಂದೊಳ್ಳೆ ರೇಷ್ಮೆ ಸೀರೆ ಶಾಪಿಂಗ್ ಮಾಡಬೇಕು. ಅದಕ್ಕೆ ಶೈಲೇಶ್ ಜೊತೆ ಕಾರಿನಲ್ಲಿ ಹೋಗ್ತೀನಿ. ಅವರು ನನ್ನನ್ನು ಅಲ್ಲೇ ಡ್ರಾಪ್ ಮಾಡಿ ಆಫೀಸಿಗೆ ಹೋಗ್ತಾರೆ....'' ಎಂದಳು ಭುವಿ.
``ಗೃಹಪ್ರವೇಶಕ್ಕೆ ಎರಡು ತಿಂಗಳಿದೆ ಅಲ್ವಾ.....? ಯಾಕಿಷ್ಟು ಅವಸರ.....?'' ಮಾಧವಿ ಆಶ್ಚರ್ಯದಿಂದ ಕೇಳಿದರು.
``ಅತ್ತೇ, ಬರೀ ಸೀರೆ ಕೊಂಡರೆ ಸಾಕಾ.....? ಅದಕ್ಕೆ ಡಿಸೈನರ್ ಬ್ಲೌಸ್ ಹೊಲಿಸಬೇಕು. ಮದುವೆ, ಗೃಹಪ್ರವೇಶದ ಸೀಸನ್ ನಲ್ಲಿ ಎಲ್ಲ ಟೇಲರ್ಸ್ ಬಿಜಿ ಇರ್ತಾರೆ. ಅದಕ್ಕೇ ಬೇಗ ಸೀರೆ ಕೊಂಡು ಬ್ಲೌಸ್ ಹೊಲಿಸೋಕೆ ಕೊಟ್ಟು ಬಿಡ್ತೀನಿ...'' ಎಂದ ಭುವಿಯ ಮಾತನ್ನು ತುಂಡರಿಸಿದ ಮಾಧವಿ, ``ಬ್ಲೌಸ್ ಬೇಕಾದರೆ ನಾನು ಹೊಲಿದುಕೊಡ್ತೀನಿ. ನನಗೆ ಎರಡು ದಿನ ಸಾಕು....'' ಎಂದರು ಸಹಜವಾಗಿ.
``ಅಯ್ಯೋ ಅತ್ತೆ. ಅದೇನೋ ಅಂತಾರಲ್ಲ.... ಸಾವಿರಾರು ರೂಪಾಯಿ ಕೊಟ್ಟು ಎಮ್ಮೆ ತಂದು ಅದನ್ನು ಕಟ್ಟೋಕೆ ನೂರು ರೂಪಾಯಿ ಹಗ್ಗಕ್ಕೆ ಲೆಕ್ಕ ಹಾಕಿದ್ರು ಅನ್ನೋ ಹಾಗೆ 15-20 ಸಾವಿರ ರೂಪಾಯಿ ರೇಷ್ಮೆ ಸೀರೆ ಶಾಪಿಂಗ್ ಮಾಡಿ ನಿಮ್ಮ ಹತ್ತಿರ ಮಾಮೂಲಿ ಬ್ಲೌಸ್ ಹೊಲಿಸೋದಾ...? ನೋಡಿದವರು ಏನಂತಾರೆ.....? ಇದು ನಿಮ್ಮ ಕಾಲ ಅಲ್ಲ ಅತ್ತೆ. ಈಗ ಎಲ್ಲರೂ ಡಿಸೈನರ್ ಬ್ಲೌಸ್, ಆರಿ ವರ್ಕ್, ಎಂಬ್ರಾಯಿಡರಿ ಇರೋ ಬ್ಲೌಸ್ ಹಾಕ್ತಾರೆ. ಅದರ ರೇಟ್ ಎಷ್ಟು ಗೊತ್ತಾ.....? ಒಂದು ಬ್ಲೌಸ್ ಗೆ 4-6 ಸಾವಿರ ಆಗುತ್ತೆ. ಈಗ ಸೀರೆಗಿಂತ ಬ್ಲೌಸ್ ಗೆ ಬೆಲೆ ಜಾಸ್ತಿ ಆಗಿದೆ,'' ಎಂದಳು ಭುವಿ.





